ಅದೇಕೋ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ನೆನಪುಗಳ ಹಿಂಜುತಿದೆ. ಎದೆಯೊಳಗೆ ಕುಳಿತ ಬೆಚ್ಚಗಿನ ಭಾವವನ್ನು ಉದ್ದೀಪನಗೊಳಿಸುವ ಮಳೆ. ಎಲ್ಲವನ್ನು ಚಿಗುರಿಸುವ ಮಳೆ. ನೀರ ಹನಿಗಳ ಹಾಡು ಕೇಳುತ್ತಾ ನನ್ನ ಏಕಾಂತದೊಳಗೆ ಹುದುಗಿದ್ದೆ. ಮಳೆಗೆ ಗಿಡಗಳ ಪ್ರತಿಕ್ರಿಯೆ ಹೇಗಿರಬಹುದೆಂದು ಎಣಿಸುತಿದ್ದೆ. ಮನಸ ಮುಗಿಲ ತುಂಬಾ ನೆನಪಿನ ಮೆರವಣಿಗೆ. ಹಾಗೇ ಕುಳಿತವನಿಗೆ ಪ್ರತಾಪಗಢ್ ಕೋಟೆಗೆ ಹೋದ ನೆನಪು ಒತ್ತರಿಸಿಕೊಂಡು ಬಂತು.
|
ಮಳೆ ಮೋಡಗಳ ಮೆರವಣಿಗೆ. |
ಔರಂಗಜೇಬನಿಗೂ ಬೆದರದ ಶಿವಾಜಿಯ ವೀರತ್ವಕ್ಕೆ ಮಾರುಹೋಗಿ ಆತನ ಒಂದೆರಡು ಕೋಟೆ ನೋಡಲು 2019ರ ಮಳೆಗಾಲದಲ್ಲಿ ಅಲ್ಲಿಗೆ ಹೋಗಿದ್ದೆವು. ಮೊದಲು ರಾಯಗಢ ಕೋಟೆ ನೋಡಿಕೊಂಡು ಸತಾರ್ ಜಿಲ್ಲೆಯಲ್ಲಿರುವ ಪ್ರತಾಪಗಢಕ್ಕೆ ಬಂದಿದ್ದೆವು.( ರಾಯಗಡ ಲೇಖನ ಓದಲು ಇದರ ಮೇಲೆ ಚಿಟಿಕೆ ಹೊಡೆಯಿರಿ) ಶಿವಾಜಿ ಅಫಜಲ್ ಖಾನ್ನನ್ನು ಹೆಡೆ ಮುರಿ ಕಟ್ಟಿದ್ದು ಇಲ್ಲೇ. ಆನೆ ನುಗ್ಗಿಸಲಾಗದಂತೆ ವಿಚಿತ್ರವಾದ ತಿರುವು ಮುರುವು ಬರುವಂತೆ ಎರಡು ಮೂರು ಹಂತಗಳಲ್ಲಿ ನಿಮರ್ಿಸಲಾದ ಕೋಟೆ. ಪಾತಾಳದಲ್ಲಿರುವಂತೆ ಕಾಣುವ ವಾಹನಗಳು!
|
ಮಳೆಯಲಿ ಇನಿಯನೊಂದಿಗೆ ತುಂಟಾಟದಲಿ ನಿರತ ನೀರೆ ! |
|
ಪ್ರತಾಪ್ ಗಡ್ ನಿಂದ ಕಾಣುವ ವಿಹಂಗಮ ನೋಟ. |
|
ಪ್ರತಾಪ್ ಕೋಟೆ. |
ಗೈಡ್ ಹೇಳಿದ ವಿವರಣೆಗಳನ್ನೆಲ್ಲಾ ಕೇಳುತ್ತಾ ಸಮಯ ಸರಿದಿದ್ದೇ ತಿಳೀಲಿಲ್ಲ. ಶಿವಾಜಿಯ ನೆನಪಿಗೆ ಆತನ ಮುದ್ರೆಯ ಟಿ-ಶರ್ಟನ್ನು, ಜೊತೆಗೊಂದಿಷ್ಟು ಕೀ ಚೈನ್ ಕೊಂಡು ಮಹಾರಾಷ್ಟ್ರದ ವಿಶೇಷ 'ಜವಾಣ್' ನೂರು ರೂಪಾಯಿಗೆ ಎಂಬ ಫಲಕವಿದ್ದ ಹೋಟೆಲೊಂದಕ್ಕೆ ನುಗ್ಗಿದೆವು. ಖಾರವಾದ ಪಲ್ಯದ ಜೊತೆ ಎರಡು ಬಕರಿ, ಮತ್ತೊಂದು ಸಾಂಬಾರು, ಇರುಳ್ಳಿ, ಸೌತೆ ಕಾಯಿ ಅನ್ನ, ನೀರು ಮಜ್ಜಿಗೆ ನೀಡಿದರು. ಸಮಯ ಮೂರಾಗಿದ್ದುದರಿಂದ ಹೊಟ್ಟೆ ಚುರುಗುಡುತಲಿತ್ತು. ಊಟ ಮುಗಿಸುವುದರೊಳಗೆ ಅದೆಲ್ಲಿತ್ತೋ ಮಳೆ ತನ್ನೆಲ್ಲಾ ಬಾಹುಗಳನ್ನು ಚಾಚಿ ಪ್ರತಾಪನನ್ನು ಮುತ್ತಿಕೊಂಡಿತು! ಮಳೆ. ಅನೇಕ ದಿನಗಳಿಂದ ಕನಸಿದ್ದ ಅನೇಕ ಮಳೆಯ ಚಿತ್ರಗಳು ಕ್ಯಾಮರದೊಳಗೆ ಸೇರಿಕೊಂಡವು. ಕ್ಯಾಮರ ತೃಪ್ತಿಯ ತೇಗು ತೇಗಿತು. ಉಂಡ ಹೊಟ್ಟೆಯೂ ತೇಗಿತು ನೋಡಿ.
ಕೆಲವು ಚಿತ್ರಗಳು ನಮ್ಮೂರಿನ ಸನಿಹದಲ್ಲೇ ತೆಗೆದಿರುವುದು. ಪ್ರತಾಪಗಢದ ಪ್ರತಾಪವನ್ನು ಮತ್ತೊಮ್ಮೆ ಹೇಳುವೆ.
No comments:
Post a Comment