'ಕಣ್ಣಾ ಮುಚ್ಚೆ ಕಾಡೆ ಗೂಡೆ, ಉದ್ದಿನ ಮೂಟೆ ಉರಳೆ ಹೋಯ್ತು.' ಈ ಸಿಲೆರ್ ಎಂಬ ಸಿರಿಯಸ್ ಇರುವೆ ಕಳ್ಳನನ್ನು ನೋಡಿದಾಗ ಯಾವಾಗಲೂ ಈ ಪದ್ಯವೇ ನೆನಪಾಗುವುದು. ನೋಡಿದ ಕ್ಷಣಕ್ಕಷ್ಟೆ ನಮ್ಮೆದುರಿಗೆ ರೆಪ್ಪೆ ಮುಚ್ಚುವುದರೊಳಗೆ ಇನ್ನೆಲ್ಲಿಗೋ ಮಾಯಾ! ಯಾರೊಂದಿಗೆ ಕಣ್ಣಾ ಮುಚ್ಚೆ ಆಡುತಿದೆ ಎಂದು ತಿಳಿಯದು. ಕಂಡದ್ದೇ ಸುಳ್ಳೆನ್ನುವ ರೀತಿಯಲಿ! ಕೆಲವರ ಮನೆಯಂಗಳದ ತೋಟದಲಿ ಇವು ಮಾಮೂಲಿಯಂತೆ! ನಮ್ಮಲ್ಲಿ ಅಪರೂಪವೇ. ಯಾಕೋ ಗೊತ್ತಿಲ್ಲ. ಐದಾರು ವರ್ಷದಲಿ ಒಂದೆರಡು ಬಾರಿ ಕಂಡಿದ್ದೇನಷ್ಟೆ.
SILLER SPIDER. |
FEMALE SILLER WITH AN ANT. |
ಬಹಳ ಚೂಟಿಯಾದ ಈ ಜೇಡ, ಕಂಡಲ್ಲಿ ಕೂರುವುದೇ ಇಲ್ಲ. ಶಾಲೆಗೆ ಹೋಗಿದ್ರೆ ADD ಕಾಯಿಲೆ ಅಂದೇಳಿ ಚೀಟಿ ಅಂಟಿಸಿ ಕೂರಿಸ್ತಾ ಇದ್ರು. ಒಂಥರಾ ಅಧಿಕ ಪ್ರಸಂಗಿ ಈತ. ಬಾಳೆ ಗಿಡದಲ್ಲಿ, ಕಮಿನಿಷ್ಟ್ ಎಲೆಗಳಲ್ಲಿ ಕಂಡದ್ದೇ ಹೆಚ್ಚು. ಸಿಕ್ಕ ಸಂಧಿಗೊಂದಿನಲಿ ನುಸುಳಿ ಹೊರ ಹೋಗಿ ಬಿಡುವ. ಚಿಕ್ಕ ಮಕ್ಕಳಿಗೆ ಐಸ್ ಕ್ರೀಂ ಪ್ರೀಯವಾದಂತೆ ಇವನಿಗೆ ಕೆಂಪಿರುವೆ ಪ್ರೀತಿ. ಯಾಕೊ ಗೊತ್ತಿಲ್ಲ. ನಮಗೆ ಹುಳಿ ಹುಳಿಯಾದ ಆಮ್ಲೀಯತೆ ಹೆಚ್ಚಿರುವ ಕೆಂಪಿರುವೆ ಇವನಿಗೆ ಬಲು ಪ್ರೀತಿ. ನೋಡಿದಾಗೆಲ್ಲ ಬಾಯಲ್ಲೊಂದು ಇರುವೆ ಕಚ್ಚಿಕೊಂಡೆ ಇರುವ! ಇರುವೆ ಇಲ್ಲದೆ ನೋಡಿದ್ದೆ ಅಪರೂಪ ನೋಡಿ. ನಮ್ಮ ಮನೆಯ ಸುತ್ತಲಿತ ಜೇಡಗಳಲ್ಲೇ ಅತ್ಯಂತ ಸ್ಪುರದ್ರೂಪಿ. ಮುಂದಿನ ಕಾಲಿಗೆ ನಾಗಾಲ್ಯಾಂಡ್ನವರಂತೆ ವಿಚಿತ್ರ ಸಣ್ಣ ಗುಚ್ಚಿನ ಗತ್ತು ಬೇರೆ. ಎರಡನೆ ಜೋಡಿ ಕಾಲಿಗೂ ಸುಂದರ ಕರಿ ಗುಚ್ಚು. ಬೆನ್ನ ಮೇಲೆ ಕೇಸರಿ ಅಚ್ಚು. ಮನುಜನ ಕಣ್ಣಿನಂತಹ ರಚನೆ. ಒಟ್ಟಾರೆಯಾಗಿ ಮನಮೋಹಕ ಬಣ್ಣದ ಬಳುಕುಬಳ್ಳಿ.
ಹಾಗೆ ಮೊನ್ನೆಯೊಂದು ಏಡಿ ಜೇಡನ ಕಂಡು ಮನೆಗೆ ಮರಳುವ ದಾರಿಯಲಿ ಅಪರೂಪಕ್ಕೆ ಇರುವೆಯಿಲ್ಲದೆ ಕಾಂಗ್ರೆಸ್ ಗಿಡದ ದಂಟಿನ ಮೇಲೆ ಧಾಂ ಧೂಂ ಸುಂಟರಗಾಳಿಯಂತೆ ಹೊರಟಿದ್ದ. ಎಲ್ಲಿಗೆ ಹೊರಟೆ ಮರಾಯ ಎಂದರೆ ನಿಲ್ಲುವುದೇ ಇಲ್ಲ ಆಸಾಮಿ. ತನ್ನೆರಡು ಕಾಲುಗಳನ್ನು ನೆಟ್ಟಗೆ ಮಾಡಿಕೊಂಡು ಎರಡು ಪೋಸು ಕೊಟ್ಟು ವೇಗವಾಗಿ ಹೊರಟೇ ಬಿಟ್ಟ. ಬಂಗಾರದ ಮನುಷ್ಯ ಚಿತ್ರದ ಹೀರೊ ರಾಜ್ಕುಮಾರನಂತೆ! ನಿಮಗೆಲ್ಲಿಯಾದರು ಈ ಜೇಡ ಸಿಕ್ಕರೆ ಒಂದು ಪೋನಾಯಿಸಿ ಮರ್ರೆ.
ಶ್ರೀಧರ್ ಎಸ್. ಸಿದ್ದಾಪುರ.
ಕುಂದಾಪುರ ತಾಲೂಕು.
No comments:
Post a Comment