Monday, June 1, 2020

ಶಾಪಗ್ರಸ್ಥ ಗಂಧರ್ವ....



ಕಿಟ್ಟು, ಪುಟ್ಟು ಎಂಬ ಇಬ್ಬರು ಹುಡುಗರು ತಮ್ಮ ಬೇಸಿಗೆ ರಜೆ ಕಳೆಯಲು ಅಜ್ಜಿ ಊರಿಗೆ ಬಂದಿದ್ದರು. ಪಕ್ಕದ ಮನೆ ರಂಗ ಅವರನ್ನ ಬಣ್ಣ ಬಣ್ಣದ ಕಲ್ಲುಗಳಿರೋ ಹೊಳೆ ತೋರಿಸ್ತೀನಿ ಅಂತ ಒಂದಿನ ಹೊಳೆಗೆ ಕರೆದುಕೊಂಡು ಹೋದ.


ಹೊಳೆ ನೀರಲ್ಲಿ ಸಾಕಷ್ಟು ಹೊತ್ತು ಈಜಾಡಿ ಅಲ್ಲಿನ ಕಲ್ಲುಗಳನ್ನೆಲ್ಲಾ ನೋಡುತ್ತಾ ಮನೆಗೆ ತೆರಳುವ ಕಾಡದಾರಿಯನ್ನು ಹಿಡಿದರು.

          ಸ್ವಲ್ಪ ದೂರ ಬರುತ್ತಲೇ ಅವರಿಗೊಂದು ಮರ ಕಾಣಿಸಿತು. ಅದರಲ್ಲಿ ಸೀತಾಫಲ ಗಾತ್ರದ ಹಣ್ಣು ಗಳು ಬಿಟ್ಟಿದ್ದವು. ನೋಡಲು ಸೀತಾಫಲದಂತೆಯೂ ಇತ್ತು. ಏನಾದರಾಗಲಿ ಎಂದು ರಂಗನ ಬಳಿ ಹೇಳಿ ಎರಡು ಹಣ್ಣು ಕಿತ್ತುಕೊಂಡು ಬಂದರು.



ಮನೆಗೆ ಬರುತ್ತಲೇ ಕಿಟ್ಟು, ಪುಟ್ಟು ಉತ್ಸಾಹದಿಂದ ಅಜ್ಜಿಗೆ ತಾವು ತಂದ ಹಣ್ಣು ಯಾವುದೆಂದು ಕೇಳಿದರು. "ನೋಡಿ ಮಕ್ಕಳೆ ಇದರ ಹಿಂದೆ ಆಸಕ್ತಿದಾಯಕ ಕತೆ ಇದೆ" ಬನ್ನಿ ಇಲ್ಲಿ ಹೇಳ್ತೇನೆ ಎಂದಳು. ಮಕ್ಕಳೆಲ್ಲಾ ಅಜ್ಜಿ ಸುತ್ತ ಕುಳಿತರು.
ಗಂಧರ್ವ ಲೋಕ, ಅಲ್ಲೊಬ್ಬ ರುದ್ರಾಕ್ಷ ಎಂಬ  ಗಂಧರ್ವನಿದ್ದ. ಬಹಳ ದಷ್ಟ ಪುಷ್ಟನಾಗಿ ಎತ್ತರವಾಗಿದ್ದ. ಆತ ವಿಪರೀತ ಅಹಂಕಾರಿಯೂ, ತನ್ನ ಸೌಂದರ್ಯದ ಬಗ್ಗೆ ಮೇಲರಿಮೆಯೂ, ಇನ್ನೊಬ್ಬರ ಬಗ್ಗೆ ತಾತ್ಸಾರದ ಭಾವನೆಯನ್ನು ಹೊಂದಿದ್ದ. ಆತ ಒಮ್ಮೊಮ್ಮೆ ಭೂಮಿಗೆ ಬಂದು ಅನೇಕರಿಗೆ ಉಪದ್ರವ ಕೊಡುತ್ತಿದ್ದ. ಒಮ್ಮೆ ಆತ ಭೂಮಿಗೆ ಬಂದಾಗ ಹಲಸಿನ ಹಣ್ಣು ತಿನ್ನುತ್ತಿದ್ದ ಋಷಿಯನ್ನು ನೋಡಿದ. ಆತನೆಡೆಗೆ ನಿಕೃಷ್ಟ ಭಾವವೊಂದನ್ನು ಬೀರಿ, "ಏ ಗತಿ ಇಲ್ಲದ ಸನ್ಯಾಸಿಯೆ ಬೇರೇನು ಸಿಗಲಿಲ್ಲವೇ ತಿನ್ನಲು? ಈ ದರಿದ್ರಕಾರಿಯಾದ, ಮೇಣದಿಂದ ತುಂಬಿದ ಹಲಸು ತಿನ್ನುತ್ತಿದ್ದಿಯಲ್ಲ." ಎಂದು ಮೂದಲಿಸಿದ. ಸುಮ್ಮನೆ ತಿನ್ನುತ್ತಿದ್ದ ಸನ್ಯಾಸಿಗೆ ಕೋಪ ನೆತ್ತಿಗೇರಿತು. ಕೂಡಲೇ " ಅತ್ಯಂತ ರುಚಿಕಟ್ಟಾದ ಆದರೆ ಅತಿ ಸಣ್ಣ ಗಾತ್ರದ ರುದ್ರಾಕ್ಷಿ ಹಣ್ಣಾಗಿ ಹುಟ್ಟು." ಎಂದು ಶಪಿಸಿದ. ಕೂಡಲೇ ಆತ ಕಾಡುಗಳ ಸಂದುಗಳಲ್ಲಿ ಹುಲುಸಾಗಿ ಬೆಳೆವ ಪುಟಾಣಿ ರುದ್ರಾಕ್ಷಿ ಗಿಡವಾಗಿ ಹುಟ್ಟಿದ. "ಹೀಗೆ ಅಹಂಕಾರದಿಂದ, ಮದದಿಂದಾಗಿ ಹಲಸಾಗಿ ಹುಟ್ಟಿದ ಗಂಧರ್ವ ರುದ್ರಾಕ್ಷನ ಕತೆ ಮಕ್ಕಳೆ." ಎಂದು ಅಜ್ಜಿ ಕತೆ ನಿಲ್ಲಿಸಿದಳು.



" ಇದರ ಸೊಳೆ ರುಚಿ ಇರುತ್ತಾ" ಎಂದು ಕೇಳಿದ ಪುಟ್ಟು. "ಬಹಳ ರುಚಿ ಮಕ್ಕಳಾ, ನಾಳೆ ತಿನ್ನೋಣ." ಎಂದು ಅಜ್ಜಿ ತನ್ನ ಕೆಲಸಕ್ಕೆ ಹೊರಟಳು.


ಶ್ರೀಧರ್. ಎಸ್. ಸಿದ್ದಾಪುರ

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...