Sunday, March 17, 2024

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh)

ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿತ್ತಿದ್ದ. ಯಾವದೋ ಚಂದ್ರನ ತುಂಡೊಂದು ಭೂಮಿಗೆ ಉದುರಿದ ಭಾವ. ಅತಿ ಸಣ್ಣ ಊರು ಲೋಸರ್ ಧೂಳಿನಲ್ಲಿ ಮಿಂದ ರಸ್ತೆ, ಜನ. ಬೌದ್ಧರ ಒಂದು ಹಬ್ಬವನ್ನು ನೆನಪಿಗೆ ತರುವ ಹೆಸರು ಲೋಸರ್. ಕಾಝಾ ಗೆ ಹೊರಟ ಒಂಟಿ ಸರಕಾರಿ ಬಸ್.‌ ಗಂಟೆ ಮೂರಕ್ಕೆ ಹಿಂದಿರುಗುವ ದನ ಕರುಗಳ ಮೆರವಣಿಗೆ. ಧೂಳನ್ನು ಲೆಕ್ಕಿಸದೆ ಬಿಸಿಲಿಗೆ  ಕೂತ ಜನ. ಬಲಕ್ಕೆ ಹರಿವ ಹಿಮ ಝರಿ. ಸುತ್ತಲೂ ಕೋಟೆ ಕಟ್ಟಿ ನಿಂತ ಬೆಟ್ಟ ಸಾಲು. ಕತ್ತಿ ಅಲಗಿನಂತಹ  ಚಳಿ. ಜಗತ್ತಿನ ತುತ್ತ ತಲುಪಿದ ಅನುಭವ. 




ಕುಂಜುಂ ಪಾಸ್‌ನಿಂದ ಬೀಸುವ ಹಿಮಗಾಳಿಗೆ ಲೋಸರ್‌ ಹಳ್ಳಿ -೩ ಡಿಗ್ರಿಯಲ್ಲಿ ತಣ್ಣಗೆ ಕುಳಿತ್ತಿತ್ತು. ಸುಸ್ತು ಹೊಡೆಸಿದ ಪ್ರಯಾಣ ಎಲ್ಲಿಗೂ ಹೊರಡದಂತೆ ಎಲ್ಲಿಗೂ ಹೊರಡದಂತೆ ಪ್ರತಿಬಂದಿಸಿತ್ತು. ಹೊಕ್ಕಳೊಳಗೆ ಚಳಿ ಕುಣಿತ. ಹೊದ್ದು ಮಲಗಬೇಕೆಂಬ ತವಕ.


ಬೆಟ್ಟದ ಮೇಲೊಂದು ಕೆಳಗೊಂದು ಬುದ್ಧನ ದೇವಾಲಯ. ಊರ ನಡುವಿನ ಪುಟ್ಟ ಕ್ಯಾಂಟಿನ್‌ ಒಂದರಲ್ಲಿ ದಾಲ್‌ ಚಾವಲ್‌ ನ ಸವಿದು ಬೆಟ್ಟದ ಮೇಲಿನ ಬುದ್ಧ ದೇವಾಲಯಕ್ಕೆ ಲಗ್ಗೆ ಇಟ್ಟೆವು. ಸೂರ್ಯ ಇಳಿಯುತಲಿದ್ದ. ಹಸುಗಳ ಕೊರಳ ನಾದ ಆಲಿಸುತ್ತಾ ಗುಡ್ಡ ಏರತೊಡಗಿದೆವು. ಚಂದ್ರನ ತುಂಡೊಂದರ ಮೇಲಿಳಿದ ಭಾವ. ಹೂ ಚೆಲ್ಲಿದಂತಿದ್ದ ಮೋಡಗಳ ನಡುವೆ ಸೂರ್ಯ ಚಂದ್ರನಂತಾಗಿದ್ದ. ಕಡಲ ನೀಲಿ ಕುಡಿದು ಮತ್ತೇರಿಸಿಕೊಂಡ ನೀಲಾಕಾಶ. ಚಳಿ ಹೊಡೆತಕ್ಕೆ ಹಳದಿಯಾದ ಗಿಡ ಮರಗಳು. ಬೆಟ್ಟದ ಮೇಲೆಲ್ಲಾ ಸುಣ್ಣ ಚಲ್ಲಿದಂತೆ ಬಿದ್ದ ಹಿಮ ರಾಶಿಗಳು. ಶಿಖರದಾಚೆ ಚೀನಾ ದೇಶ. ನೆತ್ತಿಯಲ್ಲೇನೋ ಅಲೌಕಿಕ ಆನಂದ. ದಿವ್ಯ ಏಕಾಂತದ ಅಮಲು. ಅಲ್ಲೇ ಕೂರುವಂತೆ ಪ್ರೇರೇಪಿಸಿದ್ದರೂ ಚಳಿ ಬೇಗನೆ ಕೆಳಗಿಳಿ ಕೆಳಗಿಳಿ ಎನ್ನುತಲಿತ್ತು. ಇಲ್ಲಿನ ಚಳಿಗೆ ಕಪ್ಪ ಕೊಟ್ಟೆ. 

Losar Village

    ರೆಸಾರ್ಟ್‌ ಸೇರುತ್ತಲೇ ಬಿಸಿ ಬಿಸಿ ಲಿಂಬೆ ಚಹದ ಬರಪೂರ ಸ್ವಾಗತ. ಕಾಝಾದಿಂದ ಬೈಕ್ ನಲ್ಲಿ ಬರುವ ಗೆಳೆಯರು ಧೂಳ ಸ್ನಾನಗೈಯುತ್ತಾ ನಿದಾನಕ್ಕೆ ಬಂದರು. ಇಲ್ಲಿ ಒಂದೆರಡು ಹೋಟೆಲ್‌ ಬಿಟ್ಟರೆ ಬೇರಿಲ್ಲ. ಇದ್ದುದರಲ್ಲೇ ಉತ್ತಮವಾದುದೊಂದು ನನ್ನ ಪಾಲಿಗೆ ಬಂದಿತ್ತು. ಪ್ರಶಾಂತ ಹಿಮಾಲಯದ ಕೊನೆ ಹಳ್ಳಿ ಅದ್ಭುತ ಪಯಣಕ್ಕೊಂದು ಮುನ್ನುಡಿ ಬರೆಯಿತು. ಹಿಮಾಲಯದ ಹಳ್ಳಿಗಳಲ್ಲಿರುವ ದೈವೀಕತೆ ಎಂತಹ ಪಾಮರನಲ್ಲೂ ಆಧ್ಯಾತ್ಮದ ಸೆಳಕನ್ನು ಹೊತ್ತಿಸಬಲ್ಲದು.

A temple near Losar Village

A mud road to Kumzum Pass

ಪಯಣದಿಂದ ಜರ್ಜರಿತವಾದ ದೇಹಕ್ಕೆ ಸ್ನಾನದ ಸಾಂತ್ವಾನ ನೀಡಲೆನ್ನಿಸಿದೆ. ಸಿಕ್ಕ ಒಂದೇ ಬಕೆಟ್‌ ಉಗುರು ಬೆಚ್ಚಗಿನ ನೀರಲ್ಲಿ ಮಿಂದೆದ್ದವನಿಗೆ ಮೈಯಲ್ಲಿ ಭೂಕಂಪ. ಭೂತ ಆವರಿಸಿದಂತೆ ನಡುಕ. ಸಂಜೆ ಐದಕ್ಕೆ ಹೊಕ್ಕ ಚಳಿ ಏಳಾದರೂ ಹೋಗಿರಲಿಲ್ಲ. ಹೊದ್ದು ಮಲಗಿದೆ. ಎರಡು ಚಹ ಕುಡಿದೆ ಆದರೂ ನಡುಕದ ಮುಂದುವರಿಕೆ. 

7.45 ಕ್ಕೆ ಊಟಕ್ಕೆ ಕರೆ ಬಂತು. ಪುಟಾಣಿ, ಚಳಿಗೆ ಜಾಗವಿಲ್ಲದ ಡೈನಿಂಗ್‌. ಬಿಸಿ ಬಿಸಿ ಕಪ್ಪು ಕಡಲೆ ಬೀಜದ ಸೂಪ್‌ ಹಬೆಯಾಡುತ್ತಾ ನನ್ನ ಕುಡಿ ಕುಡಿ ಎಂದು ಬಂತು. ಹೊಟ್ಟೆ ಸೇರುತ್ತಲೇ ಚಳಿ ತನ್ನೂರ ಸೇರಿತ್ತು. ಜೀವದಲ್ಲಿ ಹೊಸ ಜೀವ ಸಂಚಾರ. ಇಂತಹ ಚಳಿಯಲ್ಲಿ ಸೂಪ್‌ ಹೀರುವುದೇ ಅವರ್ಣನೀಯ ಆನಂದ. ಸ್ಪಿಟಿ ಹಳ್ಳಿಯೂಟವೊಂದು ಸವಿಯುವ ಸದಾವಕಾಶವೊಂದನ್ನು ನಮಗೆ ಕರುಣಿಸಿದ ಹೊಟೆಲ್‌ ಮಾಲೀಕ ಮತ್ತು ಅವರ ತಾಯಿಗೆ ವಂದನೆ ಸಲ್ಲಿಸಿದೆ. ನಾಚಿಕೆಯಲ್ಲಿ ಮುದುಡಿಕೊಂಡರು. ಕತ್ತಲು ನಮ್ಮನ್ನು ಅದರ ತೆಕ್ಕೆಯಲ್ಲಿ ಬಹು ಬೇಗನೆ ಕರಗಿಸಿಕೊಂಡಿತು.

ಕುಂಜುಂ ಮಾತಾ ಮಂದಿರದೆಡೆಗೆ…


ಕತ್ತಿಯ ಅಲುಗಿನಂತಹ ಚಳಿಯಲಿ ಬೇಗನೆದ್ದು ಬ್ರೆಡ್‌ ಆಮ್ಲೇಟ್‌ ಮೆದ್ದು ೫.೩೦ ಕ್ಕೆ ಹೊರಟು ನಿಂತೆವು. ಮಧ್ಯ ಮಧ್ಯ ಒಂದರೆಗಳಿಗೆ ಸೆಲ್ಫೀ ಸಮಾರಾಧನೆ ನಡೆಯಿತು. ಮುನಿಸಿಕೊಂಡ ಸೂರ್ಯ ನಿಧಾನಕ್ಕೆ ಬೆಟ್ಟಗಳ ಬೆಳಗಿಸ ತೊಡಗಿದ. ಸುಮಾರು ಒಂದು ಗಂಟೆ ಜೀವ ಕೈಯಲ್ಲಿ ಹಿಡಿದುಕೊಂಡು, ಧೂಳ ಸ್ನಾನ ಮುಗಿಸಿ ಕುಂಜುಂ ಮಾತಾದಲ್ಲಿದ್ದೆವು. 

ಕುಂಜುಂ ಮಾತಾ ಮಂದಿರದಲ್ಲಿ….

ಕುಂಜುಂ ಮಾತಾ ಮಂದಿರ.


ಕಾವಲಿಗಿಟ್ಟ ಗಿರಿ ಶಿಖರಗಳು ಚಳಿಗೆ ಬಿಳಿ ಸ್ವೆಟರು ಹೊದ್ದು ನಿಂತಿದ್ದವು. ಶರಾಬಿನಲಿ ಅದ್ದಿ ತೆಗೆದಂತಹ ಚಳಿಗೆ ಪತರುಗುಟ್ಟುತಲಿತ್ತು ಕೈ, ಕಾಲು ದೇಹ. ಬೈಕ್‌ ಸವಾರರು ಚಳಿಗೆ ಕೈ ಮುಗಿಯುತಲಿದ್ದರು. ಧೂಳ ಸ್ನಾನ.

ವಿಚಿತ್ರ ಮಂದಿರದಲ್ಲಿ …….

ದಕ್ಷಿಣ ಭಾರತದವರಿಗೆ ಇದೊಂದು ವಿಚಿತ್ರ ಮಂದಿರವೇ. ಸುಮಾರು 14,900 ಅಡಿ ಎತ್ತರವು ಅದಕ್ಕೊಂದು ಕಿರಿಟ ತೊಡಿಸಿತ್ತು. ಪರ್ವತಗಳೇ ಗೋಡೆ. ಆಕಾಶವೇ ಮೇಚ್ಛಾವಣಿ! ನಿನ್ನೆ ಮುಗಿಲಿನಿಂದ ಸುರಿದ ಹಿಮವೇ ಸುಂದರ ನೆಲಹಾಸು! ಕೇವಲ ಒಂದಿಷ್ಟು ಸಣ್ಣ ಸಣ್ಣ ಗೋಪುರ ನಿರ್ಮಿಸಿ ಇಟ್ಟ ಜಾಗವೇ ಮಂದಿರ. ಸುತ್ತಲೂ ಪತಾಕೆಗಳು. ಕಪ್ಪು ಬಳಪದ ಶಿಲೆಯೇ ದೇವರು. ಪ್ರತಿ ವಾಹನ ಇಲ್ಲಿ ನಿಲ್ಲಿಸಿ ಒಂದು ಸುತ್ತು ಬಂದು ಹೊರಡುತ್ತವೆ. 
     ನಮ್ಮ ಮನೋಕಾಮನೆಗಳು ಈಡೇರಬೇಕಾದರೆ ಈ ಶಿಲೆಗೆ ನಾಣ್ಯ ಅಂಟಬೇಕಂತೆ! ನಮ್ಮ ತಂಡದವರ ಯಾರ ನಾಣ್ಯವೂ ಅಂಟಲಿಲ್ಲ. ನನ್ನೆದುರಿಗೇ ಯಾತ್ರಿಕನೊಬ್ಬನ ನಾಣ್ಯ ಅಂಟಿ ನನಗೆ ಅಚ್ಚರಿ ಮೂಡಿಸಿತು! ಏನೇ ಮಾಡಿದರೂ ನನ್ನ ನಾಣ್ಯ ಈ ಶಿಲೆಗೆ ಅಂಟಲೇ ಇಲ್ಲ. ನನ್ನ ಪಾಪ ಕರ್ಮ ಹೆಚ್ಚಾಯಿತಿರಬೇಕು.🤣🤣🤣 
ಕುಂಜುಂ ಮಾತಾ ಮಂದಿರ

ಕುಂಜುಂ ದೇವಾಲಯದ ಎದುರಿನ ಬುದ್ಧ




ಕುಂಜುಂ ಮಾತಾ ಎದುರಿನ ಹಿಮ ಹೊತ್ತ ಶಿಖರ

ಬಾರಾ ಶೆಂಗ್ರಿ ಗ್ಲೀಷಿಯರ ವಿಶ್ವದ ಅತಿ ಉದ್ದನೆಯದರಲ್ಲಿ ಎರಡನೆಯದ್ದು ಇಲ್ಲಿಂದ ನಾಲ್ಕು ಹಾಡಿನ ದೂರದಲ್ಲಿದೆ. 

ಕಂದು ಬಣ್ಣದ ಗಿರಿ. ಭಯಂಕರ ಚಳಿಗೆ ಸೂರ್ಯ ಮೇಲೆ ಬಂದಿರಲಿಲ್ಲ. ಕುಂಜುಂ ಮಾತೆಯ ವಿಚಿತ್ರ ಕತೆ ಕೇಳುತ್ತಾ ತೀವ್ರ ಕೊರಕಲಿನಲ್ಲಿ ಕಣ್ಣು ಇಳಿಸುತ್ತಾ ಮುಂದೆ ಸಾಗಿದೆವು. ದಾರಿಯ ಭೀಕರತೆಗೆ ಬೆರಗುಗೊಳ್ಳುತ್ತಾ ೧೨ ಕಿ.ಮೀ ದೂರದ ಚಂದ್ರ ತಾಲ್‌ನತ್ತ ಮುಂಬರಿದೆವು. ಮನಾಲಿಯಿಂದಲೂ ಇಲ್ಲಿಗೆ ತಲುಪಬಹುದು.  

ಸುಮನೋಹರ ಚಂದ್ರತಾಲ್‌ 

ಚಂದ್ರತಾಲ್ ಸನಿಹದ ಬೆಟ್ಟ ಸಮೂಹ



ಚಂದ್ರ ತಾಲ್


ಮನ ಮನಸಿನ ತುಂಬಾ ಚಂದ್ರತಾಲ್‌ದ ಬಿಂಬ. ಚಂದ್ರ ತಾಲ್‌ಗೆ ಹಿಮ ಶಿಖರಗಳ ಪಹರೆ. ಗಳಿಗೆಗೊಂದರಂತೆ ಬಣ್ಣ ಬದಲಿಸುವ ಸರೋವರ. ಚಂದ್ರಾ ನದಿ ಹುಟ್ಟುವುದು ಇಲ್ಲಿಂದಲೇ.‌ ಮುಂದೆ ಇದು ಚಿನಾಬ ನದಿಯೊಂದಿಗೆ ಸೇರುತ್ತದೆ. 

ಲೋಸರ್‌ನಿಂದ ಸುಮಾರು ೨ ಗಂಟೆಯ ದಾರಿ. ಪಾರ್ಕಿಂಗ್‌ ಜಾಗದಿಂದ ೧೫ ನಿಮಿಷಗಳ ನಡಿಗೆಯಲಿ ಸುತ್ತಲಿನ ದಿವ್ಯ ಶಿಖರಗಳ ನೋಟಕ್ಕೆ ಬೆರಗಾಗುತ್ತಾ ಚಂದ್ರತಾಲ್‌ ಸರೋವರದ ತಟ ತಲುಪಿದೆವು.

ಚಂದ್ರ ತಾಲ್‌ ಸರೋವರದ ಸುತ್ತಳತೆ ಸುಮಾರು ೨.೫ ಕಿ.ಮೀ. ಗ್ಲೇಷಿಯರ್‌ ನ ಕರಗಿದ ನೀರನ್ನು ಪ್ರತಿಫಲಿಸುತ್ತದೆ. ನಸು ಗುಲಾಬಿ ಶಿಖರಗಳ ನೆತ್ತಿಯಲ್ಲಿ ಹಿಮ ಬಿಂದು ಕರಗದೇ ಹೊಳೆಯುತ್ತಿತ್ತು. ಕೊರೆವ ನೀರಿಗೆ ಪಾದವಿಟ್ಟರೆ ನಡೆದ ಹಾದಿಯ ದಣಿವು ಮಾಯ. ಚಂದ್ರತಾಲ್‌ ಸುತ್ತಲಿನ ಬೆಟ್ಟ ದರ್ಶನ. ಯಾವುದೋ ಕಾಲ ಘಟ್ಟದಲ್ಲಿ ಬಿದ್ದ ಉಲ್ಕೆಯಿಂದ ಈ ಸರೋವರ ರಚಿತವಾಗಿರಬೇಕು. ಸುತ್ತೆಲ್ಲವೂ ಶಿಖರಗಳಿದ್ದರೆ ಚಂದ್ರತಾಲ್‌ ದ ಬಲಕ್ಕೆ ಸಪಾಟು ನೆಲವಿದೆ. ಅನೇಕ ಕಡೆ ಇಂತುಹುದೇ ಸಪಾಟು ನೆಲವಿರುವುದೇ ನನ್ನ ನಿಲುವಿಗೆ ಕಾರಣ. ಇದರ ಕುರಿತು ತುದಿ ಮೊದಲಿಲ್ಲದ ಅನೇಕ ಕತೆಗಳು ಪ್ರಚಾರದಲ್ಲಿವೆ. 

ಪುರಾಣದಲ್ಲಿ ಚಂದ್ರತಾಲ್…..


ಯುದಿಷ್ಟಿರನು ಸ್ವರ್ಗವೇರಿದ್ದೂ ಇಲ್ಲಿಂದಲೇ ಎಂದು ನಂಬಲಾಗಿದೆ. ಇಂದ್ರ ತನ್ನ ರಥದಲ್ಲಿ ಬಂದು ಆತನನ್ನು ಕರೆದೊಯಿದ್ದ ಎನ್ನುತ್ತದೆ ಪುರಾಣ. 

         ಹುಯ್‌ನ್‌ ಸಾಂಗ್‌ ಚೀನಿ ಯಾತ್ರಿ ಈ ಸರೋವರದ ಸಮೀಪ ಹಾದು ಅದನ್ನು ಲೋಹಿತ್ಯ ಸರೋವರವೆಂದು ಕರೆದ. 

  ಮೋಹಕ ಚಂದ್ರ ತಾಲ್ ಸರೋವರ

ಚಂದ್ರ ತಾಲ್‌ನ ನೀರಿನ ಮೂಲವಿನ್ನೂ ತಿಳಿದಿಲ್ಲ. ದೂರದ ಗ್ಲೇಷಿಯರ್‌ ನಿಂದ ನೀರು ಇಲ್ಲಿಗೆ ಹರಿದು ಬರುತ್ತದೆ ಎನ್ನುತ್ತಾರೆ. ಈ ನೀರು ಹರಿದು ಚಿನಾಬ್‌ ನದಿಗೆ ಸೇರುತ್ತದೆ. 

ಲೌಕಿಕ ಜಗತ್ತಿನಿಂದ ದೂರವಿರುವ ಈ ತಾಣ ಆಧ್ಯಾತ್ಮದ ಅತೀಂದ್ರಿಯ ಸ್ಪರ್ಶವೊಂದನ್ನು ನನಗೆ ಗೊತ್ತಾಗದಂತೆ ಕರುಣಿಸಿತ್ತು. ಸ್ಪಟಿಕ ಶುಭ್ರ ಜಲದಲ್ಲಿ ಕಾಲು ತೋಯಿಸಲು ಮತ್ತೊಮ್ಮೆ ಏಕಾಂಗಿಯಾಗಿ ಬರಬೇಕು. ಇಲ್ಲಿನ ಬದುಕನ್ನು ಆಸ್ವಾದಿಸಬೇಕು ಎಂಬ ಹಂಬಲದೊಂದಿಗೆ ಹೊರಟು ನಿಂತೆ. ನನ್ನ ಮನೋಭಿತ್ತಿಯಲ್ಲಿ ಸರೋವರ ಸಣ್ಣ ಉಲ್ಲಾಸದ ಅಲೆಗಳನ್ನು ಎಬ್ಬಿಸುತ್ತಲೇ ಇದೆ. ಲೋಚನದ ತುಂಬಾ ಚಂದ್ರ ತಾಲದ ಬಿಂಬ. ಯಾಕೆ ನೀವು ಒಮ್ಮೆ ಹೋಗಿ ಬರಬಾರದು.

ಹಾಗೆ ಇಲ್ಲಿನ ಬತ್ತಲಿನಲ್ಲಿರುವ ಚಾಚಾ ಚಾಚಿ ದಾಬಾದಲ್ಲಿ ಊಟ ಮಾಡಲು ಮರೆಯದಿರಿ. ಅತ್ಯಂತ ಕಡಿಮೆ ದರದಲ್ಲಿ ನಿಮಗೆ ಊಟವನ್ನು ಬಿಡಿಸುತ್ತಾರೆ. ಸುಮಾರು ವರ್ಷಗಳ ಕೆಳಗೆ ಹಿಮದಲ್ಲಿ ಸಿಕ್ಕಿಬಿದ್ದ 15 ಜನರಿಗೆ ತಿಂಗಳುಗಳ ಕಾಲ ಉಚಿತ ಊಟವನ್ನು ಇವರು ವ್ಯವಸ್ಥೆ ಮಾಡಿದ್ದರು. ಚಂದ್ರ ತಾಲ ನೋಡುವವರು ಮರೆಯದೆ ಭೇಟಿ ನೀಡಬೇಕಾದ ಜಾಗವೆಂದರೆ ಬತ್ತಾಲ್ ನ ಚಾಚಾ ಚಾಚಿ ದಾಬ.

ಚಾಚಾ ಚಾಚಿ ಡಾಬಾದ ಚಾಚಾ ಮತ್ತು ಚಾಚಿ




No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...