Sunday, December 12, 2021
ಸಿಕ್ಕರೂ ಸಿಗದಂತಿರುವ ಸಿಕ್ಕಿಂನ ಜಲಧಾರೆಗಳು ..
Sunday, October 24, 2021
ಕಾಶ್ಮೀರವೆಂಬ ಕನಸು..
2 ವರುಷದಿಂದ ಕಟ್ಟಿ ಹಾಕಿದ ಕಾಶ್ಮೀರ ಕನಸೆಂಬ ಹಾಯನ್ನು ಬಿಚ್ಚುವ ಹೊಸ ಅವಕಾಶವೊಂದು ನನ್ನೆದುರಿಗೆ ಬಂದಿತ್ತು. ಕಾಶ್ಮೀರವೆಂಬ ನಭವು ನನ್ನೆದುರಿಗೆ ಈ ಸರೋವರದಂತೆ ಪ್ರತಿಫಲಿಸಿತ್ತು. ಕಾಶ್ಮೀರವೆಂಬುದು ಪ್ರತಿ ಅಲೆಮಾರಿಯ ಕನಸು ಅಂತಹ ಕನಸಿನ ನಭವು ನನ್ನೆದುರಿಗೆ ಸಾಕಾರಗೊಂಡ ಮಧುರ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ. ಅದರ ಮೊದಲ ಕಂತು ಇದು.
Sunday, September 26, 2021
ನೇರಳ ಕಟ್ಟೆಯಲ್ಲೊಬ್ಬ ದೇವಲೋಕದ ಸುಂದರ......
ಮಾಗಿ ಚಳಿಯ ಸಮಯ, ಸ್ನೇಹಿತ ಕಾಲ್ ಮಾಡಿ ನೇರಳ ಕಟ್ಟೆಯಲ್ಲಿ ಹಳೆ ವಸ್ತು ಮಾರಾಟಗಾರನಿದ್ದಾನೆ. ಅವನಲ್ಲಿ ಹೊಸ ಹೊಸ ಹಳೆ ವಸ್ತುಗಳು ಬಂದಿವೆಯಂತೆ ನೋಡಿ, ಕೊಂಡು ಬರೋಣವೇ? ಎಂದು ಕೇಳಿದ. ಸರಿ ಎಂದು ಹೊರಟೆ. ನೇರಳಕಟ್ಟೆಯಿಂದ ಮುಂದೆ ಗುಲ್ವಾಡಿಯಲ್ಲಿ ಆತನ ಮನೆಯಿತ್ತು.
ಹಳೆಯ ವಸ್ತುಗಳ ಮಾರಾಟಗಾರನಾದ ಆತ ನಮ್ಮೆದುರು ಒಂದು ಗೋಣಿ ಚೀಲದಷ್ಟು ಹಳೆ ವಸ್ತುಗಳನ್ನು ರಾಶಿ ಹಾಕಿದ. ನಮಗೂ ಅವನಿಗೂ ವ್ಯಾಪಾರ ಕುದುರದೇ ಅಲ್ಲಿಂದ ಹೊರಟೆವು. ಹಾದಿ ನಡುವಿನ ನೇರಳಕಟ್ಟೆಯಲ್ಲಿ ಚಹ ಹೀರಲು ನಿಲ್ಲಿಸಿದೆವು. ಹತ್ತಾರು ಅಂಗಡಿ, ಸಣ್ಣ ಶಾಲೆ ಇರುವ ಪುಟಾಣಿ ಗ್ರಾಮ. ಅನೇಕ ಬರಹಗಾರರು, ಸಾಹಿತ್ಯ ಪ್ರೇಮಿಗಳನ್ನು ತನ್ನ ಒಡಲ ಬಸಿರಿನಲ್ಲಿ ಬಚ್ಚಿಟ್ಟುಕೊಂಡಿದೆ. ಮಕ್ಕಳ ಸಾಹಿತಿ ನೆಂಪು ನರಸಿಂಹ ಭಟ್, ಕವಯತ್ರಿ ಜ್ಯೋತಿ ನೇರಳಕಟ್ಟೆ, ನಾಟಕಕಾರ ಆನಂದ ತಪ್ಪಲು, ಅಕ್ಷರ ಸಂಚಾರದ ಪುಸ್ತಕ ಪ್ರೇಮಿ ಭಾಸ್ಕರ ಮುಂತಾದವರು.
ನೇರಳಕಟ್ಟೆಯಿಂದ ವಾಪಾಸು ಬರುವಾಗ ಒಂದಿಷ್ಟು ಮೀನು ಮಾರುವವರನ್ನು ಕಂಡೆ. ತಲೆ ಮೇಲೊಂದು ಅಣಬೆ ಛತ್ರಿ ಹಾಕಿಕೊಂಡು ಅದರ ನೆರಳಲ್ಲಿ ಕುಳಿತು ಮಾರುತ್ತಿದ್ದರು. ನೋಡಿದ ಕೂಡಲೆ ನನ್ನೊಳಗಿನ ಛಾಯಾಗ್ರಾಹಕ ಜಾಗೃತನಾದ. ಇವರ ಛಾಯಾಗ್ರಹಣ ಮಾಡಬೇಕೆಂದು ನಿರ್ಧರಿಸಿದೆ. ಮುಂದಿನ ಭಾನುವಾರವೇ ಅಲ್ಲಿಗೆ ಮತ್ತೆ ಹೊರಟೆ.
ನೇರಳ ಕಟ್ಟೆ ಚಿತ್ರಕಾರನೊಬ್ಬ ಬಿಡಿಸಿದ ಕೊಲಾಜ್ನಂತೆ. ಹೆಸರೇ ಎಷ್ಟು ಸುಂದರ. ಕೇರಳದಿಂದ ಬಂದ ಮಾಪಿಳ್ಳೆಗಳು, ಕೊಚ್ಚಿ ಕ್ರಿಶ್ಚಿಯನ್ನರು ಈ ಭಾಗದವರೇ ಆಗಿ ಹೋಗಿದ್ದಾರೆ. ಬಹುತೇಕರು ಕೃಷಿಕರು. ಕೊಡ್ಲಾಡಿ ಸಮೀಪದ ದಿ. ಶ್ರೀಪತಿ ಅಡಿಗ ಮತ್ತು ಅವರ ಮಗ ಪ್ರಸನ್ನ ಅಡಿಗ ತಮ್ಮ ಸಹಜ ಕೃಷಿಯ ಮೂಲಕ ನೇರಳ ಕಟ್ಟೆಗೆ ಹೆಸರು ತಂದು ಕೊಟ್ಟವರು.
ಅಂತೂ ಆಸಾಮಿ ವಿಷಯಕ್ಕೆ ಬಂದ್ನಲ್ಲ ಎಂದು ಕುಸಿಯಾಯಿತಾ? ತಲೆಯ ಮೇಲೊಂದು ಶಿಖೆ ಹೊತ್ತ ದೇವಲೋಕದ ಸುಂದರ ಪಕ್ಷಿ ಮರ್ರೆ ಈ ಹಟ್ಟಿ ಮುದ್ದ. ನಾ ನಿಟ್ಟ ಹೆಸರಲ್ಲ ಇದು. ಪರಿಸರದೊಂದಿಗೆ ಹಲವು ಶತಮಾನಗಳಿಂದ ಸಹ ಜೀವನ ನಡೆಸುತ್ತಾ ಬಂದ ಕುಡುಬಿ ಮತ್ತು ಮರಾಠಿ ಜನಾಂಗದವರಿತ್ತ ಹೆಸರು! ಹಟ್ಟಿ ಎಂದರೆ ನಮ್ಮ ಕಡೆ ದನ, ಎಮ್ಮೆ ಕಟ್ಟುವ ಜಾಗ. ಅಲ್ಲಿರುವ ಕೀಟಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ಹೊರೆದು ಕೊಳ್ಳುವವನೀತ. ಗಂಡು ಗಲಿ. ಅಲ್ಲದೆ ಮರಾಠಿಗರ ಹೋಳಿ ಹಬ್ಬಕ್ಕೆ ಇವನ ಚಂದ ಬಾಲವಿದ್ದರೆ ಅದರ ಗತ್ತೇ ಬೇರೆ. ಅವನ ಬಾಲಕ್ಕೆ ಒಳ್ಳೆ ಬೆಲೆ! ಹಾಗೆಂದು ಹಿಡಿಯಲು ಹೋಗಬೇಡಿ. ಪಾರೆಸ್ಟ್ ಡಿಪಾರ್ಟಮೆಂಟಿನವರು ಹಿಡಿದಾರು ಜೋಕೆ. ಈಗಾಗಲೇ ಅಳಿವಿನಂಚಿಗೆ ಸರಿದಿದೆ ಸ್ವಾಮಿ.
ಹೇಗಿದ್ದಾನಿವ ಎಂದು ಕೇಳಿದಿರಾ? ತಲೆಯ ಮೇಲೊಂದು ಶಿಖೆ. ಸೀಳಿಕೊಂಡ ಉದ್ದನೆಯ ಬಿಳಿ ಬಾಲ. ಚೂಪು ಕಣ್ಣು. ದೇಹವೆಲ್ಲಾ ಕಪ್ಪೆನಿಸುವ ಕಡು ನೀಲಿ. ಎದೆ ಬಿಳಿ. ಅದಕೆ ಮ್ಯಾಚಿಂಗ್ ಆದ ಬಿಳಿ ಪುಕ್ಕ ಮತ್ತು ಸೀಳಿಕೊಂಡ ಸುಂದರ ಬಾಲ. ಥೇಟ್ ಸ್ವರ್ಗದಿಂದಿಳಿದು ಬಂದ ದೇವತೆ. ಹಾಗಾಗಿ ಇಂಗ್ಲೀಷ್ ಬಲ್ಲವರು ಪ್ಯಾರಡೈಸ್ ಪ್ಲೈ ಕ್ಯಾಚರ್ ಎಂದು ನಮ್ಮನ್ನು ತಬ್ಬಿಬ್ಬು ಮಾಡಿದ್ದೂ ಉಂಟು. ಇರಲಿ ಇದು ಒಂದು ಅಗ್ದಿ ನೊಣ ಹಿಡುಕ. ಹಾಗಾಗಿ ಮೀನು ಹೆಂಗಸರ ಬೆನ್ನು ಬಿದ್ದಿದ್ದ. ಹಟ್ಟಿ ಮುದ್ದನ ವಿವಿಧ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡುಬಿಟ್ಟೆ. ನನ್ನ ಕ್ಯಾಮರ ಇವತ್ತು ತೃಪ್ತಿಯ ತೇಗು ತೇಗಿತ್ತು. ಫೋಟೋ ಕ್ಲಿಕ್ಕಿಸಿಕೊಂಡ ಕುಸಿಯಲ್ಲಿ ಆತನೂ ಬಾಲ ಅಲ್ಲಾಡಿಸುತ್ತಾ ಹಾರಿ ಹೋದ!
ಶ್ರೀಧರ್. ಎಸ್. ಸಿದ್ದಾಪುರ
Saturday, July 10, 2021
ಪ್ರತಿಫಲನ.
ಕುಳಿರ್ಗಾಳಿ ಶಿಖಾರಿ ಗುಡ್ಡದ ಕಡೆಯಿಂದ ಬೀಸುತಲಿತ್ತು. ಮಂಜು ನಿಧಾನವಾಗಿ ಶಿಖಾರಿ ಗುಡ್ಡವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತಲಿತ್ತು. ಶಿಖಾರಿ ಗುಡ್ಡದ ಎಡ ಮಗ್ಗುಲಿಗೆ ನನ್ನ ಮನೆಯಿದೆ. ಕೆಂಪಾದ ಸೂರ್ಯ ಶಿಖಾರಿ ಗುಡ್ಡದಲ್ಲಿ ಅಡಗಲು ನಿಧಾನಕ್ಕೆ ಶಿಖಾರಿ ಗುಡ್ಡಕ್ಕೆ ಇಳಿಯುತ್ತಿದ್ದ. ಮರಗಳ ನೆರಳು ಉದ್ದಕ್ಕೆ ಬೆಳೆದು ಮನೆಯ ಜಗುಲಿ ಹೊಕ್ಕು ಅಲ್ಲೇ ಕಾಲು ಚಾಚಿತ್ತು. ದನ ಕರುಗಳ ಗಂಟೆಯ ನಾದ ಕಿವಿಗಳ ತುಂಬುತಲಿತ್ತು. ಕತ್ತಲನ್ನು ನಿಧಾನಕ್ಕೆ ಚಳಿ ಅಪ್ಪಿಕೊಳ್ಳುತಲಿತ್ತು.
ನಮ್ಮ ಮನೆಯ ಸನಿಹದಲ್ಲೇ ಕಮ್ಮಾರರ ಕೇರಿಗೊಂದು ಸುಂದರ ರಸ್ತೆ. ಮೈಲುದ್ದ ಮಲಗಿದ ರಸ್ತೆ ಕೆಂಧೂಳಿಯಿಂದ ಅಲಂಕೃತಗೊಂಡು, ಅಜಿರೆವರೆಗೆ ರಸ್ತೆ ಹಾವಿನಂತೆ ಸುತ್ತಿ ಸುಮ್ಮನಾಗಿತ್ತು. ಇಳಿಜಾರಿನ ಕೊನೆಗೆ ಹರಿವ ಚಿತ್ತೇರಿ ಹೊಳೆ ಸುತ್ತಲೂ ಹಬ್ಬಿದ ವನವು ಶಿಖಾರಿಗುಡ್ಡದ ತನಕವೂ ಹಬ್ಬಿತ್ತು. ಶಿಖಾರಿಗುಡ್ಡದ ಬಲ ಮಗ್ಗುಲಿನಲ್ಲಿ ಚೀರು, ಸುಬ್ಬಮ್ಮ, ಶಂಕ್ರ ಮನೆ ಮಾಡಿಕೊಂಡಿದ್ದರು. ಶಿಖಾರಿ ಗುಡ್ಡದ ಎಡ ಮಗ್ಗುಲಿನಿಂದ ಹಬ್ಬಿದ ವನವು ನಮ್ಮ ತೋಟದ ಬುಡಕ್ಕೆ ಬರುವಷ್ಟರಲ್ಲಿ ಅಸಾಧ್ಯ ಜಿಗ್ಗುಗಳಾಗಿ ಪರಿವರ್ತನೆ ಹೊಂದಿ ಒಳಹೋಗಲಾರದಷ್ಟು ದಟ್ಟವಾಗಿತ್ತು.
***
ಆಗಸ್ಟೇ ತೋಟದ ಕೆಲಸ ಮುಗಿಸಿ ಕಾಲು ಚಾಚಿ ಕುಳಿತು, ಚಹಾ ಹೀರುತ್ತಾ, ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದೆ. ಚೀರು ಸುಬ್ಬಮ್ಮರ ಮನೆ ಕಡೆಯಿಂದ ಗದ್ದಲದ ಸದ್ದೊಂದು ಕೇಳಿ ಬಂತು. ಅನೇಕ ಜನ ಸೇರಿ ಕೂಗಿಕೊಂಡತೆ ಏನೋ ಪ್ರಾಣಿಗಳನ್ನು ಅಡ್ಡಗಟ್ಟಿದಂತಹ ಗಲಾಟೆ. ದನವೋ ಎಮ್ಮೆಯನ್ನು ಅಡ್ಡಗಟ್ಟುವ ದನಿಯಾಗಿ ನನಗೆ ಕೇಳಿಸಿತು. ಹೋಗಿ ನೋಡಿ ಬರೋಣವೆಂದೆನಿಸಿದರೂ ಬಹಳಾ ಸುಸ್ತಾದುದರಿಂದ ಸುಮ್ಮನಾದೆ. ಅವರ ಕೇರಿಕಡೆಯಿಂದ ಕೋಳಿ ಕುಪ್ಪ ಬರುವುದು ಕಾಣಿಸಿತು. ಇವನಲ್ಲೇ ಕೇಳೋಣವೆಂದು ಸುಮ್ಮನಾದೆ.
ಕೋಳಿ ಅಂಕದಲ್ಲಿ ಹಮ್ಮೀರನಾದ ಈತ ಎರಡು ಕೋಳಿ ಚಂಚಿಕೊಂಡು ಕೋಳಿ ಅಂಕಕ್ಕೆ ಹೊರಟಿದ್ದ. ಆತನನ್ನು ಕರೆದೆ. ಬಹಳ ಗಡಿಬಿಡಿಯಲ್ಲಿದ್ದ ಆತ ಸ್ವಯಂ ಮುಚ್ಚುವ ಗೇಟು ತೆಗೆದುಕೊಂಡು ಬಂದು ಅನ್ಯ ಮನಸ್ಕನಾಗಿ ನನ್ನ ಪ್ರಶ್ನಾರ್ಥಕವಾಗಿ ನೋಡಿದ. "ಕಮ್ಮಾರರ ಕೇರಿಯಿಂದ ಏನೋ ಗಲಾಟೆ ಕೇಳುತ್ತಿದೆಯಲ್ಲಾ ಮರಾಯ ನಿನಗೇನಾದರು ಗೊತ್ತೋ?" ಎಂದೆ. "ಚೀರು ಮನೆಯ ಹಳೇ ದನವಿರಬೇಕು ಕೊಟ್ಟಿಗೆಗೆ ಬರಲು ಉಪದ್ರವ ಕೊಡುತ್ತಿರಬೇಕು. ಅದೇ ಗದ್ದಲ." ಎಂದು ಗಡಿಬಿಡಿಯ ತೀರ್ಮಾನ ಕೊಟ್ಟ. ನನಗೆ ಹಾಗನಿಸುತ್ತಿರಲಿಲ್ಲವಾದರೂ ನನ್ನ ಅನುಮಾನ ಅವನಲ್ಲಿ ಹೇಳಿದರೆ ಆತ ಇನ್ನೇನೊ ಹೇಳಿ ತನ್ನದೇ ಸರಿ ಎಂದು ವಾದಿಸುವವನಾದ್ದರಿಂದ ಸುಮ್ಮನಾದೆ. ಈಗ ಶಬ್ದ ಸಂಪೂರ್ಣ ನಿಂತು ಹೋದುದರಿಂದ ಸುಮ್ಮನಾದೆ. ಕೋಳಿ ಕುಪ್ಪ ತನ್ನ ಕೋಳಿಯೊಂದಿಗೆ ಹೊರಟು ಹೋದ.
ಕೋಳಿ ಕುಪ್ಪನಂತವರು ಸಿಗುವುದೇ ವಿರಳ. ಆತನೊಬ್ಬ ವಿಲಾಸಿ ವಿರಾಮ ಜೀವಿ. ಕೋಳಿಗಳ ಕುರಿತು ಆತ್ಮಜ್ಞಾನಿ. ಈತನಿಗೆ ಕೋಳಿಗಳಿಗೆ ನೀಡುವ ಔಷಧಗಳು ಆರೈಕೆ ಮಾಡುವ ವಿಧಾನ ಗಳೆಲ್ಲ ನಾಲಿಗೆ ತುದಿಯಲ್ಲಿ. ದಿನದ ಹೆಚ್ಚಿನ ಸಮಯ ಕಾಡು ಮೇಡುಗಳಲ್ಲಿ ಅಲೆಯುತ್ತಾ ಕಳೆಯುತ್ತಿದ್ದ. ಆತ ಮನವಿಟ್ಟು ಹುಂಜನೊಂದನು ಸಾಕಿದರೆ ಕೋಳಿ ಅಂಕದಲಿ ಗೆದ್ದೇ ತೀರುವುದು. ಆದರೆ ಆತನೆಷ್ಟು ಅನ್ಯ ಮನಸ್ಕನೆಂದರೆ ಆತನ ಮನೆಯಲ್ಲೇ ಒಂದೇ ಒಂದು ಕೋಳಿ ಇಲ್ಲ! "ಕುಪ್ಪ ನೀನೊಂದು ಕೋಳಿ ಫಾರಂ ಮಾಡಿದ್ರೆ ಚೆನ್ನಾಗಿತ್ತು ಮರಾಯ. ನಿನಗೆ ಕೋಳಿಗಳ ಕುರಿತು ಒಳ್ಳೆ ಜ್ಞಾನವಿದೆ." ಎಂದು ಒಮ್ಮೆ ಎಲ್ಲೊ ಹೊರಟವನಲ್ಲಿ ಬಿಟ್ಟಿ ಸಲಹೆಯೊಂದನು ಎಸೆದೆ. "ಕೋಳಿಗಳನ್ನು ಫಾರಂನಲ್ಲಿಟ್ಟು ಸಾಕಬಾರದು. ಪಾಪ ಬರ್ತದೆ." ಎಂದ.
"ಅಲ್ವೋ ಕೋಳಿ ಅಂಕ ಮಾಡಿ, ಚೂರಿ ಕಟ್ಟಿ ಹಿಂಸೆ ಕೊಟ್ಟರೆ ಬರಲ್ವೇನೋ?" ಎಂಬ ತರ್ಕವನ್ನು ಮುಂದಿಟ್ಟೆ. " ಹಾಗಲ್ಲ ಬುದ್ದಿ "ದುಡ್ಡಿಗೆ ಕೋಳಿಗಳನ್ನು ಮಾರಾಟ ಮಾಡಬಾರದು." ಎಂಬ ತನ್ನ ವಿಚಿತ್ರ ವಿತ್ತಂಡವಾದವನ್ನು ಮುಂದಿಟ್ಟು ಅಲ್ಲಿಂದ ಕಾಲ್ಕಿತ್ತ. ಎಲ್ಲರಿಗೂ ಧರ್ಮಾರ್ಥ ಕೋಳಿ ಮತ್ತು ದನಗಳಿಗೆ ಬರುವ ಕಾಯಿಲೆಗಳಿಗೆ ಔಷಧಿ ಕೊಡುತ್ತಾ ಸಿಗುವ ಆರಾಮವನ್ನು ಅನುಭವಿಸುತ್ತಾ, ಒಂದೆರಡು ಗದ್ದೆ ಮಾಡಿಕೊಂಡು ಕಾಲಹಾಕುತ್ತಿದ್ದ. ಕೇರಿಯುದ್ದಕ್ಕೂ ಇಂತಹುದೇ ಮನಸ್ಥಿಯವರೇ ಅನೇಕರಿದ್ದರು.
ಪತ್ರಿಕೆಯನ್ನು ಎತ್ತಿಕೊಂಡು ಅದರ ಮೇಲೆ ಕಣ್ಣಾಡಿಸತೊಡಗಿದೆ. ಆಗಲೇ ಸುಬ್ಬಣ್ಣನ ಮನೆಯ ನಾಗರಾಜ ಏದುಸಿರು ಬಿಡುತ್ತಾ, ಓಡುತ್ತಾ ಮನೆ ಕಡೆಗೆ ಬಂದ. ಬಂದ ಗಡಿಬಿಡಿ ನೋಡಿದರೆ ಏನೋ ಅನಾಹುತವಾಗಿದೆ ಎಂದು ಅಂದಾಜಿಸಿದೆ. ಅವನನ್ನೇ ನೋಡುತ್ತಾ, "ಎಂತಾ ಆಯಿತು?" ಎಂದೆ. 'ನಮ್ಮ ಮನೆಯ ದನವನ್ನು ಯಾವುದೋ ಪ್ರಾಣಿ ಹಿಡಿದಿದೆ, ಬೇಗ ಬಂದು ತಪ್ಪಿಸಬೇಕು. ಎಂದು ಅವಸರ ಮಾಡಿದ. ಈಗ ಇಚಾರಣೆ ಸರಿಯಲ್ಲವೆಂದು ನನ್ನ ಹಳೆ ಕಾಲದ ರೈಪಲ್ನ್ನು ತೆಗೆದು ಚರೆ ತುಂಬಿಸಿ, ಮನೆಯಿಂದ ಹೊರಟೆ. ಅವನ ಮನೆಗೆ ಏನಿಲ್ಲವೆಂದರೂ ಐದು ನಿಮಿಷದ ಹಾದಿ. ಕೂಡಲೇ ಹಳೇ ಎಜಿಡಿ ಬೈಕ್ನ ಕಿವಿ ಹಿಂಡಿದೆ. ನಾಗರಾಜ ನನ್ನ ಕೋವಿ ಹಿಡಿದು ಗೇಟಿನೆಡೆಗೆ ಓಡಿದ.
ಕೆಂದೂಳು ಮಿಶ್ರಿತ ಹೊಗೆ ಉಗುಳುತ್ತಾ ಬೈಕ್ ಮಣ್ಣು ರಸ್ತೆಯಲ್ಲಿ ಜಿಂಕೆಯಂತೆ ಓಡಿತು. 'ಯಾವ ಪ್ರಾಣಿ ಹಿಡಿದಿದ್ದು ಕರುವನ್ನು?' 'ನಾನು ನೋಡಿಲ್ಲ ಮರ್ರೆ, ಅಮ್ಮ ನೋಡಿದ್ದಾಳೆ.' ಎಂದ. 'ಅಮ್ಮನಿಗೂ ಸರಿಯಾಗಿ ಕಾಣಿಸಿಲ್ಲವಂತೆ' ಎಂದ. 'ನೀವೆಲ್ಲಾ ಕುರುಡರೋ ಹೇಗೆ?' ಎಂದು ಅಸಮದಾನದಿಂದ ಗದರಿದೆ. ಅವನಿಂದ ಉತ್ತರವೇ ಬರಲಿಲ್ಲ. 'ಯಾವ ಕಡೆ ಹೋಯಿತೆಂದು ಗೊತ್ತಾ?' 'ಶಿಖಾರಿ ಗುಡ್ಡದ ನೆತ್ತಿಯ ಕಲ್ಲು ಬಂಡೆ ಎಡೆಗೆ ಕರುವನ್ನು ಎಳೆದೊಯ್ಯಿದಿತು.' ಎಂದ. 'ಸರಿ', ಎಂದು ಶಿಖಾರಿ ಗುಡ್ಡದ ನೆತ್ತಿಯ ಕಡೆಗೆ ಬೈಕ್ ತಿರುಗಿಸಿದೆ. ನನ್ನ ಮನೆಯಿಂದ ಕೇವಲ ಎರಡು ಫರ್ಲಾಂಗ್ ದೂರ ಮಾತ್ರವಿದ್ದ ಎರಡು ಪರ್ವತದ ಕಣಿವೆಯಲ್ಲಿ ಬೈಕ್ನ್ನು ನಿಲ್ಲಿಸಿದೆ. ನಾಗರಾಜನ ತಾಯಿ ಅಲ್ಲೇ ಒಂಟಿ ದೆವ್ವದಂತೆ ದೊಣ್ಣೆ ಹಿಡಿದು ವೀರಬಾಹುವಿನಂತೆ ನಮಗಾಗಿ ಕಾಯುತಲಿದ್ದಳು. ಇಲ್ಲಿಂದಲೇ ಶಿಖಾರಿ ಗುಡ್ಡದ ನೆತ್ತಿಗೆ ಹೋಗುವ ಕಾಲು ದಾರಿಯೊಂದಿತ್ತು. ಎರಡು ಮೂರು ನಿಮಿಷದೊಳಗೆ ನೆತ್ತಿ ತಲುಪಬಹುದಾದ ಜಾಗದಲ್ಲಿಂದು ಅಸಾಧ್ಯ ಜಿಗ್ಗು ಬೆಳೆದು ಯಾರೂ ಏರದಂತೆ ಪ್ರತಿಬಂದಿಸಿತ್ತು ಪ್ರಕೃತಿ. ಮೊದಲೆಲ್ಲಾ ಇಲ್ಲಿ ವಿಶಾಲವಾದ ಮರವಿದ್ದಿತ್ತು. ನಾಟ ಕಳ್ಳರಿಗೆ ಬಲಿಯಾಗಿದ್ದವು.
ನಾವು ಬಂದದ್ದೇ 'ಒಡೀರೆ, ಈ ಜಿಗ್ಗಿನೊಳಗೆ ನಮ್ಮ ಹೆಂಗರುವೊಂದನ್ನು ಎಳೆದೊಯ್ಯಿದಿತು. ಸ್ವಲ್ಪ ಕಾಣಿ.' ಎಂದು ಭಯಭೀತಳಾದಂತೆ ತೋರುತ್ತಿದ್ದ ಆಕೆ, ಒಂದು ಅಸಾದ್ಯ ಜಿಗ್ಗಿನೆಡೆಗೆ ತನ್ನ ಅಸಹಾಯಕ ಕೈ ತೋರಿದಳು ಸುಬ್ಬಮ್ಮ. ' ಯಾವ ಪ್ರಾಣಿ ಹಿಡಿದಿದ್ದು ಕರುವನ್ನು?' ಆಕೆ ವೀಳ್ಯ ಉಗಿಯುತ್ತಾ 'ಚಿರತೆ ಇರಬೇಕು ಅಯ್ಯ. ಒಂದೇ ಅಲ್ಲ, ಎರಡು ಮೂರು ಪ್ರಾಣಿ ಇದ್ದಂಗಿದೆ.' ಆಶ್ಚರ್ಯ ಚಕಿತನಾದೆ. ಈ ಇಳಿ ಸಂಜೆಯ ಹೊತ್ತಿನಲ್ಲಿ ಕರುವನ್ನು ಹೊತ್ತೊಯ್ಯುವ ಪ್ರಾಣಿ ಯಾವುದೆಂದು ಅಂದಾಜಿಸಲಾಗಲಿಲ್ಲ.
ಮೊದಲೆಲ್ಲಾ ಹಗಲು ಹೊತ್ತಿನಲ್ಲೇ ದಾರಿಯಲ್ಲಿ ಮೊಲ, ಜಿಂಕೆ, ಕಡವೆಗಳು ಸಿಕ್ಕುತ್ತಿದ್ದವು. ಗುಡ್ಡದಲ್ಲಿ ನಿಶ್ಚಿಂತವಾಗಿ ಮೇಯುತ್ತಿದ್ದವು. ಕೇರಿಯವರ ಬಾಯಿ ಚಪಲಕ್ಕೆ, ಪೇಟೆ ಜನರ ಶೋಕಿಗೆ ಅವೆಲ್ಲಾ ತಮ್ಮ ಪ್ರಾಣ ಅರ್ಪಿಸಬೇಕಾಗಿ ಬಂತು. ಕಣ್ಣಿಗೆ ಕಂಡ ಪ್ರಾಣಿಗಳನ್ನೆಲ್ಲಾ ಬಂದೂಕು ನಳಿಕೆಗೆ ಗುರಿ ಮಾಡಿದರು. ಶಿಖಾರಿ ಗುಡ್ಡದ ಪ್ರಾಣಿಗಳ ಜೀವ ವಿಮೋಚನೆಗೆ ಒಳಗಾಯಿತು. ಒಂದೆರಡು ದಿನಗಳಲ್ಲ ಅನೇಕ ವರ್ಷಗಳವರೆಗೆ ಭೇಟೆ ಅವ್ಯಾಹತ. ಕಾಡಿನಲ್ಲಿರಬೇಕಾದುದು ಇವರ ಹೊಟ್ಟೆಯಲ್ಲಿ ತಣ್ಣಗೆ ಮಲಗಿತ್ತು. ಕೆಲವರಿಗೆ ಬೇಟೆ ಶೋಕಿ ಇನ್ನು ಕೆಲವರಿಗೆ ಬಾಯಿ ಚಪಲ. ಬೇಡವೆಂದು ಬಡಕೊಂಡ್ರೂ ಬಿಡದೇ ತಿಂದು ಮುಗಿಸಿದರು. ಚಿರತೆಗಳಿಗೆ ತಿನ್ನಲೇನೂ ಸಿಗದೆ ಊರಿಗೆ ಧಾಳಿ ಮಾಡುವುದು ಸಾಮಾನ್ಯ ಸಂಗತಿಯಾಗ ತೊಡಗಿತು. ಹುಲಿ ಬೆಕ್ಕುಗಳು ಕೋಳಿ ಗೂಡುಗಳಿಗೆ ಧಾಳಿ ಮಾಡುತ್ತಿದ್ದವು. ಇತ್ತೀಚಿನ ದಿನ ಮಾನಸದಲ್ಲಿ ಇದು ವಿಪರೀತಕ್ಕಿಟ್ಟಿತು.
ಜಿಗ್ಗಿನೊಳಗೆ ನುಗ್ಗಿದ ಪ್ರಾಣಿಯಾವುದೆಂದು ಊಹಿಸುತ್ತಾ ನಾಗರಾಜನೊಡನೆ ಜಿಗ್ಗಿನೊಳಗೆ ನುಗ್ಗ ತೊಡಗಿದೆವು. ಕಿಚಕ್ ಕಿಚಕ್ ಎಂದು ಕಾಡು ಕೋಳಿಗಳು ಸಣ್ಣ ಸದ್ದು ಮಾಡಿ ಮರೆಯಾದವು. ಹಕ್ಕಿ ಪಿಕ್ಕಿಗಳು ಕಂಡರೆ ಒಂದೂ ಉಳಿಸುವುದಿಲ್ಲವೆಂದು ಮುಂದಡಿ ಇಟ್ಟೆ. ಚರೆ ಕೋವಿಯನ್ನು ನಾಗರಾಜನಿಗೆ ಕೊಟ್ಟು, ಅಡ್ಡ ಬಂದ ಜಿಗ್ಗನ್ನು ಸವರುತ್ತಾ ದಾರಿ ಮಾಡುತ್ತಾ ಮುಂದಡಿ ಇಡತೊಡಗಿದೆ. ಮಲಗಿರುವ ಹುಲ್ಲುಗಳು ಪ್ರಾಣಿಯೊಂದು ನುಸುಳಿ ಹೋದ ಸಾಕ್ಷಿ ನುಡಿಯುತ್ತಿದ್ದವು. ಶಿಕಾರಿಯ ಹೆಜ್ಜೆ ಗುರುತು ಹಿಡಿಯಲು ಪ್ರಯತ್ನಿಸಿದೆ. ಮಳೆ ಹೋಗಿ ಅನೇಕ ದಿನಗಳಾದುದರಿಂದ ಮಣ್ಣಿನಲ್ಲಿ ಹೆಜ್ಜೆ ಗುರುತು ಗುರುತಿಸದಾದೆ. ಇಂತಹ ಜಿಗ್ಗಿನೊಳಗೆ ಹೇಗೆ ನುಗ್ಗಿ ಹೋಗಿರಬೇಕೆಂದು ಆಲೋಚಿಸತೊಡಗಿದೆ.
ಕೆಲವೇ ನಿಮಿಷ ನಡೆಯುವುದರೊಳಗೆ ಮೈ ಕೈ ಎಲ್ಲಾ ಗೀರಿದ ಗಾಯಗಳಿಂದ ತುಂಬಿ ಹೊಯ್ತು. ಬೆವರಿನೊಂದಿಗೆ ಬೆರೆತ ಗೀರಿದ ಗಾಯಗಳು ಚುರುಗುಟ್ಟುತ್ತಿದ್ದವು. 'ಬೇಕಾ ನಿನಗಿದೆಲ್ಲಾ?' ಎನ್ನುತಲಿತ್ತು ಒಳ ಮನಸ್ಸು. ಆಗಲೇ ಮುಸುವ ಮಂಗವೊಂದು ಕೀರಲು ದನಿ ಮಾಡಿ ತನ್ನ ಗುಂಪಿಗೆ ಸಂಜ್ಞೆ ಕೊಟ್ಟಿದ್ದು ಅಸ್ಪಷ್ಟವಾಗಿ ತೇಲಿಬಂತು. ಕಷ್ಟ ಪಟ್ಟು ಶಿಖಾರಿಗುಡ್ಡದ ನೆತ್ತಿಯೊಳಗೆ ಕಾಲಿರಿಸಿದಾಗ ಸೂರ್ಯ ಸಂಪೂರ್ಣವಾಗಿ ಜಿಗ್ಗಿನೆಡೆಯಲ್ಲಿ ಕಂತಲು ಕಾಯುತ್ತಿದ್ದ. ಗಾಳಿ ಗುಡ್ಡದ ಮೇಲಿನಿಂದ ಕೆಳಗೆ ಬೀಸುತಲಿತ್ತು. ಭೂತಾಕಾರದ ಮರಗಳು ಅಲ್ಪ ಬೆಳಕನ್ನು ಬಿಟ್ಟು ಭಯದ ವಾತಾವರಣ ನಿರ್ಮಿಸಿತ್ತು. ಹಕ್ಕಿ, ಮುಸುವ ಮಂಗಳಗಳ ವಿಪರೀತ ಅರಚಾಟ ಸ್ಪಷ್ಟವಾಗ ತೊಡಗಿತು. ಇಲ್ಲೆ ಎಲ್ಲೋ ಸನಿಹದಲ್ಲಿ ಅದಿರಬೇಕೆಂದು ಜಾಗರೂಕನಾದೆ.
ಮರದ ನೆರಳಿನಲ್ಲಿ ಕರಿ ಕರಡಿಯಂತಹ ಬಂಡೆಯೊಂದು ಕಂಬಳಿ ಹೊದ್ದಂತೆ ನಮ್ಮೆದುರಿಗಿತ್ತು. ಈ ನೆರಳಿನಡಿ ಏನೋ ಚಲಿಸಿದ ಸದ್ದಾಯಿತು. ಒಂದು ಜೀವಿ ಮತ್ತೊಂದು ಜೀವಿಯನ್ನು ಎಳೆದಾಡುವಂತಹ ಸದ್ದು. ಎರಡು ಮೂರು ಜೀವಿಗಳು ಓಟ ಮುಗಿಸಿ ಬಂದು ದೀರ್ಘ ಶ್ವಾಸ ಬಿಡುವ ಸದ್ದುಗಳು. ಕೆಂಪಾದ ಆಗಸದೆದುರಿಗೆ ಬಿದ್ದಿದ್ದ ಕರಿ ಕಲ್ಲಿನ ಮೇಲೆ ಆ ಜೀವಿ ತನ್ನ ದರ್ಶನ ಕೊಟ್ಟಿತು. ಒಮ್ಮೆಲೆ ಮೆದುಳಿನ ನರ ತಂತುಗಳೆಲ್ಲಾ ತಲ್ಲಣಿಸಿ ಸ್ತಬ್ದವಾದವು. ಮೊದಲೇ ಪಸೆ ಆರಿದ ಬಾಯಲ್ಲಿ ಮಾತೇ ಹೊರಡಲಿಲ್ಲ. ಕಲ್ಲಿನ ಮೇಲೆಲ್ಲಾ ರಕ್ತದೋಕುಳಿ. ದನದ ಕುತ್ತಿಗೆ ಕಚ್ಚಿ ಹಿಡಿದ ಚಿರತೆಯೊಂದು ತನ್ನ ಬೇಟೆಯನ್ನು ಸುರುಕ್ಷಿತ ಸ್ಥಳಕ್ಕೆ ಎಳೆದೊಯ್ಯುವ ಮೊದಲು ಸ್ವಲ್ಪ ವಿಶ್ರಾಂತಿಗಾಗಿ ಬಂಡೆ ಎಡೆಯಿಂದ ನಮಗೆ ದರ್ಶನ ಕೊಟ್ಟಿತ್ತು. ತೀವ್ರ ಚಟುವಟಿಕೆಯಿಂದ ಕೂಡಿದ್ದ ಸಂಜೆಯಲಿ ಚಿರತೆ ನಮ್ಮನ್ನು ಗಮನಿಸಲಿಲ್ಲ. ನಾವಿಬ್ಬರೂ ಹಿಂದೆಯೂ ಹೋಗದಂತಹ ಮುಂದಡಿಯು ಇಡದಂತಹ ಸಂಧಿಗ್ದಕ್ಕೆ ಸಿಕ್ಕಿಹಾಕಿಕೊಂಡೆವು. ಹಿಮ್ಮುಖವಾಗಿ ಓಡಲಾರದ ಎಡ ಬಲಕ್ಕೂ ದಾರಿಗಳಿಲ್ಲದ ಬೋನೊಳಗೆ ಬಿದ್ದಿದ್ದೆವು. ಕ್ಷಣ ಕಾಲ ಮೆದುಳೇ ಖಾಲಿ ಖಾಲಿ.
ನಮ್ಮೆಲ್ಲ ಕುಕೃತ್ಯಗಳು ಶಿಖಾರಿಗುಡ್ಡದ ಚಿರತೆಯ ಕಣ್ಣುಗಳಲ್ಲಿ ಪ್ರತಿಫಲನಗೊಂಡು ನನ್ನನ್ನು ವಿಚಲಿತಗೊಳಿಸಿದವು. ತೆವಳುತ್ತಾ ಮೇಲೆ ಬರುತ್ತಾ ಚಿರತೆಯ ಸಂಪೂರ್ಣ ದರ್ಶನ ಸಿಗುತ್ತಲೇ ನಾಗರಾಜ ನಡುಗುವ ಕೈಗಳಲ್ಲೇ ಕೋವಿಯ ಕುದುರೆಯನ್ನು ಅಮುಕಲು ತಯಾರಾಗಿದ್ದ. ಒಮ್ಮೆಲೆ ನಾನು ಕೋವಿ ಮೇಲೆರುಗುದಕ್ಕೂ ಆತ ಕೋವಿಯ ಕುದುರೆಯನ್ನು ಸಂಪೂರ್ಣ ಅದುಮುದಕ್ಕೂ ಸರಿ ಹೋಯ್ತು. ಗುಂಡು ಹಾರದೆ ಕೋವಿ ಕೆಳಗೆ ಬಿದ್ದು ನಿಶ್ಶಬ್ದವಾಯ್ತು. ನಾಗರಾಜ ನನ್ನನ್ನೇ ಆಶ್ಚರ್ಯ ಚಕಿತನಾಗಿ ನೋಡ ಹತ್ತಿದ. ಕೋವಿಯಿಂದ ಶಬ್ದ ಹೊರ ಹೊಮ್ಮಿದಿದ್ದರೆ ನಾವಿಬ್ಬರೂ ಪಡ್ಜವಾಗುತ್ತಿದ್ದೆವು. ವಿರುದ್ದ ದಿಕ್ಕಿನಿಂದ ಬೀಸುತ್ತಿದ್ದ ಗಾಳಿ, ಮೀಟದ ಕೋವಿಯ ಕುದುರೆ ನಮ್ಮನ್ನುಳಿಸಿತ್ತು. ಮುಂದಿದ್ದ ನಾಗರಾಜನಿಗೆ ವಾಪಾಸಾಗುವ ಸೂಚನೆ ನೀಡಿದೆ. ಚಿರತೆಯನ್ನೇ ಗಮನಿಸುತ್ತಾ ಏನೂ ಮಾತನಾಡದೇ ಹಿಮ್ಮುಖವಾಗಿ ಚಲಿಸತೊಡಗಿದೆವು. ಸುಬ್ಬಮ್ಮನ್ನ ಕರುವಾಗಲೇ ಪ್ರಾಣ ಬಿಟ್ಟಿತ್ತು. 'ಹೂಜಿ ಗಿಡದ' ಬೋನಿನಿಂದ ನೊಣ ಹೊರ ಬರುವಂತೆ ಬರತೊಡಗಿದೆವು. ಸುಬ್ಬಮ್ಮನ ಕರುವಾಗಲೇ ಪ್ರಾಣ ಬಿಟ್ಟಾಗಿತ್ತು. ಜಿಗ್ಗಿನೊಳಗೆ ಹೇಗೋ ಸುಲಭವಾಗಿ ನುಗ್ಗಿದ್ದೆವು. ಹುಲಿ ಬೋನಿಗೆ ಬಿದ್ದ ಇಲಿಯಂತಾಗಿದ್ದೆವು. ಮೈಯಲ್ಲಿ ಚೂರೂ ಜಾಗವಿಲ್ಲದಂತೆ ತರಚು ಗಾಯಗಳು. ಹಿಂದಡಿ ಇಡುತ್ತಾ ಬೈಕಿರುವಲ್ಲಿಗೆ ಬಂದಾಗ " ಗುಂಡು ಹಾರಿಸಿ ಕೊಲ್ಲ ಬಹುದಿತ್ತಲ್ಲಾ?" ಎಂದ ನಾಗರಾಜ. "ಕರು ಉಳಿಯುವ ಸಾಧ್ಯತೆ ಇಲ್ಲದಾಗ ಕೊಂದೇನು ಲಾಭ?" " ಮುಂದೊಂದು ದಿನ ಅದು ಇನ್ನೊಂದು ದನವನ್ನು ಸಾಯಿಸಬಹುದು." "ಅದಕ್ಕೆ ಈಗಲೇ ಕೊಲ್ಲುವುದೇ?" "ಅದೊಂದು ಹೆಣ್ಣು ಚಿರತೆ, ಈಗಷ್ಟೇ ಮರಿಗಳಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಅವು ಹೊರಬರುವುದಿಲ್ಲ. ತನ್ನ ಸಂಗಾತಿಯನ್ನೂ ಕಳೆದುಕೊಂಡಿರಬೇಕು. ಹಾಗಾಗಿ ಸ್ವತಃ ಬೇಟೆಗೆ ಬಂದಿದೆ. ಮರಿಗಳೆಲ್ಲಾ ಅನಾಥವಾಗುವುದು ಸರಿಯಲ್ಲ." ಎಂದು ಆತನಿಗೆ ತಿಳಿ ಹೇಳಿದೆ. "ನಿಮಗೆ ಹೇಗೆ ಇಷ್ಟೆಲ್ಲಾ ವಿವರ ತಿಳಿಯಿತು?" ಅವನೆಂದ.
" ಅದರ ಹೊಟ್ಟೆಯನ್ನು ನೀನು ಗಮನಿಸಿದೆಯಾ? ಅದು ಬೆನ್ನಿಗಂಟಿದೆ. ಹಾಲು ತುಂಬಿದ ಅದರ ಜೋಲು ಮೊಲೆಗಳನ್ನು ನೋಡಿದರೆ ಅದೀಗಷ್ಟೇ ಮರಿ ಹಾಕಿದೆ ಎಂದು ಗೊತ್ತಾಗುತ್ತೆ." ಎಂದೆ. ನಾಗರಾಜ ಏನೂ ಮಾತನಾಡದೆ ನನ್ನ ಜೊತೆ ಹೆಜ್ಜೆ ಹಾಕಿದ. ಶಿಖಾರಿ ಗುಡ್ಡವನ್ನು ಪ್ರಾಣಿ ಮುಕ್ತ ಮಾಡಿದ್ದಕ್ಕೆ ಸೇಡು ತೀರಿಸಲೋ ಎಂಬಂತೆ ಚಿರತೆಯೊಂದು ನಮ್ಮ ಕರುವನ್ನು ಎಳೆದೊಯ್ಯಿದಿತು. ಬೈಕನ ಕಿವಿ ಹಿಂಡಿ ಧೂಳು ರಸ್ತೆಯಲ್ಲಿ ನಿಧಾನಕ್ಕೆ ಧೂಳಿನೊಂದಿಗೆ ಒಂದಾದೆವು.
ಶ್ರೀಧರ್. ಎಸ್. ಸಿದ್ದಾಪುರ.
ವಿಳಾಸ:- ರಥಬೀದಿ ಸಿದ್ಧಾಪುರ,
ಸಿದ್ದಾಪುರ ಅಂಚೆ, ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ 576229.
Saturday, June 5, 2021
ಇತಿಹಾಸ ಹೊಸೆದ ಹೂ ಬಳ್ಳಿ ಹೊಸಗುಂದ...
ಹೂ ಅರಳುವ ಹೊತ್ತು. ಮಲಗಲು ಹೋದ ರವಿ ಇನ್ನೂ ಎದ್ದಿರಲಿಲ್ಲ. ಒಮ್ನಿಯ ಲಾಟಾನು ಬೆಳಕನು ಮುಂದ್ಹಾಯಿಸಿ ಮಂಜಿನ ಪರದೆ ಸೀಳಿ ನಮ್ಮ ವಾಹನ ಸಾಗರ ತಾಲೂಕಿನ ಆನಂದಪುರದ ಸನಿಹದ ಹೊಸಗುಂದದತ್ತ ಧಾವಿಸುತಲಿತ್ತು. ಗೂಗಲ್ ಗುರುವಿಗೆ ಸಹಾಯಕ್ಕಾಗಿ ಪದೇ ಪದೇ ಯಾಚಿಸಿದರೂ ನಿಮ್ಮ ಮೊಬೈಲ್ ನೆಟ್ವಕರ್್ ಕ್ಷೇತ್ರದಲ್ಲಿಲ್ಲವೆಂದು ಸಂದೇಶ ತೋರಿಸುತ್ತಾ ಮುಷ್ಕರ ಹೂಡಿತ್ತು. ಆನಂದಪುರದಲಿ ಎಡಕ್ಕೆ ಹಾಯ್ದು, ಆಕಾಶಕ್ಕೆ ಚಪ್ಪರ ಹಾಸಿದ ಮರಗಳ ನಡುವೆ ಹುದುಗಿದ ಹೊಸಗುಂದವೆಂಬ ಹೊಸಲೋಕವನ್ನು ಹಳೇ ಒಮ್ನಿ ಕಾರಿನಲ್ಲೇ ತಲುಪಿಕೊಂಡೆವು.
ಹೊಸನಗರದಿಂದ ಉತ್ತರಾಭಿಮುಖವಾಗಿ ಹೊರಟು ಆನಂದಪುರದಲ್ಲಿ ಎಡಕ್ಕೆ ಹೊರಳಿದರೆ ಹೊಸಗುಂದದ ದೇವಾಲಯಗಳ ಹೆಬ್ಬಾಗಿಲಿಗೆ ಬಂದು ಬೀಳುತ್ತೀರಿ. ಇಲ್ಲಿಂದ ಕೇವಲ 12 ಕಿಲೋ ಮೀಟರ್. ಸುತ್ತಲೂ ಆವರಿಸಿದ ಭತ್ತದ ಬಯಲು. ಊರಿಗೆ ಹೊಸಗುಂದ ಹೆಸರು ಹೇಗೆ ಬಂತೆದು ಇಲ್ಲಿನವರಿಗಿನ್ನೂ ಗೊತ್ತಿಲ್ಲ. ಮನ ಸೆಳೆವ ಆಕರ್ಷಕ ಶೈಲಿಯ 12ನೆಯ ಶತಮಾನದ ದೇಗುಲ.
ಸುತ್ತೋಣ ಬನ್ನಿ...
ಪನ್ನೀರ ಪುಷ್ಕರಣಿಯಲಿ ಕಾಲು ತೋಯಿಸಿ ಮೆಟ್ಟಿಲೇರಿದಾಗ ಕಾಣಿಸಿದ್ದು ರಾಶಿ ರಾಶಿ ವೀರಗಲ್ಲು. ಕಾಲನ ಹೊಡೆತಕ್ಕೆ ಕೆಲವು ಕಂಗಾಲಾಗಿ ಮಲಗಿದ್ದರೆ ಕೆಲವೇ ಕೆಲವು ನಿಂತಿದ್ದವು. ತಮ್ಮ ಮೇಲಿನ ಅಕ್ಷರಗಳನ್ನೆಲ್ಲಾ ನುಂಗಿಕೊಂಡಿದ್ದವು ಕೆಲವು! ವೀರಗಲ್ಲಿನ ಮೇಲೂ ಕಲಾ ನೈಪುಣ್ಯ. ಚಿತ್ರ ವಿಚಿತ್ರ ಚಿತ್ರಗಳ ವಿಶಿಷ್ಟ್ಯ ವೀರಗಲ್ಲುಗಳ ಸಮೂಹವೇ ಇಲ್ಲಿದೆ. ಇಲ್ಲಿ ನಡೆದಿರಬಹುದಾದ ಯುದ್ಧಗಳ ಸಣ್ಣ ಚಳಕನ್ನು ಈ ವೀರಗಲ್ಲುಗಳು ನಮಗೆ ತೋರಿಸುತ್ತವೆ. ನಮ್ಮವರ ಇತಿಹಾಸದ ದರ್ಪಣಗಳಿವು ಎಂಬುದನ್ನೂ ಅರಿಯದೇ ಸಾಯಲು ಬಿಟ್ಟಂತಿದೆ. ಕಲ್ಲಿಗೆ ಭಾಷೆ ಬಂದಿದ್ದರೆ ಹರಟ ಬಹುದಿತ್ತು, ಇತಿಹಾಸ ಕೆದಕಬಹುದಿತ್ತು!
ಮುಂದೆ ಸಿಗುವುದೇ ದೇವಾಲಯ ಸಮುಚ್ಚಯ. ಹಾಸುಗಲ್ಲಿನ 18 ಕಂಬಗಳ ಮೇಲೆ ಅರಳಿ ನಿಂತ ನವರಂಗದ ಶೋಭೆ. ಕಲಾತ್ಮಕತೆಯಂತೂ ಅತ್ಯದ್ಭುತ. ಸ್ಫಟಿಕರೂಪಿ ಶಿವಲಿಂಗ ಲಿಪ್ಸ್ಟಿಕ್ ಹಾಕಿದಂತೆ ಕೆಂಪು. ಉಳಿದರ್ಧ ಕಂದು! ವರ್ನಾನಾತೀತ. ನೇಪಾಳದಿಂದ ತರಿಸಲಾದ ಶಿವಲಿಂಗ ಎಂಬುದು ಅರ್ಚಕರ ಅಂಬೋಣ. ದಕ್ಷಿಣ ಭಾರತದಲ್ಲೆಲ್ಲೂ ಇಂತಹ ಅಪೂರ್ವ ಲಿಂಗವಿಲ್ಲವೆನ್ನುತ್ತಾರೆ! ಮತ್ತೆ ಮತ್ತೆ ನೋಡುವಷ್ಟು ಚೆಲವು. ಶಿವಲಿಂಗ ಜೊತೆಗಿರುವ ಪ್ರಸನ್ನ ನಾರಾಯಣ ದೇವಾಲಯವೋ ಮಹದ್ಭುತಗಳಲ್ಲೊಂದು. ನಾರಾಯಣನ ಮೂರುತಿ ಪೀಠ ಸೇರಿದಂತೆ ಸುಮಾರು 7 ಅಡಿ. ಶಿವಲಿಂಗದೊಂದಿಗೆ ಪೈಪೋಟಿಗಿಳಿದಂತಿರುವ ಪ್ರಸನ್ನ ನಾರಾಯಣನ ಮೂರುತಿ. ನವರಂಗದ ಹೊರ ಭಿತ್ತಿಯಲ್ಲಿ ಅನೇಕ ಕತೆಗಳನ್ನು, ಮಿಥುನ ಶಿಲ್ಪಗಳನ್ನು ಕೆತ್ತಲಾಗಿದೆ! ಕೆತ್ತನೆಯ ನಾಜೂಕು ನಿಮ್ಮನ್ನು ಸೂರೆಗೊಳಿಸುತ್ತದೆ.
ಕೋಟೆ ಇದ್ದಿರಬಹುದೇ?
ದೇವಾಲಯದ ಸನಿಹದಲ್ಲೇ 12 ಅಡಿಗಳೆಷ್ಟು ಎತ್ತರದ ಮಣ್ಣಿನ ಗೋಡೆಗಳಿವೆ. ಯಾವುದೋ ಸಾಮಂತ ರಾಜ ಆಳ್ವಿಕೆ ಮಾಡಿರುವ ಸಾಧ್ಯತೆಗಳಿವೆ. ಕೆದಕಿದರೆ ಇತಿಹಾಸದ ಕುರುಹುಗಳು ಕಾಣ ಸಿಕ್ಕಾವು. ದೇವಾಲಯದ ಸನಿಹದ ಕಾಡು ಅಮೂಲ್ಯ ವನ ಸಂಪತ್ತಿನ ಆಗರ. 600 ವರುಷ ಹಳೆಯ ಮಾವಿನ ಮರವೊಂದು ನಾವು ಆರು ಜನ ಮುತ್ತಿಗೆ ಹಾಕಿದರೂ ಕೈ ಸಾಲದಾಯಿತು!! 500 ವರುಷ ಹಳೆಯ ಬಳ್ಳಿಗಳು, ವಿಶಿಷ್ಟ್ಯ ಪೊದೆಗಳು ಅನೇಕ ದಿನಗಳ ವರೆಗೆ ನಿಮ್ಮ ಮನಸ್ಸನ್ನು ಆವರಿಸದೇ ಬಿಡದು. 600 ಎಕೆರೆಯಲಿ ಹರಡಿದ ಹೊಸಗುಂದದ ದೇವಾಲಯ ನಿಶ್ಚಯವಾಗಿ ನಿಮಗೆ ಹೊಸ ಸ್ಟೋರಿ ನೀಡುವಲ್ಲಿ ಖಂಡಿತ ಸೋಲದು. ಇಲ್ಲಿನ ವನ ಸಂಪತ್ತನ್ನು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಸರ್ವೆ ನಡೆಸಿ 540ಕ್ಕೂ ಹೆಚ್ಚು ಅಳಿವಿನಂಚಿನ ಗಿಡಗಳಿವೆಯೆಂದು ಗುರುತಿಸಿದ್ದಾರೆ! ಅಬ್ಬಾ ಎಂದಿತು ಮನ.
ವಿಶಿಷ್ಟ್ಯ ವಿನ್ಯಾಸದ ಕಾಳಿ ದೇವಾಲಯವನ್ನು ನೋಡದೆ ಬಂದರೆ ಖಂಡಿತ ಏನೋ ಒಂದು ಕಳೆದುಕೊಂಡಂತೆ. ಕೇರಳೀಯ ಶೈಲಿಯಲ್ಲಿ ಕೆಂಪು ಕಲ್ಲಿನಲ್ಲಿ ಕಡೆದು ಕೆತ್ತಿದ್ದಾರೆ. ಅಂದವಾಗಿ ಅದಕ್ಕೆ ಮಂಗಳೂರು ಹೆಂಚು ಹೊದಿಸಲಾಗಿದೆ. ಸುತ್ತಲೂ ಸುಂದರ ಪೌಳಿಯನ್ನು ನಿರ್ಮಿಸಿದ್ದಾರೆ.
ಇತಿಹಾಸ
ಇತಿಹಾಸವನು ಕೆದಕಿದರೆ ಕ್ರಿ ಶ 9 ನೆಯ ಶತಮಾನಕ್ಕೆ ನಮ್ಮನ್ನು ಒಯ್ಯುತ್ತದೆ. ಕೆಲವೇ ವರ್ಷಗಳ ಕೆಳಗೆ ಮಣ್ಣಿನಡಿಯಲ್ಲಿ ಮಲಗಿದ್ದ ದೇವಾಲಯವು ಊರಿನವರ (ನಾರಾಯಣ ಶಾಸ್ತ್ರಿ ದಂಪತಿಗಳು) ಮತ್ತು ಉಮಾ ಮಹೇಶ್ವರ ಸೇವಾ ಟ್ರಸ್ಟ್ನ ಕಾಳಜಿಯಿಂದ ಜೀರ್ಣೋದ್ದಾರಗೊಂಡಿದೆ. ಎಲ್ಲಾ ದೇವಾಲಯಗಳನ್ನು ಮೊದಲಿದಂತೆ ನಿರ್ಮಿಸಲಾಗಿದೆ.
ಎ. ಸುಂದರಂ, ಜಿ.ವಿ ಕಲ್ಲಾಪುರ, ಸಾಮಕ್ ಅವರ ಸಂಶೋಧನೆಯ ಪರಿಶ್ರಮ ಎದ್ದು ಕಾಣುತ್ತದೆ. ಇಲ್ಲಿನ ಶಾಸನಗಳನ್ನು ಓದಿ ಇದರ ಐತಿಹ್ಯದ ಗಂಟನ್ನು ಬಿಡಿಸಿದ್ದಾರೆ. ಉತ್ಖನನ ಗೊಂಡಾಗ ಶಿಲಾಯುಗದ ಆಯುಧಗಳೂ, ಗಂಗರ ಕಾಲದ ನಾಣ್ಯಗಳೂ ಸಿಕ್ಕಿವೆ ಎಂದು ಹೇಳಲಾಗುತ್ತದೆ.
ನಿರ್ಮಾಣ:-
ಪ್ರಸನ್ನ ನಾರಾಯಣಿ ದೇವಾಲಯವನ್ನು ಬಲದೇವನೆಂಬುವವನು 1242ರಲ್ಲಿ ನಿರ್ಮಿಸಿದನೆಂದು ಐತಿಹ್ಯ ಹೇಳುತ್ತದೆ. ಕ್ರಿ. ಶ 1320ರಲ್ಲಿ ಹೊಯ್ಸಳರ ವೀರ ಬಲ್ಲಾಳ ದೇವರಸನು ಕಂಚಿ ಕಾಳಮ್ಮದೇವಾಲಯಕ್ಕೆ ಭೂ ದಾನ ನೀಡಿದ ಶಾಸನ ಪತ್ತೆಯಾಗಿದೆ. ಗಣಪತಿ, ವೀರ ಭದ್ರ, ಮಹಿಷ ಮರ್ಧಿನಿ, ಸುಬ್ರಹ್ಮಣ್ಯ ದೇವಾಲಯ ನಿರ್ಮಿಸಿದನೆಂದು ಅಳಿಯದೇ ಉಳಿದ ಶಾಸನಗಳು ಸಾರುತ್ತವೆ.
ಇಲ್ಲಿನ ದೇವಾಲಯಗಳು ದ್ರಾವಿಡ, ಹೊಯ್ಸಳ, ಪಲ್ಲವ , ಕೇರಳೀಯ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಅತ್ಯದ್ಬುತವಾದ ದೇವಾಲಯ ಸಮುಚ್ಚಯದ ಜೊತೆಗೆ 600 ಎಕರೆ ದೇವರ ಕಾಡು ಪರಿಸರಾಸಕ್ತರಿಗೆ, ಇತಿಹಾಸ ಪ್ರಿಯರಿಗೆ ಸುಗ್ರಾಸ ಭೋಜನವನುಣ ಬಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಶ್ರೀಧರ್. ಎಸ್. ಸಿದ್ದಾಪುರ
Tuesday, May 18, 2021
ಓದಲಾರೆ ಓದದೆಯೂ ಇರಲಾರೆ!!
ತೀವ್ರತೆ, ತುಮುಲ, ಕಲ್ಪನೆಗಳಿದ್ದರೆ ಮಾತ್ರ ಕವಿತೆ ಹುಟ್ಟಬಹುದೇನೊ? ಕತೆ ಕಟ್ಟಬಹುದೇನೋ? ತೀವ್ರ ತಿರಸ್ಕಾರ, ವಿಷಾದ ಜೊತೆಯಾದಾಗ ಹುಟ್ಟುವ ಭಾವಕ್ಕೆ ಕತೆಯ ಚೌಕಟ್ಟು ತೊಡಿಸಬಹುದೇನೋ?
ಸಣ್ಣಗೆ ಜಿನುಗುವ ಲಾಟಾನು ಬೆಳಕಿನಲಿ ಕವಿ ಅನುಭವಿಸಿದ ಅತೀವ ಭಾವನೆಗಳನ್ನು ಕೊನೆ ಮೊದಲಿಲ್ಲದ ವಿಷಾದದಲ್ಲಿ ಅದ್ದಿ ತೆಗೆದಂತಹ ಬರೆಹ.
ಅಪ್ಪ, ಲೀಲಾವತಿ ಮತ್ತು 'ನಾನು' ಎಂಬ ಮೂರು ಭಿನ್ನ ಟಿಸಿಲುಗಳಲ್ಲಿ ಹಬ್ಬಿ ಹರಡಿದ ಕಥನ ಕವನ! ಹೃದಯದ ರಕ್ತ ಬಸಿದು ಬಿಡುವಂತಹ ನಿಗಿ ನಿಗಿ ಸುಡು ಸಾಲುಗಳ ನಡುವೆ ಹರಡಿದ ಕತೆ. ಭಿನ್ನ ರೂಪಕಗಳಲ್ಲಿ ಕಸಿ ಕಟ್ಟಲಾದ ಕತೆ. ಈ ಪದಗಳು ಹುಟ್ಟು ಹಾಕುವ ಭಾವ ತೀವ್ರತೆ ನನ್ನಲ್ಲಿ ಮಾತ್ರವಾ ಎಂದು ಆಲೋಚಿಸುತ್ತೇನೆ. ಇಲ್ಲ. ಮುಂಬರಹ, ಹಿಂಬರದ ನುಡಿಗಳಲ್ಲೂ ಅವೇ ಮಾತು. ಕೆಲವೊಮ್ಮೆ ಆಲೋಚಿಸುತ್ತೇನೆ ಓದು, ಬರೆಹ ಎಲ್ಲವೂ ನಿರರ್ಥಕವೆಂದು. ಎಲ್ಲವೂ ಅಯೋಮಯ.
ಕಾದಂಬರಿಯ ಕೆಲವು ಸಾಲುಗಳು...
1. ನಿರಾಕರಣವೇ ಬಾಳಿನ ಬೆಳಕು.
ಒಮ್ಮೆಯಾದರೂ ಯಾರಿಂದಲಾದರೂ ತಿರಸ್ಕೃತಗೊಳದೇ ಹೋದರೆ ಕವಿತೆ ಜಾಳಾಗುತ್ತದೆ. ತಿರಸ್ಕೃತಗೊಂಡ ಜೀವಕ್ಕೂ ಕವಿತೆಗೂ ಜಗತ್ತನ್ನೇ ಗೆಲ್ಲುವ ಧೈರ್ಯ ಬರುತ್ತದೆ.
2. ನಿರೂಪಕ ಹೇಳುತ್ತಾನೆ...
ಪದ್ಯ ಬರೆಯಬಾರದು.
ಬರೆದರೆ ಅದು ಮತ್ತೊಬ್ಬರ ವಶವಾಗುತ್ತದೆ. ನಾವು ಪಳಗಿಸದೇ ಹೋದರೂ ಅವರು ಅದನ್ನು ಪಳಗಿಸುತ್ತಾರೆ. ಕವಿತೆಯನ್ನು ಪಳಗಿಸಿದರೆ ಕವಿಯನ್ನು ಪಳಗಿಸಿದಂತೆ ಅಂದುಕೊಳ್ಳುತ್ತಾರೆ. ನೀವು ನನ್ನನ್ನು ಪಳಗಿಸಲಾರಿರಿ. ನನ್ನ ಕವಿತೆಯನ್ನು ಕೂಡ ಎಂದು ಸಿಟ್ಟಿನಿಂದ ಹೇಳಬೇಕು ಅಂದುಕೊಳ್ಳುತ್ತೇನೆ, ಸಿಟ್ಟು ಕೂಡ ಪದ್ಯದ ಹಾಗೆಯೇ. ಮತ್ತೊಬ್ಬರ ವಶವಾದರೆ ಅದನ್ನೂ ಅವರು ಪಳಗಿಸಬಲ್ಲರು.
3. ....
ನಾನು ಕವಿತೆಗಳನ್ನು ಅನುವಾದಿಸಲಿಕ್ಕೇ ಹೋಗಲಿಲ್ಲ. ಅನುವಾದವೆಂದರೆ ಮಕ್ಕಳ ಪೋಟೋ ತೆಗೆದಂತೆ. ಮಕ್ಕಳಂತೆಯೇ ಕಾಣಿಸುತ್ತದೆ. ಜೀವ ಇರುವುದಿಲ್ಲ.
ಜೀವ ಇಲ್ಲದ ಪದ್ಯ ಬರೆಯುವುದಕ್ಕೆ ಹೋಗಬಾರದು.
ಅಂಥ ಪದ್ಯ ಬರೆದರೆ ಒಂದೋ ಕವಿ ಸತ್ತಿರುತ್ತಾನೆ. ಅಥವಾ ಪದ್ಯ.
ಎರಡೂ ಸತ್ತಿರುವುದನ್ನೂ ನೋಡಿದ್ದೇನೆ. ಸತ್ತ ಕವಿ ಸತ್ತು ಹೋದ ಪದ್ಯಗಳನ್ನು ಹೆರುತ್ತಾನೆ. ಅವುಗಳನ್ನು ತೋರಿಸಿ ನನ್ನ ಪದ್ಯಗಳಿವು ಅಂತ ಹೇಳುತ್ತಾನೆ.
4. ..
ಕವಿತೆ ಬರೆಯುವುದು ಅಂದರೆ ಕಳೆದುಕೊಳ್ಳುವುದು. ಬೇರೆ ಯಾರಿಗೋ ಕೊಟ್ಟು ಬಿಡುವುದು. ಸೆರೆಮನೆಯಲ್ಲಿ ಹೆತ್ತ ಮಗುವನ್ನು ನಂದನದಲ್ಲಿ ಬಿಟ್ಟು ಬರುವುದು. ಮತ್ತೆ ಸೆರೆಯಾಗಿ ಏಕಾಂಗಿಯಾಗಿ ಬದುಕುವುದು. ಹಾಗಾಗಿ ಪದ್ಯ ಬರೆಯಲೇ ಬಾರದು. ಹಾಗಾದರೂ ಅದು ನನ್ನ ಜೊತೆಗಿರುತ್ತದೆ.
5.
ಈ ಕಾದಂಬರಿಯನ್ನು ಮತ್ತೊಮ್ಮೆ ಓದಬೇಕು, ಓದಿಯೂ ಎಲ್ಲೋ ಬಿಟ್ಟುಹೋದ ಒಳ್ಳೆಯ ಇಮೇಜುಗಳು, ಒಳ್ಳೆಯ ಸಾಲುಗಳು ಸಾವಿರಾರು ಇವೆ, ಅವುಗಳನ್ನು ಹಿಡಿಯಬೇಕು. ಈ ಕಾದಂಬರಿ ಒಂದು ಥರ ಅಷ್ಟು ಸುಲಭಕ್ಕೆ ಅರ್ಥಕ್ಕೆ ಸಿಗದ ಒಂದು ಮೊಂಡು ಕವಿತೆಯೇ. ನಾವೂ ಆಗಾಗ ಮೊಂಡು ಹಿಡಿದು, ಒಲಿಸಿಕೊಂಡು, ಹಿಂದೆ ಹೋಗಿ, ಕಾಡಿ, ಕಂಗೆಟ್ಟು, ವಿರಹ ಪಟ್ಟು ಅರ್ಥದೆಡೆಗೆ ಬರಸೆಳೆದುಕೊಳ್ಳಬೇಕು. ಅಥವಾ ಅದರ ಗುಂಗಲ್ಲೇ ಇದ್ದು ಬಿಡಬೇಕು. ಥೇಟು ಲಕ್ಷ್ಮಣ ನೀಲಂಗಿ ಅರ್ಥಾತ್ ಎಲ್, ತನ್ನ ಲೀಲಾಳ ಗುಂಗಲ್ಲೇ ಇದ್ದು ಬಿಡುವಂತೆ.
- ಹಿಂಬರಹದಿಂದ ವಿಕಾಸ್.
***
ಕೆಂಡದಂತೆ ಹಿಡಿದಿಡಲಾಗದ ಕವಿತೆ ಇದ್ದರೆಷ್ಟು ಬಿಟ್ಟರೆಷ್ಟು. ಎನ್ನುವ ತೀವ್ರ ಸಾಲುಗಳನ್ನು ನೆನಪಿಸುತ್ತಾ ಕವಿಯ ಅಸಾಹಕತೆ ಜೊತೆಗೆ ಕವಿತೆಯ ನಿರರ್ಥಕತೆ ಕಾಡುತ್ತಾ ಇರುವಾಗ... ಹೀರಿಬಿಟ್ಟ ಕಾಫಿ ಲೋಟದ ಘಮಲು ಹಾಗೆಯೇ ಉಳಿದಿದೆ. ಈ 'ಎಲ್' ನಂತೆ.
Monday, May 3, 2021
ಪ್ರಿಯಕರನಿಗೆ ಉಚಿತ ಸವಾರಿ!!
ನನ್ನ ಹೆಡ್ಡಿಂಗ್ ಬೇರೇಯದೇ ಇತ್ತು. 'ಹೆಂಡತಿ ಮೇಲೆ ಗಂಡನ ಸವಾರಿ' ಎಂದು ಹಾಕ ಬೇಕೆಂದಿದ್ದೆ. ಮಹಿಳಾವಾದಿಗಳು, ಮಹಿಳಾ ಸಂಘಟನೆಗಳು ಚಕಾರ ಎತ್ತಬಹುದೆಂದು ಬದಲಾಯಿಸಿದೆ! ಅನೇಕ ಮಹಿಳಾ ಮಣಿಗಳು ತಪ್ಪು ತಿಳಿಯಬಹುದೆಂದು ಬದಲಾಯಿಸಿದೆ. ಮಹಿಳೆಯರ ಮೇಲೆ ಯಾವಾಗಲೂ ಪುರುಷರದ್ದೇ ಸವಾರಿ ಎಂದು ಯಾವಾಗಲೂ ಇವಳು ಹೇಳುತ್ತಿರುತ್ತಾಳೆ. ನಮ್ಮ ಶಿಕ್ಷಕಿ ವೃಂದದವರದ್ದೂ ಇದೇ ಅಭಿಪ್ರಾಯ.
ಸವಾರಿ ಹೊರಟ ಕ್ರ್ಯಾಬ್ ಸುಂದ್ರಿ. |
ನಾನಿವತ್ತು ಹೇಳ ಹೊರಟಿರುವುದು ಜೇಡಗಳ ಒಂದು ಅನನ್ಯ ಅಭ್ಯಾಸದ ಕುರಿತು. ನನ್ನ ಅನೇಕ ಜೇಡ ಮಿತ್ರರು ಈ ಚಿತ್ರವನ್ನು ಹಾಕಿ ನನ್ನ ಹೊಟ್ಟೆಯುರಿ ಹೆಚ್ಚಿಸಿದ್ದರು. ನನಗೆ ಈ ವಿಚಿತ್ರ ನೋಡಲು ಸಾಧ್ಯವಾಗಲಿಲ್ಲ. ಪ್ರಕೃತಿ ನನ್ನ ಮಟ್ಟಿಗಂತೂ ಕರುಣಿ. ತನ್ನೊಡಲಲ್ಲಿ ಅಡಗಿರುವ ಅನೇಕ ವಿಚಿತ್ರವನ್ನು ಸ್ವಲ್ಪ ಸ್ವಲ್ಪವೇ ತೆರೆದು ತೋರಿಸುತ್ತಿದೆ. ಕಳೆದ ಅಕ್ಟೋಬರ್ಲ್ಲಿ ಅನೇಕ ವಿಚಿತ್ರಗಳನ್ನು ಕಂಡಿರುವೆ. ಬಸವನ ಹುಳವನ್ನು ತಿನ್ನುತ್ತಿರುವ ಮಿಂಚುಹುಳದ ಲಾರ್ವ, ಹೀಗೆ ಹತ್ತು ಹಲವು ಅನನ್ಯತೆಯನ್ನು ತೆರೆದು ತೋರಿದೆ. ಈ ಬೇಸಿಗೆಯಲ್ಲಿ ಅದು ಮತ್ತೊಂದು ಅನನ್ಯತೆಯನು ಅದು ತೆರೆದು ತೋರಿದೆ.
ಕ್ರ್ಯಾಬ್ ಸುಂದ್ರಿಯ ಬೆನ್ನ ಮೇಲೆ ಸುಂದ್ರ. |
Saturday, May 1, 2021
ಯಾಮಿನಿ ಬಂದಿದ್ದಳು!!
12 ವರ್ಷಗಳ ತನ್ನ ಕತೆಯನ್ನು ಬಿಚ್ಚಿಟ್ಟಳು. ಕರೋನ ಬರುತ್ತದೆಂದು ಹೆಂಡತಿ ಹೆದರಿಸಿದರೂ ಕೇಳದೆ ನಾವಿಬ್ಬರೂ ಒಂದೆರಡು ದಿನ ಹಾಯಾಗಿ ಬೆಂಗಳೂರಿಗೆ, ಶಿವಮೊಗ್ಗಕ್ಕೆ, ಯಲ್ಲಾಪುರ, ಸುಬ್ರಮಣ್ಯ ಸುತ್ತಿ ಸುಳ್ಯದ ಅವಳ ಕಾಡುಮನೆಯಲ್ಲಿ ಒಂದೆರಡು ದಿನವಿದ್ದು ಬಂದೆವು. ಪ್ರಯಾಣದ ನಡುವೆ ಶೃದ್ಧಾ ಶರ್ಮಾ ಸೇರಿಕೊಂಡಳು.
ನಮ್ಮೆಲ್ಲರ ಕಣ್ಮಣಿಯಾದವಳು ಒಲಿದದ್ದು ಮಾತ್ರ ಚಿರಾಯುವಿಗೆ. ನಾವು ಒಲಿಸಿಕೊಳ್ಳಲು ಪ್ರಯತ್ನಿಸಿಲ್ಲವೆಂಬುದು ಶುದ್ಧ ಸುಳ್ಳು! ಒಲಿದಿಲ್ಲವಷ್ಟೇ. ಹಾಗಂತ ಚಿರಾಯುವಿನ ಹೆಂಡತಿ ಅಂದುಕೊಂಡರೆ ನಿಮ್ಮ ಊಹೆ ತಪ್ಪು! ಒಲಿದಿದ್ದು ಗಿರೀಶ್ ಗೆ ಇರುವುದು ಚಿರಾಯುವಿನ ಜೊತೆ!!
ಅವಳು ಬಂದ ದಿನ ರಾತ್ರಿ ಪೂರಾ ಜಾಗರಣೆ. ಓರೆ ಕೋರೆ ಗೆರೆಗಳಂತೆ ಚದುರಿದ ರೇಖೆಗಳಂತೆ ತನ್ನ ಕತೆ ಹೇಳುತ್ತಾ ಕೂತಿದ್ದಳು. ತಾನೇ ಕನ್ನಡಿ ಮುಂದೆ ನಿಂತು ಕತೆ ಹೇಳಿ ಕೊಳ್ಳತೊಡಗಿದಳು. ತನ್ನ ತುಮುಲಗಳನ್ನು, ಒಳತೋಟಿಗಳನ್ನು ಹೇಳುತ್ತಾ ಬೆತ್ತಲಾಗತೊಡಗಿದಳು.
ಕಮಲಶಿಲೆಯಲ್ಲಿ, ಶಿವಮೊಗ್ಗೆಯಲ್ಲಿ ಚಿರಾಯು ಕಳೆದ ದಿನಗಳು, ಅವನೊಂದಿಗಾದ ಮಾತು ಕತೆಯ ವಿವರಗಳು. ಆತನ ಕತೆಗಳು. ಚಿರಾಯುವಿನ ತಂದೆಯ ತಿರಸ್ಕಾರ, ಸಿಕ್ಕ ಪುರಸ್ಕಾರ. ಯಾವುದು ಶಾಶ್ವತ? ಯಾವುದು ನಶ್ವರ? ಎಂಬ ತೊಳಲಾಟಗಳು. ಅವನ ಹೋರಾಟದ ದಿನಗಳು ಎಲ್ಲವೂ ಮಾತಿನ ನಡುವೆ ಜಾಗ ಮಾಡಿಕೊಂಡವು. ಬದುಕಿನ ನಾಜೂಕಿನ ಸಂದರ್ಭದಲ್ಲಿ ಚಿರಾಯುವಿನಿಂದ ದೂರಾಗಲು ಇಂಗ್ಲೆಂಡ್ಗೆ ಹೊರಟು ನಿಂತ ಕ್ಷಣಗಳು. ವರುಷಗಳ ಬಳಿಕ ಮತ್ತೆ ಚಿರಾಯುವನ್ನೇ ಸೇರಿಕೊಂಡ ಕತೆ. ಆತನನ್ನು ಪ್ರೇರೇಪಿಸಿ ಬರೆಯಿಸಿದ ಕತೆಗೆ ಬಹುಮಾನ ಬಂದಿದ್ದು. ಜೀವನದಲ್ಲಿ ನಡೆದ ಕತೆಗಳನ್ನು ಹೆಕ್ಕಿ ಹೇಳಿದ್ದಳು. ಯಾವುದೂ ಇಲ್ಲಿ ನೇರವಿಲ್ಲ. ಆದರೂ ವಕ್ರವಲ್ಲ. ಅವಳು ಅವನ ಬದುಕಿನ ವಿವರಗಳ ಗುಚ್ಚಗಳು ಅಚ್ಚರಿ ಹುಟ್ಟಿಸುವಂತಹುದು. ಹೀಗೆ ಆಕೆ ಹೇಳಿದ ಸಣ್ಣ ಸಣ್ಣ ವಿವರಗಳು ಎರಡು ದಿನದಿಂದ ನನ್ನ ಎದೆಯಲ್ಲಿ ಗುಂಯ್ ಗುಡುತ್ತಿದೆ. ಹೀಗೂ ಜೀವನವಿರಬಹುದೇ ಎಂಬ ತುಮುಲದಲ್ಲಿರುವೆ. ಕತೆಗಳಿಗಿಂತಲೂ ಕೆಲವರ ಬದುಕುಗಳು ವಿಚಿತ್ರ. ಎರಡು ತಿಂಗಳಿಗಾಗುವಷ್ಟು ಕತೆ ಹೇಳಿ ಹೋಗಿದ್ದಾಳೆ. ಒಂದೊಂದೇ ನವಿಲುಗರಿಯಂತಹ ಕತೆಗಳನ್ನು ಎದೆಯ ಗೂಡಲ್ಲಿ ಬಚ್ಚಿಡಲು ಪ್ರಯತ್ನಿಸುತ್ತಿರುವೆ ಆಗುತ್ತಿಲ್ಲ. ಕತೆಗಾರ್ತಿ ಯಾಮಿನಿಯ ಚಮಕ ಪ್ರತಿ ವಾಕ್ಯದಲ್ಲೂ ಅನುರಣಿಸುತಿದೆ. ನನ್ನ ಎದೆಯ ಗೂಡಲ್ಲಿ ಅರಳಲು ತವಕಿಸುತ್ತಿದೆ. ಕಣ್ಣು ಮಾತಿಗಿಳಿದಾಗ ಬಾಯಿ ಬಲು ಮೌನ! ಅವಕಾಶ.
ಇಂದು ಆಕೆ ಹೊರಟು ನಿಂತಾಗ ಎದೆ ಭಾರ. ಮತ್ತೆ ಕೇಳಿದೆ ಭೇಟಿ ಯಾವಾಗ?
Sunday, April 11, 2021
ಎಲೆಲೆ ಕೀಟ!!
Friday, March 19, 2021
ಕಥನದ ಜಾಡು ಹಿಡಿದು..
ಬಂಡೆ ತಬ್ಬಿದ ಮರ....ಚಾರಣದ ನಡುವೆ. |
ಕಾಡಿನ ಕಥನ ಕಾಡುವ ಕಥನದ ಜಾಡು ಹಿಡಿದು... |
ಗೋಪಯ್ಯ ಹೆಗಡೆ ಮನೆಯಲ್ಲಿ.... |
ವಾಸುದೇವ ಹೆಗಡೆ ಮನೆ ಎದುರು |
ಗೋಪಯ್ಯ ಹೆಗಡೆ ಮನೆ.... |
ಬಾಯಾರಿಕೆ ನೀಗಿಸುವ ನುರುಕಲು. |
ಶೋಭಾ, ಗಜಪತಿ ಹೆಗಡೆ ಹಲಸಿನ ಸೊಳೆ ಚೆರಿಗೆಯೊಂದಿಗೆ. |
ಶಿವಾನಂದ ರ ಮೂಲಿಕೆ ಪರಿಚಯ ... |
ದಾರಿಯಲ್ಲಿ ಸಿಕ್ಕ ಮೀಸೆ ಮಾವ. |
ವಾರೆ ನೋಟ
ಸಂತಾನ ದೇಗುಲದಲ್ಲಿ …
ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...