Saturday, June 5, 2021

ಇತಿಹಾಸ ಹೊಸೆದ ಹೂ ಬಳ್ಳಿ ಹೊಸಗುಂದ...






ಹೂ ಅರಳುವ ಹೊತ್ತು. ಮಲಗಲು ಹೋದ ರವಿ ಇನ್ನೂ ಎದ್ದಿರಲಿಲ್ಲ. ಒಮ್ನಿಯ ಲಾಟಾನು ಬೆಳಕನು ಮುಂದ್ಹಾಯಿಸಿ ಮಂಜಿನ ಪರದೆ ಸೀಳಿ ನಮ್ಮ ವಾಹನ ಸಾಗರ ತಾಲೂಕಿನ ಆನಂದಪುರದ ಸನಿಹದ ಹೊಸಗುಂದದತ್ತ ಧಾವಿಸುತಲಿತ್ತು. ಗೂಗಲ್ ಗುರುವಿಗೆ ಸಹಾಯಕ್ಕಾಗಿ ಪದೇ ಪದೇ ಯಾಚಿಸಿದರೂ ನಿಮ್ಮ ಮೊಬೈಲ್ ನೆಟ್ವಕರ್್ ಕ್ಷೇತ್ರದಲ್ಲಿಲ್ಲವೆಂದು ಸಂದೇಶ ತೋರಿಸುತ್ತಾ ಮುಷ್ಕರ ಹೂಡಿತ್ತು. ಆನಂದಪುರದಲಿ ಎಡಕ್ಕೆ ಹಾಯ್ದು, ಆಕಾಶಕ್ಕೆ ಚಪ್ಪರ ಹಾಸಿದ ಮರಗಳ ನಡುವೆ ಹುದುಗಿದ ಹೊಸಗುಂದವೆಂಬ ಹೊಸಲೋಕವನ್ನು ಹಳೇ ಒಮ್ನಿ ಕಾರಿನಲ್ಲೇ ತಲುಪಿಕೊಂಡೆವು.


ಹೊಸನಗರದಿಂದ ಉತ್ತರಾಭಿಮುಖವಾಗಿ ಹೊರಟು ಆನಂದಪುರದಲ್ಲಿ ಎಡಕ್ಕೆ ಹೊರಳಿದರೆ ಹೊಸಗುಂದದ ದೇವಾಲಯಗಳ ಹೆಬ್ಬಾಗಿಲಿಗೆ ಬಂದು ಬೀಳುತ್ತೀರಿ. ಇಲ್ಲಿಂದ ಕೇವಲ 12 ಕಿಲೋ ಮೀಟರ್. ಸುತ್ತಲೂ ಆವರಿಸಿದ ಭತ್ತದ ಬಯಲು. ಊರಿಗೆ ಹೊಸಗುಂದ ಹೆಸರು ಹೇಗೆ ಬಂತೆದು ಇಲ್ಲಿನವರಿಗಿನ್ನೂ ಗೊತ್ತಿಲ್ಲ. ಮನ ಸೆಳೆವ ಆಕರ್ಷಕ ಶೈಲಿಯ 12ನೆಯ ಶತಮಾನದ ದೇಗುಲ.

ಸುತ್ತೋಣ ಬನ್ನಿ...

ಪನ್ನೀರ ಪುಷ್ಕರಣಿಯಲಿ ಕಾಲು ತೋಯಿಸಿ ಮೆಟ್ಟಿಲೇರಿದಾಗ ಕಾಣಿಸಿದ್ದು ರಾಶಿ ರಾಶಿ ವೀರಗಲ್ಲು. ಕಾಲನ ಹೊಡೆತಕ್ಕೆ ಕೆಲವು ಕಂಗಾಲಾಗಿ ಮಲಗಿದ್ದರೆ ಕೆಲವೇ ಕೆಲವು ನಿಂತಿದ್ದವು. ತಮ್ಮ ಮೇಲಿನ ಅಕ್ಷರಗಳನ್ನೆಲ್ಲಾ ನುಂಗಿಕೊಂಡಿದ್ದವು ಕೆಲವು! ವೀರಗಲ್ಲಿನ ಮೇಲೂ ಕಲಾ ನೈಪುಣ್ಯ. ಚಿತ್ರ ವಿಚಿತ್ರ ಚಿತ್ರಗಳ ವಿಶಿಷ್ಟ್ಯ ವೀರಗಲ್ಲುಗಳ ಸಮೂಹವೇ ಇಲ್ಲಿದೆ. ಇಲ್ಲಿ ನಡೆದಿರಬಹುದಾದ ಯುದ್ಧಗಳ ಸಣ್ಣ ಚಳಕನ್ನು ಈ ವೀರಗಲ್ಲುಗಳು ನಮಗೆ ತೋರಿಸುತ್ತವೆ. ನಮ್ಮವರ ಇತಿಹಾಸದ ದರ್ಪಣಗಳಿವು ಎಂಬುದನ್ನೂ ಅರಿಯದೇ ಸಾಯಲು ಬಿಟ್ಟಂತಿದೆ. ಕಲ್ಲಿಗೆ ಭಾಷೆ ಬಂದಿದ್ದರೆ ಹರಟ ಬಹುದಿತ್ತು, ಇತಿಹಾಸ ಕೆದಕಬಹುದಿತ್ತು!




ಮುಂದೆ ಸಿಗುವುದೇ ದೇವಾಲಯ ಸಮುಚ್ಚಯ. ಹಾಸುಗಲ್ಲಿನ 18 ಕಂಬಗಳ ಮೇಲೆ ಅರಳಿ ನಿಂತ ನವರಂಗದ ಶೋಭೆ. ಕಲಾತ್ಮಕತೆಯಂತೂ ಅತ್ಯದ್ಭುತ. ಸ್ಫಟಿಕರೂಪಿ ಶಿವಲಿಂಗ ಲಿಪ್ಸ್ಟಿಕ್ ಹಾಕಿದಂತೆ ಕೆಂಪು. ಉಳಿದರ್ಧ ಕಂದು! ವರ್ನಾನಾತೀತ. ನೇಪಾಳದಿಂದ ತರಿಸಲಾದ ಶಿವಲಿಂಗ ಎಂಬುದು ಅರ್ಚಕರ ಅಂಬೋಣ. ದಕ್ಷಿಣ ಭಾರತದಲ್ಲೆಲ್ಲೂ ಇಂತಹ ಅಪೂರ್ವ ಲಿಂಗವಿಲ್ಲವೆನ್ನುತ್ತಾರೆ! ಮತ್ತೆ ಮತ್ತೆ ನೋಡುವಷ್ಟು ಚೆಲವು. ಶಿವಲಿಂಗ ಜೊತೆಗಿರುವ ಪ್ರಸನ್ನ ನಾರಾಯಣ ದೇವಾಲಯವೋ ಮಹದ್ಭುತಗಳಲ್ಲೊಂದು. ನಾರಾಯಣನ ಮೂರುತಿ ಪೀಠ ಸೇರಿದಂತೆ ಸುಮಾರು 7 ಅಡಿ. ಶಿವಲಿಂಗದೊಂದಿಗೆ ಪೈಪೋಟಿಗಿಳಿದಂತಿರುವ ಪ್ರಸನ್ನ ನಾರಾಯಣನ ಮೂರುತಿ. ನವರಂಗದ ಹೊರ ಭಿತ್ತಿಯಲ್ಲಿ ಅನೇಕ ಕತೆಗಳನ್ನು, ಮಿಥುನ ಶಿಲ್ಪಗಳನ್ನು ಕೆತ್ತಲಾಗಿದೆ! ಕೆತ್ತನೆಯ ನಾಜೂಕು ನಿಮ್ಮನ್ನು ಸೂರೆಗೊಳಿಸುತ್ತದೆ.





ಕೋಟೆ ಇದ್ದಿರಬಹುದೇ?

ದೇವಾಲಯದ ಸನಿಹದಲ್ಲೇ 12 ಅಡಿಗಳೆಷ್ಟು ಎತ್ತರದ ಮಣ್ಣಿನ ಗೋಡೆಗಳಿವೆ. ಯಾವುದೋ ಸಾಮಂತ ರಾಜ ಆಳ್ವಿಕೆ ಮಾಡಿರುವ ಸಾಧ್ಯತೆಗಳಿವೆ. ಕೆದಕಿದರೆ ಇತಿಹಾಸದ ಕುರುಹುಗಳು ಕಾಣ ಸಿಕ್ಕಾವು. ದೇವಾಲಯದ ಸನಿಹದ ಕಾಡು ಅಮೂಲ್ಯ ವನ ಸಂಪತ್ತಿನ ಆಗರ. 600 ವರುಷ ಹಳೆಯ ಮಾವಿನ ಮರವೊಂದು ನಾವು ಆರು ಜನ ಮುತ್ತಿಗೆ ಹಾಕಿದರೂ ಕೈ ಸಾಲದಾಯಿತು!! 500 ವರುಷ ಹಳೆಯ ಬಳ್ಳಿಗಳು, ವಿಶಿಷ್ಟ್ಯ ಪೊದೆಗಳು ಅನೇಕ ದಿನಗಳ ವರೆಗೆ ನಿಮ್ಮ ಮನಸ್ಸನ್ನು ಆವರಿಸದೇ ಬಿಡದು. 600 ಎಕೆರೆಯಲಿ ಹರಡಿದ ಹೊಸಗುಂದದ ದೇವಾಲಯ ನಿಶ್ಚಯವಾಗಿ ನಿಮಗೆ ಹೊಸ ಸ್ಟೋರಿ ನೀಡುವಲ್ಲಿ ಖಂಡಿತ ಸೋಲದು. ಇಲ್ಲಿನ ವನ ಸಂಪತ್ತನ್ನು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಸರ್ವೆ ನಡೆಸಿ 540ಕ್ಕೂ ಹೆಚ್ಚು ಅಳಿವಿನಂಚಿನ ಗಿಡಗಳಿವೆಯೆಂದು ಗುರುತಿಸಿದ್ದಾರೆ! ಅಬ್ಬಾ ಎಂದಿತು ಮನ.

ವಿಶಿಷ್ಟ್ಯ ವಿನ್ಯಾಸದ ಕಾಳಿ ದೇವಾಲಯವನ್ನು ನೋಡದೆ ಬಂದರೆ ಖಂಡಿತ ಏನೋ ಒಂದು ಕಳೆದುಕೊಂಡಂತೆ. ಕೇರಳೀಯ ಶೈಲಿಯಲ್ಲಿ ಕೆಂಪು ಕಲ್ಲಿನಲ್ಲಿ ಕಡೆದು ಕೆತ್ತಿದ್ದಾರೆ. ಅಂದವಾಗಿ ಅದಕ್ಕೆ ಮಂಗಳೂರು ಹೆಂಚು ಹೊದಿಸಲಾಗಿದೆ. ಸುತ್ತಲೂ ಸುಂದರ ಪೌಳಿಯನ್ನು ನಿರ್ಮಿಸಿದ್ದಾರೆ.

ಇತಿಹಾಸ

ಇತಿಹಾಸವನು ಕೆದಕಿದರೆ ಕ್ರಿ ಶ 9 ನೆಯ ಶತಮಾನಕ್ಕೆ ನಮ್ಮನ್ನು ಒಯ್ಯುತ್ತದೆ. ಕೆಲವೇ ವರ್ಷಗಳ ಕೆಳಗೆ ಮಣ್ಣಿನಡಿಯಲ್ಲಿ ಮಲಗಿದ್ದ ದೇವಾಲಯವು ಊರಿನವರ (ನಾರಾಯಣ ಶಾಸ್ತ್ರಿ ದಂಪತಿಗಳು) ಮತ್ತು ಉಮಾ ಮಹೇಶ್ವರ ಸೇವಾ ಟ್ರಸ್ಟ್ನ ಕಾಳಜಿಯಿಂದ ಜೀರ್ಣೋದ್ದಾರಗೊಂಡಿದೆ. ಎಲ್ಲಾ ದೇವಾಲಯಗಳನ್ನು ಮೊದಲಿದಂತೆ ನಿರ್ಮಿಸಲಾಗಿದೆ.

ಎ. ಸುಂದರಂ, ಜಿ.ವಿ ಕಲ್ಲಾಪುರ, ಸಾಮಕ್ ಅವರ ಸಂಶೋಧನೆಯ ಪರಿಶ್ರಮ ಎದ್ದು ಕಾಣುತ್ತದೆ. ಇಲ್ಲಿನ ಶಾಸನಗಳನ್ನು ಓದಿ ಇದರ ಐತಿಹ್ಯದ ಗಂಟನ್ನು ಬಿಡಿಸಿದ್ದಾರೆ. ಉತ್ಖನನ ಗೊಂಡಾಗ ಶಿಲಾಯುಗದ ಆಯುಧಗಳೂ, ಗಂಗರ ಕಾಲದ ನಾಣ್ಯಗಳೂ ಸಿಕ್ಕಿವೆ ಎಂದು ಹೇಳಲಾಗುತ್ತದೆ. 

ನಿರ್ಮಾಣ:-

ಪ್ರಸನ್ನ ನಾರಾಯಣಿ ದೇವಾಲಯವನ್ನು ಬಲದೇವನೆಂಬುವವನು 1242ರಲ್ಲಿ ನಿರ್ಮಿಸಿದನೆಂದು ಐತಿಹ್ಯ ಹೇಳುತ್ತದೆ. ಕ್ರಿ. ಶ 1320ರಲ್ಲಿ ಹೊಯ್ಸಳರ ವೀರ ಬಲ್ಲಾಳ ದೇವರಸನು ಕಂಚಿ ಕಾಳಮ್ಮದೇವಾಲಯಕ್ಕೆ ಭೂ ದಾನ ನೀಡಿದ ಶಾಸನ ಪತ್ತೆಯಾಗಿದೆ. ಗಣಪತಿ, ವೀರ ಭದ್ರ, ಮಹಿಷ ಮರ್ಧಿನಿ, ಸುಬ್ರಹ್ಮಣ್ಯ ದೇವಾಲಯ ನಿರ್ಮಿಸಿದನೆಂದು ಅಳಿಯದೇ ಉಳಿದ ಶಾಸನಗಳು ಸಾರುತ್ತವೆ. 

ಇಲ್ಲಿನ ದೇವಾಲಯಗಳು ದ್ರಾವಿಡ, ಹೊಯ್ಸಳ, ಪಲ್ಲವ , ಕೇರಳೀಯ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ಅತ್ಯದ್ಬುತವಾದ ದೇವಾಲಯ ಸಮುಚ್ಚಯದ ಜೊತೆಗೆ 600 ಎಕರೆ ದೇವರ ಕಾಡು ಪರಿಸರಾಸಕ್ತರಿಗೆ, ಇತಿಹಾಸ ಪ್ರಿಯರಿಗೆ ಸುಗ್ರಾಸ ಭೋಜನವನುಣ ಬಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. 

ಶ್ರೀಧರ್. ಎಸ್. ಸಿದ್ದಾಪುರ


 

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...