ಹಕೂನ ಮಟಾಟ
ಒಂದು ಬೇವಾರಸಿ ಟಿಪ್ಪಣಿ….
ನೇರ ರೇಖೆಯನ್ನೇ ವಕ್ರ ಸೊಟ್ಟಗೆ ಎಂದಾಡಿ ಕೊಳ್ಳುವಾಗ ಇಂತಹ ಕತಾ ಸಂಕಲನಕ್ಕೆ ಲೇವಡಿ ಹಚ್ಚಿ ಬಿಡುವುದಿಲ್ಲವೇ? ತಂತ್ರಜ್ಞಾನ ಯುಗದಲ್ಲಿ ತಮ್ಮ ಮೂಗಿನ ನೇರಕ್ಕೆ ಏನೂ ಬೇಕಾದರೂ ನೇತು ಹಾಕಿಕೊಂಡು ಸುಖಿಸಬಹುದಿಲ್ಲಿ. ಅಂಕೆ ಶಂಕೆ ಇಲ್ಲದಿರೆ ಪದಗಳ ಆಮಶಂಕೆ! ನೀನೂ ಮಾಡಿರುವುದೂ ಅದೇ ಎಂದು ಹಳಿಯಬೇಡಿ.
ಅರಿಕೆಯೊ, ಸ್ವಗತಗಳೊ, ತುಮುಲಗಳ ಸಂತೆಯನ್ನು ತಡವಿ ಬಂದ ಅನುಭವ. ಪಟ್ಟದ್ದು ಪಾಡೋ, ಸುಖವೋ ಎಂದು ಹೇಳಲು ಏಕಮಾನವಿಲ್ಲ ಇಲ್ಲಿ. ನಮ್ಮ ಉದ್ದಗಲಕ್ಕೆ ಸರಿಯಾಗಿ. ಮೂಗುತಿ ಭಾರದಿಂದೋ ಅಥವಾ ಮೂಗೇ ಸೊಟ್ಟಗೋ ನೀವೇ ನೋಡಿ ನಿರ್ಧರಿಸಬೇಕಷ್ಟೆ.
ಕತೆಯೋ, ಪ್ರಬಂಧವೋ? ಕತೆಯಂತಹ ಪ್ರಬಂಧಗಳಾ? ಸ್ವಗತಗಳ ಸಂತೆಯಾ? ತನ್ನ ಬದುಕಿನ ತುಣುಕುಗಳಾ ತಲೆ ಬಾಲ ಕತ್ತರಿಸಿದ ವೃಕ್ಷ ಕಾಂಡದಂತೆ ಕಂಡರೂ ಭಿನ್ನ ಅಗೋಚರ ಧನಿಯಾಗಿ ನಿರಂತರವಾಗಿ ಕಾಡದೇ ಇರದು.
ಹೊಸ ಹೊಸದಾದ ರೂಪಕಗಳು ಆಸ್ವಾದಿಸುವವರ ನಾಲಗೆಯ ರುಚಿ ಮೊಗ್ಗುಗಳನ್ನು ಕೆಣಕದೇ ಇರದು. ʼನಾನು ನಿಂತಲ್ಲಿಯೇ ಹೆಪ್ಪಿಬಿಟ್ಟೆʼ, ʼಕಸಿವಿಸಿ ತೊಟ್ಟಿಕ್ಕಿತ್ತುʼ. ʼನಾಲಗೆಯಲ್ಲೇನೋ ಬೇವಾರಸಿ ತೊಡರುʼ, ʼಕತ್ತಲು ಜಿಟಿಪಿಟಿಸುತ್ತಿತ್ತು!ʼ, ʼಎಲೆಯ ವಂದರಿಯಲಿ ಬಿಸಿಲಿನ ಜರಡಿʼ, ʼಸೈಕ್ಲೋನ್ ಸುರಿತʼ, ರೇಜಿಗೆಯ ಜಿಟಿ ಪಿಟಿ, ರೇಜಿಗೆಯ ಹಗಲು, “ನನ್ನದೋ ಬೇವಾರಸಿಯ ಚರ್ಯೆ”, ʼತಹ ತಹ ವಿರಹವಲ್ಲʼ, ʼಊಟಕ್ಕೆ ಕುಳಿತಾಗ ಮಾತು ಹೆಕ್ಕಿದ್ದಳು!ʼ, ʼನೆನಪಿಗೆಂದೂ ತೇಗುವುದಿಲ್ಲʼ, ʼನೆಳಲು ಚೆಲ್ಲುತ್ತಾಳೆʼ, ʼರಾಡಿ ಮುಕ್ಕಳಿಸಿದ ರೋಡುʼ, ʼನಗು ಗುಟುರಿದ್ದʼ, ʼಬೀದಿಯ ಕಾಮಾಲೆ ಮಂಪರಿನಲ್ಲಿ.ʼ, ʼಜಿಗುಟು ಹಗಲುʼ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಲ್ಲವು ತಾರಲೋಕದಿಂದ ಎಳೆದು ತಂದವು! ಖಂಡಿತ ನಮ್ಮ ಲೋಕದ್ದಲ್ಲವೇ ಅಲ್ಲ.
ಒಂದು ಬೇವಾರಸಿ ಟಿಪ್ಪಣಿಗಳು ಕತೆಯಿಂದ....
ಅಕ್ಷ್ಯೋಭ್ಯ ಕಡಿದಾಳನ್ನು ಕಟ್ಟಿಕೊಂಡು ಅವಳು ಹೆಣಗುವ ರೀತಿಗೆ ಅವಳ ಅನನ್ಯ ಪ್ರೀತಿಗೆ ಬೆರಗುಗೊಂಡಿದ್ದೇನೆ. ತಾನು ಮೂರನೆಯವಳು ಎಂಬ ಅರಿವಿದ್ದೂ ಅವನ ಮಾತಿಗೆ ಕಟ್ಟುವ ಕಲೆಗೆ ಮರುಳಾದವಳು ಅವಳು! ಅವನ ಆರ್ಕಿಟೆಕ್ ಕೈಗಳಿಗೆ ಸೋತವಳು. ಕೊನೆಯವರೆಗೂ ಸೋಲುತ್ತಾ ಬುದುಕುವಳು. ಮಗನನ್ನು ಆರ್ಕಿಟೆಕ್ ಆಗಿಯೇ ರೂಪಿಸುವಳು. ಸಣ್ಣ ಸಮಾರಂಭವೊಂದರಲ್ಲಿ ಅವಳು ತನ್ನ ಸವತಿಯನ್ನು ಎದುರಿಸುವ ಪರಿ ಅನನ್ಯವಾಗಿಸಿದ್ದಾರೆ ಕತೆಗಾರ. ಅವಳ ತುಮುಲಗಳ ಜೊತೆಗೆ ಹೋಗಿ ಇದ್ದು ಬಂದಿದ್ದೇನೆ. ಅವಳ ಕಣ್ಣೀರಿಗೆ ಜೊತೆಯಾಗಿದ್ದೇನೆ. ಅವನ ಜೊತೆಗಿನ ಬಂಧವನು ಅತ್ಯಂತ ನಾಜೂಕಾಗಿ ಪೋಣಿಸಿಕೊಟ್ಟಿದ್ದಾರೆ. ವಾರಸುಗಳಿಲ್ಲದ ಗೆರೆಗಳು…. ಎಲ್ಲೂ ಹೇಳಲಾಗದ ಸಂಕಟಗಳ ಕಡತ. ಕೊನೆಗೂ ಪ್ರಶಸ್ತಿ ಪಡೆಯುವಾಗಲೂ ಹೇಳಲಾಗದೇ ಮಗ ಮತ್ತು ಅಮ್ಮನ ತೊಳಲಾಟಗಳು. ಎಷ್ಟು ನೋವುಗಳನ್ನು ಹಿಡಿದಿಡಬಹುದೋ ಅಷ್ಟನ್ನು ಹಿಡಿದಿಟ್ಟ ಪರಿ ಅನನ್ಯ.
ಬದುಕಿನ ಉತ್ಸವಗಳಲ್ಲಿ ಅವನಿಲ್ಲದ ಖಾಲಿತನ, ಸಾಂಗತ್ಯವಿಲ್ಲದ ವಿರಹದ ದಿನಗಳ ಮರೆವಣಿಗೆ. ಸಾವಿನಲ್ಲೂ ಸಿಗದ ನೆಮ್ಮದಿ. ಒಂದು ಬೇವಾರಸಿ ಸಾವು. ದುಃಖದ ದಂಡೆಯಲಿ ಅವನ ನೆನಪಿನ ಮೆರವಣಿಗೆ. ಹೊಯ್ದಾಟಗಳು. ಯಾವುದು ನಿಚ್ಚಳವಾಗದಂತಹ ಸಂದಿಗ್ಧತೆ. ಯಾವುದೇ ಚೌಕಟ್ಟಿಗೆ ಸಿಗದ ಯಾತನೆಗಳ ಸಂತೆ. ತಂದೆ ಅನಿಸಿಕೊಂಡವನ ಹಸಿ ಬಿಸಿ ನೆನಪುಗಳು ನಮ್ಮನ್ನೂ ಕಲುಕುತ್ತವೆ. ಸಿಗದ ದುಃಖ ಕಾಡುತ್ತದೆ. ನಮ್ಮನ್ನೂ ಹೆಪ್ಪುಗಟ್ಟಿಸಿ ಅಳಿಸುತ್ತವೆ. ಒಳಗೊಳಗೇ ಅಳುತ್ತೇನೆ.
ಗುಟುಕು ಪ್ರೀತಿಗೆ ಕಾತರಿಸಿ ಕಾಯುವ ಕಷ್ಟಗಳ ಸಂಕೋಲೆ. ಅದಮ್ಯ ಜೀವನೋತ್ಸಾಹದಲ್ಲಿ ಅನಾಮಿಕವಾಗಿ ಉಳಿವ ತಂದೆಯ ಹೆಸರು ಮತ್ತು ಅವರ ಸಂಬಂಧಗಳು. ತುಮುಲಗಳ ಕಂತೆಯನ್ನು ಆರ್ಕಿಟೆಕ್ಚರ್‌ನ ಮೂಸೆಯಲ್ಲಿಟ್ಟು ನೋಡುವುದು ಸಹ ಕತಾ ಪ್ರಪಂಚಕ್ಕೆ ಹೊಸ ಕಿಂಡಿ. ಎಂದೂ ದಕ್ಕದ ತಂದೆ. ಕತೆ ಹೇಳದ ಏನನ್ನೂ ತಂದು ಕೊಡದ ತಂದೆ! ರಸಿಕೆಯಾಗಿ ಸೋರುವ ಸಣ್ಣ ಹುಣ್ಣಿನಂತೆ ತಂದೆಯ ನೆನಪು. ಒಂದು ಮಾಯದ ಗಾಯ.
ಕತೆ ತೆರೆದಿಡುವ ಟಿಸಿಲುಗಳು ನೂರಾರು. ಭಾವ ಸ್ಪರ್ಶಕ್ಕೆ ದಕ್ಕದ ಬರಡು ಬದುಕು. ಇಂತಹ ನೂರಾರು ಟಿಸಿಲುಗಳಿಂದ ತೊಟ್ಟಿಕ್ಕುತ್ತಿದೆ ನೋವಿನ ನೂರಾರು ಕತೆಗಳು. ನೂರಾರು ಭಾವ ಪ್ರಪಂಚದ ಸಾವಿರ ಬಿಂದುಗಳು. ಪ್ರತಿ ಬಿಂದುವಿನ ಕತೆಯೂ ಭಿನ್ನ. ಇಂತಹ ಒಂದು ಟಿಸಿಲಿನಲ್ಲದರೂ ಬಂದು ಕುಳಿತು ಕತೆ ಕೇಳಿ ಹೋಗಿ.
-----
ಹುತ್ತಗಟ್ಟದೇ ಇಂತಹ ಪ್ರಯತ್ನ ಸಾಧ್ಯವಿಲ್ಲ. ಎಲ್ಲರಂತಲ್ಲದ ಹೊಸ ಕಥಾ ಪ್ರಪಂಚಕ್ಕೆ ಪಾದವಿಟ್ಟ ಅನುಭವ.
ವಸ್ತಾರೆ ಕತೆಗಳಾಲಿ ಕವಿತೆಗಳಾಗಲಿ ಸುಲಭಕ್ಕೆ ದಕ್ಕಲಾರವು. ಪ್ರಯತ್ನ ಪಟ್ಟು ದಕ್ಕಿಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೂ ಕೈಯ ಸಂಧಿಯಲಿ ಜಾರಿ ಹೋಗುವವು. ಸುಲಭಕ್ಕೆ ಗ್ರಹಿಸಲು ಸಾಧ್ಯವಾಗದು ಎಂದು ವಾಚಿಕೆಯ ಪ್ರಾರಂಭದಲ್ಲೇ ಶಾಂತಾ ಮಣಿ ಹೇಳಿದ್ದಾಳೆ ಜಾಗೃತೆ!
ಹಾಗಾಗಿ ನಿಮ್ಮ ಓದಿಗೆ ದಕ್ಕಲಿ ಎನ್ನಲಾರೆ. ದಕ್ಕುವುದು ದಕ್ಕಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಬದುಕೆಂದರೆ ಮುಕ್ತಾಯವಾಗದ ಕೊನೆ ಮೊದಲಿಲ್ಲದ ಹುಡುಕಾಟ. ಎಂಬುದನು ಸದಾ ನೆನಪಿಸುತ್ತಾ ಕರಣಗಳಲಿ ಮತ್ತೆ ಮತ್ತೆ ಕೇಳುತಿದೆ “ನಿಂತಲ್ಲೇ ನಾನು ಹೆಪ್ಪಿ ಬಿಟ್ಟೆ” ಎಂಬ ಪದಪುಂಜ. ನಿಮ್ಮ ಓದಿಗೆ ದಕ್ಕಿದರೆ ತಿಳಿಸಿ.
ನಿಮ್ಮ ಓದಿಗೆ ದಕ್ಕಲಿ ಎನ್ನಲಾರೆ ದಕ್ಕುವುದು ದಕ್ಕಿಸಿಕೊಳ್ಳುವುದೂ ನಿಮ್ಮ ಕೈಯಲ್ಲೆ ಇದೆ ಎನ್ನುತ್ತಾ ಈ ಮೋಟು ಲೇಖನಕ್ಕೆ ಪೂರ್ಣ ವಿರಾಮ. ಮತ್ತೆ ಸಿಗೋಣ.