ಯಾರೋ ಹರವಿದ ಕ್ಯಾನವಾಸ ಮೇಲೆ ಹದವಾಗಿ ಬಿಡಿಸಿಟ್ಟ
ಊರು. ಚಿತ್ರಕಾರ ತನ್ನ ಕುಂಚದಿಂದ ರಚಿಸಿದಂತಹ ರಚನೆಗಳು. ಊರಿನ ಜನರಂತೆ ಇಲ್ಲಿನ ದೇವಾಲಯಗಳೂ ಅನಾಥರಂತೆ
ಅಲ್ಲಲ್ಲಿ ಹರಡಿವೆ.
ಎಲ್ಲೋ ಕಳೆದು ಹೋದ ಹಿಂದಿನ ಶತಮಾನದ ಮಾನಸ ಪುತ್ರ ರತ್ನರಂತೆ, ಕಾಲದೊಂದಿಗೆ ಋಜುತ್ವ ಸಾಧಿಸಿದವರಂತೆ ಈ ಪುಟಾಣಿ ಹಳ್ಳಿಯಲ್ಲಿ ಬಂದಿಯಾದವರು ಶಾಪಗ್ರಸ್ಥ ಅಹಲ್ಯೆಯ ನೆನಪಾಗುವಂತೆ ಮಾಡುತ್ತಾರೆ. ಅವಳ ಚಂಚಲತೆಗೆ ಶಾಪ, ಇವರಿಗೆ ನಿಶ್ಚಲವಾಗಿರುವಂತಹ ಶಾಪ! ಎರಡೂ ಶಾಪವೇ. ಚಂಚಲತೆ ಮತ್ತು ನಿಶ್ಚಲತೆಯ ನಡುವಿನ ಗಡಿ ರೇಖೆಯೊಂದನ್ನು ಗುರುತಿಸಬೇಕಿದೆ.
ಇಲ್ಲಿನವರು ಎಲ್ಲೂ ಗಡಿಬಿಡಿ ಇಲ್ಲದೆ, ಯಾವುದಕ್ಕೂ ಹಪಹಪಿಸದೇ ಕಾಲ ದೇಶದ ಗಡಿ ಮೀರಿದವರಂತೆ, ಯಾರಿಗೋ ಕಾದು ಕುಳಿತವರಂತೆ ಭಾಸವಾಗುತ್ತಾ, ಕಿರು ವ್ಯಾಪಾರಕ್ಕೂ ಖುಷಿ ಪಡುತ್ತಾ ಇಟ್ಟಿಗೆ ಗೂಡಿನಂತಹ ಮನೆಗಳಲ್ಲಿ ವಾಸ ಮಾಡುತ್ತ ಬದುಕುತ್ತಿದ್ದಾರೆ. ಪೆನ್ನಾ ನದಿಯೂ ಯಾವುದೇ ಗಡಿ ಬಿಡಿ ಇಲ್ಲದೆ ಪ್ರಶಾಂತವಾಗಿ ಪ್ರವಹಿಸುತ್ತಾ ಇಲ್ಲಿನ ಬದುಕಿಗೆ ರೂಪಕವಾಗಿದೆ. ಮುಂದೆಲ್ಲೋ ಇದಕ್ಕೆ ಅಣೆಕಟ್ಟು ಕಟ್ಟಿದಂತೆ ನೀರು ನಿಂತಂತೆ ಹರಿಯುತ್ತಿದೆ.
ಕಲೆ, ಇತಿಹಾಸ ಮತ್ತು ಪ್ರಾಕೃತಿಕ ಅಚ್ಚರಿಗಳ
ಸಂಮ್ಮಿಶ್ರಣದಂತಿರುವ ಕೋಟೆಯೂರು ಗಂಡಿಕೋಟ. ಆಂಧ್ರದ ನಂದ್ಯಾಲ ಜಿಲ್ಲೆಯ ಅಹೋಬಿಲಂನಿಂದ ೮೦ ಕಿಲೋ ಮೀಟರ್.
ಗಂಡಿಕೊಟವು ಆಂಧ್ರದ ಕಡಪಾ ಜಿಲ್ಲೆಯ ಕೊಟೆಯೂರು.
ಚಿದ್ರಗೊಂಡ ಊರಿನಿಂದ ಭಗ್ನ ಮನಸ ಹೊತ್ತು ಹೊರಟು
ನಿಂತಾಗ ಇಳಿ ಸಂಜೆ.