Wednesday, December 19, 2018

ಕಡಲ ಮಕ್ಕಳ ಕಥೆಗಳು.......



ಕಡಲಿಗೂ, ನದಿಗೂ ಮಳೆಗೂ ಅವಿನಾಭಾವ ಸಂಬಂಧ. ನಮ್ಮ ಕಡೆ ಅಂದರೆ ಗೋಕರ್ಣ ಸೀಮೆಯ ಕಡೆ ಮಳೆಗೆ 'ಮಳಿ' ಎಂದು ರಾಗ ಎಳೆದು ಹೇಳುತ್ತೇವೆ. ಕೆಲವು ಪದಗಳಿಗೆ 'ಡ' ಸೇರಿಸಿ ಬಿಡುತ್ತೇವೆ! ಎಲ್ಲವನ್ನೂ ತಿಕ್ಕಿ, ಕತ್ತರಿಸಿ, ತುಂಡರಿಸಿ ಚೂಪು ಮಾಡಿ ಹೃಸ್ವಗೊಳಿಸಿ ಬಿಡುತ್ತೇವೆ! ಹಾಗೆಂದು ನಾವು ಕಂಜೂಸುಗಳಲ್ಲ. ನಮ್ಮ ಜಾನಪದಗಳಲ್ಲಿ ಹಣಕಿ ಹಾಕಿದರೆ ನಮ್ಮ ಶ್ರೀಮಂತಿಕೆ ಅರಿವಿಗೆ ಬರುತ್ತದೆ. ಭಾಷೆಯಂತೆ ನಮ್ಮ ಕಡೆ ಸಂಪ್ರದಾಯಗಳೂ ಅನನ್ಯ. ರುಚಿ ಮೊಗ್ಗು ಅರಳಿಸುವ ಅಡುಗೆಗಳೂ ಅಪಾರ.






  ಇಂತಹ ಜಾನಪದೀಯ ಜ್ಞಾನ ಹೊತ್ತ ದೇಸಿ ಪಂಗಡಗಳು ನೂರಾರು. ಕೆಲವಂತೂ ನಶಿಸಿಯೇ ಹೋಗಿವೆ. ಅಂತಹ ವಿಶಿಷ್ಟ ಜ್ಞಾನ ಪರಂಪರೆಯಿಂದ ಸಂಪನ್ನರಾದವರು ಹಾಲಕ್ಕಿಗಳು. ತಮ್ಮ ಆಚರಣೆಯಿಂದ ಕರ್ನಾಟಕದಾದ್ಯಂತ ವಿಶಿಷ್ಟ ಛಾಪು ಮೂಡಿಸಿದವರು ಹಾಲಕ್ಕಿಗಳು. ಹಾಲಕ್ಕಿಗಳ ಗೌಡ ಹೆಂಗಸೊಬ್ಬಳು ಸಿಕ್ಕಿದ್ದಳು. 80 ರ ಇಳಿ ಪ್ರಾಯದಲ್ಲೂ ಬೆಳಗ್ಗಿನ ಹೊತ್ತು ಗುಡ್ಡೆಗೆ ಸೊಪ್ಪು ತರಲು ಹೋಗಿದ್ದಳು. ಅವಳ ಮಕ್ಕಳು ಕುಡಿಯಲು ಕಷಾಯ ಮಾಡಿಕೊಟ್ಟಿದ್ದರು. ಅಂತಹ ವಿಶಿಷ್ಟ ರುಚಿಯ ಕಷಾಯವನ್ನು ಇವತ್ತಿನವರೆಗೂ ನಾ ಕುಡಿದ್ದಿದಿಲ್ಲ. ಬೆಟ್ಟದ ಯಾವುದೋ ಸೊಪ್ಪಿನಿಂದ ಅದಕ್ಕೆ ವಿಶಿಷ್ಟ ರುಚಿ ಬಂದಿತ್ತು. ಅವರು ಹೇಳಿದ ಸೊಪ್ಪು ನನಗೆ ಯಾವುದೆಂದು ತಿಳಿಯಲಿಲ್ಲ. ಇವರು ಹಬ್ಬ, ಆಚರಣೆ ಸಂಪ್ರದಾಯಗಳಲ್ಲಿ ಇವರು ವಿಶಿಷ್ಟತನವನ್ನು ಇನ್ನೂ ಕಾಪಾಡಿಕೊಂಡು ಬಂದಿದ್ದಾರೆ.


ಕಡಲಿಗೆ ಮುಖ ಮಾಡಿ ಕುಳಿತರೆ ಸಿಗುವ ಅನುಭವವೇ ಅನನ್ಯ. ನೂರಾರು ಕತೆಗಳ ಸುರಳಿ ಅಲೆಗಳ ನಡುವೆ ಬಿಚ್ಚುತ್ತಾ ಸಾಗುತ್ತೆ. ಆಲಿಸುವ ಕಿವಿಗಳಿಲ್ಲದೇ ಬಂಡೆಗಳಿಗೇ ಅಪ್ಪಳಿಸಿ ಅಲೆಗಳಲ್ಲೇ ಲೀನವಾಗುವವು.

ಅಂತಹುದೊಂದು ಪಂಗಡ ಗೋಕರ್ಣದ ಕಡಲ ಸುತ್ತಲಿದ್ದಾರೆ. ಬೇರೆಲ್ಲೂ ಕಾಣಸಿಗದ ಇವರು ನಾಗರಿಕ ಪ್ರಪಂಚದ ಸುಖ ಭೋಗಗಳಿಂದ ಬಹಳ ದೂರ. ನಿರ್ಲಿಪ್ತರು. ಸ್ನೇಹ ಜೀವಿಗಳು. ಕಡಲಿನೊಂದಿಗೆ ಸೆಣಸುವುದೇ ಇವರ ಬದುಕು. ಇವರ ಕಡಲ ಜ್ಞಾನ ಅಪಾರ. ಕಡಲಿನ ಒಳ ಹೊಕ್ಕು ತಿಳಿದವರು. ಅಂತಹ ಒಂದು ಪಂಗಡ ಗೋಕರ್ಣದ ಓಂ ಬೀಚ್ನ ಉಬ್ಬರದ ಸಮಯದಲ್ಲಿ ಭೇಟಿಯಾದರು.

ಏನೇನೋ ತಮ್ಮ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಕೈಯಲ್ಲ್ಲೊಂದು ಗಾಳ. ಬೆನ್ನ ಹಿಂದೆ ಕಟ್ಟುವ ಒಂದು ಕತ್ತಿ. ಒಂದು ಪ್ಲಾಸ್ಟಿಕ್ ಚೀಲ ಇವಿಷ್ಟೇ ಅವರ ಅಸ್ತ್ರ. ಅಂದು ಕಡಲು ಎಷ್ಟು ಪ್ರಕ್ಷುಬ್ದಗೊಂಡಿತೆಂದರೆ ಬಂಡೆಗಳಿಗೆಲ್ಲಾ ತನ್ನ ಅಪರಿಮಿತ ಸಿಟ್ಟನ್ನು ತೋರುತ್ತಿತ್ತು. ಆದರೆ ಅವರು ನಾವು ಕಣ್ಣು ಮಿಟುಕಿಸುವಷ್ಟರಲ್ಲೇ ಕಡಲಿಗಿಳಿದು ಎದುರಿಗಿದ್ದ ನಡುಗುಡ್ಡೆಯೊಂದನ್ನು ಅನಾಯಾಸವಾಗಿ ಈಜಿ ಸೇರಿಕೊಂಡರು. ಅವರೊಂದಿಗೆ ಆಚೆ ನಡುಗುಡ್ಡೆಗೆ ಹೋಗುವ ಮನಸೆನೋ ಇತ್ತು. ಆದರೆ ಧೈರ್ಯ. ಅದನ್ನೆಲ್ಲಿಂದ ಕಡ ತರಲಿ?! ಇರಲಿ.. ಅಲ್ಲಿ ಸೇರಿಕೊಂಡವರೇ ಗಾಳ ಹಾಕಿ ಮೀನು ಹಿಡಿಯಲು ಪ್ರಾರಂಭಿಸಿದರು. ಕೆಲವೇ ಕೆಲವು ನಿಮಿಷಗಳಲ್ಲಿ ಅವರ ಕೈಚೀಲಗಳು ಮೀನಿನಿಂದ ತುಂಬಿ ತುಳುಕಿತು. ಯಾವ ಮೀನು ಎಷ್ಟು ಹೊತ್ತಿಗೆ ಎಲ್ಲಿ ಬರುವವೆಂದು ಅವರ ಜ್ಞಾನ ಅಪಾರ! ಬುಟ್ಟಿಯಲ್ಲಿನ ಮೀನು ನೋಡೋಣವೆಂದು ದಿಟ್ಟಿಸಿದೆ. ಮೀನು ಬೇಕಾ? ಎಂದು ತನ್ನ ಭಾಷೆಯಲ್ಲೇ ಕೇಳಿದ. ಆತನ ವಿಚಾರಿಸಿದೆ  ಏನು ಮಾಡುವಿರಿ? ಇಷ್ಟೊಂದು ಮೀನು.  ಅಂದು ಮಾರಲೊಂದಿಷ್ಟು ಮೀನು, ಮನೆ ಖಚರ್ಿಗೆ ಸ್ವಲ್ಪ. ದುಡಿದ ನಾಲ್ಕಾಣಿಯಲ್ಲೇ ಸ್ವಲ್ಪ ಗೋಕರ್ಣನಾಥನ ಹುಂಡಿಗೆ! ಎಂದು ಹೇಳಿ ಸರಸರನೇ ಹೊರಟ.

ಬುದ್ದ ಹೇಳಿದ ಆಸೆರಹಿತ ಸ್ಥಿತಿ ಇದೇ ಇರಬೇಕು. ಅವರ ನಿರುದ್ವಿಗ್ನವಾದ ಜೀವನ ಶೈಲಿ ನನ್ನನ್ನು ಬೆರಗುಗೊಳಿಸಿತು. ಇವಿಷ್ಟೇ ಅವರ ಅಗತ್ಯವೆಂದು ಕಾಣುತ್ತೆ. ಅತಿಯಾಸೆಯೇ ಇಲ್ಲ. ಇಳಿ ಸಂಜೆಯೊಳಗೆ ಅವರು ಹೊರಟು ಬಿಟ್ಟರು!

Wednesday, November 7, 2018

ಪ್ರಕೃತಿ ರಚಿಸಿದ ರಂಗಾದ ರಂಗೋಲಿ...


ಬೆಳ್ಳಂಬೆಳಗ್ಗೆ ಬರಿ ಕಾಲಲ್ಲಿ ಗದ್ದೆ ಬಯಲಲ್ಲಿ   ಶಾಲೆಗೆ  ನಡೆದೇ ಹೋಗುತ್ತಿದ್ದ ಕಾಲ. ಬಯಲ ತುಂಬಾ, ಗಿಡದ ಮೇಲೆ, ಬಳ್ಳಿ ಉದ್ದಕ್ಕೂ ಬೆಳಗ್ಗೆ ಸುರಿದ ಮಂಜಿನ ಹನಿಗಳ ಮೆರವಣಿಗೆ.
ಹನಿಗಳ ದೃಶ್ಯ ಕಾವ್ಯ.

ಆಗ ಕೊಯ್ಯುತ್ತಿದ್ದ ಪುಟಾಣಿ ತುಂಬೆ ಹೂವಿಗೆ ಮುತ್ತಿಕ್ಕುತ್ತಿದ್ದ ಪುಟಾಣಿ ಮಂಜಿನ ಹನಿಗಳು. ಯಾರು ಹೆಣೆದರೋ ಇವನ್ನು ಸಾಲಾಗಿ! ಮಳೆಯನ್ನು ತವರಿಗೆ ಕಳುಹಿಸಿ ಚಳಿಗೆ ಚಾದರ ಹಾಸುವ ಕಾಲದಲ್ಲಿ ಹಾಜರ್!
ಹನಿಗಳ    ಉಳಿಸುವ ಸಂದೇಶ ನಿೀಡುವ ನೊಣ

ಮಳೆ ಹೋಯಿತೆಂದು ಕರೆ ಕೊಟ್ಟವರಾರು ಇವಕೆ? ನೆಲದ ಗುಳಿಗಳಿಗೆ ತಮ್ಮ ಬಲೆಗಳ ಜಾಲರಿ ಹಾಕಿ ಹಾಸಿ ಬೇಟೆಗಾಗಿ ಕಾಯುವ ಟರಂಟುಲ ಜೇಡಗಳ ಬಲೆಯ ಮೇಲೂ ಮುತ್ತಿನ ಹನಿಗಳ ಶೃಂಗಾರ.

ಎಲ್ಲೆಲ್ಲೂ ಅರಳಿದ ಜೇಡರ ಬಲೆಗಳ ಮೇಲೆ ಮಂಜಿನ ಹನಿಗಳ ಬೆಳಕಿನ ಕಿರಣಗಳ ಚಿತ್ತಾರ! ಪುಟಾಣಿ ಪಾದಕ್ಕೆ ಹನಿ ಸ್ಪರ್ಶದ ಪುಲಕ. ಭಾವಕೋಶದಲ್ಲಿ ಬೆಚ್ಚಗಿರುವ ಬಾಲ್ಯದ ಬೆರಗು.
ಒಂಟಿಯಾಗಿರುವಾಗಲೋ, ಒರಗಿ ಕೂತಾಗಲೋ ಸುರುಳಿ ಬಿಚ್ಚಿಕೊಳ್ಳುತ್ತದೆ.


ಛಾಯಾ ಚಿತ್ರಕ್ಕಾಗಿ ಅಲೆಯುತ್ತಿದ್ದಾಗ ಮಂಜಿನೊಂದಿಗೆ ಬಿಚ್ಚಿಕೊಂಡ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಜೊತೆಗೊಂದಿಷ್ಟು ಚಿತ್ರ.
ಶ್ರೀಧರ ಎಸ್. ಸಿದ್ದಾಪುರ.

Thursday, October 11, 2018

ಹೊಸದು ಹೊಸೆದು ಹೊನ್ನಾಗಿಸಬೇಕು...


         ನಡೆದದಾ ದಾರಿಯಲಿ ನಡೆವ ರೋಮಾಂಚನವೆಲ್ಲಿ? ಹೊಸದಾರಿಯಲ್ಲಿ ಪುಳಕದ ಪುಗ್ಗವು ಊದಿಕೊಳ್ಳುವುದು. ಹಾಕಿದ ಹಳಿಗಳ ಮೇಲೆಯೇ ರೈಲು ಬಿಟ್ಟವರಿಗೆ ಹೊಸದು ಅರ್ಥವಾಗುವುದಾದರೂ ಹೇಗೆ? ಎಂದು ಕವಿ ಗೋಪಾಲಕೃಷ್ಣ ಅಡಿಗರು ತಮ್ಮ ಕವನದಲ್ಲಿ ಮಥಿಸಿದ್ದಾರೆ, ಕಥಿಸಿದ್ದಾರೆ.

ಏನೋ ಹೊಸದು ಮಾಡುವಲ್ಲಿ ಎಡವುದು ಸಹಜ. ಕಷ್ಟ ಕೋಟಲೆಗಳು ನೂರಾರು. ಅವನ್ನೆಲ್ಲಾ ಮೆಟ್ಟಿ ನಿಂತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಟ್ಟು ಇಲ್ಲಿ ಈ ವರ್ಷ ಮಕ್ಕಳ ಅಜ್ಜಿಯಂದಿರಿಂದ ಸಂಗ್ರಹಿಸಿದ 'ಅಜ್ಜಿ ಮದ್ದು' ಎಂಬ ಕಿರು ಹೊತ್ತಗೆಯನ್ನು ಅನಾವರಣಗೊಳಿಸಲಾಯಿತು. ನಿವೃತ್ತ ಸಸ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀ ಅರವಿಂದ ಹೆಬ್ಬಾರ್ ಅವರು ಪತ್ರಿಕೆ ಪ್ರಾಯೋಜಿಸಿ ಅನಾವರಣಗೊಳಿಸಿ ಮಾತನಾಡಿದರು.



ಮಕ್ಕಳ,  ಶಿಕ್ಷಕರ ಪ್ರಯತ್ನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿದರು. ಇನ್ನೂ ಹೆಚ್ಚಿನ ಸಂಚಿಕೆಗಳು ಹೊರ ಬರಲಿ ಎಂದು ಆಶಿಸಿದರು.

Monday, October 8, 2018

ಮಕ್ಕಳ ಮನ ಸೆಳೆದ ಜೇಡಗಳ ಛಾಯಾಚಿತ್ರ ಪ್ರದರ್ಶನ...

        ಹಕ್ಕಿ ಹಿಕ್ಕೆಯಂತೆ ಕಾಣುವ, ಚಪ್ಪಟೆ   ಹುಳದಂತಹ ಎಂಟು ತುದಿ ಹೊಂದಿರುವ, ಅಂಗಿ ಗುಂಡಿಯಂತಿರುವ,  ಕಿತ್ತಳೆ ಹಣ್ಣಿನಂತಿರುವ, 

ಅಳಿಲಿನ ಮರಿಯಂತಿರುವ ಜೇಡಗಳು. ಒಂದೊಂದು ಒಂದು ಬಗೆ. 

ಕೆಲವು ಮುದುಡಿ ಮಲಗಿದರೆ, ಕೆಲವು ಕೀಟಗಳ ಹಿಡಿದು ತಿನ್ನಲು ಕುಳಿತಿದ್ದವು. 

ಇನ್ನು ಕೆಲವು ಮತ್ತೊಂದು ಜೇಡವನ್ನು ತಿನ್ನಲು ಹಿಡಿದಿದ್ದವು. 
ಕೆಲವು ಎರಡು ಬಾಲದವು. ಕೆಲವು ಇರುವೆಯಂತಿರುವವು, ಆದರೆ ಇರುವೆಗಳಲ್ಲ! ಎಲ್ಲವೂ ಜೇಡಗಳು. ಬಲೆ ಹೆಣೆದು ಕಾದು ಕುಳಿತ ಕೆಲವು ಜೇಡಗಳ ಛಾಯಾಚಿತ್ರಗಳು. 
ಒಂದೊಂದು ಒಂದು ಬಣ್ಣ. ಕೆಲವು ನಿದ್ರಾವಸ್ಥೆಯಲ್ಲಿ. ಕೆಲವು ರಾತ್ರಿ ಶಿಖಾರಿಗೆ ಸಜ್ಜಾಗಿದ್ದವು. 
ಇವುಗಳ ಜೊತೆಗೆ ಒಂದಿಪ್ಪತ್ತು ಹಕ್ಕಿಗಳು. 


















ಹಲವು ಮಿಡತೆಗಳು, ಏರೋಪ್ಲೇನ್ ಚಿಟ್ಟೆಗಳು ಮತ್ತು ಅವುಗಳ ದೂರದ ಸಂಬಂಧಿ ಕೀಟಗಳು! ಇದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳು ಕಣ್ತುಂಬಿಕೊಂಡ ದೃಶ್ಯ! ಮಕ್ಕಳ ಕಲ್ಪನೆಯಲ್ಲಿ ಹೊಸ ಹೂಗಳಂತೆ ಜೇಡಗಳು ಅರಳಿ ನಿಂತವು. 
ಎಲ್ಲಾ ಛಾಯಾಚಿತ್ರಗಳು ಶ್ರೀಧರ್ ಎಸ್. ಸಿದ್ದಾಪುರ ಅವರ ಕ್ಯಾಮರ ಕಣ್ಣಿಂದ ಮೂಡಿಬಂದಿತ್ತು.



Sunday, September 2, 2018

ಸ್ವರ್ಗದ ದಾರಿಯಲ್ಲಿ ದುರ್ಯೋಧನನ ಮಂದಿರ......

 ಯಾನ:-


out lookನ ವಿಶೇಷ ಸಂಚಿಕೆಯಲ್ಲಿ ಪ್ರಕಟಗೊಂಡ ಒಂದು ವಿಶಿಷ್ಟ ದೇವಾಲಯ ಮತ್ತು ಓಸ್ಲಾ ಎಂಬ ಹಳ್ಳಿ. ಧರ್ಮರಾಯನೂ ಸ್ವರ್ಗವೇರಿದ ದಾರಿ! ಪುರಾಣಕಾಲಕ್ಕೂ ಹೆಜ್ಜೆ ಹಬ್ಬುವ ಕತೆಯನ್ನು ಓದಿ, ಉತ್ತರಾ ಖಂಡದ 66 ಕಿಲೋ ಮೀಟರ್ ದೂರದ ಹರ್ ಕಿ ದುನ್ ಚಾರಣಕ್ಕೆ ಭರ್ಜರಿ ತಯಾರಿ ನಡೆಸಿ ಹೊರಟು ನಿಂತೆ.
ಉತ್ತರಾಖಂಡದ ಡೆಹ್ರಾಡೂನ್ ರೈಲ್ವೆ ಸ್ಟೇಷನ್ಗೆ ಬೆಳಿಗ್ಗೆ 5.30ಕ್ಕೆ ರೈಲು ಏದುಸಿರು ಬಿಡುತ್ತಾ ಬಂದು ನಿಂತಿತು. ಬೆಳಗಿನ ಚಳಿಗೆ ಡೆಹ್ರಾಡೂನ ಸ್ಟೇಷನ್ ತಣ್ಣಗೆ ಮಲಗಿತ್ತು. ಚಾರಟೆ ಹುಳುವಂತೆ ಮುದುಡಿ ಕುಳಿತ ಪೋಲಿಸಿನವನಲ್ಲಿ ಹೋಟೆಲ್ ವಿಳಾಸ ಕೇಳಿ ಹೊರಬಿದ್ದೆ. ಚಳಿಯ ಮೊದಲ ಆಲಿಂಗನಕ್ಕೆ ಮನಸೋತೆ. ಬೆಳ್ಳಗಿನ ಹಿಮ ಹೊದ್ದ ಗೂಡಂಗಡಿಯಲ್ಲಿ ಚಹ ಕುಡಿದು ವಿಳಾಸ ಹುಡುಕುತ್ತಾ ಹೊಟೆಲ್ ಕಡೆಗೆ ಹೊರಟೆ.

ಮೊಮೊ ವಿಶಿಷ್ಟ ತಿಂಡಿ ...
ಮರುದಿನ ಬೆಳಿಗ್ಗೆ ಡೆಹ್ರಾಡೂನ್ನಿಂದ ಸಾಂಕ್ರಿ ಎಂಬ ಹಳ್ಳಿಗೆ ಪ್ರಯಾಣ ನಿಗದಿಯಾಗಿತ್ತು. ದೊಡ್ಡ ದೊಡ್ಡ ಪೈನ್ ಮರಗಳ ನೆರಳುಗಳ ಉದ್ದದ ಹಾದಿ. ಹೋದ ಹೋದಲೆಲ್ಲಾ ಯಮುನೆಯು ನಮ್ಮನ್ನೇ ಹಿಂಬಾಲಿಸುತ್ತಿದ್ದಳು. ಊರೊಂದರಲ್ಲಿ ಇಳಿದು ನೀರು ಕಾಣದೇ ವರ್ಷವಾದವರಂತೆ ಹಷರ್ಿಸುತ್ತಾ ಸ್ಪಟಿಕ ಶುಭ್ರ ಯಮುನೆಯಲಿ ಮುಳುಗಿ ಬಂದೆವು. ಮುಂದೆ ನಮ್ಮ ಪ್ರಯಾಣದುದ್ದಕ್ಕೂ ಜೊತೆಯಾದವಳು ಟೋನ್ಜ್ಸ್ ಎಂಬ ಯಮುನೆಯ ಉಪನದಿ. ನಡು ಮಧ್ಯಾಹ್ನ ಪಹಾಡಿ ಅನ್ನ, ದಾಲ್ ತಡಕಾ, ಪಾವಡಿ ರೋಟಿಯ ತುಣುಕೊಂದು ನಮ್ಮ ಹೊಟ್ಟೆಯ ಜೊತೆಯಾಯಿತು!
ಬೆಟ್ಟದ ಇಳಿಜಾರು ಕಡಿದು ಕಟ್ಟಿದ ಕಟ್ಟಿಗೆಯ ಸಣ್ಣ ಮನೆಗಳು. ಮನೆಯ ಮೇಲೋ, ಮರದ ಮೇಲೋ ಒಣಗಿಸುತ್ತಿದ್ದ ಒಣ ಹುಲ್ಲಿನ ಕಂತೆಗಳು ಪ್ರತೀ ಮನೆಯಲ್ಲೂ ಕಾಣ ಸಿಕ್ಕವು. ಎಲೆ ಉದುರಿಸಿಕೊಂಡು ಮರುಕ ಹುಟ್ಟಿಸುವ ಬೋಳು ಬೋಳಾದ ಸೇಬಿನ ತೋಪುಗಳು ಮನೆಯ ಪಕ್ಕ ಸುಮ್ಮನೆ ಬಿದ್ದಿದ್ದವು. ಶಾಲಾ ಮಕ್ಕಳು ಮನೆಗೆ ಮರಳುತ್ತಿದ್ದರು.
ಸಂಜೆ ನಾಲ್ಕರ ಸುಮಾರಿಗೆ ಚಾರಣದ ಹೆಬ್ಬಾಗಿಲಾದ ಸಾಂಕ್ರಿ ಎಂಬ ಪುಟ್ಟ ಹಳ್ಳಿಯಲ್ಲಿದ್ದೆವು. ಅಂದಲ್ಲಿ ಚಾರಣಿಗರ ಸಂತೆ. ಬಹು ಬೇಗ ಕಟ್ಟಿಗೆಯ ವಿಶಿಷ್ಟ ಕುಟಿರಗಳಲ್ಲಿ ನಾವು ನಿದ್ದೆಗೆ ಬಿದ್ದದ್ದೇ ತಿಳಿಯಲಿಲ್ಲ. ಎರಡನೆಯ ದಿನವೇ ಹಿಮಾಲಯದ ಸನ್ನಿಧಿಯಲ್ಲಿ ನನ್ನ ಎರಡನೇ ಚಾರಣ ಶುರುವಿಟ್ಟುಕೊಂಡಿತು.

ಮೊದಲ್ಗೊಂಡ ಮಂದ್ರ:-


ತಿಂಡಿ ತಿಂದು, ಚಪಾತಿ ಕಟ್ಟಿಸಿಕೊಂಡು ಪೈನ್ ಮರಗಳ ಸೆರಗಿಗೆ ಬಿದ್ದೆವು. ಪ್ರಪಾತಕ್ಕೆ ಬೋರಲು ಬಿದ್ದ ದಾರಿಗಳಲ್ಲಿ ಉಸಿರು ಬಿಗಿ ಹಿಡಿದು 12 ಕಿ.ಲೋ ಮೀಟರ್ ಜೀಪ್ಸಿಯಲ್ಲಿ ಪ್ರಯಾಣಿಸಿ ತಲೂಕಾ ಎಂಬ ಪುಟ್ಟ ಹಳ್ಳಿ ತಲುಪಿದೆವು. ಹನುಮನ ಜಾತಿಯ ಇಬ್ಬರು  ಜಿಪ್ಸಿ ಮೇಲೇರಿ ಕುಳಿತರು! ಮಂಗನಂತೆ ಎಗರಾಡುವ ನಮ್ಮ ಜೀಪು ತೊರೆಗಳ ಹತ್ತಿ ಇಳಿಯಿತು. ಕೆಳಗೆ ನೂರಾರಡಿಯ ಪ್ರಪಾತ, ಜೀವ ಒಮ್ಮೆಗೆ ಜಗ್ ಎಂದು ತಂದೆ, ತಾಯಿ, ಹೆಂಡತಿ, ಮಕ್ಕಳ ನೆನಪು ಮಾಡಿ ಕೊಟ್ಟಿತು. ಅಂತೂ ಅವನ್ನೆಲ್ಲಾ ದಾಟಿಕೊಂಡು ಕೇವಲ ಐದಾರು ಮನೆಗಳಿರುವ ಪುಟ್ಟ ಪುಟಾಣೀ ಹಳ್ಳಿ ತಲೂಕಾ ತಲುಪಿದೆವು. ಇಲ್ಲಿಂದಲೇ ನಮ್ಮ ಮೆರವಣಿಗೆ ಮೊದಲ್ಗೊಂಡಿತು.

ಆಕಾಶದ ಬಿಂಬ ಹರಿವ  ಜಲದಲಿ...


ಚಡ್ಡಿ ಹಾಕದ ಮಕ್ಕಳೆಲ್ಲಾ ಪ್ಯಾಷನ್ ಷೋಗೆ ನಿಂತಂತೆ ನಮ್ಮ ಕೆಮಾರಾಗೆ ಪೋಸು ಕೊಟ್ಟರು! ಮಕ್ಕಳ ದರ್ಶನ ಪಡೆದು ಚಾರಣ ಪ್ರಾರಂಬಿಸಿದೆವು!
ಎಡಕ್ಕೆ ಸುಪಿನ್ ನದಿ. ಬಲಕ್ಕೆ ಫೈನ್ ಮರಗಳ ಕಾಡು. ಸುತ್ತಲೂ ಕಾಡು ಹೂಗಳ ಮೆರವಣಿಗೆ. ಹಿಮಾಲಯದ ಹಕ್ಕಿಗಳ ಇಂಚರ. ಹಿಮ ಸುಂದರಿಯರ ತೆಕ್ಕೆಯಲ್ಲಿ ಮೋಹಿತರಾಗಿ, ಸಾಮಾನು ಹೊತ್ತ ಹೇಸರಗತ್ತೆಗಳು ನಮ್ಮ ಜೊತೆ ಪೈಪೋಟಿಗೆ ಬಿದ್ದು ಗುಡ್ಡ ಏರತೊಡಗಿದೆವು. ಐದಾರು ಸಣ್ಣ ದೊಡ್ಡ ತೊರೆಗಳನ್ನೆಲ್ಲಾ ಹತ್ತಿಳಿದು ಅತ್ಯಂತ ಸಫಾಟಾದ ಜಾಗದಲ್ಲಿ ಕುಳಿತು ಚಾರಣಿಗರು ಫೋಟೊಗೆ ಫೋಸ್ ಕೊಡತೊಡಗಿದರು. ಅಲ್ಲೇ ಬಲದ ಏರಿನಲ್ಲಿ ದೊಡ್ಡ ಗುಡ್ಡದಲ್ಲಿ ಡಟ್ಮೀರ್ ಎಂಬ ಪುಟ್ಟ ಹಳ್ಳಿ. ಕತ್ತೆತ್ತಿ ನೋಡಿದೆ ದೊಡ್ಡ ಬೆಟ್ಟದ ನೆತ್ತಿಯಲ್ಲಿತ್ತು! ಮನುಷ್ಯನ ಇಚ್ಚಾಶಕ್ತಿಗೆ ಚಕಿತನಾದೆ.


ತಲೂಕಾ ಹಳ್ಳಿಯ ಝರಿಯೊಂದರಲ್ಲಿ ತಯಾರಾದ ವಿದ್ಯುತ್ ಈಗಷ್ಟೇ ಅಲ್ಲಿವರೆಗೆ ಬಂದಿತ್ತು. ಭಾನುವಾರ ಬೆಳಿಗ್ಗೆ ರಜೆ ಮುಗಿಸಿ ರಣಬೀರ್ ಎಂಬ ಡಟಮೀರ್ ಹಳ್ಳಿಯ ಹುಡುಗ ದೂರದ ಡೆಹ್ರಾಡೂನ್ಗೆ ಎಂ. ಎ ಮಾಡಲು ಹೊರಟ್ಟಿದ್ದ. ಕಷ್ಟ ಸುಖ ವಿಚಾರಿಸಿದೆ. ಪುಣ್ಯಾತ್ಮ ಬರೋಬ್ಬರಿ 25 ಕಿಲೋ ಮೀಟರ್ ನಡದೇ ಹೊರಟಿದ್ದ! ನಾಚಿಕೆ ಸ್ವಭಾವದ ಹಳ್ಳಿ ಹೆಂಗಸರು ಬೆಳ್ಳಂಬೆಳಿಗ್ಗೆ ಎದ್ದು ಏನೋ ಕೊಯ್ದು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಮಕ್ಕಳೂ ತಮ್ಮ ಬೆನ್ನ ಹಿಂದೂ ಒಂದೊಂದು ಬುಟ್ಟಿ ನೇತಾಡಿಸಿಕೊಂಡಿದ್ದರು. ಅವರಲ್ಲಿ ಕೇಳ ಬೇಕಿದ್ದೆಲ್ಲಾ ನನ್ನಲ್ಲೇ ಕರಗಿತು.
ಪೌನಿಗರಾತ್ ಎಂಬ ಹಳ್ಳಿಯೊಂದು ಸುಪಿನ ನದಿಯ ಎಡ ದಂಡೆಯಲ್ಲಿತ್ತು. ಅಲ್ಲೇ ಸಿಕ್ಕವನೇ ಸುರೇಶ್ ಎಂಬ ದನಗಾಹಿ ಮತ್ತು ಪುಟಾಣಿ ಮಕ್ಕಳು. ಸಕ್ಕರೆಯ ಸಹವಾಸವೇ ಇಲ್ಲದ ಇಲ್ಲಿನ ಮಕ್ಕಳು ಚಾಕಲೇಟ್ಗಾಗಿ ಹಪಹಪಿಸುತ್ತಿದ್ದರು. ಶಾಲೆ ಇದೆಯೇ ಇಲ್ಲಿ ಎಂದು ಸುರೇಶ್ನಲ್ಲಿ ವಿಚಾರಿಸಿದೆ. 200 ಮಕ್ಕಳು ಮತ್ತು 8 ಜನ ಶಿಕ್ಷಕರಿರುವ ಶಾಲೆಯೊಂದು ಇಲ್ಲಿದೆ. ಎಂದು ನನ್ನ ದಂಗುಬಡಿಸಿದ! ದೂರದ ಓಸ್ಲಾ ಎಂಬ ಹಳ್ಳಿಯಿಂದ ಮಕ್ಕಳು ಶಾಲೆಗೆ 5 ಕಿ. ಮೀ ನಡೆದೇ ಬರುತ್ತಾರೆ. ಎಂದ. ಶಾಲೆಗೆ ಭೇಟಿ ಕೊಡಬೇಕೆನಿಸಿತು ಆದರೆ ಭಾನುವಾರ. ಸಂಜೆ ಐದಕ್ಕೆ ಕ್ಯಾಂಪ್ ತಲುಪಿದಾಗ ಬಿಸಿ ಬಿಸಿ ಬ್ರೆಡ್ ಬೊಂಡಾ ಚಳಿಯಲ್ಲಿ  ನಡುಗುತ್ತಾ ನಮಗಾಗಿ ಕಾದಿತ್ತು.
ಪುರಾತನ ಹಳ್ಳಿ ಓಸ್ಲಾದೆಡೆಗೆ
ಬೆಳ್ಳಂಬೆಳ್ಳಿಗ್ಗೆ ಬೇಡವೆಂದರೂ ತಣ್ಣೀರಲ್ಲಿ ಬ್ರಷ್ ಮಾಡಿದ ನಮ್ಮೆಲ್ಲರ ಬೆರಳು ಬೆಂಡೆಕಾಯಿಯಂತಾಗಿತ್ತು. ಮೈಚೆಲ್ಲಿ ಮಲಗಿದ್ದ ತಣ್ಣನೆ ಸೂರ್ಯ ಆಗಸ್ಟೇ ಆಗಮಿಸಿದ್ದ. ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದ ಹಿಮಾಲಯದ ಅತಿ ಪುರಾತನ ಪುಟಾಣಿ ಹಳ್ಳಿ ಓಸ್ಲಾದ ತುಡಿತವೇ ನನ್ನನ್ನು ಇಲ್ಲಿಗೆ ಎಳೆದು ತಂದಿದ್ದು. ಹಾಗಾಗಿ ಪತರುಗುಟ್ಟಿಸುವ ಚಳಿ ಲೆಕ್ಕಿಸದೇ ಓಸ್ಲಾದೆಡೆಗೆ ದೌಡಾಯಿಸಿದೆ.


400-500 ವರ್ಷಗಳ ಹಿಂದೇ ಇಲ್ಲಿಗೆ ಬಂದು ನೆಲಸಿದವರು! ಕುರಿ, ಹಸು ಸಾಕಣೆ, ಕೃಷಿ ಇವರ ಪ್ರಮುಖ ಉದ್ಯೋಗ. ಕುರಿ ಕಾಯುವವರು ಕುರಿಗಳನ್ನು ಮೇಯಿಸಲು ಹೊರಟಿದ್ದರಷ್ಟೇ. ಅವರಲ್ಲಿ ಹೆಣ್ಮಕ್ಕಳೂ ಇದ್ದರು. ಕ್ಯಾಮರ ಕ್ಲಿಕ್ಕಿಸುತ್ತಲೇ ನಾಚುತ್ತಿದ್ದರು. ಕೆಲವರಂತೂ ರಾತ್ರಿ ಬಿದ್ದ ಚಳಿಗೆ ಏಳುತ್ತಿದ್ದರಷ್ಟೇ. ಚಳಿ ಕಾಯಿಸುತ್ತಾ ಕುಳಿತ ಮಕ್ಕಳು , ಹೆಂಗಸರು, ಗಂಡಸರು ನಮ್ಮನ್ನೇ ನೋಡುತ್ತಿದ್ದರು. ಏನು ವಿಚಿತ್ರ ಜನ ಇವರು ಎಂದುಕೊಂಡರೋ ಏನೋ? ಇರಲಿ.


ಹರಿಯಾಣದ ಹುಡುಗಿಯೊಬ್ಬಳು ಈ ಹಳ್ಳಿಯವನನ್ನೇ ಮದುವೆಯಾಗಿ ಇಲ್ಲೇ ಇದ್ದಾಳೆಂದು ಗೈಡ್ ಹೇಳಿದ. ಬದುಕೆಷ್ಟು ವಿಚಿತ್ರವೆನಿಸಿತು. ಇಲ್ಲಿ ಆಚರಿಸುವ ಐದು ಹಬ್ಬಗಳ ಹೆಸರು ಹೇಳಿದ ಈಗ ಒಂದೂ ನೆನಪಿಲ್ಲ. ಇಲ್ಲ್ಲಿನ ಜನ ಕಷ್ಟ ಸಹಿಷ್ಣುಗಳು. ಹನ್ನೊಂದರ ಸುಮಾರಿಗೇ ದೊಡ್ಡ ದೊಡ್ಡ ಹೊರೆ ಹುಲ್ಲು ಹೊತ್ತು ಮನೆ ಕಡೆ ಬರುತ್ತಿದ್ದರು. ಅಂಜಲಿ ಎಂಬ ಪುಟ್ಟ ಹಳ್ಳಿ ಹುಡುಗಿ ಜೊತೆಯಾದಳು. ದೊಡ್ಡದೊಂದು ಕೋಲು, ಕತ್ತಿ ಹಿಡಿದು ಕಲ್ ಕತೀಯಾಧಾರ್ ಕಡೆ ಹೊರಟಿದ್ದಳು.

ಮನೆಗಳ ವಿನ್ಯಾಸ

ಇಲ್ಲಿನ ಮನೆಗಳು ನಾಲ್ಕು ಹಂತದವು. ಮೊದಲನೇ ಹಂತ ದನಗಳಿಗೆ. ಎರಡನೆಯದು ಕುರಿಗಳಿಗೆ. ಮೂರನೆಯದು ಹುಲ್ಲು ಮತ್ತಿತರ ಸಾಮಾನು ತುಂಬಿಸಲು. ಕೊನೆಯದ್ದು ವಾಸಕ್ಕೆ. ಹಿಮ ಸುರಿವ ಡಿಸೆಂಬರ್ನಿಂದ ಮಾರ್ಚನ ಕೊನೆಯವರೆಗೆ ಇಲ್ಲಿನವರಿಗೆ ದಿವ್ಯ ಏಕಾಂತ.

ಸಾರ್ಥ

ದುರ್ಯೋಧನನ  ಮಂದಿರದಲ್ಲಿ!



ಇಲ್ಲಿ ಭಯ ಭಕ್ತಿಯಿಂದ ದುಯರ್ೋದನನಿಗೆ ನಮಿಸುತ್ತಾರೆ! ಅರೆರೆ ದುಯರ್ೋಧನನಿಗಾ ಎಂದು ಹುಬ್ಬೇರಿಸಬೇಡಿ. 'ಹುಚ್ಚು ಹಿಡಿಯಿತೇ?' ಎಂದು ಆಲೋಚಿಸದಿರಿ. ಇಂತಹ ಸಂಧಿಗ್ಧ ನಮಗೂ ಎದುರಾಗಿತ್ತು. ನಿಜ ಇಂತಹದೊಂದು ದೇವಾಲಯವಿದೆ. ಉತ್ತರಾಖಂಡದಲ್ಲಿ. ಅಪರೂಪಕ್ಕೆ ಅಪರೂಪ. ಇಂತಹ ವಿಶೇಷಗಳು ಹಿಮಾಲಯದ ಉದ್ದಗಲಕ್ಕೂ ಸಂಚರಿಸಿದ ಬೆಂಗಾಲಿ ಗೆಳೆಯ ಸುಭಾಸ್ ಒಮ್ಮೆ ವಿವರಿಸಿದ್ದ. 1988ರ ಸುಮಾರಿಗೆ ಆತ ಇಲ್ಲಿಗೆ ಬಂದಿದ್ದ! ಆಗಲೂ ಅದು ದುಯರ್ೋಧನನ ದೇವಾಲಯ! ಈ ದೇವಾಲಯ ನೋಡಲೇ ನಾನು ಬಂದಿದ್ದು. ಅಪಕೀತರ್ಿಗಂಜಿಯೋ ಏನೋ ಅದೀಗ ಶಿವನ ದೇವಾಲಯವೆಂದು ಹೇಳುತ್ತಾರೆ. ಅಸಲಿಗೆ ಇದು ದುಯರ್ೋಧನನ ದೇವಾಲಯವೇ?! ಪೂರ್ಣ ದೇವಾಲಯವನ್ನು ಮರದಿಂದ ನಿಮರ್ಿಸಲಾಗಿದೆ. ಹೊರ ಮೈಯನ್ನು ಸುಂದರ ಕೆತ್ತನೆಗಳಿಂದ ಸಿಂಗರಿಸಲಾಗಿದೆ.

ಹಿಮಾಲಯದ ದಿವ್ಯ ಏಕಾಂತದಲ್ಲಿ ಕರಗಿ:-




ದೇವಾಲಯ ದಾಟಿಕೊಂಡರೆ ಏರು ತಗ್ಗುಗಳ ಕಠಿಣ ಹಾದಿ. ಒಂದೆರಡು ಕಡೆ ಗುಡ್ಡ ಜರಿದಿತ್ತು. ಒಂದು ಹೆಜ್ಜೆ ತಪ್ಪಿದರೆ ನೇರ ಯಮಲೋಕದ ಹೆದ್ದಾರಿಗೆ.



ಇಂತಹ ದಾರಿಗಳ ದಾಟಿ ಕಲ್ ಕತಿಯಾಧಾರಾ ಎಂಬ ಕ್ಯಾಂಪ್ ಸೈಟ್ಗೆ ಬಂದಿಳಿದೆವು. ಎತ್ತರದ ಜಾಗದಲ್ಲಿ ನಮ್ಮ ಎರಡನೆಯ ಕ್ಯಾಂಪ್. ಬಿಸಿ ಬಿಸಿ ಮ್ಯಾಕರೋನಿ ನಮ್ಮ ಹೊಟ್ಟೆ ತಣಿಸಿತು.
ಪರ್ವತಗಳು ಫೋಟೊ ಪ್ರೇಮ್ ಹಾಕಿಸಿಕೊಂಡಂತೆ ಸಾಲಾಗಿ ನಮ್ಮೆದುರು ಕೈಕಟ್ಟಿ ನಿಂತಿದ್ದವು! ಎದುರಿನ ದೃಶ್ಯ ಬಣ್ಣಿಸಲಸದಳ. ಗುಟುರು ಚಳಿ ನಮ್ಮ ನಮ್ಮ ಗುಡಾರದೊಳ ಹೊಕ್ಕಿತು. ಚಳಿ ಓಡಿಸಲು ಸಣ್ಣ ಬೆಂಕಿ ಉರಿಸಿದೆವು. ಬೆಂಕಿಯ ಸುತ್ತಲು ಕೂತು ಕೆಲವರು ಅವರು ಬರೆದ ಕವನ ಓದಿ ಕಾವ್ಯದ ಮಳೆಯಲ್ಲಿ ಮಿಂದೆದ್ದೆರು. ಕಾವ್ಯ ಕಮ್ಮಟಕ್ಕೆ ಆಕಾಶದ ರಾಶಿ ರಾಶಿ ನಕ್ಷತ್ರಗಳೇ ಕೇಳುಗರು. ಕಣ್ಣೂರಲು ಒಂದೈದು ಸೆಂಟ್ಸ್ ಜಾಗ ಉಳಿಸದಂತೆ ನಕ್ಷತ್ರಗಳೇ ತುಂಬಿದ್ದವು. ಅಬ್ಬಾ ನಕ್ಷತ್ರ ಸಂತೆ! ಭಾವ ಪರವಶನಾದೆ. ಮಾಲಿನ್ಯರಹಿತ ಆಗಸ ನೋಡುವ ಆನಂದವ ಬಣ್ಣಿಸಲು ಸಾಧ್ಯವಿಲ್ಲ.
ಸಂಜೆ ಎಂಟಕ್ಕೆಲ್ಲಾ ಊಟ ಮುಗಿಸಿ ನಿದ್ರಾ ಚೀಲದೊಳಗೆ ಹೂತು ಹೋದೆವು. ಹಿಮಾಲಯದ ದಿವ್ಯ ಏಕಾಂತದ ತುಣುಕೊಂದು ನಿಮ್ಮ ಬಳಿಯೇ ಇರುವಂತಹ ಧನ್ಯತಾ ಭಾವ ನಮ್ಮನ್ನಾವರಿಸಿತು. ನಿದ್ದೆ ನಮ್ಮನ್ನು ಅವುಚಿಕೊಂಡದ್ದು ಗೊತ್ತಾಗಲೇ ಇಲ್ಲ.

ಹೂ ಹಾಸಿನ ಅಂಗಳದಲಿ ನಿಂತು...





ಹರ್ ಕಿ ದುನ್ ಶಿಖರ, ಆಟಾ ಪರ್ವತಗಳು ತಮ್ಮಿರುವನ್ನು ಮೊದಲ ಹೆಜ್ಜೆಗೇ ಸಾರಿದ್ದವು. ಹಿಮಾಲಯದ ಸುಂದರಿಯೊಬ್ಬಳು ತನ್ನ ಮಾಟ ತೋರುತ್ತಾ ಜಲಧಾರೆಯಾಗಿ ಹರಿಯುತ್ತಿದ್ದಳು. ಅವಳ ತೆಕ್ಕೆ ಬಳಸಿ, ಮರದ ಸಂಕ ದಾಟಿ ಏರುದಾರಿ ಏರಿದಾಗ ತೆರೆದುಕೊಂಡ ವಿಶಾಲ ಬಯಲ ತುಂಬ ಚಿಟ್ಟೆ ಹೂಗಳ ವನ! ವಿಶಿಷ್ಟ ಪುಷ್ಪಗಳ ಗಂಧಕ್ಕೆ ಮೂಗರಳಿ. ಮೈ-ಮನಗಳಳಿಗೆ ಪುಳಕ. ಎಡಕ್ಕೂ ಬಲಕ್ಕೂ ಹೂ ಹಾಸಿನ ದಾರಿ. ಮರಗಳೆಲ್ಲಾ ಗ್ರೀಷ್ಮ ಬರುವ ಸೂಚನೆಗೆ ಎಲೆ ಉದುರಿಸಿಕೊಂಡು ನಿಂತಿದ್ದವು.

ಹಳ್ಳಿಯ ಹುಡುಗಿ  ಅಂಜಲಿಯೊಂದಿಗೆ....

ಭಾರತದ ಅತಿ ಸುಂದರ ಚಾರಣಗಳಲ್ಲಿ ಹರ್ ಕಿ ದುನ್ ಕೂಡ ಒಂದು. ಇಲ್ಲಿಂದ ಮುಂದೆ ಸಿಗುವ ಅನೇಕ ಝರಿಗಳನ್ನು ದಾಟಿ ಒಂದು ಗಂಟೆಯಷ್ಟೊತ್ತಿಗೆ ಕೊನೆಯ ಕ್ಯಾಂಪ್ಗೆ ಬಂದು ತಲುಪಿದ್ದೆವು.
ಸ್ವರ್ಗಾ ರೊಹಿಣಿ ಶಿಖರ...

 ತಲುಪುತ್ತಲೇ ಬಿಸಿ ಬಿಸಿ ಊಟ ನಮ್ಮನ್ನು ಸ್ವಾಗತಿಸಿತು. ಎದುರಿಗಿದ್ದ ಹರ್ ಕಿ ದುನ್ ಮತ್ತು ಸ್ವಗರ್ಾರೋಹಿಣಿ ಪರ್ವತಗಳ ತಪ್ಪಲಿನಲ್ಲಿ ಮಗುವಿನಂತೆ ಬಟ್ಟಲು ಹರವಿಕೊಂಡು ಊಟ ಮಾಡಿದೆವು. ವಿಶಿಷ್ಟ ರುಚಿಯ ದಾಲ್ ಹೊಟ್ಟೆ ತಣಿಸಿತು. ಕ್ಯಾಂಪ್ ಪಕ್ಕದ
ಬೆಟ್ಟಗಳನ್ನೇರಿ ಸುತ್ತಲಿನ ನೋಟಕ್ಕೆ ಸಾಕ್ಷಿಯಾದೆವು. ಅಮ್ಮ ಹಚ್ಚಿಟ್ಟ ಹಣತೆಯಂತಾಗಿದ್ದ ಸೂರ್ಯ ಕಿರಣಕ್ಕೆ ಹರ್ ಕಿ ದುನ್ ಶಿಖರ ಬೆಳಗುತ್ತಿತ್ತು. ಯಾರೂ ಏರದ ಸ್ವಗರ್ಾರೋಹಿಣಿ ಶಿಖರ ಚಳಿಗೆ ಮೋಡ ಹೊದ್ದು ಮಲಗಲು ತಯಾರಾಗಿತ್ತು. ಸಂಜೆಯ ಬೆರಗನ್ನು ಕ್ಯಾಮರದಲ್ಲಿ ಹಿಡಿದಿಡಲು ಪ್ರಯತ್ನಿಸಿದೆ.

ಇಳಿ ಸಂಜೆ ಯಲಿ ಹರ ಕಿ ದುನ್ ಶಿಖರ ..


ಸಂಜೆಯ ಕೊನೆಯ ಕಿರಣಗಳ ಬೆಳಕಲ್ಲಿ ನಮ್ಮ ಶಿಬಿರ ...


ನಸುಕಿನಲ್ಲಿ ನಮ್ಮ ಶಿಬಿರ....

ಮಾರನೆಯ ದಿನ ನಸುಕಿಗೇ ಎದ್ದು ಸುಮಾರು ಏಳು ಕಿಲೋ ಮೀಟರ್ ದೂರದ ಗ್ಲೇಶಿಯರ್ ನೋಡಲು ಹೋಗಿ ಬಂದೆವು. ನಡುವೆ ಕಡೆದಾದ ಹಾದಿಯಲ್ಲಿ ನಾವು ಮುಂದೆ ಹೋಗಲೂ ಆಗದೇ ಹಿಂದೆ ಬರಲೂ ಆಗದೇ ಜಾಮ್ ಆದೆವು. ನಮ್ಮ ಟೀಂ ಲೀಡ್ ಬಂದು ನಮ್ಮನ್ನು ಮುಂದೆ ಕರೆದೊಯ್ದ. ಕೆಲವರು ಗ್ಲೇಶಿಯರ್ ವರೆಗೆ ಹೋಗಿ ಬಂದರು. ನಾವು ಮುಕ್ಕಾಲು ದಾರಿ ಸವೆಸಿ ಸ್ವಗರ್ಾರೋಹಿಣಿಯ ಸರಿ ಸುಮಾರು ಸಮೀಪದವರೆಗೆ ಹೋಗಿ ಹಿಂದಿರುಗಿದೆವು. ನೆನಪಿನೋಕಳಿಯಲ್ಲಿ ಮೀಯುವಂತೆ ಮಾಡಿದ ಚಾರಣ ಪುನಃ ಸಾಂಕ್ರಿಯಲ್ಲಿ ಕೊನೆಗೊಂಡಿತು.
ಒಂದಿಷ್ಟು ಪೂರ್ವತಯಾರಿ ಮತ್ತು ಮವತ್ತು ಸಾವಿರವಿದ್ದರೆ ಈ ಚಾರಣ ಮಾಡಿ ಮುಗಿಸಬಹುದು.


ಶ್ರೀಧರ್. ಎಸ್. ಸಿದ್ದಾಪುರ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ-576229

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...