Monday, December 28, 2020

ಜೀವಂತ ಸೇತುವೆಗಳ ಸೆರಗು!-ನಾನ್ ಬ್ಲಾಂಗ್!

ನಾಲಗೆ ಹೊರಳದ ನಾಡಿನಲ್ಲಿ ಮೂರು ದಿನ...

ಸಂಪುಟ-೩




ಅದೇಕೋ ಗೊತ್ತಿಲ್ಲ ಸಣ್ಣ ಸಣ್ಣ ಊರುಗಳ ಸೆಳೆತವೇ ವಿಚಿತ್ರ. ದೊಡ್ಡ ಶಹರಕ್ಕಿಂತ ಪುಟಾಣಿ ಊರುಗಳೇ ನನಗಿಷ್ಟ. ಒಂದೆರಡು ಅಂಗಡಿ ಬಿಟ್ಟರೆ ಮತ್ತೇನೂ ಇಲ್ಲಿಲ್ಲ!  ಮಿಕ್ಕೆಲ್ಲವೂ ಮೊಗೆವಷ್ಟು ಇವೆ.




ಎಲ್ಲರೂ ಎಲ್ಲರಿಗೂ ಪರಿಚಯಸ್ಥರು. ಅಪರಿಚಿತತೆ ಎಂಬುದೇ ಇಲ್ಲಿ ಇಲ್ಲ. ಮಳೆಗೆ ಮನ ತಣಿಸಿದ ಭಾವದಲ್ಲಿರುವ ಜನ. ಹಾಸಿ ಹೊದ್ದು ಮಲಗಿ ಮಿಗುವಷ್ಟು ಸಮಯ. ನೆಟ್ಟಿನಲೇ(ಇಂಟರ್ ನೆಟ್)  ನೇತಾಡಿಕೊಂಡಿರಬೇಕಾದ ಅಗತ್ಯತೆ ಇಲ್ಲ. ಡಾಟಾ ಮುಗಿವ ಚಿಂತೆ ಇಲ್ಲ. ಝರಿ, ಕೊಳ, ಹೊಳೆಯ ಸಾನಿಧ್ಯವಿದ್ದರಂತೂ ಇನ್ನೂ ಅಪ್ಯಾಯಮಾನ. ದೊಡ್ಡ ಸೌಲಭ್ಯಗಳೂ ಇಲ್ಲ. ಸಣ್ಣ ಊರು ಕೊಡುವ ಕುಷಿ ಮೆಟ್ರೋಪಾಲಿಟನ್
 ನೀಡದು. ಅಲ್ಲಿ ಎಲ್ಲವಿದ್ದು ಒಂಟಿ ಎಂಬ ಭಾವ. ಸಣ್ಣ ಊರುಗಳಲ್ಲಿ ಏನಿಲ್ಲದೆಯೂ ಸಂತೃಪ್ತ ಭಾವ. 
ಇಲ್ಲಿ ಸಣ್ಣ ಪುಟ್ಟ ಜಗಳಗಳಿರಬಹುದು. ಅದರ ಎರಡರಷ್ಟು ನೆಮ್ಮದಿ ಇದೆ. ದೈವತ್ವಕ್ಕೆ ಸಮಾನವಾದ ಶುಚಿತ್ವವಿದೆ. ಬೇಜಾರು ಕಳೆಯಲು ಹಸಿರುಕ್ಕಿಸುವ ಮರಗಳಿವೆ. ಸಂಬಂಧಗಳೂ ಮರಗಳಂತೆ ಹಸಿರಾಗಿವೆ. ನಾಳೆಗಳ ಬರವಸೆ ಇದೆ. ಆಪತ್ಕಾಲಕ್ಕಾಗುವ ನೆಂಟರಿದ್ದಾರೆ. ಇಂತಹ ಊರುಗಳಲ್ಲಿ ಹುಟ್ಟಿ ಬರಲು ಪುಣ್ಯ ಮಾಡಿರಬೇಕಷ್ಟೆ. ಇಂತಹ ಸಣ್ಣ ಊರಿನ ಸೆರಗಿಡದ ಹಸಿ ಬಿಸಿ ಅನುಭವವೇ ಈಗ ನಿಮ್ಮ ಮುಂದೆ.

ಗೆಳೆಯ ನಾಗರಾಜ್ ನಾನ್ ಬ್ಲಾಂಗ್ ಊರಿಗೆ ಹೋಗೋಣ ಎಂದು ಹೇಳಿದರೂ ಈ ಹೆಸರು ನನ್ನ ಸುಲಭದ ನೆನಪಿಗೆ ದಕ್ಕದು. ಶಿಲ್ಲಾಂಗ್ನಿಂದ ಡಾಕಿಗೆ ಹೋಗುವ ದಾರಿಯಲ್ಲೇ ಒಂದರ್ದ ಗಂಟೆಯ ದಾರಿಯಲ್ಲಿ ಚಲಿಸಿದರೆ ಪುಟಾಣಿ ಗ್ರಾಮ 'ನಾನ್ ಬ್ಲಾಂಗ್!'. ಹೆಸರ ತಜರ್ುಮೆಗೆ ನಿಲುಕದ ಹಳ್ಳಿ. ತಪ್ಪಿದ್ದರೆ ಕ್ಷಮಿಸಿ. ಕಾಡಿನ ಪುಟಾಣಿ ಬಳ್ಳಿ. ಊರಿನ ಅನುಕೂಲಕ್ಕೆ ಮಾಡಿಕೊಂಡ ವಿಚಿತ್ರ ಜೀವಂತ ಸೇತುವೆಗಳನ್ನು ಮಾತನಾಡಿಸುವ ಮಾತಾಗಿತ್ತು. 
 ನಾಗರಾಜ್ನ 'ಖಾಸಿ' ಭಾಷೆ ಮಾತನಾಡಬಲ್ಲ ಗೆಳೆಯರೂ ಬಂದಿದ್ದರು. ಶಿಲ್ಲಾಂಗನ ಮುಖ್ಯ ರಸ್ತೆಯಿಂದ ಬಲಕ್ಕೆ ಹೊರಳಿ ಹರಡಿಕೊಂಡ ಕಾಲು ಹಾದಿ ಹಿಡಿಯಲು ಸುಮಾರು ಅರ್ಧ ತಾಸು ಬೇಕಾಯ್ತು. ಊರ ಬಾಗಿಲಲಿ ಸಿಕ್ಕ ಇಬ್ಬರು ಖಾಸಿ ಮಂದಿಯನ್ನು ಜೊತೆ ಮಾಡಿಕೊಂಡೆವು.
ನೀರವ ಏಕಾಂತದಲಿ ಇನಿಯನ ಬರುವಿಕೆಗೆ ಕಾದು ಕುಳಿತಂತಿರುವ ಒಂಟಿ ಮನೆಗಳು. ಮನೆ ಎದುರಿಗೆ ಬಿದರ ಬೇಲಿಯಲಿ ನಿಂತು ಇಣುಕುವ ಪುಟಾಣಿ ಪೋರರು. ರಗ್ಗು ಹೊದ್ದುಕೊಂಡೆ ಬೀಡಿ ಎಳೆವ ಮುಗ್ಧ ಜನರ ವಿಚಿತ್ರ ನೋಟ. 
ಚಳಿಗೆ ಪ್ರಿಯತಮೆಯ ಅಪ್ಪುಗೆಯಂತಹ ಸೂರ್ಯ ಮಾಮನ ಬಿಸಿಲು. ಪ್ರತಿಯುಸಿರಿಗೂ ಏಲಕ್ಕಿಯ ಘಮಲು. 




ದೂರದಲ್ಲಿ ಕಾಣುವ ಹಳ್ಳಿ. 
ಅರಳಿನಿಂತ ಮುಖಾರವಿಂದವನು ಹೊತ್ತು 9ರ ಹೊತ್ತಿಗೆ ನಾನ್ ಬ್ಲಾಂಗ್ನ ಹೊರಳು ದಾರಿ ಎದುರಿಗಿದ್ದೆವು. ನಿರುದ್ದೀಶವಾಗಿ ನೇತುಬಿದ್ದ 'ನಾನ್ ಬ್ಲಾಗ್' ಹಳ್ಳಿಗೆ ದಾರಿ ಎಂಬ ಫಲಕ. ಮಳೆರಾಯ ರಾತ್ರಿ ಬಂದು ದಾರಿ ತೊಳೆದಿಟ್ಟಿದ್ದ. ಕೆಂದುಟಿ ಹೊತ್ತು, ನಮ್ಮನ್ನು ಹಿಂದಿಕ್ಕಿ, ಮತ್ತೆಲ್ಲೋ ಹೊರಟ ಅರವತ್ತರ ಹರಯದ ಯುವತಿ! ನಮಗೂ ಮೇಘಾಲಯದ ಎಲೆ ಅಡಿಕೆ ತಿನ್ನಿಸಿದಳು. ಬೆನ್ನ ಮೇಲೆ ಬೆತ್ತದ
 ಚೀಲ. ಉಳಿದ ಪ್ರಶ್ನೆಗಳ ಸರಪಳಿ. ಭಾಷಾ ತೊಡಕು.
ಸರಿ ಸುಮಾರು 5-6 ಕಿ.ಮೀ ಉದ್ದದ ಪ್ರಪಾತದ ಹಾವಿನ ಹಾದಿಗೆ ಅವರಿಬ್ಬರು ತಂದು ನಿಲ್ಲಿಸಿ ಇಳಿಯಿರಿ ಎನ್ನುವುದೆ! ಅಕ್ಷರಶಃ ಆತ್ಮಹತ್ಯೆಗೆ ಸಜ್ಜಾದವರಂತೆ ನಿಂತುಬಿಟ್ಟೆವು. ನಮ್ಮ ಗ್ರಹಚಾರಕ್ಕೆ ಬುತ್ತಿ ಗಂಟು ಮರೆತು ಗಾಡಿಯಲ್ಲೇ ಬಿಟ್ಟು ಬಂದಿದ್ದೆವು. ಇನ್ನೇನು ಮಾಡುವುದು ಬಂದಾಯಿತೆಂದು ಏರಿಳಿವ ಸಾಹಸಕ್ಕೆ ಅಂಟಿಕೊಂಡೆವು. 
ಬಿದಿರ ಹಿಂಡಿಲುಗಳ ನಡುವೆ ಪ್ರಪಾತದ ಹಾದಿ ನುಂಗುವಂತೆ ಬಾಯಿ ಕಳೆದಿತ್ತು. ಅಬ್ಬಾ ಎನಿಸುವ ಇಳಿಜಾರಿಗೆ ಮುಖಮಾಡಿದ್ದೆವು. ಹೆಜ್ಜೆ ಜಾರಿದರೆ ಪ್ರಪಾತದ ಆ ತುದಿಗೆ. ಯಾರೋ ಬೇಕಂತಲೇ ಬೇಕಾಬಿಟ್ಟಿ ಎಸೆದ ಅನಾಥ ಅಂಕುಡೊಂಕಿನ ನಡು ಹರಿವ ನಟೋರಿಯಸ್ ಹಾದಿ. 


ಇಳಿಕೆಯೇ ಎದೆ ಹಾರಿಸುತ್ತೆ.. 

ಎಲ್ಲೋ ಹೊರಟ ಮುದುಕಿ.. 
ಹಳ್ಳಿಯಿಂದ ಕೇಳುವ ಮಕ್ಕಳ ಕೇಕೆ. ದೊಡ್ಡವರ ದನಿಯ ಪ್ರತಿಧ್ವನಿ! ಗಾಳಿಗೆ ಮೂಗೊಡ್ಡಿದರೆ ಕಾಡು ಏಲಕ್ಕಿಯ ಘಮಲು. ಇಳಿವ ಪ್ರತಿ ಹೆಜ್ಜೆಯಲೂ ಸೊಂಟದ ನೆಟ್ಟು ಬೊಲ್ಟುಗಳ ಟಿಕ್ ಟಿಕ್ ಸದ್ದು. ಬಾಕಿ ಎಲ್ಲಾ ಮೌನ.
	ಮೊದಲಿದ್ದ ದೊಡ್ಡ ಮರಗಳ ದಟ್ಟನೆ ಕಡಿಮೆಯಾಗಿ ಬಿದಿರ ಹೊದ್ದ ಬೆಟ್ಟ ಸಾಲು ಶುರುವಾಗಿತ್ತು. ಇಲ್ಲಿನ ಬಿದಿರಿಗೆ ಅದರದೇ ಆದ ಅಸ್ಮಿಯತೆ ಇದೆ. ತೀರಾ ಉದ್ದವಾಗಿ ಬೆಳೆಯದ ಕುಳ್ಳ ಜಾತಿಯ ಸದೃಡವಾದ ಬಿದಿರು ಇಲ್ಲಿನದು.  ಸ್ಥಳೀಯ ಹೆಂಗಸರು ಮತ್ತು ಗಂಡಸರು ಎಲೆ ಅಡಿಕೆ ಜಗಿಯುತ್ತಲೊ, ಹಾಡು ಕೇಳುತ್ತಲೊ, ಕೆಲವರು ಮಕ್ಕಳನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಂಡು ಆರಾಮಾಗಿ ಇಳಿದು ಹೋಗುತ್ತಿದ್ದರು! ಕೆಲವರು ನಿಧಾನಕ್ಕೆ ಏರಿ ಬರುತಲಿದ್ದರು! ಅವರು ತಮ್ಮೊಳಗೆ ಚಯಾ ಪಯಾವೆಂದು ಹರಟುತ್ತಿದ್ದ ಖಾಸಿ ನುಡಿಗಳೊಂದೂ ನನ್ನ ಮಿದುಳಿನಲ್ಲಿ ದಾಖಲಾಗಲೇ ಇಲ್ಲ! ನಮ್ಮ ನಡುವಿನ ಸಾಮಾನ್ಯ ಶಬ್ದ ಶಿಲ್ಲಾಂಗ್ ಒಂದೇ ಎಂದು ಗೆಳೆಯ ನಾಗರಾಜ್ ತಮಾಷಿ ಮಾಡುತ್ತಾ ಇಳಿಯ ತೊಡಗಿದೆವು. ಪುಣ್ಯಕ್ಕೆ ಶಿಲ್ಲಾಂಗ್ ಒಂಟಿ ಪದವು ನಮ್ಮ ನಾಲಗಗೆ ತೊಂದರೆ ಕೊಡದೆ ಉಳಿದು ಕೊಂಡಿದ್ದು ನಮ್ಮ ಅದೃಷ್ಟವೇ!

ಇಳಿಯುವ ಸರ್ಕಸ್ ನಲ್ಲಿ ನಿರತ ನಮ್ಮ ಗುಂಪಿನ ಲಕ್ಷ್ಮೀ ನಾರಾಯಣ್ 


ಬಿದಿರ ಹಿಂಡಲುಗಳ ನಡುವಿನ ಹರ ದಾರಿ. .. 

ಅರಳಿನಿಂತ ಕಾಡು ಹೂ..  





ಖಾಸಿ ಜನಾಂಗದ ಅಜ್ಜನೊಬ್ಬ ನಮ್ಮಿಬ್ಬರನ್ನು ( ನಾನು ಗೆಳೆಯ ನಾಗರಾಜ್) ತಬ್ಬಿಕೊಂಡು ಖುಷಿಪಟ್ಟ! ಕಣಿವೆಯ ಎಡ ಮತ್ತು ಬಲ ಮಗ್ಗಲುಗಳಲ್ಲಿ ಜೀವಂತ ಸೇತುವೆಗಳ ತೋರಣಗಳನ್ನೇ ನಿಮರ್ಿಸಿದ್ದಾರೆ ಇಲ್ಲಿನ ಸ್ಥಳೀಯರು. ಅರ್ಧ ದಾರಿಗೆ ಕ್ರಮಿಸುತ್ತಲೆ ನಮ್ಮ ತಂಡದ ಲಕ್ಷೀ ನಾರಾಯಣ್ ದಾರಿ ತಪ್ಪಿ ಮುಂದೆ ಹೋಗಿದ್ದರು. ಜೊತೆಯಾದ ಸ್ಥಳೀಯ ಖಾಸಿ ಗೆಳೆಯ 'ಸ್ಮಾಯಿಲ್' ಆತನನ್ನು ಕರೆತರಲು ಪುಟ ಪುಟನೇ ಕೆಳಗೋಡಿ ಕ್ಷಣಾರ್ಧದಲ್ಲಿ ಮೇಲೆ ಬಂದಿದ್ದ. ಇನ್ನೊಬ್ಬ ನಮ್ಮ ಖಾಸಿ ಜೊತೆಗಾರ 'ಸಿಮಜಿನ್' ಕೈಲ್ಲೊಂದು ವಿಚಿತ್ರ ಕತ್ತಿ ಯಾವಾಗಲೂ ತೊನೆದಾಡುತ್ತಲೇ ಇರುತ್ತಿತ್ತು. ಆತ ಮೇಲೆ ಬರುವುದರೊಳಗೆ ಎರಡು ಬೀಡಿ ಎಳೆದು ಬಿಸಾಕಿದ್ದ ಆಸಾಮಿ. 

ಬೆರಗಿನ ಬೇರುಗಳ ಮಾಯಾ ಲೋಕ:-

ಲಕ್ಷ್ಮೀ ನಾರಾಯಣ್ ಮೇಲೆ ಬರುತ್ತಲೇ ಆತನನ್ನು ಜೀವಂತ ಸೇತುವೆಗಳಿರುವ ದಾರಿಗೆ ಹಚ್ಚಿದೆವು. ಇಡಿ ಊರಿಗೂರೇ ಹಳ್ಳ ಕೊಳ್ಳ. ಈ ಕೊಳ್ಳಗಳನ್ನು ದಾಟಿಕೊಳ್ಳಲು ಅವರೇ ರಚಿಸಿಕೊಂಡ ನೂರಾರುವರ್ಷ ಹಳೆಯ ಜೀವಂತ ಸೇತುವೆಗಳು. ಮನುಜನ ಸೃಜನಶೀಲತೆಯ ಪರಾಕಾಷ್ಠೆ. ಸಿಮೆಂಟು ರಾಡುಗಳಿಲ್ಲದ ಕಾಲದಲ್ಲಿ ಬೇರು ನಾರುಗಳನ್ನು ಪಳಗಿಸಿದ ಪರಿ ಅನನ್ಯ. ಆಲದಂತಹ ಮರಗಳನ್ನು ಬಿದಿರಿನ ಬೊಂಬಿನೊಳಗೆ ತೂರಿಸಿ ಮತ್ತೊಂದು ಕಡೆ ಬರುವಂತೆ ನೋಡಿಕೊಳ್ಳುವರು. ಹೀಗೆ ತೂರಿದ ಬೇರಿಗೆ ಆಚೆ ಕಡೆಯ ಮತ್ತೊಂದು ಬೇರಿನೊಂದಿಗೆ ಹೆಣಿಗೆ ಹಾಕಲಾಗುತ್ತದೆ. ಅಂತಹುದೇ ಇನ್ನೊಂದು ಮರದ ಬೇರನ್ನು ಆಚೆಯ ತುದಿಯಿಂದ ಇಚೆಗೆ ಹರಿಯ ಬಿಡಲಾಗುತ್ತದೆ. ಒಟ್ಟು ಎರಡು ದೊಡ್ಡ ಬೇರುಗಳ ಮಹಾ ಜಾಲವೇರ್ಪಟ್ಟು ಒಂದರೊಳಗೆ ಬೆಸೆದು ಸೇತುವೆ ತಯಾರಾಗುತ್ತದೆ. ಕಾಲದ ತೆಕ್ಕೆಯಲಿ ಕರಗದ ಈ ಸೇತುವೆಗಳು ಇನ್ನೂ ಜೀವಂತ. ಇಂತಹ 25 ಸೇತುವೆಗಳಿವೆ ಎಂದ ಖಾಸಿ ಮಾರ್ಗದರ್ಶಕ ಗೆಳೆಯ! ಪ್ರತೀ ಸೇತುವೆಗೂ ಒಂದೊಂದು ಹೆಸರು. ನಾಮಫಲಕ ತೂಗುಹಾಕಲಾಗಿದೆ. ಕೆಲವು ಬೋಡರ್ುಗಳು ಮಳೆ ಗಾಳಿಗೆ ಹಾರಿ ಹೋಗಿವೆ. ಹೀಗೆ ಒಂದಾದ ಮೇಲೊಂದರಂತೆ 8 ಜೀವಂತ ಸೇತುವೆಗಳನ್ನು ನೋಡಿದೆವು. ಪ್ರತಿಯೊಂದು ಮತ್ತೊಂದರಂತಿಲ್ಲ! ಕೊನೆಗೆ ನೋಡಿದ ಎಂಟನೆಯ ಸೇತುವೆಯಂತೂ ಅತ್ಯದ್ಭುತ!





ಊಟವಿಲ್ಲದೆ ಹೊಟ್ಟೆ ಚುರುಗುಟ್ಟುತಲಿತ್ತು. ಅಂತೂ ಸರಪಂಚನ ಮನೆಯಲ್ಲಿ ಚಹ ಸತ್ಕಾರವಾಯಿತು. ಚಹದ ಜೋಡಿ ಬಿಸ್ಕೀಟು ಬಂತು. ಮುಲಾಜಿಲ್ಲದೆ ಹೊಟ್ಟೆಗಿಳಿದ ಬಿಸ್ಕೀಟುಗಳ ಲೆಕ್ಕ ಸಿಕ್ಕಲಿಲ್ಲ. ಮತ್ತೆ ಆಸಾಮಿ ಬಿಸ್ಕೀಟು ಬೇಕೆಂದರೆ ಬರೋಬ್ಬರಿ 4 ರಿಂದ 5 ಗಂಟೆ ನಡೆಯಲೇಬೇಕು. ದುಡ್ಡು ಕೊಟ್ಟರೆ ಬೇಡವೆಂದ. ಪಾಪದವ! 'ನೀವು ನನ್ನ ಅತಿಥಿಗಳು ನಿಮ್ಮಲ್ಲಿ ದುಡ್ಡು ತೆಗೆದುಕೊಳ್ಳುವುದಾ?' ಅವನ ಮುಗ್ಧ ಪ್ರಶ್ನೆ. ಅತಿಥಿ ದೇವೋಭವ. ಹಾಂ ಹೇಳುವುದನು ಮರೆತೆ ಈ ಜಾಗದಲ್ಲೇ ಗುಡ್ಡಗಾಡು ಓಟ ನಡೆಯುವುದು! ನಡೆಯುವಂತಿಲ್ಲ ಓಡಬೇಕು. ಹ್ಹ ಹ್ಹ. ನನ್ನಂಥವರಿಗಲ್ಲ ಬಿಡಿ. ಗುಡ್ಡ ಹತ್ತಿಳಿಯುವುದೇ ಕಷ್ಟ! ಹಂಬಲದ ಬೆಂಬಲವೊಂದೇ ನನ್ನ ಪಾಲಿಗೆ ಉಳಿದಿರುವ ಕೃತತ್ವ ಶಕ್ತಿ.




















ಪೂವರ್ೋತ್ತರ ರಾಜ್ಯಗಳಲ್ಲಿ ಹಗಲು ಬೇಗ ಇಳಿಯುವುದರಿಂದ ಮೂರಕ್ಕೆ ವಾಪಾಸು ಹೊರಡಲೇ ಬೇಕಾಯ್ತು. ದಾರಿ ಸನಿಹದ ಎರಡು ಬಿಳಲುಗಳ ಸೇತುವೆಗೆ ಇನ್ನೊಮ್ಮೆ ಬರುತ್ತೇವೆಂದು ನಮ್ಮೂರಿನ ದಾರಿ ಹಿಡಿದೆವು. ದಾರಿಯುದ್ದಕ್ಕೂ ತಂದ ಉಂಡೆ ಚಕ್ಕುಲಿಗಳನ್ನು ಹೆಗ್ಗಣಗಳಂತೆ ಹೊಡೆಯುತ್ತಾ, ಹರಟುತ್ತಾ ಗುಡ್ಡವೇರಿದೆವು. ಗುಡ್ಡದ ತುದಿಯಲ್ಲೊಮ್ಮೆ ಕತ್ತಲಾದುದರಿಂದ ದಾರಿ ತಪ್ಪಿ ಮತ್ತೆ ಸರಿ ದಾರಿಗೆ ಬಂದೆವು. ಸುಂದರ ಸೂರ್ಯ ಮಾಮ ಕೆಲಸ ಮುಗಿಸಿ ಮನೆಗೆ ಹೊರಟಿದ್ದ. ಸೂರ್ಯ ಮಾಮನ ಚಂದದ ಪಟ ಒಂದೆರಡು ನೆನಪ ಜೋಳಿಗೆಗೆ ಹಾಕಿಕೊಂಡೆ. 6 ಗಂಟೆಯ ಕಡು ಕತ್ತಲೆಗೆ ಬೆಟ್ಟದ ನೆತ್ತಿಯಲ್ಲಿದ್ದೆವು. ಕಾಲು ಮತ್ತು ಸೊಂಟ ಯಾವೊತ್ತೊ ನನ್ನ ಮಾತು ಕೇಳುವುದನ್ನು ನಿಲ್ಲಿಸಿಯಾಗಿತ್ತು!
	ಸ್ಫಟಿಕ ಶುಭ್ರ ನೀರಿನ ಇಲ್ಲಿನ ಜಲಧಾರೆಗಳನ್ನು ನೋಡುವ ಹಂಬಲದೊಂದಿಗೆ ಅಂದಿನ ದಿನಕ್ಕೆ ಮಂಗಳಹಾಡಿದೆವು. ನಿಮ್ಮ ಕಿಸೆಗೆ ಭಾರವಾಗದ ಅನೇಕ ಹೋಟೆಲುಗಳು ರೆಸ್ಟುರೆಂಟ್ಗಳು ಶಿಲ್ಲಾಂಗಿನಲ್ಲಿದೆ. ಯಾಕಿನ್ನು ತಡ?



ಶ್ರೀಧರ್. ಎಸ್. ಸಿದ್ದಾಪುರ.
						ರಥ ಬೀದಿ ಸಿದ್ದಾಪುರ.
						ಕುಂದಾಪುರ ತಾಲೂಕು
						ಉಡುಪಿ ಜಿಲ್ಲೆ-576229.

Wednesday, December 23, 2020

ಕಾಣದ ಕೀಟ ಲೋಕ..



ಸೂಕ್ಷ್ಮ ಅವಲೋಕಿಸುವವರಿಗೆ ಮಾತ್ರ ಪ್ರಕೃತಿಯ ತನ್ನ ವಿಸ್ಮಯಗಳನ್ನು ಬಿಟ್ಟು ಕೊಡುತ್ತೆ. ಇಲ್ಲಿ ಎಲ್ಲವನ್ನೂ ನಮ್ಮ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡುವಂತಿಲ್ಲ. ನೋಡುವುದರ ಹೊಸ ಅರ್ಥಕೊಡುವಂತೆ ನೋಡಬೇಕು. ಅತಿ ಸೂಕ್ಷ್ಮವಾಗಿ ಅವಲೋಕಿಸಿಬೇಕು. ಪುಸ್ತಕಗಳನ್ನು ಪುನರಾವಲೋಕನ ಮಾಡಬೇಕು, ಸಮಾನ ಮನಸ್ಕರೊಂದಿಗೆ ಚರ್ಚಿಸಬೇಕು ನಂತರವೇ ಒಂದು ನಿರ್ಧಾರಕ್ಕೆ ಬರಬೇಕು. ಹೀಗೆ ಮಾಡಿದಾಗಲೂ

 ಕೆಲವು ವಿಚಾರಗಳು ಗೊಂದಲ ಪೂರ್ಣವಾಗಿಯೇ ಉಳಿಯಬಹುದು.  



ಕಳೆದ ಮಳೆಗಾಲದಲ್ಲಿ ವಿಚಿತ್ರ ಜೀವಿಯೊಂದನ್ನು ಕಂಡೆ. ಬಸವನ ಹುಳುವೊಂದು ಸಣ್ಣ ಟೊಂಗೆಗೆ ತನ್ನಿಡೀ ದೇಹವನ್ನು ನೇತು ಹಾಕಿಕೊಂಡಿತ್ತು. ಆದರೆ ಅದರ ಮೇಲ್ಬಾಗವು ಬಸವನ ಹುಳದ ಮೇಲ್ಬಾಗಕ್ಕೆ ಒಂಚೂರು ಹೋಲಿಕೆಯಾಗುತ್ತಿರಲಿಲ್ಲ ಜೊತೆಗೆ ಅದಕ್ಕೆ ಕಣ್ಣುಗಳಿರಲಿಲ್ಲ!! ಜೀವಿಯ ಕೆಳಭಾಗ ಬಸವನ ಹುಳುವಿನಂತಿದ್ದು, ಮೇಲ್ಬಾಗ ಮಾತ್ರ ಯಾವುದೋ ಲಾರ್ವೆಯನ್ನು ಹೋಲುವಂತಿತ್ತು. ಏನಿದು ವಿಚಿತ್ರ

 ಜೀವಿ ಎಂದು ಚಕಿತನಾದೆ. ಮೇಲಿನ ಭಾಗವನ್ನು ಹೋಲುವ ಜೀವಿಯನ್ನು ಅನೇಕ ಬಾರಿ ನೋಡಿದ್ದೆ. ನಮ್ಮ ಕಡೆ ಜವಳೆ ಎಂದು ಕರೆಯುವ ಜೀವಿಯನ್ನು ಹಿಡಿದು ತಿನ್ನುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದೆ. ಆದರೂ ಅನುಮಾನ ಬಂದು ಹುಡುಕಾಡಿದೆ. ಕೆಲವು ಪುಸ್ತಕ, ಗೂಗಲ್ನ ಸಹಾಯ ಯಾಚಿಸಿದೆ. ಅಚ್ಚರಿಯೊಂದು ಕಾದು ಕೂತಿತ್ತು. ಬಸವನ ಹುಳುವನ್ನು ತಿನ್ನುವ ಜೀವಿಗಳ ಪಟ್ಟಿ ತಯಾರಿಸಿದೆ. ಕಪ್ಪೆ

, ಪಕ್ಷಿಗಳು, ಸರಿಸೃಪಗಳು ಮೊದಲ ಪಟ್ಟಿಯಲ್ಲಿದ್ದವು. ಇವಲ್ಲದೇ ಮಿಂಚು ಹುಳುವಿನ ಲಾರ್ವಾ ಕೂಡ ಬಸವನ ಹುಳುವನ್ನು ಇಷ್ಟ ಪಟ್ಟು ತಿನ್ನುತ್ತೆ ಎಂದು ಗೊತ್ತಾಗುತ್ತಲ್ಲೇ ಸಣ್ಣ ಮಿಂಚೊಂದು ಮೆಡುಲಾ ಅಬ್ಲಾಂಗೇಟದಿಂದ ಹೊಡೆಯುತ್ತಲೇ ಈ ಚಿತ್ರದ ಹೊಸ ಅರ್ಥವೊಂದು ಬಿಚ್ಚಿಕೊಳ್ಳುತ್ತಾ ಸಾಗಿತು.

ಮಿಂಚು ಹುಳುವಿನ ಲಾರ್ವವೊಂದು ಬಸವನ ಹುಳುವೊಂದರ ಚಿಪ್ಪೊಳಗೆ ಸಾಗಿ ತಿಂದು ಮುಗಿಸುವ ಕಾಯಕದಲ್ಲಿ ತಲ್ಲೀನನಾಗಿತ್ತು. ಗಂಟೆಗಳವರೆಗೆ ಅದನ್ನೇ ಹಿಡಿದು ಕೊಂಡಿತ್ತು. ಎಂಥಾ ವಿಸ್ಮಯವಲ್ಲವೇ?

      ಶ್ರೀಧರ್. ಎಸ್. ಸಿದ್ದಾಪುರ.


Thursday, December 17, 2020

ಮಿಸ್ ಮಾಡದೇ ತಿನ್ನಿ ಮಿಸಳ್ ಬಾಜಿ

 



 

ಮಳೆಗಾಲದ ಒಂದು ದಿನ ನಾನು ಮತ್ತು ನಾಗರಾಜ್ ಉತ್ತರಕನ್ನಡದ ಎರಡು ಜಲಧಾರೆಗಳನ್ನು ನೋಡೋದಕೆಂದು ಹೋಗಿದ್ವಿ. 



ಶಿರಸಿಯಿಂದ ಯಾಣ ದಾರಿಯಲ್ಲಿರುವ ಮಂಜುಗಣಿ ದೇವಸ್ಥಾನದಲ್ಲಿ ವಿಶೇಷ ತಂಬಳಿ ಮತ್ತು ಉತ್ತರ ಕನರ್ಾಟಕದ ವಿಶೇಷ ಅಕ್ಕಿಯ ಊಟ ಬಡಿಸಿದ್ದರು.



ಮೂರು ಮೂರು ಬಾರಿ ತಂಬಳಿ ಕೇಳಿ ಹಾಕಿಸಿಕೊಂಡು ಉಂಡಾಡಿ ಗುಂಡರಂತೆ ನಾಚಿಕೆ ಬಿಟ್ಟು ಉಂಡು ಹೊರಟೆವು ಬೆಣ್ಣೆ ಜಲಧಾರೆಗೆ.


ಒಂದೆರಡು ಕಿಲೋಮೀಟರ್ ನೆಡೆದು ಬೆಣ್ಣೆ ಜಲಪಾತದ ಬುಡದವರೆಗೆ ಹೋಗಿ, ಸಿಡಿಯುವ ನೀರ ಹನಿಗೆ ಮುಖ ಮಜ್ಜನ ಮಾಡಿಸಿಕೊಂಡು; ಅಲ್ಲಿಂದ ಮೇಲಕೆ ಹತ್ತಿ ಬಂದಾಗ ಬಲ್ ನನ್ನ ಮಗನ ಹೊಟ್ಟೆ ಚುರು ಚುರು ಎಂದಿತ್ತು! 


ನಮ್ ಜೀಪ್ ಡ್ರೈವರ್ಗೂ ನಮ್ ಹೊಟ್ಟೆ ಬಾಕತನ ಇಷ್ಟವಾಗಿರಬೇಕು. ಮೋಸ್ಟಲಿ ಅವನೂ ಹೊಟ್ಟೆಬಾಕನಿರಬೇಕು. ಅವನ ಮುಂದೆ ಪ್ರಸ್ತಾಪಿಸಿದ್ದೇ ಟಣ್ ಎಂದು 'ಅವರ್ ನೆಕ್ಸ್ಟ್ ಡೆಸ್ಟಿನೇಶನ್ ಈಸ್ ಶ್ಯಾನುಭೋಗರ ಕ್ಯಾಂಟಿನ್' ಎಂದು ಬಿಡೋದೆ. 


ನನಗೆ ಒಳಗೊಳಗೆ ಖುಷಿಯಾದರೂ ಸ್ವಲ್ಪ ನಾಚಿಕೆಯಾಯಿತು; ನಾಲಿಗೆಯ ಜೊಲ್ಲು ಸಲೀಸಾಗಿ ಹೊರ ಬಂದಿತ್ತು. 'ಥೂ ನಾಯಿ ಬುದ್ದೀದೆ' ಎಂದು ಬೈದುಕೊಂಡು ನಾಲಿಗೆಯ ಸುಮ್ಮನಿರಿಸಿದೆ. 

ಆದರೂ ಕೇಳಬೇಕಲ್ಲ. ಕ್ಯಾಂಟಿನ್ ಬಂದೊಡನೆ ನಿಲ್ಲಿಸೋಣವೇ ಎಂದು ಕೇಳಿದ ಚಾಲಕ. 'ಹಂ' ಅಂದ್ದಿದ್ದೇ ನಿಲ್ಲಿಸಿಬಿಡೋದೆ! 

ಕ್ಯಾಂಟಿನಲ್ಲಿ ಹಾಜರಿ ಹಾಕಿಯಾಗಿತ್ತು. ನಮ್ಮ ಜೊತೆಗೇನೆ ದೇವಸ್ಥಾನದಲ್ಲಿ ಊಟ ಮಾಡಿದ ಚಾಲಕನಿರುವುದರಿಂದ ದಾಕ್ಷಿಣ್ಯಕ್ಕೆ ಅರ್ಧ ಪ್ಲೇಟ್ ಮಿಸಳ ಬಾಜಿ ಹಾಗೂ ಎರಡು ಕಪ್ ಕಾಫಿಗೆ ಆಹ್ವಾನವಿಟ್ಟೆವು. 


ಹನಿ ಮಳೆ ನೋಡುತ್ತಾ ಕೂತೆವು. ಮಿಸಳಿನ ಜೊತೆಗೆ ಕೊಡುವ ಬಾಜಿಯನ್ನು ಬೇರೆಯಾಗಿ ಕೊಟ್ಟ ಕ್ಯಾಂಟಿನಿನ ಮಾಮ್. ಒಂದು ತುತ್ತು ಮಿಸಳ ಬಾಜಿಯನ್ನು ಬಾಯಿಗೆ ಹಾಕಿದ್ದೆನಷ್ಟೇ; ಅದರ ಮೋಡಿಗೆ

 ನನ್ನ ನಾಲಿಗೆಯ ರುಚಿ ಮೊಗ್ಗುಗಳೆಲ್ಲಾ ಒಮ್ಮೆಲೆ ಯಾರೋ ಬಡಿದೆಬ್ಬಿಸಿದಂತಾಯಿತು. ನಿಜವಾಗಲೂ ಸ್ವರ್ಗ ಸದೃಶ ರುಚಿ ಆ ಮಿಸಳ ಬಾಜಿಗಿತ್ತು. 

ನಮ್ಮ ಜೊತೆಗೇನೆ ದೇವಸ್ಥಾನದಲ್ಲಿ ಊಟ ಮಾಡಿದ ಚಾಲಕನಿರುವುದರಿಂದ ದಾಕ್ಷಿಣ್ಯಕ್ಕೆ ಅರ್ಧ ಪ್ಲೇಟ್ ಮಿಸಳ ಬಾಜಿ ಹಾಗೂ ಎರಡು ಕಪ್ ಕಾಫಿಗೆ ಆಹ್ವಾನವಿಟ್ಟೆವು. ಹನಿ ಮಳೆ ನೋಡುತ್ತಾ ಕೂತೆವು. ಮಿಸಳಿನ ಜೊತೆಗೆ ಕೊಡುವ ಬಾಜಿಯನ್ನು ಬೇರೆಯಾಗಿ ಕೊಟ್ಟ ಕ್ಯಾಂಟಿನಿನ ಮಾಮ್. ಒಂದು ತುತ್ತು ಮಿಸಳ ಬಾಜಿಯನ್ನು ಬಾಯಿಗೆ ಹಾಕಿದ್ದೆನಷ್ಟೇ; ಅದರ ಮೋಡಿಗೆ  ನನ್ನ ನಾಲಿಗೆಯ ರುಚಿ ಮೊಗ್ಗುಗಳೆಲ್ಲಾ ಒಮ್ಮೆಲೆ ಯಾರೋ ಬಡಿದೆಬ್ಬಿಸಿದಂತಾಯಿತು.



ನಿಜವಾಗಲೂ ಸ್ವರ್ಗ ಸದೃಶ ರುಚಿ ಆ ಮಿಸಳ ಬಾಜಿಗಿತ್ತು. ಅವಲಕ್ಕಿಗೆ ಒಂದಿಷ್ಟು ವಿಶೇಷ ಮಸಾಲೆ ಹಾಕಿ ತಯಾರು ಮಾಡಿಟ್ಟುಕೊಂಡಿರುತ್ತಾರೆ. ಅದಕ್ಕೆ ಖಾರಾಸೇವು, ಶಂಕರಪೋಳೆ ಸೇರಿಸಿ ಜೊತೆಗೆ ವಿಶಿಷ್ಟ ರುಚಿಯ ಸಾಂಬಾರು ನೀಡುತ್ತಾರೆ. 'ಮೂಲತಃ ಇದೊಂದು ಮಹರಾಷ್ಟ್ರದ ಕಡೆಯ ತಿಂಡಿ' ಎಂದು ನನ್ನ ಪ್ರೀತಿಯ

 ತಿರಗಾಲ ತಿಪ್ಪ ಗೆಳೆಯ ನಾಗರಾಜ ಹೇಳಿದ. ನನಗೆ ಯಾವ ಫಕರ್ೂ ಕಾಣಲಿಲ್ಲ. ಇದರ ವಿಶಿಷ್ಟ ರುಚಿಗೆ ಮನಸೋತೆ.


ಇನ್ನೊಂದು ಪ್ಲೇಟ್ ಹೇಳೋಣವೆಂದುಕೊಂಡರೆ ಓರೆ ನೋಟದಲ್ಲೇ ಚಾಲಕ ನಮ್ಮನ್ನೇ ನೋಡುತ್ತಿದ್ದಾನೆ. ಜೊತೆಗೆ ಮೀಸೆ ಕೆಳಗಿನ ಕಿರು ನಗೆ ಬೇರೆ. ಇನ್ನೊಮ್ಮೆ ಮಿಸಳ್ ಬಾಜಿ ತಿನ್ನಲೆಂದೇ ಇಲ್ಲಿಗೆ ಬರಬೇಕೆಂದು ಮಾತಾಡಿಕೊಂಡೆವು. ಚಾಲಕ ನಗುತಲಿದ್ದ. ಅನೇಕ ಕಡೆ ಈ ತಿಂಡಿಯನ್ನು ನಾ ಸವಿದಿದ್ದೆ ಆದರೆ ಇಷ್ಟು ರುಚಿಕಟ್ಟಾದ ಮಿಸಳಬಾಜಿ ಮತ್ತೆಲ್ಲೂ ನನಗೆ ತಿಂದ ನೆನಪಿಲ್ಲ್ಲ. 



ಹಾಂ ಈ ಕ್ಯಾಂಟಿನ್ ಇರುವುದು ಶಿರಸಿ ಕುಮುಟಾ ನಡುವಿನ ರಾಗಿ ಹೊಸ ಹಳ್ಳಿ ಎಂಬ ಪುಟ್ಟ ಊರಲ್ಲ್ಲಿ. ಮುಂದಿನ ಸಾರಿ ಈ ಕಡೆ ಬಂದಾಗ ಮಿಸ್ ಮಾಡದೇ ಮಿಸಳ್ ಬಾಜಿ ತಿನ್ನಿ.


Sunday, December 6, 2020

ಮಜೋಲಿ ಎಂಬ ಮಾಯಾನಗರಿ..



ಪಿಸುಗುಡುವ ಆಕಾಶ. ನಿರಭ್ರ ನೀರ ಚಿಲುಮೆಯಲಿ ಬಿದ್ದ ಹೂ ಮಳೆಯ ನೀಲಾಕಾಶ. ಎಳೆದಿಟ್ಟ ಮೀನು ಹಿಡಿವ ಛತ್ರಿಗಳು. ಇಬ್ಬನಿಯಲಿ ಮಿಂದ ರಸ್ತೆ. ಸೂರ್ಯಪ್ಪಂಗೆ ಮೋಡದ ಮರೆ. ರೇಡಿಯೋದಲಿ ಬರುತಿರೊ ಯಾವುದೋ ಅಸ್ಸಾಮಿ ಹಾಡು. ಗೋಪಾಲಕರ ಮೆರವಣಿಗೆ. ದನಕರುಗಳ ಗಂಟೆಯ ನಾದ. "ಹೇಗಿದೆ ನಮ್ಮ ಮಜೋಲಿ" ಎಂಬ ಸೈಕಲ್ ಸವಾರರ ಮುಗ್ಧ ಪ್ರಶ್ನೆ. ಬ್ರಹ್ಮಪುತ್ರ, ಲೂಯಿಟ್ (ಕಿರ್ಕಿಟಿಯಾ) ನದಿಗಳ ಬಳಸು ಹಾರದಂತಿರುವ ದ್ವೀಪ ಅಸ್ಸಾಂನ ಮನೋಹರ ಮಜೋಲಿ.
ಸೋಮಾರಿ ಸೂರ್ಯಣ್ಣ ಕಣ್ಣು ಬಿಟ್ಟಿರಲಿಲ್ಲ. ನಾವು ತಿಂಡಿ ಮುಗಿಸಿ ಮಿಶಿಂಗ್ ಸಮುದಾಯದವರ ವಿಶಿಷ್ಟ ಬಿಡಾರಗಳಿಗೆ ಲಗ್ಗೆ ಇಟ್ಟಿದ್ದೆವು. ಅಸ್ಸಾಂನಲ್ಲಿ ಬ್ರಹ್ಮಪುತ್ರ ಸೃಜಿಸಿರುವ ಸುಂದರ ದ್ವೀಪವೇ ಮಾಜೋಲಿ. ಇಲ್ಲಿನ ಆಚರಣೆಗಳು ಜೀವನ, ಬಟ್ಟೆ ಎಲ್ಲವೂ ಭಿನ್ನ.

ಮಿಸ್ಟೀರಿಯಸ್ ಮಜೋಲಿ...


ಜೋಹರ್ಾಟ್ನಿಂದ ನಿಮತಿ ಘಾಟ್ನಿಂದ ಲಾಂಚ್ನಲಿ ಇಪ್ಪತ್ತು 

ನಿಮಿಷ ದಾಟ ಬೇಕಾದಷ್ಟು ಹರವಿಕೊಂಡ ನದಿ ಪಾತ್ರ. ನದಿಯೋ 

ಸಮುದ್ರವೋ ಎಂದು ತಿಳಿಯದಷ್ಟು ವಿಸ್ತಾರ. ಫೆರಿಯಲ್ಲಿ ಕುಳಿತರೆ ವಿಚಿತ್ರ 

ವಾಸನೆ! ಹೊಟ್ಟೆ ತುಂಬಿದರೆ ಮುಗಿದೇ ಹೋಯಿತು. ವಿಚಿತ್ರ ದೋಣೆಯಲಿ 

ಮೀನುಗಾರರ ಮೀನ ಭೇಟೆ. ಪೆಟ್ರೋಲ್ ಬ್ಯಾರಕ್ ತುಂಬಿಸಿಕೊಂಡು ಹೊರಟ 

ಐ. ಓ. ಸಿ. ಯವರ ಫೆರಿಗಳು. ನೂರಾರು ವರುಷಗಳಿಂದ ಈ ಪುಣ್ಯ 

ಭೂಮಿಯಲ್ಲಿ ಆಚರಿಸುವ ವಿಶಿಷ್ಟ ಹಬ್ಬ ರಾಮ್ ಲೀಲಾಗೆ ಹೋದಾಗ ಕಂಡ 

ಅಸ್ಸಾಂನ ಮಜೋಲಿಯ ಅಪೂರ್ವ ನೋಟ. ಇಲ್ಲಿ ವಾಸಿಸುವ ಭಿನ್ನ 

ಸಮುದಾಯವೇ ಮಿಶಿಂಗ್. ಮೂಲತಃ ಮೀನುಗಾರರು. ಅವರ ಹಾಡು 

ಪಾಡುಗಳ ಸುಂದರ ಕಥಾನಕ. ಹರಿ ಕತೆ ಶುರು ಮಾಡೋಣವೇ?



ಮಾಜೋಲಿಯ ಮಿಶಿಂಗ್ ಸಮುದಾಯ:-

ಶತಮಾನಗಳಿಂದ ಇಲ್ಲೇ ವಾಸವಾಗಿರುವ ಇವರು ರೂಪಿಸಿಕೊಂಡ ತಮ್ಮ ವಿಚಿತ್ರ ಆಚರಣೆಗಳು, ಜೀವನ ವಿಧಾನಗಳು ನೋಡಲು ಸಿಕ್ಕಿದ್ದು ನಮ್ಮ ಗೆಳೆಯ ಸುಭಾಸ್ ಬಿಸ್ವಾಸ್ ಮತ್ತು ನಾಗರಾಜ್ರ ಸಹಕಾರದಿಂದ.
ಅನೇಕ ಬುಡಕಟ್ಟುಗಳು 1,150 ಚದರ ಕಿಲೋ ಮಿಟರ್ ವಿಸ್ತೀರ್ಣದಲಿ ಹರಡಿಕೊಂಡಿದ್ದಾರೆ. ಸೂರ್ಯ ಚಂದ್ರನನ್ನು ದೇವರಂತೆ ಆಧರಿಸುತ್ತಾರೆ. ಬಿದಿರು ಇವರ ಪ್ರಧಾನ ಜೀವನ ಆಧಾರ ಸರಕು. ಬಿದಿರಿನಿಂದ ಮಾಡಿದ ಅತಿ ಸರಳ ಅಟ್ಟಣಿಗೆಯ ಮನೆ. ಬಿದಿರ ಗೋಡೆಗೆ ಮಣ್ಣಿನ ಮುಚ್ಚಿಗೆ. ಹುಲ್ಲಿನ ಮಾಡು.  ಬಿದಿರಿನಿಂದ ಮಾಡಿದ ವಿಶಿಷ್ಟ ಬುಟ್ಟಿಗಳು. ಏರಿಸಿ ಇಳಿಸಬಹುದಾದ ವಿಶಿಷ್ಟ ಮನೆ! ಬ್ರಹ್ಮಪುತ್ರ ನದಿಯ ನೀರಿಳಿದಾಗ ಮನೆಯನ್ನು ಕೆಳಗಿಳಿಸುವರು! ಮನೆಯೊಳಗೆ ಹೋಗಬೇಕಾದರೆ ಏಣಿಯೊಂದು ಬೇಕೇ ಬೇಕು.












ಇಲ್ಲಿ ಮೀನು ಹಿಡಿಯುವ ಕ್ರಮವೂ ವಿಶಿಷ್ಟ. ಎರಡು ಬಿದಿರ ಕಂಬಗಳಿಗೆ ಅಡ್ಡಲಾಗಿ ಬಿದಿರ ಕೋಲುಗಳು ಅವಕ್ಕೆ ದೊಡ್ಡದಾದ ಬಲೆಯೊಂದನ್ನು ಕಟ್ಟಿ ಬ್ರಹ್ಮಪುತ್ರ ನದಿಯಲಿ ಇಳಿ ಬಿಡುವರು. ಬಲೆ ತುದಿಗೊಂದು ಹಗ್ಗ ಸಿಕ್ಕಿಸುವರು. ಗಂಟೆಗಳ ಕಾಲ ಕಾದು ಮೀನುಗಳು ಬಲೆಯ ಮೇಲೆ ಓಡಾಡುತ್ತಲೇ ಹಗ್ಗ ನಿಧಾನಕ್ಕೆ ಮೇಲೆತ್ತುವರು. ಕೆಲವೊಮ್ಮೆ ಹೊಟ್ಟೆ ತುಂಬುವಷ್ಟು ಮೀನು ಕೆಲವೊಮ್ಮೆ ಖಾಲಿ ಕೈ.
ಇವರ ದೋಣಿಗಳಂತೂ ಕರೀನಾ ಕಪೂರನ ಸೊಂಟಕ್ಕಿಂತಲೂ ಸಪೂರ. ಕುಳಿತರೆ ಅಲುಗುವ ಪುಟಾಣಿ ದೋಣಿಯಲಿ ಜೀವ ಕಿಸೆಯೊಳಗಿಟ್ಟು ಒಂದೆರಡು ಪರ್ಲಾಂಗ್ ಪ್ರಯಾಣಿಸಿದ ಅನುಭವಂತೂ ಅನನ್ಯ. ಯಾವಾಗ ಇಳಿದೆನೋ ಎಂಬ ಆತಂಕ.  ದೊಡ್ಡ ದೊಡ್ಡ ಲಾಂಚ್ಗಳಂತೂ ಬ್ರಹ್ಮಪುತ್ರದಲ್ಲಿ ಕಿಲೋಮೀಟರ್ಗಟ್ಟಲೆ ಪ್ರಯಾಣಿಸುತ್ತವೆ. ಅಂತಹ ದೋಣಿಗಳಲ್ಲೂ ನಾವೊಂದು ಸುತ್ತು ಹೊಡೆದು ಬಂದೆವು. 



ಯಾರಲ್ಲೂ ಕಲಿಯದೆ ಕೊಳಲು ನುಡಿಸುವುದರಲ್ಲಿ ಇವರದು ಎತ್ತಿದ ಕೈ. ಮನೆಯ ಹೆಣ್ಣು ಮಕ್ಕಳೆಲ್ಲಾ ಸೇರಿ ಶಾಲುಗಳನ್ನು, ದಂತ, ಅರಶಿನ ಬಣ್ಣದ ಅಸ್ಸಾಂ ಸೀರೆ ನೇಯುವುದು ಇವರ ಉಪ ಕಸುಬುಗಳು. ಇವರು ನೇಯುವ ಶಾಲುಗಳು, ಸೀರೆಗಳು ಇವರಂತೆ ಬಹಳ ನಾಜೂಕು. ಇಲ್ಲಿನ ಸೀರೆಗಳು ವಿದೇಶದಲ್ಲೂ ತಮ್ಮ ತನ ಕಾಯ್ದುಕೊಂಡಿವೆ. ತಮ್ಮದೇ ಆದ ನೇಕಾರರ ಸೊಸೈಟಿ ನಿಮರ್ಿಸಿಕೊಂಡಿದ್ದಾರೆ. ಮನೆಗೆ ಅಗತ್ಯವಾದ ಮಡಿಕೆಗಳನ್ನು ಇವರೇ ತಯಾರಿಸುವರು. ಚಕ್ರ ಬಳಸದೆಯೇ ಮಡಿಕೆ ತಯಾರಿಸುವ ವಿಧಾನ ಅಚ್ಚರಿ ಹುಟ್ಟಿಸುತ್ತದೆ. ಇದು ಹರಪ್ಪ ಮಹಿಂಜೋದಾರೋನಲ್ಲಿನ ವಿಧಾನಕ್ಕೆ ಅತಿ ಸಮೀಪವಿದೆ ಎನ್ನುತಾರೆ ಸಂಶೋಧಕರು! 



ದೇವಾಲಯಗಳು:-  





ಇವರು ಆಚರಿಸುವ ರಾಸ್ ಲೀಲಾ ಹಬ್ಬವು ಇವರ ವಿಶಿಷ್ಟ ದೇವಾಲಯಗಳಲ್ಲಿ ಆಚರಿಸಲ್ಪಡುತ್ತದೆ. ಇವರ ದೇವಾಲಯಗಳನ್ನು ಸತ್ರಾ ಎಂದು ಕರೆಯುತ್ತಾರೆ. ಕಮಲಾ ಬರಿ ಸತ್ರ ಒಂದು ವಿಶಿಷ್ಟ ದೇವಾಲಯವಾಗಿದ್ದು ಇಲ್ಲಿ ಕಲೆ ಮತ್ತು ಕುಸುರಿಗೆ ಪ್ರಖ್ಯಾತಿಯನ್ನು ಹೊಂದಿದೆ. ಗುರು ಶ್ರೀ ಶಂಕರ್ ದೇವ್ ಅವರು 1500 ನೆಯ ಇಸವಿಯ ಸುಮಾರಿಗೆ ಇದನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಗರುಡನ ದೊಡ್ಡ ಮುಖವಾಡವೊಂದನ್ನು ಮಾಡಿಡಲಾಗಿದೆ. ರಾಸ್ ಲೀಲಾದ ಸಮಯದಲ್ಲಿ ಇಲ್ಲಿ ವಿಶೇಷವಾದ ದೋಣಿಯೊಂದನ್ನು ನಿಮರ್ಿಸಲಾಗುತ್ತದೆ. ಅಂತಹ ದೋಣಿ ನಿಮರ್ಾಣಕ್ಕೆ ಸಾಕ್ಷಿಯಾದುದು ನಮ್ಮ ಸುದೈವ. ಇದರಲ್ಲಿ ಕೃಷ್ಣ ತನ್ನ ಪ್ರೇಯಸಿ ರಾಧಳೊಂದಿಗೆ ನೃತ್ಯ ಮಾಡುತ್ತಾ ಬರುವಂತೆ ಚಿತ್ರಿಸುತ್ತಾರೆ. ಇಲ್ಲಿನ ಎಲ್ಲಾ ಸತ್ರಗಳಿಗೂ ಒಂದಕ್ಕೊಂದು ಹೋಲಿಕೆಗಳಿವೆ. ಇವರ ಪೂಜಾ ವಿಧಾನಗಳೂ ವಿಭಿನ್ನ. ನಿಯೋ ವೈಷ್ಣವ ಪಂಗಡಕ್ಕೆ ಇಲ್ಲಿನ ಅರ್ಚಕರು ಸೇರಿದವರಾಗಿದ್ದಾರೆ. ಹೆಚ್ಚಿನವರು ಬ್ರಹ್ಮಚಾರಿಗಳು. ಗಾರಮುರ್ಹ ಸತ್ರದಲಿ ಅರ್ಚಕರು ಸೇರಿ ಯಾವುದೋ ಮಂತ್ರ ಪಠಣದಲಿ ತೊಡಗಿದ್ದರು. ಡೋಲಕ್ ಬಳಸಿ ಇವರು ಮಾಡುವ ಅತ್ಯಾಕರ್ಷಕ ನೃತ್ಯ ನಮ್ಮ ಕ್ಯಾಮರವನ್ನು ತಣಿಸಿತು. ತೋಪು ತುಪಾಕಿಗಳನ್ನು ಸಂಗ್ರಹಿಸಿಟ್ಟ 'ಗಾರಮುರ್ಹ' ಸತ್ರ (ವಿಶಿಷ್ಟ ದೇವಾಲಯ) ಬಹಳ ವಿಶಿಷ್ಟವಾಗಿದೆ. ಇಲ್ಲಿ  ವಿದೇಶಿ ಹಕ್ಕಿಗಳೂ ಸಾವಿರ ಸಾವಿರ ಸಂಖ್ಯೆಯಲ್ಲಿ ನವೆಂಬರ್ ಮಾಸದಲ್ಲಿ ಇಲ್ಲಿಗೆ ಆಗಮಿಸುತ್ತವೆ.



ರಾಸ್ ಲೀಲಾ:- 

ಕೃಷ್ಣನ ಲೀಲೆಗಳನ್ನು ತೋರಿಸುವ ಒಂದು ವಿಶಿಷ್ಟ ಹಬ್ಬ. ನವೆಂಬರ್ ತಿಂಗಳಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಎಲ್ಲಾ ಸತ್ರಗಳಲ್ಲಿ ಈ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಊರಿನ ತುಂಬಾ ಹಬ್ಬದಿನ ಹಚ್ಚುವ ಹಣತೆ ಬಹಳ ವಿಭಿನ್ನ. ಕಮಲಾ ಬರಿ ಸತ್ರದಲ್ಲಿ ದೋಣಿಗಳನ್ನು ನಿಮರ್ಿಸಿ ಅದರಲ್ಲಿ ಕೃಷ್ಣ ವೇದಿಕೆಗೆ ಬರುವಂತೆ ಮಾಡುವ ಕ್ರಮ ಅನನ್ಯವಾದುದು. ಭಿನ್ನವಾದ ಬೆಳಕಿನ ವ್ಯವಸ್ಥೆ ಹಬ್ಬದ ದಿನ ಊರಿನವರಿಗೆ ಹಾಗೂ ಅತಿಥಿಗಳಿಗೆ ಪುಷ್ಕಳವಾದ ಭೋಜನದ ವ್ಯವಸ್ಥೆ ಇರುತ್ತದೆ. ಪ್ರತಿ ಸಂಜೆ ನಾಟಕಗಳು, ಸತ್ರದ ಬ್ರಹ್ಮಚಾರಿಗಳಿಂದ ವಿಶಿಷ್ಟ ನೃತ್ಯ ಹಾಗೂ ಕೃಷ್ಣನ ರಾಸ ಲೀಲೆಗಳನ್ನು ಪದ್ಯಗಳೊಂದಿಗೆ ಆಡಿ ತೋರಿಸುವರು. ಹಬ್ಬದ ಹಿಂದಿನ ದಿನದಿಂದಲೇ ಪ್ರದರ್ಶನಕ್ಕಾಗಿ ಅಭ್ಯಾಸ ನೋಡಬಹುದು ಜೊತೆಗೆ 




ಭತ್ತದ ಬಯಲಾಗಿರುವ ಮಜೋಲಿಯಲಿ ಊಟವಂತು ಬಲು ಕಡಿಮೆ ದರದಲ್ಲಿ ಲಭ್ಯ ಮತ್ತು ಬಲು ರುಚಿಕರ. ಕೇವಲ ಹತ್ತು ರೂಪಾಯಿಗೆ ರೊಟ್ಟಿ ಮತ್ತು ಚಹಾ ಲಭ್ಯ. ಇಂತಹ ವಿಭಿನ್ನ ಸಮುದಾಯವಿರುವ ಮಜೋಲಿ ಬಲು ವಿಶಿಷ್ಟವಾಗಿ ನಿಲ್ಲುತ್ತದೆ. 
                              
                                                                                                      ಶ್ರೀಧರ್. ಎಸ್. ಸಿದ್ದಾಪುರ.
 

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...