ನಾವು ಯಾವಾಗ ನಮಗೋಸ್ಕರ ಜೀವಿಸುತ್ತೇವೆ? ನಮ್ಮ ಜೀವಿತದಲ್ಲಿ ನಡೆಯುವ ಘಟನೆಗಳಿಗೆ ಏನಾದರೂ ಕಾರ್ಯಕಾರಣ ಸಂಬಂಧವಿದೆಯೇ? ಎಲ್ಲರೂ ಮತ್ತೊಬ್ಬರ ಖುಷಿಗಾಗಿ ಹಗಲುವೇಷ ತೊಟ್ಟವರಂತೆ ಬದುಕುತ್ತೇವೆ. ಕೆಲವೊಮ್ಮೆ ನಮ್ಮ ಬದುಕಿನ ಮೇಲೆ ನಮಗೇ ಹಿಡಿತವಿಲ್ಲದೇ ಪರಿತಪಿಸುವಂತೆ ಮಾಡಿಬಿಡುವುದು. ರಾಮಾಯಾಣ ಮತ್ತು ಮಹಾಭಾರತದ ಅನೇಕ ಪಾತ್ರಗಳ ಒಳ ಹೊಕ್ಕು ಬರೆದ ಅಂತರಂಗ ವೆಂಬ ವಿಶಿಷ್ಟ ಕೃತಿಯೊಂದನ್ನು ಓದಿ ಮುಗಿಸಿದಾಗ ನನಗಾದ ಅನುಭವಗಳು. ಅಕ್ಕನಂತಹ ಗೆಳತಿ ಸುರೇಖಾ ಭೀಮಗುಳಿ ಮನಮುಟ್ಟುವಂತೆ ಬರೆದಿದ್ದಾರೆ.
ಶ್ರುತಕೀತರ್ಿ, ಮಾಂಡವಿಯ ಸ್ವಗತಗಳು ನಮಗೆ ಹಾಗನ್ನಿಸದೇ ಇರಲು ಬಿಡಲಾರವು. ಯಾರ್ಯಾರಿಗಾಗಿಯೋ ನಾವು ತೊಟ್ಟ ವೇಷವೇ ನಮಗೇ ಒತ್ತಡವನ್ನುಂಟು ಮಾಡುತ್ತವೆ. ಪ್ರತಿ ಪಾತ್ರವು ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಂಡಂತೆ ಭಾಸವಾಗುವುದು. ಮತ್ತೊಬ್ಬರ ದೃಷ್ಟಿಕೋನದಲ್ಲಿ ಎಲ್ಲವನ್ನು ನೋಡುವುದು ಬಲು ಕಷ್ಟದ ಕೆಲಸವೇ. ಈ ಎಲ್ಲಾ ಕಷ್ಟಗಳನ್ನು ಬಹಳ ಸರಳವಾಗಿ ನಿರೂಪಿಸುತ್ತಾ ಪ್ರತಿ ಪಾತ್ರದ ತುಮುಲಗಳನ್ನು, ಕಷ್ಟಗಳನ್ನು ಅತ್ಯಂತ ಸಶಕ್ತವಾಗಿ ನಮ್ಮ ಮುಂದಿಡುವ ಕ್ರಮ ಬಹಳ ಇಷ್ಟವಾಯಿತು.
ಕೈಕೆಯಿ ತನ್ನ ನಿಲುವಿಗೆ ದುಃಖಿಸುತ್ತಾ ರಾಮನಿಂದ ಸಂತೈಸಲ್ಪಟ್ಟಾಗ ನಾನು ಮತ್ತೊಮ್ಮೆ ತಾಯಿಯಾದೆ ಎಂದು ಉಸುರುವ ಆ ಕ್ಷಣ ಅದೇಕೊ ನನ್ನನ್ನು ಅನೇಕ ದಿನಗಳವರೆಗೆ ಕಾಡುತ್ತಲೇ ಇತ್ತು. ರಾಮನ ನಡೆಯಂತೂ ಅಚ್ಚರಿಯ ಕಡಲಿನಲಿ ತೇಲಿಸಿತು. ಎಷ್ಟು ಉದಾತ್ತವಾಗಿ ರಾಮನನ್ನು ಚಿತ್ರಿಸಿದ್ದಾರೆ. ಬೈರಪ್ಪ ಬರೆದ ಉತ್ತರಕಾಂಡವನ್ನು ಮತ್ತೊಮ್ಮೆ ಓದುವಂತೆ ಮಾಡಿತು. ಅತಿ ಚಿಕ್ಕ ಚಿಕ್ಕ ಪಾತ್ರಗಳನ್ನು ಕಟ್ಟಿಕೊಟ್ಟ ಕ್ರಮ ಅನನ್ಯ. ಅವರೇ ಅಂದಂತೆ ಯಕ್ಷಗಾನದಲಿ ಮಿಂಚಲು ಅವಕಾಶವೇ ಇಲ್ಲದ ಅನೇಕ ಪಾತ್ರಗಳಾದ ರುಮೆ, ಅಂಬಾಲಿಕೆ, ಅಂಬಿಕೆ ಮುಂತಾದವರ ಹಾಜರಿ ಹಾಕಿಸಿದ್ದಾರೆ.
ಕೊನೆಗೂ ಕಾಡುವ ಜಿಜ್ಞಾಸೆ:-
ರಾಮಾಯಾಣದ ಅನೇಕ ಪಾತ್ರಗಳು ಎಲ್ಲವೂ ವಿಧಿ ನಿಯಮಾನುಸಾರ ನಡೆಯುವುದು. ಅಥವಾ ತನ್ನ ಮನೋಬಲಕ್ಕನುಗುಣವಾಗಿ ನಡೆಯುವುದೋ ಎಂಬ ತಾತ್ವಿಕ ಪ್ರಶ್ನೆ ನಮಗೆ ಎದುರಾಗುವಂತೆ ಮಾಡುತ್ತಾರೆ ಸುರೇಖಾ. ಎಲ್ಲಕ್ಕೂ ಕಾರ್ಯ ಕಾರಣ ಸಂಬಂಧವನ್ನು ಕಲ್ಪಿಸುತ್ತಾ ನೀನು ಬರಿ ಪಾತ್ರದಾರಿ ಅಷ್ಟೇ ಎಂದು ನಿರೂಪಿಸುತ್ತಾ, ಮಾನವ ಪ್ರಯತ್ನಗಳಿಗೆ ಬೆಲೆ ಇಲ್ಲವೇ ಎಂಬ ಜಿಜ್ಞಾಸೆಯನ್ನೂ ಹುಟ್ಟು ಹಾಕುತ್ತಾರೆ.
ವಿಭಿನ್ನ ಹೊತ್ತಗೆಯೊಂದನ್ನು ಓದಿದ ಅನುಭವ ನಿಮಗಾಗುವುದರಲ್ಲಿ ಅನುಮಾನವಿಲ್ಲ. ತಡವಾಗಿ ಪ್ರತಿಕ್ರಿಯಿಸುವ ಈ ಲೇಟ್ ಲತೀಪನ ಬಗ್ಗೆ ಕ್ಷಮೆ ಇರಲಿ. ನಮಸ್ಕಾರ.
ಶ್ರೀಧರ. ಎಸ್. ಸಿದ್ದಾಪುರ
ಲೇಟ್ ಆದರೂ ಪ್ರತಿಕ್ರಿಯೆ ಬಂತಲ್ಲ ... ಅದೇ ಸಂತೋಷ...
ReplyDelete😆😆
ReplyDelete