Wednesday, April 1, 2020

ಕರೋನಾ ಕೆರೆತ!


ಕರೋನದಿಂದ ಅತ್ಯಂತ ಅನ್ಯಾಯಕ್ಕೊಳಗಾದ, ನಿರ್ಲಕ್ಷಕೊಳಗಾದ ನಮ್ಮ ದೇಹದ ಭಾಗವೆಂದರೆ ಅದು ಮೂಗು! ಅಯ್ಯೋ ಶಿವನೆ, ಏನು ಹೇಳುತ್ತಾನೆಂದು ಆಶ್ಚರ್ಯವಾಯಿತೇ? ಸ್ವಲ್ಪ ತಾಳ್ಮೆ ಇರಲಿ. ತಲೆ ಬುಡವಿಲ್ಲದ ಸಂಗತಿಗಳನ್ನು ಹೇಳುತ್ತಾನೆಂದು ಅನ್ಕೊಬೇಡಿ.
 ಹೌದು. ಕೋವಿಡ್-19 ಬಂದಾಗಲೇ ವ್ಯಾಟ್ಸಪ್ ಮತ್ತು ಎಫ್ ಬಿ  ಗಳಲ್ಲಿ ಅನುಸರಿಸಬೇಕಾದ ಆವಶ್ಯಕ ಕ್ರಮಗಳ ಕುರಿತು ಟನ್ ಗಟ್ಟಲೆ ಮಾಹಿತಿ ಹರಿದು ಬಂದಿತು. ಅದರ ಮೊದಲ ಅಂಶವೆಂದರೆ ನಮ್ಮ ದೇಹದ ಒಂದು ಭಾಗವಾದ ಮುಖವನ್ನು ಮುಟ್ಟುವಂತಿಲ್ಲ. ಜೊತೆಗೆ ಮೂಗು ಕಣ್ಣು, ಬಾಯಿ ಮುಟ್ಟುವಂತಿಲ್ಲ. ಯಾರೋ ನಮ್ಮ ದೇಹದ ಭಾಗವನ್ನು ಮುಟ್ಟಬೇಡಿ ಎಂಬ ವಿಚಿತ್ರ ನಿಬಂಧನೆ ಬೇರೆ. 
 ಈ ಸುದ್ದಿ ತಿಳಿಯುತ್ತಲೆ ರಚ್ಚೆ ಬಿದ್ದ ಮಗುವಿನಂತಾಗಿದೆ ಮೂಗು! ನಾ ಹೇಳುವುದನ್ನು ಕೇಳದೆ ಪ್ರತಿಭಟನೆಗೆ ಬಿದ್ದಿದೆ. ಮುದ್ದಿಸು ಮುದ್ದಿಸು ಎನುತಿದೆ! ಪ್ರತೀ ಕ್ಷಣವೂ ಮುಟ್ಟು ಮುಟ್ಟು ಎಂದು ತೋರಿಕೆ ತುರಿಕೆ ಉಂಟು ಮಾಡಿ ಯಾವುದೋ ಪ್ರಲೋಭನೆ ಒಡ್ಡುತಿದೆ. ಹೇಗಾದರೂ ಮುಟ್ಟು ಮರಾಯ ಎನ್ನುತಿದೆ. ಏನು ಮಾಡುವುದೆಂದು ತೋಚಲೇ ಇಲ್ಲ. ಮೊದಲ ದಿನವಂತೂ ತಡೆದುಕೊಂಡೆ. ಆದರೆ ಮುಟ್ಟ ಬೇಕೆನ್ನುವ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. 

ಎರಡನೇ ದಿನಕ್ಕೆ ಹೊಸ ಐಡಿಯಾದೊಂದಿಗೆ ಬಂದೆ ತಲೆ ಬಾಚುವ ಹಣಿಗೆಯೊಂದನ್ನು ಸಾನಿಟೈಸ್ ಮಾಡಿ ಇಟ್ಟುಕೊಂಡೆ. ಅದಕ್ಕೂ ದಿನಕ್ಕೆರಡು ಬಾರಿ ಸ್ನಾನ. ತುರಿಸು ತುರಿಸು ಎಂದೊಡನೆ ಅದನ್ನೇ ಹಾಕಿ ತಿಕ್ಕಲು ಸುರುಮಾಡಿದೆ. ಕೋವಿಡ್ ಹರಡುತ್ತಲೆ ನನ್ನ ಪರಿಸ್ಥಿತಿ ಈಗ ವಿಕೋಪಕ್ಕೆ ಹೋಗಿದೆ.  ನನ್ನ ಮುಖವನ್ನೇ ನಾನು ನೋಡಲು ಅಸಹ್ಯ ಪಡುವಂತಾಗಿದೆ. ಅಡ್ಡ ಗೀರು ಉದ್ದಗೀರುಗಳು ಮುಖದ ತುಂಬಾ ಮೂಡಿವೆ. ಬಾಚಣಿಗೆಯಲ್ಲಿ ಕೆರೆದು ಕೆರೆದು ಮೂಗು ಗಡ್ಡಗಳೆಲ್ಲಾ ಕೆಂಪು ಕೆಂಪಾಗಿ ವಿಚಿತ್ರ ಕೆಂಪು ಮೂತಿಯ ಮಂಗನಂತಾಗಿರುವೆ. ಆದರೆ ಕೆರೆತ ಕಡಿಮೆಯಾಗಿಲ್ಲ.

  ಜೊತೆಗೆ ಅಮ್ಮ ಹೇಳಿದ ಎಲ್ಲಾ ಆಯರ್ುವೇದದ ಗಿಡ ಮೂಲಿಕೆಯನ್ನೆಲ್ಲಾ ಅರೆದು ಹಚ್ಚಿದೆ. ಹೆಚ್ಚಿತೆ ಹೊರತು ಕಡಿಮೆಯಾಗಿಲ್ಲ. ಪಾಪದ ಯಾವುದ್ಯಾವುದೋ ಜೇಡಗಳ ಮೇಲೆ ಆಪಾದನೆ ಮಾಡಿದ್ದಾಳೆ ಹೆಂಡತಿ .  ಕೇಳಿಸಿ ಕೊಂಡರೆ ಕಷ್ಟ , ಅವು ಮಾನ ನಷ್ಟ ಮೊಕದ್ದಮೆ ಹೂಡಿಯಾವು ಎಂಬ ಭಯ! 


ಯಾವುದನ್ನು ಮಾಡಬೇಡ ಎನ್ನುವರೊ ಅದನ್ನೇ ಮಾಡಬೇಕು ಎಂಬ ವಿಚಿತ್ರ ಬಯಕೆ ನಮ್ಮ ಮನಸ್ಸಿಗುಂಟಾಗುವುವದೆಂದು ಹೆಂಡತಿ ಹೊಸ ಥಿಯರಿಯೊಂದನ್ನು ಘೋಷಿಸಿ ನನ್ನನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದಾಳೆ. ಜೊತೆ ಹೊಸದೊಂದು ಮಾನಸಿಕ ಖಾಯಿಲೆಯನ್ನು ಅಂಟಿಸಲು ಹೊರಟಿದ್ದಾಳೆ!  ಏನು ಮಾಡಲಿ. ಕೈ ತೊಳೆದು ತೊಳೆದು ಚರ್ಮ ಸವೆಯುತ್ತಾ ಬಂದಿದೆ. ಉಳಿದ 14 ದಿನ ಉಳಿವುದು ಕಷ್ಟ. ಹಾಗಾಗಿ ಹೊಸ ಉಪಾಯ ಹೂಡಬೇಕು. ನಿಮಗೆ ಹೊಳೆದರೆ ನನಗೂ ಸ್ವಲ್ಪ ಹೇಳಿ. ಇಲ್ಲದಿದ್ದರೆ ನಷ್ಟ ಪರಿಹಾರ ಕೋರಿ ನಾನೆ ಒಂದು ಮೊಕದ್ದಮೆ ಹೂಡಬೇಕೆಂದಿರುವೆ. ಯಾರ ಮೇಲೆ ಎಂದು ಇನ್ನೂ ಯೋಚಿಸಿಲ್ಲ. ಇನ್ನೂ 14 ದಿನವಿದೆಯೆಲ್ಲಾ ಯೋಚಿಸಿದರಾಯ್ತು!
 ಯಾರು ನನ್ನ ಸ್ವಯಂ ಅಧಿಕಾರ ಕಿತ್ತುಕೊಂಡರೋ ಅವರೇ ನನ್ನ ಮೂಗು ಮುಟ್ಟಿಕೊಳ್ಳುವ ಅಧಿಕಾರ ನೀಡಬೇಕು ತನ್ಮೂಲಕ ನನ್ನ ಮೂಗಿನ ಕೆರೆತ ನಿಲ್ಲಿಸ ಬೇಕಾಗಿ ಕಳಕಳಿಯ ವಿನಂತಿ.
#_ಮನೆಯಲ್ಲೇ_ಇರೋಣ_ಮತ್ತಷ್ಟು_ಕೆರೆಯೋಣ!
#_lockdown .
�

2 comments:

  1. ಎಂಥ ಗಮ್ಮತ್ತು...
    ಕೈ ಗಟ್ಟಿಹಿಡಿದು ಕೊಂಡ್ರೆ ಆಯಿತ್ತು..
    ಕೆರೆಯೋದು ತಪ್ಪಿಸಬಹುದು..

    ReplyDelete
  2. 😆😆😆 ನಾ ಬರೆದಿದ್ದು ಸಾರ್ಥಕ ಆಯಿತು ಬಿಡಿ ನಿವು ನಕ್ಕರೆ

    ReplyDelete

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...