Thursday, April 30, 2020

ಬಕುಳದ ಬಾಗಿಲಲಿ ಸಿಕ್ಕವಳು...

ಬಕುಳ ಒಂದು ಸುಂದರ ಹೂ ಬಿಡುವ ಮರ. ಮಲೆನಾಡಿನ ಜನರ ಮದುವೆಗಳಲಿ ಇದರ ಹಾರವು ಅತಿ ಅಗತ್ಯವಾದುದು. ಪರಿಮಳವೂ ಅತಿ ಮಧುರ. ಇದರ ಹಣ್ಣನ್ನು ನಾವು ಚಿಕ್ಕವರಿದ್ದಾಗ ಆರಿಸಿ ಆರಿಸಿ ತಿನ್ನುತ್ತಿದ್ದೆವು. ತುಂಬಾ ರುಚಿಯಲ್ಲದಿದ್ದರೂ ಒಂಥರಾ ಒಗರು ಸಿಹಿಯ ಹಣ್ಣು. ಈಗಿನ ಮಕ್ಕಳಿಗೆ ಲೇಸ್, ಬಿಂಗೊ, ಕುರ್ ಕುರೆ ಬಿಟ್ಟರೆ ಬೇರೆ ಗೊತ್ತಿಲ್ಲ ಬುಡಿ. ಹೊಟ್ಟೆಯ ತುಂಬುವುದರ ಜೊತೆಗೆ ಪುಷ್ಟಿಯೂ ಸಹ. 
                               ಮಂಗನಂತೆ ಕಾಡು ಹಣ್ಣುಗಳನ್ನು ತಿಂದ ನನಗೆ ಯಾವ ವಿಟಾಮಿನ್ ಕೊರತೆ ಕಾಡಿದ್ದಿಲ್ಲ. ಪೂಜೆ ಪುನಸ್ಕಾರಗಳಲ್ಲಿಯೂ ಬಕುಳದ ಉಪಯೋಗ ಉಂಟು. ಬಕುಳದ ಹೂವಿನ ಹಾರ ವಿಲ್ಲದೇ ಮದುವೆನೂ ಆಗಲ್ಲ!


ಹಣ್ಣು 




ವ್ಯಾಟ್ಸಪ್ ನಲ್ಲಿ ಅವಳ ಪೋಟೋಗಳನ್ನು ಕೆಲವರು ಹಾಕಿದ್ದೆ ಹಾಕಿದ್ದು, ನನ್ನ ಮುಖಾರವಿಂದವು ಅರಳಿತ್ತು, ಅವಳ ಹುಡುಕುತ್ತಾ ಬಕುಳದ ಬಾಗಿಲಿಗೆ ಬಂದಿದ್ದೆ. ಬಹಳಾ ದಿನಗಳಿಂದ ಅವಳ ನಿರೀಕ್ಷೆಯಲ್ಲಿದ್ದೆ. ಹುಡುಕುತ್ತಾ ಇದ್ದೆ. ಸಿಕ್ಕಿರಲಿಲ್ಲ. ಅಚಾನಕ್ಕಾಗಿ ಬಾಲ್ಯದ ದಾರಿ ಸವೆಸುತ್ತಿದ್ದವನಿಗೆ ಬಕುಳದ ಮರದ ಬಳಿಯೇ ಅವಳು ಸಿಕ್ಕಳು! ಎಷ್ಟು ಖುಷಿಯಾಯಿತೆಂದರೆ  ಹೇಳ ತೀರದು. ನಿಂತಲ್ಲೇ ಕುಣಿದು ಕುಪ್ಪಳಿಸಿದೆ. ನನಗೆ ಸಿಕ್ಕವಳನ್ನು ನಿಮಗೆ ತೋರಿಸಬೇಡವೇ? ತಪ್ಪು ತಿಳಿಯ ಬೇಡಿ. ಅವಳೊಂದು ಜೇಡ!!! ಕಸದಲ್ಲೇ ಕಸದಂತಿರುವ ಜೇಡ! ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಸೂಕ್ತಿಯೂ ಕಡಿಮೆಯಾದೀತು ಇವುಗಳ ವೇಷ ಮರೆಸುವ ತಂತ್ರಕ್ಕೆ.




ಯಾವುದೋ ಒಣಗಿದ ಎಲೆಯೊಂದು ನೇತಾಡುತ್ತಿದೆಯಲ್ಲಾ ಎಂದು ಚಿಕ್ಕ ಕಡ್ಡಿಯ ಸಹಾಯದಿಂದ ಅದನ್ನು ಮುಟ್ಟಿದೆನಷ್ಟೆ. ಏನಾಶ್ಚರ್ಯ ಒಣಗಿದ ಎಲೆ ಓಡಾಡ ತೊಡಗಿತು! ನೋಡಿದರೆ ಕಾಲುಗಳೂ ಉಂಟು. ಯಾರೀಕೆ? ಹುಡುಕಾಡಿದೆ ಇವಳೇ ಚೇಳು ಬಾಲದ ಊರ್ಣ ನಾಭ( ಜೇಡ). 


             ಅರಶಿನ ಮತ್ತು ಕಡು ಕಪ್ಪು ಬಣ್ಣದ ಅಂಗಿಗಳಲ್ಲಿ ಇವಳನ್ನು ನೋಡಿದ್ದೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಇವು ನೋಡಲು ಕಾಣುವುದು ಅಪರೂಪ. ಈಗಿನ ಕಾಲದಲ್ಲಿ ಕಸವಾಗಲು ಯಾರು ಬಯಸುತ್ತಾರೆ ಹೇಳಿ? ಅದೂ ಕಾಲ ಕಸವಾಗಿ ಅಜ್ಞಾತವಾಗಿ. ಎಲ್ಲಾ ಕಡೆ ಬೇಡದ ಕಸವನ್ನು ಎಸೆಯುತ್ತಾ ಇರೋ ಮಾನವನೆಂಬ ಜೀವಿಯ ಮುಂದೆ, ಜೀವಿ ಸಮತೋಲದಲ್ಲಿ ಅಭೂತಪೂರ್ವ ಸಹಕಾರ ನೀಡುವ ಇವು ನಿಜಕ್ಕೂ ಶ್ರೇಷ್ಠವಲ್ಲವೆ? ಏನಂತೀರಿ?
ಶ್ರೀಧರ್. ಎಸ್. ಸಿದ್ದಾಪುರ.

ಚಿತ್ರ ಅಂತಜರ್ಾಲ.


1 comment:

  1. ಅದ್ಭುತವಾಗಿದೆ..😯

    ReplyDelete

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...