Wednesday, December 28, 2022

ಕವಿ ಶೈಲದಲ್ಲೊಂದು ಬೈಗು ಮತ್ತು ಬೆಳಗು..



    
                    ಸುಸಂಜೆಯಲಿ ಕವಿ ಮನೆಗೆ ಭೇಟಿ ಇತ್ತು ಕವಿ ಶೈಲ ಹೊಕ್ಕ ಹೊತ್ತದು. ಮುಕ್ಕೋಟಿ ಜೀವರಾಶಿಗಳ ಗೀತ ಗಾಯನ ನಾವು ಕವಿ ಶೈಲಕ್ಕೆ ಕಾಲಿಟ್ಟಾಗ ಶುರುವಿಟ್ಟಿತ್ತು. ಹಕ್ಕಿಗಳು ಮನೆ ತಲುಪುವ ಕಾತುರತೆಯಲ್ಲಿದ್ದವು. ಜೀರುಂಡೆಗಳು ತಮ್ಮ ಶೃತಿ ಪೆಟ್ಟಿಗೆ ತೆಗೆದು ವಾದನಕ್ಕೆ ಭರ್ಜರಿ ತಯಾರಿಯಲ್ಲಿದ್ದವು. ಒಂದಿಷ್ಟು ಜನ ಸಹೃದಯರು ಸೃಷ್ಠಿಯ ಕೌತುಕವನು ಕಣ್‌ ತುಂಬಿಕೊಳ್ಳಲು ಕಾತರಿಸಿದ್ದರು. ಕವಿ ವರೇಣ್ಯರ ಹಸ್ತಾಕ್ಷರಕ್ಕೆ ಸಾಕ್ಷಿಯಾಗಿ ಕಲ್ಲು ಹಾಸಿನಲಿ ಕೂತು ಕವಿ ಸಮಯವ ಆಹ್ವಾನಿಸುತ್ತಾ ರವಿ ಆಗಮನವನ್ನೇ ಧ್ಯಾನಿಸುತಲಿತ್ತು ಮನ. ಎಷ್ಟು ಬೈಗು ಮತ್ತು ಬೆಳಗಿನ ಚಿತ್ತಾರವನು ಉಂಡರೋ ಆ ಮಹಾ ಕವಿ! ಆ ರಸ ಗಳಿಗೆಯ ಮೆಲುಕು ಹಾಕುತ್ತಾ ಈ ಸಮಯವನು ಮನೋಹರಗೊಳಿಸಿತ್ತು. ಆ ಮಧುರಾತಿ ಮಧುರ ಮುಸ್ಸಂಜೆಯ ಹಿಂಬೆಳಕಿನ ಚಿತ್ರಗಳು ನಿಮ್ಮ ನೋಟಕ್ಕೆ. ಒಪ್ಪಿಸಿಕೊಳ್ಳಿ. 

 


 


Kavi Shaila Kuppalli 
























Wednesday, November 16, 2022

ಭಿನ್ನ ಸಂಸ್ಕೃತಿಯ ಜಾಡು ಹಿಡಿದು…

        ಪ್ರವಾಸ ಉಣಬಡಿಸುವ ಅಚ್ಚರಿಗಳು ನೂರಾರು. ಅಂತಹ ಒಂದು ಅಚ್ಚರಿಯ ಬೆನ್ನು ಹತ್ತಿ ಹೋದ ನಮಗೆ ದಕ್ಕಿದ್ದು ಇಷ್ಟು. 



ಮೀನು ಮಾರಾಟ ಮಳಿಗೆ, ಹೋಟೆಲ್‌, ದಿನಸಿ ಅಂಗಡಿ, ಬಟ್ಟೆ ಅಂಗಡಿ ಹೀಗೆ ಎಲ್ಲಿ ಕಂಡರೂ ಮಹಿಳಾ ಮಣಿಗಳದ್ದೇ ಪಾರುಪತ್ಯ. ಏನು ೯೦ ಶೇಕಡಾ ಮೀಸಲಾತಿ ಎನಾದರೂ ತಕ್ಷಣಕ್ಕೆ ಜಾರಿಗೆ ಬಂತಾ ಎಂದು ಅಂದುಕೊಂಡರಾ? ಅದೇ ಅಲ್ಲಿನ ವಿಶೇಷ. ಇದೇ ಅಲ್ಲಿನ ವಿಶೇಷ.  ಮಣಿಪುರದ ವಿಶೇಷ ಐಮಾ ಮಾರುಕಟ್ಟೆ.



ಭೂಮಿಯ ಮೇಲಿರುವ ಹೆಚ್ಚಿನ ಎಲ್ಲಾ ಸಮುದಾಯಗಳು ಪಿತೃ ಪ್ರಧಾನ. ಕೆಲವೇ ಕೆಲವು ಸಮುದಾಯಗಳು ಮಾತ್ರ ಮಾತೃ ಪ್ರಧಾನ. ಸಿಕ್ಕಿಂನ ಹೆಚ್ಚಿನ ಸಮುದಾಯಗಳು ಇನ್ನೂ ಮಾತೃ ಪ್ರಧಾನವಾಗಿ ಉಳಿದಿವೆ. ಇವುಗಳ ನಡುವೆ ಭಿನ್ನವಾಗಿ ನಿಲ್ಲುವುದು ಐಮಾ ಮಾರುಕಟ್ಟೆ. 

ಲೋಕದ ಪ್ರಧಾನ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಪುರುಷರಾದರೆ ಸ್ತ್ರೀ ಇಲ್ಲಿ 

ಅತಿಥಿ ಕಲಾವಿದರು. 



ಅದು ಹೋಟೆಲ್‌, ಕೃಷಿ, ವ್ಯಾಪಾರ ಯಾವುದೇ ಇದ್ದರೂ ಇಲ್ಲಿ ಪುರುಷರೇ ಪ್ರಧಾನ. ಸ್ತ್ರೀ ಏನಿದ್ದರೂ ಸೈಡ್‌ ಆಕ್ಟರ್.‌ ಇಂಪಾಲದ ಐಮಾ ಮಾರುಕಟ್ಟೆಗೆ ಬಂದರೆ ನೀವು ದಂಗಾಗುವಿರಿ. ಏಷ್ಯಾ ಖಂಡದಲ್ಲೇ ಇಷ್ಟು ದೊಡ್ಡ ಮಾರುಕಟ್ಟೆ ಮತ್ತೊಂದಿಲ್ಲ. ಸುಮಾರು ೪೦೦೦ ಅಂಗಡಿ ಇರುವ ಇದರ ವಿಸ್ತಾರವನ್ನು ಒಳ ಹೊಕ್ಕು ತಿಳಿಯಬೇಕು. . ಏನಿಲ್ಲ ಇಲ್ಲಿ ಎಲ್ಲಾ ಇದೆ. ಮೀನು, ತೆಂಗಿನ ಕಾಯಿ, ಪಾತ್ರೆ, ಹಳೆ ನಾಣ್ಯ, ತಿಂಡಿ ತಿನಿಸು, ಮಡಿಕೆ,  ಮುಂತಾದ ದಿನ ನಿತ್ಯದ ವಸ್ತುಗಳು. ಎಲ್ಲಾ ಮಳಿಗೆ ಸುತ್ತಿ ಬಂದರೂ ವ್ಯಾಪಾರಕ್ಕೆ ನಿಂತ ಒಬ್ಬನೇ ಒಬ್ಬ ಗಂಡಸು ನಿಮಗಿಲ್ಲಿ ಕಾಣ ಸಿಗಲಾರ. ಇಲ್ಲಿರುವ ಪುರುಷನೆಂದರೆ ಗ್ರಾಹಕ ಮಾತ್ರ! ಮಹಿಳೆಯರದ್ದೇ ಪಾರುಪತ್ಯ. ಎಲ್ಲಾ ಅಂಗಡಿಗಳ ಮಾಲೀಕರೂ ಹೆಂಗಸರು. ಕೆಲಸಗಾರರೆಲ್ಲಾ ಹೆಂಗಸರು. 



ಇತಿಹಾಸ:-

ಇಲ್ಲಿನ ಮಹಿಳಾ ಪಾರುಪತ್ಯದ ಬೆನ್ನತ್ತಿ ಹೋದರೆ ಸಿಗುವುದು ಕೆಲವು ಅಚ್ಚರಿ. ಹಿಂದಿನ ಕಾಲದಲ್ಲಿ ನಡೆದ ಅನೇಕ ಯುದ್ಧಗಳಲ್ಲಿ ಪುರುಷರು ಭಾಗವಹಿಸಬೇಕಾಗಿ ಬಂದುದರಿಂದ ಅವಶ್ಯಕವಾಗಿ ಆಗ ಪ್ರಾರಂಭವಾದ ಮಹಿಳಾ ಪಾರುಪತ್ಯ ಇಂದಿಗೂ ಮುಂದುವರಿದಿದೆ. ಪುರುಷನೇನಿದ್ದರೂ ಅತಿಥಿ ಕಲಾವಿಧ. ಮುಖ್ಯ ಭೂಮಿಕೆಗೆ ಬಂದ ಮಹಿಳೆಯರು ಹಿಂದೆ ಸರಿಯಲೇ ಇಲ್ಲ. 

ಇಲ್ಲಿನ ಹೆಚ್ಚಿನವರು ಸ್ನೇಹ ಶೀಲರು. ಬಹಳ ಬೇಗ ಸ್ನೇಹಿತರಾಗುವರು. ಯಾರಿಗೂ ಇಲ್ಲಿ ಇಂಗ್ಲೀಷ್‌ ಆಗಲಿ ಹಿಂದಿಯಾಗಲಿ ಬಾರದು. ಸಂವಹನವೇ ಮುಖ್ಯ ತೊಡಕು. ಮಡಿಕೆ ಮಾರಟದಲ್ಲಿ ತೊಡಗಿದ್ದ ಅಜ್ಜಿಯನು ಮೂಕ ಭಾಷೆಯಲ್ಲೆ ಮಾತಾಡಿಸಿ ಪೋನ್‌ ಸಂಖ್ಯೆ ಪಡೆಯುವಲ್ಲಿ ಯಶಸ್ವಿಯಾದೆ. ನಾ ತೆಗೆದ ಚಿತ್ರಗಳ ಬೇಡಿಕೆ ಇಟ್ಟ ಅಜ್ಜಿಗೆ ನೆನಪಿನಿಂದ ಅನೇಕ ಚಿತ್ರ ಕಳುಹಿಸಿ ಖುಷಿ ಪಟ್ಟೆ. 



ನನಗೆ ಇಂತಹ ಅಜ್ಜಿಯಂದಿರ ಆಶೀರ್ವಾದ ಸದಾ ಇರಲಿ. ಹಾಗೆ ಇಲ್ಲಿನ ಲಕ್ಷ್ಮೀ ಹೋಟೆಲ್‌ ನಲ್ಲಿ ಮಣಿಪುರಿ ತಾಲಿ ಜೊತೆಗೆ ನೀಡುವ ಸಿಹಿಯಾದ ದೇಸಿ ತಳಿಯ ಅನ್ನವನು ಸವಿಯಲು ,  ಐಮಾ ಮಾರುಕಟ್ಟೆ ನೋಡಲು ಮರೆಯದಿರಿ. 



ನವೆಂಬರ್‌ ನಲ್ಲಿ ನಡೆಯುವ ಶಂಗೈ ಹಬ್ಬಕ್ಕೂ ಹೋಗಿ ಬನ್ನಿ. 


Sunday, November 6, 2022

ದೂದ್‌ ಸಾಗರ ಒಂದು ಸ್ವಪ್ನ ವಿಲಾಸ

 


ಶ್ರಾವಣದ ಮಳೆ ಇಳೆಗೆ  ಮುತ್ತಿಕ್ಕುವ ಹೊತ್ತು. ಭುವಿಗೆ ಛತ್ರಿ ಹಿಡಿದಂತಿರುವ ಮಂಜನು ಸೀಳುವ ಚುಕ್‌ ಬುಕ್‌ ಬಂಡಿ.  ನೆಲದೊಡಲಿನಿಂದಲೂ ಕಿವಿಯ ಕುಹರ ತುಂಬುವ ಚುಕ್‌ ಬುಕ್‌ ಸದ್ದು. ರೈಲು ದೂದ್‌ ಸಾಗರವೆಂಬ ಅಗಾಧ ಜಲರಾಶಿ ಎಡೆಗೆ ಮಲಗಿದ ನೂರಾರು ಭತ್ತದ ಗದ್ದೆಗಳನ್ನು ಎಬ್ಬಿಸುತ ಸೂರ್ಯನೇಳುವ ಮುನ್ನ ಬೆಳಗಾವಿಯಿಂದ ಹೊರಟಿತ್ತು. ರೈಲು ಲೊಂಡ ಜಂಕ್ಷನ್‌ನಲ್ಲಿ ಟಿಫಿನ್‌ ಮಾಡತೊಡಗಿತ್ತು. ನಾವೂ ಕೂಡ. ಹಿಮ್ಮುಖವಾಗಿ ಎಳಿಯುತ್ತಿದ್ದ ರೈಲು ಮುಂದೆ ಚಲಿಸಲು ತೊಡಗಿತ್ತು.

  ಬೆಳಗಾವಿಯಿಂದ ಬಂಡಿಯ ಜೊತೆಯಲಿ ಸರಿಗಮ…



ಸದಾ ಖಾಸಗೀತನ ಬಯಸುವ ನನ್ನಂತವರಿಗೆ ಹೇಳಿ ಮಾಡಿಸಿದ ಪ್ರಯಾಣ. ದಿವ್ಯ ಏಕಾಂತ. ವೇಗದ ವ್ಯಾಧಿಗಂಟದ ಸಹನ ಶೀಲ ಬಂಡಿ. ಏಕಾಂತದಲಿ ಬೆರೆತ ಪ್ರಕೃತಿ. ಸ್ವಾಗತ ಕಾರರಂತೆ ನಿಂತ ಸಾಲು ಮರಗಳು.  ಹೃದಯದ ಏರಿಳಿತಗಳನು ಸರಿಪಡಿಸಬಲ್ಲ ಅಗಾಧ ಪ್ರಕೃತಿ. ಮನದ ಕಾನನದಿ ಸೈಕ್ಲೊ ಸೈಲ್‌ ಶಬ್ದ ಚುಕ್‌ ಬುಕ್‌, ಚುಕ್‌ ಬುಕ್. ರೈಲೊಳಗೂ ನುಗ್ಗಿ ಎಲ್ಲರನೂ ಒದ್ದೆ ಮಾಡಿ ಮೆತ್ತಗೆ ಮಾಡುವ ಸೂಜಿ ಮಳೆ ಬೆಳಗಿನಿಂದಲೂ ಜೋಗುಳ ಹಾಡುತ್ತಿತ್ತು. ಪ್ರಕೃತಿ ಆನಂದ ಮಯ ಈ ಜಗ ಹೃದಯ ಎನ್ನುವ ಗೀತೆಯನು ಹಾಡುತ್ತಿರುವಂತಹ ಅನುಭೂತಿ. ಎಲ್ಲೆಲ್ಲೂ ನೀರ ಸಂಗೀತ. ಮಂಜಿನ ತಂಪಾದ ರಗ್‌ ಹೊದ್ದ ಪ್ರಕೃತಿ ಅತಿ ರಮ್ಯ. ದಿವ್ಯ ಏಕಾಂತ.



ಇಲ್ಲಿನ ಗುಡ್ಡದ ತುಂಬಾ ನೆಕ್ಲೆಸ್‌ ನಡುವಿನ ಹವಳದಂತೆ ಹರವಿನಿಂತ ಹೂಗಳು. ನನ್ನ ಕಂಡು ಕ್ರೀಮು ಬಳಿದುಕೊಂಡತಿರುವ  ಗುಡ್ಡಗಳು ಹಲ್ಕಿರಿದು ನಕ್ಕವು. ಗುಡ್ಡದ ತುಂಬಾ ನೀರ ಹನಿಗಳು ಸಂಪಿಗೆ ಮೂಗಿನ ಸುಂದರಿ ಮುತ್ತಿನ ಹಾರ ತೊಟ್ಟಂತೆ ತೊಟ್ಟಿಕ್ಕುತಲಿದೆ. ಮನಸ್ಸಿನ ಏಕಾಂತಕ್ಕೆ ಸಾತ್‌ ನೀಡುವ ರೈಲಿನ ಚುಕ್‌ ಬುಕ್‌ ಚುಕ್‌ ಬುಕ್.‌ ಗುಡ್ಡಗಾಡಿಗೆ ತೊಂದರೆ ಕೊಡ ಬಾರದೆಂದು ಸೂರ್ಯ ರಜೆ ಮೇಲಿದ್ದ. ಇಲ್ಲಿನ ಪ್ರತೀ ಸುರಂಗವೂ ಹೆಬ್ಬಾವಿನ ಹೊಟ್ಟೆ ಹೊಕ್ಕು ಬಂದಂತಹ ಅನುಭವ. 



ಕಾತರಕ್ಕೊಂದು ಕಾವ್ಯ ತೆರೆ…



ಹಳ್ಳ ಕೊಳ್ಳ ಹಾದು ಜಲಪಾತದ ಸನಿಹಕೇ ಬಂದಿದೆ ಬಂಡಿ. ರೈಲಿನೊಳಗಿರುವವರ ಎದೆಯಲಿ ವಿದ್ಯುತ್‌ ಸಂಚಾರ. ಈ ಅಗಾಧ ಜಲರಾಶಿಯನ್ನು ಕಣ್‌ ತುಂಬಿಕೊಳ್ಳುವ ತವಕ ಪ್ರತಿಯೊಬ್ಬರಲ್ಲೂ. ಜಲರಾಶಿ, ರೈಲು, ಹೃದಯದ ಶಬ್ದಗಳ ಕಲಸು ಮೇಲೊಗರ. ಕಣ್ಣಿಗೆ ಸುಗ್ಗಿ. ಮನಸ್ಸಿಗೆ ಸಿಹಿ ಹುಗ್ಗಿ. ಮಂಜಿನ ರಗ್ಗಿನಿಂದ ಧುಮ್ಮಿಕ್ಕುವಂತೆ ಧುಮ್ಮಿಕ್ಕುತ್ತಿದೆ ಹಾಲ್ನೊರೆ!  ಅಬ್ಬಾ ಎಂತಹ ಸುಮನೋಹರ ದೃಶ್ಯ. ಒಂಟಿ ಮರವೊಂದು ಕಾಲಾತೀತ ಆನಂದದಲಿ ಜಲಪಾತದ ನಡುವಿನಲಿ ರಕ್ಷಕನಂತೆ ಸಂಭ್ರಮದಿ ನಿಂತೇ ಇದೆ. ಎಳೆಯ ಎದೆಗಳಿಂದ ವಾವ್‌ ಎಂಬ ಚೀತ್ಕಾರ. ಕೆಲವರು ಮೂಕವಿಸ್ಮಿತ. ರೈಲಿನಲ್ಲಿರುವ ಪ್ರತಿಯೊಬ್ಬರಲ್ಲೂ ವಿದ್ಯುತ್‌ ಸಂಚಾರ. ಇಣುಕಿ ನೋಡಿದಷ್ಟೂ ಮುಗಿಯದ ತವಕ. ಎಲ್ಲವೂ ವಿಸ್ಮಯವಿಲ್ಲಿ. ನೋಟಕನ ದೃಷ್ಟಿ ಗಮ್ಯವಾದುದಿಲ್ಲಿ ಎಲ್ಲವೂ ಅತಿ ರಮ್ಯ… ನಾನಿಂತ ಬಾಗಿಲ ತುದಿಗೊಬ್ಬಳು ಮುದುಕಿ ಪದೇ ಪದೇ ಬಂದು ಓಡೋಡಿ ಬಂದು ಪ್ರಕೃತಿಯ ರಮಣೀಯತೆ  ಸವಿದು ಹೋಗುತ್ತಿದ್ದಳು. ಅವಳ ಉತ್ಸಾಹ ಕಂಡು ಬೆರಗಾದೆ.

ಚಾರಣಿಗರ ಸಂತೆಯಲಿ ಬೆರಗಾಗಿ…




ಎಲ್ಲೆಲ್ಲೋ ಜಿನುಗಿದ ಹನಿಯೊಂದು ನದಿ  ಸೇರುವಂತೆ ಸೇರುವ ಚಾರಣಿಗರ ಹಿಂಡು. ಹೃದಯದ ಕವಾಟ ತೆರೆವ ನೋಟ. ಎಲ್ಲಾ ವೈಯಕ್ತಿಕ ಸುಖ ದುಃಖ ಕರಗುವ ಏಕೈಕ ಪ್ಲಾಟ್‌ ಪಾರಂ. ದುಃಖಗಳೆಲ್ಲಾ ಕರಗಿ ನೀರು ಕೆಂಪಾಗಿ ಹರಿಯುತ್ತಿರುವುದೋ ಎಂಬಂತೆ ಭಾಸ. ಮೈ ಕೈಗಳಲೆಲ್ಲಾ ನೀರ ಕಾರು ಬಾರು. ಅದ್ರಿಯ ತುದಿಯಲ್ಲಿ ಬೋರ್ಗರೆಯುತಾ ನಡುವಿನಲಿ ನಯವಾಗಿ ನುಗ್ಗುವ ದೂದ್‌ ಸಾಗರದ ರಮ್ಯತೆ ಅಪಾರ. 



ರ್ಭಾವುಕವಾಗಿ ಚಲಿಸುವ ರೈಲು ಮಳೆಯ, ಮಂಜಿನ ಚಾದರಕ್ಕೆ ಮೆತ್ತಗಾಗಿದೆ. ಜಾರದಂತೆ ಜಾಗರೂಕವಾಗಿ ಚಲಿಸುತ್ತಿದೆ. ನಿರ್ಭಾವುಕ ಕಣ್ಣುಳ್ಳ ತಮ್ಮ ತುತ್ತಿನ ಬುತ್ತಿ ಅರಸಿ ಹೊರಟ ಅರಸಿಕರು ಹೊರಗೆ ಇಣುಕದೆ ಸುಮ್ಮನಿದ್ದರು! ಅವರನ್ನೆಲ್ಲಾ ತುಂಬಿಕೊಂಡು ಹೊಟ್ಟೆ ಉಬ್ಬರಿಸಿದಂತೆ ಬೆಟ್ಟಗುಂಟ ಪ್ರಯಾಣ ಹೊರಟ ಬಂಡಿ.  ಮನಸ್ಸು ಸುರಿವ ಮಳೆಗೆ ಜಲಪಾತದ ಅಬ್ಬರಕ್ಕೆ ತೊಯ್ದು ತೊಪ್ಪೆಯಾಗಿತ್ತು.

ರೈಲ್ವೆಯ ವಿಕ್ರಮ-

ರೈಲ್ವೆ ಇಲಾಖೆ ಇಂತಹ ದುರ್ಗಮ ದಾರಿಯಲ್ಲೂ ಅತ್ಯಂತ ಸುರಕ್ಷಿತವಾದ ಹಾದಿ ನಿರ್ಮಿಸಿದ ಕತೆ ಇನ್ನೂ ರೋಚಕ. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ದಾರಿ ಮಾಡುವುದು ಅಪಾರ ಪರಿಶ್ರಮದ ಕೆಲಸ. ಜೊತೆಗೆ ಇಲ್ಲಿ ಕಂಡು ಬರುವ ಕಾಡು ಪ್ರಾಣಿಗಳನ್ನು ಎದುರಿಸಿ ಕೆಲಸ ಮಾಡುವುದು ಅಸಾಧ್ಯ ದುಸ್ಸಾಹಸದ ಕೆಲಸ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಪಶ್ಚಿಮ ಘಟ್ಟಗಳ ಒಡಲಿನೊಳಗೆ  ಕೊರೆದ ಹಾದಿಯ ರೋಚಕತೆ ನೆನಪಿಗೆ ಬಂದು ಪುಳಕಗೊಂಡಿತು ಮನ. 

ರೈಲು ಬಲಕ್ಕೆ ಹೊರಳಿ ಆ ಮಹಾ ರುದ್ರ ರಮಣಿಯತೆಯ ದೃಶ್ಯವನ್ನು ನಮಗೆಲ್ಲಾ ಉಣಬಡಿಸಿ ಸೋನಾಲಿಮ್‌ ಸ್ಟೇಷನ್‌ನಲ್ಲಿ ನಿಶ್ಚಲವಾಯಿತು. ಈ ಅಮೋಘ ಜಲೌಗಕ್ಕೆ ಮನಸೋತ ಗೆಳೆಯ ಮಧ್ಯ ರೈಲಿನಿಂದ ಜಿಗಿಯಲು ತಯಾರಾಗಿದ್ದ. ಅವನನ್ನು ತಡೆದೆ. ಸೋನಾಲಿಮ್‌ ಬರುತ್ತಲೇ ರೈಲಿನಿಂದ ಜಿಗಿದು ಜಲಪಾತದತ್ತ ಹೊರಟೆವು. ಪಾಕಿಸ್ಥಾನದ ಉಗ್ರಗಾಮಿಗಳನ್ನು ಕಂಡವರಂತೆ ಅಲ್ಲೇ ನಿಂತಿದ್ದ ಪೋಲಿಸರು ನಮ್ಮನ್ನು ಅಟ್ಟಿಸಿಕೊಂಡು ಬಂದರು. ಏನೋ ಕದ್ದವರಂತೆ ಓಡುತ್ತಾಬಂದು ರೈಲು ಹತ್ತಿದೆವು.

ಲಾಠಿ ಬೀಸುತ್ತಲೇ ಕರಗಿದ ನಮ್ಮ ಅಹಂಕಾರ ನೀರಿನೊಂದಿಗೆ ಸೇರಿ ಧುಮ್ಮಿಕ್ಕುತ್ತಲೇ ಇದೆ. ನೀರೂ ತನ್ನ ಬಣ್ಣ ಬದಲಿಸಿದೆ.  ಎಷ್ಟು ಸುರಿದರೂ ತಣಿಯದ ಹಾಲ್ನೋರೆ ಯಾರ ಕರುಣೆಗಾಗಿ ಕಾಯುತಿದೆಯೋ? ಜಲಪಾತ್ರೆಯ ಕೆಳಗೆ ತಿನ್ನಲು ಬಚ್ಚಿಟ್ಟ ಎರಡು ವಡಾಪಾವ್‌ ಪೋಲಿಸರನ್ನು ಕಂಡಾಗಲೇ ಹಣಕಿ ಹಾಕಿ ನಗತೊಡಗಿತು.

ಸೊನಾಲಿಮ್‌ನಿಂದ ಜಲಪಾತ ಹತ್ತು ಹಾಡಿನ ದೂರ. ಕೆಲವರ ಕಣ್ಣಾಲಿಗಳಲಿ ಮತ್ತೆ ಜಲಪಾತ ದರ್ಶನ. ನಿರಾಶೆ ಕರಗುವ ಬಿಂದು ಹುಡುಕುತ್ತಾ ನಿಂತೆ. ಕೆಲವರು ಇಷ್ಟಾದರೂ ನೋಡಲು ಸಿಕ್ಕಿತ್ತಲ್ಲ ಎಂದು ಖುಷಿ ಪಟ್ಟರು. ಎರಡು ಭಿನ್ನ ದ್ರುವಗಳು. ಸನಿಹಕ್ಕೆ ಹೋಗಿ ನೋಡದಷ್ಟು ಕಡಕ್‌ ಖಾಕಿ. ಇಂತಹ ಅತಿ ರಮ್ಯ ಜಲಪಾತಕ್ಕೆ ಬೇಲಿ ಹಾಕಿದ್ದು ಬೇಸರ ತರಿಸಿತು. ಇದ್ಯಾವುದನ್ನೂ ಲೆಕ್ಕಿಸದೇ ಹೋದವರು ಪೋಲಿಸರ ಅತಿಥಿಯಾದರು. ಡಕ್‌ ವಾಕ್‌  ಮಾಡಿಸಿಕೊಂಡು ಜಲಪಾತದಿಂದ ಕುಲೆಮ್‌ ರೈಲ್ವೆ ಸ್ಟೇಷನ್‌ ವರೆಗೆ ಎಂಟು ಕಿ.ಮೀ ವರೆಗೆ ಪಾದ ಸೇವೆಗೈದರು. ಬಂದವರೆ ಕುಲೆಮ್‌ ಸ್ಟೇಷನ್‌ ನ ಬಣ್ಣದೊಂದಿಗೆ ಒಂದಾಗಿ ನಿದ್ರಾ ದೇವಿಗೆ ಶರಣಾದರು. ತಮ್ಮ ತಮ್ಮ ರೈಲಿಗಾಗಿ ಕಾಯುತ್ತಾ ಕುಲೆಮ್‌ ನಲ್ಲಿ ಕರಗತೊಡಗಿದರು. ಇವರನ್ನೆಲ್ಲಾ ಮಳೆ ತನ್ನ ಜೋಗುಳದಲ್ಲಿ ಜೀಕತೊಡಗಿತು. 

ಬೀಳುವಾಗಲೂ ಘನತೆ ಉಳಿಸಿಕೊಳ್ಳುವುದು ಜಲಪಾತವೊಂದೇ ಇರಬೇಕು. ಬಿದ್ದಾಗಲೇ ಘನತೆ. ಇದ್ದಲ್ಲೇ ಇದ್ದರೆ ಘನತೆ ಎಲ್ಲಿ? ಬೀಳುವಾಗಲೂ ಘನತೆ ಉಳಿಸಿಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಾ ಗಾಂಭೀರ್ಯದಿಂದಲೇ ಧುಮುಕುತ್ತಲೇ ಇದೆ.

ಎಷ್ಟೊಂದು ಬೆಸೆದ ಜೀವಗಳನ್ನು ಕಂಡಿತೋ ಅದು. ಮತ್ತೆ ಮತ್ತೆ ಇವರೆಲ್ಲರ ಬೆಸುಗೆ ಕಾಣಲು ಧುಮುಕುತ್ತಲೇ ಇದೆ.  ವಡಾಪಾವ್‌ ಮಾರುವವನಿಗೆ ನಾಲ್ಕು ಕಾಸು ಆಗುವುದು ಇಲ್ಲೇ. ಜಲಪಾತ ಬಿದ್ದಾಗಲೇ ಅವನ ಜೀವನದ ಬುತ್ತಿ ಕಟ್ಟಿಕೊಳ್ಳುವುದು. ಜಲಪಾತದಂತೆ ಇವನಿಗೂ ಬಹಳ ಅವಸರ. ಅವನ ಮನೆಯಲ್ಲಿ ಯಾರಿದ್ದಾರೋ ಕಾಯುವವರು.

ಬನ್ರಿ ಮತ್ತೆ-

ಬದುಕಿನ ದುಃಖ ದುಮ್ಮಾನ ಏಕತಾನದ ತಂತಿ ಮುರಿಯಲು ಇಂತಹ ರೋಚಕ ಹಾದಿಯನ್ನೊಮ್ಮೆ ತುಳಿದು ನೋಡಿ. ಜೀವಮಾನಕ್ಕಾಗುವಷ್ಟು ಅನುಭವದ ಬುತ್ತಿ ನಿಮ್ಮ ಜೊತೆ! 

ನಿಶ್ಚಲವಾದ ಸನ್ಯಾಸಿಯಂತಹ ಕನಸಿನ ಕುಲೆಮ್‌ನಲ್ಲಿ ಸಿಕ್ಕ ಬಿಸಿ ಬಿಸಿ ಊಟ ಹೊಸ ಚೈತನ್ಯ ಜಗತ್ತಿಗೆ ಕಾಲಿಡುವಂತೆ ಮಾಡಿತು. 



ಕ್ಷಮಿಸಲಾರೆಯ ಧರೆಯೆ –

ಪ್ರಕೃತಿಯ ಋಣಭಾರ ನನ್ನೆದೆಯಲಿ ಹಾಗೇ ಉಳಿಯಿತು. ತೀರಿಸುವ ಹೊಣೆಗಾರಿಕೆಯೊಂದಿಗೆ ಹಿಂದಿರುಗಿದೆ. ಆದರೆ ನೀರ ಸೆರಗಿನಲಿ ಉಳಿದ ನನ್ನಣ್ಣಂದಿರು ಎಸೆದ ಪ್ಲಾಸ್ಟಿಕ್‌ ಇನ್ನೂ ಅಣಕಿಸುತ್ತಲೇ ಸಮುದ್ರ ಸೇರುವ ತವಕದಲ್ಲಿದೆ.

ಕುಲೆಮ್‌ ರೈಲು ನಿಲ್ದಾಣ ಮತ್ತು  ಜಲಪಾತಕ್ಕೆ ಮಿಸ್‌ಯು ಎಂದೆನ್ನುತ್ತಾ ಮತ್ತೆ ಬರುವ ಬರವಸೆಯನ್ನಿತ್ತು ಬಾಯ್‌ ಬಾಯ್ ಹೇಳಿ ಹೊರಟು ನಿಂತೆವು.


ಶ್ರೀಧರ್‌ ಎಸ್.‌ ಸಿದ್ದಾಪುರ. 

Wednesday, May 4, 2022

ನೆನಪುಗಳನ್ನು ನೇಣಿಗೇರಿಸಬೇಕು...

ಹಮಾರ ಬಜಾಜ್‌-




    ನೆನಪುಗಳನ್ನು ನೇಣಿಗೇರಿಸಬೇಕೆಂದು ಹೊರಟವನಿಗೆ ಸಿಕ್ಕ ಹಳೆ ಹೊತ್ತಗೆಯ ನೆನಪುಗಳು ಕಾಡುತಲಿವೆ. ಬೇಡವೆಂದರೂ ಕಹಿಯೇ ಉಳಿದ ಕಾಫಿ ಚರಟದಂತೆ ನೆನಪುಗಳು ಕಾಡುತಲಿವೆ. ಕುಡಿದ ಕಹಿ -ಸಿಹಿ ಕಾಫಿಯ ನೆನಪು ಮಾಸಿದಂತೆ ಕುಣಿಯುತ್ತೆ ಮನಸ್ಸು. ಮತ್ತೇನಕ್ಕೋ ಧ್ಯಾನಿಸುತ್ತೆ ಮನಸ್ಸು. ಮೂಲೆಯಲಿ ಮಲಗಿದ್ದ ಸಣ್ಣ ವೃಣವೊಂದನು ಕೆದಕಿ ಕೆದಕಿ ಮಹಾ ವೃಣವಾಗುವಂತೆ ರಾಡಿ ಎಬ್ಬಿಸುತ್ತೆ.




ನೆನಪುಗಳು, ನೆನಪುಗಳ ಶವ ಪೆಟ್ಟಿಗೆಯಿಂದ ಹೊರ ಬರಲಾರದಂತೆ ಮೊಳೆ ಜಡಿಯಬೇಕು ಬಿಡಿಸಿಕೊಳ್ಳಲಾರದಂತೆ, ಆಗುತ್ತಿಲ್ಲ. ಅದು ಕಾಡಿದಂತೆ ಮತ್ಯಾವುದೂ ಕಾಡವುದಿಲ್ಲ. ಸುಡುವ ಬೆಳದಿಂಗಳು. ನೆನಪಿಗೆ ವಾರಸುದಾರನಿಲ್ಲ. ಹೊರ ಹಾಕಿದರೂ ಹಾಕದೇ ಇದ್ದರೂ ನೆನಪುಗಳು ಒಮ್ಮೊಮ್ಮೆ ಮೆರವಣಿಗೆ ಹೊರಡುತ್ತವೆ. ತಟ್ಟುತ್ತವೆ. ದಿಗ್ಗನೇಳುತ್ತವೆ ಮುಂಗಾರಿನ ಮೋಡದಂತೆ. ಕಾಡುವ ಅನಂತ ಪ್ರಲೋಭನೆಗಳೂ ಇದರ ಎದುರು ಮಂಡಿಯೂರಲೇ ಬೇಕು ಜೋಗಿಯಂತೆ. ಅಕ್ಷರವೇ ಅಳಿಯುತ್ತವೆ ಇನ್ನೆಲ್ಲಿಯ ನೆನಪುಗಳು ಎಂಬ ಸಿನಿಕ ವಾಕ್ಯವೂ ಕ್ಷಣಿಕ. ಮತ್ತೆ ತೆರೆಯಂತೆ ದಡಕ್ಕೆ ಬಡಿಯುತ್ತವೆ. 


ಇಂತಹ ನೆನಪುಗಳ ನೊರೆ ಉಕ್ಕಿಸುವ ಕತೆಗಳ ಗುಚ್ಚ ನನ್ನೆದುರಿಗಿದೆ. ಎಲ್ಲಾ ಕತೆಯ ಹೆಣಿಗೆಯೂ ವಿಶಿಷ್ಟವಾದ ಪ್ಲಾಟ್‌ ಫಾರಂನಲ್ಲಿ ಕಟ್ಟಿರುವಂತಹ ನಿರ್ಮಿತಿ. ಎಲ್ಲೆಲ್ಲೂ ನೆನಪುಗಳದ್ದೇ ಮುಖ್ಯ ಭೂಮಿಕೆ.

ನೀವಾದರೂ ಓದಿ ಕತೆಗಳ ಸಿಕ್ಕನ್ನೂ ಬಿಡಿಸಿಕೊಳ್ಳಿ. ಒಂದೊಂದು ಕತೆಗಳು ತೆರೆಗಳಂತೆ ನನ್ನನ್ನು ಮತ್ತೆ ಮತ್ತೆ ತಟ್ಟುತ್ತಲೇ ಇವೆ. ನಿಮಗೂ ತಟ್ಟಿದರೆ ಹೇಳಿ. ತಕರಾರಿದ್ದರೂ.

 

ಯಾವ ಉಡುಗೊರೆ ಕೊಡಲಿ-

ಭಟ್ಟರ ಸಿನೆಮಾ ನೆನಪು ಮಾಡಿಕೊಡುವಂತಹ ವಿಶಿಷ್ಟ ಕತೆ ಯಾವ ಉಡುಗೊರೆ ಕೊಡಲಿ. ಕತೆಯ ಎಳೆ ವಿಧಾಯದಲಿ ಮಡುಗಟ್ಟುವ ವಿಶಾದ. ವಿಶಾಧವೇ ಕತಾ ನಾಯಕನೊ ಎಂಬಂತೆ ಭಾಸವಾಗುತ್ತದೆ. ಅದಮ್ಯವಾಗಿ ಪ್ರೇಮಿಸುವ ಗಂಡು ಹೆಣ್ಣು ವಿಧಾಯವನ್ನೇ ಅತ್ಯಂತ ರೋಚಕವಾಗಿ ವಿಧಾಯದ ಬಿಸಿ ಓದುಗನಿಗೂ ತಟ್ಟುವಂತೆ ವರ್ಣಿಸುತ್ತಾ ಕತೆಗಾರ ಕತೆಯಲ್ಲಿ ಸಾಧಿಸುವ ತಾಧ್ಯಾತ್ಮ ಅಪೂರ್ವವಾದುದು. ಎಲ್ಲಿಯೂ ಒಂದೇ ಒಂದು ವಾಕ್ಯವೂ ಭಾರವಾಗದಂತೆ ವಿಧಾಯದ ಕಹಿಯೇ ಹೃದಯ ತುಂಬುವಂತಹ ಮ್ಯಾಜಿಕ್ ಕತೆಯುದ್ದಕ್ಕೂ ಸಾಧ್ಯವಾಗಿಸಿದ್ದು ಕನ್ನಡದ ಕತೆಗಳ ಮಟ್ಟಿಗೆ ವಿಶೇಷ.‌ ಎರಡು ಹೃದಯಗಳ ತೊಳಲಾಟವನ್ನು, ಅವರು ಜೊತೆಯಾಗುವರಾ ಇಲ್ಲವಾ ಒಂದೂ ಗೊತ್ತಾಗದಂತೆ ಮುಕ್ತ ಅಂತ್ಯ ಕಾಣುವ ವಿಶಿಷ್ಟ ಕತೆ.

ಜೆಜೆ ಬಂದಿದ್ದ –

            ಇಬ್ಬರು ಗೆಳೆಯರ ನಡುವೆ ನಡೆವ ಆಪ್ತ ಮಾತುಕತೆಯಂತೆ ಕಂಡರೂ ಇಲ್ಲೊಂದು ವಿಶೇಷತೆ ಇದೆ. ಮಾನವ ಸಂಬಂಧಗಳ ನಡುವೆ ಗುಪ್ತವಾಗಿ ಹರಿಯುವ ಹೊಟ್ಟೆ ಕಿಚ್ಚು ಕತೆಯುದ್ದಕ್ಕೂ ಹರಿದು ಅದೇ ಕತಾ ನಾಯಕನಿರಬೇಕೆಂಬ ಗುಮಾನಿ ನಮಗೆ ಹುಟ್ಟಿಸುತ್ತದೆ. ಪ್ರೀತಿಸಿದ  ಹುಡುಗಿಯನ್ನು ಬಿಟ್ಟುಕೊಟ್ಟ ನೆನಪುಗಳನ್ನು ಹಂಚಿಕೊಳ್ಳುವ ಸ್ನೇಹಿತರು. ಈ ಕತೆಯ ಪ್ರಧಾನ ಭೂಮಿಕೆಯು ನೆನಪೇ.  ಹೆಚ್ಚು ಕಡಿಮೆ ಮೇಲ್ಮೆಗಳ ತಾಕಲಾಟಗಳು ಕತೆಯ ನೇಯ್ಗೆಯಲ್ಲಿ ಸೇರಿಸಿ ಅತ್ಯಂತ ಸುಶಿಕ್ಷಿತರೂ ಈ ಮೇಲ್ಮೆಗಳ ಹೊಡೆದಾಟದಲ್ಲಿ ಭಾಗಿದಾರರು ಎಂಬ ಅಚ್ಚರಿಯು ಟಿಸಿಲೊಡೆಯುತ್ತದೆ. ಜೆಜೆಯ ವಿಶಿಷ್ಟ ವಿಕ್ಷಿಪ್ತ ವ್ಯಕ್ತಿತ್ವದ ಹೊರತಾಗಿಯೂ ಅದು ನಮಗೆ ಕಾಡುತ್ತದೆ.

ಹಮಾರ ಬಜಾರ್‌-

ಹಿಮ್ಮುಖವಾಗಿ  ಚಲಿಸುವ ತಂದೆಯ ನೆನಪಿನ ವಿಶಿಷ್ಟ ನೀಳ್ಗತೆ  ʼ ಹಮಾರ ಬಜಾಜ್‌ʼ. ಡೈರಿಯ ಪುಟಗಳಿಂದ ಹಿಮ್ಮುಖವಾಗಿ ಶುರುವಾಗಿ ಅಂತ್ಯದಲ್ಲಿ ಮುಂದೆ ಚಲಿಸುತ್ತಾ ತಂದೆಯ ನೆನಪುಗಳನ್ನು ಮಾಡಿಕೊಳ್ಳುತ್ತಾ ಸಾಗುತ್ತದೆ.

ತಂದೆಯ ನೆನಪಿನಿಂದ ಹೊರ ಬರಲಾರದ ಮಗ ತನಗೆ ತಾನು ಬರೆದುಕೊಂಡ ಸ್ವಗತದ ಕಿಂಡಿಯಂತೆ ಕೆಲವೊಮ್ಮೆ ಭಾಸ ಆಗುವುದು. ನೆನಪೆಂಬ ಗಾಳಿ ಪಟ ಮನದ ತುಂಬಾ ಹಾರಾಡುವಂತೆ ಮಾಡಿ ವಿಶಿಷ್ಟವಾಗಿಸಿದ್ದಾರೆ ವಿಕ್ರಂ.

ಬಜಾಜ್‌ ಸ್ಕೂಟರ ಅವರ ನೆನಪಿನ ಅಥವಾ ಅವರದ್ದೇ ಒಂದು ಭಾಗವೇನೋ ಅನ್ನಿಸುವಷ್ಟು ಗಾಢವಾಗಿ ಚಿತ್ರಿಸಿದ್ದಾರೆ. ಸಾವಿನಿಂದ ಮೊದಲ್ಗೊಂಡು ವಿಚಿತ್ರ ಸನ್ನಿವೇಶಗಳನ್ನು ವಿರಚಿಸುತ್ತಾ ಅವರ ಬದುಕಿನ ವಿವರಗಳನ್ನು ಡೈರಿಯ ಪುಟಗಳ ಮೂಲಕ ಮರಳಿಸುವ ಪ್ರಯತ್ನ. ಗಾಢ ವಿಶಾದದಲಿ ಅದ್ದಿ ತೆಗೆದ ಚಿತ್ರದಂತೆ ಚಿತ್ತದಲಿ ಉಳಿದು ಹೋಗುತ್ತದೆ. ತಂದೆಯ ಬದುಕಿನೊಂದಿಗೆ ಆಪ್ತವಾಗಿ ತಳುಕು ಹಾಕಿ ಕೊಂಡವರನ್ನೆಲ್ಲಾ ಇಲ್ಲಿ ಮತ್ತೊಮ್ಮೆ ಜೀವಂತಿಸಿದ್ದಾರೆ. ತಂದೆಯ ಗೆಳೆಯರಾದ ಪೆಜತ್ತಾಯರು, ಉಡುಪರನ್ನು ಪುನಃ ಬದುಕಿಸಿ ಆಪ್ತವಾಗಿಸಿದ್ದಾರೆ.

ಯಾರನ್ನೇ ಆಗಲಿ ನಾವು ಪ್ರಯತ್ನ ಪೂರ್ವಕ ನೆನಪು ಮಾಡಿಕೊಳ್ಳಬೇಕೊ ಅಥವಾ ಅದಾಗಿಯೇ ನೆನಪುಗಳು ತೆರೆಗಳಂತೆ ಮನ ಪಟಲದಲಿ ಆವರಿಸುವುದೋ ಎಂಬ ಗುಮಾನಿ ನನಗೆ ಕಾಡುವುದು.

ತೀವ್ರ ವಿಶಾದಕ್ಕೂ ಎಳಸದೇ ಕತೆ ಸತ್ವಯುತವಾಗಿ ಅಂತ್ಯ ಕಾಣುವುದು ಕತೆಯ ಮಗದೊಂದು ವಿಶೇಷತೆ.



Monday, March 21, 2022

ಬೇಟೆ ಹಕ್ಕಿಯ ಬೆನ್ನಟ್ಟಿ!

ಶಿಖ್ರಾ

    ಹಲವು ವರುಷಗಳ ಹಿಂದೆ ಪಕ್ಷಿ ಛಾಯಾಗ್ರಹಣದ ಬೆನ್ನು ಹತ್ತಿದ ಸಮಯ. ಕಾಗೆ ಗಾತ್ರದ ಹಕ್ಕಿಯೊಂದು ನೀಲಾಕಾಶದಲಿ ನಿರುಕಿಸುತ್ತಾ ವೃತ್ತಾಕಾರದ ಸುತ್ತು ಬರುತಲಿತ್ತು. ಎಷ್ಟು ಹೊತ್ತು ಕಾದರೂ ಕೆಳಗಿಳಿಯುತ್ತಿರಲಿಲ್ಲ. 
    ಯಾಕೆ ಇದು ಹೀಗೆ ವೃತ್ತಾಕಾರವಾಗಿ ಸುತ್ತುತ್ತಿದೆ. ಯಾವುದಾದರೂ ಹರಕೆ ಉಂಟಾ ಎಂದು ತಲೆ ಕೆರೆದುಕೊಳ್ಳತೊಡಗಿದೆ. ತಿಳಿಯಲೇ ಇಲ್ಲ. 

ಈ ಹಕ್ಕಿ ಹೇಗಿದೆ? ಯಾವ ಪಂಗಡಕ್ಕೆ ಸೇರಿದುದು ಎಂದು ತಿಳಿವ ಕುತೂಹಲ ತೀವ್ರವಾಗಿತ್ತು. ಆಗ ನನ್ನ ಬಳಿ ಉತ್ತಮ ದರ್ಜೆಯ ಕ್ಯಾಮರವೂ ಇರಲಿಲ್ಲ. ಅದರ ಮಿತಿಯನು ಮೀರಿ ಆ ಹಕ್ಕಿಯ ವಿವರಗಳನ್ನು ಹೆಕ್ಕಲು ಯತ್ನಿಸಿದ್ದೆ. ಸಾಧ್ಯವಾಗಲೇ ಇಲ್ಲ. ವಿಫಲತೆಯೇ ಬೆನ್ನು ಹತ್ತಿದ ವರ್ಷಗಳು ಅವು. ಮತ್ತೆ ಮತ್ತೆ ಮುಗಿಲಿಗೆ ಹಾರಿ ನೆಲದ ನೋಟಗಳನ್ನು ತನ್ನ ಕಣ್ಣಿನಲ್ಲಿ ತುಂಬಿಕೊಳ್ಳುತ್ತಾ ನನ್ನ ನಿದ್ದೆಕೆಡಿಸುತಲಿತ್ತು. ಹೀಗೆ ಕೆಲ ವರುಷ ಅದರ ಗುಂಗಿನಲ್ಲೇ ಕಳೆದೆ. ಅಲ್ಲದೇ ಅದರ ವಿಚಿತ್ರ ಕೂಗಿನಿಂದ ನಮ್ಮ ಮನೆಯ ಸನಿಹದವರೆಲ್ಲಾ ಅದರ ಕೂಗು ಅಪಶಕುನವೆಂದು ಹೇಳುತ್ತಿದುದು ನನ್ನ ನಿದ್ದೆ ಕೆಡಿಸಿತ್ತು. ತನ್ನ ಒಡಲ ದನಿ ನಮಗೆ ಅಪಶಕುನವಾಗುವುದು ಹೇಗೆಂದು ತಿಳಿಯದೆ, ಅವರಿಗೆ ಪ್ರಶ್ನೆಗಳ ಸರ ತೊಡಿಸಿ ʼಫಟಿಂಗʼ ಎಂಬ ಬಿರುದನ್ನೂ ಸಂಪಾದಿಸಿದ್ದೆ. ಈ ಹಕ್ಕಿಯ ಚಿತ್ರಕ್ಕಾಗಿ ಹತ್ತಾರು ಗಂಟೆಗಳ ವ್ಯಯಿಸಿದಿದೆ. ಒಂದು ಚಿತ್ರಕ್ಕಾಗಿ ಹಲವಾರು ಕಿಲೋ ಮೀಟರ್‌ ಪಯಣಿಸಿದ್ದೆ. ಕೆಲವರುಷದ ಬಳಿಕ ದೊಡ್ಡ ಲೆನ್ಸ್‌ ಸಿಕ್ಕ ಮೇಲೆ ಅದರ ಜಾತಕದ ಒಂದೊಂದೇ ವಿವರಗಳು ಲಭ್ಯವಾದವು. ಇಂತಿಪ್ಪ ಅದರ ವಿವರಗಳು ಈ ಕೆಳಗಿನಂತಿವೆ. 

ಸೂಕ್ಷ್ಮ ದೃಷ್ಟಿ ಪಾದರಸದ ಚುರುಕು ವ್ಯಕ್ತಿತ್ವದ ಜಾಣ ಬೇಟೆಗಾರ ಈ ಹಕ್ಕಿ. ಕಾಲು, ಕೊಕ್ಕು ಎಲ್ಲವೂ ಹದ್ದಿನಂತೆ! ದೇಹ ಚಿಕ್ಕದು. ಸುಮಾರು ಕಾಗೆ ಗಾತ್ರ. ಹೆಸರು ಶಿಖ್ರಾ .  ಹೊಟ್ಟೆ ಮತ್ತು ಗರಿಗಳು ಬಿಳಿ ಬಣ್ಣ. ತನ್ನ ದೃಷ್ಟಿ ಗಮ್ಯವಾದ ಎಲ್ಲವನ್ನೂ ಬಕಾಸುರನಂತೆ ಕಬಳಿಸುತ್ತದೆ.  ಒಂದೆರಡು ಬಾರಿ ಇದರ ಅದ್ಭುತ ಬೇಟೆಯನ್ನು ಕಣ್ಣಾರೆ ಕಂಡು ಧನ್ಯನಾಗಿದ್ದೆ. ಆದರೆ ಚಿತ್ರ ಮಾತ್ರ ಮರೀಚಿಕೆಯಾಗುಳಿಯಿತು. 

ಚೈತ್ರ ಮಾಸದ ಏರು ಹೊತ್ತು ಸೂರ್ಯ ಇಬ್ಬನಿಗೆ ಮುತ್ತಿಕ್ಕಿ ಮೇಲೇರುವಾಗಲೇ ದೊಡ್ಡದೊಂದು ಲೆನ್ಸ್ ಹಿಡಿದು ವಾರಾಹಿ ತಟದ ಝರಿಯೊಂದರ ಸನಿಹ ಹೈಡ್‌ ರಚಿಸಿ ನಿಂತಿದ್ದೆ. ಝರಿಯ ಸನಿಹದಿಂದ ಏನೋ  ನೆತ್ತಿಯ ಮೇಲಿಂದ ಕೇತಾನ್‌ ಫ್ಯಾನ್‌ ಗಾಳಿ ಬೀಸಿದಂತೆ ಗಾಳಿ ಬೀಸಿತು. ನನ್ನ ಹೈಡ್‌ನ ಕೇವಲ ೫ ಮೀಟರ್‌ ಅಂತರದಲ್ಲೇ ತನ್ನ ಬೇಟೆಯೊಂದನ್ನು ಹಿಡಿದು ಭಕ್ಷಿಸತೊಡಗಿತು. ಕೆಲವೇ ಕ್ಷಣಗಳಲ್ಲಿ ಹೈಡನ ರಂಧ್ರವನ್ನು ಬದಲಾಯಿಸುವುದರೊಳಗೆ ಅದರ ಭಕ್ಷಣೆ ಮುಗಿದು ತಣ್ಣಗೆ ಸನಿಹದ ಹಣ್ಣಿನ ಮರವೇರಿ ಪೋಸು ಕೊಡಲಾರಂಬಿಸಿತ್ತು. ನನ್ನ ನೋಡಿದ್ದೆ ಪಲಾಯನಗೈಯಿದಿತು. ಅಷ್ಟರೊಳಗೆ ಕ್ಯಾಮರದಲ್ಲೊಂದು ಸುಂದರ ಚಿತ್ರ ದಾಖಲಾಗಿತ್ತು. ಕೆಮರಾ ಖುಷಿ ನಗೆ ನಕ್ಕಿತು! 

***

ಕತ್ತಲಿಗೆ ಕಾಲಿಡಲು ಹೊರಟ ಸೂರ್ಯ ಕಿರಣಗಳಿಗೆ ಗಿಡಗಂಟೆಗಳೆಲ್ಲಾ ಪ್ರತಿಸ್ಪಂದಿಸುವ ಹೊತ್ತಲ್ಲಿ ಕೆರಾಡಿಯಿಂದ ವಾಪಾಸಾಗುತ್ತಿದ್ದೆ. ಪಶ್ಚಿಮದಲ್ಲಿ ಬಣ್ಣಗಳ ಓಕಳಿಯಾಟ. ಯಾವುದೋ ಗಿಡದ ಸಂಧಿಯಲಿ ಸಣ್ಣ ಅಲುಗಾಟ. ನೋಡಿದರೇ ಅದೇ ಶಿಖ್ರಾ ಕುಳಿತು ನನಗಾಗಿ ಕಾದಿದೆಯೋ ಏನೋ ಎಂಬಂತೆ ಕುಳಿತಿತ್ತು. ಒಂದೆರಡು ಚಿತ್ರ ತೆಗೆದೆ. ಒಂದು ಚಿತ್ರ ಸ್ಪಷ್ಟ ಬಂದಿತು. ಅಂದು ಅತ್ಯಂತ ಖುಷಿಯ ದಿನ ನನ್ನ ಪಾಲಿಗೆ. ಇಂತಹ ಸ್ವರ್ಗ ಸದೃಶ ಹಕ್ಕಿಯನ್ನು ನೋಡಿದ್ದು ನನ್ನ ಪುಣ್ಯವೇ ಸರಿ. 

ಜೀವನ:

ಮಾರ್ಚ್‌ ನಿಂದ ಜೂನ್‌ ವರೆಗೆ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಕಾಗೆಯಂತೆ ಸಪಾಟಾದ ಗೂಡು ನಿರ್ಮಿಸುತ್ತದೆ. ತನ್ನ ಕಾಲುಗಳಲ್ಲಿ ಕಡ್ಡಿಯನ್ನು ತೆಗೆದುಕೊಂಡೊಗಿ ಗೂಡನ್ನು ನಿರ್ಮಿಸುತ್ತದೆ. ೩-೪ ಮೊಟ್ಟೆಗಳನ್ನು ಒಮ್ಮೆಗೆ ಇರಿಸುತ್ತದೆ. ಜೀವ ವಿಸ್ಮಯದ ಅತ್ಯಂತ ನಾಜೂಕಾದ ಕೊಂಡಿ ಇದಾಗಿದ್ದು ಇಲಿ ಮುಂತಾದ ದಂಶಕಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...