ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ.(Irfu Waterfall, Coorg)
ಇವನೇನು ಹೇಳುವನೆಂದು ಹುಬ್ಬೇರಿಸಬೇಡಿ ಕೆಲವೊಮ್ಮೆಒಂದರ ಹುಡುಕಾಟದಲ್ಲಿರುವಾಗ ಇನ್ನೇನೋ ಸಿಕ್ಕಿ ಎಲ್ಲಿಗೋ ಒಯ್ಯುವುದು.
ಆಗ ನನ್ನ ಬಳಿ ಪುಟಗೋಸಿ ಸುಣ್ಣದ
ಡಬ್ಬಿಯಂತಹ ಚಿಕ್ಕ ಕ್ಯಾಮರವೊಂದಿತ್ತು. ಆಗಿನ ಕಾಲಕ್ಕೆ ಅತಿ ಆಸೆ ಪಡುವಂತಹ ಕನಸು ಕಾಣುತ್ತಿದ್ದೆ.
ಚಿಟ್ಟೆಗಳ ಸುಂದರ ಚಿತ್ರ ತೆಗೆಯೋದು. ಆಗ ನನ್ನ ಕಣ್ಣಿಗೆ
ಬಿದ್ದವ ಪ್ಯಾಪಿಲೋ ಬುದ್ದ ಎಂಬ ಸುಂದರ ಚಿಟ್ಟೆ. ಅದರ
ಸೌಂದರ್ಯಕ್ಕೆ ಮಾರು ಹೋಗಿ ಬಿಟ್ಟೆ. ಪಶ್ಚಿಮ ಘಟ್ಟಗಳಿಗೇ ಸೀಮಿತವಾದ ವಿಶಿಷ್ಟ ಚಿಟ್ಟೆ. ಎಂಥವರನ್ನೂ
ಮಂತ್ರ ಮುಗ್ಧಗೊಳಿಸುವ ಅದರ ಸುಮನೋಹರ ಸೌಂದರ್ಯವೇ
ನನ್ನ ಕಂಗೆಡಿಸಿತು. ಕಡು ಹಸಿರಾದ ಅದರ ಮೈಯನ್ನು ಒಮ್ಮೆ ನೋಡಿದರೆ ಮುಗೀತು, ನೀವು ಸಮ್ಮೋಹಿತರಾಗೋದು
ಗ್ಯಾರೆಂಟಿ. ಈ ಚಿಟ್ಟೆಯ ಅಂದವೇ ನನ್ನನ್ನು ಇಲ್ಲಿಯವರೆಗೆ ಎಳೆದು ತಂದಿದ್ದು.
ನಾಗರಹೊಳೆಯ ಕಾಡುಗಳಲ್ಲಿ ಕಾಟಿ ಚಿರತೆಗಳ ಸಂಗಕ್ಕೆ ಬಿದ್ದು ಸುಮ್ಮನೆ ಅಲೆಯುತ್ತಿದ್ದವನಿಗೆ ಸಿಕ್ಕ ನ್ಯಾಚುರಲಿಸ್ಟ್ ಒಬ್ಬರು ಇರ್ಫು ಜಲಧಾರೆಯಲಿ ಇವು ಧಾರಾಳವಾಗಿವೆ ಎಂದಿದ್ದ. ತಡ ಮಾಡದೇ ಕಾರೊಂದನ್ನು ಬುಕ್ ಮಾಡಿ ಹೊರಟೆವು!
ಕುಟ್ಟಂನಲ್ಲಿ ಕಟ್ಟಂ ಚಾ
ಕುಡಿದು
ವಿಚಿತ್ರವಾದ ದ್ರಾವಣದಲ್ಲಿ ಅದ್ದಿ
ತೆಗೆದಂತಹ ಕುಟ್ಟಂನ ಪರಿಸರ. ಸೆಪಿಯಾ ಬಣ್ಣದಲ್ಲಿ ಅದ್ದಿ ತೆಗೆದಂತಹ ಊರು ವಿಚಿತ್ರವಾದ ಸೆಳೆತದಿಂದ
ನನ್ನ ಕಂಗೆಡಿಸಿತ್ತು. ನಾಗರಹೊಳೆ ದಾಟಿದವರಿಗೆ ಕುಟ್ಟಂ ಎಂಬ ಪುಟ್ಟ ಹಳ್ಳಿಯ ಬೆಚ್ಚಗಿನ ಸ್ವಾಗತ.
ಹೆಚ್ಚಿನವರು ಕೇರಳಿಗರು. ಇಲ್ಲಿ ಕಟ್ಟಂ ಚಾಯ್ ಬಹಳ ಫೇಮಸ್.
ಹದವಾದ ಚಹ ಎಲೆಗಳು ಕೆಟಲಿನಲ್ಲಿ ಕುದಿಯುತ್ತಾ, ಹಬೆಯಾಡುತ್ತಾ ಇತ್ತು ಕಟ್ಟಂ
ಚಾಯ. ಬದುಕೊಂದು ಕೆಟಲಿನಲಿ ಬೇಯುತಿರುವ ಅನುಭವ. ಕುಟ್ಟಂನಲ್ಲಿ ಕಟ್ಟಗಿನ ಬಿಸಿ ಬಿಸಿ ಕರಿ ಚಹಾ ಹೀರುವ,
ಚಹಾ ಕಾಫೀ ತೋಟದ ಕೂಲಿಗಳು ಸಾಕಷ್ಟು. ನಾವು ಹೋದಾಗಲೂ ಅನೇಕರು ಅಲ್ಲಲ್ಲಿ ಚಹ ಹೀರುತಲಿದ್ದರು. ನಾವೂ
ಗೂಡಂಗಡಿಗಳಲ್ಲಿ ಸಿಗುವ ಹಬೆಯಾಡುವ ಚಹಾ ಕಣ್ಣು ಹೀರಿದೆವು. ಕ್ಯಾನ್ಸರ್ಗೂ ಗಿಡಮೂಲಿಕೆ ಔಷಧ ನೀಡಿ
ಗುಣಪಡಿಸುವವರು ಇಲ್ಲಿದ್ದಾರೆಂದು ಬೆಂಗಳೂರಿನ ಗೆಳೆಯನೊಬ್ಬ ಯಾವಾಗಲೂ ಹೇಳುತ್ತಿದ್ದ. ಹಾಗೇ ಅವರನ್ನೂ
ಒಮ್ಮೆ ಭೇಟಿಯಾಗಬೇಕು. ಅವರ ಮಾತಿಗೆ ಕಿವಿಯಾಗಬೇಕು.
ಲಾಮಾ ನಾಡಿನ ಲಕ್ಷ್ಮಣ ತೀರ್ಥದೆಡೆಗೆ…
ಲಾಮಗಳ ಭೂತಾನ್‌ನ ರಾಜಧಾನಿ ಥಿಂಪುವನ್ನು ನೆನಪಿಸುವಂತಿರುವ ದಕ್ಷಿಣ ಕೊಡಗಿನ
ಈ ತಾಣ ಎಷ್ಟೊಂದು ರಮಣೀಯ ಅಂತೀರಾ. ಬನ್ನಿ ಹೇಗಿದೆ ನೋಡೋಣವೇ?
ಜಲಧಾರೆಯ ಬಲಕ್ಕೆ ಕೇರಳವಿದ್ದರೆ ಎಡಕ್ಕೆ ನಾಗರಹೊಳೆ ಅಭಯಾರಣ್ಯವಿದೆ. ಅದೇ
ಈ ಜಲಧಾರೆಯ ಮೂಲ. ಕೇರಳಿಗರೇ ಇಲ್ಲಿ ಹೆಚ್ಚು. ಜಲಧಾರೆಗೆ ಹಲವು ಕಿಲೋಮೀಟರ್ ಇರುವಾಗಲೇ ಇದು ನಿಮ್ಮನ್ನು
ಕೈಬೀಸಿ ಕರೆಯುತ್ತದೆ.
ಇದನ್ನು ನೋಡಲು ಕೇರಳದ ತುದಿಯ ತಲುಪಬೇಕು. ಮಂಜು ತುಂಬಿದ ಗಿರಿಗಳಿಂದ ಜಡೆ
ಬಿಟ್ಟಂತೆ ಧುಮುಕುವ ಲಲನೆ. ಅಲ್ಲಲ್ಲಿ ಬಳುಕುವ ಬಳ್ಳಿ. ನಿಸರ್ಗದ ಗರ್ಭಗುಡಿಯಲ್ಲಿ ಅಡಗಿದ ರತ್ನ ಮಣಿ.
ಸುತ್ತೆಲ್ಲಾ ಗಡಿಬಿಡಿ ಇಲ್ಲದೇ
ಹಾರಾಡುವ ಹಕ್ಕಿಗಳು. ಕೆನ್ನೆಗೆ ಮುತ್ತಿಕ್ಕಲು ಬರುವ ಪ್ಯಾಪಿಲೋ ಬುದ್ಧ! ಹೆಸರೇ ಎಷ್ಟೊಂದು ಆಕರ್ಷಕ.
ದರ್ಶನ ಪಡೆದರಂತೂ ಅದರ ಮೋಹಕತೆಗೆ ಬೆರಗಾಗದೇ ಇರಲಾರಿರಿ.
ಮೆಟ್ಟಿಲೇರಿ ಮುಗಿಲಿಗೆ ಕೈಯ ಚಾಚಿ…
ಇಲ್ಲಿ
ಹರಿವ ತೊರೆಯ ಸೆರಗ ಸೆಳೆಸಿ ಮೇಲೇರಿದಂತೆ ಮಂಜು ನಿಮ್ಮನ್ನು ಆವರಿಸುತ್ತದೆ. ಕಿವಿಯೊಳಗೆಲ್ಲಾ ಹಾದು
ಕಚಗುಳಿ ಇಡುತ್ತದೆ.
ಜಲಪಾತದ
ಹಾದಿಯೇ ಎಷ್ಟೊಂದು ರೋಚಕ. ಹೂ ಬಳ್ಳಿಗಳು, ಶೃಂಗಾರಕ್ಕಿಟ್ಟಂತೆ ಕಾಣುವ ದಪ್ಪ ದಪ್ಪ ಬಿಳಲುಗಳು. ಜಲಪಾತದ
ಸನಿಹದೊರೆಗೆ ಮೆಟ್ಟಿಲುಗಳ ಸಖ್ಯ ಬೆಳೆಸಿದ ದಪ್ಪ ದಪ್ಪ ಮರಗಳು.
ಕಾವೇರಿಯ
ಉಪನದಿಯಾಗಿ ಮುಂದೆ ಹರಿಯುವ ಗಂಡು ನದಿ ಲಕ್ಷ್ಮಣ ತೀರ್ಥ. ಮುಂದೆ ಹುಣಸೂರು, ಮೈಸೂರು ಮಂದಿ ಇದನ್ನು
ಕುಲಗೆಡಿಸಿದ್ದಾರೆ. ಹುಣಸೂರಿನಲ್ಲೊಮ್ಮೆ ನೋಡಿದ್ದೆ ನದಿಯೋ ಗಟಾರವೋ ಎಂಬಷ್ಟು ಗಬ್ಬು. ಹಾಳುಗೆಡುಹದೇ
ನೆಮ್ಮದಿ ಇಲ್ಲವೇನೋ ನಮ್ಮ ಜನಕ್ಕೆ.
ಪುಟಾಣಿ
ಮೆಟ್ಟಿಲ ಏರಿ ಪುಷ್ಪ ಗಿರಿಯ ಬುಡವನ್ನೊಮ್ಮೆ ಮುಟ್ಟಿ ಬರಬೇಕು. ಹೂವ ಕಣಿವೆ ತುಂಬಾ ಪುಷ್ಪ ಪಕಳೆ ಹಾಸಿದಂತ
ದಾದಿಯ ಹೊಕ್ಕು ಬರಬೇಕು. ನೀವು ಎಂದೂ ಮರೆಯಲಾರಿರಿ ಇರ್ಫು ಎಂಬ ಚಕೋರಿಯ.
ತರುಲತೆಗಳ
ಜೊತೆಗೆ ಹಾದು ಬಂಡೆಯಿಂದ ಬಂಡೆಗೆ ಕುಪ್ಪಳಿಸುತ್ತಾ ಪುಳಕಗೊಳಿಸುವುದು. ಅರಸಿಕನ ಮನದ ಕದ ತೆರೆವ ತಾಣ!
ಇರ್ಫು
ನಾಗರಹೊಳೆ ಅಭಯಾರಣ್ಯಕ್ಕೆ ಬಲು ಸನಿಹದಲ್ಲಿದೆ. ಅಲ್ಲಿಂದ ಬ್ರಹ್ಮಗಿರಿ, ಪುಷ್ಪಗಿರಿಗೆ ಚಾರಣ ಕೂಡ
ಮಾಡಬಹುದು. ಕೊಡಗಿನ ಕೆಳ ತುದಿಯಲ್ಲಿರುವುದರಿಂದ ತಲುಪುವುದೇ
ಬಲು ಕಷ್ಟ. ಈ ಜಲಪಾತ ವೀಕ್ಷಣೆಗೆ ಕೊಡಗಿನಿಂದ ಬಂದು ಹೋಗಲು ಒಂದಿಡಿ ದಿನ ಬೇಕಾಗುವುದು. ಈ ಜಲಪಾತದ
ಬಳಿ ಈಶ್ವರ ದೇವಾಲಯವಿದೆ. ಪ್ರಕೃತಿ ಅಧ್ಯಯನಕ್ಕೆ ಹಲವು ತಂಡಗಳು ಬಂದು ಹೋಗುತ್ತಾರೆ. ಹಲವರು ಇಲ್ಲಿ
ಬಂದು ಜೀವಜಾಲದ ಅಧ್ಯಯನ ಮಾಡುತ್ತಾರೆ.
ಸಿಕ್ಕನೇ ಬುದ್ಧ:-
ಹಲವು ಪ್ಯಾಪಿಲೊ ಬುದ್ಧದ ಜೊತೆ
ಜೊತೆಗೆ ಅನೇಕ ಮನಮೋಹಕ ಚಿಟ್ಟೆಗಳು ಅಲ್ಲಲ್ಲಿ ಕಾಣ ಸಿಕ್ಕವು. ಜೊತೆಗೊಂದಿಷ್ಟು ನೆನಪುಗಳು.
ಸಿಕ್ಕೀತೆ ಮುಂದಿನ ದಾರಿ:-
ನಾಳೆಗಾಗಿ ನಮ್ಮನ್ನುಳಿಸಿ ಎಂಬ ಲಕ್ಷ್ಮಣ ತೀರ್ಥದ ಆರ್ತ ನಾದ ನಮ್ಮನ್ನು ಇನ್ನೂ ತಾಕದಿರುವುದು ವಿಪರ್ಯಾಸ. ಲಕ್ಷ್ಮಣ ತೀರ್ಥವೆಂಬ ವಿಶಿಷ್ಟ ನದಿಯು ತನ್ನ ನೈಜ ಸೌಂದರ್ಯವನ್ನು ಉಳಿಸಿಕೊಳ್ಳುವಂತೆ ಮಾಡುವುದು ನಮ್ಮೆಲ್ಲರ ಹೊಣೆಯಲ್ಲವೇ?