Sunday, June 28, 2020

ಸಿಲ್ಲರ್ ಎಂಬ ಅವಕಾಶವಾದಿ!

ಮಳೆಗಾಲದ ಒಂದು ಮುಂಜಾನೆ. ಹನಿ ಮಳೆ ಹರಿಯುತ್ತಿತ್ತು. ಆಗಾಗ ಸಣ್ಣ ಬಿಸಿಲು. ಛಾಯಾಚಿತ್ರಕಾರನಿಗೆ ಸರಿಯಾದ ವಾತಾವರಣ. ಪ್ರಕೃತಿಯ ನಿಗೂಢಗಳು ಅನನ್ಯ. ಅಂತಹ ಒಂದು ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಂತಿರುವೆ. 
ಸತ್ತ     ಇರುವೆಯನು  ಹಿಡಿಯಲು  ಕಾಯುತಿರುವ  ಸಿಲ್ಲರ್  ಜೇಡ.


ಹೀಗಿರುವ ವಾತಾವರಣದಲ್ಲಿ ಮತ್ತಿ ಗಿಡದಲ್ಲಿ ಒಸರುವ ಸಿಹಿಯನ್ನು ಸವಿಯಲು ದರ್ಜಿ  ಇರುವೆಗಳು ಗಿಡಕ್ಕೆ ಭೇಟಿ ಕೊಡುತ್ತಿದ್ದವು. ಇಂತಹ ಒಂದು ಗಿಡದಲ್ಲಿ ಇರುವೆಗಳಿಗಾಗಿ ಕಾದು ಕುಳಿತಿದ್ದ ಸಿಲ್ಲರ್ (Siler) ಎಂಬ ಇರುವೆ ಪ್ರಿಯ ಜೇಡ. ಕಟುಕನಾದರೂ ಧೈರ್ಯಶಾಲಿಯಲ್ಲ. ಸಣ್ಣ ಪುಕ್ಕಲೊಂದು ಯಾವಾಗಲೂ ಅವನ ಎದೆಯಲ್ಲಡಗಿರುತ್ತಿತ್ತು. ಎರಡು ಮೂರು ಇರುವೆ ಬಂದರೂ ಬೇಟೆಯಾಡದೇ ಹಾಗೇ ಬಿಟ್ಟು ಬಿಟ್ಟು ಬಿಟ್ಟನಪ್ಪ. ಯಾಕೋ ಗೊತ್ತಿಲ್ಲ. 
       
              ಮತ್ತಿ ಮರದ ಚಿಗುರ ಹಿಂದೆಯೇ ಅಡಗಿ ಕುಳಿತ್ತಿತ್ತು. ಹೀಗಿರುವಾಗ ಎಲ್ಲಿಂದಲೊಂದು ಒಂದಿರುವೆ ಮತ್ತೊಂದು ಸತ್ತ ಇರುವೆಯನ್ನು ತನ್ನ ಗೂಡಿಗೆ ಒಯ್ಯುವ ಪ್ರಯತ್ನದಲ್ಲಿ ವಿಫಲವಾಗಿ ಹಾಗೇ ಎಲೆಯ ಮೇಲೆ ಬೀಳಿಸಿ ಹೋಗಿತ್ತು. ಸುಮಾರು ಹೊತ್ತು ಕಾದು ಕಾದು ಯಾವುದೇ ಅಪಾಯವಿಲ್ಲವೆಂದು ನಿರ್ಧರಿಸಿ ಇರುವೆಯ ಮೇಲೆ ಎರಗಿತು. ಸತ್ತ ಇರುವೆಯನ್ನು ಎಗರಿಸಿಕೊಂಡು ಹೋಯಿತು. 
ಸತ್ತ ಇರುವೆ ಹೊತ್ತೊಯ್ಯುವ ಈ ಜೇಡ ಕೆಲವೊಮ್ಮೆ ಧೈರ್ಯ ಮಾಡಿ ಸತ್ತ ಇರುವೆಯನ್ನು ತನ್ನದೆಂದು ಕ್ಲೈಮ್ ಮಾಡುವುದೂ ಉಂಟು!
ಸುಮಾರು ಹೊತ್ತು  ಕಾದ ಬಳಿಕ  ಇರುವೆಯನು ಹೊತ್ತೊಯ್ಯುವ ಜೇಡ.


 ಎರಡು ಮೂರು ವರುಷಗಳ ಹಿಂದೆ ಹೀಗೆಯೇ ಸತ್ತ ಇರುವೆಯೊಂದನ್ನು ಈ ಜೇಡ ಅನಾಮತ್ತು ಎಗರಿಸಿಕೊಂಡು ಹೋಗಿದ್ದನ್ನು ಕಂಡಿದ್ದೆ. ಏನೇ ಹೇಳಿ ಸಿಲ್ಲರ್ ಎಂಬುದೊಂದು ಅಪ್ಪಟ 'ಇರುವೆ ಕಳ್ಳ', ಅವಕಾಶವಾದಿ.

Monday, June 15, 2020

ಮಳೆಯ ಚಿತ್ರಗಳು...

ಅದೇಕೋ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ನೆನಪುಗಳ ಹಿಂಜುತಿದೆ. ಎದೆಯೊಳಗೆ ಕುಳಿತ ಬೆಚ್ಚಗಿನ ಭಾವವನ್ನು ಉದ್ದೀಪನಗೊಳಿಸುವ ಮಳೆ. ಎಲ್ಲವನ್ನು ಚಿಗುರಿಸುವ ಮಳೆ. ನೀರ ಹನಿಗಳ ಹಾಡು ಕೇಳುತ್ತಾ ನನ್ನ ಏಕಾಂತದೊಳಗೆ ಹುದುಗಿದ್ದೆ. ಮಳೆಗೆ ಗಿಡಗಳ ಪ್ರತಿಕ್ರಿಯೆ ಹೇಗಿರಬಹುದೆಂದು ಎಣಿಸುತಿದ್ದೆ. ಮನಸ ಮುಗಿಲ ತುಂಬಾ ನೆನಪಿನ ಮೆರವಣಿಗೆ. ಹಾಗೇ ಕುಳಿತವನಿಗೆ ಪ್ರತಾಪಗಢ್ ಕೋಟೆಗೆ ಹೋದ ನೆನಪು ಒತ್ತರಿಸಿಕೊಂಡು ಬಂತು.
ಮಳೆ ಮೋಡಗಳ ಮೆರವಣಿಗೆ. 





















  



ಔರಂಗಜೇಬನಿಗೂ ಬೆದರದ ಶಿವಾಜಿಯ ವೀರತ್ವಕ್ಕೆ ಮಾರುಹೋಗಿ ಆತನ ಒಂದೆರಡು ಕೋಟೆ ನೋಡಲು 2019ರ ಮಳೆಗಾಲದಲ್ಲಿ ಅಲ್ಲಿಗೆ ಹೋಗಿದ್ದೆವು. ಮೊದಲು ರಾಯಗಢ ಕೋಟೆ ನೋಡಿಕೊಂಡು ಸತಾರ್ ಜಿಲ್ಲೆಯಲ್ಲಿರುವ ಪ್ರತಾಪಗಢಕ್ಕೆ ಬಂದಿದ್ದೆವು.( ರಾಯಗಡ ಲೇಖನ ಓದಲು ಇದರ ಮೇಲೆ ಚಿಟಿಕೆ ಹೊಡೆಯಿರಿ) ಶಿವಾಜಿ ಅಫಜಲ್ ಖಾನ್ನನ್ನು ಹೆಡೆ ಮುರಿ ಕಟ್ಟಿದ್ದು ಇಲ್ಲೇ. ಆನೆ ನುಗ್ಗಿಸಲಾಗದಂತೆ ವಿಚಿತ್ರವಾದ ತಿರುವು ಮುರುವು ಬರುವಂತೆ ಎರಡು ಮೂರು ಹಂತಗಳಲ್ಲಿ ನಿಮರ್ಿಸಲಾದ ಕೋಟೆ. ಪಾತಾಳದಲ್ಲಿರುವಂತೆ ಕಾಣುವ ವಾಹನಗಳು! 


ಮಳೆಯಲಿ ಇನಿಯನೊಂದಿಗೆ ತುಂಟಾಟದಲಿ ನಿರತ ನೀರೆ !
ಪ್ರತಾಪ್ ಗಡ್ ನಿಂದ ಕಾಣುವ ವಿಹಂಗಮ ನೋಟ. 


ಪ್ರತಾಪ್ ಕೋಟೆ. 
ಗೈಡ್ ಹೇಳಿದ ವಿವರಣೆಗಳನ್ನೆಲ್ಲಾ ಕೇಳುತ್ತಾ ಸಮಯ ಸರಿದಿದ್ದೇ ತಿಳೀಲಿಲ್ಲ. ಶಿವಾಜಿಯ ನೆನಪಿಗೆ ಆತನ ಮುದ್ರೆಯ ಟಿ-ಶರ್ಟನ್ನು, ಜೊತೆಗೊಂದಿಷ್ಟು ಕೀ ಚೈನ್ ಕೊಂಡು ಮಹಾರಾಷ್ಟ್ರದ ವಿಶೇಷ 'ಜವಾಣ್' ನೂರು ರೂಪಾಯಿಗೆ ಎಂಬ ಫಲಕವಿದ್ದ ಹೋಟೆಲೊಂದಕ್ಕೆ ನುಗ್ಗಿದೆವು. ಖಾರವಾದ ಪಲ್ಯದ ಜೊತೆ ಎರಡು ಬಕರಿ, ಮತ್ತೊಂದು ಸಾಂಬಾರು, ಇರುಳ್ಳಿ, ಸೌತೆ ಕಾಯಿ ಅನ್ನ, ನೀರು ಮಜ್ಜಿಗೆ ನೀಡಿದರು. ಸಮಯ ಮೂರಾಗಿದ್ದುದರಿಂದ ಹೊಟ್ಟೆ ಚುರುಗುಡುತಲಿತ್ತು. ಊಟ ಮುಗಿಸುವುದರೊಳಗೆ ಅದೆಲ್ಲಿತ್ತೋ ಮಳೆ ತನ್ನೆಲ್ಲಾ ಬಾಹುಗಳನ್ನು ಚಾಚಿ ಪ್ರತಾಪನನ್ನು ಮುತ್ತಿಕೊಂಡಿತು! ಮಳೆ. ಅನೇಕ ದಿನಗಳಿಂದ ಕನಸಿದ್ದ ಅನೇಕ ಮಳೆಯ ಚಿತ್ರಗಳು ಕ್ಯಾಮರದೊಳಗೆ ಸೇರಿಕೊಂಡವು. ಕ್ಯಾಮರ ತೃಪ್ತಿಯ ತೇಗು ತೇಗಿತು. ಉಂಡ ಹೊಟ್ಟೆಯೂ ತೇಗಿತು ನೋಡಿ. 



ಕೆಲವು ಚಿತ್ರಗಳು ನಮ್ಮೂರಿನ ಸನಿಹದಲ್ಲೇ ತೆಗೆದಿರುವುದು. ಪ್ರತಾಪಗಢದ ಪ್ರತಾಪವನ್ನು ಮತ್ತೊಮ್ಮೆ ಹೇಳುವೆ.

Saturday, June 6, 2020

'ಸಿಲ್ಲರ್' ಎಂಬ ಇರುವೆ ಕಳ್ಳ..


'ಕಣ್ಣಾ ಮುಚ್ಚೆ ಕಾಡೆ ಗೂಡೆ, ಉದ್ದಿನ ಮೂಟೆ ಉರಳೆ ಹೋಯ್ತು.' ಈ ಸಿಲೆರ್ ಎಂಬ ಸಿರಿಯಸ್ ಇರುವೆ ಕಳ್ಳನನ್ನು ನೋಡಿದಾಗ ಯಾವಾಗಲೂ ಈ ಪದ್ಯವೇ ನೆನಪಾಗುವುದು. ನೋಡಿದ ಕ್ಷಣಕ್ಕಷ್ಟೆ ನಮ್ಮೆದುರಿಗೆ ರೆಪ್ಪೆ ಮುಚ್ಚುವುದರೊಳಗೆ ಇನ್ನೆಲ್ಲಿಗೋ ಮಾಯಾ! ಯಾರೊಂದಿಗೆ ಕಣ್ಣಾ ಮುಚ್ಚೆ ಆಡುತಿದೆ ಎಂದು ತಿಳಿಯದು. ಕಂಡದ್ದೇ ಸುಳ್ಳೆನ್ನುವ ರೀತಿಯಲಿ! ಕೆಲವರ ಮನೆಯಂಗಳದ ತೋಟದಲಿ ಇವು ಮಾಮೂಲಿಯಂತೆ! ನಮ್ಮಲ್ಲಿ ಅಪರೂಪವೇ. ಯಾಕೋ ಗೊತ್ತಿಲ್ಲ. ಐದಾರು ವರ್ಷದಲಿ ಒಂದೆರಡು ಬಾರಿ ಕಂಡಿದ್ದೇನಷ್ಟೆ.
SILLER SPIDER.

FEMALE SILLER WITH AN ANT.

ಬಹಳ ಚೂಟಿಯಾದ ಈ ಜೇಡ, ಕಂಡಲ್ಲಿ ಕೂರುವುದೇ ಇಲ್ಲ. ಶಾಲೆಗೆ ಹೋಗಿದ್ರೆ ADD ಕಾಯಿಲೆ ಅಂದೇಳಿ ಚೀಟಿ ಅಂಟಿಸಿ ಕೂರಿಸ್ತಾ ಇದ್ರು. ಒಂಥರಾ ಅಧಿಕ ಪ್ರಸಂಗಿ ಈತ. ಬಾಳೆ ಗಿಡದಲ್ಲಿ, ಕಮಿನಿಷ್ಟ್ ಎಲೆಗಳಲ್ಲಿ ಕಂಡದ್ದೇ ಹೆಚ್ಚು. ಸಿಕ್ಕ ಸಂಧಿಗೊಂದಿನಲಿ ನುಸುಳಿ ಹೊರ ಹೋಗಿ ಬಿಡುವ. ಚಿಕ್ಕ ಮಕ್ಕಳಿಗೆ ಐಸ್ ಕ್ರೀಂ ಪ್ರೀಯವಾದಂತೆ ಇವನಿಗೆ ಕೆಂಪಿರುವೆ ಪ್ರೀತಿ. ಯಾಕೊ ಗೊತ್ತಿಲ್ಲ. ನಮಗೆ ಹುಳಿ ಹುಳಿಯಾದ ಆಮ್ಲೀಯತೆ ಹೆಚ್ಚಿರುವ ಕೆಂಪಿರುವೆ ಇವನಿಗೆ ಬಲು ಪ್ರೀತಿ. ನೋಡಿದಾಗೆಲ್ಲ ಬಾಯಲ್ಲೊಂದು ಇರುವೆ ಕಚ್ಚಿಕೊಂಡೆ ಇರುವ! ಇರುವೆ ಇಲ್ಲದೆ ನೋಡಿದ್ದೆ ಅಪರೂಪ ನೋಡಿ. ನಮ್ಮ ಮನೆಯ ಸುತ್ತಲಿತ ಜೇಡಗಳಲ್ಲೇ ಅತ್ಯಂತ ಸ್ಪುರದ್ರೂಪಿ. ಮುಂದಿನ ಕಾಲಿಗೆ ನಾಗಾಲ್ಯಾಂಡ್ನವರಂತೆ ವಿಚಿತ್ರ ಸಣ್ಣ ಗುಚ್ಚಿನ ಗತ್ತು ಬೇರೆ. ಎರಡನೆ ಜೋಡಿ ಕಾಲಿಗೂ ಸುಂದರ ಕರಿ ಗುಚ್ಚು. ಬೆನ್ನ ಮೇಲೆ ಕೇಸರಿ ಅಚ್ಚು. ಮನುಜನ ಕಣ್ಣಿನಂತಹ ರಚನೆ. ಒಟ್ಟಾರೆಯಾಗಿ ಮನಮೋಹಕ ಬಣ್ಣದ ಬಳುಕುಬಳ್ಳಿ.







ಹಾಗೆ ಮೊನ್ನೆಯೊಂದು ಏಡಿ ಜೇಡನ ಕಂಡು ಮನೆಗೆ ಮರಳುವ ದಾರಿಯಲಿ ಅಪರೂಪಕ್ಕೆ ಇರುವೆಯಿಲ್ಲದೆ ಕಾಂಗ್ರೆಸ್ ಗಿಡದ ದಂಟಿನ ಮೇಲೆ ಧಾಂ ಧೂಂ ಸುಂಟರಗಾಳಿಯಂತೆ ಹೊರಟಿದ್ದ. ಎಲ್ಲಿಗೆ ಹೊರಟೆ ಮರಾಯ ಎಂದರೆ ನಿಲ್ಲುವುದೇ ಇಲ್ಲ ಆಸಾಮಿ. ತನ್ನೆರಡು ಕಾಲುಗಳನ್ನು ನೆಟ್ಟಗೆ ಮಾಡಿಕೊಂಡು ಎರಡು ಪೋಸು ಕೊಟ್ಟು ವೇಗವಾಗಿ ಹೊರಟೇ ಬಿಟ್ಟ. ಬಂಗಾರದ ಮನುಷ್ಯ ಚಿತ್ರದ ಹೀರೊ ರಾಜ್ಕುಮಾರನಂತೆ! ನಿಮಗೆಲ್ಲಿಯಾದರು ಈ ಜೇಡ ಸಿಕ್ಕರೆ ಒಂದು ಪೋನಾಯಿಸಿ ಮರ್ರೆ.

ಶ್ರೀಧರ್ ಎಸ್. ಸಿದ್ದಾಪುರ.
ಕುಂದಾಪುರ ತಾಲೂಕು.

Monday, June 1, 2020

ಶಾಪಗ್ರಸ್ಥ ಗಂಧರ್ವ....



ಕಿಟ್ಟು, ಪುಟ್ಟು ಎಂಬ ಇಬ್ಬರು ಹುಡುಗರು ತಮ್ಮ ಬೇಸಿಗೆ ರಜೆ ಕಳೆಯಲು ಅಜ್ಜಿ ಊರಿಗೆ ಬಂದಿದ್ದರು. ಪಕ್ಕದ ಮನೆ ರಂಗ ಅವರನ್ನ ಬಣ್ಣ ಬಣ್ಣದ ಕಲ್ಲುಗಳಿರೋ ಹೊಳೆ ತೋರಿಸ್ತೀನಿ ಅಂತ ಒಂದಿನ ಹೊಳೆಗೆ ಕರೆದುಕೊಂಡು ಹೋದ.


ಹೊಳೆ ನೀರಲ್ಲಿ ಸಾಕಷ್ಟು ಹೊತ್ತು ಈಜಾಡಿ ಅಲ್ಲಿನ ಕಲ್ಲುಗಳನ್ನೆಲ್ಲಾ ನೋಡುತ್ತಾ ಮನೆಗೆ ತೆರಳುವ ಕಾಡದಾರಿಯನ್ನು ಹಿಡಿದರು.

          ಸ್ವಲ್ಪ ದೂರ ಬರುತ್ತಲೇ ಅವರಿಗೊಂದು ಮರ ಕಾಣಿಸಿತು. ಅದರಲ್ಲಿ ಸೀತಾಫಲ ಗಾತ್ರದ ಹಣ್ಣು ಗಳು ಬಿಟ್ಟಿದ್ದವು. ನೋಡಲು ಸೀತಾಫಲದಂತೆಯೂ ಇತ್ತು. ಏನಾದರಾಗಲಿ ಎಂದು ರಂಗನ ಬಳಿ ಹೇಳಿ ಎರಡು ಹಣ್ಣು ಕಿತ್ತುಕೊಂಡು ಬಂದರು.



ಮನೆಗೆ ಬರುತ್ತಲೇ ಕಿಟ್ಟು, ಪುಟ್ಟು ಉತ್ಸಾಹದಿಂದ ಅಜ್ಜಿಗೆ ತಾವು ತಂದ ಹಣ್ಣು ಯಾವುದೆಂದು ಕೇಳಿದರು. "ನೋಡಿ ಮಕ್ಕಳೆ ಇದರ ಹಿಂದೆ ಆಸಕ್ತಿದಾಯಕ ಕತೆ ಇದೆ" ಬನ್ನಿ ಇಲ್ಲಿ ಹೇಳ್ತೇನೆ ಎಂದಳು. ಮಕ್ಕಳೆಲ್ಲಾ ಅಜ್ಜಿ ಸುತ್ತ ಕುಳಿತರು.
ಗಂಧರ್ವ ಲೋಕ, ಅಲ್ಲೊಬ್ಬ ರುದ್ರಾಕ್ಷ ಎಂಬ  ಗಂಧರ್ವನಿದ್ದ. ಬಹಳ ದಷ್ಟ ಪುಷ್ಟನಾಗಿ ಎತ್ತರವಾಗಿದ್ದ. ಆತ ವಿಪರೀತ ಅಹಂಕಾರಿಯೂ, ತನ್ನ ಸೌಂದರ್ಯದ ಬಗ್ಗೆ ಮೇಲರಿಮೆಯೂ, ಇನ್ನೊಬ್ಬರ ಬಗ್ಗೆ ತಾತ್ಸಾರದ ಭಾವನೆಯನ್ನು ಹೊಂದಿದ್ದ. ಆತ ಒಮ್ಮೊಮ್ಮೆ ಭೂಮಿಗೆ ಬಂದು ಅನೇಕರಿಗೆ ಉಪದ್ರವ ಕೊಡುತ್ತಿದ್ದ. ಒಮ್ಮೆ ಆತ ಭೂಮಿಗೆ ಬಂದಾಗ ಹಲಸಿನ ಹಣ್ಣು ತಿನ್ನುತ್ತಿದ್ದ ಋಷಿಯನ್ನು ನೋಡಿದ. ಆತನೆಡೆಗೆ ನಿಕೃಷ್ಟ ಭಾವವೊಂದನ್ನು ಬೀರಿ, "ಏ ಗತಿ ಇಲ್ಲದ ಸನ್ಯಾಸಿಯೆ ಬೇರೇನು ಸಿಗಲಿಲ್ಲವೇ ತಿನ್ನಲು? ಈ ದರಿದ್ರಕಾರಿಯಾದ, ಮೇಣದಿಂದ ತುಂಬಿದ ಹಲಸು ತಿನ್ನುತ್ತಿದ್ದಿಯಲ್ಲ." ಎಂದು ಮೂದಲಿಸಿದ. ಸುಮ್ಮನೆ ತಿನ್ನುತ್ತಿದ್ದ ಸನ್ಯಾಸಿಗೆ ಕೋಪ ನೆತ್ತಿಗೇರಿತು. ಕೂಡಲೇ " ಅತ್ಯಂತ ರುಚಿಕಟ್ಟಾದ ಆದರೆ ಅತಿ ಸಣ್ಣ ಗಾತ್ರದ ರುದ್ರಾಕ್ಷಿ ಹಣ್ಣಾಗಿ ಹುಟ್ಟು." ಎಂದು ಶಪಿಸಿದ. ಕೂಡಲೇ ಆತ ಕಾಡುಗಳ ಸಂದುಗಳಲ್ಲಿ ಹುಲುಸಾಗಿ ಬೆಳೆವ ಪುಟಾಣಿ ರುದ್ರಾಕ್ಷಿ ಗಿಡವಾಗಿ ಹುಟ್ಟಿದ. "ಹೀಗೆ ಅಹಂಕಾರದಿಂದ, ಮದದಿಂದಾಗಿ ಹಲಸಾಗಿ ಹುಟ್ಟಿದ ಗಂಧರ್ವ ರುದ್ರಾಕ್ಷನ ಕತೆ ಮಕ್ಕಳೆ." ಎಂದು ಅಜ್ಜಿ ಕತೆ ನಿಲ್ಲಿಸಿದಳು.



" ಇದರ ಸೊಳೆ ರುಚಿ ಇರುತ್ತಾ" ಎಂದು ಕೇಳಿದ ಪುಟ್ಟು. "ಬಹಳ ರುಚಿ ಮಕ್ಕಳಾ, ನಾಳೆ ತಿನ್ನೋಣ." ಎಂದು ಅಜ್ಜಿ ತನ್ನ ಕೆಲಸಕ್ಕೆ ಹೊರಟಳು.


ಶ್ರೀಧರ್. ಎಸ್. ಸಿದ್ದಾಪುರ

Saturday, May 23, 2020

ಕಾಣದ ಕಡಲಿಗೆ ಕಾಯುತಿದೆಯೆ ಬದುಕು?





"ದೂರ ಹೊರಟೆ"
"ಫೋಟೋಗ್ರಫಿ ಮಾಡಲು"
"ಯಾವುದರದ್ದು ತೆಗಿತಿ ಚಿತ್ರ?"
"ಹಕ್ಕಿ"








"ಈ ಹಕ್ಕಿಗಳ ಚಿತ್ರ ತೆಗೆದು ತೆಗೆದು ಏನು ಮಾಡುತ್ತಿ?" ಹೀಗೆ ಸರಣಿ ಪ್ರಶ್ನೆಗಳ ಸರಣಿಯನ್ನು ಎದುರಿಸಿದ್ದು ನನ್ನ ಗೆಳೆಯನೊಬ್ಬನಿಂದ. ಪ್ರತಿ ಭಾನುವಾರ ಒಂದಿಷ್ಟು ಸಮಯ ಫೋಟೋಗ್ರಫಿಗಾಗಿ ಮೀಸಲಿಡುವ ನನಗೆ ಅತ್ಯಂತ ಕಠಿಣವಾದ ಪ್ರಶ್ನೆ. ಬಹುಶಃ ಕೆ. ಎ. ಎಸ್. ಮತ್ತು ಐ. ಎ. ಎಸ್. ನಲ್ಲೂ ಉತ್ತರಿಸಲಾಗದ ಇಂತಹ ಪ್ರಶ್ನೆ ಕೇಳಿರಲಿಕ್ಕಿಲ್ಲ. ಏನೆಂದು ಉತ್ತರಿಸಲಿ? ಯೋಚನೆ ಮಾಡುತ್ತೇನೆ.


"ಹಾಗೆ ಸುಮ್ನೆ ಕಂಪ್ಯೂಟರಿಗೆ ಹಾಕಿ ಇಡ್ತೇನೆ."
"ಹಾಕಿ ಏನ್ ಮಾಡ್ತಿ?" ಮತ್ತೊಂದು ಭೀಕರ ಪ್ರಶ್ನೆ.
"ಪುರುಸೊತ್ತಾದಾಗ ನೋಡ್ತೇನೆ."
"ನೋಡಿ?" ಮತ್ತದೇ ರಾಗ.


ಹೀಗೆ ಪ್ರಶ್ನೆಗಳ ಸರಮಾಲೆ ಮುಂದುವರಿಯುತ್ತದೆ. ಏನು ಉತ್ತರಿಸುವುದೋ ಗೊತ್ತಾಗದೆ ಸುಮ್ಮನಾಗುತೇನೆ. ಅವರಿಂದ ಹೇಗೋ ತಪ್ಪಿಸಿಕೊಂಡು ಮುನ್ನುಗ್ಗುವೆ. ಕೆಲವೊಮ್ಮೆ ಅವರು ಕಾಣುತ್ತಲೇ ನಾನು ದಿಕ್ಕು ಬದಲಾಯಿಸುವುದುಂಟು ಮರ್ರೆ. ಹಳ್ಳಿಗಳಲ್ಲಿ ಛಾಯಾಚಿತ್ರ ತೆಗೆಯುವವರು ಎದುರಿಸುವ ಪ್ರಶ್ನೆಗಳ ಸರಮಾಲೆಯನ್ನು ಕೇಳಿದರೆ ಚಳಿ ಜ್ವರ ಶುರುವಾಗುವುದು. ಅವರ ಅಜ್ಞಾನವೋ ನಮ್ಮ ಕರ್ಮವೋ ನಾ ಕಾಣೆ. 

ಇಂತಹ ಬಿಕ್ಕಟ್ಟಿನ ಪ್ರಶ್ನೆಗಳ ಸರಮಾಲೆಯನ್ನು ನನ್ನ ಅಕ್ಕನೂ ನನ್ನ ಮೇಲೆಸೆದು ನನ್ನನ್ನು ಕಕ್ಕಾಬಿಕ್ಕಿ ಮಾಡಿದ್ದಿದೆ. ಈ ವಂಶದ  ಜಿವಿಗಳಿಗೆ ಹೊಸ ಸೇರ್ಪಡೆ ನನ್ನ ಪತ್ನಿ!! ಇಂತಹ ಮಮರ್ಾಘಾತದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಇಂತವರಿಂದ ಆದಷ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ಅವರನ್ನು ಗೊಂದಲಗೊಳಿಸಲು "ಲಕ್ಷ, ಲಕ್ಷ ಸುರಿದು ಯಾವ ಪುರುಷಾರ್ಥಕ್ಕೆ ಚಿನ್ನಕೊಳ್ಳುತ್ತೀರಿ? ನೀವು ಹಾಕುವುದು ಬರೇ 30 ನಿಮಿಷವಷ್ಟೇ." ಎಂದವರಿಗೆ ಪ್ರಶ್ನೆ ಕೇಳಿ ಗಾಬರಿ ಹುಟ್ಟಿಸುತ್ತೇನೆ. 


ಮಲಬರ್ ಸ್ಟಾರ್ಲಿಂಗ್.  

ಎಲ್ಲವೂ ಪ್ರಯೋಜನಕ್ಕೆ ಬರಲೇಬೇಕೆ? ಗೊತ್ತಿಲ್ಲ. 5 ವರುಷಗಳಿಂದ ನನ್ನ ಗಣಕದಲ್ಲಿ ತಣ್ಣಗೆ ಕುಳಿತ ಎಲ್ಲಾ ಚಿತ್ರಗಳಿಗೂ ಅಚಾನಕ್ ಒಳ್ಳೆ ಬೇಡಿಕೆ ಬಂದಿತು ಮರ್ರೆ. 
'ಮಕ್ಕಳ ವಾಣಿ' ಎಂಬ ಯು-ಟ್ಯುಬ್ ಚಾನೆಲ್ ಒಂದಕ್ಕೆ ಹಕ್ಕಿಗಳ ಪುಟ್ಟ ಪುಟ್ಟ ಎರಡು ವಿಡಿಯೋ ಮಾಡಿ ಕೊಡಿ ಎಂದು ಉದಯ ಗಾಂವಕ್ಕರ್ ಕೇಳಿಕೊಂಡಿದ್ದರು. ಒಂದು ಸುಂದರ ಹಕ್ಕಿಯ ಛಾಯಾ ಚಿತ್ರ ತೆಗೆಯಲು ಒದ್ದಾಡಿದ ನೆನಪುಗಳೆಲ್ಲಾ ಒದ್ದುಕೊಂಡು ಬಂತು. 300 mm ನ ಸುಮಾರು 2 ಕೆ.ಜಿ ತೂಕದ ಲೆನ್ಸ್! ಹೊತ್ತು ತಿರುಗಿದವನಿಗೇ ಗೊತ್ತದರ ಕಷ್ಟ. ಬಿಡ ಬೇಕು ಎಂದು ಅನೇಕ ಬಾರಿ ಎಣಿಸಿದ್ದೂ ಉಂಟು. ಆದರೆ ಏನೋ ವಿಚಿತ್ರ ಸೆಳೆತ. ಚಿತ್ರ ತೆಗೆದ ಸ್ಥಳಕ್ಕೊಮ್ಮೆ ಹೋಗಿ ಕೂಡಾ ಬಂದೆ. ಆ ಮರದ ರೆಂಬೆಯೊಂದು ಮುರಿದು ಬಿದ್ದಿತ್ತು. ಸನಿಹದಲ್ಲೇ ಒಂದೆರಡು ಮನೆ ಕೂಡಾ ಆಗಿತ್ತು. ಆ ನಿಮ್ಮಿತ್ತ ನನ್ನ ಗಣಕದಲ್ಲಿ ತಣ್ಣಗೆ ಮಲಗಿದ್ದ ಹಕ್ಕಿಗಳನ್ನೆಲ್ಲಾ ಮತ್ತೊಮ್ಮೆ ಎಬ್ಬಿಸಬೇಕಾಗಿ ಬಂತು. ಹಾಗೆ ಅನೇಕ ಮಿತ್ರರನ್ನು ಸಹ. ಜೊತೆಗೆ ನಿಮ್ಮನ್ನು! ಕಾಣದ ಕಡಲಿಗೆ ನಾವೂ ಹೀಗೆ ಯಾವೊತ್ತೋ ಉಪಯೋಗಕ್ಕೆ ಬರುವುದಕ್ಕಾಗಿ ಹುಟ್ಟಿದ್ದೇವೆಯೇ? ಹುಟ್ಟು ಸಾರ್ಥಕವಾಗುವುದು ಹೀಗೆಯೇ? ಕಾಣದ ಕಡಲಿಗೆ ಕಾಯುವುದೇ ಬದುಕಾ? ಗೊತ್ತಿಲ್ಲ.

https://youtu.be/Osc0IFMU6dM




ಅಂತೂ ತೆಗೆದ ಹಲವು ಹಕ್ಕಿಗಳ ಚಿತ್ರಗಳ ಕುರಿತು ಪುಟಾಣಿ ಲೇಖನಗಳನ್ನು ಬ್ಲಾಗಿನಲ್ಲಿ ಹಾಕಿರುವೆ. 'ಬಾನಾಡಿ' ಅಡಿಯಲ್ಲಿ ಅವೆಲ್ಲಾ ಇವೆ. ಕೆಲವು ಚೆನ್ನಾಗಿವೆ. ಕೆಲವು ಸಪ್ಪೆ. ಮತ್ತೆ ಸರಿ ಪಡಿಸಬೇಕಾಗಿದೆ.

ಓದಿ, ವಿಡಿಯೋ ನೋಡಿ ಪ್ರತಿಕ್ರಿಯಿಸುವಿರಲ್ಲಾ. ನಿಮ್ಮ ರಚನಾತ್ಮಕ ಸಲಹೆಗಳ ನಿರೀಕ್ಷೆಯಲ್ಲಿ....
        
ಶ್ರೀಧರ್. ಎಸ್. ಸಿದ್ದಾಪುರ



Saturday, May 2, 2020

ನಾಲಗೆ ಹೊರಳದ ನಾಡಿನಲ್ಲಿ ಮೂರು ದಿನ...


ಸಂಪುಟ-೨. 
ಈಶಾನ್ಯ ಭಾರತದ ಶಿಲ್ಲಾಂಗನ ಸುತ್ತಲಿನ ಪ್ರವಾಸಿ ತಾಣಗಳನ್ನು ಕಣ್ಣುತುಂಬಿಕೊಳ್ಳುವ ಕನಸಿನೊಂದಿಗೆ ಹೊರಟು ನಿಂತಿದ್ದೆ. ಅದೆಷ್ಟೇ ಪ್ರಯತ್ನ ಪಟ್ಟರೂ ಇಲ್ಲಿನ ಊರುಗಳ ಹೆಸರುಗಳನ್ನು ಹೇಳಲಾಗದೇ ಸೋಲೊಪ್ಪಿಕೊಂಡಿದ್ದೆ.
ಮುನ್ನುಡಿ-
32 ಉಷ್ಣದ ಊರಿಂದ 6-7 ತಂಪಿನ ಊರಿಗೆ ಬಂದಾಗ ದೇಹ ಮುದುರಿತ್ತು. ಗೌಹಾಟಿಯ ಗೌಜಿನಲ್ಲೂ ಸ್ಥಳೀಯ ಸೀರೆ ತೊಟ್ಟ ಸೊಗಸುಗಾತಿಯರು ವ್ಯವಹಾರಕ್ಕಿಳಿದಿದ್ದರು. ಇವರನ್ನೆಲ್ಲ ನೋಡುತ್ತಾ ಎರಡು ರಾಜ್ಯಕ್ಕೆ ಗಡಿಯಂತಿದ್ದ ದಾರಿ ಗುಂಟ ಬ್ರಹ್ಮಪುತ್ರವನ್ನು ಬಳಸಿ ಶಿಲ್ಲಾಂಗ್ಗೆ ಬಂದಾಗ ರಾತ್ರಿ 7 ಗಂಟೆ. ಇಲ್ಲಿಂದ ರಾಜ್ಯ ರಸ್ತೆ ಸಾರಿಗೆ ಹಾಗೂ ಟ್ಯಾಕ್ಸಿ ವ್ಯವಸ್ಥೆ ಶಿಲ್ಲಾಂಗಿಗಿದೆ. 


ಉಪ್ಪಿನಕಾಯಿ ವೈವಿಧ್ಯ- ಮೊದಲನೇದು ಮೀನಿನ ಉಪ್ಪಿನಕಾಯಿ!


ಸಂಜೆ ಚಹಾ ಹೀರಲು ನಿಲ್ಲಿಸಿದ ಅಂಗಡಿಯಲಿ ಸಾಲು ಸಾಲು ಮೀನು, ಏಡಿ, ಸಿಗಡಿಗಳ ಉಪ್ಪಿನಕಾಯಿ ನೋಡಿದ್ದೆ ಗೆಳೆಯ ನಾಗರಾಜ ಉಸುರಿದ "ಬಿಟ್ಟರೆ ಮನುಷ್ಯರನ್ನು ಹುರಿದು ಉಪ್ಪಿನಕಾಯಿ ಮಾಡ್ತಾರೆ ಇವರು". ಮುಸುಂಬಿಗಿಂತಲೂ ದೊಡ್ಡದಾದ ನಿಂಬೆ ಹಣ್ಣು ಮೊದಲು ನೋಡಿದ್ದು ಇಲ್ಲೇ. 





ಈ ಕೌತುಕ ಪೂರ್ಣ ಕತೆಯನ್ನೊಮ್ಮೆ ಕೇಳೋಣ. ಮೇಘಾಲಯದ ಗೆಸ್ಟ್ ಹೌಸ್ನಲ್ಲಿ ಬಂದಿಳಿದಾಗ ತಂದಿರಿಸಿದ ರಾಶಿ ಸಿಹಿಕುಂಬಳ ಕಾಯಿಗಳ ಸ್ವಾಗತ! ನನ್ನ ಪರಮ ವೈರಿ ಸಿಹಿಗುಂಬಳಕಾಯಿ ನೆನೆದು ನಮ್ಮನ್ನು ಓಡಿಸಲೇ ಇದನ್ನು ಇಷ್ಟು ರಾಶಿ ಹಾಕಿ ಕೊಂಡಿದ್ದಾರೆ ಎಂದುಕೊಂಡೆ. ನಾಗರಜನ ಗೆಳತಿಯ ಮನೆಯಲ್ಲಿ ನಮಗೆ ಆ ದಿನ ರಾತ್ರಿಯ ವಿಶೇಷ ಭೋಜನ ವ್ಯವಸ್ಥೆ . ಮಾಡಲಾದ್ದರಿಂದ ಒಪ್ಪತ್ತಿನ ಮಟ್ಟಿಗಾದರೂ ಸಿಹಿಕುಂಬಳದಿಂದ ಬಚಾವಾದೆ!
ವಿಶೇಷ 'ಖಾಸಿ' ಅಡುಗೆ: -
ಮೂಲಂಗಿಯ ವಿಚಿತ್ರ ಪಲ್ಯ. 

ಹುದುಗು ಬಾರಿಸಿದ ಬೀನ್ಸ್ ಚಟ್ನಿ. 

ರುಚಿ ರುಚಿ ಖಾಸಿ ಅಡುಗೆ...  

ಗೆಳತಿ ಜೋಯ್ಸ್ ಅವರ ಮನೆಯಲ್ಲಿ ಒಣಗಿದ ಬೆಳ್ಳುಳ್ಳಿ ಮಿಶ್ರಿತ ಹಸಿ ಮೂಲಂಗಿಯ ಪಲ್ಯ, ಹುದುಗು ಬರಿಸಿದ ಬೀನ್ಸ್ನ ವಿಚಿತ್ರ ಚಟ್ಣಿ, ಬೇಯಿಸಿದ ಸಾಸಿವೆ ಎಲೆ, ಜೀವಮಾನದಲಿ ಒಮ್ಮೆಯೂ ಸವಿಯದ ಅಮೃತ ರುಚಿಯ ಐಸ್ಕ್ರೀಮ್ ಮೊಸರು, ಭಿನ್ನರುಚಿಯ ಅನ್ನ ಹೀಗೆ ವಿವಿಧ ಖಾಸಿ ಜನರ ಅಡುಗೆಯ ಖಾಸಗಿಯೂಟ. ಮರೆಯಲಾಗದ ಸವಿಯೂಟ. ಅಸಾಧ್ಯ ಚಳಿಗೆ ಮೈ   ಮನಸು ಮುದುರಿತ್ತು. ಬೆಳಗಿನ ವಿಹಾರದ ಕನಸು ಹೊತ್ತು ಮಲಗಿದೆವ 

ಸೋಹ್ರಾದಿಂದ ಮಾಸ್ವಾಮಿನತ್ತ:-
ಗುಹಾದ್ವಾರದೆದುರಿಗೆ


ಗುಹೆಯ ಕಡಿದಾದ ದಾರಿ. 

ಒಳನೋಟ !ಕಲ್ಲಿನ ಹೊಳಪು ಗಮನಿಸಿ.

ಭಿನ್ನೋಟ-ಬೇರೇನಲ್ಲ ಗುಹೆಯ ಕಡಿದಾದ ದಾರಿ. 
    
     ಹೇಗೆ ಈ ಗುಹೆಯ ಹೆಸರನ್ನು ಉಚ್ಚರಿಸಬೇಕೆಂದು ಇನ್ನೂ ಗೊಂದಲದಲ್ಲಿರುವೆ. ಮುಂಜಾನೆ ಮುಸುಕಿದ ಮೋಡಗಳ ಮುತ್ತಿಡುತ್ತಾ ಹೆದ್ದಾರಿಯಲಿ ಸಾಗಿತ್ತು ನಮ್ಮ ಕಾರು. ನಡುವೆಲ್ಲೂ ನಿಲ್ಲಿಸಿ ಪರೋಟ, ವಡೆ ತಿಂದು, ಚಹಾ ಹೀರಿ ಹೊರಟರೂ ಹೋಗದ ಮಂಜು. 10-12 ಡಿಗ್ರಿ ಉಷ್ಣಾಂಶ. ಗೆಳೆಯನಂತಹ ಚಾಲಕ. ಚೆರಿ ಹೂವರಳಿ ನಿಂತ ಹಾದಿಯಲಿ ಹೂ ನುಜ್ಜು ಗುಜ್ಜಾಗದಿರಲೆಂದು 'ಹಗುರ ಹೋಗು ಮರಾಯ.' ಎಂದೆ. ಹುಳುಕಾದ ಹಲ್ಲು ತೋರಿಸುತ್ತ ದೇಶಾವರಿ ನಗೆ ನಕ್ಕ. ಬಹುಶಃ ಆತನಿಗೆ ನನ್ನ ಭಾಷೆ ತಿಳಿಲಿಲ್ಲವೋ ಏನೋ. ಹಾಗೆ ನೊ ಕಲಿಕೈ ಜಲಧಾರೆ ತೋರಿಸಿಕೊಂಡು, ಸ್ಥಳದ ಕುರಿತು ಲೈವ್ ಕಾಮೆಂಟರಿ ಕೊಡುತ್ತಾ ಸುಣ್ಣದ ಕಲ್ಲಿನ ಗುಹೆಗಳತ್ತ ಕಾರು ಹೊರಳಿಸಿದ.

ಜನಜೀವನ:-
ಪ್ರವಾಸೋಧ್ಯಮ, ಸುಣ್ಣದ ಕಲ್ಲು ಮತ್ತು ಮಸಾಲೆ ಪದಾರ್ಥಗಳೇ ಇವರ ಜೀವನ ಆಧಾರ. ಸುಣ್ಣದಕಲ್ಲಿನ ನೂರಾರು ಗುಹೆಗಳು ನಿಮಗೆ ಶಿಲ್ಲಾಂಗಿನಿಂದ ಚಿರಾಪುಂಜಿಯೆಡೆಗೆ ಹೊರಟಾಗ ಕಾಣಸಿಗುತ್ತದೆ. ಇನ್ನು ಕಣಿವೆಯಲ್ಲಿ ವಾಸಿಸುವವರು ಸ್ವಲ್ವ ಕಿತ್ತಳೆ, ಶುಂಠಿ ಮತ್ತು ಕಾಳುಮೆಣಸು ಬೆಳೆದುಕೊಳ್ಳುತ್ತಾರೆ. ಕಾಡುತ್ಪತ್ತಿ ಸಂಗ್ರಹಿಸುತ್ತಾರೆ. ಇಲ್ಲಿನ ಕಿತ್ತಳೆ ಬಲು ಹುಳಿ. ಇವರ ಇನ್ನೊಂದು ಆದಾಯದ ಮೂಲ ಭತ್ತ ಮತ್ತು ಬಿದಿರು. ಇವರ ಬಿದಿರಿನ ನಾಜೂಕು ನಮಗೆ ಅಸಾಧ್ಯ, ಅಂಟು ಬಳಸದೆಯೇ ಭತ್ತದ ಬುಟ್ಟಿಗಳ ಹೆಣೆಯುವ ನೈಪುಣ್ಯದಲ್ಲಿ ಅಸಾಧ್ಯ ಕಲೆಗಾರಿಕೆ. ವಿಮಾನ ಮುಂತಾದ ಕಡೆ ಎಳೆದಾಡಿದರೂ ಚೂರೂ ಕೊಸರದೇ ಉಳಿದಿತ್ತು ನಾಕೊಂಡ ಭೆತ್ತದ ಪುಟಾಣಿ ಬುಟ್ಟಿ. ಎಲ್ಲಾ ಕೆಲಸಗಳಲ್ಲೂ ಸಿದ್ದ ಹಸ್ತರೂ ಕೂಡ. ನಮ್ಮ ಸ್ನೇಹಿತನ ಹರಿದ ಚಪ್ಪಲಿಯೊಂದನ್ನು ಕ್ಷಣಾರ್ಧದಲ್ಲೆ ಹೊಲಿದುಕೊಟ್ಟನೊಬ್ಬ. ಹೆಂಗಸರೇ ಹೆಚ್ಚು ದುಡಿಯುವವರು. ಮಂಜಿನಿಂದಾಗಿ ಅಲ್ಲಲ್ಲಿ ಚಳಿ ಕಾಯಿಸುವ ಜನ. ಸುಣ್ಣದ ಕಲ್ಲನ್ನು ಆರಿಸಿ ಆರಿಸಿ ಬೃಹತ್ ಗುಹೆಗಳು ನುಂಗುವಂತೆ ದಾರಿಯುದ್ದಕ್ಕೂ ಬಾಯ್ದೆರೆದಿದ್ದವು. ಎಲ್ಲವೂ ಸೊಹ್ರಾದ ಸಿಮೆಂಟ್ ಕಾಖರ್ಾನೆಗೆ ಹೋಗುತಲಿತ್ತು.


ಗುಹೆ ಎದುರಿಗೆ:-
          ಸೊಹ್ರಾದಿಂದ ಹೊರಟು ಊಟ ಮಾಡಿ ನಡು ಮಧ್ಯಾಹ್ನಕ್ಕೆ ಗುಹೆ ಎದುರಿಗಿದ್ದೆವು. 'ಮೆ ನಹಿ ಆಂವೂಗಿ'(ನಾ ಬರೋದಿಲ್ಲ) ಎಂಬ ಕೂಗು ಗುಹೆ ಎದುರಿಂದ ಕೇಳಿ ಬರುತಲಿತ್ತು. ಎದೆನಡುಗಿಸುವ ಗುಹಾದ್ವಾರದೆದುರು ಅನೇಕ ಹೆಂಗಸರು ಒಳ ಹೋಗಲು ಹೆದರಿ ಹೀಂದೇಟು ಹಾಕುತ್ತಿದ್ದರು. ಬರೋಬ್ಬರಿ 6.5 ಕಿಲೋ ಮೀಟರ್ ಉದ್ದದ ಬಾಯ್ದೆರೆದ ಭಯಾನಕ ಗುಹೆ. ಕೆಲವೆಡೆ ತೆವಳುತ್ತಾ ಸಾಗಬೇಕು. ಸಣ್ಣ ಝರಿಯೊಂದು ಗುಹೆಯೊಳಗೇ ಹಾದು ಹೋಗಿತ್ತು. ಗೋಡೆ ಪೂರ್ಣ ಸುಣ್ಣದ ಕಲ್ಲಿನ ಚಿತ್ತಾರ. ಕೆಲವೆಡೆ ಗುಹೆ ಮೇಲಕ್ಕೆ ಬಾಯ್ಕಳೆದು ತೆರೆದಿತ್ತು.

ಜೇನುಗೂಡಿನಂತಹ ರಚನೆ. 
ಗುಹೆಯೊಳಗಿನ ನೆಲ ಸವೆದು ಜಾರುವ ಟೈಲ್ಸ್ನಂತಿತ್ತು. ಅನೇಕ ಕಡೆ ಜಾರಿ ಬೀಳುವಷ್ಟರಲ್ಲಿ ಸುಧಾರಿಸಿಕೊಂಡೆ. ಬಕಾಸುರನಂತೆ ಬಾಯಿ ಕಳೆದ ಗುಹೆ ಕಂಡಾಗ ಶ್ರೀ ಕೃಷ್ಣನ ನೆನಪು. ಗುಹೆಯೊಳಗೆ ಏನುಂಟು ಏನಿಲ್ಲ ತಣ್ಣಗೆ ಹರಿವ ಜಲರಾಶಿ, ವಿಚಿತ್ರ ವಿನ್ಯಾಸದೊಂದಿಗೆ ತೊಟ್ಟಿಕ್ಕುವ ನೀರು, ಗುಹೆಯೊಳು ಗಂವ್ ಎನ್ನುವ ಕತ್ತಲು. ನೆತ್ತಿ ಸುಡುವ ಬಿಸಿಲಿದ್ದರೂ ಒಳಗೆ ಹವಾನಿಯಂತ್ರಣದಷ್ಟು ತಂಪು. ಯಾರದೋ ಜಿರ್ಣನಾಳದೊಳಗೆ ಜಾರಿಹೋದಂತಹ ಅನುಭವ. ಹೆಬ್ಬಾವಿನ ಹೊಟ್ಟೆ ಸೇರಿದ ಭಾವ. ಯಾರದೋ ಕರುಳಿನೊಳಗೆ ಹೂತು ಹೋದಂತೆ. ಆಹಾರದ ಕಣದಂತೆ ಚಲಿಸುವ ಜನಸಂದಣಿ. ಒಳಾಂಗಣದಲಿ ಅಲ್ಲಲ್ಲಿ ಬೆಳಕಿನ ವ್ಯವಸ್ಥೆ. ಗುಹೆಯ ಉದ್ದ ಸರಿಸುಮಾರು 6.5 ಕಿ.ಮೀ. 

ಸುಣ್ಣದ ಕಲ್ಲಿನ ವಿಚಿತ್ರ ವಿನ್ಯಾಸ. ಜೇನು ತಟ್ಟಿಯಂತಹ ವಿಭಿನ್ನ ಸಂಯೋಜನೆ. ಬೆಳಕಿಗೆ ಹೊಳೆವ ಕಲ್ಲಿನ ಚೂರುಗಳು. ದನದ ಕೆಚ್ಚಲಿನಾಕೃತಿಯ ವಿನ್ಯಾಸವೂ ಉಂಟು.  ಹಲಸಿನ ಕಾಯಿಯಂತೆ ನೇತಾಡುವ ಮಣ್ಣ ಹೆಂಟೆಗಳು. ಬೀಳುವವೇನೋ ಎಂದು ನಿರುಕಿಸಿ ನಿರುಕಿಸಿ ಸೋತೆ. ಒಂದೂ ಹಿಸಿದು ಬೀಳಲೇ ಇಲ್ಲ. ಆಲದ ಬಿಳಲುಗಳಂತೆ ನೇತಾಡುವ ಸಪೂರ ಗುಹಾ ರಚನೆ. ಇಲ್ಲೆಲ್ಲಾ ನುಸುಳಿ, ತೆವಳಿ ಸಾಗಬೇಕಾದ ಅನಿವಾರ್ಯತೆ.
ಸಪೂರ ಓಣಿಯಂತಹ ದಾರಿ. 
  'ಪ್ರಕೃತಿ ನಿಮರ್ಿತ 'ಲಿಯತ್ ಪ್ರಹಾ' ಎಂಬ ಗುಹೆ 30 ಕಿ.ಮೀ.ಉದ್ದವಿದೆ!' ಎಂದ ನಮ್ಮ ಡ್ರೈವರ್. ಇವುಗಳಲ್ಲಿ ಕೆಲವೊಂದು ಕಡೆ ತೆವಳಿ ಸಾಗಬೇಕಾದ ಅನಿವಾರ್ಯತೆ. ಇತ್ತೀಚಿಗೆ ಪತ್ತೆಯಾದ 'ಗಾರ್ಡನ್ ಗುಹೆ'ಎಂದು ಕರೆಯಲ್ಪಡುವ ಗುಹೆ ಸುಮಾರು 30 ಕಿ.ಮೀ. ಉದ್ದವಿದೆ ಎಂಬ ಬೋರ್ಡೊಂದನ್ನು ಇಲ್ಲಿ ಕಂಡೆ. ಜೊತೆಗೆ ಗುಹೆಯೊಳಗೆ ಒಂದು ಜಲಪಾತವೂ ಇದೆ ಎನ್ನುತ್ತಾರೆ! ಇಲ್ಲಿನ ಗುಹೆಗಳು ಅಚ್ಚರಿಗಳ ಮೂಟೆ. ಮೇಘಾಲಯದಲ್ಲಿ ಸುಮಾರು 1580ಕ್ಕೂ ಹೆಚ್ಚು ಗುಹೆಗಳಿವೆ! ವಿಶ್ವ ಪ್ರಸಿದ್ಧ ಮೊದಲ 9 ಗುಹೆಗಳಿರುವುದು ನಮ್ಮ ಮೇಘಾಲಯದಲ್ಲೇ. ಪ್ರತಿಯೊಂದೂ ಭಿನ್ನ. ಯುತ್ ಹಾಸ್ಟೆಲ್ನವರು ವರ್ಷಂಪ್ರತಿ ಇಲ್ಲಿ ಮೂರು ನಾಲ್ಕು ಗುಹೆ ತೋರಿಸುವ ಕಾರ್ಯಕ್ರಮವೇರ್ಪಡಿಸುತ್ತಾರೆ.
  ಚಿಕ್ಕ ವಯಸ್ಸಿನಲ್ಲೇ ಮೇಘಾಲಯಕ್ಕೆ ಹೋಗಿ ಬರಬೇಕೆಂಬ ಕನಸೊಂದು ಬಹಳ ವರ್ಷಗಳ ನಂತರ ನೆರವೇರಿತು. ಶಿಲ್ಲಾಂಗ್ನ ಸನಿಹವೇ ಇರುವ ಈ ಗುಹೆಗಳನ್ನು ನೋಡದೆ ಹೋದರೆ ಮೇಘಾಲಯ ಪ್ರವಾಸ ಅಪೂರ್ಣ. ನಾಲಗೆ ಹೊರಳದ ನಾಡಲ್ಲಿ ತಿರುಗಿ ಬರುವ ಮಜವೇ ಬೇರೆ. ಯಾಕಿನ್ನು ಯೋಚನೆ ಪ್ಯಾಕ್ಪ್ ಹೇಳಿ. ಜೀವಂತ ಸೇತುವೆಗಳೊಂದಿಗೆ ಒಂದು ದಿನ ಕಳೆಯುವ ಆಲೋಚನೆಯೊಂದಿಗೆ ಇಂದಿನ ಪ್ರವಾಸಕ್ಕೆ ನಾವು ಪ್ಯಾಕ್ಪ್ ಹೇಳಿದೆವು.
 ನಿಮ್ಮ ಅನೂಕೂಲಕ್ಕೆ ತಕ್ಕಂತಹ ಅನೇಕ ವಸತಿಗೃಹಗಳು ಶಿಲ್ಲಾಂಗಿನಲ್ಲಿವೆ. ಆನೆಜರಿ, ಅಕ್ಕ-ತಂಗಿ ಜಲಧಾರೆ ಮುಂತಾದವುಗಳನ್ನು ನೋಡಿ ಬರಬಹುದು ಎಲ್ಲವೂ ಸನಿಹದಲ್ಲಿದೆ.
ಶ್ರೀಧರ್. ಎಸ್. ಸಿದ್ದಾಪುರ.
ವಿಳಾಸ:-       ರಥಬೀದಿ ಸಿದ್ಧಾಪುರ,

ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...