Saturday, April 7, 2018

ಬಂಡೆಗಳ ಮಾಯಾ ಲೋಕದಲ್ಲಿ ...

ಪ್ರಜಾವಾಣಿಯಲ್ಲಿ ನನ್ನ ಲೇಖನ


ಅನತಿ ದೂರದಿಂದ ನೋಡುವವರಿಗೆ ಒಂದು ಸಾಧಾರಣ ಊರಂತೆ ತೋರಿದರೂ ರಸಿಕರಿಗೆ ಉಣ ಬಡಿಸುವ ವಿಶೇಷತೆ, ವಿಶಿಷ್ಟತೆ, ವಿಸ್ಮಯಗಳು, ವಿಸ್ಮಯ ಕಾರಿ ಲಿಂಗ, ಗುಹಾಂತರ ದೇವಾಲಯಗಳು ಒಂದೆರಡಲ್ಲ. ಅಡಿಗಡಿಗೂ ಬಂಡೆಗಳ ಚಿತ್ರ ಕಾವ್ಯದಂತೆ ಕಾಣುವುದು. ಎದುರಿನ ಚಿತ್ರಗಳು ಕ್ಯಾಮರದೊಂದಿಗೇ ಸ್ಪಧರ್ೆಗಿಳಿಯುವಷ್ಟು ಸೊಗಸು.
ಬೆಟ್ಟದ ಬಸವ:-
ನೋಡಿದರೆ ಬಸವಳಿಯಬೇಕು ಅಷ್ಟು ಎತ್ತರದಲ್ಲಿದ್ದಾನೆ ಈ ಬಸವ. ನಿಶ್ಚಿಂತೆಯಿಂದ ಮಹಾಪ್ರಪಾತವೊಂದಕ್ಕೆ ಬೆನ್ನಿಟ್ಟು ಕುಳಿತ್ತಿದ್ದಾನೆ! ಯಾವ ಶಿಲ್ಪಿ ಕಡೆದನೋ ಇದನ. ಅಷ್ಟು ನಿಷ್ಟೆಯಿಂದ ಎಲ್ಲೂ ಮುಕ್ಕಾಗದಂತೆ ಕೆತ್ತಿಟ್ಟಿದ್ದಾನೆ. ಏಕ ಶಿಲಾ ಬಸವನಿಗೆ ಸುತ್ತು ಬರಲು ಬಲು ಎದೆಗಾರಿಕೆಯೇ ಬೇಕು. ಅಂತಹ ಎತ್ತರದ ಜಾಗದಲ್ಲಿ ನಿಲ್ಲುವುದೇ ಕಷ್ಟವಾದ ಸ್ಥಳದಲ್ಲಿ ಸುಂದರ ಶಿಲ್ಪ ಕೆತ್ತುವುದು ಸಾಮಾನ್ಯ ಸಂಗತಿಯಲ್ಲ. ಬಸವನೇರುವ ಬರದಲ್ಲಿ ಬಂಡೆಯಿಂದ ಜಾರದಿರಿ ಜೋಕೆ. ಬಂಡೆಯಲ್ಲಿ ಶಾಸನವೊಂದನ್ನು ಕೆತ್ತಿದ್ದಾನೆ ಶಿಲ್ಪಿ. ಬಸವನ ಸುತ್ತ ಕಬ್ಬಿಣದ ಕಂಬಗಳನ್ನು ಇತ್ತೀಚಿಗೆ ನಿಮರ್ಿಸಲಾಗಿದೆ.
ಬಂಜೆಯರು ಬಸವನಿಗೆ ಪ್ರದಕ್ಷಿಣೆ ಬಂದರೆ ಮಕ್ಕಳಾಗುತ್ತವೆ ಎನ್ನುತ್ತಾರೆ ಸ್ಥಳೀಯರು! ನನಗೇಕೋ ಇದು ಕೊಲ್ಲುವ ವಿನೂತನ ಐಡಿಯಾದಂತೆ ಕಾಣುತ್ತೆ!

ಶಿಖರದ ನೆತ್ತಿ ಸಪಾಟಾಗಿದೆ. ಇಲ್ಲೆರಡು ಸ್ತಂಭಗಳನ್ನು ಕೆತ್ತಿ ನಿಲ್ಲಿಸಲಾಗಿದೆ. ಒಂದು ವಿಶಿಷ್ಟ ವಿನ್ಯಾಸದ ತೀರ್ಥ ಸ್ತಂಭ. ಸಂಕ್ರಾತಿಯ ದಿನ ಇದರ ಸನಿಹ ತೀರ್ಥ ಉದ್ಭವವಾಗುವುದು. ಇನ್ನೊಂದು ಅಷ್ಟಕೋನದಲ್ಲಿರುವ ತೀರ್ಥ ಸ್ತಂಭ. ಇನ್ನೇನು ಆಗಸ ಮುಟ್ಟಿತೆನ್ನುವ ಹಾಗೆ ಶತಮಾನಗಳ ಗಾಳಿ, ಬಿರುಗಾಳಿಗೆ ಸಾಕ್ಷಿಯಾಗಿ ಮೈಯೊಡ್ಡಿ ನಿಂತಿದೆ. ಯಾವ ಕಂಬವನ್ನೂ ಹುಗಿಯದೇ ನಿಲ್ಲಿಸಿರುವುದು ಅಚ್ಚರಿ ಮತ್ತು ಆ ಕಾಲದ ತಂತ್ರಜ್ಞಾನಕ್ಕೆ ಸಾಕ್ಷಿ. ನೆತ್ತಿಯ ದೇವಾಲಯದಲ್ಲಿ ಪ್ರಸಾದ ಸ್ವೀಕರಿಸಿದೆವು. ಜೋರು ಗಾಳಿ ಮಳೆಯೊಂದು ಬೀಸಿ ಹೋಯಿತು.
ಶಿಖರದಿಂದ ಸನಿಹದ ಊರು ಸ್ಪಷ್ಟವಾಗಿಯೂ ದೂರದ ಊರು ಅಸ್ಪಷ್ಟವಾಗಿಯೂ ಕಾಣಿಸುತ್ತೆ. ಎಲ್ಲೆಲ್ಲೂ ಬಂಡೆಗಳ ಚಿತ್ತಾರವೇ ನಿಮಗೆ ಶಿಖರದಿಂದ ಕಾಣಿಸುವ ದೃಶ್ಯ. ಕೆಳಗಿನ ಹಲವಾರು ಬಂಡೆಗಳ ಮೇಲೂ ಬಸವನನ್ನು ಕೆತ್ತಿ ಕೂರಿಸಲಾಗಿದೆ. ಕೆಲವು ಕಡೆಗಳಲ್ಲಿ ಕಲ್ಲಿನ ಮಂಟಪವನ್ನೂ ನಿಮರ್ಿಸಿದ್ದಾರೆ. ಅವನ್ನೆಲ್ಲಾ ನೋಡಲು ಎರಡು ಕಣ್ಣುಗಳೂ ಸಾಲದೆನಿಸುತ್ತೆ. ಇಳಿ ಸಂಜೆಗೆ ಈ ಬಂಡೆಗಳು ಆಗಸದೊಂದಿಗೆ ನಡೆಸುವ ವರ್ಣ ವಿರಾಸತ್ ಬಣ್ಣಿಸಲಸದಳವು. ಹಾವು ರಾಣಿ, ಮೊಲಗಳು ಅವನ್ನು ಬೇಟೆಯಾಡುವ ಬೇಟೆ ಪಕ್ಷಿಗಳೂ ಸಾಕಷ್ಟಿವೆ.
ವಿಸ್ಮಯಕಾರಿ ಒರಳು ಕಲ್ಲು ತೀರ್ಥ:-
ಅಯ್ಯೋ ಒಂದು ಪ್ರಾಣಿಯನ್ನು ಮರೆತೇ ಬಿಟ್ಟೆ. ಅವು ಮಂಗಗಳು. ನಿಮ್ಮ ಕೈ ಚೀಲ, ಬೆನ್ನಿನ ಚೀಲವೆರಡೂ ಅವುಗಳ ಕೃಪಾ ಕಟಾಕ್ಷದಿಂದ ಉಳಿದರೆ ಅದೇ ಪುಣ್ಯ. ಪೆಪ್ಸಿ, ಮಿರಿಂಡಾಗಳನವು ಕುಡಿಯುವ ರೀತಿ ನೋಡಿ ಅಚ್ಚರಿಯ ಜೊತೆಗೆ ವಿಶಾದವೆನಿಸುತ್ತೆ. ಅವುಗಳ ಆಹಾರ ಕಸಿದ ಮನುಜರೊಂದಿಗೆ ಮುಯ್ಯಿ ತೀರಿಸಲು ಕುಳಿತಂತೆ ಇಲ್ಲಿ ಸಾಲು ಸಾಲು ಮಂಗಗಳೇ ಕಾಣುತ್ತವೆ. ಶಿಖರದಿಂದ ಇಳಿವ ಇಳಿಜಾರಿನಲ್ಲಿ ನನ್ನ ಬೆನ್ನ ಚೀಲಕ್ಕೂ ಕೈಹಾಕಿ ನಾನು ಬೀಳುವಂತೆ ಮಾಡಿತು. ಬೆಟ್ಟ ವಿಳಿಯುವ ಸ್ಥಳೀಯ ಪುಣ್ಯಾತ್ಮರೊಬ್ಬರು ಮಂಗಕ್ಕೆ ಜಬರಿಸಿ ಬಿಡಿಸಿದರು.
ಒನಕೆ ಕಂಡಿಯ ದಾಟಿ ಶಿಖರದಿಂದ ಕೆಳಗಿಳಿದು ಶಿರ ಬಗ್ಗಿಸಿ ವಿಶಿಷ್ಟ ವೀರಭದ್ರ ದೇವಾಲಯದೊಳ ಹೊಕ್ಕೆವು. ಕಡು ಬೇಸಿಗೆಯಲ್ಲೂ ಹರಿವ ಇಲ್ಲಿನ ಒರಳು ಕಲ್ಲು ತೀರ್ಥವೇ ಒಂದು ಪ್ರಕೃತಿಯ ವಿಸ್ಮಯ. ದೊಡ್ಡ ಬಂಡೆಯ ಕೆಳಗೆ ಹರಿವ ನೀರನ್ನು ಒಂದು ಸಣ್ಣ ರಂಧ್ರಕೊರೆದಂತಿರುವ ತೀರ್ಥದಲ್ಲಿ ಕೈ ಹಾಕಿ ಸ್ಪಶರ್ಿಸಬೇಕು. ಎರಡು ಎರಡುವರೆ ಅಡಿ ಆಳದಲ್ಲಿ ನೀರ ಹರಿವಿರುವುದು. ಪುಣ್ಯವಂತರಿಗೆ ಮಾತ್ರ ನೀರು ಕೈಗೆಟುಕುತ್ತದೆ ಎನ್ನುತ್ತಾರೆ ಬಲ್ಲವರು! ನನಗಂತು ಸ್ವಲ್ಪ ಕಷ್ಟದಲ್ಲೇ ಕೈಗೆಟುಕಿತು!
ಇಲ್ಲಿಂದ ಕೆಲವು ಮೆಟ್ಟಿಲುಗಳ ಅಂತರದಲ್ಲಿ ಹೊನ್ನಾದೇವಿ ಮಂದಿರವಿದೆ. 40 ಅಡಿ ಚಚ್ಚೌಕದ ದೇವಾಲಯ. ಹೊನ್ನಾದೇವಿ ಪೂವರ್ಾಭಿಮುಖವಾಗಿದ್ದಾಳೆ. ಈ ದೇವಾಲಯವನ್ನು ಹೊಯ್ಸಳರು ವಿಸ್ತರಿಸಿದ್ದಾರೆ ಎಂದು ಇಲ್ಲಿನ ದಾಖಲೆಗಳು ಹೇಳುತ್ತವೆ.
ಇಲ್ಲಿಂದ ದಾರಿ ನಡುವಿನ ದೊಡ್ಡ ಬಸವ, ಕುಂಬಾವತಿ ತೀರ್ಥ, ಚಿಗಟಣ ಗವಿ, ಎಮ್ಮೆ ಬಸವನನ್ನು ಹಾದು ಪ್ರಸನ್ನ ಗಂಗಾಧರೇಶ್ವರ ಗುಹಾಲಯವನ್ನು ತಲುಪಿದೆವು. ಕುಂಬಾವತಿ ತೀರ್ಥದಲ್ಲಿ ಹರಿದು ಬರುವ ನೀರನ್ನೇ ಗವಿ ಮಠದ ದಾಸೋಹಕ್ಕೆ ಬಳಸಲಾಗುತ್ತದೆ ಎಂದರೆ ಇಲ್ಲಿ ಈ ಬೆಟ್ಟದಲ್ಲಿ ಹರಿವ ನೀರಿನ ಪ್ರಮಾಣವನ್ನು ನೀವು ಅಂದಾಜಿಸಬಹುದು.
ತುಪ್ಪ ಬೆಣ್ಣೆಯಾಗುವ ಸೋಜಿಗ:
ತಲೆ ತಗ್ಗಿಸಿ ಒಳ ಹೊಕ್ಕೆವು. ಒಳ ಹೊರಗಿಗೂ ಸುಮಾರು 5 ಡಿಗ್ರಿ ವ್ಯತ್ಯಾಸ. ಕೃಷ್ಣ ದೇವರಾಯನ ಕಂಬ ಶಾಸನವೊಂದನ್ನು ನೋಡಿ ಒಳ ಹೊಕ್ಕರೆ ಕಣ್ಣು ಕತ್ತಲಿಗೆ ಚಡಪಡಿಸುತ್ತೆ. ಪ್ರಸನ್ನ ಗಂಗಾಧರ ಲಿಂಗರೂಪಿಯಾಗಿದ್ದಾನೆ. ವಿಶಿಷ್ಟವಾದ ಈ ಶಿವಲಿಂಗಕ್ಕೆ ಅದ್ಭುತ ಶಕ್ತಿಯಿದೆ ಎಂದು ಹೇಳುತ್ತಾರೆ. ಲಿಂಗದ ಮೇಲೆ ಬೆಣ್ಣೆ ಸವರಿದರೆ ಅದು ತುಪ್ಪವಾಗುವುದು! ಯಾರೋ ತುಪ್ಪದ ಸೇವೆ ನೀಡಿದ್ದರು. ತುಪ್ಪ ಸವರಿದಾಗ ನಿಧಾನಕ್ಕೆ ಬೆಣ್ಣೆಯಾಗುತಲಿತ್ತು!
ಲಿಂಗದೆದುರಿಗೊಂದು ಸುರಂಗವಿದೆ. ಕೆಂಪೇಗೌಡರು ಈ ಸುರಂಗ ಮಾರ್ಗವಾಗಿಯೇ ಗವಿ ಗಂಗಾಧರೇಶ್ವರ ದೇವಾಲಯಕ್ಕೆ ಹೋಗಿ ಬರುತ್ತಿದ್ದರಂತೆ! ಹೋಗಿ ನೋಡೋಣವೆಂದರೆ ಅದೀಗ ಮುಚ್ಚಿದೆ.
ಪಾತಾಳಗಂಗೆ ಎಂಬ ವಿಸ್ಮಯ
ಪಾತಾಳ ಗಂಗೆ
ಪಾತಾಳಗಂಗೆಯ ನೀರು ಮಳೆಗಾಲದಲ್ಲಿ ಕೆಳಗೆ ಬೇಸಿಗೆಯಲ್ಲಿ ಮೇಲೇರುವುದು ನೋಡುವುದೊಂದು ವಿಸ್ಮಯ! ಪಾತಾಳ ಗಂಗೆಗೂ ಬೆಟ್ಟದ ಪಶ್ಚಿಮಕ್ಕಿರುವ ಅಂತರಗಂಗೆ ಎಂಬ ತೀರ್ಥಕ್ಕೂ ಜಲ ಸಂಬಂಧವಿದೆ ಎನ್ನುತ್ತಾರೆ ಸ್ಥಳೀಯರು. ಪಕ್ಕದಲ್ಲೇ ಆದಿ ಶಂಕರರ ಗವಿ ಇದೆ! ಊರಿನ ಮನೋಹರ ಚಿತ್ರವೊಂದು ನಿಮ್ಮ ಕಣ್ಣಿಗೆ ಬೀಳುವುದು.
ಪೂರ್ಣ ಬೆಟ್ಟವಿಳಿದು ಬಂದರೆ ಕೆಳಗೆ ಕಲ್ಯಾಣಿ ಇದೆ. ಕಲ್ಯಾಣಿ ಸುತ್ತಲೂ ಅನೇಕ ಲಿಂಗಗಳನ್ನು ಸ್ಥಾಪಿಸಲಾಗಿದೆ. ಪ್ಲಾಸ್ಟಿಕ್ಮಯವಾದ ಕೆರೆ ಮಾನವನ ಬೇಜವಾಬ್ದಾರಿತನಕ್ಕೆ ಸಾಕ್ಷಿ ಹೇಳುತ್ತವೆ. ಮಳೆಗಾಲದಲ್ಲಿ ಬೆಟ್ಟ ಏರುವವರು ಒಂದು ಹೆಜ್ಜೆ ತಪ್ಪಿದರೂ ಸಾವಿಗೆ ಆಹ್ವಾನ. ಇಲ್ಲಿನ ಪಿಸುಗುಡುವ ಬಂಡೆಗಳ ಮೌನದ ಮಾತನ್ನು ಆಲಿಸ ಬಯಸುವ ಚಾರಣಿಗರು ತಡ ಮಾಡದೇ ಹೊರಡಿ. ಇದು ಸಕಾಲ.

No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...