Wednesday, August 7, 2019

ಆ ಬೆಟ್ಟದಲ್ಲಿ ಪುಟಾಣಿ ರೈಲಿನಲ್ಲಿ.....


ಮೆಲ್ಲಗೆ ತೆವಳುವ ರೈಲು. ತಮಗೂ ರೈಲಿಗೂ ಸಂಬಂಧವೇ ಇಲ್ಲವೇನೊ ಎಂಬಂತೆ ಹಳಿಯ ಮೇಲೆಯೇ ನಿರ್ಮಲ ನಿಶ್ಚಿಂತೆಯಿಂದ ನಡೆವ ಜನ. ಹೂ ಪಕಳೆಗಳಿಂದ ಶೃಂಗಾರಗೊಂಡ ಬೀದಿ. ಬೀದಿ ಬದಿಯಲ್ಲಿ ಬೆಟ್ಟಕ್ಕೆ ನೇಣು ಬಿದ್ದಂತಿರುವ ಮನೆಗಳ ಸಮುಚ್ಚಯ. ಮನೆಯ ಮುಂದೆ ಯಾರಿಗೋ ಕಾದು ಕುಳಿತಂತಿರುವ ಬಣ್ಣ ಬಣ್ಣಗಳ ಹೂ ಕುಂಡಗಳ ಮೆರವಣಿಗೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ ಕಣಿವೆಯ ಸೌಂದರ್ಯ. ಕಣಿವೆಯ ಸೌಂದರ್ಯ ಮೀರಿಸುವ ಟಿಬೇಟಿಯನ್ ಛಾಯೆಯ ಸ್ಪುರದ್ರೂಪಿ ಹುಡುಗಿಯರ ಹಿಂಡು. ಬೆನ್ನು ಹುರಿಯಲಿ ಚಳಿಯ ಕಚಗುಳಿ. ಮಂಜಿನ ಮುಸುಕಿನಿಂದ ಹೊಗೆ ಹೊಮ್ಮಿಸಿ ಹೊರ ಬರುವ 'ಹಿಮಾಲಯನ್ ಕ್ವೀನ್' ರೈಲು. ದೂರದಲ್ಲೆಲ್ಲೋ ನನಗೂ ಇದಕೂ ಏನೂ ಸಂಬಂಧವಿಲ್ಲವೆಂಬಂತೆ ಪವಡಿಸಿರುವ ಕಾಂಚನಜುಂಗಾ ಶಿಖರ! ಜಗತ್ತು ಏಕಾಏಕಿ ನಿಶ್ಚಲಗೊಂಡ ಅನುಭವ!  ಇದು ಪಶ್ಚಿಮ ಬಂಗಾಳದ ಡಾರ್ಜಲಿಂಗ್ಗೆ ನೀವು ಕಾಲಿಟ್ಟರೆ ಕಾಣಸಿಗುವ ದೃಶ್ಯ.


Toy train



ಹಳಿಗಳೊಂದಿಗೆ ವಾಯು ವಿಹಾರ


ಡಾರ್ಜಿಲಿಂಗ್‌ ಕ್ಯಾಮರಾ ಕಣ್ಣಿನಲ್ಲಿ...

'ಗೋರ್ಖಾ ಲ್ಯಾಂಡ್' ಎಂಬ ಭಿನ್ನ ರಾಜ್ಯದ ಕನಸ ಕಟ್ಟಿ ಕೊಂಡು ಹಗಲು ರಾತ್ರಿ ಹೆಣಗುತ್ತಿರುವ ಪುಟಾಣಿ ಪಟ್ಟಣ ಡಾರ್ಜಲಿಂಗ್. ಜಲಪಾಯಿಗುಡಿ ರೈಲು ನಿಲ್ದಾಣದಿಂದ ಹೊರಟು, ಅಡ್ಡಗಟ್ಟಲು ಬಂದ ಆನೆಯೊಂದರಿಂದ ತಪ್ಪಿಸಿಕೊಂಡು, ಮಧ್ಯಾಹ್ನಕ್ಕೆ ಮೊಮೊ ಹೊಟ್ಟೆಗಿಳಿಸಿ, ಐದು ಗಂಟೆ ಪಯಣಿಸಿ ಸಂಜೆ ಮೂರರ ಸುಮಾರಿಗೆ ಡಾರ್ಜಲಿಂಗ್ನಲ್ಲಿದ್ದೆವು. ಜನ ಮಂಜಿನ ರಗ್ಗ್ ಹೊದ್ದು, ಮಳೆಗೆ ಛತ್ರಿ ಹಿಡಿದು ಓಡಾಡುತ್ತಿದ್ದರು.  ನಾವೂ ಒಂದು ಛತ್ರಿ ಕೊಂಡೆವು. ಜಲಪಾಯಿಗುಡಿ ರೈಲು ನಿಲ್ದಾಣದಿಂದ ಬರೋಬ್ಬರಿ 70 ಕಿ.ಮೀ. ಬಗ್ದೊದ್ರಾ ವಿಮಾನ ನಿಲ್ದಾಣದಿಂದ 70 ಕಿ.ಮೀ.


ಮೊದಲ ದಿನದ ನಮ್ಮೆಲ್ಲಾ ಯೋಜನೆ ತಲೆಕೆಳಗಾಗಿತ್ತು. ಆದರೂ 3 ಕಿ. ಮೀಟರ್ ದೂರವಿರುವ ತೇನ್ ಸಿಂಗ್ ನಾವರ್ೆ ಮತ್ತು ಎಡ್ಮಂಡ್ ಹಿಲರಿಗೆ ಸಂಬಂಧಿಸಿದ ಚಾರಣ ಸಾಮಾಗ್ರಿ ಪ್ರದರ್ಶನಕ್ಕಿಟ್ಟ ವಸ್ತು ಸಂಗ್ರಹಾಲಯಕ್ಕೆ (ಊಒ) ಭೇಟಿ ನೀಡಿದೆವು. ತೇನ್ ಸಿಂಗ್ ಬಳಸಿದ ಕೈಗವಸು, ಹಿಮ ಪಿಕ್ಕಾಸಿ, ಹಗ್ಗ, ಟೆಂಟ್, ನೀರು ತುಂಬುವ ಬಾಟಲಿ ಹೀಗೆ ಚಾರಣಕ್ಕೆ ಬೇಕಾದ ವಿಶಿಷ್ಟ ವಸ್ತುಗಳನ್ನು ನಮ್ಮ ಮುಂದೆ ತೆರೆದಿಟ್ಟಿತು. ಪೈನ್ ಮರಗಳಿಂದ ಕೂಡಿದ ಈ ಜಾಗ ಮನಸಿಗೆ ಆಹ್ಲಾದಕರ.


ಅಲ್ಲಿಂದ ಹಿಮಾಲಯದಲ್ಲಿ ಮಾತ್ರ ವಾಸವಿರುವ ವಿಶಿಷ್ಟ ಪ್ರಾಣಿಗಳ ಸಂಗ್ರಹಾಲಯಕ್ಕೆ ಭೇಟಿ ಕೊಟ್ಟು ಅಚ್ಚರಿ ಪಟ್ಟೆವು. ಹಿಮ ಚಿರತೆ, ಟಿಬೆಟಿನ್ ತೋಳ, ಹಿಮ ನಾಯಿ, ನೀಲಿ ಕುರಿ( ಬ್ಲೂ ಶೀಪ್, ಹೆಸರು ಮಾತ್ರ ನೀಲಿ) ಹುಲಿ ಮುಂತಾದ ಪ್ರಾಣಿಗಳನ್ನು ಮಾತನಾಡಿಸಿಕೊಂಡು ಬಂದೆವು! ಹುಲಿಯಂತೂ ನಮ್ಮ ಹತ್ತಿರವೇ ಬಂದುದರಿಂದ ಅದರ ಅಗಾಧತೆಯನ್ನು ನೋಡಿ ನಿಬ್ಬೆರಗಾದೆವು.






ಗೂಮ್ ರೈಲು ನಿಲ್ದಾಣದಲ್ಲೊಂದು ಸುತ್ತು...











ವಸಾಹುತು ಶಾಹಿ ಬ್ರಿಟಿಷ್ ಆಡಳಿತ ತಮ್ಮ ಅನುಕೂಲಕ್ಕೆ 1879 ರಲ್ಲಿ ಸ್ಥಾಪಿಸಿದ 610 ಮಿ. ಮೀಟರ್ ನ ನ್ಯಾರೋಗೇಜ್ ರೈಲು ಇಲ್ಲಿನ ವಿಶೇಷ. ಡಾರ್ಜಲಿಂಗ್ ಮತ್ತು ಕಣಿವೆ ತಳದ ಜಲಪಾಯಿಗುಡಿ ನಡುವೆ ಇದು ಓಡಾಡುತ್ತದೆ. ಬಟೇಸಿಯಾ ಲೂಪ್ಗೆ ರೈಲು ಬಂದು ಒಂದು ಸುತ್ತು ಹಾಕಿ ಹೋಗುತ್ತೆ. ಇಲ್ಲಿ ಸೈನಿಕ ಸ್ಮಾರಕ ನಿಮರ್ಿಸಲಾಗಿದೆ. ಒಬ್ಬರಿಗೆ ಬರೋಬ್ಬರಿ 1200 ರೂಪಾಯಿ! ಮೋಡವಿಲ್ಲದ ದಿನಗಳಲ್ಲಿ ಇದರ ಪ್ರಯಾಣಾನುಭೂತಿ ಅದ್ಭುತ! ಕೆಲವು ದಿನಗಳಲ್ಲಂತೂ ಮಂಜಿನ ಮೇಲೆ ತೇಲಿದ ಅನುಭವ! ಕಾಂಚನಜುಂಗವನ್ನು ನೋಡುತ್ತಾ ಜೊತೆ ಜೊತೆಗೆ ಪಯಣಿಸುವ ಅನುಭವವೇ ಅನನ್ಯ. ರೈಲು ತುಲುಪುವ 'ಗೂಮ್' ರೈಲು ನಿಲ್ದಾಣ ವಿಶ್ವದ ಎರಡನೆಯ ಅತಿ ಎತ್ತರದ ರೈಲು ನಿಲ್ದಾಣ! ಭಾರತದ ಅತಿ ಎತ್ತರದ ನಿಲ್ದಾಣ ಎನಿಸಿಕೊಂಡ ಇದು ಸಮುದ್ರ ಮಟ್ಟದಿಂದ ಬರೋಬ್ಬರಿ 7,407 ಅಡಿ ಎತ್ತರದಲ್ಲಿದೆ. ಬಿಸಿಲ ಕೋಲುಗಳ ಬೀಳುವ ಬೆಳಗಿನ ಹೊತ್ತೇ ಮಂಜಿನ ರಗ್ಗ ಹೊದ್ದು ಕುಳಿತಿತ್ತು. ಬಣ್ಣ ಬಳಿದುಕೊಂಡ ತರುಣ, ತರುಣಿಯರ ತಂಡ ನಮ್ಮ ಸ್ವಾಗತಕ್ಕಿದ್ದರು! ಬೀಡಿ ಸೇದಿದಂತೆ ಹೊಗೆಯುಗುಳುವ ವಯಸ್ಸಾದಂತೆ ಭಾಸವಾಗುವ ಬೋಗಿಗಳು ನಿಂತಿದ್ದವು. ನಿಲ್ದಾಣದ ಸನಿಹದಲ್ಲೇ ವಿಶೇಷ ರೈಲು ಸಂಗ್ರಾಹಲಯ. ಅಲ್ಲಿಗೆ ಹಣಿಕೆ ಹಾಕಿ ಬಂದೆವು. ಬೆಟ್ಟದ ರೈಲಿನ (Mountain railway) ಸಂಪೂರ್ಣ ಚರಿತ್ರೆಯ ಪರಿಚಯವಾಯ್ತು.


ಸಮ್ಟಿನ್ ಚೋಲಿಂಗ್ ಬುದ್ದಿಷ್ಟ್ ಮಾನೆಷ್ಟ್ರಿಗೆ....




          ಮಂಜಿನಿಂದ ಆಗಷ್ಟೇ ಎದ್ದ ಮಾನೆಷ್ಟ್ರಿ ನಮ್ಮನ್ನು ನೋಡಿ ನಗುತಲಿತ್ತು. ಬುದ್ದ ನಡೆದಾಡಿದ ನಾಡು. ಮಾನೆಸ್ಟ್ರಿಗಳ ಬೀಡು. ಇಲ್ಲಿನ ವಿಚಿತ್ರ ವಿಶಿಷ್ಟ ಪದ್ದತಿಗಳು ಜಗತ್ತಿನ ಯಾವ ಭಾಗದಲ್ಲೂ ಕಾಣಲಾರೆವು. ದಾರಿಗುಂಟ ಶಾಲ್ ಮಾರುವವರು, ನೆಪಾಳಿ ಕುರ್ಫಿ (ಒಂದು ವಿಧಧ ಕತ್ತಿ) ಮಾರುವವರ ಮೆರವಣಿಗೆ. ಇವರನ್ನೆಲ್ಲಾ ದಾಟಿ ಬುದ್ಧನಿದ್ದಲ್ಲಿಗೆ ಹೋದರೆ ಮನಸ್ಸು ಹೊರಗಿನ ಭಿನ್ನ ಕುಸುರಿ ಕಲೆ ಇದ್ದ ಕುರ್ಫಿಯ ಮೇಲೆ. ಕೊನೆಗೊಂದು ಕುರ್ಫಿ ಕೊಂಡು ಮನಸ್ಸಿಗೆ ಸಮಾಧಾನ ಮಾಡಿದೆ! ಮನೆಯ ಗೋಡೆಯ ಮೇಲೆ ರಾರಾಜಿಸಿದ ಆ ಕುರ್ಫಿ ಡಾರ್ಜಲಿಂಗ್ನ ನೆನಪಿನ ಚಿತ್ತಾರ ತರುತ್ತಲೇ ಇದೆ. ವಿಮಾನದೊಳಗೆ
ಕುರ್ಪಿಯನ್ನು ಒಯ್ಯಲು ಬಿಡುವುದಿಲ್ಲವೆಂದರಿತ ನಂತರ ಸಮಸ್ಯೆ ಮತ್ತಷ್ಟು ಹೆಚ್ಚಾಯಿತು! ಬಂಗಾಳಿ ಗೆಳೆಯನಿಗೆ ಕುರ್ಪಿಯನ್ನು ದಾಟಿಸಿ ಕೊರಿಯರ್ ಮಾಡಲು ತಿಳಿಸಿ ಬಚಾವಾದೆ.  ಕ್ಷಮಿಸಿ ಮಾನೆಷ್ಟ್ರಿ ಬಗ್ಗೆ ಹೇಳಲೇ ಇಲ್ಲ! ಸಾಕಷ್ಟು ವಿಶಾಲ ಒಳಾಂಗಣ ಮತ್ತು ದೊಡ್ಡ ಶಾಂತ ಬುದ್ಧನ ವಿಗ್ರಹ ಗಮನ ಸೆಳೆಯಿತು. ಜೊತೆಗೆ ದುಡ್ಡು ಹಿಡಿದು ನಗುವ ಪುಟಾಣಿ ಬುದ್ಧ ವಿಗ್ರಹ
ಜೊತೆಯಲ್ಲಿತ್ತು.
 ಕೆಲವು ಭಕ್ತಾದಿಗಳು ಬುದ್ದನಿಗೆ '7 ಅಪ್'ನ್ನು ಅರ್ಪಣೆ ಮಾಡಿದ್ದು ವಿಚಿತ್ರವೆನಿಸಿತು. ಒಳಗೋಡೆಯ ಮೇಲೆಲ್ಲಾ ಚಿತ್ತಾಕರ್ಷಕ ಬುದ್ದನ ಕತಾ ಚಿತ್ರಗಳು. ನೋಡಲು ಏನಿಲ್ಲವೆಂದರೂ ಅರ್ಧ ದಿನವೇ ಬೇಕು. ಬುದ್ಧನ ಜೊತೆಗೆ ಧ್ಯಾನಿಸಿ, ಧರ್ಮ ಚಕ್ರ ತಿರುಗಿಸಿ ಪ್ರಾರ್ಥನೆ ಸಲ್ಲಿಸಿದೆವು.  ಭಾಷೆಯ ತೊಂದರೆಯಿಂದ ಹೆಚ್ಚೇನು ಕೇಳದೆ ಬೌದ್ಧ ಸ್ತೂಪ ನೋಡಲು ಅಲ್ಲಿಂದ ಹೊರಟು ನಿಂತೆವು.

ಶ್ರೀಧರ್. ಎಸ್. ಸಿದ್ದಾಪುರ 

Sunday, August 4, 2019

2019 ರಲ್ಲಿ ನಿಂತು 1970ಕ್ಕೆ ಹಣಕಿ ಹಾಕಿದಾಗ!



 ಅರೆ ಇದೇನಿದು ವಿಚಿತ್ರವಾಗಿದೆಯಲ್ಲಾ. ಇದೂ ಸಾಧ್ಯನಾ?! ಮೊನ್ನೆಯಷ್ಟೆ ಮಹಾರಾಷ್ಟ್ರದ ಮಹಾಡ್ ಹಳ್ಳಿಗೆ ಭೇಟಿ ಇತ್ತಿದ್ದೆ. ಆಗ ನನಗೆ ಹಾಗನ್ನಿಸಿತು.
   

ನಮ್ಮ ಗುರಿ ಇದ್ದದ್ದು ಶಿವಾಜಿಯ 'ರಾಯ್ಗಢ್' ಕೋಟೆ ನೋಡೋದು. ಮಹಾಡ್ನಿಂದ ರಾಯ್ ಗಢ್ ಬರೀ 25 ಕಿ. ಮೀ. ಮಹಾಡ್ ಮಹಾರಾಷ್ಟ್ರದ ತಾಲೂಕು ಕೇಂದ್ರ. ಪುಣೆಯ ಬಸ್ ನಿಲ್ದಾಣದಿಂದ ಬರೋಬ್ಬರಿ 4 ಗಂಟೆಯ ದಾರಿ. ದಾರಿ ನಡುವೆ ತಿಂದ ಇಡ್ಲಿ ಮತ್ತು ಪೋಹಾ (ಅವಲಕ್ಕಿ) ದಿಂದಾಗಿ ಹೊಟ್ಟೆ ಸುಮ್ಮನಿತ್ತು. ಕರ್ನಾಟಕದಂತೆ ಎತ್ತರ ಎತ್ತರ ಬೆಳೆಯುವ ಮರಗಳಿಲ್ಲದ ಕಾಡು, ನಮ್ಮಷ್ಟು ದಟ್ಟವಲ್ಲದ ಪಶ್ಚಿಮಘಟ್ಟಗಳು. ದಾರಿ ನಡುವೆ ಒಂದೆರೆಡು ಝರಿಗಳು ಕಾಣ ಸಿಕ್ಕವು. ನೀರಿಲ್ಲದೆ ಖಾಲಿ ಹೊಡೆಯುತ್ತಿರುವ ಒಂದೆರಡು ಡ್ಯಾಂ ನೋಡುತ್ತಾ, ಸಹ್ಯಾದ್ರಿಯ ಗಿರಿ ಶಿಖರಗಳ ಬಳಸಿ ನಮ್ಮ ಬಸ್ ಸುಮಾರು 11 ಕ್ಕೆ ಮಹಾಡ್ ತಲುಪಿತು. 



ಎಡಕ್ಕೆ ಹರಡಿದ ಸಹ್ಯಾದ್ರಿಯ ನೋಟವಂತೂ ಮನೋಹರ. ನಡು ನಡುವೆ ರಸ್ತೆ ಹದಗೆಟ್ಟಿತ್ತು. ಜೊತೆಗೆ ನಿದ್ದೆಗೆಟ್ಟ ರಾತ್ರಿ ಪ್ರಯಾಣ ಇನ್ನಷ್ಟೂ ಹದಗೆಡಿಸಿತು! 

ಇಲ್ಲಿನ ಸರಕಾರಿ ಬಸ್ ವ್ಯವಸ್ಥೆ, ಬಸ್ ನಿಲ್ದಾಣಗಳನ್ನು ಕಂಡಾಗ ನಾವು 70ರ ದಶಕದಲ್ಲಿದ್ದೇವೆ ಎನಿಸಿತು. ಕಿತ್ತು ಹೋದ ಬಸ್ ನಿಲ್ದಾಣ! ಯಮ ವೇಗದಲ್ಲಿ ಓಡುವ ಗುಜರಿ ಬಸ್ಗಳು! ಬಸ್ನೊಳೆಗೆ ಗಂಟೆಯೊಂದನ್ನು ಹಾಕಿದ್ದರು! ಅದಕ್ಕೆಂದು ಸರಿ ಹೊಂದಿಸಿದ ದಾರ ಎಳೆದು ಬಸ್ ನಿಲ್ಲಿಸಬೇಕಿತ್ತು! ಕೇರಳಕ್ಕೆ ಹೋದಾಗಲೂ ಹೀಗೊಂದು ವ್ಯವಸ್ಥೆ ಕಂಡು ಅಚ್ಚರಿ ಪಟ್ಟು ಮೂಕವಿಸ್ಮಿತನಾಗಿದ್ದೆ. 1970ರ ಶೈಲಿಯ ಕಂಡಕ್ಟರ್ನ್ನ ಧಿರಿಸು. ಕಚ್ಚೆ ಸೀರೆ ಧರಿಸಿ ಮಸ್ತ್ ಆಗಿ ಓಡಾಡೋ ಮಹಿಳೆಯರು! 30 ರೂಪಾಯಿಗೆ ಸಿಗುವ ಪೊಗದಸ್ತಾದ ಭೋಜನ. ಕಮಲದ ದಂಟು, ನೇರಳೆ ಹಣ್ಣಿನಿಂದ ಹಿಡಿದು ಮಾರಲು ಇಟ್ಟ ಥರಾವರಿ ಕಂಡರಿಯದ ದೇಸಿ ವಸ್ತುಗಳು. ಹೀಗೆ ಪೇಟೆಯೇ ಒಂದು ವಿಚಿತ್ರ ಸಂತೆಯಂತೆ ನನಗನ್ನಿಸಿತು. ಒಂದು ಬಸ್ ಬಂದರೆ ಮುಳುಗಿ ಹೋಗುವಷ್ಟು ಧೂಳು. ಒಂದೆರಡು ಅಂಗಡಿ ಮುಂಗಟ್ಟುಗಳನ್ನು ಬಿಟ್ಟರೆ ಉಳಿದವೆಲ್ಲಾ ಹಳೆ ಹಳೆ ಕಾಲದವು. ನಿಮಗೂ ಹಾಗನ್ನಿಸದೇ ಇರದು ಬಿಡಿ.  ಆದರೂ ಅದೇಕೋ ತುಂಬಾ ಇಷ್ಟವಾಯಿತು. ನಿಮಗೂ ಇಷ್ಟವಾಯಿತಾ? ನಮಗೂ ಒಮ್ಮೆ ನಿಜವಾಗಿ 1970ರದ್ದೊ 1000 ನೇ ಇಸವಿಯ ಜನ ಜೀವನ ಹಣಕಿ ಹಾಕುವಂತಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೆಂದುಕೊಳ್ಳುತ್ತಾ ಈ ಲೇಖನಕ್ಕೆ ಪೂರ್ಣ ವಿರಾಮ ವಿಡುತ್ತೇನೆ. ನಿಮಗೂ ಇಷ್ಟವಾದರೆ ತಿಳಿಸಿ. 




Friday, July 5, 2019

ಇತಿಹಾಸದ ರಕ್ತ ಸಿಕ್ತ ಪುಟ...



ಜನರ ಖುಷಿ ಕಸಿದ ಸುಲ್ತಾನ.....
       ಪ್ರಭುತ್ವ ಯಾವುದೇ ಇರಲಿ ಜನರ ನಡುವೆ ಬೆಸುಗೆಯಂತಿರಬೇಕು. ದ್ವಾರ ಸಮುದ್ರದಿಂದ ಆಳಿದ ಹೊಯ್ಸಳರು ಬರೋಬ್ಬರಿ 108 ದೇವಾಲಯ ನಿರ್ಮಿಸಿದ್ದಾರೆಂದು ಮೊನ್ನೆ ಮೊಸಳೆ ಹೊಸಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ತಿಳಿಯಿತು. 12 ನೆಯ ಶತಮಾನ ಅನೇಕ ಸಂಘರ್ಷಗಳಿಗೆ ಕಾರಣವಾಗಿದೆ ಎಂದು ಆ ಹಿರಿಯರು ಅರುಹಿದರು. ಅದರಲ್ಲೂ ಶೈವ ಮತ್ತು ವೈಷ್ಣವರ ನಡುವೆ ತೀವ್ರ ತರಹದ ಪೈಪೋಟಿ ಇದ್ದ ಕಾಲ. ಅಂತಹ ಕಾಲದಲ್ಲಿ ಪ್ರಭುತ್ವವು ಶೈವ ಮತ್ತು ವೈಷ್ಣವ ದೇವಾಲಯ ಒಟ್ಟೊಟ್ಟಿಗೆ ನಿರ್ಮಿಸಿ ಅವರ ನಡುವೆ ಬಂಧವೇರ್ಪಡುವಂತೆ ಮಾಡಿದ ಸಾಕ್ಷಿಯಾಗಿ ನಿಲ್ಲುತ್ತೆ. ನಾಗೇಶ್ವರ ದೇವಾಲಯ, ಚೆನ್ನಕೇಶ್ವರ ದೇವಾಲಯ ಹೊಯ್ಸಳ ಚಕ್ರವತರ್ಿ ವಿಷ್ಣುವರ್ಧನನವರ ಪರ ಮತ ಸಹಿಷ್ಣುತೆಗೆ ಸಾಕ್ಷಿ. ವೈಷ್ಣವನಾಗಿದ್ದರೂ(ಮೂಲ ಮತ ಜೈನ)  ವಿಷ್ಣು ದೇವಾಲಯದ ಸನಿಹದಲ್ಲೇ ಶೈವ ದೇವಾಲಯಗಳನ್ನು ನಿಮರ್ಿಸಿದ್ದಾನೆ.  (ಮೊಸಳೆ ಹೊಸಳ್ಳಿ, ಹಾಸನ ಜಿಲ್ಲೆ) ಊರಿನ ಹೆಸರಿನ ಹಿಂದೆ ಒಂದು ಸುಂದರ ಕತೆ ಇದೆ! ಅದನ್ನು ಮುಂದೆಂದಾದರು ಹೇಳುವೆ. ಆದರೂ  ನಮಗೆ ವಿಷ್ಣುವರ್ಧನನಂತವರು ಆದರ್ಶ ವ್ಯಕ್ತಿಯಾಗಲಾರ! ವಿರ್ಪಯಾಸ. ಈ ರೀತಿಯ ಅನೇಕ ಉದಾಹರಣೆಗಳು ನಮಗೆ ಚರಿತ್ರೆಯಲ್ಲಿ ಕಾಣ ಸಿಗುತ್ತದೆ. ಇಂತಹ ಸೌಹಾರ್ದ ಪೂರ್ಣ ಸಂಗತಿಯೊಂದಿಗೆ ಇತಿಹಾಸದ ಕರಾಳ ಕರಿ ಮಗ್ಗುಲ್ಲೊಂದು ತಿಳಿದುದು ಕಾಲನ ಚೋದ್ಯವೇ.
ಇಷ್ಟೆಲ್ಲಾ ನೆನಪಾಗಲು ಕಾರಣ ಇತ್ತಿಚೆಗಷ್ಟೆ ಮೇಲುಕೋಟೆಗೆ ಹೋಗಿದ್ದೆ. ಅಲ್ಲಿನ ಬೀದಿಗಳಲ್ಲಿ ತಿರುಗುತ್ತಾ ಇದ್ದಾಗ ಹೊಸ ಅಚ್ಚರಿಯ ವಿಷಯವೊಂದು ತಿಳಿಯಿತು. ಇಲ್ಲಿನವರು ದೀಪಾವಳಿಯನ್ನು ಆಚರಿಸುದಿಲ್ಲವೆಂಬುವುದು! ಬೆಳಕಿನ ಹಬ್ಬವನ್ನೇ ಬೇಡವೆನಲು ಕಾರಣವೇಕೆಂದು ಕೆಲವರಲ್ಲಿ ವಿಚಾರಿಸಿದೆ. ಕೆದುಕಿದಾಗ ಕರಳು ಹಿಂಡುವ ಕರುಣಾಜನಕ ಕತೆಯೊಂದು ಹೊರ ಬಂತು. ನಾವೆಲ್ಲಾ ಶಾಲೆಯಲ್ಲಿ ಕಲಿಯುತ್ತಿರುವಾಗ 'ಹುಲಿ', ಬಭಯಂಕರ ಶೂರ ಎಂದು ಕರೆಸಿಕೊಂಡಿದ್ದ ಟಿಪ್ಪು ಸುಲ್ತಾನ್ 1790ರಂದು ಇಲ್ಲಿನ 800 ಜನರನ್ನು ದೀಪಾವಳಿಯ ದಿನವೇ ಮಾರಣ ಹೋಮ ಮಾಡಿದ್ದ! ಅಲ್ಲಿಂದೀಚೆಗೆ ಮೂಲ ಮೇಲುಕೋಟೆಯ ಮಂದಿ ದೀಪಾವಳಿ ಆಚರಿಸಿದ್ದಿಲ್ಲ. ಎಂದರು ಮೇಲುಕೋಟೆಯ ಹಿರಿಯರೊಬ್ಬರು. ಅವರ ಮಾಹಿತಿ ನಿಜವೇ ಎಂದು ವಿಕೀಪೀಡಿಯದಲ್ಲಿ ಹುಡುಕಿದೆ. ವಿಕೀಪೀಡಿಯಾವು ಅದನ್ನು ಪುಷ್ಟೀಕರಿಸಿತು!
ಇವನನ್ನೇ ಮಾಸ್ ಹೀರೋನಂತೆ ಚಿತ್ರಿಸುತ್ತಾ, ಜ್ಞಾನ ದೇಗುಲಗಳಿಗೂ ಈ ಅಸಹಿಷ್ಣು ರಾಜನ ಹೆಸರಿಡಲು ಹೊರಟು, ಮುಗ್ದ ಜನರ ಮಾರಣ ಹೋಮ ಮಾಡಿದವರ ಮೆದುಳೇ ಕಣ್ಮುಂದೆ ಸುಳಿಯುತ್ತೆ. ಇವನದು ಒಂದೆರಡು ಬಾನಗಡಿಗಳಾಗಿದ್ದರೆ ಸುಮ್ಮನಿರಬಹುದಿತ್ತು. ಆದರೆ ಕೆದಕಲು ಹೋದರೆ ಸಿಗುವ ವೃತ್ತಾಂತ ನೂರಾರು! ಇದೊಂದು ಸ್ಯಾಂಪಲ್ ಅಷ್ಟೇ. 
ವಿಕೀಪಿಡಿಯಾದಲ್ಲೂ ಈ ಮಾಹಿತಿ ಇದೆ. ಆಸಕ್ತರು ಓದಲು ಕೆಳಗಿನ ಲಿಂಕ್ ಬಳಸಿ.
      ಶ್ರೀಧರ್. ಎಸ್. ಸಿದ್ದಾಪುರ.


https://en.wikipedia.org/wiki/Melukote

History[edit]

People of Melkote do not celebrate Deepawali (the festival of lights) till date since November 10th 1790 (Naraka Chaturdashi). It was the date when Tipu Sultan slaughtered in many cruel ways more than 800 Mandyam Iyengars of this town. People of Melukote thus do not celebrate Deepawali but mourn on the festival of lights every year.[2]

Friday, June 21, 2019

ಚಿರಾಪುಂಜಿಯ ಚಿರ ಯೌವನೆ ನೊ ಕಲಿ ಕೈ ಜಲಧಾರೆ



ಏಕಾಂಗಿಯಾಗಿ ಚಿರಾಪುಂಜಿಯ ಖಾಸಿ ಬೆಟ್ಟಗಳ ನಡುವೆ ಹರಿವ ನೊ ಕಲಿ ಕೈ ಜಲಧಾರೆಗೆ ಹೊರಟು ನಿಂತಾಗ ಹೊಟ್ಟೆಯೊಳಗೂ ಸಣ್ಣ ಚಳಿ ಹಾಸಿಗೆ ಬಿಡಿಸಿತ್ತು! ಆದರೂ ರಸ್ತೆ ಗುಂಟ ಹೊದ್ದು ಮಲಗಿದ್ದ ಮಂಜಿನ ಪರದೆ, ರಸ್ತೆ ಇಕ್ಕೆಲಗಳಲ್ಲಿ ಹಾಸಿದ್ದ ಚೆರ್ರಿ ಹೂ ಪಕಳೆಯ ಸ್ವಾಗತ ಸ್ವಲ್ಪ ಧೈರ್ಯ ಕೊಟ್ಟಿತ್ತು. ಸೂಚಿಪರ್ಣ ಕಾಡುಗಳ ನಡುವೆ ಚುಚ್ಚುವ ಸೂಜಿಯಂತಹ ಚಳಿ. ಶಿಲ್ಲಾಂಗಿನಿಂದ ಬರೋಬ್ಬರಿ 54 ಕಿಲೋ ಮೀಟರ್ ಪಯಣ. ಕಾಡ ನಡುವೆ ಹೊಟ್ಟೆ ಪೂಜೆಗೆ ಡಾಬಾ ಒಂದರಲ್ಲಿ ಕಾರ್ನ್ನು ನಿಲ್ಲಿಸಿದೆವು. ಪರೋಟ ಮತ್ತು ವಿಶಿಷ್ಟ ರುಚಿಯ ಪಕೋಡ ಹೊಡೆದು ಹೊರಟೆವು.
 
 
        ದಾರಿಗುಂಟ ಸಾಲು ಸಾಲು ಜಲ ಕನ್ನಿಕೆಯರು ಕಲಶ ಹಿಡಿದು ನಿಂತಿದ್ದರು! ಸಾಲು ಕನ್ನಿಕೆಯರಲ್ಲಿ ಯಾರನ್ನು ನೋಡುವುದೆಂಬುದೇ ತೋಚದ ಸ್ಥಿತಿ. ಬೆಟ್ಟಗಳ ಬಯಲಿನಲಿ ನುಗ್ಗಿ ನೋಡುವ ಧಾವಂತ. ಬೆಟ್ಟಗಳ ಬಯಲಲಿ ಇಂಗಿ ಇಳಿದು ಸೃಜಿಸುವ ಸ್ಫಟಿಕ ಶುಭ್ರ ಹನಿಗಳ ಸಿಂಚನ ಮನಮೋಹಕ. ರೆಪ್ಪೆ ಮಿಟುಕಿಸಿದರೆ ತಪ್ಪಿ ಹೋಗುವ ದೃಶ್ಯ ಕಾವ್ಯ. ಇಲ್ಲಿ ಮಳೆಗಾಲದಲ್ಲಿ ಪ್ರತಿ ಬೆಟ್ಟಗಳ ಮೇಲೂ ಎಣಿಸಲಸದಳ ಜಲ ಕನ್ನಿಕೆಯರ ಮೆರವಣಿಗೆ ನಡೆಯುತ್ತೆ. 


ವಿಶಾಲ ಬೆಟ್ಟಗಳ ಬಯಲು ದಾಟಿ ಮುಂದಡಿ ಇಟ್ಟರೆ ಸಿಗುವ ಸಾಲು ಸಾಲು ಅಂಗಡಿ. ಸ್ಥಳೀಯ ಮಸಾಲೆ ಪದಾರ್ಥ ಮಾರುವ ಹೆಂಗಸರು. ತರೇವಾರಿ ಅಳತೆಯ ಬಿದಿರ ಬುಟ್ಟಿಗಳು, ಬಿದಿರ ಬುಟ್ಟಿಯ ಕೀ ಚೈನುಗಳು!, ಬಿದಿರ ಪಸರ್ುಗಳು ವಿವಿಧ ಬಿದಿರಿನಿಂದ ಮಾಡಿದ ಅಲಂಕಾರಿಕ ವಸ್ತುಗಳು. ನಾನು ಅವುಗಳ ಸೂಕ್ಷ್ಮತೆಗೆ ಸೂರೆ ಹೋದೆನು. ಅಂತಹ ಕಲಾತ್ಮಕತೆ! ಇವುಗಳ ನಡುವೆ ಧುಮುಕುವ ಮೇಘಾಲಯದ ಚಿರಾಪುಂಜಿಯ ಚಿರ ಯೌವನೆ ನೊಹ ಕಲಿಕೈ ಜಲದಾರೆ. ಸದಾ ಕಣಿವೆಯ ಮಂಜಿನೊಂದಿಗೆ ಚಕ್ಕಂದಕ್ಕಿಳಿಯುವ ಜಲಧಾರೆ. ಸ್ಥಳೀಯರಿಟ್ಟ ಹೆಸರು ಸೊಹ್ರಾ. ಕ್ಷಣ ಕ್ಷಣಕೂ ಮಂಜು ತನ್ನ ಮಡಿಲಿನಲಿ ಜಲಧಾರೆಯನ್ನು ಮುಚ್ಚಿಟ್ಟುಕೊಳ್ಳುವ ಈ ಸುಂದರ ಜಲರಾಶಿಯ ಹಿಂದೆ ಕರುಣಾಜನಕ ಕತೆ ಇದೆ.



'ಕಲಿಕೈ'ಯ ಕರುಣಾ ಜನಕ ಕತೆ-


 ಕಲಿಕೈ ಎಂಬ ಸುಂದರ ಯುವತಿ ತನ್ನ ಗಂಡನೊಂದಿಗೆ ಇಲ್ಲಿ ವಾಸವಾಗಿದ್ದಳು. ಅವಳ ಗಂಡ ಅಶಿಸ್ತಿನ ಮನುಷ್ಯನೂ, ಕುಡುಕನು, ಪತ್ನಿ ಪೀಡಕನೂ ಆಗಿದ್ದ. ಆಕೆಗೆ ಮುದ್ದಾದ ಪುಟ್ಟ ಹೆಣ್ಣು ಮಗುವಿತ್ತು. ಆಕೆಯೊಮ್ಮೆ ಕೆಲಸಕ್ಕೆ ಹೊರಗೆ ಹೋಗಿದ್ದಳು. ವಾಪಾಸು ಬಂದಾಗ ಪತಿಯೇ ಅಂದು ಅಡುಗೆ ಮಾಡಿದ್ದ! ಅವಳಿಗೆ ಅಚ್ಚರಿಯಾಗಿತ್ತು. 'ಮಗು ಜೋಲಿಯಲ್ಲಿ ಮಲಗಿದೆ, ಸುಸ್ತಾಗಿದೆ ನಿನಗೆ, ಊಟ ಮಾಡು' ಎಂದ. ಊಟದ ನಡುವೆ ಬಟ್ಟಲಿನಲ್ಲಿ ಆಕೆಗೆ ಪುಟ್ಟ ಉಗುರುಗಳು ಸಿಕ್ಕವು. ಅನುಮಾನ ಬಂದು ಮಗುವೆಲ್ಲಿ ಎಂದು ಕೇಳಿದಳು. ಪತಿ ತಬ್ಬಿಬ್ಬಾದ. ತಾನು ಉಂಡಿದ್ದು ತನ್ನ ಮಗುವಿನ ಮಾಂಸವೆಂದು ತಿಳಿದದ್ದೇ ಆಕೆ ಕಾಳಿಯಾದಳು. ತಾಯಿಯಾದವಳಿಗೆಂತಹ ದಾರುಣ ಸ್ಥಿತಿ. ಗಂಡನನ್ನು ಕೊಂದು ಈ ಜಲಧಾರೆಯ ನೆತ್ತಿಯಿಂದ ಧುಮುಕಿ ಜೀವ ಕೊಟ್ಟಳು. ಅಂದಿನಿಂದ ಈ ಜಲಧಾರೆ ನೊಹ ಕಲಿಕೈ ಎಂಬ ಅವಳ ಹೆಸರಿನಿಂದ ಹೆಸರಾಯಿತು, ಎಂದು ಜನಪದೀಯ ಕತೆಯೊಂದನ್ನು ಸ್ಥಳೀಯರು ಅರುಹಿದರು.


ಸುಮಾರು 340 ಅಡಿಯಿಂದ ಧುಮುಕುವ ಇದರ ಸೌಂದರ್ಯ ಪದಗಳಲ್ಲಿ ಹಿಡಿದಿಡಲಾರದ್ದು. ಸ್ವಟಿಕ ಶುಭ್ರ ಹಸಿರು ವರ್ಣ ಲೇಪಿತ ನೀರು! ಆ ಎತ್ತರದಿಂದ ಬಳಕುತ್ತಾ ಧುಮುಕುವ ಇವಳು ಕಾಡನ್ನೆಲ್ಲಾ ಸುತ್ತಿ ಕೊನೆಗೆ ಬ್ರಹ್ಮಪುತ್ರ ನದಿಗೆ ಸೇರುವಳು. ಕ್ಷಣಗಳಷ್ಟೇ ದರುಶನ ಭಾಗ್ಯ. ಮಂಜಿನ ಪರೆದೆ ಯಾವಾಗ ಮುಚ್ಚಿ ಬಿಡುವುದೋ ತಿಳಿಯದು. ಬೆಳಗಿನ ಹೊತ್ತು ಇಲ್ಲಿಗೆ ಭೇಟಿ ಕೊಡುವುದು ಬಹಳ ಉತ್ತಮ. ಮಳೆಗಾಲದಲ್ಲಿ ಇದರ ಸೊಬಗೇ ಬೇರೆ. ಮೇ ನಿಂದ ನವೆಂಬರ್ ಭೇಟಿ ಕೊಡಲು ಸೂಕ್ತ ಸಮಯ. ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿ ತರೇವಾರಿ ತಿನಿಸುಗಳಿವೆ. ರಸ್ತೆಯುದ್ದಕ್ಕೂ ಊಟಕ್ಕೆ ಅನೇಕ ಹೋಟೆಲ್ಗಳಿವೆ. ನಾನು ಊಟ ಮಾಡಿದ ಹೋಟೆಲ್ ಗ್ರೀನ್ ಆಕರ್ಿಡ್ ಅದ್ಭುತವಾಗಿತ್ತು. ಇಲ್ಲಿನ ವಿಚಿತ್ರ ರುಚಿಯ ಚಟ್ನಿ ನನ್ನ ನಾಲಗೆ ತುದಿಯಲ್ಲಿ ಇನ್ನೂ ಜೀವಂತ!




'ಮಾವುಜ್ರಂಗ್' ಎಂಬ ಸ್ವಚ್ಚ ಊರನ್ನು ಹಾದು ಬರುವಾಗ ನನಗೆ ಕನರ್ಾಟಕದ ಬೀದಿಗಳೊಮ್ಮೆ ಕಣ್ಮುಂದೆ ಬಂದವು. ಇಲ್ಲಿನ ಪರಿಸರ ನಮಗೆ ಪರ ಲೋಕಕ್ಕೆ ಬಂದಂತೆ ಭಾಸವಾಗುತ್ತಿತ್ತು! ದಾರಿಗುಂಟ ಹುಡುಕಿದರೂ ಒಂದು ಸಣ್ಣ ಪ್ಲಾಸ್ಟಿಕ್ ಕಸ ನಿಮಗೆ ಸಿಗದು! ಮನೆಯ ಎದುರಿನ ಜಾಗವಲ್ಲದೇ ಪಕ್ಕದ ಮನೆಯವರೆಗೆ ಗುಡಿಸಿ ಸ್ಪಟಿಕ ಶುಭ್ರವಾಗಿಸುವ ಇವರ ಪರಿಸರ ಪ್ರೇಮ ಮೆಚ್ಚಲೇಬೇಕು! ರಸ್ತೆ ಗುಡಿಸುವ ಅನೇಕ ಸ್ಥಳೀಯರನ್ನು ಇಲ್ಲಿ ಕಂಡೆ. ಎಷ್ಯಾದಲ್ಲೇ ಸ್ವಚ್ಚ ಹಳ್ಳಿ ಪುರಸ್ಕಾರ ಪಡೆದಿರುವ 'ಮವುಲಿನ್ನೋಂಗ್' (Mawlynnong) ಶಿಲ್ಲಾಂಗ್ನಿಂದ ಕೂಗಳತೆಯ ದೂರದಲ್ಲಿದೆ.
 ಇಲ್ಲಿನ ಬೆಟ್ಟಗಳನ್ನು ಎಲ್ಲೆಲ್ಲೂ ಕೊರೆದ ಸುಣ್ಣದ ಕಲ್ಲಿನ ಗುಹೆಗಳು,  ಅಲ್ಲಿ ಕೆಲಸ ಮಾಡುವ ಕಾಮರ್ಿಕರು ನಮಗೆ ಕಾಣ ಸಿಗುತ್ತಾರೆ. ಜೊತೆಗೆ ಜಲ್ಲಿ ಕಲ್ಲಿನ ಕ್ವಾರಿಗಳೂ. ಹೀಗೆ ಮುಂದುವರಿದರೆ ಇನ್ನೊಂದು ಹತ್ತು ವರ್ಷಕ್ಕೆಲ್ಲಾ ಬೆಟ್ಟಗಳೆಲ್ಲಾ ಬಯಲಾಗಿ ಬಿಡುವುದರಲ್ಲಿ ಸಂಶಯವಿಲ್ಲ! ಸನಿಹದ ಸಿಮೆಂಟ್ ಕಾಖರ್ಾನೆಗೆ ಇಲ್ಲಿಂದಲೇ ಸುಣ್ಣದ ಕಲ್ಲು ಸರಬರಾಜಾಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಚಿರಾಪುಂಜಿಯ ಸುಮನೋಹರ ಬೆಟ್ಟಗಳನ್ನು ಬಲಿಕೊಡುವುದು ಎಷ್ಟು ಸರಿ? ಎಂಬ ಜಿಜ್ಞಾಸೆ ನನ್ನನ್ನು ಕಾಡುತ್ತಲೇ ಇದೆ. 
 ಈ ಜಲಧಾರೆಯ ನೋಡಿ ಸನಿಹದ 'ಅಕ್ಕ ತಂಗಿ ಜಲಧಾರೆ'(Seven sister water falls),  'ಮೌಸ್ವಾಮಿ' (  mawsmai cave) ಸುಣ್ಣದ ಕಲ್ಲಿನ ಗುಹೆ, 'ವಾಕಾಬಾ' ಜಲಧಾರೆ ಮುಂತಾದ ಅದ್ಭುತ ತಾಣಗಳನ್ನೂ ನೋಡಿ ಬರಬಹುದು. ಉಳಿದುಕೊಳ್ಳಲು ಶಿಲ್ಲಾಂಗ್ನಲ್ಲಿ ಸಾಕಷ್ಟು ವಸತಿ ನಿಲಯಗಳಿವೆ.

ಶ್ರೀಧರ್. ಎಸ್. ಸಿದ್ದಾಪುರ

Monday, June 17, 2019

ಕರಿ ಸಾಕ್ಸು ತೊಟ್ಟ ತುಂಟಿಯ ಸ್ವಗತ!



Angaeus sp. [Thomisidae family]
 ದಟ್ಟ ಕಾನನದ ನಡುವೆ ಹೊಳೆಯಂತೆ ಹರಿವ ಸರ ಹದ್ದಿನ ಹರ ದಾರಿಯಲಿ ಸ್ವಚ್ಚಂದವಾಗಿ, ರಾತ್ರಿಯವರೆಗೆ ಏಳಬಾರದೆಂದು ಸಣ್ಣ ಪೊದೆಯ ಟೊಂಗೆ ಮೇಲೆ ಮಲಗಿದ್ದೆ. 
 ಚಿಕ್ಕ ಗಿಡವೇ ನನ್ನ ಮನೆ. ಧೂಳೆಬ್ಬಿಸಿ, ಬರ್ರೆಂದು ಬರುವ ಬೈಕುಗಳ ಹಿಂಡು ಒಂದರ ಹಿಂದೊಂದು. ಎಲ್ಲರೂ ಮುಂದೆ ಮುಂದೆ ಹೋಗುವವರೇ. ಒಬ್ಬರೂ ನೋಡೋರೇ ಇಲ್ಲ! ನನ್ನ ಪುಣ್ಯ. ನನ್ನ ಜಾಗದ ಸನಿಹವೇ ಹಾದು ಹೋಗುವರು. ಆದರೆ ನನ್ನ ನೀಳ ನೀಳ ಕಾಲುಗಳು. ಕಾಲ ಬುಡದಲಿ ಮುಳ್ಳಿನಂತಹ ರಚನೆ. ಜೊತೆಗೆ ಸಾಕ್ಸ್ ತೊಟ್ಟಂತೆ ಕಾಣುವ ಕಪ್ಪು ಕಪ್ಪು ಕಾಲುಗಳು. ಕಣ್ಣುಗಳೋ ದುಂಡಗೆ ಕೆಂಪು ಕೆಂಪು. ಕಣ್ಣು ಗುಡ್ಡೆ ಎದ್ದಂತಿರುವ ನನ್ನ ಕಣ್ಣು ಕಂಡರೆ ನಿಮಗೆ ಭಯವಾಗಬಹುದು. ಭಯ ಪಡುವ ಅಗತ್ಯವಿಲ್ಲ. ಹಗಲಿನಲ್ಲಿ ತಣ್ಣಗೆ ಮಲಗುವ ನಾ ರಾತ್ರಿ ಕಾವಲುಗಾರ! 
spider ನ ಹಿಂಬಾಗ....
 ಕೈ ಕಾಲು ಮಡಚಿ ಮಲಗಿದವನ ಪಕ್ಕ ಪುಸಕ್ಕನೆ ಬೆಳಕಬಿಟ್ಟು ಎಬ್ಬಿಸಬೇಕೆ ಈ ಪುಣ್ಯಾತ್ಮ? ನನ್ನ ಇಷ್ಟು ಹತ್ತಿರ ಬಂದವರಿಲ್ಲ. ಒಮ್ಮೆಗೆ ಹೆದರಿಕೆಯೂ ಆಯಿತು. ಸುದಾರಿಸಿಕೊಂಡೆ. ಹಿಂದಿನಿಂದ ಮುಂದಿನಿಂದ ನನ್ನ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಮನುಷ್ಯನ ಮುಖವನ್ನು ಹೋಲುವ ನನ್ನ ಹೊಟ್ಟೆ ಭಾಗವನ್ನೂ ಈ ಪುಣ್ಯಾತ್ಮ ಕ್ಲಿಕ್ಕಿಸಿಕೊಂಡ. ಸಾಕ್ಸು ತೊಡಿಸಿದ್ದು ಯಾರೆಂದು ಕೇಳಬೇಡಿ. ಇಷ್ಟವಾದರೆ ಕ್ಲಿಕ್ಕಿಸಿ ಒಂದು ಲೈಕು!

ಶ್ರೀಧರ್. ಎಸ್. ಸಿದ್ದಾಪುರ.

Monday, June 10, 2019

ಹೂಲಿಯ ವಿಶಿಷ್ಟ ಪಂಚಲಿಂಗೇಶ್ವರ ದೇವಾಲಯ.


ಹೂಲಿಯ ದಾರಿಯಲ್ಲಿ.. 

ಕರ್ನಾಟಕದ ಸಾಮಾನ್ಯ ಹೆಸರುಗಳಾದ ಕಮಲಾಪುರ, ರಾಮಾಪುರ ಇತ್ಯಾದಿಗಳ ನಡುವೆ 'ಹೂಲಿ' ಎಂದೊಡೆ ಏನೋ ವಿಚಿತ್ರ ಹೆಸರು ಕೇಳಿದ ಭಾವ ನಮ್ಮಲ್ಲಿ ಮೂಡುತ್ತದೆ. 'ಹೂಲಿ' ಎಂದರೆ ಕಿವಿಯ ಆಭರಣ ಎಂದು. ಹಿಂದೆ ಮಹಿಷ್ಪತಿ ಎಂದು ಕರೆಯಲ್ಪಡುತ್ತಿದ್ದ ಊರಿಗೆ ಒಂದು ಸುತ್ತು ಹಾಕಿ ಬರೋಣ ಬನ್ನಿ.
ಪಂಚಲಿಂಗೇಶ್ವರ ದೇವಾಲಯ ಹಿಂದೆ ಬಸದಿಯಾಗಿತ್ತು.. 
ಕನರ್ಾಟಕದ ಅತಿ ಪುರಾತನ ನಗರವಾದ ಹೂಲಿ, ಪಂಚಲಿಂಗೇಶ್ವರ ಎಂಬ ವಿಶಿಷ್ಟ ದೇವಾಲಯದಿಂದಾಗಿ ನಮ್ಮ ಗಮನ ಸೆಳೆಯುತ್ತದೆ. ರಟ್ಟರ ಆಡಳಿತದಲ್ಲಿ ನಿಮರ್ಿಸಿ, ಚಾಲುಕ್ಯರಿಂದ ಪುರ್ನನಿಮರ್ಾಣಗೊಂಡ ವಿಶಿಷ್ಟ ದೇವಾಲಯ ಪಂಚಲಿಂಗೇಶ್ವರ. ಹುಬ್ಬಳ್ಳಿಯಿಂದ ಕೇವಲ 65 ಕಿ. ಮೀ, ಬೆಂಗಳೂರಿನಿಂದ 368 ಕಿ.ಮೀ ದೂರದಲ್ಲಿದೆ.

ಅನೇಕ ವಿಶಿಷ್ಟತೆಯಿಂದ ಈ ದೇವಾಲಯ ಪ್ರಸಿದ್ಧವಾಗಿದೆ. ಇದರ ಸುತ್ತ ಮುತ್ತ 9 ಬೀಳುವ ಮತ್ತು ಬೀಳುವ ಹಂತದಲ್ಲಿರುವ ದೇವಾಲಯಗಳಿವೆ. ಒಂದು ಒಂದಕ್ಕಿಂತ ಭಿನ್ನ. ಎಲ್ಲವೂ ಆಕರ್ಷಕವಾಗಿವೆ. ಆದರೆ ಅವುಗಳ ಅರಣ್ಯರೊಧನ ಕೇಳುವವರಿಲ್ಲ. 
ಒಂದು ಕಾಲದಲ್ಲಿ ಪಂಚ ತೀರ್ಥಂಕರ ಬಸದಿಯಾಗಿದ್ದ ಇದು ಈಗ ಪಂಚಲಿಂಗೇಶ್ವರವೆಂದು ಪ್ರಸಿದ್ಧಿ ಪಡೆದಿದೆ. ಪಂಚ ಗೋಪುರಗಳಲ್ಲಿ ಕೇವಲ ಮೂರು ಮಾತ್ರ ಉಳಿದಿದೆ. ವಿಶಾಲವಾದ ನವರಂಗ ಮೂರು ದಿಕ್ಕುಗಳಿಗೆ ತೆರೆದುಕೊಂಡಿದೆ. ನವರಂಗವು ಬಳ್ಳಿಗಾವಿಯನ್ನು ನೆನಪಿಸುತ್ತದೆ. ಇತಿಹಾಸದ ಯಾವುದೋ ಕಾಲಘಟ್ಟದಲ್ಲಿ ಬಸದಿ ಇದ್ದದ್ದು ಶೈವ ದೇವಾಲಯವಾಗಿ ಪಲ್ಲಟಗೊಂಡಿದೆ. ದೇವಾಲಯದ ಬಾಗಿಲ ಚೌಕಟ್ಟಿನ ಮೇಲೆ ಇದು ಬಸದಿಯಾಗಿತ್ತು ಎಂಬುದಕ್ಕೆ ಲಿಖಿತ ಮತ್ತು ಚಿತ್ರ ಮಾಹಿತಿ ಸಿಗುತ್ತದೆ! 
ಬೆಟ್ಟದಲ್ಲಿ ಕೋಟೆಯ ಅವಶೇಷಗಳು ... 
ದೇವಾಲಯದ ಆವರಣದಲ್ಲಿನ ಶಾಸನಗಳನ್ನು ಚೌಕಟ್ಟು ನಿಮರ್ಿಸಿ ಕಾಪಿಟ್ಟಿದ್ದಾರೆ. ಆ ಕಾಲದ ಒತ್ತಡಗಳ, ಸಾಮಾಜಿಕ ಬದಲಾವಣೆಗಳ ಚಿತ್ರಣಗಳ ಜೊತೆಗೆ ಜನ ಜೀವನದ ವಿವರಗಳು ಇಲ್ಲಿನ ಶಾಸನಗಳಿಂದ ನಮಗೆ ತಿಳಿದು ಬರುವುದು. ಊರ ಸುತ್ತಮುತ್ತ ಅನೇಕ ಭಗ್ನಾವಶೇಷಗಳು ಎಲ್ಲೆಲ್ಲೂ ಕಾಣಸಿಗುತ್ತದೆ. ಊರು ಈ ದೇವಾಲಯದೊಳಗೂ ನುಗ್ಗುವಂತಿದೆ. ದೇವಾಲಯದ ಆವರಣದಲ್ಲಿ ಸಣ್ಣ ವಸ್ತು ಸಂಗ್ರಹಾಲಯವೂ ಇದೆ. ಪುರಾತತ್ವ ಇಲಾಖೆ ಈ ದೇವಾಲಯದ ದೇಖರೇಖಿ ವಹಿಸಿಕೊಂಡಿದೆ.
ಸೂರ್ಯ ನಾರಾಯಣ ದೇವಾಲಯ, ಬಸವ ದೇವಾಲಯದ ಜೊತೆ ಜೊತೆಗೆ ಕಾಲ ಗರ್ಭಕ್ಕೆ ಸೇರಲು ಒಟ್ಟು 9 ದೇವಾಲಯಗಳು ತುದಿಗಾಲ ಮೇಲೆ ನಿಂತಿವೆ! ಪುರಾತತ್ವ ಇಲಾಖೆ ಹಾಗೂ ಜನರ ದಿವ್ಯ ನಿರ್ಲಕ್ಷ್ಯಕ್ಕೆ ಇಲ್ಲಿನ ಜನರ ಧನ ದಾಹಕ್ಕೆ ದೇವಾಲಯಗಳು ಸಂಪೂರ್ಣವಾಗಿ ನಲುಗಿವೆ.  
ದೇವಾಲಯದ ಸನಿಹದಲ್ಲಿನ ಬೆಟ್ಟದ ಮೇಲೆ ಉಳಿದುಕೊಂಡ ಒಂದೆರಡು ಬುರುಜುಗಳು ಇಲ್ಲಿ ಕೋಟೆ ಇತ್ತು ಎಂಬುದಕ್ಕೆ ಸಾಕ್ಷ್ಯ ನುಡಿಯುತ್ತೆ. ದೇವಾಲಯದ ಸನಿಹ ದೊಡ್ಡ ಕೆರೆಯಿದೆ. ಹತ್ತು ವರುಷದಿಂದ ಮಳೆಯಾಗದೆ ಊರು ಬಿಸಿಲಿಗೆ ನಲುಗಿದೆ. ಮಲಪ್ರಭಾ ನದಿಯ ನೀರನ್ನು ಬಳಸಿ ಕೃಷಿ ಮತ್ತು ಕುಡಿಯಲು ಬಳಸುತ್ತಾರೆ.
ನಮ್ಮ ಪೂರ್ವಜರ ಇತಿಹಾಸದ ಸಾಕ್ಷ್ಯ ಹೇಳುವ ನಮ್ಮ ಹೆಮ್ಮೆಯ ಕುರುಹನ್ನು ನಾವು ಉಳಿಸಿಕೊಳ್ಳದೇ ಹಾಳುಗೆಡಹುತ್ತಿರುವುದು ನಮ್ಮ ಇತಿಹಾಸದ ಪ್ರಜ್ಞೆಯನ್ನು ಕೆಣಕುತ್ತಿವೆ. ಪ್ರವಾಸೋಧ್ಯಮ ಇಲಾಖೆ ಮನಸು ಮಾಡಿದರೆ ಒಂದೊಳ್ಳೆಯ ಪ್ರವಾಸಿ ಕೇಂದ್ರ ಮಾಡಬಹುದಿತ್ತು.

ಶ್ರೀಧರ್. ಎಸ್. ಸಿದ್ದಾಪುರ.

Saturday, June 8, 2019

ಪ್ರಕೃತಿ ಇವುಗಳಿಗೆ ನೀಡಿದ ಆ ಅದ್ಭುತ ವರ ಯಾವುದು?


 ಥೊಮೊಸಿಡೆ ಪ್ರಭೇದಕ್ಕೆ ಸೇರಿದ ಈ ಜೇಡ ಅತ್ಯಂತ ಸ್ಪಷ್ಟವಾಗಿ ತನ್ನ ಬೇಟೆಯನ್ನು ಹುಡುಕಬಲ್ಲದು. ಆದರೆ ಮನುಷ್ಯ ಜಾತಿಗೆ ತನ್ನ ಆಹಾರವೇನೆಂದು ತಂದೆ ತಾಯಿ ನೀಡುತ್ತಾರೆ. ತಾನೆ ತನ್ನ ಆಹಾರ ಗುರುತಿಸಲಾರ! ತಂದೆ ತಾಯಿಯ ಗುಣಾವಗುಣಗಳನ್ನು ಹೆಕ್ಕಿಕೊಂಡು ನಮ್ಮದೇ ಆದ ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತೇವೆ. ಎಲ್ಲದಕ್ಕೂ ಪರಾವಲಂಬನೆ ತಪ್ಪಿದ್ದಲ್ಲ. ಸಣ್ಣ ಶೀತವಾದರೂ ವೈದ್ಯರಲ್ಲಿಗೆ ಓಡುತ್ತೇವೆ.
 


ಆದರೆ ಪುಟಾಣಿ ಜೇಡಗಳನ್ನು ಗಮನಿಸಿ. ತನ್ನ ಬಣ್ಣವೇನೆಂದು ತಿಳಿದು, ಅದನ್ನೇ ಹೋಲುವ ವಿವಿಧ ಗಿಡಗಳನ್ನು ಪರಿಸರದಲ್ಲಿ ಗುರುತಿಸಿ ಅಲ್ಲಿಗೆ ದಾಂಗುಡಿ ಇಟ್ಟು ತನ್ನನ್ನು ರಕ್ಷಿಸಿಕೊಳ್ಳುವುದಲ್ಲದೇ ಆಹಾರವನ್ನೂ ಹುಡುಕಬಲ್ಲದು! ಏನಾಶ್ಚರ್ಯ ನೋಡಿ ಇಲ್ಲಿರುವ ಕ್ರ್ಯಾಬ್ ಜೇಡವನ್ನು. ತನ್ನ ಬಣ್ಣವನ್ನೇ ಹೋಲುವ ಗಿಡವನ್ನು ಆರಿಸಿಕೊಂಡು ಅದರಲ್ಲಿ ಅರಳಿದ ಹೂವಿನ ದಂಟಿನ ಆಶ್ರಯ ಪಡೆದು ಅಲ್ಲಿಗೆ ದಾಂಗುಡಿ ಇಟ್ಟಿದೆ! ತನ್ನ ಬಣ್ಣ ಮತ್ತು ಗಿಡದ ಬಣ್ಣಗಳು ಒಂದೇ ಎಂದು ಅದಕ್ಕೆ ಹೇಳಿದವರ್ಯಾರು? ಅಲ್ಲಿ ಹೂವೊಂದು ಅರಳಿದ ಮಾಹಿತಿ ತಿಳಿಸಿದವರ್ಯಾರು? ಪ್ರಕೃತಿಯ ವಿಶಿಷ್ಟವಾದ ಈ ಅಂರ್ತಸಂವಹನ ನಮ್ಮನ್ನು ಆಶ್ಚರ್ಯಕ್ಕೆ ಕೆಡಹುವುದು. ಯಾರೂ ಕಲಿಸದೆಯೇ ತನ್ನ ಆಹಾರವನ್ನು ಗುರುತಿಸಿ ಬೇಟೆಯಾಡಬೇಕಾದರೆ ಅದಕ್ಕಿರುವ ಅದ್ಭುತವಾದ ಪ್ರಕೃತಿಯು ನೀಡಿದ ವರ ನಿಜಕ್ಕೂ ನಮ್ಮನ್ನು ಅಚ್ಚರಿಗೆ ನೂಕುವುದು.

 ಇವುಗಳನ್ನು ಗುರುತಿಸಲು ಹದ್ದಿನ ಕಣ್ಣಿನ ನನ್ನ ಸ್ನೇಹಿತ ಪ್ರಕಾಶನ ಸಹಾಯ ಹಸ್ತವಿದೆ. ಬೆಳಗಿನಿಂದ ಸಂಜೆವರೆಗೂ ಹಳದಿ ಬಣ್ಣದ ಕ್ರೋಟೊನ್ ಗಿಡದಲಿ ಕೂತು ಎರಡೂ ಬೇಟೆಯಲಿ ನಿರತವಾಗಿದ್ದವು. 
ಶ್ರೀಧರ್. ಎಸ್. ಸಿದ್ದಾಪುರ.

Wednesday, May 29, 2019

ಮೆಲೊ ಡ್ರಾಮ್ಯಾಟಿಕ್ ಮೇಲುಕೋಟೆ

ಅರೆ ನಾಟಕದ ಪದವನ್ನು ಮೇಲುಕೋಟೆಗೆ ಅಂಟಿಸಿದ್ದಾನಲ್ಲ ಎಂದು ಹುಬ್ಬೇರಿಸಬೇಡಿ.
 
      ಇಲ್ಲಿನ ವಿಶಿಷ್ಟ ಆಚರಣೆಗಳು, ವಿಚಿತ್ರ ಪದ್ಧತಿಗಳು, ನಡೆಯುವ ಉತ್ಸವಗಳು, ಇಲ್ಲಿರುವ 108 ಪುಷ್ಕರಣಿಗಳು, ಸುತ್ತಲಿನ ಕೋಟೆ, ಪೋಟೋಗೆ ಪೋಸು ನೀಡುವ ಲಲನೆಯರು, ಅಲ್ಲಲ್ಲಿ ಸ್ಥಾಪಿಸಿರುವ ಮಂಟಪಗಳಿಂದ ನಿಮಗೆ ಹಾಗನ್ನಿಸದೇ ಇದ್ದರೆ ಹೇಳಿ. ನಾವು ಹೋದಾಗ ಕಲ್ಯಾಣಿಯಲ್ಲಿ ಪ್ರಾರಂಭವಾದ ಪೂಜೆಯೊಂದು ಚೆಲುವೆ ನಾರಾಯಣನ ಗುಡಿಯೊಳಗೆ ಅಂತ್ಯಗೊಂಡಿತು.


ಅನೇಕ ಬಾರಿ ಇಲ್ಲಿಗೆ ಹೋಗಬೇಕೆಂದು ಕೊಂಡರೂ ಹೋಗಲಾಗಲಿಲ್ಲ. ಮೈಸೂರಿಗೆ ಐದಾರು ಬಾರಿ ಹೋದರೂ ಮೇಲುಕೋಟೆಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಪಟ್ಟು ಬಿಡದೇ ಹೋಗಿ ಬಂದೆ.


ತನ್ನ ಹಳೇ ಕಾಲದ ಬೀದಿಗಳಿಂದ, ಗುಡಿ ಗೋಪುರಗಳಿಂದ, ಪುರಾತನ ದೋಣಿ ಹಂಚಿನ ಮನೆಗಳಿಂದ, ತಮಿಳು ಮಿಶ್ರಿತ ಕನ್ನಡ ಮಾತನಾಡುವ ವಿಚಿತ್ರ ಜನಗಳಿಂದ, ತಮಿಳು ಶೈಲಿಯ ಊಟೋಪಚಾರದಿಂದ ಮೇಲುಕೋಟೆ ಬಹಳ ಇಷ್ಟವಾಗಿ ಬಿಟ್ಟಿತು.


ಅನೇಕರ ಬಾಯಿಗೆ ಕೋಲಿಕ್ಕಿ ಇಲ್ಲಿನ ಪುರಾಣ, ಇತಿಹಾಸ ಕೆದಕಲು ನೋಡಿದೆ. ಬೀದಿ ಬೀದಿ ಸುತ್ತಾಡಿ ವಿಷಯ ಸಂಗ್ರಹಿಸಿದೆ.



ಪುಸ್ತಕದಂಗಡಿಯ ಅಯ್ಯಂಗಾರರನ್ನು ಭೇಟಿ ಮಾಡಿದೆ. ಹಂಪಿ ಬಿಟ್ಟರೆ ಮೇಲುಕೋಟೆಯೇ ಫೋಟೋಗ್ರಾಪರ್ ಗಳ ಸ್ವರ್ಗ! ಇಲ್ಲಿನ ಒಂದೊಂದೇ ಸ್ಥಳಗಳಿಗೆ ಹೋಗಿ ಬರೋಣ ಬನ್ನಿ. ಪದ್ಧತಿಯಂತೆ ಮೊದಲಿಗೆ ಸುಮಾರು 11ನೇ ಶತಮಾನದಲ್ಲಿ ಚಾಲುಕ್ಯರಿಂದ ನಿಮರ್ಾಣವಾದ ಯೋಗಾ ನರಸಿಂಹನನ್ನು ನೋಡಿ ಬರೋಣ.

ಯೋಗಾ ನರಸಿಂಹ





ಯಾದವಗಿರಿ, ಯತಿಶೈಲ ಎಂದು ಕರೆಯುವ ಬೆಟ್ಟದ ಮೇಲಿದ್ದಾನೆ ಯೋಗಾ ನರಸಿಂಹ. ಚಾಲುಕ್ಯರಿಂದ ಸ್ಥಾಪಿಸಲ್ಪಟ್ಟು, ಯದುವಂಶದ ದೊರೆಗಳ ಸಹಾಯದಿಂದ ರಾಮಾನುಜಾಚಾರ್ಯರು ಉತ್ಥಾನಗೊಳಿಸಿದ ದೇವಾಲಯ. ರಾಮಾನುಜಾಚಾರ್ಯರು 14 ವರ್ಷ ಇಲ್ಲಿ ವಾಸವಾಗಿದ್ದು ಶ್ರೀ ವೈಷ್ಣವ ಪಂಥ ಮತ್ತು ಮೇಲುಕೋಟೆಯ ಉದ್ದಾರದಲ್ಲಿ ತೊಡಗಿಕೊಂಡಿದ್ದರು. 52 ಅರ್ಚಕರನ್ನೂ ಅವರು ತಮಿಳುನಾಡಿನಿಂದ ಕರೆಸಿಕೊಂಡಿದ್ದರು!
ಇಲ್ಲಿನ ಕ್ರಮದಂತೆ ಮೊದಲಿಗೆ ಯೋಗ ನರಸಿಂಹನ ಭೇಟಿ. ಅನೇಕ ಸಣ್ಣ ಗೋಪುರಗಳನ್ನು ಹೊಕ್ಕು ಯೋಗಾ ನರಸಿಂಹನಿಗೆ ನಮಸ್ಕರಿಸಿ ಬರೋಣ. ಕನರ್ಾಟಕದಲ್ಲೆಲ್ಲೂ ಈ ರೀತಿಯ ಗೋಪುರ ಹೊಕ್ಕಿ ದೇವಾಲಯ ಪ್ರವೇಶ ಮಾಡುವ ಕ್ರಮವಿಲ್ಲ. ಬೇಲೂರು, ಹಳೆಬೀಡು ಹೊಕ್ಕರೆ ಒಂದೇ ಒಂದು ಸ್ವಾಗತ ಗೋಪುರ. ಇದು ಪಕ್ಕಾ ತಮಿಳುನಾಡಿನ ಪದ್ಧತಿ.


ಶ್ರೀ ರಂಗಂನಲ್ಲಿ ರಂಗನಾಥನಿಗೆ ಬರೋಬ್ಬರಿ ಒಟ್ಟು 21 ಸ್ವಾಗತ ಗೋಪುರಗಳಿವೆ! ಅದೇ ಕ್ರಮ ಇಲ್ಲೂ ಅನುಸರಿಸಲಾಗಿದೆ. ಪಶ್ಚಿಮಾಭಿಮುಖವಾದ ಗೋಪುರಗಳನ್ನು ದಾಟಿ, ನಂತರದ ಎರಡು ಎತ್ತರದ ಗೋಪುರಗಳನ್ನು ದಾಟಿ ಮೇಲುಕೋಟೆಯ ಶಿಖರದ ನೆತ್ತಿಯಲ್ಲಿ ಪೂವರ್ಾಭಿಮುಖಿ ಧ್ಯಾನಸ್ಥ ನರಸಿಂಹನನ್ನು ಎಬ್ಬಿಸಿ ದರ್ಶನ ಪಡೆಯಬೇಕು.


ಮುಂಜಾವಿಗೆ ನೆತ್ತಿ ಏರಿದರೆ ಮಾತ್ರ ಬೇಗ ದರ್ಶನ ಪಡೆಯಬಹುದು ಇಲ್ಲವಾದರೆ ಕಾಯ ಬೇಕಾದೀತು. ಕೆಳಗಿನ ಕಲ್ಯಾಣಿಯಿಂದಲೇ ನರಸಿಂಹನಿಗೆ ಅಭಿಷೇಕದ ನೀರು ತರಬೇಕು. ಏರುವ ದಾರಿಯುದ್ದಕ್ಕೂ ಮಂಗಗಳ ಕಾಟವಿದೆ. ನಿಮ್ಮ ಜಂಬದ ಚೀಲಗಳನ್ನು ಜೋಪಾನ ಮಾಡದಿದ್ದರೆ ಮಂಗಗಳ ಪಾಲಾಗುವುದು ಖಚಿತ. ಊರಿನ ಪಕ್ಷಿ ನೋಟವೂ ನಿಮಗೆ ಮೇಲಿನಿಂದಲೇ ಸಿಗುವುದು. ಸರಿ ಚೆಲುವ ನಾರಾಯಣನನ್ನು ನೋಡೋಣವೇ?

ಚೆಲುವ ನಾರಾಯಣನ ಸನ್ನಿಧಿಗೆ




ನೇರ ಬೆಟ್ಟವಿಳಿದು ಕಲ್ಯಾಣಿ ಸುತ್ತಿ, ಸುತ್ತಲಿನ ದೈವಗಳಿಗೆ ಸುತ್ತು ಬಂದು ನಾರಾಯಣನಿದ್ದಲ್ಲಿಗೆ ಹೊರಟೆವು. ಹಾಂ ಕಲ್ಯಾಣಿಯಲ್ಲೊಂದು ಚೆಂದದ ನಕ್ಷತ್ರಾಕಾರದ ಮಂಟಪವಿದೆ. ಜೊತೆಗೆ ಕಲ್ಯಾಣ ಮಂದಿರವೂ ಜೊತೆಯಲ್ಲಿದೆ. ಎರಡನ್ನೂ ನೋಡಿ ಬಿಡಿ.
ದೇವಾಲಯದ ಒಳ ಆವರಣದಲ್ಲಿ ಸುಂದರ ಕೆತ್ತನೆಯ ಕಂಬಗಳಿವೆ. ಒಂದೊಂದು ಕಂಬದ ವಿನ್ಯಾಸವೂ ವಿಭಿನ್ನ. ಇಲ್ಲಿನ ಸೂಕ್ಷ್ಮ ಕೆತ್ತನೆ ಮನಸೂರೆಗೊಳಿಸುವಷ್ಟು ಚೆನ್ನಾಗಿದೆ. ಕೆಲವು ಕಂಬಗಳಲ್ಲಿ ನವಿಲಿನ ಸುಂದರ ವಿನ್ಯಾಸವಿದೆ. ಅನೇಕ ನವಿಲಿನ ಶಿಲ್ಪಗಳನ್ನು ನಮ್ಮವರೇ ಹಾಳುಗೆಡಹಿದ್ದಾರೆ. ದೇವಾಲಯದ ಪೌಳಿಯ ಕೆತ್ತನೆಗಳನ್ನು ನೋಡಿಕೊಂಡು ಮೇಲುಕೋಟೆಯ ನಾರಾಯಣನಿಗೆ ನಮಸ್ಕರಿಸಿ, ಹೊರ ಪೌಳಿ ಸುತ್ತಿ ಸನಿಹದ ಅಕ್ಕ-ತಂಗಿ ಕೊಳ ನೋಡಿಕೊಂಡು ಅಲ್ಲಿಂದ ರಾಯ ಗೋಪುರಕ್ಕೆ ಹೊರಟೆವು.

ರಾಯಗೋಪುರ



ರಾಯಗೋಪುರ ಅರ್ಧಂಬರ್ಧ ಕಟ್ಟಿ ನಿಲ್ಲಿಸಿದ ದೊಡ್ಡ ರಚನೆಯಂತಿದೆ. ಅಲಂಕೃತ ಸುಂದರ ಆನೆ, ಕಂಬಕ್ಕೆ ಒರಗಿ ನಿಂತ ಸುಂದರಿ. ಪುಂಗಿ ಊದುವ ಮಹಿಳೆ.  ಹೀಗೆ ಅನೇಕ ಸುಂದರ ರಚನೆಯನ್ನು ಕಟ್ಟಿ ಅರ್ಧಕ್ಕೆ ನಿಲ್ಲಿಸಿದಂತಿದೆ. ಯಾಕೆ ಇಷ್ಟು ದೊಡ್ಡ ರಚನೆಯನ್ನು ನಿಮರ್ಿಸಿ ನಿಲ್ಲಿಸಿದ್ದಾರೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಕಾಲ ಗರ್ಭದಲ್ಲಿ ಅನೇಕ ರಹಸ್ಯಗಳನ್ನು ಈ ರಾಯಗೋಪುರ ಅಡಗಿಸಿಕೊಂಡಿದೆ. ನೋಡಿ ಅನ್ವೇಷಿಸುವ ಮನಸ್ಸು ನಮಗಿರಬೇಕಷ್ಟೇ. ಇಲ್ಲಿನ ಇತಿಹಾಸ, ಜನಪದದ ಚರಿತ್ರೆಯನ್ನು ಅರಿಯಲು ನಾಲ್ಕೈದು ದಿನ ಬಿಡುವು ಮಾಡಿಕೊಂಡು ಬರಬೇಕು. ಮತ್ತೆ ಬರುವೆನೆಂಬ ಬರವಸೆಯೊಂದಿಗೆ ಮೇಲುಕೋಟೆಯನ್ನು ಬೀಳ್ಕೊಟ್ಟೆವು.


ಸನಿಹದಲ್ಲಿ ಶ್ರವಣ ಬೆಳಗೊಳ, ಮೊಸಳೆ ಹೊಸಳ್ಳಿಯ ನಾಗೇಶ್ವರ ಮತ್ತು ಚೆನ್ನಕೇಶ್ವರವೆಂಬ ಎರಡು ವಿಶಿಷ್ಟ ದೇವಾಲಯವಿದೆ. ಮಂಡ್ಯದ ಸನಿಹದ ಬಸರಾಳು ಗ್ರಾಮದಲ್ಲಿರುವ ಹೊಯ್ಸಳ ಶಿಲ್ಪ ವೈಭವದ  ಮಲ್ಲಿಕಾಜರ್ುನ ದೇವಾಲಯವನ್ನೂ ನೋಡಿಕೊಂಡು ಬರಬಹುದು. ಉಳಿದುಕೊಳ್ಳಲು ಸನಿಹದಲ್ಲೇ ನಿಮ್ಮ ಜೇಬಿನ ಗಾತ್ರಕ್ಕನುಸಾರವಾಗಿ ಅನೇಕ ಹೊಟೆಲುಗಳಿವೆ. ಹಾಂ ಸುಬ್ಬಣ್ಣ ಮೆಸ್ನಲ್ಲಿ ಸವಿದ ಸಕ್ಕರೆ ಪೊಂಗಲ್ ಮತ್ತು ತಟ್ಟೆ ಇಡ್ಲಿ ಪರಿಮಳವಿನ್ನೂ ನನ್ನ ನಾಸಿಕಾಗ್ರಗಳಲ್ಲಿದೆ. ಹಾಗೆ ಅಲ್ಲಿನ ವಿಶಿಷ್ಟ ರುಚಿಯ ಮಜ್ಜಿಗೆ ಹುಳಿಯ ಘಮವೂ! ಮರೆಯದೇ ನೀವೂ ಅವೆಲ್ಲವನ್ನು ಸವಿದು ನೋಡಿ.

ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ ಸಿದ್ಧಾಪುರ,
          ಸಿದ್ದಾಪುರ ಅಂಚೆ, ಕುಂದಾಪುರ ತಾಲೂಕು,



Friday, May 17, 2019

'ಉದರ ನಿಮಿತ್ತಂ ಬಹುಕೃತ ವೇಷಂ'.

 ನಾನಾ ತರೇವಾರಿ ವೇಷ ತೊಟ್ಟು ಯಾರನ್ನೊ ಮಂಗ ಮಾಡಿ ತಮ್ಮ ಹೊಟ್ಟೆ ಹೊರೆದುಕೊಳ್ಳೋ ಎಷ್ಟು ಜನರಿಲ್ಲ ಹೇಳಿ. ಕೊಳಕು ತಿಂಡಿ ಮಾರುವವರು, ದುಡ್ಡಿಗಾಗಿ ದೇಶದ ಜನರ ಆರೋಗ್ಯವನ್ನೇ ಒತ್ತೆ ಇಡಬಲ್ಲವರು. ದೇಶದ ಸಂಪತ್ತು ಮಾರಟಕ್ಕಿಟ್ಟವರು. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. 'ಉದರ ನಿಮಿತ್ತಂ ಬಹುಕೃತ ವೇಷಂ'. ಈ ಮಾತು ಮನುಷ್ಯರಿಗೆ ಮಾತ್ರ ಸೀಮಿತ ಎಂದು ನೀವು ಅಂದುಕೊಂಡಿದ್ದರೆ ಅದು ನಿಜವಲ್ಲ!
 
ಸಣ್ಣ ಆಮೆಯಂತಿದೆ....   ಆದರೆ    ಆಮೆಯಲ್ಲ.


ಕಾಡಿನಲ್ಲಿ ಕೀಟಗಳ ಛಾಯಾಚಿತ್ರ ತೆಗೆಯಲು ನಿಂತದ್ದೆ. ಯಾವುದೊ ಕಡ್ಡಿಯ ತುದಿಯಲ್ಲಿ ಕಸದಂತಹದೊಂದು ನೇತಾಡುತಲಿತ್ತು. ಅರೆ ಅಲ್ಲೇ ಆಮೆಯಂತಹ ಕೀಟವೊಂದು ಕಣ್ಣಿಗೆ ಬಿತ್ತು. ಮೈ ಮೇಲೆಲ್ಲಾ ಸಣ್ಣ ಸಣ್ಣ ಮುಳ್ಳುಗಳ (Spikes) ಮಡಿಕೆ. ತನ್ನ ಕಾಲುಗಳನ್ನು ಮಡಚಿ ಮಣೆಯಂತೆ ದೇಹದ ಕೆಳಗಿಟ್ಟಿತ್ತು! ಸಾಕ್ಷಾತ್ ಹನುಮಂತನಂತೆ. ದೇಹದ ಮೇಲೆ ಹಸಿರು ಬಣ್ಣದ ನಡುವೆ ಎರಡು ಕಣ್ಣುಗಳಂತಹ ರಚನೆ! ಇದು ಬೇರೆ ಕೀಟಗಳನ್ನು ಯಾಮಾರಿಸಲು ಮಾಡಿಕೊಂಡ ಏಪರ್ಾಟು. ಜೊತೆಗೆ ತಲೆಯ ಭಾಗದಲ್ಲೂ ಇಂತಹುದೇ ಎರಡು ಕಣ್ಣುಗಳು. ನಮ್ಮನ್ನೇ ನೋಡುತ್ತಿರುವವೋ ಎಂಬಂತಿವೆ! 



ಪಕ್ಕನೆ ಯಾವ ಕೀಟವೆಂದು ಹೇಳಲು ಸಾಧ್ಯವಿಲ್ಲ. ಸರಿಯಾಗಿ ನಾಲ್ಕೈದು ಪೋಟೋ ಕ್ಲಿಕ್ಕಿಸಿ ನೋಡಿದೆ, ಅರೆ ಇದು ಕೀಟವಲ್ಲ. ಜೇಡ! ಸಖತ್ ಆಶ್ಚರ್ಯ ಜೊತೆಗೆ ಖುಷಿ. ಇದನ್ನು ಮೋದಲು ನೋಡಿದ್ದಿಲ್ಲ. ಜುಮ್ಮನ ಗಿಡದ ಮುಳ್ಳಿನಂತಹ ಮುಳ್ಳು ಹೊತ್ತ ಜೇಡ. ನಿಜವಾಗಿ ಅದರ ಕಣ್ಣುಗಳು ಕಾಲುಗಳ ಎಡೆಯಲ್ಲಿವೆ. ತೀರಾ ಸಣ್ಣದು. ಮಾರನೆಯ ದಿನವೂ ಅಲ್ಲೇ ಪ್ರತ್ಯಕ್ಷ! ಯಾವ ಪ್ರಭೇದವೆಂದು ಗೊತ್ತಿಲ್ಲ. ಇಷ್ಟೇ ಹೇಳಬಲ್ಲೆ 'ಉದರ ನಿಮಿತ್ತಂ ಬಹುಕೃತ ವೇಷಂ'.
 
Front view of the Spider.


ವಾರೆ ನೋಟ

ಬೆಣ್ಣಿಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ

ನಮ್ಮ ತಿರುಗಾಲು ತಿಪ್ಪಲುತನಕ್ಕೆ ಕಿಚ್ಚುಹಚ್ಚಿಸಿದ್ದು ಹೊಸ ಕರ್ಮವೀರ! ಕರ್ಮವೀರದ ಜೋಳಿಗೆಯ ತುಂಬಾ ಅರವತ್ತು ಜಲಪಾತಗಳನ್ನು ಕಟ್ಟಿಕೊಟ್ಟಿದ್ದ ಸಂಪಾದಕ ಮಹಾಶಯ. ಗುಣಿಸಿ ಭ...