Wednesday, September 21, 2011

ಕುವೆಂಪು ಕಾವ್ಯ, ಕಾಜಾಣ ಮತ್ತು ವಿಕಾಸವಾದ

ಕುವೆಂಪು ಕಾವ್ಯ ಮತ್ತು ಕಾಜಾಣ


ಒಮ್ಮೆ ಮನೆಯ ಮುಂದೆ ಬೆಕ್ಕೊಂದರ ವಿಚಿತ್ರವಾದ ಕೂಗು ಕೇಳಿಸುತ್ತಿತ್ತು. ಏನಾಯಿತು ನಮ್ಮ ಮನೆಯ
ಬೆಕ್ಕಿಗೆ ಎಂದು ಗಾಬರಿ ಬಿದ್ದೆವು. ಕೂಡಲೇ ನೋಡಲು ಓಡಿದೆವು. ಹೊರ ಕಾಲಿಟ್ಟವರಿಗೆ ಆಶ್ಚರ್ಯ ಕಾದಿತ್ತು.
ಮನೆ ಎದುರಿನ ಬಾವಿ ಕಟ್ಟೆಯ ಆಚೆಯಿಂದ ಬೆಕ್ಕಿನ
ಸ್ವರವೊಂದು ಪುಂಖಾನು ಪುಂಖವಾಗಿ ಬರುತಲಿದೆ.
ಒಬ್ಬರಿಗೂ ಬೆಕ್ಕು ಕಾಣಿಸುತ್ತಿಲ್ಲ! ಎಲ್ಲಿದೆ ಎಲ್ಲಿದೆ
ಎಂದು ಹುಡುಕ ತೊಡಗಿದರು. ಅಲ್ಲಿಗೆ ಬಂದ ನಾನು
ಹೇಳಿದೆ ಬೆಕ್ಕು ಕೂಗುತ್ತಿರುವುದು ಕೆಳಗೆಲ್ಲೂ ಅಲ್ಲ.
ಆ ಸಪೂರ ಸರಿಗೆಯ ಮೇಲೆಂದು ಕೈತೋರಿದೆ.
ಎಲ್ಲರೂ ಅತ್ತ ನೋಡಿದರು. ಗಾಢ ನೀಲ ವರ್ಣದ, ತಲೆ
ಮೇಲೊಂದು ಜುಟ್ಟು ಹೊತ್ತ, ಉದ್ದ ಬಾಲದ
ಹಕ್ಕಿಯೊಂದು ಬೆಕ್ಕಿನ ಮರಿಯಂತೇ
ಕರ್ಕಶವಾಗಿ ಬೆಕ್ಕಿನಂತೆ ಕೂಗುತಲಿತ್ತು!
ಮನೆಯವರೆಲ್ಲರಿಗೂ ಸಖತ್ ಆಶ್ಚರ್ಯ!




ಇದೊಂದು ವಿಶಿಷ್ಟ ಹಕ್ಕಿ. ಗಾಢ ನೀಲ ವರ್ಣದ, ತಲೆ

ಮೇಲೊಂದು ಜುಟ್ಟು ಹೊತ್ತ, ಟಿಸಿಲೊಡೆದ
ಬಾಲವಿರುವ, ತುದಿಯನ್ನು ಯಾರೋ ಮಾಂತ್ರಿಕ
ಕತ್ತರಿಸಿದಂತೆ ಸಿಂಗರಿಸಿಕೊಂಡಿರುವ ಹಕ್ಕಿಯೇ
ಕಾಜಾಣ. ಇದು ಮಲೆನಾಡು ಮತ್ತು ಅರೆ
ಮಲೆನಾಡುಗಳಲ್ಲಿ ಕಂಡುಬರುವ ಹಕ್ಕಿ. ಕುವೆಂಪು
ಕಾವ್ಯದಲ್ಲಿ ಈ ಹಕ್ಕಿ ಹಾಸು ಹೊಕ್ಕಾಗಿದೆ. ಕುವೆಂಪು
ಕಾವ್ಯದಲ್ಲಿ ಈ ಹಕ್ಕಿ ಸೌಮ್ಯ ಸ್ವಭಾವದಂತೆ ಅದನ್ನು
ವಿವರಿಸಿದ್ದು ಕಾಣಬಹುದು. ಅವರಿಗೂ ಬಹಳ
ಪ್ರಿಯವಾದ ಹಕ್ಕಿ ಎಂದು ಬರೆದು ಕೊಂಡಿದ್ದಾರೆ.
ಅವರ 'ಕಾನೂರು ಹೆಗ್ಗಡತಿ' ಕಾದಂಬರಿಯಲ್ಲಿ
ಇದರ ಪ್ರಸ್ತಾಪ ಬರುತ್ತೆ. ಕಾಲವನ್ನು ಸೂಚಿಸಲು
ಈ ಹಕ್ಕಿ ಮರಿ ಮಾಡುವ ವಿಚಾರವಾಗಿ ಬರೆದಿದ್ದಾರೆಂದು
ನೆನಪು. ಹಾಗೆಯೇ ಆ ಕೃತಿಯ ಮುಖ ಪುಟವನ್ನೇ
ಅಲಂಕರಿಸಿದ 'ಚಿತ್ತ ಚೋರ'. ಮಲೆಗಳಲ್ಲಿ ಮದು
ಮಗಳು, ಮಲೆನಾಡಿನ ಚಿತ್ರಗಳು ಕೃತಿಗಳಲ್ಲಿ ಇದರ
ವರ್ಣನೆಗಳಿವೆಯೆಂದು ನೆನಪು.
Rocket Tailed Dongro. 

ಅವರ ಕುಪ್ಪಳ್ಳಿ ಮನೆಯ ಉಪ್ಪರಿಗೆಯಲ್ಲೊಂದು ಈ
ಹಕ್ಕಿಯ ಸುಂದರ ಚಿತ್ರವಿದೆ. ಕುವೆಂಪು ಸಂಬಂಧಿ
ಮೈನಾ ಹೇಳುವಂತೆ ಅವರಿಗೂ ಈ ಹಕ್ಕಿಗೂ ಬಹಳಾ
ಅಚ್ಚುಮೆಚ್ಚು. ಅವರ ಕೃತಿ ಪ್ರಕಾಶನ ಸಂಸ್ಥೆಯಾದ
ಉದಯರವಿಯೂ ಸಹ ಈ ಹಕ್ಕಿಯ ಚಿತ್ರವನ್ನೇ ಅವರ
ಚಿಹ್ನೆಯಾಗಿ ಬಳಸಿಕೊಂಡಿದ್ದಾರೆ. 'ವಿಹರಿಸುತ್ತಿರುವ
ಕಾಜಾಣ'. ಕಾಜಾಣಗಳು ವಿವಿಧ ಹಕ್ಕಿಗಳ 38 ರೀತಿಯ ಕೂಗನ್ನು
ಪುನರುತ್ಪಾದಿಸಬಲ್ಲವೆಂದು ಇತ್ತಿಚಿಗೆ ಮೀರಾ ಎನ್ನುವ
ಗುಜರಾತಿ ಹುಡುಗಿ ಸಂಶೋಧನೆ ಮಾಡುವವರೆಗೂ
ಯಾರಿಗೂ ಗೊತ್ತಿರಲಿಲ್ಲ. ಈ ಹಕ್ಕಿಯ 38 ವಿಧಧ
ಕೂಗನ್ನು ದಾಖಲೀಕರಣ ಮಾಡಿದ್ದಾಳೀಕೆ. ಹಾಗಾಗಿ
ನಾವು ನೀವು ಎಣಿಸಿದಂತೆ ಇದೊಂದು ಸಾಮಾನ್ಯ
ಪಕ್ಷಿಯಲ್ಲ! ಇದು ಅದಲ್ಲ ಅದರ ಸಂಬಂಧಿ:- ಕರಾವಳಿ ಹಾಗು ಮಲೆನಾಡಿನ ಪಾದದಲ್ಲಿಯೂ ಇದರ
ಹತ್ತಿರದ ಸಂಬಂಧಿಯಂತೆ ಕಾಣುವ ಮತ್ತೊಂದು
ಹಕ್ಕಿಯೊಂದಿದೆ. ಎಲ್ಲಾ ಹೋಲಿಕೆಗಳಲ್ಲಿಯೂ ಇದು
ಕಾಜಾಣದಂತಿದೆ. ವ್ಯತ್ಯಾಸವೇನೆಂದರೆ 'ಕರಾವಳಿ ಜಾಣ'
ನಿಗೆ ತಲೆಯ ಮೇಲೊಂದು ಟೋಪಿ ಇಲ್ಲ. ಉದ್ದನೆಯ
ಬಾಲ ಮೊಂಡಾಗಿದೆ ಮತ್ತು ನೇರವಾಗಿದೆ. ಕಾಜಾಣಗಳು
ಜೋಡಿಯಾಗಿ ಕಂಡುಬಂದರೆ ಇವು ಏಕಾಂಗಿಯಾಗಿ
ಕಾಣ ಸಿಗುತ್ತದೆ. ಕಾಜಾಣ ಹಕ್ಕಿಗಳಲ್ಲಿ ಗಂಡು ಹೆಣ್ಣು
ಹಕ್ಕಿಗೆ ವ್ಯತ್ಯಾಸವಿಲ್ಲ. ಚಿಕ್ಕ ಕಾಜಾಣ ಹಕ್ಕಿಗಳು ಬಹಳ ತುಂಟ ಹಕ್ಕಿಗಳು.
ಒಮ್ಮೆ ಮನೆ ಹಿಂದಿನ ಹಿಂಡಲುಗಳಲ್ಲಿ ಅಲೆಯುತ್ತಿದ್ದಾಗ
ದೂರದಲ್ಲಿ ಎರಡು ಹಕ್ಕಿಗಳ ಹಾರಾಟ ಕಾಣಿಸಿತು.
ಸಮೀಪಕ್ಕೆ ಹೋಗಿ ಮರೆಯಲ್ಲಿ ನಿಂತೆ. ಕುಟ್ರ
ಹಕ್ಕಿಯೊಂದು ಹುಳ ಬೇಟೆಯಾಡಿತ್ತು. ಆ ಬೇಟೆಯನ್ನು
ಕಸಿದುಕೊಳ್ಳಲು 'ಕಾಜಾಣ' ಅದನ್ನು ಅಟ್ಟುತ್ತಿತ್ತು.
ಅದು ನನ್ನನ್ನೇ ಮರೆತು ಅಟ್ಟಾಡುತ್ತಿದ್ದವು. ಕುಟ್ರಹಕ್ಕಿ
ಹುಳವನ್ನು ನಾ ಬಿಡಲೊಲ್ಲೆ ಅನ್ನುವುದು 'ಕಾಜಾಣ'
ಅಟ್ಟುವುದು ಹತ್ತಾರು ಬಾರಿ ನಡದೇ ಇತ್ತು. ಕೊನೆಗೂ
ಕುಟ್ರಹಕ್ಕಿಯ ಹುಳವನ್ನು ಎಗರಿಸಲು 'ಕಾಜಾಣ'
ಯಶಸ್ವಿಯಾಯಿತು. ನಾನು ವಿಸ್ಮಿತನಾಗಿದ್ದೆ. ಕಾಜಾಣ
ಈ ಪರಿ ಆಕ್ರಮಣಕಾರಿಯೆಂದು! ಪಾಪದ ಹಕ್ಕಿಯೆಂದು
ತಿಳಿದಿದ್ದು ನನ್ನದೇ ತಪ್ಪು! ಕೈಲ್ಲೊಂದು ಡಿಜಿಟಲ್
ಕ್ಯಾಮರವಿದ್ದರೂ ಸುಮ್ಮನೆ ನಿಂತಿದ್ದೆ! ನಂತರ ಇದರ
ಆಕ್ರಮಣ ಹಲವಾರು ಬಾರಿ ನೋಡಿದೆ. ಮೆಲೆನಾಡಿನ
ಕಾಜಾಣ ತಲೆಯಲೊಂದು ಟೊಪಿ ಹಾಕಿಕೊಂಡು
ಇತರೇ ಹಕ್ಕಿಗಳಿಗೆ ಸಲೀಸಾಗಿ ಅವುಗಳ ಸ್ವರ
ಅನುಕರಿಸಿ ಟೋಪಿ ಹಾಕುತ್ತೆ!



ಇಷ್ಟೆಲ್ಲಾ ಓದಿ, ನೋಡಿದ ನನ್ನ ಮನಸ್ಸಿನಲ್ಲಿ ಅನೇಕ ಶಂಕೆಗಳೇಳುತ್ತವೆ. ಚಿಕ್ಕ ಕಾಜಾಣಗಳು ಮತ್ತು ಉದ್ದ ಬಾಲದ ಕಾಜಾಣಗಳು ಎರಡೂ ಒಂದೇಯೇ? ಒಂದೇ ಆಗಿದ್ದರೆ ಕೆಲವು ಕಾಜಾಣಗಳಿಗೆ ಟೋಪಿ ಹಾಕಿದವರಾರು. ಎರಡನ್ನೂ ಇಂಗ್ಲೀಷ್ ನಲ್ಲಿ Dongro ಎನ್ನುತ್ತಾರೆ. ವಿಕಾಸದ ಯಾವುದೋ ಕಾಲಘಟ್ಟದಲ್ಲಿ ತನ್ನ ಟೋಪಿ, ಬಾಲ ಮರೆತು ಚಿಕ್ಕದಾಗಿರಬೇಕು. ಪ್ರಕೃತಿಯ ಒತ್ತಡಕ್ಕೆ ಮಣಿದು ವಿಕಾಸದ ಹಾದಿಯಲ್ಲಿ ಈ ಬದಲಾವಣೆ ಮಾಡಿಕೊಂಡಿರಬೇಕು. ಇವರೆಡೂ ಹಕ್ಕಿಗಳ ಗುಣಾಣೂಗಳ ಸೂಕ್ಷ್ಮ ಅವಲೋಕನ ಮಾಡಿದರೆ ವಿಕಾಸವಾದದ ಹೊಳಹಿಗೆ ಹೊಸದೊಂದು ಹೊಳಹು ಸಿಗಬಹುದೇನೋ? ಬಲ್ಲವರು ಉತ್ತರಿಸಬೇಕು.
ಶ್ರೀಧರ. ಎಸ್. ಸಿದ್ದಾಪುರ.

Monday, September 5, 2011

ಕುಟುರ್ ಕುಟುರ್ ವಾಧ್ಯಗಾರ.



ಕುಟುರ  (white checked Barbet)
ಇಂದೇಕೋ ಬೆಳಗಿನಿಂದಲೇ ಒಂದೇ ಸಮನೆ ಕುಟ್ರೂ ಕುಟ್ರೂ ಧೀರ್ಘ ದನಿ ಮಾವಿನ ಮರದಿಂದ ನೀರವ ಏಕಾಂತವೊಂದನ್ನು ಸೀಳಿಕೊಂಡು ಕೇಳಿಸುತ್ತಲೇ ಇತ್ತು. ಮಧ್ಯಾಹ್ನದ ಮಂಪರು ಹತ್ತುವಾಗಲೂ ದನಿ ನಿಲ್ಲಲೇ ಇಲ್ಲ.
ಸರಿ ಇಳಿ ಸಂಜೆಗೆ ನನ್ನ ದೊಡ್ಡ ಬೈನಾಕುಲರ್ ಹೆಗಲಿಗೇರಿಸಿ ಚಿಕ್ಕ ಕ್ಯಾಮರವನ್ನೂ ಹಿಡಿದು ಹೊರಟೆ. ನಾ ಹೋದ ಕೂಡಲೆ ಸ್ವರದ ದಿಕ್ಕು ಬದಲಾಯಿತು. ಆಸಾಮಿ ಎಲ್ಲಿ ಹೋದನಪ್ಪ ಎಂದುಕೊಂಡೆ ಸ್ವಲ್ಪ ಹೊತ್ತು ಕಾದೆ. ಸುಳೀವೇ ಇಲ್ಲ. ಬೇಸರ ಬಂದು ಹೊರಡುವಷ್ಟರಲ್ಲಿ ಮತ್ತೆ ವಾಧ್ಯ ಸಂಗೀತ ಶುರುವಾಯಿತು. ಜೊತೆಗೆ ಇನ್ನೊಂದು ದಿಕ್ಕಿನಿಂದ ಮೇಳ. ಅಂದರೆ ಇಲ್ಲಿನ ಕುಟುರ್ಗೆ ಮತ್ತೊಂದು ಕಡೆಯಿಂದ ಉತ್ತರ ಅದೇ 'ಕುಟುರ್ ಕುಟುರ್'. ಕೆಲವೊಮ್ಮೆ ಅತಿ ದೀರ್ಘ ಕುಟ್ರೂ.... ಎಲ್ಲಿಂದ ಈ ಸ್ವರ ಹೊರ ಬರುತಿದೆ ಎಂದು ಕಂಡುಹಿಡಿಯಲಾಗದೇ ಕಂಗಾಲಾದೆ. ಸುಮಾರು ಐದು ನಿಮಿಷದ ತರುವಾಯ ಸ್ವರ ಮತ್ತೊಂದು ನುಗ್ಗೆ ಮರದಿಂದ ಬರುತಲಿತ್ತು. ಯಾವುದಪ್ಪ ಈ ಕುಟ್ರ ಕುಪ್ಪಳ ಎಂದು ನೋಡೋಣವೆಂದು ಹೊರಟೆ. ಶಬ್ದ ಮಾತ್ರ ಕೇಳುತಲಿತ್ತು. ಇದೇನು ಮಾಯಜಾಲ? ಪಕ್ಷಿ ಕಾಣುತ್ತಿಲ್ಲವಲ್ಲವೆಂದು ಕಳವಳಗೊಂಡೆ. ಪುಣ್ಯವಶಾತ್ ನುಗ್ಗೆ ಮರದಲಿ ಕೂಗುತಲಿದ್ದ ಹಕ್ಕಿ ಕಾಣಿಸಿತು. ಕೂಡಲೇ ಅದರದೊಂದು ಚಿತ್ರ ತೆಗೆದಿಟ್ಟುಕೊಂಡೆ. ಕಾಡಿನ ಹಸಿರಿನೊಂದಿಗೆ ಹಸಿರಾಗಿರುವ ಈ ಹಕ್ಕಿ ಕುಟುರ(ಬಾರ್ಬೆಟ್ ಆಂಗ್ಲ ನಾಮಧೇಯ). ಇವುಗಳಲ್ಲಿ ಅನೇಕ ಪ್ರಭೇದಗಳಂಟು ಮರ್ರೆ. ಕಬ್ಬಿಣ ಕುಟ್ಟುವಂತೆ ಕುಟ್ಟುವ ಮತ್ತೊಂದು ಪ್ರಭೇದವೂ (Copper Smith Barbet) ಉಂಟು. ಮರಿ ಮಾಡುವ ಸಮಯದಲ್ಲಿ ಮಾತ್ರ ನಿಮಗಿದರ ಕುಗು ಕೇಳಿ ಬರುತ್ತದೆ. ಉಳಿದ ಸಮಯದಲಿ ಮಹಾ ಮೌನಿ!


Copper Smith Barbet

ನೀವು ಮಲೆನಾಡಿಗರೇ? ಹಾಗಾದರೆ ಕುಟ್ರೂ ಕುಟ್ರೂ ಎಂಬ ವಿಶಿಷ್ಟ ಧೀರ್ಘ ದನಿ ಕೇಳಿಯೇ ಕೇಳಿರುತ್ತೀರಿ. ಇಂತಹ ಸುರ ಸುಂದರಾಂಗ ಪಕ್ಷಿ ನಮ್ಮ ಮಲೆನಾಡು ಕರಾವಳಿಗಳಲ್ಲಿ ಸಾಮಾನ್ಯ. ಕಬ್ಬಿಣ ಕುಟುರವೂ ಕೆಲವೊಮ್ಮೆ ಕಾಣಸಿಗುವುದು.
       ಈ ಹಕ್ಕಿಯನ್ನು ಸುಲಭದಲ್ಲಿ ಗುರುತಿಸುವುದು ಕಷ್ಟ. ಎಲೆಯ ಹಸಿರುನೊಂದಿಗೆ ಲೀನವಾಗುವ ಹಕ್ಕಿ ಗಮನವಿಟ್ಟು ನೋಡಿದರೆ ಮಾತ್ರ ಕಾಣಿಸುತ್ತದೆ. ಹಸಿರು ಬೆನ್ನು ಹಾಗೂ ಕುತ್ತಿಗೆ ಪುಡಿ ಬಣ್ಣದಲ್ಲಿದ್ದು, ನಡುವೆ ಬಿಳಿ ಮಚ್ಚೆಗಳಿರುತ್ತದೆ. ಕೊಕ್ಕಿನ ಬಳಿ ಸಣ್ಣ ಸಣ್ಣ ಮೀಸೆಗಳಿವೆ.
Crimson Red Barbet 
     ಗೋಳಿ ಜಾತಿಯ ಹಣ್ಣಿನ ಮರಗಳಲ್ಲಿ ಕಂಡು ಬರುತ್ತವೆ. ಸೀಬೆ, ಚಿಕ್ಕೂ ಮರದಲ್ಲೂ ತಮ್ಮ ಹಾಜರಿ ತೋರ್ಪಡಿಸುತ್ತವೆ. ಮಿಡತೆಗಳೂ ಇವುಗಳ ಆಹಾರದ ಪಟ್ಟಿಯಲ್ಲಿವೆ. ಹಾಗಾಗಿ ಇದನ್ನು ಮಿಶ್ರಹಾರಿ ಎನ್ನ ಬಹುದು.  ಹಸಿರು ಮರಗಳೆಡೆಯಲ್ಲಿ ಇವನ್ನು ಹುಡುವುದೇ ಕಷ್ಟ. ಕುತ್ತಿಗೆಯಲ್ಲೊಂದು ಬಿಳಿ ಪಟ್ಟಿ ಬಿಟ್ಟರೆ ಮಿಕ್ಕೆಲ್ಲಾ ಕಡೆ ಹಸಿರೋ ಹಸಿರು. ಇವುಗಳಲ್ಲಿ ಮತ್ತೆರಡು ಪ್ರಭೇದದ ಹಕ್ಕಿಗಳಿವೆ ಅವು ಸಹ ಒಂದಕಿಂತ ಒಂದು ಚೆಂದ. ನಮ್ಮ ಮನೆಯ ಅಡಿಕೆ ಮರದಲ್ಲೊಮ್ಮೆ ಗೂಡನ್ನೂ ಕೊರೆದಿತ್ತು. ಅದೇಕೋ ಮರಿ ಮಾಡಲು ಮನಸ್ಸು ಮಾಡಲಿಲ್ಲ. ಡಿಸೆಂಬರ ನಿಂದ ಜೂನ್ವರೆಗೆ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಮರಿ ಮಾಡುವ ಕಾಲದಲ್ಲಿ ಮಾತ್ರ ಕೂಗುತ್ತದೆ. ಮರಕುಟುಕ ಕೊರೆದ ಕಾಂಡವನ್ನೇ ದೊಡ್ಡದು ಮಾಡಿ ಉಪಯೋಗಿಸುತ್ತವೆ ಎಂದು ಎಲ್ಲೋ ಓದಿದ ನೆನಪು. ವೇಗವಾಗಿ ಹಾರುವ ಮಲೆನಾಡಿನ ಚತುರ ಹಕ್ಕಿಗಳಲ್ಲಿ ಇದೂ ಒಂದು. ಇತಿ ಅಂತ್ಯಂ ಕುಟುರ ಪುರಾಣಂ!

ಶ್ರೀಧರ್. ಎಸ್. ಸಿದ್ದಾಪುರ



Saturday, August 13, 2011

Oriyol-ಚಿನ್ನದ ಹಕ್ಕಿ(ಓರಿಯೊಲ್)






ಮಲೆನಾಡಿನ ಅತಿ ವಿಶಿಷ್ಟ ಹಕ್ಕಿ. ಗೀಜಗವನ್ನು ಹೋಲುತ್ತದೆ. ಗಂಡು ಹಕ್ಕಿ ಅರಶಿನ ಬಣ್ಣದಲ್ಲೂ. ಹೆಣ್ಣು ಹಕ್ಕಿ ಹಸಿರು ಬಣ್ಣದಲ್ಲೂ ಕಂಡುಬರುತ್ತದೆ 

Friday, July 15, 2011

ಜಿನುಗು ಮಳೆಯಲೊಂದು ದಿನ..





ಹೀಗೆ ಮಳೆಯಲಿ, ಒಮ್ಮೆ ನೆನೆದು ನೆನೆದು ಪ್ರವಾಸ ಹೋದಾಗ. ಜಿಗಣೆ ಕಾಟ. ನೀರ ಓಟ. ನೆನಪುಗಳ ಸರಿದಾಟ. ಆ ರೋಮಾಂಚನ. ಮಾತಿನಲ್ಲಿ ಹೇಳಲಾರದ ಅನುಭೂತಿ. ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.



ಇತಿ ನಿಮ್ಮ

ಶ್ರೀಧರ

Monday, July 11, 2011

ಒಂದು ಮರೆಯಲಾಗದ ಅನುಭವ....


ನೆನಪುಗಳ ಸೋನೆ ಮಳೆ.................ಹಿಂಡ್ಲು ಮನೆ 
ನನ್ನ ಚಟಕ್ಕೆ ಬಲಿಯಾದವರು


ಒಂದೊಂದು ಪ್ರವಾಸವೂ ಒಂದು ವಿಶಿಷ್ಟ ಅನುಭವ ಅನೂಭೂತಿಯನ್ನು ನೀಡುತ್ತದೆ. ಅದರಲ್ಲೂ ಜಲಪಾತ ಚಾರಣಗಳು ನೀಡುವ ವಿಶೇಷ ಅನುಭವ ಅನುಭೂತಿಗಳು ವಿಸ್ಮಯ ಘಟನಾ ಸರಣಿಗಳು ಬೇರಾವಾ ಪ್ರವಾಸಗಳಲ್ಲಿ (ದೇವಸ್ಥಾನ, ತೀರ್ಥಕ್ಷೇತ್ರ) ನೀಡಲಾರವು. ಹೀಗೆ ಅವನ್ನು ಮತ್ತೆ ಮತ್ತೆ ನೆನೆದು ನವಿರಾಗಲು ಜೀವನ್ಮುಖಿಯಾಗಲು ಪ್ರೇರೇಪಿಸುತ್ತವೆ. ಈ ವಿಸ್ಮಯಗಳಿಗಾಗಿ ಮತ್ತೆ ಮತ್ತೆ ಚಾರಣಗೈಯಲು ನಮ್ಮನ್ನು ಉತ್ತೇಜಿಸುತ್ತವೆ.
ಬೋರ್ಗೆರೆತದಲಿ ಹಿಂಡ್ಲುಮನೆ, ಎದುರಿಗೆ ನಮ್ಮ ತಂಡದ ಐಕಳು.. 
ಅಂತಹುದೇ ಒಂದು ಘಟನೆ ನಾವು ಹಿಂಡ್ಲು ಮನೆ ಜಲಪಾತ ವೀಕ್ಷಿಸಲು ಹೋದಾಗ ಎದುರಾಯಿತು. ಎಲ್ಲೋ ಓದಿದ ನೆನಪಿನೊಂದಿಗೆ ನಾವೆಲ್ಲಾ ಹಿಂಡ್ಲು ಮನೆಗೆ ಬೆಳಿಗ್ಗೆ 7.00ಕ್ಕೆ ಸಿದ್ದಾಪುರದಿಂದ ಹೊರಟೆೆವು. ಕೊಲ್ಲೂರಿನ ನಾಗೋಡಿ ಘಾಟಿ ಏರಿದೆವು, ಘಾಟಿಯ ಮಂಜಿನಲ್ಲಿ ನಲಿಯುತ್ತಾ ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಮರಕುಟಿಕ ಎಂಬ ಸ್ಥಳ ತಲುಪಿದೆವು. ಅಲ್ಲಿಂದ ಸುಮಾರು 2 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದರೆ ಜಲಪಾತಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಆಗಸ್ಟ್ ಮಳೆ ಬಂದು ದಾರಿ ತೊಯ್ದಿತ್ತು. ಕಚ್ಚಾರಸ್ತೆಯಲ್ಲಿ ಸ್ವಲ್ಪದೂರ ಸಾಗಿ ನಾವು ದಿಕ್ಕು ತಪ್ಪಿ ಗದ್ದೆ ಬಯಲಿಗೆ ಬಂದೆವು. ಮುಂದೆ ರಾಶಿ ರಾಶಿ ಹಿಂಡಲು ನಮಗೆ ಸ್ವಾಗತ ಕೋರಿದವು ಮುಂದುವರಿಯುವುದು ಸಾಧ್ಯವಿಲ್ಲವೆಂಬಂತೆ ಹಿಂಡಲುಗಳು ಬೆಳೆದಿತ್ತು.

ಹೀಗೆ ದಾರಿ ಹುಡುಕುತ್ತಾ ಮುಂದೆ ಸಾಗಿದ ನನಗೆ ಹಿಂದಿನಿಂದ ನಮ್ಮ ತಂಡದ ಸದಸ್ಯ ಗಣೇಶನ ಬೊಬ್ಬೆ ಕೇಳಿ, ನಾನು ಒಂದೇ ಜಿಗಿತಕ್ಕೆ ಅಲ್ಲಿಗೆ ತಲುಪಿದೆ. ಆತನ ಕಾಲಿನಿಂದ ರಕ್ತ ಒಸರುತಿತ್ತು. ನಾವು ಗಾಬರಿ ಬಿದ್ದೆವು. ಏನಾಯಿತೆಂದು ವಿಚಾರಿಸಿದಾಗ ನಾನು ಸತ್ತೆ!. ನಾನು ಸತ್ತೆ ಎಂಬ ಸತೀಶನ ಬೊಬ್ಬೆ ಮುಂದುವರೆದಿತ್ತು. ಆತನನ್ನು ಸಮಾಧಾನ ಪಡಿಸಿ ಕೇಳಿದಾಗ ರಕ್ತ ಕನ್ನಡಿ ಹಾವು ಕಡಿಯಿತು! ಎಂದು ಹೇಳಿ ನಮ್ಮನ್ನು ಗಾಬರಿಪಡಿಸಿದ! ಮೊದಲೇ ಅಂಜಿಕೆ ಸ್ವಭಾವದ ಆತನನ್ನು ಚಾರಣಕ್ಕೆ ಕರೆತಂದಿದ್ದು ನನ್ನ ತಪ್ಪೆಂದು ತಿಳಿಯಿತು. ಆತನ ಕಾಲಿಗೆ ಸಣ್ಣ ಟವೆಲ್ ಕಟ್ಟಿ ರಕ್ತ ಮೇಲೆ ಹರಡದಂತೆ ಮಾಡಿದೆವು. ಅದಾಗಲೇ ನಮ್ಮ ತಂಡದವರಲ್ಲಿ ಗಡಿಬಿಡಿ ಮನೆ ಮಾಡಿತ್ತು. ಎಲ್ಲರ ಕೋಪಕ್ಕೆ ತುತ್ತಾಗುವ ಸರದಿ ನನ್ನದಾಗಿತ್ತು. ಹಾದಿ ತಪ್ಪಿಸಿದ್ದಿಯ ಎಂದು ಹಿಡಿ ಶಾಪ ಹಾಕಿದರು.
ಹಿನ್ನಲೆಯಲ್ಲಿ ಕೊಡಚಾದ್ರಿ ಮುನ್ನಲೆಯಲ್ಲಿ ನಮ್ಮ ತಂಡ.. 


ಸತೀಶನ ತುತರ್ು ಅಗತ್ಯಕ್ಕೆ ಸ್ಪಂದಿಸುವ ಜವಬ್ದಾರಿ ನನ್ನ ಮೇಲಿದ್ದುದರಿಂದ ಆತನನ್ನು ಸಮಾಧಾನ ಪಡಿಸಿ ಏನಾಯಿತೆಂದು ವಿಚಾರಿಸಿದಾಗ ನಾನೊಂದು ದೊಡ್ಡ ರಕ್ತ ಕನ್ನಡಿ ಹಾವನ್ನು ತುಳಿದೆ, ಅದು ನನ್ನನ್ನು ಕಚ್ಚಿತು ಎಂಬುದು ಆತನ ವಿವರಣೆ, ಹಾವಿದ್ದ ಸ್ಥಳ ನೋಡಲು ಹೋದೆವು. ಗದ್ದೆ ಕಂಠದ ಬದಿಯಲ್ಲೊಂದು ತಗ್ಗಿನ ಸ್ಥಳವನ್ನು ಆತ ತೋರಿದ. ಅಲ್ಲಿ ಹುಡುಕಿದರೆ ರಕ್ತಕನ್ನಡಿ ಹಾವೊಂದು ನಿಶ್ಚಿಂತೆಯಿಂದ ಮಲಗಿತ್ತು.

ಈಗ ನಮ್ಮ ತಂಡ ಸಂದಿಗ್ದಕ್ಕೆ ಬಿದ್ದೆವು ಹಾವು ಕಚ್ಚಿದರೆ ಅದು ಅಲ್ಲಿರುತ್ತಲೇ ಇರಲಿಲ್ಲ, ಆದರೆ ಕಚ್ಚದೆ ಕಾಲಿನಿಂದ ರಕ್ತ ಒಸರುವುದು ಹೇಗೆ? ತೀವ್ರ ಗೊಂದಲಕ್ಕೆ ಬಿದ್ದೆವು.
ಚೆಲುವಾತಿ ಚೆಲುವ ಕನ್ನಿಕೆ 

ನಾವೆಲ್ಲಾ ಗರ ಬಡಿದವರಂತೆ ನಿಂತಿದ್ದಾಗ ನನಗೆ  ಹೇಗೆ ರಕ್ತ ಬಂತೆಂದು ಹೊಳೆಯಿತು. ನಾನು ಸತೀಶನ ಬಳಿಗೆ ಓಡಿ ಗಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿಡೇ. ಒಂದು ದೊಡ್ಡ ಗಾಯ ಮಾತ್ರವಿತ್ತು. ಇನ್ನೊಂದು ಗಾಯ ಸುಮಾರು 5 ಸೆ.ಮೀ. ಆಚೆಗಿತ್ತು. ಹಾಗಾಗಿ ಆತ ಇದು ಹಾವು ಕಡಿದದಲ್ಲಾ ಎಂದು ತೀರ್ಪಿತ್ತೆ. ಹಾಗಾದರೆ ರಕ್ತ?! ಎಂದು ಉಳಿದವರೆಲ್ಲಾ  ಕಿರುಚಿದರು. ಅದು ಇಂಬಳ ಎಂಬ ಜೀವಿ ರಕ್ತ ಹೀರಿ ಹೊದುದರಿಂದ ಉಂಟಾದ ಗಾಯದಿಂದ ಬರುತ್ತಿರುವುದು. ಎಂದಾಗ ಎಲ್ಲರು ಸಮಧಾನದ ನಿಟ್ಟುಸಿರು ಬಿಟ್ಟೆವು. ಹಾವನ್ನು ಕಂಡ ಸತೀಶ ಗಾಬರಿ ಬಿದ್ದು ಭಯದಿಂದ ಸತ್ತೇ ಬಿಡುತ್ತೇನೆಂದು ಗಲಾಟೆ ಎಬ್ಬಿಸಿದ್ದ.


ದೊಡ್ಡ ಗಂಡಾಂತರದಿಂದ ಪಾರಾದ ಎಲ್ಲರೂ ಒಮ್ಮೆ ನಿರುಮಳರಾದೆವು. ಸತೀಶ ನಾಚಿಕೆಯಿಂದ ಮಾತೆ ಹೊರಡದಂತಾಯಿತು. ಮುಂದಿನ ಪಯಣದುದ್ದಕ್ಕೂ ಆತನನ್ನು ಗೋಳು ಹೊಯ್ದುಕೊಂಡೆವು.😂😃😃 ಸುಮಾರು ಒಂದು ಗಂಟೆ ಕಾನನದಿ ಗಗನ ಸ್ಪರ್ಶಿ ಮರಗಳ ನಡುವೆ ಕೊಡಚಾದ್ರಿ ಗಿರಿ ನೋಡುತ್ತಾ ನಡೆದೆವು. ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಸಾಗಿದೆವು.

ಜಲಾಪಾತವಂತೂ ಅದ್ಭುತವಾಗಿತ್ತು. ಹಂತ ಹಂತವಾಗಿ 14 ಬಾರಿ ಧುಮುಕುವುದೆಂದು ಕೇಳಿದ್ದೆವು. ಆದರೆ ದಾರಿ ತಪ್ಪಿದ್ದರಿಂದ ಕೇವಲ 3 ಹಂತ ವೀಕ್ಷಿಸಿದೆವು. ನಮ್ಮ ತಂಡದಲ್ಲಿ ಹಲವರು ಜಲಪಾತವನ್ನು ಮೊದಲಬಾರಿಗೆ ಭೇಟಿಕೊಟ್ಟಿದ್ದರಿಂದ ರೋಮಾಂಚನಗೊಂಡು ನನ್ನನ್ನು ಆಲಂಗಿಸಿ ಕೊಂಡರು. ನೀರಲ್ಲಿ ಸ್ವಲ್ಪ ಹೊತ್ತು ಆಟವಾಡಿ ತಿಂಡಿ ತಿಂದೆವು. ಕಾನನದ ಏಕಾಂತದಲ್ಲಿ ಕುಳಿತು ಸ್ನೇಹಿತರೊಂದಿಗೆ ಭೋಜನಗೈಯುವುದು ವಿಶಿಷ್ಟ ಅನುಭವ ನೀಡಿತ್ತು. ಏಕಾಂತಕ್ಕೆ ಭಂಗ ತರುವಂತೆ ಆಗಾಗ ಹಕ್ಕಿಯೊಂದು ತನ್ನ ಇರುವಿಕೆ ತೋರಿಸುತಿತ್ತು.

ಅಂತೂ ಹಿಂಡ್ಲುಮನೆ ಜಲಪಾತದ ಚಾರಣ ಒಂದು ವಿಶಷ್ಟ ಘಟನೆಯಿಂದ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿದು ಹೊಸ ಪಾಠ ಕಲಿಸಿತ್ತು.

ಹೀಗೆ ಬನ್ನಿ:- ಕೊಲ್ಲೂರುನಿಂದ ನಾಗೋಡಿ ಹೋಗುವ ದಾರಿಯಲ್ಲಿ ಸಾಗಿ ಮರಕುಟುಕ ಎಂಬ ವೃತ್ತದಲ್ಲಿ ನೇರವಾಗಿ 10 ಮಾರು ಮುಂದೆ ಸಾಗಬೇಕು.. ಅಲ್ಲಿಂದ ಬಲಕ್ಕೆ ಹೋಗುವ ಕಚ್ಚಾರಸ್ತೆಯಲ್ಲಿ ಸಾಗಬೇಕು. ಒಂದೆರಡು ಕಿಲೋಮೀಟರ್ ಸಾಗಿದ ನಂತರ ಹಳ್ಳವೊಂದು ಸಿಗುತ್ತದೆ. ಅಲ್ಲಿಂದ ಕಾಲ್ನಡಿಗೆಯಲ್ಲಿ ಕಚ್ಚಾರಸ್ತೆಯಲ್ಲಿ 2 ಕಿಲೋ ಮೀಟರ್ ಪಯಣಿಸಿದಾಗ ಒಂದು ಸಣ್ಣ ಮನೆ ಸಿಗುತ್ತದೆ. ಅಲ್ಲಿಂದ ಮುಂದೆ ಬರುವುದೇ ಕಾಲ್ದಾರಿ. ಆ ಕಾಲ್ದಾರಿಯಲ್ಲಿ ಸುಮಾರು 10 ಇಮಿಷ ಸಾಗಿದಾಗ ಹಿಂಡ್ಲು ಮನೆಯ ದರ್ಶನವಾಗುತ್ತದೆ. ದಟ್ಟ ಹಿಂಡ್ಲುಗಳ ನಡುವೆ ಇರುವುದರಿಂದ ಅದಕ್ಕೆ ಹಿಂಡ್ಲು ಮನೆ ಎಂಬ ಹೆಸರು ಬಂದಿದೆ. ಅಲ್ಲಿನ ಸ್ಥಳೀಯರು ಎಮ್ಮೆ ಹೊಂಡ ಎಂತಲೂ ಕರೆಯುತ್ತಾರೆ.

ಮುಗಿದ ಹನಿ  ;

ಮುಕ್ತ ಈ ಸುಂದರ ಪರಿಸರವನ್ನು ಹಾಗೆಯೇ ಕಾಪಾಡೋಣ, ಆಸ್ವಾದಿಸೋಣ, ಮುಂದಿನ ಜನಾಂಗಕ್ಕೆ ಉಳಿಸೋಣ.

ನೆನಪುಗಳೊಂದಿಗೆ.

ಶ್ರೀದರ ಎಸ್. ಸಿದ್ದಾಪುರ 

Tuesday, May 3, 2011

ನಾನು ಓದಿದ ಅತ್ಯುತ್ತಮ ಪುಸ್ತಕ ಪ್ಯಾಪಿಲಾನ್.....

ಪ್ಯಾಪಿಲಾನ್ ...



ಪ್ಯಾಪಿಲಾನ್ ಹೆಸರೇ ವಿಚಿತ್ರ, ನಿಗೂಢ. ನಮ್ಮನ್ನೊಂದು ಹೊಸ ಜಗತ್ತಿಗೆ ಪರಿಚಯಿಸುವ ಪುಸ್ತಕ. ಓದಿದಂತೆ ನಮ್ಮ ಆತ್ಮವಿಶ್ವಾಸದ ಕತ್ತಿ ಮಿನುಗುತ್ತದೆ. ಪರಿಸ್ಥಿತಿ ಹೇಗೇ ಇರಲಿ ಎದುರಿಸುವ ಛಲ ಮೂಡುತ್ತದೆ.
ಬದುಕಿನ ಬಗ್ಗೆ ನೂರಾರು ಕಂಪ್ಲೇಟುಗಳಿರಬಹುದು. ಆದರೆ ಬದುಕೇ ಕಂಪ್ಲೇಂಟ್ ಆದಾಗ ನಮ್ಮ ಪರಿಸ್ಥಿತಿ ಊಹಿಸಲೂ ಅಸಾಧ್ಯ! ಅಂತಹ ವಿಷಮ ಸ್ಥಿತಿಯಲ್ಲೂ ಪ್ಯಾಪಿಲಾನ್ ಪ್ರಯತ್ನಗಳು ನಮ್ಮನ್ನಾವರಿಸಿ ಕಾಡಿ ಕೊನೆಗೊಂದು ಜೀವನಪಾಠ ಕಲಿಸುತ್ತದೆ.
ನಾಗರಿಕ ಸಮಾಜದ ಕೊಚ್ಚೆಯನ್ನು ಎಲ್ಲಿಯೂ ವೈಭವಿಕರಿಸದೇ ಸಾದರಪಡಿಸಿದ್ದಾರೆ. ಅಂತೆಯೇ ಕಾಡು ಜನಾಂಗಗಳ ಜೀವನವನ್ನೂ ಹೋಲಿಸಿದ್ದಾರೆ. ಎಲ್ಲೆಲ್ಲೂ ಕೃತಕತೆಯೇ ತುಂಬಿರುವ 'ನಮ್ಮದು ನಾಗರಿಕತೆ' ಎಂದು ಹೇಳಿಕೊಳ್ಳಲು ಹೇಸಿಗೆಎನಿಸುವಷ್ಟು ಕೊಳಕಾಗಿದ್ದೇವೆ ಎಂಬುದು ಖೇದಕರ. ಹಾಗೆ ನಮ್ಮಲ್ಲಿ ನಿಷ್ಕಳಂಕ ಪ್ರೀತಿ, ಆತ್ಮೀಯತೆ, ಮೌಲ್ಯ, ಹಣದ ಮೌಲ್ಯ ಇವೇ ಮೊದಲಾದ ಅಂಶಗಳು ಕಾಣೆಯಾಗಿರುವುದು ಗೊಚರವಾಗುತ್ತದೆ. ಹಣದ ಲಾಲಚಿಗಳಾಗಿ ಬದಲಾಗಿದ್ದೇವೆ. ನಾವೆಲ್ಲಾ ಹೇಳಲು ಮಾತ್ರ ನಾಗರಿಕರು ವರ್ತನೆ ಮಾತ್ರ 'ಅನಾಗರಿಕ'. ನಮ್ಮ ವರ್ತನೆಗಳು ಹೊರಗೊಂದು ಒಳಗೊಂದು ಎಂಬುದನ್ನು ಈ ಕೃತಿ ಮೊತ್ತಮ್ಮೆ ಸಾರುತ್ತದೆ.
ಹಾಗೆಯೇ ಪ್ರೀತಿಗೆ, ಸ್ನೇಹಕ್ಕೆ, ಹಣದಾಹಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಓದುಗರಿಗೆ ಸ್ವಾತಂತ್ರ್ಯದ ಮಹತ್ವ, ವ್ಯವಸ್ಥೆಯೊಂದಿಗೆ ಹೊಂದಾಣಿಕೆ, ಆತ್ಮವಿಶ್ವಾಸ, ಬರವಸೆ, people management ಗಳ ಬಗ್ಗೆ ಪಾಠ ಹೇಳುವ ಕೃತಿ 'ಪ್ಯಾಪಿಲಾನ್'

thanks to ಹೆನ್ರಿ, ಪೂರ್ಣಚಂದ್ರ, ಪ್ರದೀಪ.

Friday, April 15, 2011

ಅಪರೂಪದ ಸಣ್ಣ ಮಿಂಚುಳ್ಳಿ...

ಕಾಡಿನ ಪ್ರಯಾಣ

ಕರ್ನಾಟಕದ ಕೆಲವೇ ಭಾಗಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಸಣ್ಣ ಮಿಂಚುಳ್ಳಿ. ಕಾಡಿನಲ್ಲಿಯೇ ವಾಸವಾಗಿರುವ ಇದು ಹೊರ ಪ್ರಪಂಚಕ್ಕೆ ಕಂಡುಬರುವುದು ಅತಿ ವಿರಳ. ಮೊಂಡು ಬಾಲ ಹೊಂದಿರುವ ಇದು ಇತರ ಸಾಮಾನ್ಯ ಮಿಂಚುಳ್ಳಿಗಳಂತೆ ಎದೆಯಲ್ಲಿ ಬಿಳಿ ಬಣ್ಣ ಹೊಂದಿರುವುದಿಲ್ಲ. ಮಲೆನಾಡಿನ ಕಾಡುಗಳಲ್ಲಿ ಅಲೆಯುವಾಗ ಕ್ಯಾಮರ ಕಣ್ಣಿಗೆ ಬಿತ್ತು.



ವಸಂತ ಬಂದ ಋತುಗಳ ರಾಜ....


ನಾಗ ಸಂಪಿಗೆ ಮತ್ತು ಬುರುಗ


Saturday, March 5, 2011

ಚಿಟ್ಟೆ ಮೆರವಣಿಗೆ


ಹೊರಟೀವ ನಾವು ಸಾಲಾಗಿ ಹೂರಟೀವ.......ಮನುಷ್ಯರೇ ಇಷ್ಟು ಸಾಲಾಗಿ ಹೋಗಲ್ಲ, ಅಂತದರಲ್ಲಿ ಚಿಟ್ಟೆ ಸಾಲು ನೋಡಿ ಸಕತ್ ಆಶ್ಚರ್ಯವಾಯಿತು.

Saturday, February 26, 2011

ಯಾರೇ ನೀನು ಚೆಲುವೆ....ನೀರ ಕುಡಿಯುತಿರುವೆ

Tailed butterfly.
ಹೀಗೆ ಕಾಡಿನಲ್ಲಿ ಅಲೆಯಲು ಹೋದಾಗ ಕಂಡ ಅಪರೂಪದ ಅತಿಥಿ. ಎಲ್ಲಾ ಚಿಟ್ಟೆಗಳು ಸಾಲಾಗಿ ಬಂದು ನೆರು ಕುಡಿಯುತ್ತಿದ್ದವು. ವಾವ್ ಕುಷಿಯಾಯಿತು. ನೀವು ನೋಡಿ. ಮಲೆನಾಡಿನಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಚಿಟ್ಟೆ. ಒಮ್ಮೆಯಾದರೂ ನೋಡಲು ಮಲೆನಾಡಿಗೆ ಬನ್ನಿ.

Saturday, February 5, 2011

ಚಲುವಿನ ಚಿತ್ತಾರ


ಮೊನ್ನೆ ಹನುಮನ ಗುಂಡಿಗೆ ಹೋದಾಗ ತೆಗೆದ ಚಿತ್ರ. ಮುಂಜಿನ ಹಿನಿಗಳಂತೆ ಸಿಂಚನಗೈವ ನೇರ ಹನಿಗಳನ್ನು ನೋಡುವುದೇ ಸೊಬಗು. ಒಮ್ಮೆ ಬನ್ನಿ ಮೈ ಮರೆಯೋಣ....ದಯಮಾಡಿ ಪ್ಲಾಸ್ಟಿಕ್ ತರಬೇಡಿ. ಪರಿಸ ಉಳಿಸಿ.

Thursday, January 27, 2011

ಕುಟುರ

ಕುಟ್ರ ಹಕ್ಕಿ . ಮಲೆನಾಡಿನ ವಿಶಿಷ್ಟ ಹಕ್ಕಿ.
ಡಿಸೆಂಬರ- ಜೂನ್ ವರೆಗೆ 'ಕುಟುರ ಕುಟುರ' ಎಂದು ಕೂಗುವ ಹಕ್ಕಿ. ಸಾಮಾನ್ಯವಾಗಿ ಹಸಿರ ಮದ್ಯೆ ಇದನ್ನು ಗುರುತಿಸುವುದು ಬಹಳ ಕಷ್ಟ. ಮಲೆನಾಡಿನಾದ್ಯಂತ ಕಂಡು ಬರುವ ಅತಿ ಸುಂದರವಾದ ಹಕ್ಕಿ.

Tuesday, January 25, 2011

ಹೊಸ ಋತುವಿನ ಆಗಮನ

ಮಲೆನಾಡಿನ, ನಮ್ಮೆಲ್ಲರ ಬಾಲ್ಯದ ನೆನಪಿನ ಬುತ್ತಿಯಲ್ಲಿ ಅಡಗಿರುವ ಸುಂದರ ನೆನಪು 'ಪಾಸ್ ಫೈಲ್' ಎಲೆ. ನಾವೆಲ್ಲ ಇದನ್ನು ಪುಸ್ತಕದ ನಡುವೆ ಇಟ್ಟು ಪಾಸಾಗುತ್ತೇವೋ ಎಂದು ಪರಿಕ್ಷಿಸುತ್ತಿದ್ದೆವು! ಯಾರು ಅದನ್ನು ನಮಗೆ ಹೇಳುತ್ತಿದ್ದರೋ! ಮೊನ್ನೆ ಕಾಡಿನಲ್ಲಿ ತಿರುಗುತ್ತಿದಾಗ ಕಣ್ಣಿಗೆ ಬಿತ್ತು . ಹೂ ಬಿಟ್ಟಿತ್ತು. ಸುಂದರವಾಗಿದೆ ಅಲ್ವಾ? ನೆನಪಿನ ಬುತ್ತಿ ಬಿಚ್ಚಿಕೊಂಡಿತಾ?

ನಗು ಮೊಗದ ಬೆಳ್ನೊರೆ ಹಾಲ್ ಕಡಲ ಹಾಲ್ನೊರೆ ಸಾಹಸಿಗರಿಗೊಂದು ಪಂಥ್ಹಾವಾನ 'ಧೂಧ್ ಸಾಗರ್'.

ಭಯ ಉಕ್ಕಿಸುವ ಪ್ರಪಾತ. ಎಡಕ್ಕೆ ಬಲಕ್ಕೆ ಬೆಟ್ಟ ಝರಿಗಳು. ಬಲಕ್ಕೆ ಕಣಿವೆ. ತಂತಿ ಮೇಲಿನ ಸರ್ಕಸ್ನಂತೆ ರೈಲು ಬೆಟ್ಟದ ತುದಿಯಲ್ಲಿ ಚಲಿಸುತ್ತಿರುತ್ತದೆ, ಬಸವನ ಹುಳುವಿನಂತೆ. ಎಲ್ಲೆಲ್ಲಿಯೂ ಬೆಟ್ಟ ಕಾವ್ಯ. ಮಾರಿಗೊಂದರಂತೆ ನುಂಗುವಂತಿರುವ ಸುರಂಗಗಳು. ಕಲ್ಲು ಬಂಡೆಗಳ ಮೇಲೆಲ್ಲಾ ತರುಲತೆಗಳ ಚಿತ್ತಾರ. ಸಂದು ಗೊಂದಲಿನಲ್ಲೆಲ್ಲಾ ಸಣ್ಣ ಝರಿಗಳು. ತೀವ್ರ ತಿರುವಗಳಲ್ಲೆಲ್ಲಾ ಹೂ ಪಕಳೆಯಂತೆ ನಿರುಕುವ ನೀರ ಹನಿಗಳು. ಆಗಾಗ ಮೋಡದೊಳಗೆ ನುಗ್ಗುವ ರೈಲು. 

Doodh Sagar waterfall- ಒಂದು ಮೋಹಕ ನೋಟ. 


ಮಂಜಿನೊಳಗೆ ನುಗ್ಗುವ ಬಂಡಿ. 





ಹಲವು ಬೆಟ್ಟಗಳನ್ನು ಸಂದರ್ಶಿಸಿ ಎತ್ತರದ ದಿಬ್ಬದ ತುದಿಗೆ ತಂದು ನಿಲ್ಲಿಸಿ ಇದೇ ಸ್ಟೇಷನ್ ಇಳಿಯಿರಿ ಎಂದಾಗ ಅವಕ್ಕಾಯಿತು. ಸ್ಟೇಷ್ನ್ಲ್ಲಿ ಪ್ಲಾಟ್ಪಾರಂ ಇಲ್ಲ! ಇಳಿಯುವುದಲ್ಲ ಹಾರಬೇಕು. ಸ್ವಲ್ಪ ಯಾಮಾರಿದರೂ ರೈಲಡಿಗೆ. ನಿಲ್ಲುವುದು ಬರೇ 1 ನಿಮಿಷ. ಅಷ್ಟರಲ್ಲೇ ನೂರಾರು ಜನ ನಮ್ಮನ್ನು ನೂಕಿಕೊಂಡು ಹಾರಿಯಾಗಿತ್ತು. ನಮ್ಮ ಭಾರವಾದ ಚೀಲವನ್ನು ಹಿಡಿದೇ ಹಾರಿ ಸುಧಾರಿಸಿಕೊಂಡೆವು. ಸ್ಟೇಷನ್ ಹೆಸರೇ  'ಧೂಧ್ ಸಾಗರ್'
ಕ್ಯಾಸಲ್ ರಾಕ್ ನಲ್ಲಿ ಕಂಡ ಬಿಂಬ... 

ಹುಬ್ಬಳ್ಳಿಯಿಂದ 5.30ಕ್ಕೆ ಹೊರಟು ಲೋಂಡಾ ಮೂಲಕ ಕ್ಯಾಸಲ್ರಾಕ್, ಕರಂಜೋರ್ ಸ್ಟೇಷನ್ ಕಳೆದು ಧೂಧ್ ಸಾಗರ್ ತಲುಪಿದ್ದು 11 ಗಂಟೆ 45 ನಿಮಿಷಕ್ಕೆ. ಬ್ರಿಟಿಷ್ ಕಾಲದಲ್ಲಾದ ರೈಲ್ವೇ ಟ್ರಾಕ್. ಬೆಳಗಾವಿಯಿಂದ ಪ್ರತಿನಿತ್ಯ ಕ್ಯಾಸಲ್ರಾಕ್ಗೆ ರೈಲಿರುತ್ತದೆ ಆದರೆ ಧೂಧ್ ಸಾಗರಕ್ಕೆ ವಾರಕ್ಕೆರಡು ಬಾರಿ ಭಾನುವಾರ ಮತ್ತು ಶನಿವಾರ.

ಇಲ್ಲಿ ಮುಗಿಲಲಿ ತೇಲೋಣ ಬಾ ಯಾತ್ರಿಕನೆ 

ಧೂದ್ ಸಾಗರ್ ಚಾರಣ ನಿರತ ಚಾರಣಿಗರು. 


ಬೆಟ್ಟದ ಬೆನ್ನಿನಲ್ಲಿ ಹೂ ಪಕಳೆಗಳ ಮಾತನಾಲಿಸುತ್ತಾ  ಧೂಧ್ ಸಾಗರ ಸ್ಟೇಷನ್ನಿಂದ ಜಲಪಾತಕ್ಕೆ 6 ಹಾಡುಗಳ ರೋಚಕ ಹಾದಿ. ಕಣಿವೆಯ ಸೌಂದರ್ಯಕ್ಕೆ ಮೂಕವಾಗುತ್ತಾ ಬೆಟ್ಟ ತುದಿಯಲ್ಲಿ ನಡೆಯಬೇಕು. ಸುರಂಗ ಒಂದನ್ನು ದಾಟುವ ರೋಚಕ ಅನುಭವವೂ ಇದರೊಂದಿಗಿದೆ.


ಸವೆದ ಹಾದಿಯ ತುಂಬ ಸೌಂದರ್ಯ ಬಿಂಬ. ರೌದ್ರಾವತಾರಿಯಾಗಿ ರೈಲು ಹಳಿ ಮತ್ತು ನಮ್ಮನ್ನು ಕೊಚ್ಚಿಕೊಂಡು ಹೋಗುವುದೋ ಏನೋ ಎಂಬಂತೆ ಧುಮುಕುವ ಜಲಧಾರೆ. ಶಿವನ ಜಟೆಯಿಂದ ಅವತರಿಸಿ ಆತನ ಮೂಗಿಗೆ ಡಿಕ್ಕಿ ಹೊಡೆದು, ಎದೆಯ ಕಣಿವೆಗಳಲ್ಲಿ ಅಡಗಿ, ನಾಭಿಯಿಂದ ಉದ್ಭವಿಸಿದಂತೆ ಏಕಾಏಕಿ ಚಿಮ್ಮುತ್ತದೆ. ನೋಡುಗರ ದೇಹ ಮತ್ತು ಮನಸ್ಸನ್ನು ತಣಿಸುತ್ತದೆ.

ಬೆಟ್ಟ ಇಳಿಯುವ ಉಗಿಬಂಡಿ.  


ಜಲಧಾರೆಯ ಎಡ ಬಲ ಎಲ್ಲಿ ಬೇಕಾದಲ್ಲಿ ನಿಂತು ನೋಡಬಹುದಾದ ರುದ್ರ ನೋಟ. ನೋಟಕನ ಮನದಲಿ ಇದರ ಮಾಟ ಅಚ್ಚಳಿಯದೇ,  ಸೌಂದರ್ಯ ಬಿಂಬ ಉಳಿದು ಬಿಡುವಂತಹ ಜಲಧಾರೆ. ಎಡದಲ್ಲಿರುವ ಮಂಟಪದಲ್ಲಿ ನಿಂತು ಜಲಧಾರೆಯನು ಮೋಹಿಸಬಹುದು. ಜಲಧಾರೆಯ ಬಲಕ್ಕಿರುವ ತೆರೆದ ಕುಟಿರದೊಳಗೆ ಒಂದು ರಾತ್ರಿ ಕಳೆಯಬಹುದು. ಪ್ರಾಣಿಯಾವುದಾದರೂ ಹೊತ್ತೊಯ್ದರೆ ನನ್ನ ಬೈಯದಿರಿ.






ಗೆಳೆಯ ನಾಗರಾಜನ ಜೊತೆ. 



ಗೋವಾದ ಮಾಂಡವಿ ನದಿಯ ಸೃಜಶೀಲ ಶಕ್ತಿಯಿಂದ ಸೃಷ್ಟಿಯಾಗಿರುವ ಕಾನನ ಸುಂದರಿಯನು ತಲೆ ಕೆಟ್ಟ ಪೇಟೆ ಹೈದರ ಪ್ಲಾಸ್ಟಿಕ್ ರಕ್ಕಸರಿಂದ ಕಾಪಾಡಬೇಕಾದುದು ತುರ್ತು ಅಗತ್ಯ. ಇಲ್ಲಿಗೆ ವಿಶಿಷ್ಟವೆನಿಸುವ ಅನೇಕ ಕಾಡು ಹಕ್ಕಿಗಳು ಚಿಟ್ಟೆಗಳು ನಿಮ್ಮನ್ನು ಮತ್ತೆ ಮತ್ತೆ ಕೈಬೀಸಿ ಕರೆಯುವಂತೆ ಮಾಡಿದರೆ ಆಶ್ಚರ್ಯವೇನಿಲ್ಲ.
ಸೂರ್ಯ ಮುಳುಗುವ ಮುನ್ನ ಧೂಧ್ ಸಾಗರದ ಸ್ಟೇಷನ್ಲ್ಲಿದ್ದರೆ ಮನೆ ತಲುಪಬಹುದು. ಇಲ್ಲವಾದರೆ ಧೂಧ್ ಸಾಗರದ ಜೋಗಳದಲ್ಲಿ ಲೀನವಾಗಬೇಕಾದೀತು.



ಶ್ರೀಧರ್ ಎಸ್. ಸಿದ್ದಾಪುರ.

Monday, January 24, 2011

ಹೇಗಿದೆ ಜೋಡಿ


ಹೊಸ ಅರ್ಥದ ಹುಡುಕಾಟ, ಮನಸಿನ ನಿವೇದನೆ

ವಾರೆ ನೋಟ

ಪ್ರವಾಸಗಳೆಂಬ ಕಿರುದಾರಿಯಲಿ

ಬೇಕಲ್‌ನ ದಾರಿಯಲ್ಲಿ ( Bekal Fort) ಮೊದಲ ಪುಸ್ತಕ ಬಿಡುಗಡೆಯ ತಯಾರಿಯಲ್ಲಿದ್ದೆ. ಗೆಳೆಯನೊಬ್ಬ ನಿನ್ನನ್ನು ಮುಖಪುಟ ವಿನ್ಯಾಸಗಾರನಲ್ಲಿಗೆ ಕರೆದೊಯ್ಯುವೆ ಎಂದು ಹನ್ನೊಂದ...