ನಾನಾಗ ಸಣ್ಣ ಸುಣ್ಣದ ಪೆಟ್ಟಿಗೆಯಂತಹ ಕ್ಯಾಮಾರಾ ಹೆಗಲಿಗೇರಿಸಿ ಸಣ್ಣ ಪೋಟೋಗ್ರಾಫರ್ ಪೋಸ್ ನೀಡುತ್ತಿದ್ದೆ! ಮೊದಲ ಕ್ಯಾಮರವದು. ಈಗಲೂ ನನ್ನ ಬಳಿ ಇದೆ! ನನ್ನ ಮಗ ಅದನ್ನು ಸಾಕಷ್ಟು ರಗಳೆ ತೆಗೆದಿದ್ದ. ಅದರಲ್ಲೇ ಕೆಲವು ಪಕ್ಷಿಗಳ ಚಿತ್ರಗಳನ್ನು ಜೂಮ್ ಇಲ್ಲದ ರೀಲ್ ಕ್ಯಾಮಾರದಲ್ಲಿ ತೆಗೆದಿದ್ದೆ! ಕೊನೆಗೆ ದೊಡ್ಡ ಭೂತ ಕನ್ನಡಿ ಹಿಡಿದು ಅದರಲ್ಲಿದ್ದ ಪಕ್ಷಿಯನ್ನು ಹುಡುಕಿ ತೆಗೆದು ನನ್ನಕ್ಕನಿಗೆ ತೋರಿಸಿದ್ದೆ. ಏನೋ ಇದು ನಿನ್ನ ಅವಸ್ಥೆ, ಪಕ್ಷಿ ಪೋಟೋಗ್ರಫಿ ಅಂದರೆ ಹೀಗಾ? ಎಂದು ಅಕ್ಕ ಮೂಜು ಮುರಿದಿದ್ದಳು. ಏನು ಹೇಳುವುದೆಂದು ಅಂದು ತೋಚಲೇ ಇಲ್ಲ! ಬರುತ್ತಿದ್ದ ಪೋಟೋಗಳು ಅಷ್ಟಕ್ಕಷ್ಟೇ. ಮನೆಯಲ್ಲಿ ಮಾತ್ರ ಪೋಟೋಗಳ ರಾಶಿ ರಾಶಿ ಬಂಡಲ್ಲು. ಹೀಗಿರುವ ದಿನಗಳಲ್ಲಿ ನನ್ನ 'ಪೋಟೋಗ್ರಫಿ ವಿಷಯ' ಎಲ್ಲರ ಆಹಾರವಾಗಿತ್ತು! ಮೊದಲ ಮಳೆ, ಮೊದಲ ಕವನ, ಮೊದಲ ಪ್ರೀತಿ, ಮೊದಲ ತೊದಲು, ಮೊದಲ ಮುತ್ತು ಹೀಗೆ ಮೊದಲಾಗಿರುವುದೆಲ್ಲವು ನೆನಪಿನಲ್ಲುಳಿಯುತ್ತೆ. ಯಾರೂ ಅದನ್ನು ಮರೆಯಲಾರರು! ಅರೆ ಏನು ಹೇಳ್ತಾನೆ ಎಂದು ಮನಸು ಮಂಡಿಗೆ ತಿಂತಿದೆಯಾ? ಮೊದಲ ಜಗತ್ತಿನ ಹಳೆ ತುಣುಕೊಂದು ಇಲ್ಲಿದೆ. 2001 ರ ಸಮಯವಿರಬೇಕು. ಸಾಕಷ್ಟು ಓದುತ್ತಿದ್ದೆನಾದರೂ ಬರೆಯುತ್ತಿರಲಿಲ್ಲ. ಆ ಸಂಧರ್ಬದಲ್ಲಿ ವಿಜಯ ಕರ್ನಾಟಕ ಪತ್ರಿಕಾ ಜಗತ್ತಿಗೆ ತನ್ನ ವಿಶಿಷ್ಟ ಅಂಕಣದಿಂದ ಅಚ್ಚರಿಗಳನ್ನು ನೀಡುತಲಿತ್ತು. ಅದೇ ಸಮಯಕ್ಕೆ ಅವರು ಹೊಸದಾಗಿ 'ಚಿತ್ರಕ ನೆನಪು' ಅಂಕಣ ಆರಂಬಿಸಿದ್ದರು. ಚಿತ್ರ ಮತ್ತು ಅದರ ಜೊತೆಗಿನ ನೆನಪನ್ನು ಹಿಡಿದಿಡುವ ಪುಟಾಣಿ ಅಂಕಣ. ಫೋಟೋಗ್ರಫಿಯ ಹವ್ಯಾಸವಿದ್ದ ನನಗೆ ಈ ಅಂಕಣ ಬಹಳ ಅಚ್ಚು ಮೆಚ್ಚು. ಯಾಕೆ ನಾನು ನನ್ನದೊಂದು ಚಿತ್ರ ಇಲ್ಲಿಗೆ ಕಳುಹಿಸಬಾರದು ಎಂದುಕೊಂಡೆ. ಹಾಗೆಯೇ ನನ್ನ ಕಡತ ರಾಶಿಗಳನ್ನು ಹರವಿ ಕುಳಿತೆ. ಯಾವ ಚಿತ್ರವೂ ಮನಸ್ಸಿಗೆ ಹಿಡಿಸಲಿಲ್ಲ. ಚಿತ್ರ ಗುಡ್ಡೆಯಿಂದ ಒಂದು ಚಿತ್ರವನ್ನು ಆರಿಸಿ, ಕುಂದಾಪುರಕ್ಕೆ ಹೋಗಿ ಪ್ರಿಂಟ್ ಹಾಕಿಸಿ ತಂದು ವಿಜಯ ಕನರ್ಾಟಕ ಪತ್ರಿಕೆಗೆ ಕಳುಹಿಸಿ, ಕಣ್ಮುಚ್ಚಿ ಕುಳಿತೆ. ನನ್ನ ಅದೃಷ್ಟವೋ ಗೊತ್ತಿಲ್ಲ ನನ್ನ ಬರೆಹ ಮತ್ತು ಚಿತ್ರ ಪತ್ರಿಕೆಗೆ ಆಯ್ಕೆಯಾಗಿತ್ತು. ಆ ಚಿತ್ರವನ್ನು ಅಮ್ಮನಿಗೆ, ಅಕ್ಕನಿಗೆ ತೋರಿಸಿ ಬೀಗಿದೆ. ನನ್ನ ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿದೆಯೆಂದು ಸಣ್ಣ ಜಂಬ ಮಾಡಿದೆ. ಆ ಸಂತೋಷವನ್ನು ಪದಗಳಲ್ಲಿ ಹಿಡಿದಿಡಲಾರೆ ಬಿಡಿ. ಮೊದಲ ಬರೆಹ ಮೊದಲ ಮುದ್ರಣ. ಅಂತಹ ಸಂತಸವೊಂದು ಒಡಮೂಡಿತ್ತು. ಮೊದಲ ಲೇಖನ ಕಣ್ಣು ತೆರೆದಿದ್ದು ಹೀಗೆ. ಈಗ ಇಲ್ಲಿವರೆಗೆ ಬರೆಯುತ್ತಾ ಬಂದಿರುವೆ. ಎಷ್ಟು ದಿನ ಈ ವೈಕುಂಠ ಗೊತ್ತಿಲ್ಲ. ಇವತ್ತು ಲೇಖನಗಳ ರಾಶಿಗೆ ಕೈಹಚ್ಚಿದಾಗ ಸಿಕ್ಕಿತು. ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.
Friday, September 27, 2019
ಮೊದಲ ಮಳೆ, ಮೊದಲ ಮುತ್ತು, ಮೊದಲ ಚಿತ್ರ....
Thursday, September 19, 2019
ಬೆಟ್ಟದ ಮೇಲೆ ಇತಿಹಾಸದ ಚಿತ್ತಾರ! ರಾಯ್ ಗಢ್ ಕೋಟೆ..
ಮಹಾರಾಷ್ಟ್ರದ ಮಹಾಡ್ನಿಂದ ರಾಯಗಢಕ್ಕೆ ಬಂದಾಗ ನಡು ಮಧ್ಯಾಹ್ನ . ಮಹಿಷಾಸುರನಂತೆ ಮಲಗಿದ ಮಲೆಗಳ ನೋಡಿ ರಾಯಗಢ ಕೋಟೆ ಹತ್ತಲು ಮನಸ್ಸು ಹಿಂದೇಟು ಹಾಕಿತ್ತು. ಹೇಗೂ ರೋಪ್ ವೇ ಇದೆಯಲ್ಲಾ ಎಂದು ಹತ್ತಿ ಕುಳಿತೆವು. ಮೋಡವೊಂದು ನಮ್ಮ ನೆತ್ತಿಯ ತಾಗಿ ನಾವು ಕುಳಿತ ವಾಹನ ಮೋಡದೊಳಗೆ ಲೀನ. ತ್ರಿಶಂಕು ಸ್ವರ್ಗದಲಿ ತೇಲುತ್ತಾ ತೇಲುತ್ತಾ ನಾವು ಕುಳಿತ ಟ್ರಾಲಿ ಸೇರಿದುದು ರಾಯಗಢವೆಂಬ ರುದ್ರ ರಮಣೀಯ ಕೋಟೆಯ ನೆತ್ತಿಯ ಮೇಲೆ! ನೂರು ಎಕರೆಯಲ್ಲಿ ಹರಡಿದ ಇತಿಹಾಸದ ಚಿತ್ತಾರ! ಒಂದು ಮನೆ ಕಟ್ಟಲು ಹೆಣಗುವ ನಾವು ಎಂಟು ಹೆಂಡಿರ ಕಟ್ಟಿಕೊಂಡು ಇಷ್ಟೊಂದು ಅಗಾಧವಾದ, ವಿಶಾಲ ಕೋಟೆ ಕಟ್ಟಲು ಬೇಕಾದ ಇಚ್ಚಾಶಕ್ತಿಗೆ ಬೆರಗುಗೊಂಡು ಕೋಟೆಯ ಪ್ರತೀ ಇಂಚನ್ನು ಸವರುವ ತವಕದಲಿದ್ದೆವು.
![]() |
| ರಾಯಗಢ್ ಸನಿಹದ ಹಳ್ಳಿ. |
![]() |
| ಸ್ವರ್ಗದಲಿ ತೇಲುತಿದೆ ಟ್ರಾಲಿ .. |
![]() |
| ಮಾರಾಟಗಾರ್ತಿ ಸ್ಥಳೀಯ ಉಡುಗೆಯಲ್ಲಿ |
![]() |
| ಮಂತ್ರಿ ವಾಸದ ಕೋಣೆಗಳು. |
![]() |
| ಜಗದೀಶ್ವರ ದೇವಾಲಯ. |
![]() |
| ವಿಶಾಲ ಮಾರುಕಟ್ಟೆ. |
![]() |
| ನಾ ಕಂಡತೆ ಜಗದೀಶ್ವರ ದೇವಾಲಯ.. |
ನನಗೆ ಶಿವಾಜಿ ಉಸಿರಾಡಿದ ಉಸಿರು ಅಲ್ಲೇ ಎಲ್ಲೋ ಇತ್ತೆಂದು ಭಾಸವಾಗುತ್ತಲೇ ಇತ್ತು. ಮನದ ತುಂಬಾ ಶಿವಾಜಿ ಕಂಪನ. ಶಿವಾಜಿ ಮೆಟ್ಟಿದ ನೆಲವನ್ನು ಪೂರ್ವ ದ್ವಾರದಲ್ಲಿ ಹೊಕ್ಕರೆ ಸಾಲು ಸಾಲು ರಾಣಿ ಆವಾಸ. ಅವಕ್ಕೆ ತಾಗಿಕೊಂಡಂತೆ ಶೌಚ ವ್ಯವಸ್ಥೆ ಅದೂ ಬೆಟ್ಟದ ನೆತ್ತಿಯಲ್ಲಿ! ಅದರ ವಿರುದ್ದ ದಿಕ್ಕಿಗೆ ಮಂತ್ರಿ ಆವಾಸ ತೆರೆದು ಕೊಳ್ಳುತ್ತೆ. ಮುಂದೆ ಬಲಕ್ಕೆ ಹೊರಳಿ ನೇರ ಮುಂದೆ ಹೋದರೆ ಏಳು ಅಂತಸ್ತಿನ ವಿಜಯ ಸ್ತಂಭ. ಪ್ರತಿ ವಿಜಯವನ್ನೂ ಹೊಸ ದೀಪದೊಂದಿಗೆ ಆಚರಿಸುತ್ತಾರೆ. ದೀಪ ಉರಿಯುತ್ತಿದ್ದರೆ ಶಿವಾಜಿ ಯಾವುದೋ ಕೋಟೆ ಗೆದ್ದನೆಂದು ಅರ್ಥ. ಬಲಭಾಗಕ್ಕೆ ಶಿವಾಜಿಯ ವಿಶ್ರಾಂತಿ ಕೊಠಡಿ. ಅಲ್ಲಿಂದ ಮುಂದಕ್ಕೆ ಹೊರಳಿದರೆ ವಿಶಾಲ ದಬರ್ಾರ್ ಹಾಲ್. 1280 ಕೆ.ಜಿ. ತೂಗುವ ಚಿನ್ನದ ಸಿಂಹಾಸನವನ್ನು ಶಿವಾಜಿ 1681ರಲ್ಲಿ ಏರಿದನು. ಈ ಚಿನ್ನದ ಸಿಂಹಾಸನ ಈಗ ದರೋಡೆಕೋರ ಬ್ರಿಟಿಷ್ ಸಾಮ್ರಾಜ್ಯದಲ್ಲಿದೆ. ಇಲ್ಲಿ ಒಂದು ಚಿಟಿಕೆ ಹೊಡೆದರೆ ಶಬ್ದ ತರಂಗಗಳು ಸ್ಪಷ್ಟವಾಗಿ ನಮಗೆ ಕೇಳಿಸಿ ಆಶ್ಚರ್ಯವನ್ನುಂಟು ಮಾಡಿತು. ಯಾವುದೇ ಸ್ಪೀಕರ್ ವ್ಯವಸ್ಥೆ ಇಲ್ಲದ ಕಾಲದಲ್ಲಿ ಮಾತನಾಡಿದ ಪ್ರತಿ ಶಬ್ದವು ಕೇಳುವ ಹಾಗೆ ಧ್ವನಿ ವ್ಯವಸ್ಥೆಯಾಗುವಂತೆ ಮಾಡಿಕೊಂಡಿದ್ದು ಅವರ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿ. ಈ ದಬರ್ಾರ್ ಹಾಲ್ನ ಎದುರಿಗಿದ್ದ ಮುಖದ್ವಾರವನ್ನು ಹೋಲುವಂತೆ ಬ್ರಿಟಿಷರು ಇಂಡಿಯಾ ಗೇಟ್ ರಚಿಸಿದರು! ಹರದಾರಿ ಸವೆಸಿದರೆ ಹುಲಿದ್ವಾರ, ಹೋಲಿ ಮೈದಾನ ಕಾಣಸಿಗುತ್ತದೆ. ಹೋಲಿ ಮೈದಾನದಲ್ಲಿರುವ ಶಿವಾಜಿ ಪ್ರತಿಮೆಗೆ ಸತಾರದಲ್ಲಿರುವ ಶಿವಾಜಿ ವಂಶಸ್ಥರು ಪ್ರತಿದಿನವೂ ಬಂದು ಮಾಲಾರ್ಪಣೆ ಮಾಡಿ ಹೋಗುವರು! ಹಾಗೆಂದು ಬೆಟ್ಟ ಬಹಳ ಚಿಕ್ಕದೆಂದು ತಿಳಿಯಬೇಡಿ. ಸಮುದ್ರ ಮಟ್ಟದಿಂದ ಬರೋಬ್ಬರಿ 1356 ಮೀಟರ್ ಎತ್ತರದಲ್ಲಿದೆ. ಈ ಎಲ್ಲಾ ಕಟ್ಟಡಗಳಲ್ಲಿ ಬಿದ್ದ ನೀರು ಹೋಲಿ ಮೈದಾನಕ್ಕೆ ಬಂದು ಹೊರ ಹೋಗುತ್ತೆ. ಅಷ್ಟೊಂದು ಅಧ್ಬುತವಾಗಿ ಜಲ ನಿರ್ವಹಣಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಬೆಟ್ಟದ ನೆತ್ತಿಯ ಮೇಲೆ 11 ಬೃಹತ್ ಮತ್ತು 100ಕ್ಕೂ ಹೆಚ್ಚು ಚಿಕ್ಕ ಕೆರೆಗಳಿವೆ ಎಂದರೆ ನಮ್ಮವರ ನೀರಿನ ತಂತ್ರಜ್ಞಾನ ಅರಿವಿನ ಅಗಾಧತೆ ಅರಿಯುವುದು! ಅದೇ ಕಲ್ಲಿನಿಂದಲೇ ಕೋಟೆ ದ್ವಾರಗಳನ್ನು, ದೇವಾಲಯಗಳನ್ನು ನಿಮರ್ಿಸಲಾಗಿದೆ. ಹೋಲಿ ಮೈದಾನದೆದುರಿಗೆ ನಿಮರ್ಿಸಲಾದ 1400 ಅಡಿ ಉದ್ದದ ಮಾರುಕಟ್ಟೆ ನಮ್ಮನ್ನು ದಂಗುಬಡಿಸುತ್ತೆ. ಪ್ರತಿ ಅಂಗಡಿಯ ಹಿಂದೊಂದು ಮನೆ ಇದೆ.
![]() |
| ಮಂಜಿನಲಿ ಮುಳುಗಿದ ಮಾರುಕಟ್ಟೆ.. |
![]() |
| ದರ್ಬಾರ್ ಹಾಲನ ಸ್ವಾಗತ ಗೋಪುರ..ಇಂಡಿಯಾ ಗೇಟ್ ಇದನ್ನು ಹೋಲುತ್ತೆ. |
![]() |
| ಪಲ್ಲಕ್ಕಿ ದ್ವಾರ |
![]() |
| ವಿಜಯ ಸ್ತಂಭ. |
![]() |
| ತಕ್ ಮಕ್ ಟಾಕ್ ನಿಂದ ಕಾಣುವ ಸ್ವರ್ಗ ಸದ್ರಶಃ ನೋಟ. |
![]() |
| ತಕ್ ಮಕ್ ಟಾಕ್. |
ಅಲ್ಲೇ ಬಲಕ್ಕೆ ಏಳು ತಲೆಮಾರಿನಿಂದ ಅಲ್ಲಿನ ಮಳೆ, ಬಿಸಿಲು ಕಂಡ ಈಗ ಗೈಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹೇಶನ ಮನೆ ಇದೆ. ದಣಿದು ಬಂದವರಿಗಾಗಿ ಅವರ ತಾಯಿ ಆದರ ಆತಿಥ್ಯ ಮಾಡುತ್ತಾರೆ. ನಾವೂ ಇಲ್ಲೇ ಬೆಳಗಿನ ಉಪಹಾರ ಅವಲಕ್ಕಿ ಮತ್ತು ಚಹಾ ಸೇವಿಸಿದೆವು. ಬಹಳ ರುಚಿಯಾಗಿತ್ತು. ಏಳು ತಲೆ ಮಾರಿನ ಇತಿಹಾಸವನ್ನು ತಿಳಿಯ ಬಯಸುವವರು ಅವರ ಮಣ್ಣಿನ ಮನೆಯಲ್ಲೇ ಉಳಿಯಬಹುದು. ಜಗದೀಶ್ವರನಿಗೆ ನಮಿಸಿ, ಶಿವಾಜಿ ಮತ್ತು ಆತನ ನಾಯಿಯ ಸಮಾಧಿಗೆ ಶರಣು ಬಂದು ಪಲ್ಲಕ್ಕಿ ದ್ವಾರದ ಮೂಲಕ ವಿಜಯ ಸ್ತಂಭ ಬಳಸಿ ಹೊರಟು ಬಂದೆವು. ಶಿವಾಜಿಯ ಮಂತ್ರಿ ಹಿರೋಜಿ ಹಿಂದೋಳ್ಕರ್ 14 ವರ್ಷಗಳ ಕಾಲ ಶ್ರಮಪಟ್ಟು ನಿಮರ್ಿಸಿದ ಈ ಕೋಟೆಯನ್ನು ಬರೀ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಅನುಭವಿಸಿ ಇದರ ಅಗಾಧತೆ ಅರಿಯಬೇಕು. ಜೊತೆಗೆ ಇಲ್ಲಿನ ವಿಶೇಷವಾದ ಮಹಾರಾಷ್ಟ್ರದ ಬಕರಿ( ಒಂದು ವಿದಧ ರೊಟ್ಟಿ) ಜವಾಣ್(ಊಟ) , ಮಿಸಳ್ ಬಾಜಿ, ಮಿಸಾಳ್ ಪಾವ್ ಸವಿಯಲು ಮರೆಯದಿರಿ.
ಇಲ್ಲಿ ವಾಸಕ್ಕೆ ಅನೇಕ ಹೋಟೆಲುಗಳಿವೆ. ಕೋಟೆಯ ಮೇಲೆಯೇ ರಾಯಗಢ್ ರೋಪ್ ವೇ ಹೋಟೆಲ್ ಇದೆ. ಇಲ್ಲಿ ಊಟಕ್ಕೂ ವ್ಯವಸ್ಥೆ ಇದೆ. ಈ ಪ್ರವಾಸಕ್ಕೆ ಕನಿಷ್ಠ ಎರಡು ದಿನ ತೆಗೆದಿಡುವುದು ಉತ್ತಮ. ಇಲ್ಲಿಂದ ಸನಿಹದಲ್ಲಿರುವ ಪ್ರತಾಪ್ ಗಢ್, ಮಾತೇರನ್ಗೂ ಹೋಗಿ ಬರಬಹುದು.
ಶ್ರೀಧರ್. ಎಸ್. ಸಿದ್ದಾಪುರ
Wednesday, August 7, 2019
ಆ ಬೆಟ್ಟದಲ್ಲಿ ಪುಟಾಣಿ ರೈಲಿನಲ್ಲಿ.....
ಮೆಲ್ಲಗೆ ತೆವಳುವ ರೈಲು. ತಮಗೂ ರೈಲಿಗೂ ಸಂಬಂಧವೇ ಇಲ್ಲವೇನೊ ಎಂಬಂತೆ ಹಳಿಯ ಮೇಲೆಯೇ ನಿರ್ಮಲ ನಿಶ್ಚಿಂತೆಯಿಂದ ನಡೆವ ಜನ. ಹೂ ಪಕಳೆಗಳಿಂದ ಶೃಂಗಾರಗೊಂಡ ಬೀದಿ. ಬೀದಿ ಬದಿಯಲ್ಲಿ ಬೆಟ್ಟಕ್ಕೆ ನೇಣು ಬಿದ್ದಂತಿರುವ ಮನೆಗಳ ಸಮುಚ್ಚಯ. ಮನೆಯ ಮುಂದೆ ಯಾರಿಗೋ ಕಾದು ಕುಳಿತಂತಿರುವ ಬಣ್ಣ ಬಣ್ಣಗಳ ಹೂ ಕುಂಡಗಳ ಮೆರವಣಿಗೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವ ಕಣಿವೆಯ ಸೌಂದರ್ಯ. ಕಣಿವೆಯ ಸೌಂದರ್ಯ ಮೀರಿಸುವ ಟಿಬೇಟಿಯನ್ ಛಾಯೆಯ ಸ್ಪುರದ್ರೂಪಿ ಹುಡುಗಿಯರ ಹಿಂಡು. ಬೆನ್ನು ಹುರಿಯಲಿ ಚಳಿಯ ಕಚಗುಳಿ. ಮಂಜಿನ ಮುಸುಕಿನಿಂದ ಹೊಗೆ ಹೊಮ್ಮಿಸಿ ಹೊರ ಬರುವ 'ಹಿಮಾಲಯನ್ ಕ್ವೀನ್' ರೈಲು. ದೂರದಲ್ಲೆಲ್ಲೋ ನನಗೂ ಇದಕೂ ಏನೂ ಸಂಬಂಧವಿಲ್ಲವೆಂಬಂತೆ ಪವಡಿಸಿರುವ ಕಾಂಚನಜುಂಗಾ ಶಿಖರ! ಜಗತ್ತು ಏಕಾಏಕಿ ನಿಶ್ಚಲಗೊಂಡ ಅನುಭವ! ಇದು ಪಶ್ಚಿಮ ಬಂಗಾಳದ ಡಾರ್ಜಲಿಂಗ್ಗೆ ನೀವು ಕಾಲಿಟ್ಟರೆ ಕಾಣಸಿಗುವ ದೃಶ್ಯ.
![]() |
| Toy train |
![]() |
| ಹಳಿಗಳೊಂದಿಗೆ ವಾಯು ವಿಹಾರ |
![]() |
| ಡಾರ್ಜಿಲಿಂಗ್ ಕ್ಯಾಮರಾ ಕಣ್ಣಿನಲ್ಲಿ... |
ಮೊದಲ ದಿನದ ನಮ್ಮೆಲ್ಲಾ ಯೋಜನೆ ತಲೆಕೆಳಗಾಗಿತ್ತು. ಆದರೂ 3 ಕಿ. ಮೀಟರ್ ದೂರವಿರುವ ತೇನ್ ಸಿಂಗ್ ನಾವರ್ೆ ಮತ್ತು ಎಡ್ಮಂಡ್ ಹಿಲರಿಗೆ ಸಂಬಂಧಿಸಿದ ಚಾರಣ ಸಾಮಾಗ್ರಿ ಪ್ರದರ್ಶನಕ್ಕಿಟ್ಟ ವಸ್ತು ಸಂಗ್ರಹಾಲಯಕ್ಕೆ (ಊಒ) ಭೇಟಿ ನೀಡಿದೆವು. ತೇನ್ ಸಿಂಗ್ ಬಳಸಿದ ಕೈಗವಸು, ಹಿಮ ಪಿಕ್ಕಾಸಿ, ಹಗ್ಗ, ಟೆಂಟ್, ನೀರು ತುಂಬುವ ಬಾಟಲಿ ಹೀಗೆ ಚಾರಣಕ್ಕೆ ಬೇಕಾದ ವಿಶಿಷ್ಟ ವಸ್ತುಗಳನ್ನು ನಮ್ಮ ಮುಂದೆ ತೆರೆದಿಟ್ಟಿತು. ಪೈನ್ ಮರಗಳಿಂದ ಕೂಡಿದ ಈ ಜಾಗ ಮನಸಿಗೆ ಆಹ್ಲಾದಕರ.
ಅಲ್ಲಿಂದ ಹಿಮಾಲಯದಲ್ಲಿ ಮಾತ್ರ ವಾಸವಿರುವ ವಿಶಿಷ್ಟ ಪ್ರಾಣಿಗಳ ಸಂಗ್ರಹಾಲಯಕ್ಕೆ ಭೇಟಿ ಕೊಟ್ಟು ಅಚ್ಚರಿ ಪಟ್ಟೆವು. ಹಿಮ ಚಿರತೆ, ಟಿಬೆಟಿನ್ ತೋಳ, ಹಿಮ ನಾಯಿ, ನೀಲಿ ಕುರಿ( ಬ್ಲೂ ಶೀಪ್, ಹೆಸರು ಮಾತ್ರ ನೀಲಿ) ಹುಲಿ ಮುಂತಾದ ಪ್ರಾಣಿಗಳನ್ನು ಮಾತನಾಡಿಸಿಕೊಂಡು ಬಂದೆವು! ಹುಲಿಯಂತೂ ನಮ್ಮ ಹತ್ತಿರವೇ ಬಂದುದರಿಂದ ಅದರ ಅಗಾಧತೆಯನ್ನು ನೋಡಿ ನಿಬ್ಬೆರಗಾದೆವು.
ಗೂಮ್ ರೈಲು ನಿಲ್ದಾಣದಲ್ಲೊಂದು ಸುತ್ತು...
ವಸಾಹುತು ಶಾಹಿ ಬ್ರಿಟಿಷ್ ಆಡಳಿತ ತಮ್ಮ ಅನುಕೂಲಕ್ಕೆ 1879 ರಲ್ಲಿ ಸ್ಥಾಪಿಸಿದ 610 ಮಿ. ಮೀಟರ್ ನ ನ್ಯಾರೋಗೇಜ್ ರೈಲು ಇಲ್ಲಿನ ವಿಶೇಷ. ಡಾರ್ಜಲಿಂಗ್ ಮತ್ತು ಕಣಿವೆ ತಳದ ಜಲಪಾಯಿಗುಡಿ ನಡುವೆ ಇದು ಓಡಾಡುತ್ತದೆ. ಬಟೇಸಿಯಾ ಲೂಪ್ಗೆ ರೈಲು ಬಂದು ಒಂದು ಸುತ್ತು ಹಾಕಿ ಹೋಗುತ್ತೆ. ಇಲ್ಲಿ ಸೈನಿಕ ಸ್ಮಾರಕ ನಿಮರ್ಿಸಲಾಗಿದೆ. ಒಬ್ಬರಿಗೆ ಬರೋಬ್ಬರಿ 1200 ರೂಪಾಯಿ! ಮೋಡವಿಲ್ಲದ ದಿನಗಳಲ್ಲಿ ಇದರ ಪ್ರಯಾಣಾನುಭೂತಿ ಅದ್ಭುತ! ಕೆಲವು ದಿನಗಳಲ್ಲಂತೂ ಮಂಜಿನ ಮೇಲೆ ತೇಲಿದ ಅನುಭವ! ಕಾಂಚನಜುಂಗವನ್ನು ನೋಡುತ್ತಾ ಜೊತೆ ಜೊತೆಗೆ ಪಯಣಿಸುವ ಅನುಭವವೇ ಅನನ್ಯ. ರೈಲು ತುಲುಪುವ 'ಗೂಮ್' ರೈಲು ನಿಲ್ದಾಣ ವಿಶ್ವದ ಎರಡನೆಯ ಅತಿ ಎತ್ತರದ ರೈಲು ನಿಲ್ದಾಣ! ಭಾರತದ ಅತಿ ಎತ್ತರದ ನಿಲ್ದಾಣ ಎನಿಸಿಕೊಂಡ ಇದು ಸಮುದ್ರ ಮಟ್ಟದಿಂದ ಬರೋಬ್ಬರಿ 7,407 ಅಡಿ ಎತ್ತರದಲ್ಲಿದೆ. ಬಿಸಿಲ ಕೋಲುಗಳ ಬೀಳುವ ಬೆಳಗಿನ ಹೊತ್ತೇ ಮಂಜಿನ ರಗ್ಗ ಹೊದ್ದು ಕುಳಿತಿತ್ತು. ಬಣ್ಣ ಬಳಿದುಕೊಂಡ ತರುಣ, ತರುಣಿಯರ ತಂಡ ನಮ್ಮ ಸ್ವಾಗತಕ್ಕಿದ್ದರು! ಬೀಡಿ ಸೇದಿದಂತೆ ಹೊಗೆಯುಗುಳುವ ವಯಸ್ಸಾದಂತೆ ಭಾಸವಾಗುವ ಬೋಗಿಗಳು ನಿಂತಿದ್ದವು. ನಿಲ್ದಾಣದ ಸನಿಹದಲ್ಲೇ ವಿಶೇಷ ರೈಲು ಸಂಗ್ರಾಹಲಯ. ಅಲ್ಲಿಗೆ ಹಣಿಕೆ ಹಾಕಿ ಬಂದೆವು. ಬೆಟ್ಟದ ರೈಲಿನ (Mountain railway) ಸಂಪೂರ್ಣ ಚರಿತ್ರೆಯ ಪರಿಚಯವಾಯ್ತು.
ಸಮ್ಟಿನ್ ಚೋಲಿಂಗ್ ಬುದ್ದಿಷ್ಟ್ ಮಾನೆಷ್ಟ್ರಿಗೆ....
ಮಂಜಿನಿಂದ ಆಗಷ್ಟೇ ಎದ್ದ ಮಾನೆಷ್ಟ್ರಿ ನಮ್ಮನ್ನು ನೋಡಿ ನಗುತಲಿತ್ತು. ಬುದ್ದ ನಡೆದಾಡಿದ ನಾಡು. ಮಾನೆಸ್ಟ್ರಿಗಳ ಬೀಡು. ಇಲ್ಲಿನ ವಿಚಿತ್ರ ವಿಶಿಷ್ಟ ಪದ್ದತಿಗಳು ಜಗತ್ತಿನ ಯಾವ ಭಾಗದಲ್ಲೂ ಕಾಣಲಾರೆವು. ದಾರಿಗುಂಟ ಶಾಲ್ ಮಾರುವವರು, ನೆಪಾಳಿ ಕುರ್ಫಿ (ಒಂದು ವಿಧಧ ಕತ್ತಿ) ಮಾರುವವರ ಮೆರವಣಿಗೆ. ಇವರನ್ನೆಲ್ಲಾ ದಾಟಿ ಬುದ್ಧನಿದ್ದಲ್ಲಿಗೆ ಹೋದರೆ ಮನಸ್ಸು ಹೊರಗಿನ ಭಿನ್ನ ಕುಸುರಿ ಕಲೆ ಇದ್ದ ಕುರ್ಫಿಯ ಮೇಲೆ. ಕೊನೆಗೊಂದು ಕುರ್ಫಿ ಕೊಂಡು ಮನಸ್ಸಿಗೆ ಸಮಾಧಾನ ಮಾಡಿದೆ! ಮನೆಯ ಗೋಡೆಯ ಮೇಲೆ ರಾರಾಜಿಸಿದ ಆ ಕುರ್ಫಿ ಡಾರ್ಜಲಿಂಗ್ನ ನೆನಪಿನ ಚಿತ್ತಾರ ತರುತ್ತಲೇ ಇದೆ. ವಿಮಾನದೊಳಗೆ
ಕುರ್ಪಿಯನ್ನು ಒಯ್ಯಲು ಬಿಡುವುದಿಲ್ಲವೆಂದರಿತ ನಂತರ ಸಮಸ್ಯೆ ಮತ್ತಷ್ಟು ಹೆಚ್ಚಾಯಿತು! ಬಂಗಾಳಿ ಗೆಳೆಯನಿಗೆ ಕುರ್ಪಿಯನ್ನು ದಾಟಿಸಿ ಕೊರಿಯರ್ ಮಾಡಲು ತಿಳಿಸಿ ಬಚಾವಾದೆ. ಕ್ಷಮಿಸಿ ಮಾನೆಷ್ಟ್ರಿ ಬಗ್ಗೆ ಹೇಳಲೇ ಇಲ್ಲ! ಸಾಕಷ್ಟು ವಿಶಾಲ ಒಳಾಂಗಣ ಮತ್ತು ದೊಡ್ಡ ಶಾಂತ ಬುದ್ಧನ ವಿಗ್ರಹ ಗಮನ ಸೆಳೆಯಿತು. ಜೊತೆಗೆ ದುಡ್ಡು ಹಿಡಿದು ನಗುವ ಪುಟಾಣಿ ಬುದ್ಧ ವಿಗ್ರಹ
ಜೊತೆಯಲ್ಲಿತ್ತು.
ಕೆಲವು ಭಕ್ತಾದಿಗಳು ಬುದ್ದನಿಗೆ '7 ಅಪ್'ನ್ನು ಅರ್ಪಣೆ ಮಾಡಿದ್ದು ವಿಚಿತ್ರವೆನಿಸಿತು. ಒಳಗೋಡೆಯ ಮೇಲೆಲ್ಲಾ ಚಿತ್ತಾಕರ್ಷಕ ಬುದ್ದನ ಕತಾ ಚಿತ್ರಗಳು. ನೋಡಲು ಏನಿಲ್ಲವೆಂದರೂ ಅರ್ಧ ದಿನವೇ ಬೇಕು. ಬುದ್ಧನ ಜೊತೆಗೆ ಧ್ಯಾನಿಸಿ, ಧರ್ಮ ಚಕ್ರ ತಿರುಗಿಸಿ ಪ್ರಾರ್ಥನೆ ಸಲ್ಲಿಸಿದೆವು. ಭಾಷೆಯ ತೊಂದರೆಯಿಂದ ಹೆಚ್ಚೇನು ಕೇಳದೆ ಬೌದ್ಧ ಸ್ತೂಪ ನೋಡಲು ಅಲ್ಲಿಂದ ಹೊರಟು ನಿಂತೆವು.
ಶ್ರೀಧರ್. ಎಸ್. ಸಿದ್ದಾಪುರ
Sunday, August 4, 2019
2019 ರಲ್ಲಿ ನಿಂತು 1970ಕ್ಕೆ ಹಣಕಿ ಹಾಕಿದಾಗ!
ಅರೆ ಇದೇನಿದು ವಿಚಿತ್ರವಾಗಿದೆಯಲ್ಲಾ. ಇದೂ ಸಾಧ್ಯನಾ?! ಮೊನ್ನೆಯಷ್ಟೆ ಮಹಾರಾಷ್ಟ್ರದ ಮಹಾಡ್ ಹಳ್ಳಿಗೆ ಭೇಟಿ ಇತ್ತಿದ್ದೆ. ಆಗ ನನಗೆ ಹಾಗನ್ನಿಸಿತು.
ನಮ್ಮ ಗುರಿ ಇದ್ದದ್ದು ಶಿವಾಜಿಯ 'ರಾಯ್ಗಢ್' ಕೋಟೆ ನೋಡೋದು. ಮಹಾಡ್ನಿಂದ ರಾಯ್ ಗಢ್ ಬರೀ 25 ಕಿ. ಮೀ. ಮಹಾಡ್ ಮಹಾರಾಷ್ಟ್ರದ ತಾಲೂಕು ಕೇಂದ್ರ. ಪುಣೆಯ ಬಸ್ ನಿಲ್ದಾಣದಿಂದ ಬರೋಬ್ಬರಿ 4 ಗಂಟೆಯ ದಾರಿ. ದಾರಿ ನಡುವೆ ತಿಂದ ಇಡ್ಲಿ ಮತ್ತು ಪೋಹಾ (ಅವಲಕ್ಕಿ) ದಿಂದಾಗಿ ಹೊಟ್ಟೆ ಸುಮ್ಮನಿತ್ತು. ಕರ್ನಾಟಕದಂತೆ ಎತ್ತರ ಎತ್ತರ ಬೆಳೆಯುವ ಮರಗಳಿಲ್ಲದ ಕಾಡು, ನಮ್ಮಷ್ಟು ದಟ್ಟವಲ್ಲದ ಪಶ್ಚಿಮಘಟ್ಟಗಳು. ದಾರಿ ನಡುವೆ ಒಂದೆರೆಡು ಝರಿಗಳು ಕಾಣ ಸಿಕ್ಕವು. ನೀರಿಲ್ಲದೆ ಖಾಲಿ ಹೊಡೆಯುತ್ತಿರುವ ಒಂದೆರಡು ಡ್ಯಾಂ ನೋಡುತ್ತಾ, ಸಹ್ಯಾದ್ರಿಯ ಗಿರಿ ಶಿಖರಗಳ ಬಳಸಿ ನಮ್ಮ ಬಸ್ ಸುಮಾರು 11 ಕ್ಕೆ ಮಹಾಡ್ ತಲುಪಿತು.
ಎಡಕ್ಕೆ ಹರಡಿದ ಸಹ್ಯಾದ್ರಿಯ ನೋಟವಂತೂ ಮನೋಹರ. ನಡು ನಡುವೆ ರಸ್ತೆ ಹದಗೆಟ್ಟಿತ್ತು. ಜೊತೆಗೆ ನಿದ್ದೆಗೆಟ್ಟ ರಾತ್ರಿ ಪ್ರಯಾಣ ಇನ್ನಷ್ಟೂ ಹದಗೆಡಿಸಿತು!
ಇಲ್ಲಿನ ಸರಕಾರಿ ಬಸ್ ವ್ಯವಸ್ಥೆ, ಬಸ್ ನಿಲ್ದಾಣಗಳನ್ನು ಕಂಡಾಗ ನಾವು 70ರ ದಶಕದಲ್ಲಿದ್ದೇವೆ ಎನಿಸಿತು. ಕಿತ್ತು ಹೋದ ಬಸ್ ನಿಲ್ದಾಣ! ಯಮ ವೇಗದಲ್ಲಿ ಓಡುವ ಗುಜರಿ ಬಸ್ಗಳು! ಬಸ್ನೊಳೆಗೆ ಗಂಟೆಯೊಂದನ್ನು ಹಾಕಿದ್ದರು! ಅದಕ್ಕೆಂದು ಸರಿ ಹೊಂದಿಸಿದ ದಾರ ಎಳೆದು ಬಸ್ ನಿಲ್ಲಿಸಬೇಕಿತ್ತು! ಕೇರಳಕ್ಕೆ ಹೋದಾಗಲೂ ಹೀಗೊಂದು ವ್ಯವಸ್ಥೆ ಕಂಡು ಅಚ್ಚರಿ ಪಟ್ಟು ಮೂಕವಿಸ್ಮಿತನಾಗಿದ್ದೆ. 1970ರ ಶೈಲಿಯ ಕಂಡಕ್ಟರ್ನ್ನ ಧಿರಿಸು. ಕಚ್ಚೆ ಸೀರೆ ಧರಿಸಿ ಮಸ್ತ್ ಆಗಿ ಓಡಾಡೋ ಮಹಿಳೆಯರು! 30 ರೂಪಾಯಿಗೆ ಸಿಗುವ ಪೊಗದಸ್ತಾದ ಭೋಜನ. ಕಮಲದ ದಂಟು, ನೇರಳೆ ಹಣ್ಣಿನಿಂದ ಹಿಡಿದು ಮಾರಲು ಇಟ್ಟ ಥರಾವರಿ ಕಂಡರಿಯದ ದೇಸಿ ವಸ್ತುಗಳು. ಹೀಗೆ ಪೇಟೆಯೇ ಒಂದು ವಿಚಿತ್ರ ಸಂತೆಯಂತೆ ನನಗನ್ನಿಸಿತು. ಒಂದು ಬಸ್ ಬಂದರೆ ಮುಳುಗಿ ಹೋಗುವಷ್ಟು ಧೂಳು. ಒಂದೆರಡು ಅಂಗಡಿ ಮುಂಗಟ್ಟುಗಳನ್ನು ಬಿಟ್ಟರೆ ಉಳಿದವೆಲ್ಲಾ ಹಳೆ ಹಳೆ ಕಾಲದವು. ನಿಮಗೂ ಹಾಗನ್ನಿಸದೇ ಇರದು ಬಿಡಿ. ಆದರೂ ಅದೇಕೋ ತುಂಬಾ ಇಷ್ಟವಾಯಿತು. ನಿಮಗೂ ಇಷ್ಟವಾಯಿತಾ? ನಮಗೂ ಒಮ್ಮೆ ನಿಜವಾಗಿ 1970ರದ್ದೊ 1000 ನೇ ಇಸವಿಯ ಜನ ಜೀವನ ಹಣಕಿ ಹಾಕುವಂತಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೆಂದುಕೊಳ್ಳುತ್ತಾ ಈ ಲೇಖನಕ್ಕೆ ಪೂರ್ಣ ವಿರಾಮ ವಿಡುತ್ತೇನೆ. ನಿಮಗೂ ಇಷ್ಟವಾದರೆ ತಿಳಿಸಿ.
Friday, July 5, 2019
ಇತಿಹಾಸದ ರಕ್ತ ಸಿಕ್ತ ಪುಟ...
ಜನರ ಖುಷಿ ಕಸಿದ ಸುಲ್ತಾನ.....
ಪ್ರಭುತ್ವ ಯಾವುದೇ ಇರಲಿ ಜನರ ನಡುವೆ ಬೆಸುಗೆಯಂತಿರಬೇಕು. ದ್ವಾರ ಸಮುದ್ರದಿಂದ ಆಳಿದ ಹೊಯ್ಸಳರು ಬರೋಬ್ಬರಿ 108 ದೇವಾಲಯ ನಿರ್ಮಿಸಿದ್ದಾರೆಂದು ಮೊನ್ನೆ ಮೊಸಳೆ ಹೊಸಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ತಿಳಿಯಿತು. 12 ನೆಯ ಶತಮಾನ ಅನೇಕ ಸಂಘರ್ಷಗಳಿಗೆ ಕಾರಣವಾಗಿದೆ ಎಂದು ಆ ಹಿರಿಯರು ಅರುಹಿದರು. ಅದರಲ್ಲೂ ಶೈವ ಮತ್ತು ವೈಷ್ಣವರ ನಡುವೆ ತೀವ್ರ ತರಹದ ಪೈಪೋಟಿ ಇದ್ದ ಕಾಲ. ಅಂತಹ ಕಾಲದಲ್ಲಿ ಪ್ರಭುತ್ವವು ಶೈವ ಮತ್ತು ವೈಷ್ಣವ ದೇವಾಲಯ ಒಟ್ಟೊಟ್ಟಿಗೆ ನಿರ್ಮಿಸಿ ಅವರ ನಡುವೆ ಬಂಧವೇರ್ಪಡುವಂತೆ ಮಾಡಿದ ಸಾಕ್ಷಿಯಾಗಿ ನಿಲ್ಲುತ್ತೆ. ನಾಗೇಶ್ವರ ದೇವಾಲಯ, ಚೆನ್ನಕೇಶ್ವರ ದೇವಾಲಯ ಹೊಯ್ಸಳ ಚಕ್ರವತರ್ಿ ವಿಷ್ಣುವರ್ಧನನವರ ಪರ ಮತ ಸಹಿಷ್ಣುತೆಗೆ ಸಾಕ್ಷಿ. ವೈಷ್ಣವನಾಗಿದ್ದರೂ(ಮೂಲ ಮತ ಜೈನ) ವಿಷ್ಣು ದೇವಾಲಯದ ಸನಿಹದಲ್ಲೇ ಶೈವ ದೇವಾಲಯಗಳನ್ನು ನಿಮರ್ಿಸಿದ್ದಾನೆ. (ಮೊಸಳೆ ಹೊಸಳ್ಳಿ, ಹಾಸನ ಜಿಲ್ಲೆ) ಊರಿನ ಹೆಸರಿನ ಹಿಂದೆ ಒಂದು ಸುಂದರ ಕತೆ ಇದೆ! ಅದನ್ನು ಮುಂದೆಂದಾದರು ಹೇಳುವೆ. ಆದರೂ ನಮಗೆ ವಿಷ್ಣುವರ್ಧನನಂತವರು ಆದರ್ಶ ವ್ಯಕ್ತಿಯಾಗಲಾರ! ವಿರ್ಪಯಾಸ. ಈ ರೀತಿಯ ಅನೇಕ ಉದಾಹರಣೆಗಳು ನಮಗೆ ಚರಿತ್ರೆಯಲ್ಲಿ ಕಾಣ ಸಿಗುತ್ತದೆ. ಇಂತಹ ಸೌಹಾರ್ದ ಪೂರ್ಣ ಸಂಗತಿಯೊಂದಿಗೆ ಇತಿಹಾಸದ ಕರಾಳ ಕರಿ ಮಗ್ಗುಲ್ಲೊಂದು ತಿಳಿದುದು ಕಾಲನ ಚೋದ್ಯವೇ.
ಇಷ್ಟೆಲ್ಲಾ ನೆನಪಾಗಲು ಕಾರಣ ಇತ್ತಿಚೆಗಷ್ಟೆ ಮೇಲುಕೋಟೆಗೆ ಹೋಗಿದ್ದೆ. ಅಲ್ಲಿನ ಬೀದಿಗಳಲ್ಲಿ ತಿರುಗುತ್ತಾ ಇದ್ದಾಗ ಹೊಸ ಅಚ್ಚರಿಯ ವಿಷಯವೊಂದು ತಿಳಿಯಿತು. ಇಲ್ಲಿನವರು ದೀಪಾವಳಿಯನ್ನು ಆಚರಿಸುದಿಲ್ಲವೆಂಬುವುದು! ಬೆಳಕಿನ ಹಬ್ಬವನ್ನೇ ಬೇಡವೆನಲು ಕಾರಣವೇಕೆಂದು ಕೆಲವರಲ್ಲಿ ವಿಚಾರಿಸಿದೆ. ಕೆದುಕಿದಾಗ ಕರಳು ಹಿಂಡುವ ಕರುಣಾಜನಕ ಕತೆಯೊಂದು ಹೊರ ಬಂತು. ನಾವೆಲ್ಲಾ ಶಾಲೆಯಲ್ಲಿ ಕಲಿಯುತ್ತಿರುವಾಗ 'ಹುಲಿ', ಬಭಯಂಕರ ಶೂರ ಎಂದು ಕರೆಸಿಕೊಂಡಿದ್ದ ಟಿಪ್ಪು ಸುಲ್ತಾನ್ 1790ರಂದು ಇಲ್ಲಿನ 800 ಜನರನ್ನು ದೀಪಾವಳಿಯ ದಿನವೇ ಮಾರಣ ಹೋಮ ಮಾಡಿದ್ದ! ಅಲ್ಲಿಂದೀಚೆಗೆ ಮೂಲ ಮೇಲುಕೋಟೆಯ ಮಂದಿ ದೀಪಾವಳಿ ಆಚರಿಸಿದ್ದಿಲ್ಲ. ಎಂದರು ಮೇಲುಕೋಟೆಯ ಹಿರಿಯರೊಬ್ಬರು. ಅವರ ಮಾಹಿತಿ ನಿಜವೇ ಎಂದು ವಿಕೀಪೀಡಿಯದಲ್ಲಿ ಹುಡುಕಿದೆ. ವಿಕೀಪೀಡಿಯಾವು ಅದನ್ನು ಪುಷ್ಟೀಕರಿಸಿತು!
ಇವನನ್ನೇ ಮಾಸ್ ಹೀರೋನಂತೆ ಚಿತ್ರಿಸುತ್ತಾ, ಜ್ಞಾನ ದೇಗುಲಗಳಿಗೂ ಈ ಅಸಹಿಷ್ಣು ರಾಜನ ಹೆಸರಿಡಲು ಹೊರಟು, ಮುಗ್ದ ಜನರ ಮಾರಣ ಹೋಮ ಮಾಡಿದವರ ಮೆದುಳೇ ಕಣ್ಮುಂದೆ ಸುಳಿಯುತ್ತೆ. ಇವನದು ಒಂದೆರಡು ಬಾನಗಡಿಗಳಾಗಿದ್ದರೆ ಸುಮ್ಮನಿರಬಹುದಿತ್ತು. ಆದರೆ ಕೆದಕಲು ಹೋದರೆ ಸಿಗುವ ವೃತ್ತಾಂತ ನೂರಾರು! ಇದೊಂದು ಸ್ಯಾಂಪಲ್ ಅಷ್ಟೇ.
ವಿಕೀಪಿಡಿಯಾದಲ್ಲೂ ಈ ಮಾಹಿತಿ ಇದೆ. ಆಸಕ್ತರು ಓದಲು ಕೆಳಗಿನ ಲಿಂಕ್ ಬಳಸಿ.
ಶ್ರೀಧರ್. ಎಸ್. ಸಿದ್ದಾಪುರ.
https://en.wikipedia.org/wiki/Melukote
History[edit]
People of Melkote do not celebrate Deepawali (the festival of lights) till date since November 10th 1790 (Naraka Chaturdashi). It was the date when Tipu Sultan slaughtered in many cruel ways more than 800 Mandyam Iyengars of this town. People of Melukote thus do not celebrate Deepawali but mourn on the festival of lights every year.[2]
Friday, June 21, 2019
ಚಿರಾಪುಂಜಿಯ ಚಿರ ಯೌವನೆ ನೊ ಕಲಿ ಕೈ ಜಲಧಾರೆ
ಏಕಾಂಗಿಯಾಗಿ ಚಿರಾಪುಂಜಿಯ ಖಾಸಿ ಬೆಟ್ಟಗಳ ನಡುವೆ ಹರಿವ ನೊ ಕಲಿ ಕೈ ಜಲಧಾರೆಗೆ ಹೊರಟು ನಿಂತಾಗ ಹೊಟ್ಟೆಯೊಳಗೂ ಸಣ್ಣ ಚಳಿ ಹಾಸಿಗೆ ಬಿಡಿಸಿತ್ತು! ಆದರೂ ರಸ್ತೆ ಗುಂಟ ಹೊದ್ದು ಮಲಗಿದ್ದ ಮಂಜಿನ ಪರದೆ, ರಸ್ತೆ ಇಕ್ಕೆಲಗಳಲ್ಲಿ ಹಾಸಿದ್ದ ಚೆರ್ರಿ ಹೂ ಪಕಳೆಯ ಸ್ವಾಗತ ಸ್ವಲ್ಪ ಧೈರ್ಯ ಕೊಟ್ಟಿತ್ತು. ಸೂಚಿಪರ್ಣ ಕಾಡುಗಳ ನಡುವೆ ಚುಚ್ಚುವ ಸೂಜಿಯಂತಹ ಚಳಿ. ಶಿಲ್ಲಾಂಗಿನಿಂದ ಬರೋಬ್ಬರಿ 54 ಕಿಲೋ ಮೀಟರ್ ಪಯಣ. ಕಾಡ ನಡುವೆ ಹೊಟ್ಟೆ ಪೂಜೆಗೆ ಡಾಬಾ ಒಂದರಲ್ಲಿ ಕಾರ್ನ್ನು ನಿಲ್ಲಿಸಿದೆವು. ಪರೋಟ ಮತ್ತು ವಿಶಿಷ್ಟ ರುಚಿಯ ಪಕೋಡ ಹೊಡೆದು ಹೊರಟೆವು.
ದಾರಿಗುಂಟ ಸಾಲು ಸಾಲು ಜಲ ಕನ್ನಿಕೆಯರು ಕಲಶ ಹಿಡಿದು ನಿಂತಿದ್ದರು! ಸಾಲು ಕನ್ನಿಕೆಯರಲ್ಲಿ ಯಾರನ್ನು ನೋಡುವುದೆಂಬುದೇ ತೋಚದ ಸ್ಥಿತಿ. ಬೆಟ್ಟಗಳ ಬಯಲಿನಲಿ ನುಗ್ಗಿ ನೋಡುವ ಧಾವಂತ. ಬೆಟ್ಟಗಳ ಬಯಲಲಿ ಇಂಗಿ ಇಳಿದು ಸೃಜಿಸುವ ಸ್ಫಟಿಕ ಶುಭ್ರ ಹನಿಗಳ ಸಿಂಚನ ಮನಮೋಹಕ. ರೆಪ್ಪೆ ಮಿಟುಕಿಸಿದರೆ ತಪ್ಪಿ ಹೋಗುವ ದೃಶ್ಯ ಕಾವ್ಯ. ಇಲ್ಲಿ ಮಳೆಗಾಲದಲ್ಲಿ ಪ್ರತಿ ಬೆಟ್ಟಗಳ ಮೇಲೂ ಎಣಿಸಲಸದಳ ಜಲ ಕನ್ನಿಕೆಯರ ಮೆರವಣಿಗೆ ನಡೆಯುತ್ತೆ.
ವಿಶಾಲ ಬೆಟ್ಟಗಳ ಬಯಲು ದಾಟಿ ಮುಂದಡಿ ಇಟ್ಟರೆ ಸಿಗುವ ಸಾಲು ಸಾಲು ಅಂಗಡಿ. ಸ್ಥಳೀಯ ಮಸಾಲೆ ಪದಾರ್ಥ ಮಾರುವ ಹೆಂಗಸರು. ತರೇವಾರಿ ಅಳತೆಯ ಬಿದಿರ ಬುಟ್ಟಿಗಳು, ಬಿದಿರ ಬುಟ್ಟಿಯ ಕೀ ಚೈನುಗಳು!, ಬಿದಿರ ಪಸರ್ುಗಳು ವಿವಿಧ ಬಿದಿರಿನಿಂದ ಮಾಡಿದ ಅಲಂಕಾರಿಕ ವಸ್ತುಗಳು. ನಾನು ಅವುಗಳ ಸೂಕ್ಷ್ಮತೆಗೆ ಸೂರೆ ಹೋದೆನು. ಅಂತಹ ಕಲಾತ್ಮಕತೆ! ಇವುಗಳ ನಡುವೆ ಧುಮುಕುವ ಮೇಘಾಲಯದ ಚಿರಾಪುಂಜಿಯ ಚಿರ ಯೌವನೆ ನೊಹ ಕಲಿಕೈ ಜಲದಾರೆ. ಸದಾ ಕಣಿವೆಯ ಮಂಜಿನೊಂದಿಗೆ ಚಕ್ಕಂದಕ್ಕಿಳಿಯುವ ಜಲಧಾರೆ. ಸ್ಥಳೀಯರಿಟ್ಟ ಹೆಸರು ಸೊಹ್ರಾ. ಕ್ಷಣ ಕ್ಷಣಕೂ ಮಂಜು ತನ್ನ ಮಡಿಲಿನಲಿ ಜಲಧಾರೆಯನ್ನು ಮುಚ್ಚಿಟ್ಟುಕೊಳ್ಳುವ ಈ ಸುಂದರ ಜಲರಾಶಿಯ ಹಿಂದೆ ಕರುಣಾಜನಕ ಕತೆ ಇದೆ.
'ಕಲಿಕೈ'ಯ ಕರುಣಾ ಜನಕ ಕತೆ-
ಕಲಿಕೈ ಎಂಬ ಸುಂದರ ಯುವತಿ ತನ್ನ ಗಂಡನೊಂದಿಗೆ ಇಲ್ಲಿ ವಾಸವಾಗಿದ್ದಳು. ಅವಳ ಗಂಡ ಅಶಿಸ್ತಿನ ಮನುಷ್ಯನೂ, ಕುಡುಕನು, ಪತ್ನಿ ಪೀಡಕನೂ ಆಗಿದ್ದ. ಆಕೆಗೆ ಮುದ್ದಾದ ಪುಟ್ಟ ಹೆಣ್ಣು ಮಗುವಿತ್ತು. ಆಕೆಯೊಮ್ಮೆ ಕೆಲಸಕ್ಕೆ ಹೊರಗೆ ಹೋಗಿದ್ದಳು. ವಾಪಾಸು ಬಂದಾಗ ಪತಿಯೇ ಅಂದು ಅಡುಗೆ ಮಾಡಿದ್ದ! ಅವಳಿಗೆ ಅಚ್ಚರಿಯಾಗಿತ್ತು. 'ಮಗು ಜೋಲಿಯಲ್ಲಿ ಮಲಗಿದೆ, ಸುಸ್ತಾಗಿದೆ ನಿನಗೆ, ಊಟ ಮಾಡು' ಎಂದ. ಊಟದ ನಡುವೆ ಬಟ್ಟಲಿನಲ್ಲಿ ಆಕೆಗೆ ಪುಟ್ಟ ಉಗುರುಗಳು ಸಿಕ್ಕವು. ಅನುಮಾನ ಬಂದು ಮಗುವೆಲ್ಲಿ ಎಂದು ಕೇಳಿದಳು. ಪತಿ ತಬ್ಬಿಬ್ಬಾದ. ತಾನು ಉಂಡಿದ್ದು ತನ್ನ ಮಗುವಿನ ಮಾಂಸವೆಂದು ತಿಳಿದದ್ದೇ ಆಕೆ ಕಾಳಿಯಾದಳು. ತಾಯಿಯಾದವಳಿಗೆಂತಹ ದಾರುಣ ಸ್ಥಿತಿ. ಗಂಡನನ್ನು ಕೊಂದು ಈ ಜಲಧಾರೆಯ ನೆತ್ತಿಯಿಂದ ಧುಮುಕಿ ಜೀವ ಕೊಟ್ಟಳು. ಅಂದಿನಿಂದ ಈ ಜಲಧಾರೆ ನೊಹ ಕಲಿಕೈ ಎಂಬ ಅವಳ ಹೆಸರಿನಿಂದ ಹೆಸರಾಯಿತು, ಎಂದು ಜನಪದೀಯ ಕತೆಯೊಂದನ್ನು ಸ್ಥಳೀಯರು ಅರುಹಿದರು.
ಸುಮಾರು 340 ಅಡಿಯಿಂದ ಧುಮುಕುವ ಇದರ ಸೌಂದರ್ಯ ಪದಗಳಲ್ಲಿ ಹಿಡಿದಿಡಲಾರದ್ದು. ಸ್ವಟಿಕ ಶುಭ್ರ ಹಸಿರು ವರ್ಣ ಲೇಪಿತ ನೀರು! ಆ ಎತ್ತರದಿಂದ ಬಳಕುತ್ತಾ ಧುಮುಕುವ ಇವಳು ಕಾಡನ್ನೆಲ್ಲಾ ಸುತ್ತಿ ಕೊನೆಗೆ ಬ್ರಹ್ಮಪುತ್ರ ನದಿಗೆ ಸೇರುವಳು. ಕ್ಷಣಗಳಷ್ಟೇ ದರುಶನ ಭಾಗ್ಯ. ಮಂಜಿನ ಪರೆದೆ ಯಾವಾಗ ಮುಚ್ಚಿ ಬಿಡುವುದೋ ತಿಳಿಯದು. ಬೆಳಗಿನ ಹೊತ್ತು ಇಲ್ಲಿಗೆ ಭೇಟಿ ಕೊಡುವುದು ಬಹಳ ಉತ್ತಮ. ಮಳೆಗಾಲದಲ್ಲಿ ಇದರ ಸೊಬಗೇ ಬೇರೆ. ಮೇ ನಿಂದ ನವೆಂಬರ್ ಭೇಟಿ ಕೊಡಲು ಸೂಕ್ತ ಸಮಯ. ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿ ತರೇವಾರಿ ತಿನಿಸುಗಳಿವೆ. ರಸ್ತೆಯುದ್ದಕ್ಕೂ ಊಟಕ್ಕೆ ಅನೇಕ ಹೋಟೆಲ್ಗಳಿವೆ. ನಾನು ಊಟ ಮಾಡಿದ ಹೋಟೆಲ್ ಗ್ರೀನ್ ಆಕರ್ಿಡ್ ಅದ್ಭುತವಾಗಿತ್ತು. ಇಲ್ಲಿನ ವಿಚಿತ್ರ ರುಚಿಯ ಚಟ್ನಿ ನನ್ನ ನಾಲಗೆ ತುದಿಯಲ್ಲಿ ಇನ್ನೂ ಜೀವಂತ!
'ಮಾವುಜ್ರಂಗ್' ಎಂಬ ಸ್ವಚ್ಚ ಊರನ್ನು ಹಾದು ಬರುವಾಗ ನನಗೆ ಕನರ್ಾಟಕದ ಬೀದಿಗಳೊಮ್ಮೆ ಕಣ್ಮುಂದೆ ಬಂದವು. ಇಲ್ಲಿನ ಪರಿಸರ ನಮಗೆ ಪರ ಲೋಕಕ್ಕೆ ಬಂದಂತೆ ಭಾಸವಾಗುತ್ತಿತ್ತು! ದಾರಿಗುಂಟ ಹುಡುಕಿದರೂ ಒಂದು ಸಣ್ಣ ಪ್ಲಾಸ್ಟಿಕ್ ಕಸ ನಿಮಗೆ ಸಿಗದು! ಮನೆಯ ಎದುರಿನ ಜಾಗವಲ್ಲದೇ ಪಕ್ಕದ ಮನೆಯವರೆಗೆ ಗುಡಿಸಿ ಸ್ಪಟಿಕ ಶುಭ್ರವಾಗಿಸುವ ಇವರ ಪರಿಸರ ಪ್ರೇಮ ಮೆಚ್ಚಲೇಬೇಕು! ರಸ್ತೆ ಗುಡಿಸುವ ಅನೇಕ ಸ್ಥಳೀಯರನ್ನು ಇಲ್ಲಿ ಕಂಡೆ. ಎಷ್ಯಾದಲ್ಲೇ ಸ್ವಚ್ಚ ಹಳ್ಳಿ ಪುರಸ್ಕಾರ ಪಡೆದಿರುವ 'ಮವುಲಿನ್ನೋಂಗ್' (Mawlynnong) ಶಿಲ್ಲಾಂಗ್ನಿಂದ ಕೂಗಳತೆಯ ದೂರದಲ್ಲಿದೆ.
ಇಲ್ಲಿನ ಬೆಟ್ಟಗಳನ್ನು ಎಲ್ಲೆಲ್ಲೂ ಕೊರೆದ ಸುಣ್ಣದ ಕಲ್ಲಿನ ಗುಹೆಗಳು, ಅಲ್ಲಿ ಕೆಲಸ ಮಾಡುವ ಕಾಮರ್ಿಕರು ನಮಗೆ ಕಾಣ ಸಿಗುತ್ತಾರೆ. ಜೊತೆಗೆ ಜಲ್ಲಿ ಕಲ್ಲಿನ ಕ್ವಾರಿಗಳೂ. ಹೀಗೆ ಮುಂದುವರಿದರೆ ಇನ್ನೊಂದು ಹತ್ತು ವರ್ಷಕ್ಕೆಲ್ಲಾ ಬೆಟ್ಟಗಳೆಲ್ಲಾ ಬಯಲಾಗಿ ಬಿಡುವುದರಲ್ಲಿ ಸಂಶಯವಿಲ್ಲ! ಸನಿಹದ ಸಿಮೆಂಟ್ ಕಾಖರ್ಾನೆಗೆ ಇಲ್ಲಿಂದಲೇ ಸುಣ್ಣದ ಕಲ್ಲು ಸರಬರಾಜಾಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಚಿರಾಪುಂಜಿಯ ಸುಮನೋಹರ ಬೆಟ್ಟಗಳನ್ನು ಬಲಿಕೊಡುವುದು ಎಷ್ಟು ಸರಿ? ಎಂಬ ಜಿಜ್ಞಾಸೆ ನನ್ನನ್ನು ಕಾಡುತ್ತಲೇ ಇದೆ. ಈ ಜಲಧಾರೆಯ ನೋಡಿ ಸನಿಹದ 'ಅಕ್ಕ ತಂಗಿ ಜಲಧಾರೆ'(Seven sister water falls), 'ಮೌಸ್ವಾಮಿ' ( mawsmai cave) ಸುಣ್ಣದ ಕಲ್ಲಿನ ಗುಹೆ, 'ವಾಕಾಬಾ' ಜಲಧಾರೆ ಮುಂತಾದ ಅದ್ಭುತ ತಾಣಗಳನ್ನೂ ನೋಡಿ ಬರಬಹುದು. ಉಳಿದುಕೊಳ್ಳಲು ಶಿಲ್ಲಾಂಗ್ನಲ್ಲಿ ಸಾಕಷ್ಟು ವಸತಿ ನಿಲಯಗಳಿವೆ. ಶ್ರೀಧರ್. ಎಸ್. ಸಿದ್ದಾಪುರ
Subscribe to:
Posts (Atom)
ವಾರೆ ನೋಟ
ಪ್ರವಾಸಗಳೆಂಬ ಕಿರುದಾರಿಯಲಿ
ಬೇಕಲ್ನ ದಾರಿಯಲ್ಲಿ ( Bekal Fort) ಮೊದಲ ಪುಸ್ತಕ ಬಿಡುಗಡೆಯ ತಯಾರಿಯಲ್ಲಿದ್ದೆ. ಗೆಳೆಯನೊಬ್ಬ ನಿನ್ನನ್ನು ಮುಖಪುಟ ವಿನ್ಯಾಸಗಾರನಲ್ಲಿಗೆ ಕರೆದೊಯ್ಯುವೆ ಎಂದು ಹನ್ನೊಂದ...



















































