Saturday, May 23, 2020

ಕಾಣದ ಕಡಲಿಗೆ ಕಾಯುತಿದೆಯೆ ಬದುಕು?





"ದೂರ ಹೊರಟೆ"
"ಫೋಟೋಗ್ರಫಿ ಮಾಡಲು"
"ಯಾವುದರದ್ದು ತೆಗಿತಿ ಚಿತ್ರ?"
"ಹಕ್ಕಿ"








"ಈ ಹಕ್ಕಿಗಳ ಚಿತ್ರ ತೆಗೆದು ತೆಗೆದು ಏನು ಮಾಡುತ್ತಿ?" ಹೀಗೆ ಸರಣಿ ಪ್ರಶ್ನೆಗಳ ಸರಣಿಯನ್ನು ಎದುರಿಸಿದ್ದು ನನ್ನ ಗೆಳೆಯನೊಬ್ಬನಿಂದ. ಪ್ರತಿ ಭಾನುವಾರ ಒಂದಿಷ್ಟು ಸಮಯ ಫೋಟೋಗ್ರಫಿಗಾಗಿ ಮೀಸಲಿಡುವ ನನಗೆ ಅತ್ಯಂತ ಕಠಿಣವಾದ ಪ್ರಶ್ನೆ. ಬಹುಶಃ ಕೆ. ಎ. ಎಸ್. ಮತ್ತು ಐ. ಎ. ಎಸ್. ನಲ್ಲೂ ಉತ್ತರಿಸಲಾಗದ ಇಂತಹ ಪ್ರಶ್ನೆ ಕೇಳಿರಲಿಕ್ಕಿಲ್ಲ. ಏನೆಂದು ಉತ್ತರಿಸಲಿ? ಯೋಚನೆ ಮಾಡುತ್ತೇನೆ.


"ಹಾಗೆ ಸುಮ್ನೆ ಕಂಪ್ಯೂಟರಿಗೆ ಹಾಕಿ ಇಡ್ತೇನೆ."
"ಹಾಕಿ ಏನ್ ಮಾಡ್ತಿ?" ಮತ್ತೊಂದು ಭೀಕರ ಪ್ರಶ್ನೆ.
"ಪುರುಸೊತ್ತಾದಾಗ ನೋಡ್ತೇನೆ."
"ನೋಡಿ?" ಮತ್ತದೇ ರಾಗ.


ಹೀಗೆ ಪ್ರಶ್ನೆಗಳ ಸರಮಾಲೆ ಮುಂದುವರಿಯುತ್ತದೆ. ಏನು ಉತ್ತರಿಸುವುದೋ ಗೊತ್ತಾಗದೆ ಸುಮ್ಮನಾಗುತೇನೆ. ಅವರಿಂದ ಹೇಗೋ ತಪ್ಪಿಸಿಕೊಂಡು ಮುನ್ನುಗ್ಗುವೆ. ಕೆಲವೊಮ್ಮೆ ಅವರು ಕಾಣುತ್ತಲೇ ನಾನು ದಿಕ್ಕು ಬದಲಾಯಿಸುವುದುಂಟು ಮರ್ರೆ. ಹಳ್ಳಿಗಳಲ್ಲಿ ಛಾಯಾಚಿತ್ರ ತೆಗೆಯುವವರು ಎದುರಿಸುವ ಪ್ರಶ್ನೆಗಳ ಸರಮಾಲೆಯನ್ನು ಕೇಳಿದರೆ ಚಳಿ ಜ್ವರ ಶುರುವಾಗುವುದು. ಅವರ ಅಜ್ಞಾನವೋ ನಮ್ಮ ಕರ್ಮವೋ ನಾ ಕಾಣೆ. 

ಇಂತಹ ಬಿಕ್ಕಟ್ಟಿನ ಪ್ರಶ್ನೆಗಳ ಸರಮಾಲೆಯನ್ನು ನನ್ನ ಅಕ್ಕನೂ ನನ್ನ ಮೇಲೆಸೆದು ನನ್ನನ್ನು ಕಕ್ಕಾಬಿಕ್ಕಿ ಮಾಡಿದ್ದಿದೆ. ಈ ವಂಶದ  ಜಿವಿಗಳಿಗೆ ಹೊಸ ಸೇರ್ಪಡೆ ನನ್ನ ಪತ್ನಿ!! ಇಂತಹ ಮಮರ್ಾಘಾತದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಇಂತವರಿಂದ ಆದಷ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ಅವರನ್ನು ಗೊಂದಲಗೊಳಿಸಲು "ಲಕ್ಷ, ಲಕ್ಷ ಸುರಿದು ಯಾವ ಪುರುಷಾರ್ಥಕ್ಕೆ ಚಿನ್ನಕೊಳ್ಳುತ್ತೀರಿ? ನೀವು ಹಾಕುವುದು ಬರೇ 30 ನಿಮಿಷವಷ್ಟೇ." ಎಂದವರಿಗೆ ಪ್ರಶ್ನೆ ಕೇಳಿ ಗಾಬರಿ ಹುಟ್ಟಿಸುತ್ತೇನೆ. 


ಮಲಬರ್ ಸ್ಟಾರ್ಲಿಂಗ್.  

ಎಲ್ಲವೂ ಪ್ರಯೋಜನಕ್ಕೆ ಬರಲೇಬೇಕೆ? ಗೊತ್ತಿಲ್ಲ. 5 ವರುಷಗಳಿಂದ ನನ್ನ ಗಣಕದಲ್ಲಿ ತಣ್ಣಗೆ ಕುಳಿತ ಎಲ್ಲಾ ಚಿತ್ರಗಳಿಗೂ ಅಚಾನಕ್ ಒಳ್ಳೆ ಬೇಡಿಕೆ ಬಂದಿತು ಮರ್ರೆ. 
'ಮಕ್ಕಳ ವಾಣಿ' ಎಂಬ ಯು-ಟ್ಯುಬ್ ಚಾನೆಲ್ ಒಂದಕ್ಕೆ ಹಕ್ಕಿಗಳ ಪುಟ್ಟ ಪುಟ್ಟ ಎರಡು ವಿಡಿಯೋ ಮಾಡಿ ಕೊಡಿ ಎಂದು ಉದಯ ಗಾಂವಕ್ಕರ್ ಕೇಳಿಕೊಂಡಿದ್ದರು. ಒಂದು ಸುಂದರ ಹಕ್ಕಿಯ ಛಾಯಾ ಚಿತ್ರ ತೆಗೆಯಲು ಒದ್ದಾಡಿದ ನೆನಪುಗಳೆಲ್ಲಾ ಒದ್ದುಕೊಂಡು ಬಂತು. 300 mm ನ ಸುಮಾರು 2 ಕೆ.ಜಿ ತೂಕದ ಲೆನ್ಸ್! ಹೊತ್ತು ತಿರುಗಿದವನಿಗೇ ಗೊತ್ತದರ ಕಷ್ಟ. ಬಿಡ ಬೇಕು ಎಂದು ಅನೇಕ ಬಾರಿ ಎಣಿಸಿದ್ದೂ ಉಂಟು. ಆದರೆ ಏನೋ ವಿಚಿತ್ರ ಸೆಳೆತ. ಚಿತ್ರ ತೆಗೆದ ಸ್ಥಳಕ್ಕೊಮ್ಮೆ ಹೋಗಿ ಕೂಡಾ ಬಂದೆ. ಆ ಮರದ ರೆಂಬೆಯೊಂದು ಮುರಿದು ಬಿದ್ದಿತ್ತು. ಸನಿಹದಲ್ಲೇ ಒಂದೆರಡು ಮನೆ ಕೂಡಾ ಆಗಿತ್ತು. ಆ ನಿಮ್ಮಿತ್ತ ನನ್ನ ಗಣಕದಲ್ಲಿ ತಣ್ಣಗೆ ಮಲಗಿದ್ದ ಹಕ್ಕಿಗಳನ್ನೆಲ್ಲಾ ಮತ್ತೊಮ್ಮೆ ಎಬ್ಬಿಸಬೇಕಾಗಿ ಬಂತು. ಹಾಗೆ ಅನೇಕ ಮಿತ್ರರನ್ನು ಸಹ. ಜೊತೆಗೆ ನಿಮ್ಮನ್ನು! ಕಾಣದ ಕಡಲಿಗೆ ನಾವೂ ಹೀಗೆ ಯಾವೊತ್ತೋ ಉಪಯೋಗಕ್ಕೆ ಬರುವುದಕ್ಕಾಗಿ ಹುಟ್ಟಿದ್ದೇವೆಯೇ? ಹುಟ್ಟು ಸಾರ್ಥಕವಾಗುವುದು ಹೀಗೆಯೇ? ಕಾಣದ ಕಡಲಿಗೆ ಕಾಯುವುದೇ ಬದುಕಾ? ಗೊತ್ತಿಲ್ಲ.

https://youtu.be/Osc0IFMU6dM




ಅಂತೂ ತೆಗೆದ ಹಲವು ಹಕ್ಕಿಗಳ ಚಿತ್ರಗಳ ಕುರಿತು ಪುಟಾಣಿ ಲೇಖನಗಳನ್ನು ಬ್ಲಾಗಿನಲ್ಲಿ ಹಾಕಿರುವೆ. 'ಬಾನಾಡಿ' ಅಡಿಯಲ್ಲಿ ಅವೆಲ್ಲಾ ಇವೆ. ಕೆಲವು ಚೆನ್ನಾಗಿವೆ. ಕೆಲವು ಸಪ್ಪೆ. ಮತ್ತೆ ಸರಿ ಪಡಿಸಬೇಕಾಗಿದೆ.

ಓದಿ, ವಿಡಿಯೋ ನೋಡಿ ಪ್ರತಿಕ್ರಿಯಿಸುವಿರಲ್ಲಾ. ನಿಮ್ಮ ರಚನಾತ್ಮಕ ಸಲಹೆಗಳ ನಿರೀಕ್ಷೆಯಲ್ಲಿ....
        
ಶ್ರೀಧರ್. ಎಸ್. ಸಿದ್ದಾಪುರ



Saturday, May 2, 2020

ನಾಲಗೆ ಹೊರಳದ ನಾಡಿನಲ್ಲಿ ಮೂರು ದಿನ...


ಸಂಪುಟ-೨. 
ಈಶಾನ್ಯ ಭಾರತದ ಶಿಲ್ಲಾಂಗನ ಸುತ್ತಲಿನ ಪ್ರವಾಸಿ ತಾಣಗಳನ್ನು ಕಣ್ಣುತುಂಬಿಕೊಳ್ಳುವ ಕನಸಿನೊಂದಿಗೆ ಹೊರಟು ನಿಂತಿದ್ದೆ. ಅದೆಷ್ಟೇ ಪ್ರಯತ್ನ ಪಟ್ಟರೂ ಇಲ್ಲಿನ ಊರುಗಳ ಹೆಸರುಗಳನ್ನು ಹೇಳಲಾಗದೇ ಸೋಲೊಪ್ಪಿಕೊಂಡಿದ್ದೆ.
ಮುನ್ನುಡಿ-
32 ಉಷ್ಣದ ಊರಿಂದ 6-7 ತಂಪಿನ ಊರಿಗೆ ಬಂದಾಗ ದೇಹ ಮುದುರಿತ್ತು. ಗೌಹಾಟಿಯ ಗೌಜಿನಲ್ಲೂ ಸ್ಥಳೀಯ ಸೀರೆ ತೊಟ್ಟ ಸೊಗಸುಗಾತಿಯರು ವ್ಯವಹಾರಕ್ಕಿಳಿದಿದ್ದರು. ಇವರನ್ನೆಲ್ಲ ನೋಡುತ್ತಾ ಎರಡು ರಾಜ್ಯಕ್ಕೆ ಗಡಿಯಂತಿದ್ದ ದಾರಿ ಗುಂಟ ಬ್ರಹ್ಮಪುತ್ರವನ್ನು ಬಳಸಿ ಶಿಲ್ಲಾಂಗ್ಗೆ ಬಂದಾಗ ರಾತ್ರಿ 7 ಗಂಟೆ. ಇಲ್ಲಿಂದ ರಾಜ್ಯ ರಸ್ತೆ ಸಾರಿಗೆ ಹಾಗೂ ಟ್ಯಾಕ್ಸಿ ವ್ಯವಸ್ಥೆ ಶಿಲ್ಲಾಂಗಿಗಿದೆ. 


ಉಪ್ಪಿನಕಾಯಿ ವೈವಿಧ್ಯ- ಮೊದಲನೇದು ಮೀನಿನ ಉಪ್ಪಿನಕಾಯಿ!


ಸಂಜೆ ಚಹಾ ಹೀರಲು ನಿಲ್ಲಿಸಿದ ಅಂಗಡಿಯಲಿ ಸಾಲು ಸಾಲು ಮೀನು, ಏಡಿ, ಸಿಗಡಿಗಳ ಉಪ್ಪಿನಕಾಯಿ ನೋಡಿದ್ದೆ ಗೆಳೆಯ ನಾಗರಾಜ ಉಸುರಿದ "ಬಿಟ್ಟರೆ ಮನುಷ್ಯರನ್ನು ಹುರಿದು ಉಪ್ಪಿನಕಾಯಿ ಮಾಡ್ತಾರೆ ಇವರು". ಮುಸುಂಬಿಗಿಂತಲೂ ದೊಡ್ಡದಾದ ನಿಂಬೆ ಹಣ್ಣು ಮೊದಲು ನೋಡಿದ್ದು ಇಲ್ಲೇ. 





ಈ ಕೌತುಕ ಪೂರ್ಣ ಕತೆಯನ್ನೊಮ್ಮೆ ಕೇಳೋಣ. ಮೇಘಾಲಯದ ಗೆಸ್ಟ್ ಹೌಸ್ನಲ್ಲಿ ಬಂದಿಳಿದಾಗ ತಂದಿರಿಸಿದ ರಾಶಿ ಸಿಹಿಕುಂಬಳ ಕಾಯಿಗಳ ಸ್ವಾಗತ! ನನ್ನ ಪರಮ ವೈರಿ ಸಿಹಿಗುಂಬಳಕಾಯಿ ನೆನೆದು ನಮ್ಮನ್ನು ಓಡಿಸಲೇ ಇದನ್ನು ಇಷ್ಟು ರಾಶಿ ಹಾಕಿ ಕೊಂಡಿದ್ದಾರೆ ಎಂದುಕೊಂಡೆ. ನಾಗರಜನ ಗೆಳತಿಯ ಮನೆಯಲ್ಲಿ ನಮಗೆ ಆ ದಿನ ರಾತ್ರಿಯ ವಿಶೇಷ ಭೋಜನ ವ್ಯವಸ್ಥೆ . ಮಾಡಲಾದ್ದರಿಂದ ಒಪ್ಪತ್ತಿನ ಮಟ್ಟಿಗಾದರೂ ಸಿಹಿಕುಂಬಳದಿಂದ ಬಚಾವಾದೆ!
ವಿಶೇಷ 'ಖಾಸಿ' ಅಡುಗೆ: -
ಮೂಲಂಗಿಯ ವಿಚಿತ್ರ ಪಲ್ಯ. 

ಹುದುಗು ಬಾರಿಸಿದ ಬೀನ್ಸ್ ಚಟ್ನಿ. 

ರುಚಿ ರುಚಿ ಖಾಸಿ ಅಡುಗೆ...  

ಗೆಳತಿ ಜೋಯ್ಸ್ ಅವರ ಮನೆಯಲ್ಲಿ ಒಣಗಿದ ಬೆಳ್ಳುಳ್ಳಿ ಮಿಶ್ರಿತ ಹಸಿ ಮೂಲಂಗಿಯ ಪಲ್ಯ, ಹುದುಗು ಬರಿಸಿದ ಬೀನ್ಸ್ನ ವಿಚಿತ್ರ ಚಟ್ಣಿ, ಬೇಯಿಸಿದ ಸಾಸಿವೆ ಎಲೆ, ಜೀವಮಾನದಲಿ ಒಮ್ಮೆಯೂ ಸವಿಯದ ಅಮೃತ ರುಚಿಯ ಐಸ್ಕ್ರೀಮ್ ಮೊಸರು, ಭಿನ್ನರುಚಿಯ ಅನ್ನ ಹೀಗೆ ವಿವಿಧ ಖಾಸಿ ಜನರ ಅಡುಗೆಯ ಖಾಸಗಿಯೂಟ. ಮರೆಯಲಾಗದ ಸವಿಯೂಟ. ಅಸಾಧ್ಯ ಚಳಿಗೆ ಮೈ   ಮನಸು ಮುದುರಿತ್ತು. ಬೆಳಗಿನ ವಿಹಾರದ ಕನಸು ಹೊತ್ತು ಮಲಗಿದೆವ 

ಸೋಹ್ರಾದಿಂದ ಮಾಸ್ವಾಮಿನತ್ತ:-
ಗುಹಾದ್ವಾರದೆದುರಿಗೆ


ಗುಹೆಯ ಕಡಿದಾದ ದಾರಿ. 

ಒಳನೋಟ !ಕಲ್ಲಿನ ಹೊಳಪು ಗಮನಿಸಿ.

ಭಿನ್ನೋಟ-ಬೇರೇನಲ್ಲ ಗುಹೆಯ ಕಡಿದಾದ ದಾರಿ. 
    
     ಹೇಗೆ ಈ ಗುಹೆಯ ಹೆಸರನ್ನು ಉಚ್ಚರಿಸಬೇಕೆಂದು ಇನ್ನೂ ಗೊಂದಲದಲ್ಲಿರುವೆ. ಮುಂಜಾನೆ ಮುಸುಕಿದ ಮೋಡಗಳ ಮುತ್ತಿಡುತ್ತಾ ಹೆದ್ದಾರಿಯಲಿ ಸಾಗಿತ್ತು ನಮ್ಮ ಕಾರು. ನಡುವೆಲ್ಲೂ ನಿಲ್ಲಿಸಿ ಪರೋಟ, ವಡೆ ತಿಂದು, ಚಹಾ ಹೀರಿ ಹೊರಟರೂ ಹೋಗದ ಮಂಜು. 10-12 ಡಿಗ್ರಿ ಉಷ್ಣಾಂಶ. ಗೆಳೆಯನಂತಹ ಚಾಲಕ. ಚೆರಿ ಹೂವರಳಿ ನಿಂತ ಹಾದಿಯಲಿ ಹೂ ನುಜ್ಜು ಗುಜ್ಜಾಗದಿರಲೆಂದು 'ಹಗುರ ಹೋಗು ಮರಾಯ.' ಎಂದೆ. ಹುಳುಕಾದ ಹಲ್ಲು ತೋರಿಸುತ್ತ ದೇಶಾವರಿ ನಗೆ ನಕ್ಕ. ಬಹುಶಃ ಆತನಿಗೆ ನನ್ನ ಭಾಷೆ ತಿಳಿಲಿಲ್ಲವೋ ಏನೋ. ಹಾಗೆ ನೊ ಕಲಿಕೈ ಜಲಧಾರೆ ತೋರಿಸಿಕೊಂಡು, ಸ್ಥಳದ ಕುರಿತು ಲೈವ್ ಕಾಮೆಂಟರಿ ಕೊಡುತ್ತಾ ಸುಣ್ಣದ ಕಲ್ಲಿನ ಗುಹೆಗಳತ್ತ ಕಾರು ಹೊರಳಿಸಿದ.

ಜನಜೀವನ:-
ಪ್ರವಾಸೋಧ್ಯಮ, ಸುಣ್ಣದ ಕಲ್ಲು ಮತ್ತು ಮಸಾಲೆ ಪದಾರ್ಥಗಳೇ ಇವರ ಜೀವನ ಆಧಾರ. ಸುಣ್ಣದಕಲ್ಲಿನ ನೂರಾರು ಗುಹೆಗಳು ನಿಮಗೆ ಶಿಲ್ಲಾಂಗಿನಿಂದ ಚಿರಾಪುಂಜಿಯೆಡೆಗೆ ಹೊರಟಾಗ ಕಾಣಸಿಗುತ್ತದೆ. ಇನ್ನು ಕಣಿವೆಯಲ್ಲಿ ವಾಸಿಸುವವರು ಸ್ವಲ್ವ ಕಿತ್ತಳೆ, ಶುಂಠಿ ಮತ್ತು ಕಾಳುಮೆಣಸು ಬೆಳೆದುಕೊಳ್ಳುತ್ತಾರೆ. ಕಾಡುತ್ಪತ್ತಿ ಸಂಗ್ರಹಿಸುತ್ತಾರೆ. ಇಲ್ಲಿನ ಕಿತ್ತಳೆ ಬಲು ಹುಳಿ. ಇವರ ಇನ್ನೊಂದು ಆದಾಯದ ಮೂಲ ಭತ್ತ ಮತ್ತು ಬಿದಿರು. ಇವರ ಬಿದಿರಿನ ನಾಜೂಕು ನಮಗೆ ಅಸಾಧ್ಯ, ಅಂಟು ಬಳಸದೆಯೇ ಭತ್ತದ ಬುಟ್ಟಿಗಳ ಹೆಣೆಯುವ ನೈಪುಣ್ಯದಲ್ಲಿ ಅಸಾಧ್ಯ ಕಲೆಗಾರಿಕೆ. ವಿಮಾನ ಮುಂತಾದ ಕಡೆ ಎಳೆದಾಡಿದರೂ ಚೂರೂ ಕೊಸರದೇ ಉಳಿದಿತ್ತು ನಾಕೊಂಡ ಭೆತ್ತದ ಪುಟಾಣಿ ಬುಟ್ಟಿ. ಎಲ್ಲಾ ಕೆಲಸಗಳಲ್ಲೂ ಸಿದ್ದ ಹಸ್ತರೂ ಕೂಡ. ನಮ್ಮ ಸ್ನೇಹಿತನ ಹರಿದ ಚಪ್ಪಲಿಯೊಂದನ್ನು ಕ್ಷಣಾರ್ಧದಲ್ಲೆ ಹೊಲಿದುಕೊಟ್ಟನೊಬ್ಬ. ಹೆಂಗಸರೇ ಹೆಚ್ಚು ದುಡಿಯುವವರು. ಮಂಜಿನಿಂದಾಗಿ ಅಲ್ಲಲ್ಲಿ ಚಳಿ ಕಾಯಿಸುವ ಜನ. ಸುಣ್ಣದ ಕಲ್ಲನ್ನು ಆರಿಸಿ ಆರಿಸಿ ಬೃಹತ್ ಗುಹೆಗಳು ನುಂಗುವಂತೆ ದಾರಿಯುದ್ದಕ್ಕೂ ಬಾಯ್ದೆರೆದಿದ್ದವು. ಎಲ್ಲವೂ ಸೊಹ್ರಾದ ಸಿಮೆಂಟ್ ಕಾಖರ್ಾನೆಗೆ ಹೋಗುತಲಿತ್ತು.


ಗುಹೆ ಎದುರಿಗೆ:-
          ಸೊಹ್ರಾದಿಂದ ಹೊರಟು ಊಟ ಮಾಡಿ ನಡು ಮಧ್ಯಾಹ್ನಕ್ಕೆ ಗುಹೆ ಎದುರಿಗಿದ್ದೆವು. 'ಮೆ ನಹಿ ಆಂವೂಗಿ'(ನಾ ಬರೋದಿಲ್ಲ) ಎಂಬ ಕೂಗು ಗುಹೆ ಎದುರಿಂದ ಕೇಳಿ ಬರುತಲಿತ್ತು. ಎದೆನಡುಗಿಸುವ ಗುಹಾದ್ವಾರದೆದುರು ಅನೇಕ ಹೆಂಗಸರು ಒಳ ಹೋಗಲು ಹೆದರಿ ಹೀಂದೇಟು ಹಾಕುತ್ತಿದ್ದರು. ಬರೋಬ್ಬರಿ 6.5 ಕಿಲೋ ಮೀಟರ್ ಉದ್ದದ ಬಾಯ್ದೆರೆದ ಭಯಾನಕ ಗುಹೆ. ಕೆಲವೆಡೆ ತೆವಳುತ್ತಾ ಸಾಗಬೇಕು. ಸಣ್ಣ ಝರಿಯೊಂದು ಗುಹೆಯೊಳಗೇ ಹಾದು ಹೋಗಿತ್ತು. ಗೋಡೆ ಪೂರ್ಣ ಸುಣ್ಣದ ಕಲ್ಲಿನ ಚಿತ್ತಾರ. ಕೆಲವೆಡೆ ಗುಹೆ ಮೇಲಕ್ಕೆ ಬಾಯ್ಕಳೆದು ತೆರೆದಿತ್ತು.

ಜೇನುಗೂಡಿನಂತಹ ರಚನೆ. 
ಗುಹೆಯೊಳಗಿನ ನೆಲ ಸವೆದು ಜಾರುವ ಟೈಲ್ಸ್ನಂತಿತ್ತು. ಅನೇಕ ಕಡೆ ಜಾರಿ ಬೀಳುವಷ್ಟರಲ್ಲಿ ಸುಧಾರಿಸಿಕೊಂಡೆ. ಬಕಾಸುರನಂತೆ ಬಾಯಿ ಕಳೆದ ಗುಹೆ ಕಂಡಾಗ ಶ್ರೀ ಕೃಷ್ಣನ ನೆನಪು. ಗುಹೆಯೊಳಗೆ ಏನುಂಟು ಏನಿಲ್ಲ ತಣ್ಣಗೆ ಹರಿವ ಜಲರಾಶಿ, ವಿಚಿತ್ರ ವಿನ್ಯಾಸದೊಂದಿಗೆ ತೊಟ್ಟಿಕ್ಕುವ ನೀರು, ಗುಹೆಯೊಳು ಗಂವ್ ಎನ್ನುವ ಕತ್ತಲು. ನೆತ್ತಿ ಸುಡುವ ಬಿಸಿಲಿದ್ದರೂ ಒಳಗೆ ಹವಾನಿಯಂತ್ರಣದಷ್ಟು ತಂಪು. ಯಾರದೋ ಜಿರ್ಣನಾಳದೊಳಗೆ ಜಾರಿಹೋದಂತಹ ಅನುಭವ. ಹೆಬ್ಬಾವಿನ ಹೊಟ್ಟೆ ಸೇರಿದ ಭಾವ. ಯಾರದೋ ಕರುಳಿನೊಳಗೆ ಹೂತು ಹೋದಂತೆ. ಆಹಾರದ ಕಣದಂತೆ ಚಲಿಸುವ ಜನಸಂದಣಿ. ಒಳಾಂಗಣದಲಿ ಅಲ್ಲಲ್ಲಿ ಬೆಳಕಿನ ವ್ಯವಸ್ಥೆ. ಗುಹೆಯ ಉದ್ದ ಸರಿಸುಮಾರು 6.5 ಕಿ.ಮೀ. 

ಸುಣ್ಣದ ಕಲ್ಲಿನ ವಿಚಿತ್ರ ವಿನ್ಯಾಸ. ಜೇನು ತಟ್ಟಿಯಂತಹ ವಿಭಿನ್ನ ಸಂಯೋಜನೆ. ಬೆಳಕಿಗೆ ಹೊಳೆವ ಕಲ್ಲಿನ ಚೂರುಗಳು. ದನದ ಕೆಚ್ಚಲಿನಾಕೃತಿಯ ವಿನ್ಯಾಸವೂ ಉಂಟು.  ಹಲಸಿನ ಕಾಯಿಯಂತೆ ನೇತಾಡುವ ಮಣ್ಣ ಹೆಂಟೆಗಳು. ಬೀಳುವವೇನೋ ಎಂದು ನಿರುಕಿಸಿ ನಿರುಕಿಸಿ ಸೋತೆ. ಒಂದೂ ಹಿಸಿದು ಬೀಳಲೇ ಇಲ್ಲ. ಆಲದ ಬಿಳಲುಗಳಂತೆ ನೇತಾಡುವ ಸಪೂರ ಗುಹಾ ರಚನೆ. ಇಲ್ಲೆಲ್ಲಾ ನುಸುಳಿ, ತೆವಳಿ ಸಾಗಬೇಕಾದ ಅನಿವಾರ್ಯತೆ.
ಸಪೂರ ಓಣಿಯಂತಹ ದಾರಿ. 
  'ಪ್ರಕೃತಿ ನಿಮರ್ಿತ 'ಲಿಯತ್ ಪ್ರಹಾ' ಎಂಬ ಗುಹೆ 30 ಕಿ.ಮೀ.ಉದ್ದವಿದೆ!' ಎಂದ ನಮ್ಮ ಡ್ರೈವರ್. ಇವುಗಳಲ್ಲಿ ಕೆಲವೊಂದು ಕಡೆ ತೆವಳಿ ಸಾಗಬೇಕಾದ ಅನಿವಾರ್ಯತೆ. ಇತ್ತೀಚಿಗೆ ಪತ್ತೆಯಾದ 'ಗಾರ್ಡನ್ ಗುಹೆ'ಎಂದು ಕರೆಯಲ್ಪಡುವ ಗುಹೆ ಸುಮಾರು 30 ಕಿ.ಮೀ. ಉದ್ದವಿದೆ ಎಂಬ ಬೋರ್ಡೊಂದನ್ನು ಇಲ್ಲಿ ಕಂಡೆ. ಜೊತೆಗೆ ಗುಹೆಯೊಳಗೆ ಒಂದು ಜಲಪಾತವೂ ಇದೆ ಎನ್ನುತ್ತಾರೆ! ಇಲ್ಲಿನ ಗುಹೆಗಳು ಅಚ್ಚರಿಗಳ ಮೂಟೆ. ಮೇಘಾಲಯದಲ್ಲಿ ಸುಮಾರು 1580ಕ್ಕೂ ಹೆಚ್ಚು ಗುಹೆಗಳಿವೆ! ವಿಶ್ವ ಪ್ರಸಿದ್ಧ ಮೊದಲ 9 ಗುಹೆಗಳಿರುವುದು ನಮ್ಮ ಮೇಘಾಲಯದಲ್ಲೇ. ಪ್ರತಿಯೊಂದೂ ಭಿನ್ನ. ಯುತ್ ಹಾಸ್ಟೆಲ್ನವರು ವರ್ಷಂಪ್ರತಿ ಇಲ್ಲಿ ಮೂರು ನಾಲ್ಕು ಗುಹೆ ತೋರಿಸುವ ಕಾರ್ಯಕ್ರಮವೇರ್ಪಡಿಸುತ್ತಾರೆ.
  ಚಿಕ್ಕ ವಯಸ್ಸಿನಲ್ಲೇ ಮೇಘಾಲಯಕ್ಕೆ ಹೋಗಿ ಬರಬೇಕೆಂಬ ಕನಸೊಂದು ಬಹಳ ವರ್ಷಗಳ ನಂತರ ನೆರವೇರಿತು. ಶಿಲ್ಲಾಂಗ್ನ ಸನಿಹವೇ ಇರುವ ಈ ಗುಹೆಗಳನ್ನು ನೋಡದೆ ಹೋದರೆ ಮೇಘಾಲಯ ಪ್ರವಾಸ ಅಪೂರ್ಣ. ನಾಲಗೆ ಹೊರಳದ ನಾಡಲ್ಲಿ ತಿರುಗಿ ಬರುವ ಮಜವೇ ಬೇರೆ. ಯಾಕಿನ್ನು ಯೋಚನೆ ಪ್ಯಾಕ್ಪ್ ಹೇಳಿ. ಜೀವಂತ ಸೇತುವೆಗಳೊಂದಿಗೆ ಒಂದು ದಿನ ಕಳೆಯುವ ಆಲೋಚನೆಯೊಂದಿಗೆ ಇಂದಿನ ಪ್ರವಾಸಕ್ಕೆ ನಾವು ಪ್ಯಾಕ್ಪ್ ಹೇಳಿದೆವು.
 ನಿಮ್ಮ ಅನೂಕೂಲಕ್ಕೆ ತಕ್ಕಂತಹ ಅನೇಕ ವಸತಿಗೃಹಗಳು ಶಿಲ್ಲಾಂಗಿನಲ್ಲಿವೆ. ಆನೆಜರಿ, ಅಕ್ಕ-ತಂಗಿ ಜಲಧಾರೆ ಮುಂತಾದವುಗಳನ್ನು ನೋಡಿ ಬರಬಹುದು ಎಲ್ಲವೂ ಸನಿಹದಲ್ಲಿದೆ.
ಶ್ರೀಧರ್. ಎಸ್. ಸಿದ್ದಾಪುರ.
ವಿಳಾಸ:-       ರಥಬೀದಿ ಸಿದ್ಧಾಪುರ,

Thursday, April 30, 2020

ಬಕುಳದ ಬಾಗಿಲಲಿ ಸಿಕ್ಕವಳು...

ಬಕುಳ ಒಂದು ಸುಂದರ ಹೂ ಬಿಡುವ ಮರ. ಮಲೆನಾಡಿನ ಜನರ ಮದುವೆಗಳಲಿ ಇದರ ಹಾರವು ಅತಿ ಅಗತ್ಯವಾದುದು. ಪರಿಮಳವೂ ಅತಿ ಮಧುರ. ಇದರ ಹಣ್ಣನ್ನು ನಾವು ಚಿಕ್ಕವರಿದ್ದಾಗ ಆರಿಸಿ ಆರಿಸಿ ತಿನ್ನುತ್ತಿದ್ದೆವು. ತುಂಬಾ ರುಚಿಯಲ್ಲದಿದ್ದರೂ ಒಂಥರಾ ಒಗರು ಸಿಹಿಯ ಹಣ್ಣು. ಈಗಿನ ಮಕ್ಕಳಿಗೆ ಲೇಸ್, ಬಿಂಗೊ, ಕುರ್ ಕುರೆ ಬಿಟ್ಟರೆ ಬೇರೆ ಗೊತ್ತಿಲ್ಲ ಬುಡಿ. ಹೊಟ್ಟೆಯ ತುಂಬುವುದರ ಜೊತೆಗೆ ಪುಷ್ಟಿಯೂ ಸಹ. 
                               ಮಂಗನಂತೆ ಕಾಡು ಹಣ್ಣುಗಳನ್ನು ತಿಂದ ನನಗೆ ಯಾವ ವಿಟಾಮಿನ್ ಕೊರತೆ ಕಾಡಿದ್ದಿಲ್ಲ. ಪೂಜೆ ಪುನಸ್ಕಾರಗಳಲ್ಲಿಯೂ ಬಕುಳದ ಉಪಯೋಗ ಉಂಟು. ಬಕುಳದ ಹೂವಿನ ಹಾರ ವಿಲ್ಲದೇ ಮದುವೆನೂ ಆಗಲ್ಲ!


ಹಣ್ಣು 




ವ್ಯಾಟ್ಸಪ್ ನಲ್ಲಿ ಅವಳ ಪೋಟೋಗಳನ್ನು ಕೆಲವರು ಹಾಕಿದ್ದೆ ಹಾಕಿದ್ದು, ನನ್ನ ಮುಖಾರವಿಂದವು ಅರಳಿತ್ತು, ಅವಳ ಹುಡುಕುತ್ತಾ ಬಕುಳದ ಬಾಗಿಲಿಗೆ ಬಂದಿದ್ದೆ. ಬಹಳಾ ದಿನಗಳಿಂದ ಅವಳ ನಿರೀಕ್ಷೆಯಲ್ಲಿದ್ದೆ. ಹುಡುಕುತ್ತಾ ಇದ್ದೆ. ಸಿಕ್ಕಿರಲಿಲ್ಲ. ಅಚಾನಕ್ಕಾಗಿ ಬಾಲ್ಯದ ದಾರಿ ಸವೆಸುತ್ತಿದ್ದವನಿಗೆ ಬಕುಳದ ಮರದ ಬಳಿಯೇ ಅವಳು ಸಿಕ್ಕಳು! ಎಷ್ಟು ಖುಷಿಯಾಯಿತೆಂದರೆ  ಹೇಳ ತೀರದು. ನಿಂತಲ್ಲೇ ಕುಣಿದು ಕುಪ್ಪಳಿಸಿದೆ. ನನಗೆ ಸಿಕ್ಕವಳನ್ನು ನಿಮಗೆ ತೋರಿಸಬೇಡವೇ? ತಪ್ಪು ತಿಳಿಯ ಬೇಡಿ. ಅವಳೊಂದು ಜೇಡ!!! ಕಸದಲ್ಲೇ ಕಸದಂತಿರುವ ಜೇಡ! ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಸೂಕ್ತಿಯೂ ಕಡಿಮೆಯಾದೀತು ಇವುಗಳ ವೇಷ ಮರೆಸುವ ತಂತ್ರಕ್ಕೆ.




ಯಾವುದೋ ಒಣಗಿದ ಎಲೆಯೊಂದು ನೇತಾಡುತ್ತಿದೆಯಲ್ಲಾ ಎಂದು ಚಿಕ್ಕ ಕಡ್ಡಿಯ ಸಹಾಯದಿಂದ ಅದನ್ನು ಮುಟ್ಟಿದೆನಷ್ಟೆ. ಏನಾಶ್ಚರ್ಯ ಒಣಗಿದ ಎಲೆ ಓಡಾಡ ತೊಡಗಿತು! ನೋಡಿದರೆ ಕಾಲುಗಳೂ ಉಂಟು. ಯಾರೀಕೆ? ಹುಡುಕಾಡಿದೆ ಇವಳೇ ಚೇಳು ಬಾಲದ ಊರ್ಣ ನಾಭ( ಜೇಡ). 


             ಅರಶಿನ ಮತ್ತು ಕಡು ಕಪ್ಪು ಬಣ್ಣದ ಅಂಗಿಗಳಲ್ಲಿ ಇವಳನ್ನು ನೋಡಿದ್ದೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಇವು ನೋಡಲು ಕಾಣುವುದು ಅಪರೂಪ. ಈಗಿನ ಕಾಲದಲ್ಲಿ ಕಸವಾಗಲು ಯಾರು ಬಯಸುತ್ತಾರೆ ಹೇಳಿ? ಅದೂ ಕಾಲ ಕಸವಾಗಿ ಅಜ್ಞಾತವಾಗಿ. ಎಲ್ಲಾ ಕಡೆ ಬೇಡದ ಕಸವನ್ನು ಎಸೆಯುತ್ತಾ ಇರೋ ಮಾನವನೆಂಬ ಜೀವಿಯ ಮುಂದೆ, ಜೀವಿ ಸಮತೋಲದಲ್ಲಿ ಅಭೂತಪೂರ್ವ ಸಹಕಾರ ನೀಡುವ ಇವು ನಿಜಕ್ಕೂ ಶ್ರೇಷ್ಠವಲ್ಲವೆ? ಏನಂತೀರಿ?
ಶ್ರೀಧರ್. ಎಸ್. ಸಿದ್ದಾಪುರ.

ಚಿತ್ರ ಅಂತಜರ್ಾಲ.


Friday, April 10, 2020

ಬಿಳಲು




       ಏಕೋ ಮೂರು ನಾಲ್ಕು ದಿನಗಳಿಂದ ಅವನದೇ ನೆನಪು! ಏನು ಮಾಡುತ್ತಿದ್ದಾನೊ ಏನೋ. ಅಪ್ಪನ ತಿಥಿಗೂ ಬಂದಿರಲಿಲ್ಲ ಪುಣ್ಯಾತ್ಮ. ಪೋನ್ನಲ್ಲಿ 'ಹಾಂ', 'ಹೂಂ' ಎಂಬಲ್ಲಿಗೆ ಮಾತಿಗೆ ಕಡಿವಾಣ.
 ನಿಮ್ಮ ಆಸ್ತಿನೂ ಬೇಡ ಮನೆನೂ ಬೇಡವೆಂದು ಒಂದಿಷ್ಟು ಹಣ ಹೊತ್ತು ಹೋದ ನನ್ನ ತಮ್ಮ ಇಂದು ಹೆಬ್ಬಾಗಿಲಲಿ ನಿಂತು ಹಣಕಿ ಹಾಕಿದಂತೆ ಭಾಸ. 

      ಯಾರೋ ಅದು ಎಂದು ಕರೆದೆ. ತೆರೆದ ಹೆಬ್ಬಾಗಿಲಿನಲಿ ಆರಡಿ ಎತ್ತರದ ವ್ಯಕ್ತಿ. ಕನ್ನಡಕವಿಲ್ಲದೇ ದೂರದ್ದು ಕಾಣಲ್ಲ. 'ತಥ್ ಈ ಚಾಲೀಸು' ಎಂದು ಶಪಿಸಿದೆ. ಆತನ ಹಿಂದೆ ಮಿಳ್ಳೆಗಣ್ಣಿನ ಪೋರನೊಬ್ಬ ಹಣಕಿ ಹಾಕಿ ನನ್ನೇ ನೋಡುತ್ತಲಿದ್ದ. ಬಿಸಿಲಕೋಲೊಂದು ಇಡಿ ಮನೆಯನು ಬೆಳಗಿತ್ತು. 
    ನನ್ನ ಗಮನವೆಲ್ಲಾ ಆತನೆಡೆಗೆ ಹೋಯಿತು. ತಕ್ಷಣಕ್ಕೆ ತಿಳೀಲಿಲ್ಲ. 'ನಿಜ ಅವನು ನನ್ನ ತಮ್ಮನೇ', 'ಒಳಗೆ ಬಾರೋ' ಎಂದೆ. ದೊಡ್ಡಪ್ಪ ಎಂದು ದೊಡ್ಡ ದನಿ ಮಾಡಿ ನನ್ನ ಕಾಲ ಬಳಸಿ ನಿಂತ ಮಗುವನ್ನು ಒಮ್ಮೆಲೆ ಎತ್ತಿ ಹಿಡಿದೆ. 'ಅಂತೂ ನಿನಗೆ ಮನೆ ನೆನಪಾಯಿತಲ್ಲ, ನಡೆ ನೀರು ದೋಸೆ ಮಾವಿನ ರಸ ಹಾಕ್ಕೊಂಡು ತಿನ್ನೋಣ' ಎನ್ನುತ್ತಾ ಮಗುವನ್ನು ಒಮ್ಮೆಲೆ ಆಕಾಶಕ್ಕೆ ಹಾರಿಸಿದೆ. 
#_ಶ್ರೀಧರ್_ಎಸ್_ಸಿದ್ದಾಪುರ.
#_ಸಣ್ಣ_ಕತೆಗಳು.

'ಮಸಾಲೆ ದೋಸೆಗೆ ಕೆಂಪು ಚೆಟ್ನಿ'


 ಪುಸ್ತಕಗಳ ಬಗ್ಗೆ ಬರೆಯುವುದೆಂದರೆ ಚಳಿಗಾಲದ ರಾತ್ರಿ ಹಳೆ ಪ್ರೇಯಸಿಯನ್ನು ನೆನಪಿಸಿಕೊಂಡಂತೆ ಮೈ ಮನಗಳಲ್ಲಿ ಪುಳಕ! ಜೋಗಿಯವರ 'ಮಸಾಲೆ ದೋಸೆಗೆ ಕೆಂಪು ಚೆಟ್ನಿ' .
 
 ಸೊಗಸು ಎಲ್ಲಿದೆ? ನೋಡುಗನ ಕಣ್ಣಿನಲ್ಲಿ? ಉಹುಂ. ನೋಡುಗನ ಹೃದಯದಲ್ಲಿ? ಉಹುಂ. ನೋಡುಗನ ಮನಸ್ಸಿನಲ್ಲಿ. ಗೊತ್ತಿಲ್ಲ! 
 ಯಾರದೋ ಯಾವುದೋ ಅಭಿಪ್ರಾಯಗಳ ಕೇಳಿ ಮಾರು ಹೋಗುತ್ತೇವೆ. ಆ ಒಂದು ಪುಸ್ತಕ ಕೊಳ್ಳುತ್ತೇವೆ. ಮುಖಪುಟ ಚೆನ್ನಾಗಿರೋದ್ರಲ್ಲಿ ವಿಷಯವೇ ಇರೋಲ್ಲ. ವಿಷಯವಿರುವ ಪುಸ್ತಕಗಳಲ್ಲಿ ಮುಖಪುಟ, ತಲೆಬರೆಹ ಆಕರ್ಷಕ ಅನಿಸೊಲ್ಲ. ಹೀಗೆ ಕೊನೆಗೆ ನನಗನಿಸುವು    ಈ     ಪುಸ್ತಕ  ನನಗೆ ಬೇಕಿತ್ತಾ. ನೂರರಲ್ಲಿ 25-30 ಪುಸ್ತಕಗಳು ಈ ಸಾಲಿಗೆ ಸೇರುತ್ತವೆ. ತಿಳುವಳಿಕೆ ಮೂಡಿದಾಗ ತಡವಾಗಿರುತ್ತದೆ, ಕೊನೆಗೆ ಕಪಾಟಿನ ಮೂಲೆ ಸೇರುತ್ತವೆ. ಆದರೆ ಈ ಪುಸ್ತಕ ಹಾಗಿಲ್ಲ.
ಅದರಲ್ಲಿನ ಒಂದು ಸುಂದರ ಕತೆ ಹೀಗಿದೆ. 
 "ಜೀವನದಲ್ಲಿ ಅತ್ಯಂತ ನಿರುತ್ಸಾಹಗೊಂಡ ವ್ಯಕ್ತಿಯೊಬ್ಬ ಸಾಯಲೆಂದು ಹೊರಡುತ್ತಾನೆ. ಆ ರಾಜ್ಯದಲ್ಲಿ ಆತ್ಮಹತ್ಯೆ ಅಪರಾಧವಲ್ಲ. ಹಾಗಂತ ಎಲ್ಲೆಲ್ಲೋ ಬಿದ್ದು ಸಾಯುವಂತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಮಹಾರಾಜನೇ ವ್ಯವಸ್ಥೆ ಮಾಡಿದ್ದಾನೆ. ಅದಕ್ಕೊಂದು ಜಾಗವಿದೆ. ರಾಜ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದರೆ ನೀವು ಆತ್ಮಹತ್ಯೆ ಮಾಡಿಕೊಳ್ಳುವ ದಿನಾಂಕವನ್ನು ಕಾರ್ಯಾಲಯ ಸೂಚಿಸುತ್ತದೆ. ಕೆಲವೊಮ್ಮೆ ಆರೇಳು ತಿಂಗಳು ಕಾಯಬೇಕಾಗಿ ಬರುವುದೂ ಉಂಟು. ಕೆಲವೊಮ್ಮೆ ಐದಾರು ದಿನಗಳಲ್ಲಿ ಸಾಯುವ ಅವಕಾಶ ಬಂದರೂ ಬರಬಹುದು. 
 ಜೀವನದಲ್ಲಿ ನೊಂದು ಸಾಯಲು ನಿರ್ಧರಿಸುವ ವ್ಯಕ್ತಿ ಕಾರ್ಯಾಲಯಕ್ಕೆ ಹೋಗಿ ಅಜರ್ಿ ಸಲ್ಲಿಸುತ್ತಾನೆ. ಹದಿನೈದು ದಿನಗಳಲ್ಲಿ ಆತ್ಮಹತ್ಯಾ ದಿನಾಂಕವನ್ನು ಹೇಳುವುದಾಗಿ ಕಾರ್ಯಾಲಯ ಹೇಳಿ ಕಳಿಸುತ್ತದೆ. ಅವನು ಅಲ್ಲಿಂದ ಹೊರಗೆ ಬರುತ್ತಿದ್ದಂತೆ ಅಲ್ಲೊಬ್ಬಳು ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಾಣಿಸುತ್ತದೆ. ಇವನು ಅವಳನ್ನು ಮಾತನಾಡಿಸುತ್ತಾನೆ. ಅವಳಿಗೆ ಐದು ತಿಂಗಳ ನಂತರ ಸಾಯೋ ದಿನ ನಿಗದಿಯಾಗಿರುತ್ತದೆ. ಅವಳಿಗೆ ಐದು ತಿಂಗಳು ಕಾಯಲು ಮನಸ್ಸಿಲ್ಲ. ಉಳಿಯಲು ಮನೆ ಇಲ್ಲ. ನೋಡಿಕೊಳ್ಳಲು ಯಾರೂ ಇಲ್ಲ.
 ಈತ ಆಕೆಯನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಅವನಿಗೂ ಐದು ತಿಂಗಳು ಕಾಯುವ ಮನಸ್ಸಿರುವುದಿಲ್ಲ. ಅದರ ಬಗ್ಗೆ ಮಾತನಾಡುತ್ತಾ ವಾರ ಉರುಳುತ್ತದೆ. ತಿಂಗಳೂ ಉರುಳುತ್ತದೆ. ಕ್ರಮೇಣ ಅವರಿಬ್ಬರೂ ಪ್ರೀತಿಸತೊಡಗುತ್ತಾರೆ. ಮದುವೆಯಾಗುತ್ತಾರೆ. ಪ್ರೀತಿ ಗಾಢವಾಗುತ್ತಿದ್ದ ಹಾಗೆ ಬದುಕ ಬೇಕು ಅನ್ನಿಸುತ್ತದೆ. ಸಾಯುವ ದಿನ ಸಮೀಪವಾಗುತ್ತಾ ಹೋಗುತ್ತಿದ್ದ ಹಾಗೆ ಅವರಿಬ್ಬರೂ ಬದುಕಲು ನಿರ್ಧರಿಸಿ ತಮ್ಮ ಆತ್ಮಹತ್ಯೆಯ ಅಜರ್ಿಯನ್ನು ವಾಪಾಸು ಪಡೆಯಲು ನಿರ್ಧರಿಸಿರುತ್ತಾರೆ. 
 ಆದರೆ ಅಧಿಕಾರಿಗಳೂ ಅದಕ್ಕೆ ಅನುಮತಿ ಕೊಡುವುದಿಲ್ಲ...ಸಾಯುತ್ತೀರಿ ಎಂದು ಹೇಳಿದ್ದಾಗಿದೆ. ನಿಮ್ಮ ಕಡತಗಳು ವಿಲೇವಾರಿಯಾಗಿವೆ. ಈಗ ಅದನ್ನು ಹಿಂತೆಗೆಯುವಂತಿಲ್ಲ. ಆ ದಿನಾಂಕದಂದು ಬಂದು ಸಾಯಿರಿ ! ಎಂದು ರಾಜಾಜ್ಞೆಯಾಗುತ್ತದೆ. ಈ ಮಧ್ಯೆ  ಅವರ ರಕ್ತ ಸಂಬಂಧಿಗಳು ಯಾರಾದರೂ ಸಾಯುವ ನಿಧರ್ಾರ ಮಾಡಿದರೆ, ಆತ್ಮಹತ್ಯಾ ದಿನವನ್ನು ಅವರಿಗೆ ವಗರ್ಾಯಿಸಬಹುದು ಎಂದು ಸಲಹೆ ಕೊಡುತ್ತಾರೆ. 
 ಅವರು ತಮ್ಮ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಹುಡುಕಾಟದಲ್ಲಿ ತೊಡಗುತ್ತಾರೆ. ಯಾರೂ ಸಿಗುವುದಿಲ್ಲ. ಹತಾಷೆ ಆವರಿಸುತ್ತದೆ. ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ಬದುಕು ರೇಜಿಗೆ ಅನಿಸುತ್ತದೆ. ಅವಳು ಮೊದಲಿನಂತಿಲ್ಲ ಎಂದು ಅವನು ಭಾವಿಸುತ್ತಾನೆ. ಅವನು ಹೀಗಿರಲಿಲ್ಲ ಎಂದು ಅವಳು ಕೊರಗುತ್ತಾಳೆ. ಇದಕ್ಕಿಂತ ಸಾಯೋದೇ ವಾಸಿ ಅಂತ ಅವಳು ಒಳಗೊಳಗೇ ತೀಮರ್ಾನ ಮಾಡಿ ಬದುಕುವ ಯೋಚನೆ ಕೈ ಬಿಡುತ್ತಾಳೆ. 
 ಅಷ್ಟು ಹೊತ್ತಿಗೆ ಮದುವೆಯಾದವರಿಗೆ ಸಾಯುವ ಅವಕಾಶವಿಲ್ಲ. ಅವರ ಅಜರ್ಿಗಳನ್ನು ನಿರಾಕರಿಸಲಾಗಿದೆ ಕೇವಲ ಪ್ರೇಮಿಗಳಿಗೆ ಮಾತ್ರ ಸಾಯುವ ಅವಕಾಶವೆಂದು ಕಾನೂನು ತಿದ್ದುಪಡಿಯಾಗಿರುತ್ತದೆ.
 ಅವರಿಗೆ ಮದುವೆಯಾಗಿದೆ. ಅವರು ಪ್ರೇಮಿಗಳೂ ಅಲ್ಲ. ಹೀಗಾಗಿ ಬದುಕುವಂತಿಲ್ಲ, ಸಾಯುವಂತಿಲ್ಲ"
----
ಹೇಗಿದೆ ಕತೆ? ಯಾಕೆ ಓದಬೇಕು? ಚೆಂದದ ಕತೆಗಳಿಗಾಗಿಯಾ? ಯಾಕೆ ಬರೆಯಬೇಕು ಇಷ್ಟೆಲ್ಲಾ? ಅದಕ್ಕೂ ಮತ್ತೆರಡು ಚೆಂದದ ಕತೆಯಿದೆ. ಇಂತಹ ಅನೇಕ ಜಿಜ್ಞಾಸೆಗಳ ಒಳ ಸುಳಿ, ತಿರುಳಗಳ ಹೂರಣಗಳ ಹೊತ್ತು ತಂದ ಹೊತ್ತಗೆ. ಒಮ್ಮೆ ಓದಿ ಕೆಳಗಿಡುವ ಪುಸ್ತಕ ಅಲ್ಲವೇ ಅಲ್ಲ.( ನನ್ನ ಸ್ವಂತ ಅಭಿಪ್ರಾಯ) ಹಾಗಾಗಿ ಮತ್ತೊಮ್ಮೆ ಓದಿದೆ. 
 ಜೋಗಿಗೆ ನಾ ಕೇಳಬೇಕು, ಇಂತಹ ಕಾಡುವ  ಸಾಲುಗಳನ್ನು ಎಲ್ಲಿಂದ ಎತ್ತಿಟ್ಟುಕೊಂಡೆ. ತಣ್ಣನೆಯ ಆಹ್ಲಾದಂತಹ ಕತೆಗಳನ್ನು ಎಲ್ಲಿಂದ ಹೆಕ್ಕಿ ತಂದೆ. ಮಾತಿನ ಸುಂದರ ಸೀರೆ ಉಡಿಸೋದು ನೀನು ಎಲ್ಲಿಂದ ಕಲಿತೆ? 
ಶ್ರೀಧರ್ ಎಸ್. ಸಿದ್ದಾಪುರ.

Wednesday, April 1, 2020

ಕರೋನಾ ಕೆರೆತ!


ಕರೋನದಿಂದ ಅತ್ಯಂತ ಅನ್ಯಾಯಕ್ಕೊಳಗಾದ, ನಿರ್ಲಕ್ಷಕೊಳಗಾದ ನಮ್ಮ ದೇಹದ ಭಾಗವೆಂದರೆ ಅದು ಮೂಗು! ಅಯ್ಯೋ ಶಿವನೆ, ಏನು ಹೇಳುತ್ತಾನೆಂದು ಆಶ್ಚರ್ಯವಾಯಿತೇ? ಸ್ವಲ್ಪ ತಾಳ್ಮೆ ಇರಲಿ. ತಲೆ ಬುಡವಿಲ್ಲದ ಸಂಗತಿಗಳನ್ನು ಹೇಳುತ್ತಾನೆಂದು ಅನ್ಕೊಬೇಡಿ.
 ಹೌದು. ಕೋವಿಡ್-19 ಬಂದಾಗಲೇ ವ್ಯಾಟ್ಸಪ್ ಮತ್ತು ಎಫ್ ಬಿ  ಗಳಲ್ಲಿ ಅನುಸರಿಸಬೇಕಾದ ಆವಶ್ಯಕ ಕ್ರಮಗಳ ಕುರಿತು ಟನ್ ಗಟ್ಟಲೆ ಮಾಹಿತಿ ಹರಿದು ಬಂದಿತು. ಅದರ ಮೊದಲ ಅಂಶವೆಂದರೆ ನಮ್ಮ ದೇಹದ ಒಂದು ಭಾಗವಾದ ಮುಖವನ್ನು ಮುಟ್ಟುವಂತಿಲ್ಲ. ಜೊತೆಗೆ ಮೂಗು ಕಣ್ಣು, ಬಾಯಿ ಮುಟ್ಟುವಂತಿಲ್ಲ. ಯಾರೋ ನಮ್ಮ ದೇಹದ ಭಾಗವನ್ನು ಮುಟ್ಟಬೇಡಿ ಎಂಬ ವಿಚಿತ್ರ ನಿಬಂಧನೆ ಬೇರೆ. 
 ಈ ಸುದ್ದಿ ತಿಳಿಯುತ್ತಲೆ ರಚ್ಚೆ ಬಿದ್ದ ಮಗುವಿನಂತಾಗಿದೆ ಮೂಗು! ನಾ ಹೇಳುವುದನ್ನು ಕೇಳದೆ ಪ್ರತಿಭಟನೆಗೆ ಬಿದ್ದಿದೆ. ಮುದ್ದಿಸು ಮುದ್ದಿಸು ಎನುತಿದೆ! ಪ್ರತೀ ಕ್ಷಣವೂ ಮುಟ್ಟು ಮುಟ್ಟು ಎಂದು ತೋರಿಕೆ ತುರಿಕೆ ಉಂಟು ಮಾಡಿ ಯಾವುದೋ ಪ್ರಲೋಭನೆ ಒಡ್ಡುತಿದೆ. ಹೇಗಾದರೂ ಮುಟ್ಟು ಮರಾಯ ಎನ್ನುತಿದೆ. ಏನು ಮಾಡುವುದೆಂದು ತೋಚಲೇ ಇಲ್ಲ. ಮೊದಲ ದಿನವಂತೂ ತಡೆದುಕೊಂಡೆ. ಆದರೆ ಮುಟ್ಟ ಬೇಕೆನ್ನುವ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. 

ಎರಡನೇ ದಿನಕ್ಕೆ ಹೊಸ ಐಡಿಯಾದೊಂದಿಗೆ ಬಂದೆ ತಲೆ ಬಾಚುವ ಹಣಿಗೆಯೊಂದನ್ನು ಸಾನಿಟೈಸ್ ಮಾಡಿ ಇಟ್ಟುಕೊಂಡೆ. ಅದಕ್ಕೂ ದಿನಕ್ಕೆರಡು ಬಾರಿ ಸ್ನಾನ. ತುರಿಸು ತುರಿಸು ಎಂದೊಡನೆ ಅದನ್ನೇ ಹಾಕಿ ತಿಕ್ಕಲು ಸುರುಮಾಡಿದೆ. ಕೋವಿಡ್ ಹರಡುತ್ತಲೆ ನನ್ನ ಪರಿಸ್ಥಿತಿ ಈಗ ವಿಕೋಪಕ್ಕೆ ಹೋಗಿದೆ.  ನನ್ನ ಮುಖವನ್ನೇ ನಾನು ನೋಡಲು ಅಸಹ್ಯ ಪಡುವಂತಾಗಿದೆ. ಅಡ್ಡ ಗೀರು ಉದ್ದಗೀರುಗಳು ಮುಖದ ತುಂಬಾ ಮೂಡಿವೆ. ಬಾಚಣಿಗೆಯಲ್ಲಿ ಕೆರೆದು ಕೆರೆದು ಮೂಗು ಗಡ್ಡಗಳೆಲ್ಲಾ ಕೆಂಪು ಕೆಂಪಾಗಿ ವಿಚಿತ್ರ ಕೆಂಪು ಮೂತಿಯ ಮಂಗನಂತಾಗಿರುವೆ. ಆದರೆ ಕೆರೆತ ಕಡಿಮೆಯಾಗಿಲ್ಲ.

  ಜೊತೆಗೆ ಅಮ್ಮ ಹೇಳಿದ ಎಲ್ಲಾ ಆಯರ್ುವೇದದ ಗಿಡ ಮೂಲಿಕೆಯನ್ನೆಲ್ಲಾ ಅರೆದು ಹಚ್ಚಿದೆ. ಹೆಚ್ಚಿತೆ ಹೊರತು ಕಡಿಮೆಯಾಗಿಲ್ಲ. ಪಾಪದ ಯಾವುದ್ಯಾವುದೋ ಜೇಡಗಳ ಮೇಲೆ ಆಪಾದನೆ ಮಾಡಿದ್ದಾಳೆ ಹೆಂಡತಿ .  ಕೇಳಿಸಿ ಕೊಂಡರೆ ಕಷ್ಟ , ಅವು ಮಾನ ನಷ್ಟ ಮೊಕದ್ದಮೆ ಹೂಡಿಯಾವು ಎಂಬ ಭಯ! 


ಯಾವುದನ್ನು ಮಾಡಬೇಡ ಎನ್ನುವರೊ ಅದನ್ನೇ ಮಾಡಬೇಕು ಎಂಬ ವಿಚಿತ್ರ ಬಯಕೆ ನಮ್ಮ ಮನಸ್ಸಿಗುಂಟಾಗುವುವದೆಂದು ಹೆಂಡತಿ ಹೊಸ ಥಿಯರಿಯೊಂದನ್ನು ಘೋಷಿಸಿ ನನ್ನನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದಾಳೆ. ಜೊತೆ ಹೊಸದೊಂದು ಮಾನಸಿಕ ಖಾಯಿಲೆಯನ್ನು ಅಂಟಿಸಲು ಹೊರಟಿದ್ದಾಳೆ!  ಏನು ಮಾಡಲಿ. ಕೈ ತೊಳೆದು ತೊಳೆದು ಚರ್ಮ ಸವೆಯುತ್ತಾ ಬಂದಿದೆ. ಉಳಿದ 14 ದಿನ ಉಳಿವುದು ಕಷ್ಟ. ಹಾಗಾಗಿ ಹೊಸ ಉಪಾಯ ಹೂಡಬೇಕು. ನಿಮಗೆ ಹೊಳೆದರೆ ನನಗೂ ಸ್ವಲ್ಪ ಹೇಳಿ. ಇಲ್ಲದಿದ್ದರೆ ನಷ್ಟ ಪರಿಹಾರ ಕೋರಿ ನಾನೆ ಒಂದು ಮೊಕದ್ದಮೆ ಹೂಡಬೇಕೆಂದಿರುವೆ. ಯಾರ ಮೇಲೆ ಎಂದು ಇನ್ನೂ ಯೋಚಿಸಿಲ್ಲ. ಇನ್ನೂ 14 ದಿನವಿದೆಯೆಲ್ಲಾ ಯೋಚಿಸಿದರಾಯ್ತು!
 ಯಾರು ನನ್ನ ಸ್ವಯಂ ಅಧಿಕಾರ ಕಿತ್ತುಕೊಂಡರೋ ಅವರೇ ನನ್ನ ಮೂಗು ಮುಟ್ಟಿಕೊಳ್ಳುವ ಅಧಿಕಾರ ನೀಡಬೇಕು ತನ್ಮೂಲಕ ನನ್ನ ಮೂಗಿನ ಕೆರೆತ ನಿಲ್ಲಿಸ ಬೇಕಾಗಿ ಕಳಕಳಿಯ ವಿನಂತಿ.
#_ಮನೆಯಲ್ಲೇ_ಇರೋಣ_ಮತ್ತಷ್ಟು_ಕೆರೆಯೋಣ!
#_lockdown .
�

Monday, March 30, 2020

ಜಾತ್ರೆ ಎಂಬ ನವಿರಾದ ನವಿಲುಗರಿ.



ಜಾತ್ರೆ ಎಂದರೆ ಬಿಡುವು. ಜಾತ್ರೆ ಎಂದರೆ ಸೇರುವಿಕೆ. ಜಾತ್ರೆ ಎಂದರೆ ಜಂಗುಳಿ. ಮಕ್ಕಳಿಗೆ ಜಾತ್ರೆ ಎಂದರೆ ಉತ್ಸಾಹ, ಆಟಿಕೆ ಅಂಗಡಿಗಳು. ಜಾತ್ರೆ ಎಂದರೆ ಏಕತಾನತೆ ಮುರಿವ ಸಂಸ್ಕ್ರತಿಯ ಬಿಂದುಗಳಾಗಿ ನನಗೆ ಕಾಣುತ್ತೆ.
ಈ ಜಾತ್ರೆ ಅಜ್ಜಿಯೂರಾದ ಬೈಂದೂರ ನೆನಪು ಹೊತ್ತು ತರುವುದು. ಜೊತೆ ಜೊತೆಗೆ ಮಾವು ಕದ್ದ, ಚಿಕ್ಕವಯಸ್ಸಿನಲ್ಲೇ ಎಷ್ಟೋ ಕಿಲೋ ಮೀಟರ್ ನಡೆದ, ನವಿರಾದ ಹೆಸರ ಪಾಯಸ ಹೊಡೆದ, ತಮ್ಮನನ್ನು ಗೋಳು ಹೊಯ್ದು ಕೊಂಡ ನೆನಪುಗಳ ತಕದಿಮಿತ.




ಆಗೆಲ್ಲಾ ನಮಗೆ ಜಾತ್ರೆಗಾಗಿ ನೀಡುವ ಹಣ ಅಷ್ಟಕ್ಕಷ್ಟೆ. ಸ್ವಾಭಿಮಾನದಿಂದಾಗಿ ಯಾರಲ್ಲೂ ಬೇಡುವಂತಿರಲಿಲ್ಲ.  ಜಾತ್ರೆಗಾಗಿ ಕಾಸು ಕೂಡಿಸುವ ಕನಸು. ತರೆವಾರಿ ಅಂಗಡಿಗಳ, ಒಂದು ಆಟಿಕೆ ಕೊಳ್ಳುವ ತವಕ. ಹೇಗೆಂಬ ಚಿಂತೆ? ಶಾಲೆಗೆ ಹೋಗಲು ನೀಡುವ ಹಣವನ್ನು ನೆಡದೇ ಹೋಗಿ ಉಳಿಸುವುದು. ಅಡುಗೆಗೆ ಸಹಾಯಕರಾಗಿ ಹೋಗುವುದು. ಬಡಿಸಲು ಹೋಗುವುದು, ನಮ್ಮ ಕೆಲಸವಾಗಿತ್ತು.

ನಾವು ಚಿಕ್ಕವರಿದ್ದಾಗ ನಮ್ಮಜ್ಜಿ ಮನೆಯ ಹತ್ತಿರದಲ್ಲೇ ಅಜ್ಜಿಯ ಅತ್ತೆಯೊಬ್ಬರಿದ್ದರು. ಶಿಕ್ಷಕಿಯಾಗಿ ನಿವೃತ್ತರಾದವರು. ಅವರಿಗೆ ನಡೆಯಲಾಗುತ್ತಿರಲಿಲ್ಲ. ದೊಡ್ಡ ಮನೆ, ದೊಡ್ಡ ಜಾಗ, ನಿವೃತ್ತಿ ವೇತನ ಎಲ್ಲವೂ ಇತ್ತು. ನೋಡಿಕೊಳ್ಳಲು ಮಾತ್ರ ಯಾರಿರಲಿಲ್ಲ. ಗಂಡ ಯಾವಾಗಲೋ ತೀರಿ ಹೋಗಿದ್ದರು. ಮಕ್ಕಳಿರಲಿಲ್ಲ. ನಮ್ಮಜ್ಜಿಯನ್ನು ಗೋಳು ಹೊಯ್ದುಕೊಂಡ ಅವರು ಆಗ ಅಜ್ಜಿಯನ್ನೇ ಅವಲಂಬಿಸಿದ್ದರು. ರಜೆ ಬಂದಿತೆಂದರೆ ಅಜ್ಜಿಗೆ ಅವರ ಸೇವೆಯಿಂದ ಮುಕ್ತಿ. ನಮ್ಮ ಸೇವೆ ಶುರು. ದಿನಾಲೂ ಬೆಳಗ್ಗೆ ಚಹ, ಮಧ್ಯಾಹ್ನ ಊಟ, ಸಂಜೆಗೆ ಚಹ ಇಷ್ಟನ್ನು ಹೋಟೆಲ್ಗೆ ಹೋಗಿ ತಂದು ಕೊಡಬೇಕಿತ್ತು. ಒಂದಿನಕ್ಕೆ ನಮಗೆ, ಅಂದರೆ ನನ್ನಿಬ್ಬರು ತಮ್ಮಂದಿರು ಶ್ರೀಕಾಂತ, ಶ್ರೀಪತಿಗೆ ಸೇರಿ ತಲಾ ನಾಲ್ಕಾಣೆ ಕೊಡುತ್ತಿದ್ದರು. ಆಟದ ನಡುವೆಯೂ ಆಟಿಕೆ ಆಸೆಗೆ ದಿನಾಲೂ ಚಹ ಸೇವೆಗೆ ಹೋಗುತ್ತಿದ್ದೆವು. ಸೇವೆ ಜೊತೆಗೊದಿಷ್ಟು ಹಣ ಸಂಪಾದನೆಯೂ ಆಗುತ್ತಿತ್ತು. ಆಟಿಕೆ ಕೊಂಡು ವಿಶಾಲ ಹರವಿನ ಅಜ್ಜಿ ಮನೆಯಲ್ಲಿ ಆಡುವ ಸಂತೋಷವೇ ಬೇರೆ. ಎಷ್ಟೋ ವರ್ಷ ಅವರಿಗೆ ಚಹ ಸೇವೆ ಮಾಡಿದೆವು. ಜಾತ್ರೆ ಮುಗಿದ ಮೇಲೆ ನಾವು ಮೂವರೂ ಹೊರಡುತ್ತಿದ್ದೆವು. ಕಣ್ಣೀರಾಗಿ ಅಮ್ಮಮ್ಮ ನಮ್ಮನ್ನು ಬೀಳ್ಕೊಡುತ್ತಿದ್ದರು. ಒಲ್ಲದ ಮನಸಿನಿಂದ ನಮಗೆ ಮಾವ, ಅತ್ತೆಯೂ ಪ್ರೀತಿಯ ವಿದಾಯ ಕೋರುತ್ತಿದ್ದರು. ಜಾತ್ರೆ ನೋಡಿ ಆಟಿಕೆಯೊಂದಿಗೆ ಮರಳುತ್ತಿದ್ದೆವು. ಜಾತ್ರೆ ಎಂದರೆ ಆಟಿಕೆ, ಅಮ್ಮಮ್ಮ ಹಾಗೂ ಅವರ ಅತ್ತಿಗೆ ನೆನಪಾಗುತ್ತಾರೆ.

ಜಾತ್ರೆ ಎಂದರೆ ಈಗ ಆಗಿನಷ್ಟು ಕುತೂಹಲ ಉಳಿದಿಲ್ಲ. ಬಹುಶಃ ನಾವು ದೊಡ್ಡವರಾದೆವೆಂದು ಕಾಣುತ್ತೆ. ದ ಲಾ ಆಪ್ ಮಾಜರ್ಿನಲ್ ಯುಟಿಲಿಟಿ ಜಾತ್ರೆಗೂ ಅನ್ವಯಿಸುತ್ತೆ ಅನಿಸಲಿಕ್ಕೆ ಶುರುವಾಗಿದೆ. ಕಳೆ ಕಳೆದುಕೊಂಡ ಬೈಂದೂರು ಸಪ್ಪಗೆ ಕುಳಿತಿದೆ. ನನ್ನ ಬಾಲ್ಯದ ಗೆಳೆಯರಿಬ್ಬರೂ ಈಗ ಬದುಕಿನ ಸಂತೆಯಲ್ಲಿ ಕಳೆದುಹೋಗಿದ್ದಾರೆ!
ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ, ಸಿದ್ದಾಪುರ ಅಂಚೆ,
ಕುಂದಾಪುರ ತಾಲೂಕು.
ಉಡುಪಿ ಜಿಲ್ಲೆ-576229.

Thursday, March 26, 2020

ಅಳಿಲ ಧ್ಯಾನ!



ಅಳಿಲ ಮರಿಯೇ
ಅಳಿಲ ಮರಿಯೇ
ಎಲ್ಲಿರುವೆ?
ತುಪಾಕಿಯ ಮೇಲೆ
ಕುಂತಿರುವೆ.
ಅಯ್ಯೋ ರಾಮ
ಏನು ಕೆಲಸ
ಅಲ್ಲಿ ನಿನಗೆ?
ಬೇಗ ಸೇರೆ 
ಮನೆಗೆ.
'ತುಪಾಕಿ ಮಾಮ
ಬಂದರೆ ಕೈಯ
ಮುಗಿವೆ
ಹೊಡೆಯದಿರು ಗುಂಡು
ಎನುವೆ.
ನಾಕು ಜನರ ಪ್ರಾಣ
ಉಳಿಸಿ ಬರುವೆ.

ಶ್ರೀಧರ್ ಎಸ್. ಸಿದ್ದಾಪುರ. ಮಾರ್ಚ್ ೨೨.
#ಪುರುಸೊತ್ತು_2020.

#ಮಕ್ಕಳ_ಪದ್ಯಗಳು.

Tuesday, March 24, 2020

'ಅಂತರಂಗ'ದಲ್ಲಿ ಅನಂತ ಪಯಣ...



ನಾವು ಯಾವಾಗ ನಮಗೋಸ್ಕರ ಜೀವಿಸುತ್ತೇವೆ? ನಮ್ಮ ಜೀವಿತದಲ್ಲಿ ನಡೆಯುವ ಘಟನೆಗಳಿಗೆ ಏನಾದರೂ ಕಾರ್ಯಕಾರಣ ಸಂಬಂಧವಿದೆಯೇ? ಎಲ್ಲರೂ ಮತ್ತೊಬ್ಬರ ಖುಷಿಗಾಗಿ ಹಗಲುವೇಷ ತೊಟ್ಟವರಂತೆ ಬದುಕುತ್ತೇವೆ. ಕೆಲವೊಮ್ಮೆ ನಮ್ಮ ಬದುಕಿನ ಮೇಲೆ ನಮಗೇ ಹಿಡಿತವಿಲ್ಲದೇ ಪರಿತಪಿಸುವಂತೆ ಮಾಡಿಬಿಡುವುದು. ರಾಮಾಯಾಣ ಮತ್ತು ಮಹಾಭಾರತದ ಅನೇಕ ಪಾತ್ರಗಳ ಒಳ ಹೊಕ್ಕು ಬರೆದ ಅಂತರಂಗ ವೆಂಬ ವಿಶಿಷ್ಟ ಕೃತಿಯೊಂದನ್ನು ಓದಿ ಮುಗಿಸಿದಾಗ ನನಗಾದ ಅನುಭವಗಳು. ಅಕ್ಕನಂತಹ ಗೆಳತಿ ಸುರೇಖಾ ಭೀಮಗುಳಿ ಮನಮುಟ್ಟುವಂತೆ ಬರೆದಿದ್ದಾರೆ.
ಶ್ರುತಕೀತರ್ಿ, ಮಾಂಡವಿಯ ಸ್ವಗತಗಳು ನಮಗೆ ಹಾಗನ್ನಿಸದೇ ಇರಲು ಬಿಡಲಾರವು. ಯಾರ್ಯಾರಿಗಾಗಿಯೋ ನಾವು ತೊಟ್ಟ ವೇಷವೇ ನಮಗೇ ಒತ್ತಡವನ್ನುಂಟು ಮಾಡುತ್ತವೆ. ಪ್ರತಿ ಪಾತ್ರವು ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಂಡಂತೆ ಭಾಸವಾಗುವುದು. ಮತ್ತೊಬ್ಬರ ದೃಷ್ಟಿಕೋನದಲ್ಲಿ ಎಲ್ಲವನ್ನು ನೋಡುವುದು ಬಲು ಕಷ್ಟದ ಕೆಲಸವೇ. ಈ ಎಲ್ಲಾ ಕಷ್ಟಗಳನ್ನು ಬಹಳ ಸರಳವಾಗಿ ನಿರೂಪಿಸುತ್ತಾ ಪ್ರತಿ ಪಾತ್ರದ ತುಮುಲಗಳನ್ನು, ಕಷ್ಟಗಳನ್ನು ಅತ್ಯಂತ ಸಶಕ್ತವಾಗಿ ನಮ್ಮ ಮುಂದಿಡುವ ಕ್ರಮ ಬಹಳ ಇಷ್ಟವಾಯಿತು.
ಕೈಕೆಯಿ ತನ್ನ ನಿಲುವಿಗೆ ದುಃಖಿಸುತ್ತಾ ರಾಮನಿಂದ ಸಂತೈಸಲ್ಪಟ್ಟಾಗ ನಾನು ಮತ್ತೊಮ್ಮೆ ತಾಯಿಯಾದೆ ಎಂದು ಉಸುರುವ ಆ ಕ್ಷಣ ಅದೇಕೊ ನನ್ನನ್ನು ಅನೇಕ ದಿನಗಳವರೆಗೆ ಕಾಡುತ್ತಲೇ ಇತ್ತು. ರಾಮನ ನಡೆಯಂತೂ ಅಚ್ಚರಿಯ ಕಡಲಿನಲಿ ತೇಲಿಸಿತು. ಎಷ್ಟು ಉದಾತ್ತವಾಗಿ ರಾಮನನ್ನು ಚಿತ್ರಿಸಿದ್ದಾರೆ. ಬೈರಪ್ಪ ಬರೆದ ಉತ್ತರಕಾಂಡವನ್ನು ಮತ್ತೊಮ್ಮೆ ಓದುವಂತೆ ಮಾಡಿತು. ಅತಿ ಚಿಕ್ಕ ಚಿಕ್ಕ ಪಾತ್ರಗಳನ್ನು ಕಟ್ಟಿಕೊಟ್ಟ ಕ್ರಮ ಅನನ್ಯ. ಅವರೇ ಅಂದಂತೆ ಯಕ್ಷಗಾನದಲಿ ಮಿಂಚಲು ಅವಕಾಶವೇ ಇಲ್ಲದ ಅನೇಕ ಪಾತ್ರಗಳಾದ ರುಮೆ, ಅಂಬಾಲಿಕೆ, ಅಂಬಿಕೆ ಮುಂತಾದವರ ಹಾಜರಿ ಹಾಕಿಸಿದ್ದಾರೆ.
ಕೊನೆಗೂ ಕಾಡುವ ಜಿಜ್ಞಾಸೆ:-
ರಾಮಾಯಾಣದ ಅನೇಕ ಪಾತ್ರಗಳು ಎಲ್ಲವೂ ವಿಧಿ ನಿಯಮಾನುಸಾರ ನಡೆಯುವುದು. ಅಥವಾ ತನ್ನ ಮನೋಬಲಕ್ಕನುಗುಣವಾಗಿ ನಡೆಯುವುದೋ ಎಂಬ ತಾತ್ವಿಕ ಪ್ರಶ್ನೆ ನಮಗೆ ಎದುರಾಗುವಂತೆ ಮಾಡುತ್ತಾರೆ ಸುರೇಖಾ. ಎಲ್ಲಕ್ಕೂ ಕಾರ್ಯ ಕಾರಣ ಸಂಬಂಧವನ್ನು ಕಲ್ಪಿಸುತ್ತಾ ನೀನು ಬರಿ ಪಾತ್ರದಾರಿ ಅಷ್ಟೇ ಎಂದು ನಿರೂಪಿಸುತ್ತಾ, ಮಾನವ ಪ್ರಯತ್ನಗಳಿಗೆ ಬೆಲೆ ಇಲ್ಲವೇ ಎಂಬ ಜಿಜ್ಞಾಸೆಯನ್ನೂ ಹುಟ್ಟು ಹಾಕುತ್ತಾರೆ.
ವಿಭಿನ್ನ ಹೊತ್ತಗೆಯೊಂದನ್ನು ಓದಿದ ಅನುಭವ ನಿಮಗಾಗುವುದರಲ್ಲಿ ಅನುಮಾನವಿಲ್ಲ. ತಡವಾಗಿ ಪ್ರತಿಕ್ರಿಯಿಸುವ ಈ ಲೇಟ್ ಲತೀಪನ ಬಗ್ಗೆ ಕ್ಷಮೆ ಇರಲಿ. ನಮಸ್ಕಾರ.

ಶ್ರೀಧರ. ಎಸ್. ಸಿದ್ದಾಪುರ

Wednesday, March 11, 2020

ಬಾಹು ಬಲಿಗೆ ಹೊಯಿಗೆ ಮಜ್ಜನ!



ಏನಿವತ್ತು ಏನೋ ಹೇಳುತ್ತಾನೆಂದು ಹೆದರ ಬೇಡಿ. ನನ್ನ ಬಾಲ್ಯದ ನೆನಪುಗಳನ್ನು ನಿಮ್ಮ ಮುಂದೆ ಹರವಿ ಕುಳಿತಿರುವೆ ಅಷ್ಟೇ.
ಬಾಲ್ಯದ ನೆನಪು ಮಾಸದ ಹೊಂಬಿಸಿಲು. ಅರಳುವ ಕುಡಿ ಮೊಗ್ಗು. ನವಿರಾದ ನವಿಲು ಗರಿ. ಬಾಲ್ಯ ಕಳೆಗಟ್ಟಿದ್ದು ನನ್ನಮ್ಮನ ತವರೂರು ಬೈಂದೂರೆಂಬ ಕಡಲ ತೀರದಲ್ಲಿ. ನನ್ನ ನೆನಪುಗಳಲ್ಲಿ ಬೆಚ್ಚಗಿರುವ ಬೈಂದೂರು. ರಜೆ ಬಂದರೆ ಚೀಲ ಹಿಡಿದು ಬೈಂದೂರಿಗೆ ಪರಾರಿ. ಹಪ್ಪಳ, ಸಂಡಿಗೆಗಳ ಸುವರ್ಣ ಕಾಲ. ಬಾಲ್ಯದ ನೆನಪಿನ ರತ್ನ ನಿಮ್ಮ ಮುಂದೆ.
ಊರ ಜಾತ್ರೆಯ ಸಮಯ. ನನ್ನ ಚಿಕ್ಕಮ್ಮ ತನ್ನಿಬ್ಬರು ಮಕ್ಕಳೊಂದಿಗೆ ಬೈಂದೂರಿಗೆ ಬಂದಿದ್ದರು. ನಾನು ಮತ್ತು ಅಕ್ಕನೂ ಹೋಗಿದ್ದೆವು. ಮನಸೋ ಇಚ್ಚೆ ಆಡುತ್ತಿದ್ದೆವು. ನಮ್ಮೊಂದಿಗೆ ಶ್ರೀಕಾಂತ, ಅವನ ತಮ್ಮ ಶ್ರೀಪತಿಯೂ ಆಡುತ್ತಿದ್ದ. ಏನೋ ಕಟ್ಟಿಸಬೇಕೆಂದು ಮಾವ ಒಂದಿಷ್ಟು ಹೊಯಿಗೆ ತಂದು ರಾಶಿ ಹಾಕಿದ್ದ. ಎಲ್ಲಿತ್ತೊ ಸಣ್ಣ ತುಂಟತನ, ಜಾಗೃತವಾಯಿತು. ತಮ್ಮನನ್ನು ಒಂದು ಪೀಠದಲ್ಲಿ ಕೂರಿಸಿದೆವು. ಒಂದಿಷ್ಟು ಹೊಯಿಗೆಯನ್ನು ಅವನ ತಲೆಗೆ ಹೊಯ್ದೆವು. ಆತನು ತುಟಿ ಪಿಟಕ್ ಎನ್ನದೇ ಕೂತಿದ್ದು ನೋಡಿ ಮತ್ತೆರಡು ಡಬ್ಬ ಹೊಯಿಗೆಯನ್ನು  ಅವನ ತಲೆಗೆ ಸುರಿದೆವು. ಅವನಿಗೆ ಹೊಯಿಗೆ ಮಜ್ಜನ. ಆತ ಬಾಹುಬಲಿಯಂತೆ ಅಲುಗಾಡದೇ ಕೂತ! ನಡು ನಡುವೆ ದೊಡ್ಡ ತಮ್ಮನ ಮಂತ್ರ ಘೋಷ. ನಾವು ಮಜ್ಜನ ನಡೆಸಿದ್ದೇ ನಡೆಸಿದ್ದು. ಆತನನ್ನು ಕೂರಿಸಿ ಋಷಿ ಮಾಡಿದೆವು. ಒಂದೆರಡು ದಾಸವಾಳವನ್ನು ಅವನ ಕಿವಿಗಿಟ್ಟೆವು. ಆತ ಕಲ್ಲಿನ ಮೂತರ್ಿಯಂತೆ ಅಲ್ಲಾಡದೇ ಕೂತಿದ್ದ! ನಮ್ಮ ನಡುವಿನಲ್ಲಾದ ಕಾಂಟ್ರಾಕ್ಟ್ ಏನೆಂದು ಈಗ ನೆನಪಿಲ್ಲ. ಆತನೇಕೆ ಸುಮ್ಮನೆ ಕೂತಿದ್ದನೆಂಬುದೂ ಗೊತ್ತಿಲ್ಲ!
ಹಪ್ಪಳದ ಕೆಲಸದಲ್ಲಿ ನಿರತರಾಗಿದ್ದ ಚಿಕ್ಕಮ್ಮ ನಾವಾಡುವಲ್ಲಿಗೆ ಬಂದಳು. ತಮ್ಮನಿಗಾದ ಗತಿ ನೋಡಿ ಕಣ್ಣೀರಾದಳು ನೋಡಿ. ಅಮ್ಮನಿಗೆ ನೋಡಲಾಗಲಿಲ್ಲ. ಸಿಟ್ಟು ನೆತ್ತಿಗೇರಿತು. ಅಮ್ಮ ಸಾಕ್ಷಾತ್ ರಣಚಂಡಿಯಾದಳು. ಕಟ್ಟಿಗೆ ತುಂಡನೆತ್ತಿಕೊಂಡು ಅಮ್ಮ ನನ್ನನ್ನು ಅಟ್ಟಿಸಿಕೊಂಡು ಬಂದಳು. ಒಂದು ಪೆಟ್ಟು ಸಾಕಿತ್ತು ನನ್ನ ಕೈಕಾಲು ಊನ ಮಾಡಲು, ಅಷ್ಟು ದೊಡ್ಡದಿತ್ತು ಅದು. ಉಪ್ಪರಿಗೆಯಲ್ಲಿ ತಲೆ ಮರೆಸಿಕೊಂಡೆ. ಉಪ್ಪರಿಗೆಯಲ್ಲೊಂದು ಅಡ್ಡ ದಂಡೆ ಇತ್ತು. ಅಲ್ಲಿ ಉಸಿರಾಡದೇ ಕೂತಿದ್ದೆ. ಅಮ್ಮ ನನ್ನ ಅರಸುತ್ತಾ ಸಿಟ್ಟಿನಲ್ಲಿ ಬುಸುಗುಟ್ಟುತ್ತಾ ಉದ್ದನೇ ಹಜಾರದಂತಿದ್ದ ಉಪ್ಪರಿಗೆಯಿಡಿ ಇಲಿಗಾಗಿ ಅರಸುವ ಬೆಕ್ಕಿನಂತೆ ಹುಡುಕ ತೊಡಗಿದಳು. ಅಡ್ಡ ದಂಡೆಯಿಂದ ಒಮ್ಮೆಲೇ ಸದ್ದಾಗದಂತೆ ದುಮುಕಿ ಪೇರಿ ಕಿತ್ತೆ ನೋಡಿ, ಮತ್ತೆ ಪ್ರತ್ಯಕ್ಷನಾಗಿದ್ದು ಊಟದ ಸಮಯಕ್ಕೇ! ನಾ ಓಡಿದ್ದು ಅಮ್ಮನಿಗೆ ಗೊತ್ತಾಗಲೇ ಇಲ್ಲ. ಇಲಿ ಹುಡುಕುವ ಬೆಕ್ಕಿನಂತೆ ಅಲ್ಲೇ ಹುಡುಕುತ್ತಾ ಸುಸ್ತಾದಳು. ಮುಂದೇ ಹೇಗೆ ಬಚಾವಾದೆನೆಂದು ಈಗ ನೆನಪಿಲ್ಲ. ಎಂದಾದರೂ ನಾವು ಮೂವರು ಪುರುಸೊತ್ತಾದಾಗ ಒಟ್ಟಾಗಿ ನೆನಪನ್ನು ಕೆದಕಿ  ಆಗಾಗ ಖುಷಿ ಪಡುತ್ತೇವೆ. 'ರಣಚಂಡಿ' ಅಮ್ಮನೆಂದು ಈಗಲೂ ಗೇಲಿ ಮಾಡುತ್ತೇನೆ. ತುಂಟ ಮಗನೆಂದು ಆಗ ಅವಳೆನ್ನ ಕಿವಿ ಹಿಂಡುತ್ತಾಳೆ!
ಕಳೆ ಕಳೆದುಕೊಂಡ  ಬೈಂದೂರು ಸಪ್ಪಗೆ ಕುಳಿತಿದೆ. ನನ್ನ ಬಾಲ್ಯದ ಗೆಳೆಯರಿಬ್ಬರೂ ಈಗ ಕೆಲಸದಲ್ಲಿ ಕಳೆದುಹೋಗಿದ್ದಾರೆ!
ಮತ್ತೆ ಬಾಲ್ಯದಲ್ಲಿ ಮೀಯುವಾಸೆ. ಈ ಜಗವು ಪುರುಸೊತ್ತು ಕೊಟ್ಟರೆ. ಪುರುಸೊತ್ತಾದಗ ಬಾಲ್ಯದ ಕತೆಗಳನ್ನೆಲ್ಲಾ ನಿಮ್ಮ ಮುಂದೆ ಹರವಿ ಕೂರಬೇಕು. ಸಿಗುವಿರಾ ಇನ್ನೊಮ್ಮೆ ವಿರಾಮದಲ್ಲಿ?


ಶ್ರೀಧರ್. ಎಸ್. ಸಿದ್ದಾಪುರ.

Saturday, February 22, 2020

ಪ್ರಸ್ಥದ ಕೋಣೆಯಲ್ಲೊಂದು ಕೊಲೆ.


oxyopes shweta ಪ್ರಭೇದಕ್ಕೆ ಸೇರಿರುವ ಜೇಡ ತನ್ನ ಸಂಗಾತಿಯನ್ನೇ ತಿನ್ನುತ್ತಿದೆ.   

ಯಾವುದೋ ಪತ್ತೆದಾರಿ ಕಾದಂಬರಿಯ ಕುರಿತು  ಹೇಳುತ್ತಾನೆಂದು ಸೀಟಿನ ತುದಿಗೆ ಬಂದಿರಾ? ವಿಷಯ ಆಸಕ್ತಿದಾಯಕವಾಗಿದೆ. ಸ್ವಲ್ಪ ಇರಿ.
ಪ್ರತೀ ಜೀವಿಯು ಈ ಜಗತ್ತಿನಲ್ಲಿ ಭಿನ್ನ. ಅವುಗಳಿಗೆ ಪ್ರಕೃತಿ ನೀಡಿದ ಸಂಸ್ಕಾರ ಬೇರೆ ಬೇರೆ. ಹಾಗಾಗಿ ಅವು ಒಂದರಂತೆ ಮೊತ್ತೊಂದಿಲ್ಲ. ಪರಿಸರದ ಒತ್ತಡಗಳು ಅವನ್ನು ವಿಭಿನ್ನವಾಗಿ ರೂಪಿಸಿವೆ. ನಾನು ಹೇಳುವ ಕತೆಯೂ ಅಂತಹುದೇ ಒಂದು ತುಣುಕು.
       
ಕ್ರಾಬ್ ಜೇಡವನ್ನು ಹಿಡಿದಿರುವ ಮತ್ತೊಂದು ಜೇಡ. 
ಜೀವಿಗಳು ತಮ್ಮ ಸಂತಾನವನ್ನು ಮುಂದುವರಿಸುವ ಸಲುವಾಗಿ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಂಡಿವೆ. ಪ್ರಕೃತಿ ಸಹಜವಾದುದು. ಸಂತಾನೋತ್ಪತ್ತಿಯಾಗಲು ಗಂಡು ಹೆಣ್ಣನ್ನು ಕೂಡ ಬೇಡವೇ?
ಹೀಗಿರುವ ಪ್ರಸ್ಥದ ಕೋಣೆಯಲ್ಲಿಯೇ ವರನಿಗೆ ಮರಣ ಬಂದರೆ ಹೇಗೆ? ಪ್ರಸ್ತದ ಮನೆಯಲ್ಲಿಯೇ ಒಂದು ಕೊಲೆ ಅದೂ ಮದುಮಗನದ್ದು! ಕೊಲೆಗಾರ ಯಾರೆಂದಿರಾ? ಬೇರಾರೂ ಅಲ್ಲ, ಒಲಿಸಿಕೊಂಡವಳು! ಅಚ್ಚರಿಯಾಯಿತೆ? ಓಡಿದಾಗಲೋ, ಕೆಲಸ ಮಾಡಿದಾಗ ಹಸಿವಾಗೋದು ಸಹಜ. ಆದರೆ ಜೇಡಗಳಿವೆಯಲ್ಲ ಅವುಗಳಿಗೆ ಪ್ರಸ್ಥದ ಕೊನೆಗೆ ಹೆಣ್ಣಿಗೆ ವಿಪರೀತ ಹಸಿವು! ಹಸಿವು ಆರಲು ಕೊಲೆ ಮಾಡಲು ಹೇಸುವುದಿಲ್ಲ. ಹೆಣ್ಣು ಗಂಡಿನ ಚರಮಗೀತೆ ಬರೆಯುವವು. ಗಂಡು ಜಾಣನಾದರೆ ಉಪಾಯವಾಗಿ ತಪ್ಪಿಸಿಕೊಳ್ಳುವುದು. ಆದರೆ ಕೆಲವೊಮ್ಮೆ ಸಿಕ್ಕಿ ಬೀಳುವುದು ಮಾಮೂಲು. ಹೆಣ್ಣು ಸ್ವಲ್ಪ ಯಾಮಾರಿದರೂ ಗಂಡು ತಪ್ಪಿಸಿಕೊಳ್ಳುವುದು.
ಇಲ್ಲಿರುವ oxyopes shweta   ಪ್ರಭೇದಕ್ಕೆ ಸೇರಿರುವ ಜೇಡ ತನ್ನ ಸಂಗಾತಿಯನ್ನೇ ತಿನ್ನುತ್ತಿದೆ. ಇದಕ್ಕೆ cannibalism ಎನ್ನುವರು. ಅದು ಸಂಗದ ತರುವಾಯ. ಅಚ್ಚರಿಯಾಯಿತೇ? ಇನ್ನೆಷ್ಟು ಅಚ್ಚರಿಗಳು ಪ್ರಕೃತಿ ತನ್ನ ಒಡಲಿನಲ್ಲಿ ಹುದುಗಿಸಿಕೊಂಡಿರುವಳೋ ಗೊತ್ತಿಲ್ಲ. ಗುಟ್ಟು ರಟ್ಟಾದಂದು ನಿಮಗೆ ತಿಳಿಸುವೆ. ಅಲ್ಲಿವರೆಗೆ ನಮಸ್ಕಾರ...
 ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ, ಸಿದ್ದಾಪುರ ಅಂಚೆ,



      

Friday, January 24, 2020

ಚಿನಕುರುಳಿ ಚೇಳಿನ ಮರಿ!

"ಲೋ ಶ್ರೀಧರಾ ಏನು ಮಾಡ್ತಿದ್ದಿಯೋ, ಬೇಗ ಬಾ" ಅಮ್ಮನ ಆರ್ತನಾದ. "ಈ ಹಾಳು ಪುಸ್ತಕದಲ್ಲಿ ಮುಳುಗಿದರೆ ಲೋಕ ಮುಳುಗಿದರೂ ತಿಳಿಯಲ್ಲ" ಎಂದು ಒಂದೇ ಸಮನೆ ವಟ ವಟಿಸುತ್ತಲೇ ಇದ್ದಳು.
ಚೇಳಿನಂತಿರುವ  ಊರ್ಣ ನಾಭ!

ಎದ್ದೆನೋ ಬಿದ್ದೆನೊ ಎಂದು ಅಮ್ಮನಿದ್ದಲ್ಲಿಗೆ ಓಡಿದೆ. "ಚೇಳಿನ ಮರಿ ಮರಾಯ ಕಚ್ಚಲಿಕ್ಕೆ ಬರುತ್ತೆ ನೋಡು" ಎಂದು ಕಥೆ ಹೇಳಲು ಶುರುವಿಟ್ಟಳು. ನೋಡಿದೆ. ಪುಟಾಣಿ ಚೇಳಿದ್ದರೆ ಅದರ ಅಮ್ಮನೂ ಇರಬೇಕಲ್ಲ ಎಂದು ಯೋಚಿಸುತ್ತಾ ಬಗ್ಗಿ ನೋಡಿದೆ. ಪುಸ್ತಕದ ಮೇಲೆ ಕುಳಿತು ತಬ್ಬಿಕೊಳ್ಳುವಂತೆ ತನ್ನೆರಡೂ ಬಾಹುಗಳನ್ನು ಚಾಚಿತು. ಅಮ್ಮ ಮತ್ತೆ ಚೀರಿದಳು. 'ನಿಂದೇನೋ ಪ್ರಯೋಗ ಅದರ ಮೇಲೆ, ಕಡಿಯುತ್ತೆ ನೋಡು ಹೊರಗೆ ಬಿಟ್ಟು ಬಾ ಮರಾಯ' ಎಂದು ಬೇಡಿಕೊಂಡಳು. ನನಗೇನೋ ಸಂದೇಹ. ಚೇಳಿನ ಮರಿ ಇರಲಿಕ್ಕಿಲ್ಲವೆಂದು. 'ಅಮ್ಮಾ ಇದು ಚೇಳಿನ ಮರಿ ಅಲ್ಲಾ, ಜೇಡವಿರಬೇಕು' ಎಂದೆ. 'ನಿನ್ನ ತಲೆ' ಸರಿಯಾಗಿ ನೋಡು ದೊಡ್ಡ ಕೊಂಬಿದೆ. ಆದರೂ ಪರೀಕ್ಷಿಸುವ ದೃಷ್ಟಿಯಿಂದ ನಿಧಾನಕ್ಕೆ ಪುಸ್ತಕವನ್ನೆತ್ತಿ ಮನೆಯ ಹೊರಗೋಡಿದೆ. ಅದನ್ನು ಕೆಸುವಿನ ಗಿಡದ ಮೇಲೆ ಬಿಟ್ಟೆ. 'ಚೇಳಿನ ಮರಿಯೇ ಅದು' ಎಂದು ವಟ ವಟಿಸುತ್ತಲೇ ಇದ್ದಳು. ಮನೆಯೊಳಗೋಡಿ ಕ್ಯಾಮಾರ ಹಿಡಿದು ಬಂದೆ. ಎಲ್ಲಾ ಹೊಂದಾಣಿಕೆ ಮಾಡಿಕೊಂಡು ಬೆಳಕನ್ನು ಅವನ ಮೇಲೆ ಚಿಮುಕಿಸಿದೆ. ಚಿತ್ರವನ್ನು ಕೂಡಲೇ ಕಂಪ್ಯೂಟರಿಗೆ ವರ್ಗಾಯಿಸಿ ನೋಡಿದೆ. ಗುರುತು ಹತ್ತಿತ್ತು. ಇವನಾ ಗೊತ್ತುಂಟು.      'ಇಂಡೊಪಡಿಲಾ'    ಪ್ರಬೆಧಕ್ಕೆ ಸೇರಿದ ಪೋರ, ಮರಿ ವೀರ. ಯಾರ ಕೈಗೂ ಸಿಗದಂತೆ ವೇಷ ಮರೆಸಿ ಚೇಳಿನಂತೆ ತೋರಿಸಿಕೊಳ್ಳುತ್ತಾ ಓಡಾಡುತ್ತಾನೆ! ನೋಡಿದವರೂ ಮೋಸ ಹೋಗಲೇ ಬೇಕು ಹಾಗಿದ್ದಾನೆ ಪುಣ್ಯಾತ್ಮ. ಹಾಗೇ ಅಮ್ಮನೂ ಮೋಸ ಹೋಗಿದ್ದಾಳೆ. ಇವನು ಅವನ್ನವೆಂದರೂ ಕೇಳುತ್ತಿಲ್ಲ. ಕೊನೆಗೆ ಅಂತಜರ್ಾಲದಿಂದ ಒಂದೆರಡು ಚಿತ್ರವಿಳಿಸಿ ತೋರಿಸಿದೆ. ಕೊನೆಗೂ ಅವಳಿಗೆ ಆತ್ಮ ಸಾಕ್ಷತ್ಕಾರವಾಯಿತು! ಜೇಡವೆಂದು ಒಪ್ಪಿದಳು. ಈಗ ಹುಲ್ಲುಕಡ್ಡಿಯನ್ನು ತೋರಿಸಿ ಇದೊಂದು ಜೇಡ ಎಂದರೂ ನಂಬುವ ಸಿತ್ಥಿಗೆ ತಲುಪಿದ್ದಾಳೆ!
,
ಹಿಮ್ಮುಖ ನೋಟದ ಆಕರ್ಷಕ ಕಣ್ಣುಗಳು 



ಶ್ರೀಧರ್. ಎಸ್. ಸಿದ್ದಾಪುರ.

Sunday, January 12, 2020

ಚಿತ್ತಾಕರ್ಷಕ ಚಾರ್ಮಾಡಿಯಲ್ಲೊಂದು ಸುತ್ತು.......


ಎರಡು ಪ್ರಾಣಿಗಳು ಪರಸ್ಪರ ಮಾತಾಡುತ್ತಿವೆಯೋ ಎಂಬಂತೆ ಕಾಣುವ 'ಏರಿಕಲ್ಲು' ಬೆಟ್ಟ ಚಿತ್ತಾಕರ್ಷಕ ಚಾಮರ್ಾಡಿಗೆ ಬಂದೊಡನೆ ನಿಮ್ಮನ್ನು ಸ್ವಾಗುತಿಸುತ್ತೆ. ಬೆಟ್ಟದ ತಪ್ಪಲಿನ ತಣ್ಣಗಿನ ಊರು ಚಾಮರ್ಾಡಿ. ಫಾಟಿಯ ಹೆಸರೂ ಊರಿಗೂ ಅಂಟಿದೆ.
ಊರ ಪಕ್ಕದ ಹೋಟೆಲ್ ಗುರುಪ್ರಸಾದ್ಗೆ ದಾಳಿ ಮಾಡಿ ಏಳೇಳು ಇಡ್ಲಿ, ಅವಲಕ್ಕಿ, ಬನ್ಸ್ ಹೊಡೆದು ಹೊರಟಿದ್ದು ಬಾಳೆಕಲ್ಲು, ಕೊಡೆಕಲ್ಲು ಏರಲು. ಹೊಂಡ ಮಯ ಬಸ್ ದಾರಿಯಲ್ಲಿ ಸ್ವಲ್ಪ ಹೊತ್ತು ಪ್ರಯಾಣ. 



ಬಾಳೆ ಗುಡ್ಡದ ನೆತ್ತಿ 

ಏರು ದಾರಿಯ ಚಾಮರ್ಾಡಿ ಗಿರಿಗಳ ಸುತ್ತಿ ಹೊಂಡ ಹಾರಿ ನಿಂತಿದ್ದು ಒಂಟಿ ಮರವೆಂಬಲ್ಲಿ. ಎಡಕೆಲ್ಲಾ ಮರಗಳ ಗಸ್ತು ಬಲಕೆ ಬಾಯಿಬಿಟ್ಟ ಪ್ರಪಾತ. ಚಾಮರ್ಾಡಿಯ ಕನ್ನಿಕೆಯೊಬ್ಬಳು ಅಲ್ಲೇ ನಿಶ್ಶಬ್ದವಾಗಿ ಹರಿವಳಲ್ಲಿ. ಅವಳ ಜಡೆ ಹಿಡಿದು, ಬೇರ ಮುಟ್ಟಿ, ಉಸಿರು ಬಿಟ್ಟು ಸಣ್ಣ ಗುಡ್ಡ ಹತ್ತಿದೊಡೆ ನಿಚ್ಚಳ ಹಾದಿಯ ಸಣ್ಣ ಗೆರೆ ನಮ್ಮ ಮುಂದೆ ತೆರೆದು ಕೊಂಡಿತು. ಅಲ್ಲಲ್ಲಿ ಕರಿಗಳ ಸಗಣಿ. ಚಾಮರ್ಾಡಿ ಸನಿಹದ ಏರಿಕಲ್ಲು ಗುಡ್ಡ ಸೆಲ್ಪಿಗೆ ಬಾಯ್ಕಳೆದು ಸ್ಮಾಯಲ್ ಮಾಡುತಲಿತ್ತು.

ಬಾಳೇ ಗುಡ್ಡ ನೆತ್ತಿಯಿಂದ ಕಾಣುವ ಮನೋಹರ ದೃಶ್ಯ 
ಮೂವತ್ತು ನಿಮಿಷಗಳ ಏರು ದಾರಿ ಏರಿ ಕೊಡೆಕಲ್ಲಿನ ಮೇಲಿದ್ದೆವು. ದೊಡ್ಡ ಬೆಟ್ಟವೇರುವ ಮೊದಲಿನ ಪುಟಾಣಿ ನಿಲ್ದಾಣವಿದ್ದಂತೆ ಈ ಕೊಡೆಕಲ್ಲು ಬೆಟ್ಟ. ಕೊಡೆಯೊಂದು ಬೆಟ್ಟದ ತುದಿಯಲ್ಲಿ ಕೂತು ವಿಶ್ರಾಂತಿ ಪಡೆಯುತ್ತಿದೆಯೋ ಎಂಬಂತಿದೆ. ಏರದೆ ಬಿಡಲು ಸಾಧ್ಯವಿಲ್ಲದಂತಹ ಅಪರಿಮಿತ ಸೌಂದರ್ಯದ ಬೆಟ್ಟ ಎದುರಿಗೆ, ಅದವೇ ಬಾಳೆ ಕಲ್ಲು. ಆರೇಳು ಜನ ಇಲ್ಲಿ ಕುಳಿತು ಬಾಳೆಕಲ್ಲು ಬೆಟ್ಟವನ್ನು ನೋಡುತ್ತಾ ದಿನ ಕಳೆಯಲಡ್ಡಿಯಿಲ್ಲ. ಕೊಡೆ ಕಲ್ಲು ಕರಡಿಗಳ ಅಡಗುತಾಣ. ನಾವು ಬರುವ ನಾಲ್ಕು ದಿನಗಳ ಹಿಂದೆ ಚಾರಣಿಗರ ದೊಡ್ಡ ತಂಡವನ್ನು ಕರಡಿಯೊಂದು ಅಟ್ಟಿಸಿಕೊಂಡು ಬಂದಿತ್ತು. 



ಬಲು ಎಚ್ಚರಿಕೆಯಿಂದ ಸುತ್ತ ದಿಟ್ಟಿಸಿ ನೋಡಿ ಕರಡಿ ಇಲ್ಲದ್ದು ಖಾತ್ರಿಯಾದ ಮೇಲೆ ಮುಂದಡಿ ಇಟ್ಟೆವು! ಆಹಾ ಇದರ ಸೌಂದರ್ಯವೇ. ಹಿಂದಕ್ಕೆ ಏರಿಕಲ್ಲು ಎದುರಿಗೆ ಬಾಳೆ ಕಲ್ಲು. ವಿಶ್ರಮಿಸಿ ಮುಂಬರಿದೆವು. ಅಲ್ಲಲ್ಲಿ ಜರಿದ ಗುಡ್ಡವ ಹಾದು, ಆನೆ ಲದ್ದಿಯ ನೋಡಿ, ಇದು ಆನೆಗಳ ಕಿತಾಪತಿ ಎಂದರಿತು ಒಂದರೆಗಳಿಗೆ ಬೆದರಿ ಬೆವರಿ ಮುಂಬರಿದೆವು. ತಿಂಗಳ ಹಿಂದೆ ನಮ್ಮ ಮಾರ್ಗದರ್ಶಕನಿಗೆ ಆನೆ ಅಟ್ಟಿಸಿಕೊಂಡು ಬಂದ ವಿಷಯ ಹೇಳಿ ಹೆದರಿಸಿದ. ಬಂಜಾರು ಮಲೆಯಲ್ಲಿದ್ದಷ್ಟು ಆನೆ ಇಲ್ಲಿಲ್ಲವೆಂದು ಸಂತೈಸಿದ.


ಗುಡ್ಡದ ಎದುರಿಗೆ ಮಾನವ ಎಷ್ಟು ಸಣ್ಣ  


ಕರಡಿ ಸಿಕ್ಕಿದ ಕೊಡೆಕಲ್ಲು  ಗುಡ್ಡದ ಮೋಹಕ ನೋಟ 

ಬಾಳೆ ಕಲ್ಲಿನ ಕೊನೆಯ ಏರು ದಾರಿ ನಮಗೆ ಕುದುರೆ ಮುಖದ ನೆನಪ ತಂದಿತು. ನಡುವೆ ಸಿಗುವ ಅತ್ತಿ ಮರ, ಕಣಿವೆ ದಾಟಿ ಬಾಳೆ ಗುಡ್ಡದ ನೆತ್ತಿ ಕಡೆ ಹೊರಟೆವು. ಕಡಿದಾದ ಎರಡು ಗುಡ್ಡವೇರಿದರೆ ಬಾಳೆ ಕಲ್ಲು ನಿಮ್ಮ ಕೈವಶ. ನೆತ್ತಿಯ ನೋಟ ಚಿತ್ತ ಬಿತ್ತಿಯಲ್ಲಿನ್ನು ಹಸಿರು. ಇಲ್ಲಿನ ಸೌಂದರ್ಯ ಪದಗಳಲ್ಲಿ ಹಿಡಿದಿಡುವುದೇ ಕಷ್ಟ. ಒಣಗಲು ಹಾಕಿದ ಅಮ್ಮನ ಸೀರೆಯಂತೆ ಹಸಿರು ಹುಲ್ಲು ಗಾಳಿಗೆ ವೈಯಾರ ಮಾಡುತಲಿತ್ತು. ಯುದ್ದಕ್ಕೆ ನಿಂತ ಸೈನಿಕರಂತೆ ಸುತ್ತುವರಿದ ಮಲೆಗಳ ಸಾಲು. ದೂರದಲ್ಲೆರಡು ಜಲಧಾರೆ. ಬಂಡಾಜೆ ಗುಡ್ಡ, ಸುಂಕ ಸಾಲೆ ನದಿಯ ಸೌಂದರ್ಯ. ಬಲ್ಲಾಳರಾಯನ ಕೋಟೆ ಇರುವ ಬೆಟ್ಟ, ನೋಡಲು ಒಂದೇ ಎರಡೇ! ವಾವ್ ಎಂದಿತು ಮನಸ್ಸು. ಗಾಳಿಗೆ ಜೀಕುವ ಹುಲ್ಲು ನೋಡುವುದೇ ಖುಷಿ. ನೆತ್ತಿಯ ಮೇಲೆ ಕೀಟಗಳ ರಾಶಿ. ಪಶ್ಚಿಮ ಘಟ್ಟಕ್ಕೇ ಸೀಮಿತವಾದ ಅಗಣಿತ ಚಿಟ್ಟೆ ಸಮೂಹ. ಅಡಿಗಡಿಗೆ ಕ್ಯಾಮರದ ಮುಡಿಗೇರಿದ ಚಿತ್ರಗಳು ಇಂದಿಗೂ ನನ್ನ ಬಿಡದೇ ಕಾಡುವವು. ಇಂತಹ ಚಿತ್ರಗಳಿಗಾಗಿಯಾದರೂ ಒಮ್ಮೆ ಇವನ್ನೇರಲು ಹೊರಡಬೇಕು. ಅಪರಿಮಿತ ಸೌಂದರ್ಯ ರಾಶಿ ನೋಡಿ ಪುಳಕದಿಂದ ಹಿಂದಿರುಗಿದೆವು.

ಚಾರ್ಮಾಡಿಯಿಂದ ಕಂಡ ಏರಿ ಕಲ್ಲು ಗುಡ್ಡ  ಅಥವಾ ಹುಲಿ ದನ ಬೆಟ್ಟ 

ಕೊನೆಯ ಮುತ್ತು :-
ಪಶ್ಚಿಮ ಘಟ್ಟದ ಅನನ್ಯ ಪರ್ವತ ಶ್ರೇಣಿಗಳಲ್ಲಿ ಚಾಮರ್ಾಡಿ ತೀರಾ ಭಿನ್ನ. ಇಲ್ಲಿನ ಜೀವ ಪರಿಸರವೂ ವಿಭಿನ್ನ. ಕಾಟಿ, ಕರಡಿ, ಕರಿಗಳ ಆಶ್ರಯ ತಾಣ. ಇವುಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸುವುದು ಪ್ರತಿ ನಾಗರಿಕರ ಕರ್ತವ್ಯ. ಇಲ್ಲಿನ ಪರಿಸರವನ್ನು ಪ್ಲಾಸ್ಟಿಕ್ ರಕ್ಕಸನಿಂದ ಕಾಪಾಡಿ. ನೇತ್ರಾವತಿಗೆ ನೀರುಣಿಸುವ ಇಲ್ಲಿನ ಜಲಧಾರೆಗಳಿಗೆ ಪ್ಲಾಸ್ಟಿಕ್ ಸೇರದಂತೆ ಕಾಪಾಡುವುದು ನಮ್ಮ ಕರ್ತವ್ಯವಲ್ಲವೇ?

ವಾರೆ ನೋಟ

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!

  ನಮ್ಮದೊಂದು ತಂಡ ಮಳೆಗಾಲದ ಭಾನುವಾರಗಳಂದು ಪತ್ರೊಡೆ ಎಲೆಗಳ ಭೇಟೆಗೆ ಹೊರಡುತ್ತದೆ. ಇದು ಅಂಥಿತಾ ಎಲೆಯಲ್ಲ ಮರ್ರೆ ಇದು ಮರ ಕೆಸುವಿನ ಎಲೆ. ಯಾವ ಮರದಲ್ಲಿ ಎಷ್ಟು ಎಲೆ ಬಿಟ...