Saturday, May 2, 2020

ನಾಲಗೆ ಹೊರಳದ ನಾಡಿನಲ್ಲಿ ಮೂರು ದಿನ...


ಸಂಪುಟ-೨. 
ಈಶಾನ್ಯ ಭಾರತದ ಶಿಲ್ಲಾಂಗನ ಸುತ್ತಲಿನ ಪ್ರವಾಸಿ ತಾಣಗಳನ್ನು ಕಣ್ಣುತುಂಬಿಕೊಳ್ಳುವ ಕನಸಿನೊಂದಿಗೆ ಹೊರಟು ನಿಂತಿದ್ದೆ. ಅದೆಷ್ಟೇ ಪ್ರಯತ್ನ ಪಟ್ಟರೂ ಇಲ್ಲಿನ ಊರುಗಳ ಹೆಸರುಗಳನ್ನು ಹೇಳಲಾಗದೇ ಸೋಲೊಪ್ಪಿಕೊಂಡಿದ್ದೆ.
ಮುನ್ನುಡಿ-
32 ಉಷ್ಣದ ಊರಿಂದ 6-7 ತಂಪಿನ ಊರಿಗೆ ಬಂದಾಗ ದೇಹ ಮುದುರಿತ್ತು. ಗೌಹಾಟಿಯ ಗೌಜಿನಲ್ಲೂ ಸ್ಥಳೀಯ ಸೀರೆ ತೊಟ್ಟ ಸೊಗಸುಗಾತಿಯರು ವ್ಯವಹಾರಕ್ಕಿಳಿದಿದ್ದರು. ಇವರನ್ನೆಲ್ಲ ನೋಡುತ್ತಾ ಎರಡು ರಾಜ್ಯಕ್ಕೆ ಗಡಿಯಂತಿದ್ದ ದಾರಿ ಗುಂಟ ಬ್ರಹ್ಮಪುತ್ರವನ್ನು ಬಳಸಿ ಶಿಲ್ಲಾಂಗ್ಗೆ ಬಂದಾಗ ರಾತ್ರಿ 7 ಗಂಟೆ. ಇಲ್ಲಿಂದ ರಾಜ್ಯ ರಸ್ತೆ ಸಾರಿಗೆ ಹಾಗೂ ಟ್ಯಾಕ್ಸಿ ವ್ಯವಸ್ಥೆ ಶಿಲ್ಲಾಂಗಿಗಿದೆ. 


ಉಪ್ಪಿನಕಾಯಿ ವೈವಿಧ್ಯ- ಮೊದಲನೇದು ಮೀನಿನ ಉಪ್ಪಿನಕಾಯಿ!


ಸಂಜೆ ಚಹಾ ಹೀರಲು ನಿಲ್ಲಿಸಿದ ಅಂಗಡಿಯಲಿ ಸಾಲು ಸಾಲು ಮೀನು, ಏಡಿ, ಸಿಗಡಿಗಳ ಉಪ್ಪಿನಕಾಯಿ ನೋಡಿದ್ದೆ ಗೆಳೆಯ ನಾಗರಾಜ ಉಸುರಿದ "ಬಿಟ್ಟರೆ ಮನುಷ್ಯರನ್ನು ಹುರಿದು ಉಪ್ಪಿನಕಾಯಿ ಮಾಡ್ತಾರೆ ಇವರು". ಮುಸುಂಬಿಗಿಂತಲೂ ದೊಡ್ಡದಾದ ನಿಂಬೆ ಹಣ್ಣು ಮೊದಲು ನೋಡಿದ್ದು ಇಲ್ಲೇ. 





ಈ ಕೌತುಕ ಪೂರ್ಣ ಕತೆಯನ್ನೊಮ್ಮೆ ಕೇಳೋಣ. ಮೇಘಾಲಯದ ಗೆಸ್ಟ್ ಹೌಸ್ನಲ್ಲಿ ಬಂದಿಳಿದಾಗ ತಂದಿರಿಸಿದ ರಾಶಿ ಸಿಹಿಕುಂಬಳ ಕಾಯಿಗಳ ಸ್ವಾಗತ! ನನ್ನ ಪರಮ ವೈರಿ ಸಿಹಿಗುಂಬಳಕಾಯಿ ನೆನೆದು ನಮ್ಮನ್ನು ಓಡಿಸಲೇ ಇದನ್ನು ಇಷ್ಟು ರಾಶಿ ಹಾಕಿ ಕೊಂಡಿದ್ದಾರೆ ಎಂದುಕೊಂಡೆ. ನಾಗರಜನ ಗೆಳತಿಯ ಮನೆಯಲ್ಲಿ ನಮಗೆ ಆ ದಿನ ರಾತ್ರಿಯ ವಿಶೇಷ ಭೋಜನ ವ್ಯವಸ್ಥೆ . ಮಾಡಲಾದ್ದರಿಂದ ಒಪ್ಪತ್ತಿನ ಮಟ್ಟಿಗಾದರೂ ಸಿಹಿಕುಂಬಳದಿಂದ ಬಚಾವಾದೆ!
ವಿಶೇಷ 'ಖಾಸಿ' ಅಡುಗೆ: -
ಮೂಲಂಗಿಯ ವಿಚಿತ್ರ ಪಲ್ಯ. 

ಹುದುಗು ಬಾರಿಸಿದ ಬೀನ್ಸ್ ಚಟ್ನಿ. 

ರುಚಿ ರುಚಿ ಖಾಸಿ ಅಡುಗೆ...  

ಗೆಳತಿ ಜೋಯ್ಸ್ ಅವರ ಮನೆಯಲ್ಲಿ ಒಣಗಿದ ಬೆಳ್ಳುಳ್ಳಿ ಮಿಶ್ರಿತ ಹಸಿ ಮೂಲಂಗಿಯ ಪಲ್ಯ, ಹುದುಗು ಬರಿಸಿದ ಬೀನ್ಸ್ನ ವಿಚಿತ್ರ ಚಟ್ಣಿ, ಬೇಯಿಸಿದ ಸಾಸಿವೆ ಎಲೆ, ಜೀವಮಾನದಲಿ ಒಮ್ಮೆಯೂ ಸವಿಯದ ಅಮೃತ ರುಚಿಯ ಐಸ್ಕ್ರೀಮ್ ಮೊಸರು, ಭಿನ್ನರುಚಿಯ ಅನ್ನ ಹೀಗೆ ವಿವಿಧ ಖಾಸಿ ಜನರ ಅಡುಗೆಯ ಖಾಸಗಿಯೂಟ. ಮರೆಯಲಾಗದ ಸವಿಯೂಟ. ಅಸಾಧ್ಯ ಚಳಿಗೆ ಮೈ   ಮನಸು ಮುದುರಿತ್ತು. ಬೆಳಗಿನ ವಿಹಾರದ ಕನಸು ಹೊತ್ತು ಮಲಗಿದೆವ 

ಸೋಹ್ರಾದಿಂದ ಮಾಸ್ವಾಮಿನತ್ತ:-
ಗುಹಾದ್ವಾರದೆದುರಿಗೆ


ಗುಹೆಯ ಕಡಿದಾದ ದಾರಿ. 

ಒಳನೋಟ !ಕಲ್ಲಿನ ಹೊಳಪು ಗಮನಿಸಿ.

ಭಿನ್ನೋಟ-ಬೇರೇನಲ್ಲ ಗುಹೆಯ ಕಡಿದಾದ ದಾರಿ. 
     ಹೇಗೆ ಈ ಗುಹೆಯ ಹೆಸರನ್ನು ಉಚ್ಚರಿಸಬೇಕೆಂದು ಇನ್ನೂ ಗೊಂದಲದಲ್ಲಿರುವೆ. ಮುಂಜಾನೆ ಮುಸುಕಿದ ಮೋಡಗಳ ಮುತ್ತಿಡುತ್ತಾ ಹೆದ್ದಾರಿಯಲಿ ಸಾಗಿತ್ತು ನಮ್ಮ ಕಾರು. ನಡುವೆಲ್ಲೂ ನಿಲ್ಲಿಸಿ ಪರೋಟ, ವಡೆ ತಿಂದು, ಚಹಾ ಹೀರಿ ಹೊರಟರೂ ಹೋಗದ ಮಂಜು. 10-12 ಡಿಗ್ರಿ ಉಷ್ಣಾಂಶ. ಗೆಳೆಯನಂತಹ ಚಾಲಕ. ಚೆರಿ ಹೂವರಳಿ ನಿಂತ ಹಾದಿಯಲಿ ಹೂ ನುಜ್ಜು ಗುಜ್ಜಾಗದಿರಲೆಂದು 'ಹಗುರ ಹೋಗು ಮರಾಯ.' ಎಂದೆ. ಹುಳುಕಾದ ಹಲ್ಲು ತೋರಿಸುತ್ತ ದೇಶಾವರಿ ನಗೆ ನಕ್ಕ. ಬಹುಶಃ ಆತನಿಗೆ ನನ್ನ ಭಾಷೆ ತಿಳಿಲಿಲ್ಲವೋ ಏನೋ. ಹಾಗೆ ನೊ ಕಲಿಕೈ ಜಲಧಾರೆ ತೋರಿಸಿಕೊಂಡು, ಸ್ಥಳದ ಕುರಿತು ಲೈವ್ ಕಾಮೆಂಟರಿ ಕೊಡುತ್ತಾ ಸುಣ್ಣದ ಕಲ್ಲಿನ ಗುಹೆಗಳತ್ತ ಕಾರು ಹೊರಳಿಸಿದ.

ಜನಜೀವನ:-
ಪ್ರವಾಸೋಧ್ಯಮ, ಸುಣ್ಣದ ಕಲ್ಲು ಮತ್ತು ಮಸಾಲೆ ಪದಾರ್ಥಗಳೇ ಇವರ ಜೀವನ ಆಧಾರ. ಸುಣ್ಣದಕಲ್ಲಿನ ನೂರಾರು ಗುಹೆಗಳು ನಿಮಗೆ ಶಿಲ್ಲಾಂಗಿನಿಂದ ಚಿರಾಪುಂಜಿಯೆಡೆಗೆ ಹೊರಟಾಗ ಕಾಣಸಿಗುತ್ತದೆ. ಇನ್ನು ಕಣಿವೆಯಲ್ಲಿ ವಾಸಿಸುವವರು ಸ್ವಲ್ವ ಕಿತ್ತಳೆ, ಶುಂಠಿ ಮತ್ತು ಕಾಳುಮೆಣಸು ಬೆಳೆದುಕೊಳ್ಳುತ್ತಾರೆ. ಕಾಡುತ್ಪತ್ತಿ ಸಂಗ್ರಹಿಸುತ್ತಾರೆ. ಇಲ್ಲಿನ ಕಿತ್ತಳೆ ಬಲು ಹುಳಿ. ಇವರ ಇನ್ನೊಂದು ಆದಾಯದ ಮೂಲ ಭತ್ತ ಮತ್ತು ಬಿದಿರು. ಇವರ ಬಿದಿರಿನ ನಾಜೂಕು ನಮಗೆ ಅಸಾಧ್ಯ, ಅಂಟು ಬಳಸದೆಯೇ ಭತ್ತದ ಬುಟ್ಟಿಗಳ ಹೆಣೆಯುವ ನೈಪುಣ್ಯದಲ್ಲಿ ಅಸಾಧ್ಯ ಕಲೆಗಾರಿಕೆ. ವಿಮಾನ ಮುಂತಾದ ಕಡೆ ಎಳೆದಾಡಿದರೂ ಚೂರೂ ಕೊಸರದೇ ಉಳಿದಿತ್ತು ನಾಕೊಂಡ ಭೆತ್ತದ ಪುಟಾಣಿ ಬುಟ್ಟಿ. ಎಲ್ಲಾ ಕೆಲಸಗಳಲ್ಲೂ ಸಿದ್ದ ಹಸ್ತರೂ ಕೂಡ. ನಮ್ಮ ಸ್ನೇಹಿತನ ಹರಿದ ಚಪ್ಪಲಿಯೊಂದನ್ನು ಕ್ಷಣಾರ್ಧದಲ್ಲೆ ಹೊಲಿದುಕೊಟ್ಟನೊಬ್ಬ. ಹೆಂಗಸರೇ ಹೆಚ್ಚು ದುಡಿಯುವವರು. ಮಂಜಿನಿಂದಾಗಿ ಅಲ್ಲಲ್ಲಿ ಚಳಿ ಕಾಯಿಸುವ ಜನ. ಸುಣ್ಣದ ಕಲ್ಲನ್ನು ಆರಿಸಿ ಆರಿಸಿ ಬೃಹತ್ ಗುಹೆಗಳು ನುಂಗುವಂತೆ ದಾರಿಯುದ್ದಕ್ಕೂ ಬಾಯ್ದೆರೆದಿದ್ದವು. ಎಲ್ಲವೂ ಸೊಹ್ರಾದ ಸಿಮೆಂಟ್ ಕಾಖರ್ಾನೆಗೆ ಹೋಗುತಲಿತ್ತು.


ಗುಹೆ ಎದುರಿಗೆ:-
          ಸೊಹ್ರಾದಿಂದ ಹೊರಟು ಊಟ ಮಾಡಿ ನಡು ಮಧ್ಯಾಹ್ನಕ್ಕೆ ಗುಹೆ ಎದುರಿಗಿದ್ದೆವು. 'ಮೆ ನಹಿ ಆಂವೂಗಿ'(ನಾ ಬರೋದಿಲ್ಲ) ಎಂಬ ಕೂಗು ಗುಹೆ ಎದುರಿಂದ ಕೇಳಿ ಬರುತಲಿತ್ತು. ಎದೆನಡುಗಿಸುವ ಗುಹಾದ್ವಾರದೆದುರು ಅನೇಕ ಹೆಂಗಸರು ಒಳ ಹೋಗಲು ಹೆದರಿ ಹೀಂದೇಟು ಹಾಕುತ್ತಿದ್ದರು. ಬರೋಬ್ಬರಿ 6.5 ಕಿಲೋ ಮೀಟರ್ ಉದ್ದದ ಬಾಯ್ದೆರೆದ ಭಯಾನಕ ಗುಹೆ. ಕೆಲವೆಡೆ ತೆವಳುತ್ತಾ ಸಾಗಬೇಕು. ಸಣ್ಣ ಝರಿಯೊಂದು ಗುಹೆಯೊಳಗೇ ಹಾದು ಹೋಗಿತ್ತು. ಗೋಡೆ ಪೂರ್ಣ ಸುಣ್ಣದ ಕಲ್ಲಿನ ಚಿತ್ತಾರ. ಕೆಲವೆಡೆ ಗುಹೆ ಮೇಲಕ್ಕೆ ಬಾಯ್ಕಳೆದು ತೆರೆದಿತ್ತು.

ಜೇನುಗೂಡಿನಂತಹ ರಚನೆ. 
ಗುಹೆಯೊಳಗಿನ ನೆಲ ಸವೆದು ಜಾರುವ ಟೈಲ್ಸ್ನಂತಿತ್ತು. ಅನೇಕ ಕಡೆ ಜಾರಿ ಬೀಳುವಷ್ಟರಲ್ಲಿ ಸುಧಾರಿಸಿಕೊಂಡೆ. ಬಕಾಸುರನಂತೆ ಬಾಯಿ ಕಳೆದ ಗುಹೆ ಕಂಡಾಗ ಶ್ರೀ ಕೃಷ್ಣನ ನೆನಪು. ಗುಹೆಯೊಳಗೆ ಏನುಂಟು ಏನಿಲ್ಲ ತಣ್ಣಗೆ ಹರಿವ ಜಲರಾಶಿ, ವಿಚಿತ್ರ ವಿನ್ಯಾಸದೊಂದಿಗೆ ತೊಟ್ಟಿಕ್ಕುವ ನೀರು, ಗುಹೆಯೊಳು ಗಂವ್ ಎನ್ನುವ ಕತ್ತಲು. ನೆತ್ತಿ ಸುಡುವ ಬಿಸಿಲಿದ್ದರೂ ಒಳಗೆ ಹವಾನಿಯಂತ್ರಣದಷ್ಟು ತಂಪು. ಯಾರದೋ ಜಿರ್ಣನಾಳದೊಳಗೆ ಜಾರಿಹೋದಂತಹ ಅನುಭವ. ಹೆಬ್ಬಾವಿನ ಹೊಟ್ಟೆ ಸೇರಿದ ಭಾವ. ಯಾರದೋ ಕರುಳಿನೊಳಗೆ ಹೂತು ಹೋದಂತೆ. ಆಹಾರದ ಕಣದಂತೆ ಚಲಿಸುವ ಜನಸಂದಣಿ. ಒಳಾಂಗಣದಲಿ ಅಲ್ಲಲ್ಲಿ ಬೆಳಕಿನ ವ್ಯವಸ್ಥೆ. ಗುಹೆಯ ಉದ್ದ ಸರಿಸುಮಾರು 6.5 ಕಿ.ಮೀ. 

ಸುಣ್ಣದ ಕಲ್ಲಿನ ವಿಚಿತ್ರ ವಿನ್ಯಾಸ. ಜೇನು ತಟ್ಟಿಯಂತಹ ವಿಭಿನ್ನ ಸಂಯೋಜನೆ. ಬೆಳಕಿಗೆ ಹೊಳೆವ ಕಲ್ಲಿನ ಚೂರುಗಳು. ದನದ ಕೆಚ್ಚಲಿನಾಕೃತಿಯ ವಿನ್ಯಾಸವೂ ಉಂಟು.  ಹಲಸಿನ ಕಾಯಿಯಂತೆ ನೇತಾಡುವ ಮಣ್ಣ ಹೆಂಟೆಗಳು. ಬೀಳುವವೇನೋ ಎಂದು ನಿರುಕಿಸಿ ನಿರುಕಿಸಿ ಸೋತೆ. ಒಂದೂ ಹಿಸಿದು ಬೀಳಲೇ ಇಲ್ಲ. ಆಲದ ಬಿಳಲುಗಳಂತೆ ನೇತಾಡುವ ಸಪೂರ ಗುಹಾ ರಚನೆ. ಇಲ್ಲೆಲ್ಲಾ ನುಸುಳಿ, ತೆವಳಿ ಸಾಗಬೇಕಾದ ಅನಿವಾರ್ಯತೆ.
ಸಪೂರ ಓಣಿಯಂತಹ ದಾರಿ. 
  'ಪ್ರಕೃತಿ ನಿಮರ್ಿತ 'ಲಿಯತ್ ಪ್ರಹಾ' ಎಂಬ ಗುಹೆ 30 ಕಿ.ಮೀ.ಉದ್ದವಿದೆ!' ಎಂದ ನಮ್ಮ ಡ್ರೈವರ್. ಇವುಗಳಲ್ಲಿ ಕೆಲವೊಂದು ಕಡೆ ತೆವಳಿ ಸಾಗಬೇಕಾದ ಅನಿವಾರ್ಯತೆ. ಇತ್ತೀಚಿಗೆ ಪತ್ತೆಯಾದ 'ಗಾರ್ಡನ್ ಗುಹೆ'ಎಂದು ಕರೆಯಲ್ಪಡುವ ಗುಹೆ ಸುಮಾರು 30 ಕಿ.ಮೀ. ಉದ್ದವಿದೆ ಎಂಬ ಬೋರ್ಡೊಂದನ್ನು ಇಲ್ಲಿ ಕಂಡೆ. ಜೊತೆಗೆ ಗುಹೆಯೊಳಗೆ ಒಂದು ಜಲಪಾತವೂ ಇದೆ ಎನ್ನುತ್ತಾರೆ! ಇಲ್ಲಿನ ಗುಹೆಗಳು ಅಚ್ಚರಿಗಳ ಮೂಟೆ. ಮೇಘಾಲಯದಲ್ಲಿ ಸುಮಾರು 1580ಕ್ಕೂ ಹೆಚ್ಚು ಗುಹೆಗಳಿವೆ! ವಿಶ್ವ ಪ್ರಸಿದ್ಧ ಮೊದಲ 9 ಗುಹೆಗಳಿರುವುದು ನಮ್ಮ ಮೇಘಾಲಯದಲ್ಲೇ. ಪ್ರತಿಯೊಂದೂ ಭಿನ್ನ. ಯುತ್ ಹಾಸ್ಟೆಲ್ನವರು ವರ್ಷಂಪ್ರತಿ ಇಲ್ಲಿ ಮೂರು ನಾಲ್ಕು ಗುಹೆ ತೋರಿಸುವ ಕಾರ್ಯಕ್ರಮವೇರ್ಪಡಿಸುತ್ತಾರೆ.
  ಚಿಕ್ಕ ವಯಸ್ಸಿನಲ್ಲೇ ಮೇಘಾಲಯಕ್ಕೆ ಹೋಗಿ ಬರಬೇಕೆಂಬ ಕನಸೊಂದು ಬಹಳ ವರ್ಷಗಳ ನಂತರ ನೆರವೇರಿತು. ಶಿಲ್ಲಾಂಗ್ನ ಸನಿಹವೇ ಇರುವ ಈ ಗುಹೆಗಳನ್ನು ನೋಡದೆ ಹೋದರೆ ಮೇಘಾಲಯ ಪ್ರವಾಸ ಅಪೂರ್ಣ. ನಾಲಗೆ ಹೊರಳದ ನಾಡಲ್ಲಿ ತಿರುಗಿ ಬರುವ ಮಜವೇ ಬೇರೆ. ಯಾಕಿನ್ನು ಯೋಚನೆ ಪ್ಯಾಕ್ಪ್ ಹೇಳಿ. ಜೀವಂತ ಸೇತುವೆಗಳೊಂದಿಗೆ ಒಂದು ದಿನ ಕಳೆಯುವ ಆಲೋಚನೆಯೊಂದಿಗೆ ಇಂದಿನ ಪ್ರವಾಸಕ್ಕೆ ನಾವು ಪ್ಯಾಕ್ಪ್ ಹೇಳಿದೆವು.

   ನಿಮ್ಮ ಅನೂಕೂಲಕ್ಕೆ ತಕ್ಕಂತಹ ಅನೇಕ ವಸತಿಗೃಹಗಳು ಶಿಲ್ಲಾಂಗಿನಲ್ಲಿವೆ. ಆನೆಜರಿ, ಅಕ್ಕ-ತಂಗಿ ಜಲಧಾರೆ ಮುಂತಾದವುಗಳನ್ನು ನೋಡಿ ಬರಬಹುದು ಎಲ್ಲವೂ ಸನಿಹದಲ್ಲಿದೆ.
ಶ್ರೀಧರ್. ಎಸ್. ಸಿದ್ದಾಪುರ.
ವಿಳಾಸ:-       ರಥಬೀದಿ ಸಿದ್ಧಾಪುರ,

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...