Wednesday, November 16, 2022

ಭಿನ್ನ ಸಂಸ್ಕೃತಿಯ ಜಾಡು ಹಿಡಿದು…

        ಪ್ರವಾಸ ಉಣಬಡಿಸುವ ಅಚ್ಚರಿಗಳು ನೂರಾರು. ಅಂತಹ ಒಂದು ಅಚ್ಚರಿಯ ಬೆನ್ನು ಹತ್ತಿ ಹೋದ ನಮಗೆ ದಕ್ಕಿದ್ದು ಇಷ್ಟು. 



ಮೀನು ಮಾರಾಟ ಮಳಿಗೆ, ಹೋಟೆಲ್‌, ದಿನಸಿ ಅಂಗಡಿ, ಬಟ್ಟೆ ಅಂಗಡಿ ಹೀಗೆ ಎಲ್ಲಿ ಕಂಡರೂ ಮಹಿಳಾ ಮಣಿಗಳದ್ದೇ ಪಾರುಪತ್ಯ. ಏನು ೯೦ ಶೇಕಡಾ ಮೀಸಲಾತಿ ಎನಾದರೂ ತಕ್ಷಣಕ್ಕೆ ಜಾರಿಗೆ ಬಂತಾ ಎಂದು ಅಂದುಕೊಂಡರಾ? ಅದೇ ಅಲ್ಲಿನ ವಿಶೇಷ. ಇದೇ ಅಲ್ಲಿನ ವಿಶೇಷ.  ಮಣಿಪುರದ ವಿಶೇಷ ಐಮಾ ಮಾರುಕಟ್ಟೆ.



ಭೂಮಿಯ ಮೇಲಿರುವ ಹೆಚ್ಚಿನ ಎಲ್ಲಾ ಸಮುದಾಯಗಳು ಪಿತೃ ಪ್ರಧಾನ. ಕೆಲವೇ ಕೆಲವು ಸಮುದಾಯಗಳು ಮಾತ್ರ ಮಾತೃ ಪ್ರಧಾನ. ಸಿಕ್ಕಿಂನ ಹೆಚ್ಚಿನ ಸಮುದಾಯಗಳು ಇನ್ನೂ ಮಾತೃ ಪ್ರಧಾನವಾಗಿ ಉಳಿದಿವೆ. ಇವುಗಳ ನಡುವೆ ಭಿನ್ನವಾಗಿ ನಿಲ್ಲುವುದು ಐಮಾ ಮಾರುಕಟ್ಟೆ. 

ಲೋಕದ ಪ್ರಧಾನ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಪುರುಷರಾದರೆ ಸ್ತ್ರೀ ಇಲ್ಲಿ 

ಅತಿಥಿ ಕಲಾವಿದರು. 



ಅದು ಹೋಟೆಲ್‌, ಕೃಷಿ, ವ್ಯಾಪಾರ ಯಾವುದೇ ಇದ್ದರೂ ಇಲ್ಲಿ ಪುರುಷರೇ ಪ್ರಧಾನ. ಸ್ತ್ರೀ ಏನಿದ್ದರೂ ಸೈಡ್‌ ಆಕ್ಟರ್.‌ ಇಂಪಾಲದ ಐಮಾ ಮಾರುಕಟ್ಟೆಗೆ ಬಂದರೆ ನೀವು ದಂಗಾಗುವಿರಿ. ಏಷ್ಯಾ ಖಂಡದಲ್ಲೇ ಇಷ್ಟು ದೊಡ್ಡ ಮಾರುಕಟ್ಟೆ ಮತ್ತೊಂದಿಲ್ಲ. ಸುಮಾರು ೪೦೦೦ ಅಂಗಡಿ ಇರುವ ಇದರ ವಿಸ್ತಾರವನ್ನು ಒಳ ಹೊಕ್ಕು ತಿಳಿಯಬೇಕು. . ಏನಿಲ್ಲ ಇಲ್ಲಿ ಎಲ್ಲಾ ಇದೆ. ಮೀನು, ತೆಂಗಿನ ಕಾಯಿ, ಪಾತ್ರೆ, ಹಳೆ ನಾಣ್ಯ, ತಿಂಡಿ ತಿನಿಸು, ಮಡಿಕೆ,  ಮುಂತಾದ ದಿನ ನಿತ್ಯದ ವಸ್ತುಗಳು. ಎಲ್ಲಾ ಮಳಿಗೆ ಸುತ್ತಿ ಬಂದರೂ ವ್ಯಾಪಾರಕ್ಕೆ ನಿಂತ ಒಬ್ಬನೇ ಒಬ್ಬ ಗಂಡಸು ನಿಮಗಿಲ್ಲಿ ಕಾಣ ಸಿಗಲಾರ. ಇಲ್ಲಿರುವ ಪುರುಷನೆಂದರೆ ಗ್ರಾಹಕ ಮಾತ್ರ! ಮಹಿಳೆಯರದ್ದೇ ಪಾರುಪತ್ಯ. ಎಲ್ಲಾ ಅಂಗಡಿಗಳ ಮಾಲೀಕರೂ ಹೆಂಗಸರು. ಕೆಲಸಗಾರರೆಲ್ಲಾ ಹೆಂಗಸರು. 



ಇತಿಹಾಸ:-

ಇಲ್ಲಿನ ಮಹಿಳಾ ಪಾರುಪತ್ಯದ ಬೆನ್ನತ್ತಿ ಹೋದರೆ ಸಿಗುವುದು ಕೆಲವು ಅಚ್ಚರಿ. ಹಿಂದಿನ ಕಾಲದಲ್ಲಿ ನಡೆದ ಅನೇಕ ಯುದ್ಧಗಳಲ್ಲಿ ಪುರುಷರು ಭಾಗವಹಿಸಬೇಕಾಗಿ ಬಂದುದರಿಂದ ಅವಶ್ಯಕವಾಗಿ ಆಗ ಪ್ರಾರಂಭವಾದ ಮಹಿಳಾ ಪಾರುಪತ್ಯ ಇಂದಿಗೂ ಮುಂದುವರಿದಿದೆ. ಪುರುಷನೇನಿದ್ದರೂ ಅತಿಥಿ ಕಲಾವಿಧ. ಮುಖ್ಯ ಭೂಮಿಕೆಗೆ ಬಂದ ಮಹಿಳೆಯರು ಹಿಂದೆ ಸರಿಯಲೇ ಇಲ್ಲ. 

ಇಲ್ಲಿನ ಹೆಚ್ಚಿನವರು ಸ್ನೇಹ ಶೀಲರು. ಬಹಳ ಬೇಗ ಸ್ನೇಹಿತರಾಗುವರು. ಯಾರಿಗೂ ಇಲ್ಲಿ ಇಂಗ್ಲೀಷ್‌ ಆಗಲಿ ಹಿಂದಿಯಾಗಲಿ ಬಾರದು. ಸಂವಹನವೇ ಮುಖ್ಯ ತೊಡಕು. ಮಡಿಕೆ ಮಾರಟದಲ್ಲಿ ತೊಡಗಿದ್ದ ಅಜ್ಜಿಯನು ಮೂಕ ಭಾಷೆಯಲ್ಲೆ ಮಾತಾಡಿಸಿ ಪೋನ್‌ ಸಂಖ್ಯೆ ಪಡೆಯುವಲ್ಲಿ ಯಶಸ್ವಿಯಾದೆ. ನಾ ತೆಗೆದ ಚಿತ್ರಗಳ ಬೇಡಿಕೆ ಇಟ್ಟ ಅಜ್ಜಿಗೆ ನೆನಪಿನಿಂದ ಅನೇಕ ಚಿತ್ರ ಕಳುಹಿಸಿ ಖುಷಿ ಪಟ್ಟೆ. 



ನನಗೆ ಇಂತಹ ಅಜ್ಜಿಯಂದಿರ ಆಶೀರ್ವಾದ ಸದಾ ಇರಲಿ. ಹಾಗೆ ಇಲ್ಲಿನ ಲಕ್ಷ್ಮೀ ಹೋಟೆಲ್‌ ನಲ್ಲಿ ಮಣಿಪುರಿ ತಾಲಿ ಜೊತೆಗೆ ನೀಡುವ ಸಿಹಿಯಾದ ದೇಸಿ ತಳಿಯ ಅನ್ನವನು ಸವಿಯಲು ,  ಐಮಾ ಮಾರುಕಟ್ಟೆ ನೋಡಲು ಮರೆಯದಿರಿ. 



ನವೆಂಬರ್‌ ನಲ್ಲಿ ನಡೆಯುವ ಶಂಗೈ ಹಬ್ಬಕ್ಕೂ ಹೋಗಿ ಬನ್ನಿ. 


Sunday, November 6, 2022

ದೂದ್‌ ಸಾಗರ ಒಂದು ಸ್ವಪ್ನ ವಿಲಾಸ

 


ಶ್ರಾವಣದ ಮಳೆ ಇಳೆಗೆ  ಮುತ್ತಿಕ್ಕುವ ಹೊತ್ತು. ಭುವಿಗೆ ಛತ್ರಿ ಹಿಡಿದಂತಿರುವ ಮಂಜನು ಸೀಳುವ ಚುಕ್‌ ಬುಕ್‌ ಬಂಡಿ.  ನೆಲದೊಡಲಿನಿಂದಲೂ ಕಿವಿಯ ಕುಹರ ತುಂಬುವ ಚುಕ್‌ ಬುಕ್‌ ಸದ್ದು. ರೈಲು ದೂದ್‌ ಸಾಗರವೆಂಬ ಅಗಾಧ ಜಲರಾಶಿ ಎಡೆಗೆ ಮಲಗಿದ ನೂರಾರು ಭತ್ತದ ಗದ್ದೆಗಳನ್ನು ಎಬ್ಬಿಸುತ ಸೂರ್ಯನೇಳುವ ಮುನ್ನ ಬೆಳಗಾವಿಯಿಂದ ಹೊರಟಿತ್ತು. ರೈಲು ಲೊಂಡ ಜಂಕ್ಷನ್‌ನಲ್ಲಿ ಟಿಫಿನ್‌ ಮಾಡತೊಡಗಿತ್ತು. ನಾವೂ ಕೂಡ. ಹಿಮ್ಮುಖವಾಗಿ ಎಳಿಯುತ್ತಿದ್ದ ರೈಲು ಮುಂದೆ ಚಲಿಸಲು ತೊಡಗಿತ್ತು.

  ಬೆಳಗಾವಿಯಿಂದ ಬಂಡಿಯ ಜೊತೆಯಲಿ ಸರಿಗಮ…



ಸದಾ ಖಾಸಗೀತನ ಬಯಸುವ ನನ್ನಂತವರಿಗೆ ಹೇಳಿ ಮಾಡಿಸಿದ ಪ್ರಯಾಣ. ದಿವ್ಯ ಏಕಾಂತ. ವೇಗದ ವ್ಯಾಧಿಗಂಟದ ಸಹನ ಶೀಲ ಬಂಡಿ. ಏಕಾಂತದಲಿ ಬೆರೆತ ಪ್ರಕೃತಿ. ಸ್ವಾಗತ ಕಾರರಂತೆ ನಿಂತ ಸಾಲು ಮರಗಳು.  ಹೃದಯದ ಏರಿಳಿತಗಳನು ಸರಿಪಡಿಸಬಲ್ಲ ಅಗಾಧ ಪ್ರಕೃತಿ. ಮನದ ಕಾನನದಿ ಸೈಕ್ಲೊ ಸೈಲ್‌ ಶಬ್ದ ಚುಕ್‌ ಬುಕ್‌, ಚುಕ್‌ ಬುಕ್. ರೈಲೊಳಗೂ ನುಗ್ಗಿ ಎಲ್ಲರನೂ ಒದ್ದೆ ಮಾಡಿ ಮೆತ್ತಗೆ ಮಾಡುವ ಸೂಜಿ ಮಳೆ ಬೆಳಗಿನಿಂದಲೂ ಜೋಗುಳ ಹಾಡುತ್ತಿತ್ತು. ಪ್ರಕೃತಿ ಆನಂದ ಮಯ ಈ ಜಗ ಹೃದಯ ಎನ್ನುವ ಗೀತೆಯನು ಹಾಡುತ್ತಿರುವಂತಹ ಅನುಭೂತಿ. ಎಲ್ಲೆಲ್ಲೂ ನೀರ ಸಂಗೀತ. ಮಂಜಿನ ತಂಪಾದ ರಗ್‌ ಹೊದ್ದ ಪ್ರಕೃತಿ ಅತಿ ರಮ್ಯ. ದಿವ್ಯ ಏಕಾಂತ.



ಇಲ್ಲಿನ ಗುಡ್ಡದ ತುಂಬಾ ನೆಕ್ಲೆಸ್‌ ನಡುವಿನ ಹವಳದಂತೆ ಹರವಿನಿಂತ ಹೂಗಳು. ನನ್ನ ಕಂಡು ಕ್ರೀಮು ಬಳಿದುಕೊಂಡತಿರುವ  ಗುಡ್ಡಗಳು ಹಲ್ಕಿರಿದು ನಕ್ಕವು. ಗುಡ್ಡದ ತುಂಬಾ ನೀರ ಹನಿಗಳು ಸಂಪಿಗೆ ಮೂಗಿನ ಸುಂದರಿ ಮುತ್ತಿನ ಹಾರ ತೊಟ್ಟಂತೆ ತೊಟ್ಟಿಕ್ಕುತಲಿದೆ. ಮನಸ್ಸಿನ ಏಕಾಂತಕ್ಕೆ ಸಾತ್‌ ನೀಡುವ ರೈಲಿನ ಚುಕ್‌ ಬುಕ್‌ ಚುಕ್‌ ಬುಕ್.‌ ಗುಡ್ಡಗಾಡಿಗೆ ತೊಂದರೆ ಕೊಡ ಬಾರದೆಂದು ಸೂರ್ಯ ರಜೆ ಮೇಲಿದ್ದ. ಇಲ್ಲಿನ ಪ್ರತೀ ಸುರಂಗವೂ ಹೆಬ್ಬಾವಿನ ಹೊಟ್ಟೆ ಹೊಕ್ಕು ಬಂದಂತಹ ಅನುಭವ. 



ಕಾತರಕ್ಕೊಂದು ಕಾವ್ಯ ತೆರೆ…



ಹಳ್ಳ ಕೊಳ್ಳ ಹಾದು ಜಲಪಾತದ ಸನಿಹಕೇ ಬಂದಿದೆ ಬಂಡಿ. ರೈಲಿನೊಳಗಿರುವವರ ಎದೆಯಲಿ ವಿದ್ಯುತ್‌ ಸಂಚಾರ. ಈ ಅಗಾಧ ಜಲರಾಶಿಯನ್ನು ಕಣ್‌ ತುಂಬಿಕೊಳ್ಳುವ ತವಕ ಪ್ರತಿಯೊಬ್ಬರಲ್ಲೂ. ಜಲರಾಶಿ, ರೈಲು, ಹೃದಯದ ಶಬ್ದಗಳ ಕಲಸು ಮೇಲೊಗರ. ಕಣ್ಣಿಗೆ ಸುಗ್ಗಿ. ಮನಸ್ಸಿಗೆ ಸಿಹಿ ಹುಗ್ಗಿ. ಮಂಜಿನ ರಗ್ಗಿನಿಂದ ಧುಮ್ಮಿಕ್ಕುವಂತೆ ಧುಮ್ಮಿಕ್ಕುತ್ತಿದೆ ಹಾಲ್ನೊರೆ!  ಅಬ್ಬಾ ಎಂತಹ ಸುಮನೋಹರ ದೃಶ್ಯ. ಒಂಟಿ ಮರವೊಂದು ಕಾಲಾತೀತ ಆನಂದದಲಿ ಜಲಪಾತದ ನಡುವಿನಲಿ ರಕ್ಷಕನಂತೆ ಸಂಭ್ರಮದಿ ನಿಂತೇ ಇದೆ. ಎಳೆಯ ಎದೆಗಳಿಂದ ವಾವ್‌ ಎಂಬ ಚೀತ್ಕಾರ. ಕೆಲವರು ಮೂಕವಿಸ್ಮಿತ. ರೈಲಿನಲ್ಲಿರುವ ಪ್ರತಿಯೊಬ್ಬರಲ್ಲೂ ವಿದ್ಯುತ್‌ ಸಂಚಾರ. ಇಣುಕಿ ನೋಡಿದಷ್ಟೂ ಮುಗಿಯದ ತವಕ. ಎಲ್ಲವೂ ವಿಸ್ಮಯವಿಲ್ಲಿ. ನೋಟಕನ ದೃಷ್ಟಿ ಗಮ್ಯವಾದುದಿಲ್ಲಿ ಎಲ್ಲವೂ ಅತಿ ರಮ್ಯ… ನಾನಿಂತ ಬಾಗಿಲ ತುದಿಗೊಬ್ಬಳು ಮುದುಕಿ ಪದೇ ಪದೇ ಬಂದು ಓಡೋಡಿ ಬಂದು ಪ್ರಕೃತಿಯ ರಮಣೀಯತೆ  ಸವಿದು ಹೋಗುತ್ತಿದ್ದಳು. ಅವಳ ಉತ್ಸಾಹ ಕಂಡು ಬೆರಗಾದೆ.

ಚಾರಣಿಗರ ಸಂತೆಯಲಿ ಬೆರಗಾಗಿ…




ಎಲ್ಲೆಲ್ಲೋ ಜಿನುಗಿದ ಹನಿಯೊಂದು ನದಿ  ಸೇರುವಂತೆ ಸೇರುವ ಚಾರಣಿಗರ ಹಿಂಡು. ಹೃದಯದ ಕವಾಟ ತೆರೆವ ನೋಟ. ಎಲ್ಲಾ ವೈಯಕ್ತಿಕ ಸುಖ ದುಃಖ ಕರಗುವ ಏಕೈಕ ಪ್ಲಾಟ್‌ ಪಾರಂ. ದುಃಖಗಳೆಲ್ಲಾ ಕರಗಿ ನೀರು ಕೆಂಪಾಗಿ ಹರಿಯುತ್ತಿರುವುದೋ ಎಂಬಂತೆ ಭಾಸ. ಮೈ ಕೈಗಳಲೆಲ್ಲಾ ನೀರ ಕಾರು ಬಾರು. ಅದ್ರಿಯ ತುದಿಯಲ್ಲಿ ಬೋರ್ಗರೆಯುತಾ ನಡುವಿನಲಿ ನಯವಾಗಿ ನುಗ್ಗುವ ದೂದ್‌ ಸಾಗರದ ರಮ್ಯತೆ ಅಪಾರ. 



ರ್ಭಾವುಕವಾಗಿ ಚಲಿಸುವ ರೈಲು ಮಳೆಯ, ಮಂಜಿನ ಚಾದರಕ್ಕೆ ಮೆತ್ತಗಾಗಿದೆ. ಜಾರದಂತೆ ಜಾಗರೂಕವಾಗಿ ಚಲಿಸುತ್ತಿದೆ. ನಿರ್ಭಾವುಕ ಕಣ್ಣುಳ್ಳ ತಮ್ಮ ತುತ್ತಿನ ಬುತ್ತಿ ಅರಸಿ ಹೊರಟ ಅರಸಿಕರು ಹೊರಗೆ ಇಣುಕದೆ ಸುಮ್ಮನಿದ್ದರು! ಅವರನ್ನೆಲ್ಲಾ ತುಂಬಿಕೊಂಡು ಹೊಟ್ಟೆ ಉಬ್ಬರಿಸಿದಂತೆ ಬೆಟ್ಟಗುಂಟ ಪ್ರಯಾಣ ಹೊರಟ ಬಂಡಿ.  ಮನಸ್ಸು ಸುರಿವ ಮಳೆಗೆ ಜಲಪಾತದ ಅಬ್ಬರಕ್ಕೆ ತೊಯ್ದು ತೊಪ್ಪೆಯಾಗಿತ್ತು.

ರೈಲ್ವೆಯ ವಿಕ್ರಮ-

ರೈಲ್ವೆ ಇಲಾಖೆ ಇಂತಹ ದುರ್ಗಮ ದಾರಿಯಲ್ಲೂ ಅತ್ಯಂತ ಸುರಕ್ಷಿತವಾದ ಹಾದಿ ನಿರ್ಮಿಸಿದ ಕತೆ ಇನ್ನೂ ರೋಚಕ. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ದಾರಿ ಮಾಡುವುದು ಅಪಾರ ಪರಿಶ್ರಮದ ಕೆಲಸ. ಜೊತೆಗೆ ಇಲ್ಲಿ ಕಂಡು ಬರುವ ಕಾಡು ಪ್ರಾಣಿಗಳನ್ನು ಎದುರಿಸಿ ಕೆಲಸ ಮಾಡುವುದು ಅಸಾಧ್ಯ ದುಸ್ಸಾಹಸದ ಕೆಲಸ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಪಶ್ಚಿಮ ಘಟ್ಟಗಳ ಒಡಲಿನೊಳಗೆ  ಕೊರೆದ ಹಾದಿಯ ರೋಚಕತೆ ನೆನಪಿಗೆ ಬಂದು ಪುಳಕಗೊಂಡಿತು ಮನ. 

ರೈಲು ಬಲಕ್ಕೆ ಹೊರಳಿ ಆ ಮಹಾ ರುದ್ರ ರಮಣಿಯತೆಯ ದೃಶ್ಯವನ್ನು ನಮಗೆಲ್ಲಾ ಉಣಬಡಿಸಿ ಸೋನಾಲಿಮ್‌ ಸ್ಟೇಷನ್‌ನಲ್ಲಿ ನಿಶ್ಚಲವಾಯಿತು. ಈ ಅಮೋಘ ಜಲೌಗಕ್ಕೆ ಮನಸೋತ ಗೆಳೆಯ ಮಧ್ಯ ರೈಲಿನಿಂದ ಜಿಗಿಯಲು ತಯಾರಾಗಿದ್ದ. ಅವನನ್ನು ತಡೆದೆ. ಸೋನಾಲಿಮ್‌ ಬರುತ್ತಲೇ ರೈಲಿನಿಂದ ಜಿಗಿದು ಜಲಪಾತದತ್ತ ಹೊರಟೆವು. ಪಾಕಿಸ್ಥಾನದ ಉಗ್ರಗಾಮಿಗಳನ್ನು ಕಂಡವರಂತೆ ಅಲ್ಲೇ ನಿಂತಿದ್ದ ಪೋಲಿಸರು ನಮ್ಮನ್ನು ಅಟ್ಟಿಸಿಕೊಂಡು ಬಂದರು. ಏನೋ ಕದ್ದವರಂತೆ ಓಡುತ್ತಾಬಂದು ರೈಲು ಹತ್ತಿದೆವು.

ಲಾಠಿ ಬೀಸುತ್ತಲೇ ಕರಗಿದ ನಮ್ಮ ಅಹಂಕಾರ ನೀರಿನೊಂದಿಗೆ ಸೇರಿ ಧುಮ್ಮಿಕ್ಕುತ್ತಲೇ ಇದೆ. ನೀರೂ ತನ್ನ ಬಣ್ಣ ಬದಲಿಸಿದೆ.  ಎಷ್ಟು ಸುರಿದರೂ ತಣಿಯದ ಹಾಲ್ನೋರೆ ಯಾರ ಕರುಣೆಗಾಗಿ ಕಾಯುತಿದೆಯೋ? ಜಲಪಾತ್ರೆಯ ಕೆಳಗೆ ತಿನ್ನಲು ಬಚ್ಚಿಟ್ಟ ಎರಡು ವಡಾಪಾವ್‌ ಪೋಲಿಸರನ್ನು ಕಂಡಾಗಲೇ ಹಣಕಿ ಹಾಕಿ ನಗತೊಡಗಿತು.

ಸೊನಾಲಿಮ್‌ನಿಂದ ಜಲಪಾತ ಹತ್ತು ಹಾಡಿನ ದೂರ. ಕೆಲವರ ಕಣ್ಣಾಲಿಗಳಲಿ ಮತ್ತೆ ಜಲಪಾತ ದರ್ಶನ. ನಿರಾಶೆ ಕರಗುವ ಬಿಂದು ಹುಡುಕುತ್ತಾ ನಿಂತೆ. ಕೆಲವರು ಇಷ್ಟಾದರೂ ನೋಡಲು ಸಿಕ್ಕಿತ್ತಲ್ಲ ಎಂದು ಖುಷಿ ಪಟ್ಟರು. ಎರಡು ಭಿನ್ನ ದ್ರುವಗಳು. ಸನಿಹಕ್ಕೆ ಹೋಗಿ ನೋಡದಷ್ಟು ಕಡಕ್‌ ಖಾಕಿ. ಇಂತಹ ಅತಿ ರಮ್ಯ ಜಲಪಾತಕ್ಕೆ ಬೇಲಿ ಹಾಕಿದ್ದು ಬೇಸರ ತರಿಸಿತು. ಇದ್ಯಾವುದನ್ನೂ ಲೆಕ್ಕಿಸದೇ ಹೋದವರು ಪೋಲಿಸರ ಅತಿಥಿಯಾದರು. ಡಕ್‌ ವಾಕ್‌  ಮಾಡಿಸಿಕೊಂಡು ಜಲಪಾತದಿಂದ ಕುಲೆಮ್‌ ರೈಲ್ವೆ ಸ್ಟೇಷನ್‌ ವರೆಗೆ ಎಂಟು ಕಿ.ಮೀ ವರೆಗೆ ಪಾದ ಸೇವೆಗೈದರು. ಬಂದವರೆ ಕುಲೆಮ್‌ ಸ್ಟೇಷನ್‌ ನ ಬಣ್ಣದೊಂದಿಗೆ ಒಂದಾಗಿ ನಿದ್ರಾ ದೇವಿಗೆ ಶರಣಾದರು. ತಮ್ಮ ತಮ್ಮ ರೈಲಿಗಾಗಿ ಕಾಯುತ್ತಾ ಕುಲೆಮ್‌ ನಲ್ಲಿ ಕರಗತೊಡಗಿದರು. ಇವರನ್ನೆಲ್ಲಾ ಮಳೆ ತನ್ನ ಜೋಗುಳದಲ್ಲಿ ಜೀಕತೊಡಗಿತು. 

ಬೀಳುವಾಗಲೂ ಘನತೆ ಉಳಿಸಿಕೊಳ್ಳುವುದು ಜಲಪಾತವೊಂದೇ ಇರಬೇಕು. ಬಿದ್ದಾಗಲೇ ಘನತೆ. ಇದ್ದಲ್ಲೇ ಇದ್ದರೆ ಘನತೆ ಎಲ್ಲಿ? ಬೀಳುವಾಗಲೂ ಘನತೆ ಉಳಿಸಿಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಾ ಗಾಂಭೀರ್ಯದಿಂದಲೇ ಧುಮುಕುತ್ತಲೇ ಇದೆ.

ಎಷ್ಟೊಂದು ಬೆಸೆದ ಜೀವಗಳನ್ನು ಕಂಡಿತೋ ಅದು. ಮತ್ತೆ ಮತ್ತೆ ಇವರೆಲ್ಲರ ಬೆಸುಗೆ ಕಾಣಲು ಧುಮುಕುತ್ತಲೇ ಇದೆ.  ವಡಾಪಾವ್‌ ಮಾರುವವನಿಗೆ ನಾಲ್ಕು ಕಾಸು ಆಗುವುದು ಇಲ್ಲೇ. ಜಲಪಾತ ಬಿದ್ದಾಗಲೇ ಅವನ ಜೀವನದ ಬುತ್ತಿ ಕಟ್ಟಿಕೊಳ್ಳುವುದು. ಜಲಪಾತದಂತೆ ಇವನಿಗೂ ಬಹಳ ಅವಸರ. ಅವನ ಮನೆಯಲ್ಲಿ ಯಾರಿದ್ದಾರೋ ಕಾಯುವವರು.

ಬನ್ರಿ ಮತ್ತೆ-

ಬದುಕಿನ ದುಃಖ ದುಮ್ಮಾನ ಏಕತಾನದ ತಂತಿ ಮುರಿಯಲು ಇಂತಹ ರೋಚಕ ಹಾದಿಯನ್ನೊಮ್ಮೆ ತುಳಿದು ನೋಡಿ. ಜೀವಮಾನಕ್ಕಾಗುವಷ್ಟು ಅನುಭವದ ಬುತ್ತಿ ನಿಮ್ಮ ಜೊತೆ! 

ನಿಶ್ಚಲವಾದ ಸನ್ಯಾಸಿಯಂತಹ ಕನಸಿನ ಕುಲೆಮ್‌ನಲ್ಲಿ ಸಿಕ್ಕ ಬಿಸಿ ಬಿಸಿ ಊಟ ಹೊಸ ಚೈತನ್ಯ ಜಗತ್ತಿಗೆ ಕಾಲಿಡುವಂತೆ ಮಾಡಿತು. 



ಕ್ಷಮಿಸಲಾರೆಯ ಧರೆಯೆ –

ಪ್ರಕೃತಿಯ ಋಣಭಾರ ನನ್ನೆದೆಯಲಿ ಹಾಗೇ ಉಳಿಯಿತು. ತೀರಿಸುವ ಹೊಣೆಗಾರಿಕೆಯೊಂದಿಗೆ ಹಿಂದಿರುಗಿದೆ. ಆದರೆ ನೀರ ಸೆರಗಿನಲಿ ಉಳಿದ ನನ್ನಣ್ಣಂದಿರು ಎಸೆದ ಪ್ಲಾಸ್ಟಿಕ್‌ ಇನ್ನೂ ಅಣಕಿಸುತ್ತಲೇ ಸಮುದ್ರ ಸೇರುವ ತವಕದಲ್ಲಿದೆ.

ಕುಲೆಮ್‌ ರೈಲು ನಿಲ್ದಾಣ ಮತ್ತು  ಜಲಪಾತಕ್ಕೆ ಮಿಸ್‌ಯು ಎಂದೆನ್ನುತ್ತಾ ಮತ್ತೆ ಬರುವ ಬರವಸೆಯನ್ನಿತ್ತು ಬಾಯ್‌ ಬಾಯ್ ಹೇಳಿ ಹೊರಟು ನಿಂತೆವು.


ಶ್ರೀಧರ್‌ ಎಸ್.‌ ಸಿದ್ದಾಪುರ. 

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...