Sunday, September 26, 2021

ನೇರಳ ಕಟ್ಟೆಯಲ್ಲೊಬ್ಬ ದೇವಲೋಕದ ಸುಂದರ......


ಮಾಗಿ ಚಳಿಯ ಸಮಯ, ಸ್ನೇಹಿತ ಕಾಲ್ ಮಾಡಿ ನೇರಳ ಕಟ್ಟೆಯಲ್ಲಿ ಹಳೆ ವಸ್ತು ಮಾರಾಟಗಾರನಿದ್ದಾನೆ. ಅವನಲ್ಲಿ ಹೊಸ ಹೊಸ ಹಳೆ ವಸ್ತುಗಳು ಬಂದಿವೆಯಂತೆ ನೋಡಿ, ಕೊಂಡು ಬರೋಣವೇ?  ಎಂದು ಕೇಳಿದ. ಸರಿ ಎಂದು ಹೊರಟೆ.  ನೇರಳಕಟ್ಟೆಯಿಂದ ಮುಂದೆ ಗುಲ್ವಾಡಿಯಲ್ಲಿ ಆತನ ಮನೆಯಿತ್ತು. 

ಹಳೆಯ ವಸ್ತುಗಳ ಮಾರಾಟಗಾರನಾದ ಆತ ನಮ್ಮೆದುರು ಒಂದು ಗೋಣಿ ಚೀಲದಷ್ಟು ಹಳೆ ವಸ್ತುಗಳನ್ನು ರಾಶಿ ಹಾಕಿದ. ನಮಗೂ ಅವನಿಗೂ ವ್ಯಾಪಾರ ಕುದುರದೇ ಅಲ್ಲಿಂದ ಹೊರಟೆವು. ಹಾದಿ ನಡುವಿನ ನೇರಳಕಟ್ಟೆಯಲ್ಲಿ ಚಹ ಹೀರಲು ನಿಲ್ಲಿಸಿದೆವು. ಹತ್ತಾರು ಅಂಗಡಿ, ಸಣ್ಣ ಶಾಲೆ ಇರುವ ಪುಟಾಣಿ ಗ್ರಾಮ. ಅನೇಕ ಬರಹಗಾರರು, ಸಾಹಿತ್ಯ ಪ್ರೇಮಿಗಳನ್ನು ತನ್ನ ಒಡಲ ಬಸಿರಿನಲ್ಲಿ ಬಚ್ಚಿಟ್ಟುಕೊಂಡಿದೆ. ಮಕ್ಕಳ ಸಾಹಿತಿ ನೆಂಪು ನರಸಿಂಹ ಭಟ್, ಕವಯತ್ರಿ ಜ್ಯೋತಿ ನೇರಳಕಟ್ಟೆ, ನಾಟಕಕಾರ ಆನಂದ ತಪ್ಪಲು, ಅಕ್ಷರ ಸಂಚಾರದ ಪುಸ್ತಕ ಪ್ರೇಮಿ ಭಾಸ್ಕರ ಮುಂತಾದವರು. 

ನೇರಳಕಟ್ಟೆಯಿಂದ ವಾಪಾಸು ಬರುವಾಗ  ಒಂದಿಷ್ಟು ಮೀನು ಮಾರುವವರನ್ನು ಕಂಡೆ. ತಲೆ ಮೇಲೊಂದು ಅಣಬೆ ಛತ್ರಿ ಹಾಕಿಕೊಂಡು ಅದರ ನೆರಳಲ್ಲಿ ಕುಳಿತು ಮಾರುತ್ತಿದ್ದರು. ನೋಡಿದ ಕೂಡಲೆ ನನ್ನೊಳಗಿನ ಛಾಯಾಗ್ರಾಹಕ ಜಾಗೃತನಾದ. ಇವರ ಛಾಯಾಗ್ರಹಣ ಮಾಡಬೇಕೆಂದು ನಿರ್ಧರಿಸಿದೆ. ಮುಂದಿನ ಭಾನುವಾರವೇ ಅಲ್ಲಿಗೆ ಮತ್ತೆ ಹೊರಟೆ.

ನೇರಳ ಕಟ್ಟೆ ಚಿತ್ರಕಾರನೊಬ್ಬ ಬಿಡಿಸಿದ ಕೊಲಾಜ್ನಂತೆ. ಹೆಸರೇ ಎಷ್ಟು ಸುಂದರ. ಕೇರಳದಿಂದ ಬಂದ ಮಾಪಿಳ್ಳೆಗಳು, ಕೊಚ್ಚಿ ಕ್ರಿಶ್ಚಿಯನ್ನರು ಈ ಭಾಗದವರೇ ಆಗಿ ಹೋಗಿದ್ದಾರೆ. ಬಹುತೇಕರು ಕೃಷಿಕರು. ಕೊಡ್ಲಾಡಿ ಸಮೀಪದ ದಿ. ಶ್ರೀಪತಿ ಅಡಿಗ ಮತ್ತು ಅವರ ಮಗ ಪ್ರಸನ್ನ ಅಡಿಗ ತಮ್ಮ ಸಹಜ ಕೃಷಿಯ ಮೂಲಕ ನೇರಳ ಕಟ್ಟೆಗೆ ಹೆಸರು ತಂದು ಕೊಟ್ಟವರು. 



ಕ್ಯಾಮರಕ್ಕೊಂದು ದೊಡ್ಡ ಲೆನ್ಸ್ ಹಾಕಿ ನೇರಳಕಟ್ಟೆಯ ಬೀದಿಯಲ್ಲಿ ಬಜ್ಜಿ ಅಂಗಡಿ ಎದುರು ನಿಂತೆ. ಶಕುಂತಲೆಯಂತೆ ಶಿಖೆ ಹೊತ್ತ ಬೋಂಡಾ ಮಾಡುತ್ತಿದ್ದ ಹೆಂಗಸೊಬ್ಬಳು ಬೋಂಡಾ ಕಲೆಸುತ್ತಾ ನನ್ನನ್ನು 'ಏನು?' ಎಂದು ವಿಚಾರಿಸಿಕೊಂಡಳು. 'ಹೀಗೇ ಸುಮ್ನೆ' ಎಂಬ ಜಾರಿಕೆಯ ಉತ್ತರವನ್ನಿತ್ತೆ. ಸನ್ ಗ್ಲಾಸ್ ಏರಿಸಿ, ಜೀನ್ಸ ಧರಿಸಿ ಬುಲೆಟ್ನಲ್ಲೊಬ್ಬ ಬಿರುಗಾಳಿಯಂತೆ ಬಂದ. ಅಂಗಡಿ ಮುಂಗಟ್ಟಿನ ಮುಂದೆ ನಿಂತು ಗುಟಕಾ ಖರೀಧಿಸಿದ. ಕಂಕುಳಲ್ಲೊಂದು ಕೋಳಿ ಪಡೆಯ ಹುಂಜವೊಂದು ಕ್ಕೊಕ್ಕೊ ಕ್ಕೋ ಕೋ ಎಂದು ಕೂಗುತ್ತಿತ್ತು. ಆತ ಪೂರ್ವ ಮತ್ತು ಪಶ್ಚಿಮಗಳ ಸಮ್ಮಿಲನದಂತೆ ನನಗೆ ಕಂಡ. ಕ್ರಿಶ್ಚಿಯನ್ ಅಜ್ಜನೊಂದಿಗೆ ಮೀನು ಹೆಂಗಸರು ಸರಸ ಸಂಭಾಷಣೆಯಲ್ಲಿ ತೊಡಗಿ, ಅವನನ್ನು ಮೀನು ಖರೀಧಿಸುವಂತೆ ಮಾಡಿದರು! ಅಂದು ಛತ್ರಿಯಡಿ ಮೀನಿನ ವ್ಯಾಪಾರ ಮಾಡುತ್ತಿದ್ದ ಛತ್ರಿ ಹೆಂಗಸು ಇಂದಿರಲಿಲ್ಲ. ಆದರೂ ಏನಾದರೂ ಒಳ್ಳೇ ಚಿತ್ರ ಸಿಗಬಹುದೆಂದು ಕಾದೆ. ಮೀನು ಹೆಂಗಸರ ವ್ಯಾಪಾರ ನೋಡದಂತೆ ಅಡ್ಡಲಾಗಿ ದುಗರ್ಾಂಬ ಬಸ್ಸೊಂದು ಧೂಳೆಬ್ಬಿಸುತ್ತಾ ಗಡಿ ಬಿಡಿಯಿಂದ ಬಂದು ನಿಂತಿತು. ಬಂದ ಯಮ ವೇಗ ನೋಡಿದರೆ ಕೂಡಲೇ ಹೊರಟು ಹೋಗುತ್ತದೆಂದು ನಾನು ಎಣಿಸಿದೆ. ಆದರೆ ಕಂಡಕ್ಟರ್ ಬಜ್ಜಿ ಮಾಡುತ್ತಿದ್ದ ಹೆಂಗಸಿನೊಂದಿಗೆ ಮಾತಿಗಿಳಿದ. ಬಸ್ಸಿಂದ ಎದ್ದ ಧೂಳಿನ ಕಣಗಳೆಲ್ಲಾ ಮೇಲೆದ್ದು ಕಂಡೂ ಕಾಣದಂತೆ ಬೊಂಡಾದ ಹಿಟ್ಟಿನೊಂದಿಗೆ ಸೇರಿ ಹೊಯ್ತು. ಬಜ್ಜಿ ಮಾಡುತ್ತಿದ್ದ ಶಕುಂತಲೆ ಇದಾವೂದಕ್ಕೂ ಕ್ಯಾರೇ ಎನ್ನದೆ ಕಲಿಸುತ್ತಲೇ ಇದ್ದಳು! ಕಂಡಕ್ಟರ್ ಬಜ್ಜಿ ರುಚಿ ನೋಡಿದ. ನನ್ನ ಫೋಟೋ ಯಜ್ಞ ಯಡವಟ್ಟಿಗಿಟ್ಟು ಕೊಂಡಿತು. ಅಂತೂ ಹತ್ತು ನಿಮಿಷ ಕಾದು, ಶಕುಂತಲೆಯನ್ನೇ ನೋಡುತ್ತಾ ಕಂಡಕ್ಟರ್ ರೈಟ್ ಎಂದ. ಅಂತೂ ಹೊರಟಿತಲ್ಲ ಉಗಿಬಂಡಿ ಎಂದು ಸಂತಸ ಪಟ್ಟೆ. ಈ ಬೋಂಡಾ ಅಂಗಡಿ ಎದುರಿಗೇ ಅನೇಕ ವರ್ಷಗಳಿಂದ ನನ್ನನ್ನು ಪೀಡಿಸಿದ, ಕಾಡಿಸಿದ ಹಟ್ಟಿ ಮುದ್ದ ಕುಳಿತಿದ್ದ? ಇವನ ಪೋಟೊಗಾಗಿ ಊರೂರು ಅಲೆದಿದ್ದೆ. ಎಷ್ಟೋ ಕಾಡು ಸುತ್ತಿದ್ದೆ. ಲೀಟರ್ಗಟ್ಟಲೆ ಬೆವರು ಹರಿಸಿದ್ದೆ. ಅಚಾನಕ್ ಆಗಿ ಸಿಕ್ಕಿದ್ದನ್ನು ನೋಡಿ ಕುಸಿಯಾಯಿತು.


ಅಂತೂ ಆಸಾಮಿ ವಿಷಯಕ್ಕೆ ಬಂದ್ನಲ್ಲ ಎಂದು ಕುಸಿಯಾಯಿತಾ? ತಲೆಯ ಮೇಲೊಂದು ಶಿಖೆ ಹೊತ್ತ ದೇವಲೋಕದ ಸುಂದರ ಪಕ್ಷಿ ಮರ್ರೆ ಈ ಹಟ್ಟಿ ಮುದ್ದ. ನಾ ನಿಟ್ಟ ಹೆಸರಲ್ಲ ಇದು. ಪರಿಸರದೊಂದಿಗೆ ಹಲವು ಶತಮಾನಗಳಿಂದ ಸಹ ಜೀವನ ನಡೆಸುತ್ತಾ ಬಂದ ಕುಡುಬಿ ಮತ್ತು ಮರಾಠಿ ಜನಾಂಗದವರಿತ್ತ ಹೆಸರು! ಹಟ್ಟಿ ಎಂದರೆ ನಮ್ಮ ಕಡೆ ದನ, ಎಮ್ಮೆ ಕಟ್ಟುವ ಜಾಗ. ಅಲ್ಲಿರುವ ಕೀಟಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ಹೊರೆದು ಕೊಳ್ಳುವವನೀತ. ಗಂಡು ಗಲಿ. ಅಲ್ಲದೆ ಮರಾಠಿಗರ ಹೋಳಿ ಹಬ್ಬಕ್ಕೆ ಇವನ ಚಂದ ಬಾಲವಿದ್ದರೆ ಅದರ ಗತ್ತೇ ಬೇರೆ. ಅವನ ಬಾಲಕ್ಕೆ ಒಳ್ಳೆ ಬೆಲೆ! ಹಾಗೆಂದು ಹಿಡಿಯಲು ಹೋಗಬೇಡಿ. ಪಾರೆಸ್ಟ್ ಡಿಪಾರ್ಟಮೆಂಟಿನವರು ಹಿಡಿದಾರು ಜೋಕೆ. ಈಗಾಗಲೇ ಅಳಿವಿನಂಚಿಗೆ ಸರಿದಿದೆ ಸ್ವಾಮಿ.

ಹೇಗಿದ್ದಾನಿವ ಎಂದು ಕೇಳಿದಿರಾ? ತಲೆಯ ಮೇಲೊಂದು ಶಿಖೆ. ಸೀಳಿಕೊಂಡ ಉದ್ದನೆಯ ಬಿಳಿ ಬಾಲ. ಚೂಪು ಕಣ್ಣು. ದೇಹವೆಲ್ಲಾ ಕಪ್ಪೆನಿಸುವ ಕಡು ನೀಲಿ. ಎದೆ ಬಿಳಿ. ಅದಕೆ ಮ್ಯಾಚಿಂಗ್ ಆದ ಬಿಳಿ ಪುಕ್ಕ ಮತ್ತು ಸೀಳಿಕೊಂಡ ಸುಂದರ ಬಾಲ. ಥೇಟ್ ಸ್ವರ್ಗದಿಂದಿಳಿದು ಬಂದ ದೇವತೆ. ಹಾಗಾಗಿ ಇಂಗ್ಲೀಷ್ ಬಲ್ಲವರು ಪ್ಯಾರಡೈಸ್ ಪ್ಲೈ ಕ್ಯಾಚರ್ ಎಂದು ನಮ್ಮನ್ನು ತಬ್ಬಿಬ್ಬು ಮಾಡಿದ್ದೂ ಉಂಟು. ಇರಲಿ ಇದು ಒಂದು ಅಗ್ದಿ ನೊಣ ಹಿಡುಕ. ಹಾಗಾಗಿ ಮೀನು ಹೆಂಗಸರ ಬೆನ್ನು ಬಿದ್ದಿದ್ದ. ಹಟ್ಟಿ ಮುದ್ದನ ವಿವಿಧ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡುಬಿಟ್ಟೆ. ನನ್ನ ಕ್ಯಾಮರ ಇವತ್ತು ತೃಪ್ತಿಯ ತೇಗು ತೇಗಿತ್ತು. ಫೋಟೋ ಕ್ಲಿಕ್ಕಿಸಿಕೊಂಡ ಕುಸಿಯಲ್ಲಿ ಆತನೂ ಬಾಲ ಅಲ್ಲಾಡಿಸುತ್ತಾ ಹಾರಿ ಹೋದ!

ಶ್ರೀಧರ್. ಎಸ್. ಸಿದ್ದಾಪುರ

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...