Sunday, August 20, 2023

ಕಾಯುವ ಸುಖ ಕಷ್ಟ....

                ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರಿನಲ್ಲಿ ಸಿಕ್ಕಿ ಎಂದಿದ್ದ ಗೆಳೆಯ. ಮಾಡಲೇನೂ ಕೆಲಸವು ಇರಲಿಲ್ಲ ಹಾಗಾಗಿ ಕಾಫೀ ಹೀರಿ ಅಂಕಿತದ ಜಗುಲಿಗೆ ಬಂದು ಪುಸ್ತಕ ತಿರುವುತ್ತಾ ಕೂತೆ. ಗಂಟೆ ಹತ್ತಾದರೂ ಆಸಾಮಿ ನಾಪತ್ತೆ. ಕಾಯುವಿಕೆ ಮುಂದುವರಿದಿತ್ತು.



ಪ್ರೇಯಸಿಗಾಗಿ ಅವಳ ಒಂದು ನೋಟಕ್ಕಾಗಿ, ಸ್ಪರ್ಶಕ್ಕಾಗಿ ಕಾದವನಂತೆ ಪುಸ್ತಕದಂಚು ಸವರುತಲಿದ್ದೆ. ಸಿ. ಇ. ಟಿ ಬರೆದು ರಿಸಲ್ಟ್‌ ಗೆ ಕಾದ ಇಂಜಿನಿಯರಿಂಗ್‌ ವಿದ್ಯಾರ್ಥಿಯಂತೆ. ಮಿಸ್‌ ಯು ಹೇಳುವ ಅವಳ ತುಟಿ ಅಂಚಿನ ಮೋಹಕತೆ.




            ಪಕ್ಕನೆ ಸಿಕ್ಕಿದ್ದೆ ಮಾರ್ಕ್ವೇಜ್ನ ʼನೋಬಡಿ ರೈಟ್ಸ್‌ ಟು ಕರ್ನಲ್ʼ. ಪುಟ ತಿರುತಿರುಗಿಸುತ್ತಾ ಕುಳಿತೆ. ಮಾರ್ಕ್ವೇಜ್‌ ಕಾಯುವಿಕೆಯೊಂದನ್ನು ರೂಪಕದಂತೆ ಇಲ್ಲಿ ಬಳಸಿದ್ದಾನೆ, ಕರ್ನಲ್‌ ಬದುಕಿನ ಸಂಧ್ಯಾ ಕಾಲವಿಡಿ ಬಾರದ ಒಂದು ಪತ್ರಕ್ಕಾಗಿ ಕಾಯುತ್ತಾನೆ. ಅರ್ಥ ನಿರರ್ಥಕಗಳ ಪರಿವೇ ಇಲ್ಲದ ಅಸಾಮಾನ್ಯ ಕಾಯುವಿಕೆ ಆತನದು. ಕಾಯುವಿಕೆಯೇ ಸುಂದರ  ಕಾದು ಕಾದು ಸುಣ್ಣವಾದರೂ ಕತೆಗಳಲ್ಲಿ ನಿಜ ಜೀವನದ ಸಿಕ್ಕುಗಳಲ್ಲಿ ಸಿಕ್ಕಿ ನಮಗೂ ಸಿಕ್ಕಿ ಅಸಾಮಾನ್ಯವಾದುದೇನೋ ಒಂದನ್ನು ಹೊಳೆಯಿಸುತ್ತಾನೆ.



                ಹೀಗೆ ತೇಜಸ್ವಿಯ ತಬರನೂ ಅಂಥವರಲ್ಲೊಬ್ಬ. ತಬರ ಬಾರದ ಪೆನ್ಶನ್ಗಾಗಿ, ತಬರನಿಗೆ ಸಾಲಕೊಟ್ಟ ಅಂಗಡಿಯಾತ ಆತನಿಗೆ ಬರಬೇಕಾದ ದುಡ್ಡಿಗೆ, ಹೆಂಡತಿ ಔಷಧಿಗಾಗಿ ಅನವರತ ಕಾಯುತ್ತಿರುತ್ತಾಳೆ. ನಾನು ಗೆಳೆಯನಿಗೆ, ಅಂಗಡಿಯಾತ ಈತ ಪುಸ್ತಕ ಕೊಳ್ಳಲಿ, ಬೋಣಿಯಾಗಲಿ ಎಂದು ಕಾಯುತ್ತಿರುತ್ತಾನೆ.

ಇನಿಯ ಅವಳ ಮೋಹಕ ನೋಟಕ್ಕೆ. ಜಗತ್ತೇ ಕಾಯುವವರ ಸಂತೆಯಂತೆ ಕಾಣಿಸುತ್ತದೆ. ಈ ಜಗದಲ್ಲಿ ಕಾಯದೇ ಇರುವವರು ಯಾರು? ಕಾಯುವಿಕೆ ಅನವರತ. 
ಹುಟ್ಟಿದವ ಸಾವಿಗೆ. ಸ್ಪರ್ಧಿ ರಿಸಲ್ಟ್‌ಗೆ ಮತದಾರ ಮತ ಎಣಿಕೆಯ ರೋಚಕತೆಗೆ. ಗುಮಾಸ್ತ ಪ್ರಮೋಷನ್‌ಗೆ.
ಕೋರ್ಟನ ವಿಚಾರಣೆಗೆ ಕಾಯುವ ಅನಸೂಯಳಂತೆ ನಾವೆಲ್ಲಾ ಯಾವುದೋ ಫಲಿತಕ್ಕಾಗಿ ಕಾಯುತ್ತಿರುತ್ತೇವೆ.
        ನೈದಿಲೆಯು ಸೂರ್ಯನಿಗೆ, ಚಕೋರಿಯು ಚಂದ್ರನಿಗೆ ಕಾದಂತೆ. ಇಲ್ಲಿ ಎಲ್ಲರೂ ಕಾಯುವವರೇ.       


 

ಕಾಯುವ ಸುಖಕಷ್ಟ ಕುರಿತು ಚಂದದ ಲೇಖನ ಈ ಕೃತಿಯಲ್ಲಿ ಉಂಟು. 

    ಕಾಯುವುದರಲ್ಲೂ ಕಾಯಕ್ಕೆ ಸುಖವುಂಟು. ಅದಮ್ಯವಾದ ಪ್ರೀತಿಯುಂಟು. ಕಾಯ ಕಾಯಬೇಕು. ಅಹಲ್ಯ ಮತ್ತು ಶಬರಿ ರಾಮನಿಗಾಗಿ ಕಾಯುವಿಕೆಗೆ ಕೊನೆಯುಂಟೆ? ಅಂದ ಹಾಗೆ ನೀವು ಯಾವುದಕ್ಕೆ ಕಾಯುತ್ತಿರುವಿರಿ.


ಶ್ರೀಧರ್‌ ಎಸ್. ಸಿದ್ದಾಪುರ.

Sunday, July 16, 2023

ಪ್ಯಾಪಿಲೋ ಬುದ್ಧನ ಹುಡುಕಾಟದಲ್ಲಿ ಸಿಕ್ಕ ಅಪ್ಸರೆ..

    ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ.


   ಇವನೇನು ಹೇಳುವನೆಂದು ಹುಬ್ಬೇರಿಸಬೇಡಿ ಕೆಲವೊಮ್ಮೆಒಂದರ ಹುಡುಕಾಟದಲ್ಲಿರುವಾಗ ಇನ್ನೇನೋ ಸಿಕ್ಕಿ ಎಲ್ಲಿಗೋ ಒಯ್ಯುವುದು. 




ಆಗ ನನ್ನ ಬಳಿ ಪುಟಗೋಸಿ ಸುಣ್ಣದ ಡಬ್ಬಿಯಂತಹ ಚಿಕ್ಕ ಕ್ಯಾಮರವೊಂದಿತ್ತು. ಆಗಿನ ಕಾಲಕ್ಕೆ ಅತಿ ಆಸೆ ಪಡುವಂತಹ ಕನಸು ಕಾಣುತ್ತಿದ್ದೆ. ಚಿಟ್ಟೆಗಳ ಸುಂದರ ಚಿತ್ರ ತೆಗೆಯೋದು.  ಆಗ ನನ್ನ ಕಣ್ಣಿಗೆ ಬಿದ್ದವ ಪ್ಯಾಪಿಲೋ ಬುದ್ದ ಎಂಬ ಸುಂದರ ಚಿಟ್ಟೆ.  ಅದರ ಸೌಂದರ್ಯಕ್ಕೆ ಮಾರು ಹೋಗಿ ಬಿಟ್ಟೆ. ಪಶ್ಚಿಮ ಘಟ್ಟಗಳಿಗೇ ಸೀಮಿತವಾದ ವಿಶಿಷ್ಟ ಚಿಟ್ಟೆ. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ಅದರ  ಸುಮನೋಹರ ಸೌಂದರ್ಯವೇ ನನ್ನ ಕಂಗೆಡಿಸಿತು. ಕಡು ಹಸಿರಾದ ಅದರ ಮೈಯನ್ನು ಒಮ್ಮೆ ನೋಡಿದರೆ ಮುಗೀತು, ನೀವು ಸಮ್ಮೋಹಿತರಾಗೋದು ಗ್ಯಾರೆಂಟಿ. ಈ ಚಿಟ್ಟೆಯ ಅಂದವೇ ನನ್ನನ್ನು ಇಲ್ಲಿಯವರೆಗೆ ಎಳೆದು ತಂದಿದ್ದು.  




 ನಾಗರಹೊಳೆಯ ಕಾಡುಗಳಲ್ಲಿ ಕಾಟಿ ಚಿರತೆಗಳ ಸಂಗಕ್ಕೆ ಬಿದ್ದು ಸುಮ್ಮನೆ ಅಲೆಯುತ್ತಿದ್ದವನಿಗೆ ಸಿಕ್ಕ ನ್ಯಾಚುರಲಿಸ್ಟ್‌ ಒಬ್ಬರು ಇರ್ಫು ಜಲಧಾರೆಯಲಿ ಇವು ಧಾರಾಳವಾಗಿವೆ ಎಂದಿದ್ದ. ತಡ ಮಾಡದೇ ಕಾರೊಂದನ್ನು ಬುಕ್‌ ಮಾಡಿ ಹೊರಟೆವು!

ಕುಟ್ಟಂನಲ್ಲಿ ಕಟ್ಟಂ ಚಾ ಕುಡಿದು

ವಿಚಿತ್ರವಾದ ದ್ರಾವಣದಲ್ಲಿ ಅದ್ದಿ ತೆಗೆದಂತಹ ಕುಟ್ಟಂನ ಪರಿಸರ. ಸೆಪಿಯಾ ಬಣ್ಣದಲ್ಲಿ ಅದ್ದಿ ತೆಗೆದಂತಹ ಊರು ವಿಚಿತ್ರವಾದ ಸೆಳೆತದಿಂದ ನನ್ನ ಕಂಗೆಡಿಸಿತ್ತು. ನಾಗರಹೊಳೆ ದಾಟಿದವರಿಗೆ ಕುಟ್ಟಂ ಎಂಬ ಪುಟ್ಟ ಹಳ್ಳಿಯ ಬೆಚ್ಚಗಿನ ಸ್ವಾಗತ. ಹೆಚ್ಚಿನವರು ಕೇರಳಿಗರು. ಇಲ್ಲಿ ಕಟ್ಟಂ ಚಾಯ್‌ ಬಹಳ ಫೇಮಸ್.

         ಹದವಾದ ಚಹ ಎಲೆಗಳು ಕೆಟಲಿನಲ್ಲಿ ಕುದಿಯುತ್ತಾ, ಹಬೆಯಾಡುತ್ತಾ ಇತ್ತು ಕಟ್ಟಂ ಚಾಯ. ಬದುಕೊಂದು ಕೆಟಲಿನಲಿ ಬೇಯುತಿರುವ ಅನುಭವ. ಕುಟ್ಟಂನಲ್ಲಿ ಕಟ್ಟಗಿನ ಬಿಸಿ ಬಿಸಿ ಕರಿ ಚಹಾ ಹೀರುವ, ಚಹಾ ಕಾಫೀ ತೋಟದ ಕೂಲಿಗಳು ಸಾಕಷ್ಟು. ನಾವು ಹೋದಾಗಲೂ ಅನೇಕರು ಅಲ್ಲಲ್ಲಿ ಚಹ ಹೀರುತಲಿದ್ದರು. ನಾವೂ ಗೂಡಂಗಡಿಗಳಲ್ಲಿ ಸಿಗುವ ಹಬೆಯಾಡುವ ಚಹಾ ಕಣ್ಣು ಹೀರಿದೆವು. ಕ್ಯಾನ್ಸರ್ಗೂ ಗಿಡಮೂಲಿಕೆ ಔಷಧ ನೀಡಿ ಗುಣಪಡಿಸುವವರು ಇಲ್ಲಿದ್ದಾರೆಂದು ಬೆಂಗಳೂರಿನ ಗೆಳೆಯನೊಬ್ಬ ಯಾವಾಗಲೂ ಹೇಳುತ್ತಿದ್ದ. ಹಾಗೇ ಅವರನ್ನೂ ಒಮ್ಮೆ ಭೇಟಿಯಾಗಬೇಕು. ಅವರ ಮಾತಿಗೆ ಕಿವಿಯಾಗಬೇಕು. 




ಲಾಮಾ ನಾಡಿನ ಲಕ್ಷ್ಮಣ  ತೀರ್ಥದೆಡೆಗೆ…


         ಲಾಮಗಳ ಭೂತಾನ್‌ನ ರಾಜಧಾನಿ ಥಿಂಪುವನ್ನು ನೆನಪಿಸುವಂತಿರುವ ದಕ್ಷಿಣ ಕೊಡಗಿನ ಈ ತಾಣ ಎಷ್ಟೊಂದು ರಮಣೀಯ ಅಂತೀರಾ. ಬನ್ನಿ ಹೇಗಿದೆ ನೋಡೋಣವೇ?

         ಜಲಧಾರೆಯ ಬಲಕ್ಕೆ ಕೇರಳವಿದ್ದರೆ ಎಡಕ್ಕೆ ನಾಗರಹೊಳೆ ಅಭಯಾರಣ್ಯವಿದೆ. ಅದೇ ಈ ಜಲಧಾರೆಯ ಮೂಲ. ಕೇರಳಿಗರೇ ಇಲ್ಲಿ ಹೆಚ್ಚು. ಜಲಧಾರೆಗೆ ಹಲವು ಕಿಲೋಮೀಟರ್‌ ಇರುವಾಗಲೇ ಇದು ನಿಮ್ಮನ್ನು ಕೈಬೀಸಿ ಕರೆಯುತ್ತದೆ.

         ಇದನ್ನು ನೋಡಲು ಕೇರಳದ ತುದಿಯ ತಲುಪಬೇಕು. ಮಂಜು ತುಂಬಿದ ಗಿರಿಗಳಿಂದ ಜಡೆ ಬಿಟ್ಟಂತೆ ಧುಮುಕುವ ಲಲನೆ. ಅಲ್ಲಲ್ಲಿ ಬಳುಕುವ ಬಳ್ಳಿ. ನಿಸರ್ಗದ ಗರ್ಭಗುಡಿಯಲ್ಲಿ ಅಡಗಿದ ರತ್ನ ಮಣಿ.

ಸುತ್ತೆಲ್ಲಾ ಗಡಿಬಿಡಿ ಇಲ್ಲದೇ ಹಾರಾಡುವ ಹಕ್ಕಿಗಳು. ಕೆನ್ನೆಗೆ ಮುತ್ತಿಕ್ಕಲು ಬರುವ ಪ್ಯಾಪಿಲೋ ಬುದ್ಧ! ಹೆಸರೇ ಎಷ್ಟೊಂದು ಆಕರ್ಷಕ. ದರ್ಶನ ಪಡೆದರಂತೂ ಅದರ ಮೋಹಕತೆಗೆ ಬೆರಗಾಗದೇ ಇರಲಾರಿರಿ.


ಮೆಟ್ಟಿಲೇರಿ ಮುಗಿಲಿಗೆ ಕೈಯ ಚಾಚಿ…


ಇಲ್ಲಿ ಹರಿವ ತೊರೆಯ ಸೆರಗ ಸೆಳೆಸಿ ಮೇಲೇರಿದಂತೆ ಮಂಜು ನಿಮ್ಮನ್ನು ಆವರಿಸುತ್ತದೆ. ಕಿವಿಯೊಳಗೆಲ್ಲಾ ಹಾದು ಕಚಗುಳಿ ಇಡುತ್ತದೆ.

ಜಲಪಾತದ ಹಾದಿಯೇ ಎಷ್ಟೊಂದು ರೋಚಕ. ಹೂ ಬಳ್ಳಿಗಳು, ಶೃಂಗಾರಕ್ಕಿಟ್ಟಂತೆ ಕಾಣುವ ದಪ್ಪ ದಪ್ಪ ಬಿಳಲುಗಳು. ಜಲಪಾತದ ಸನಿಹದೊರೆಗೆ ಮೆಟ್ಟಿಲುಗಳ ಸಖ್ಯ ಬೆಳೆಸಿದ ದಪ್ಪ ದಪ್ಪ ಮರಗಳು.

ಕಾವೇರಿಯ ಉಪನದಿಯಾಗಿ ಮುಂದೆ ಹರಿಯುವ ಗಂಡು ನದಿ ಲಕ್ಷ್ಮಣ ತೀರ್ಥ. ಮುಂದೆ ಹುಣಸೂರು, ಮೈಸೂರು ಮಂದಿ ಇದನ್ನು ಕುಲಗೆಡಿಸಿದ್ದಾರೆ. ಹುಣಸೂರಿನಲ್ಲೊಮ್ಮೆ ನೋಡಿದ್ದೆ ನದಿಯೋ ಗಟಾರವೋ ಎಂಬಷ್ಟು ಗಬ್ಬು. ಹಾಳುಗೆಡುಹದೇ ನೆಮ್ಮದಿ ಇಲ್ಲವೇನೋ ನಮ್ಮ ಜನಕ್ಕೆ.

ಪುಟಾಣಿ ಮೆಟ್ಟಿಲ ಏರಿ ಪುಷ್ಪ ಗಿರಿಯ ಬುಡವನ್ನೊಮ್ಮೆ ಮುಟ್ಟಿ ಬರಬೇಕು. ಹೂವ ಕಣಿವೆ ತುಂಬಾ ಪುಷ್ಪ ಪಕಳೆ ಹಾಸಿದಂತ ದಾದಿಯ ಹೊಕ್ಕು ಬರಬೇಕು. ನೀವು ಎಂದೂ ಮರೆಯಲಾರಿರಿ ಇರ್ಫು ಎಂಬ ಚಕೋರಿಯ.

ತರುಲತೆಗಳ ಜೊತೆಗೆ ಹಾದು ಬಂಡೆಯಿಂದ ಬಂಡೆಗೆ ಕುಪ್ಪಳಿಸುತ್ತಾ ಪುಳಕಗೊಳಿಸುವುದು. ಅರಸಿಕನ ಮನದ ಕದ ತೆರೆವ ತಾಣ!

ಇರ್ಫು ನಾಗರಹೊಳೆ ಅಭಯಾರಣ್ಯಕ್ಕೆ ಬಲು ಸನಿಹದಲ್ಲಿದೆ. ಅಲ್ಲಿಂದ ಬ್ರಹ್ಮಗಿರಿ, ಪುಷ್ಪಗಿರಿಗೆ ಚಾರಣ ಕೂಡ ಮಾಡಬಹುದು. ಕೊಡಗಿನ ಕೆಳ ತುದಿಯಲ್ಲಿರುವುದರಿಂದ ತಲುಪುವುದೇ ಬಲು ಕಷ್ಟ. ಈ ಜಲಪಾತ ವೀಕ್ಷಣೆಗೆ ಕೊಡಗಿನಿಂದ ಬಂದು ಹೋಗಲು ಒಂದಿಡಿ ದಿನ ಬೇಕಾಗುವುದು. ಈ ಜಲಪಾತದ ಬಳಿ ಈಶ್ವರ ದೇವಾಲಯವಿದೆ. ಪ್ರಕೃತಿ ಅಧ್ಯಯನಕ್ಕೆ ಹಲವು ತಂಡಗಳು ಬಂದು ಹೋಗುತ್ತಾರೆ. ಹಲವರು ಇಲ್ಲಿ ಬಂದು ಜೀವಜಾಲದ ಅಧ್ಯಯನ ಮಾಡುತ್ತಾರೆ. 



ಸಿಕ್ಕನೇ ಬುದ್ಧ:-

ಹಲವು ಪ್ಯಾಪಿಲೊ ಬುದ್ಧದ ಜೊತೆ ಜೊತೆಗೆ ಅನೇಕ ಮನಮೋಹಕ ಚಿಟ್ಟೆಗಳು ಅಲ್ಲಲ್ಲಿ ಕಾಣ ಸಿಕ್ಕವು. ಜೊತೆಗೊಂದಿಷ್ಟು ನೆನಪುಗಳು.

ಸಿಕ್ಕೀತೆ ಮುಂದಿನ ದಾರಿ:-

    ನಾಳೆಗಾಗಿ ನಮ್ಮನ್ನುಳಿಸಿ ಎಂಬ  ಲಕ್ಷ್ಮಣ ತೀರ್ಥದ ಆರ್ತ ನಾದ ನಮ್ಮನ್ನು ಇನ್ನೂ ತಾಕದಿರುವುದು ವಿಪರ್ಯಾಸ. ಲಕ್ಷ್ಮಣ ತೀರ್ಥವೆಂಬ ವಿಶಿಷ್ಟ ನದಿಯು ತನ್ನ ನೈಜ ಸೌಂದರ್ಯವನ್ನು ಉಳಿಸಿಕೊಳ್ಳುವಂತೆ ಮಾಡುವುದು ನಮ್ಮೆಲ್ಲರ ಹೊಣೆಯಲ್ಲವೇ?




Saturday, July 8, 2023

ನಿಲ್ದಾಣವಲ್ಲದ ನಿಲ್ದಾಣದಲ್ಲಿ…

 

ಪಶ್ಚಿಮ ಘಟ್ಟದ ಸೆರಗ ಹಿಡಿದು ಅದರ ತೊಡೆಯ ಮೇಲೆ ಮಲಗಿದ ರಮ್ಯ ರೈಲು ನಿಲ್ದಾಣ! ಕಾವಲಿಗೆ ನಿಂತ ಬೆಟ್ಟ ಸಾಲು. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಸಾಗುವ ನೋಟ ಎಂತಹ ಜಡ ಭರತರನ್ನೂ ಕವಿಯಾಗಿಸಬಲ್ಲದು! ಭಾರತದ ಉದ್ದಗಲಕ್ಕೂ ಇಷ್ಟು ವಿಶಿಷ್ಟವಾದ ಮತ್ತೊಂದು ರೈಲು ನಿಲ್ದಾಣವಿರಲಿಕ್ಕಿಲ್ಲ. ಯಡಕುಮರಿ. ಎಂತಹ ವಿಚಿತ್ರ ಹೆಸರು. ಹೆಚ್ಚು ಕಡಿಮೆ ಎಡಕುಮೇರಿ ಅಥವಾ ಯಡಕುವೇರಿ ಎಂಬ ಹೆಸರು ಕೇಳಿರದ ಚಾರಣಿಗ ಇಲ್ಲವೇನೋ.


ತೇಜಸ್ವಿಯವರ ಜುಗಾರಿ ಕ್ರಾಸ್ ಓದಿದವರಿಗೆ ಕುಂಟರಾಮನ ಕಥಾ ಪ್ರಸಂಗ ಎಡಕುವೇರಿಯ ಸುರಂಗಗಳನ್ನು ನೆನಪಿಸುತ್ತೆ. ಅಂತಹ ಬೀಕರತೆ ಇಲ್ಲಿನ ಸುರಂಗಗಳಿಗೆ ಲಭಿಸಿದೆ. ಎಡಕುಮರಿ ಸನಿಹದಲ್ಲೇ ನಡೆಯುವ ಕತಾ ಪ್ರಸಂಗವೊಂದನ್ನು ಗಿರಿ ಮನೆ ಶ್ಯಾಂ ರಾವ ಕಟ್ಟಿ ಕೊಟ್ಟ ನೆನಪು. ಭಯಾನಕ ಹುಲಿಯೊಂದನ್ನು ಭೇಟೆಯಾಡಿದ ಫಾರೆಸ್ಟರ್‌ ಕೊನೆಗೆ ಅಮಾನತಿಗೆ ಒಳಗಾಗುವ ಕತೆ ಇಲ್ಲಿಯೇ ನಡೆದುದು. ಇಂತಹ ಮಾನವ ತಲುಪಲಾಗದ ಹಳ್ಳಿ ನಮ್ಮ ದೇಶದಲ್ಲಿ ಹಲವಿರಬಹುದು ಆದರೆ ತಲುಪಲಾಗದ ಸ್ಟೇಷನ್‌ ಒಂದು ಇದೆ ಎಂಬುದೇ  ಒಂತರಾ ವಿಚಿತ್ರವಲ್ಲವೇ? ಮಾನವ ನಾಗರಿಕತೆಯ ಸೋಂಕಿಗೆ ಒಳಗಾಗಲು ನೀವು ಬರೋಬ್ಬರಿ ೮ ಕಿ. ಮೀಟರ್‌ ನಡೆಯಬೇಕು! ಸುಬ್ರಮಣ್ಯದಿಂದ ಹೊರಟು ದೋಣಿಗಲ್ಲು ದಾಟಿದರೆ ಮುಂದೆ ಸಿಗುವುದೇ ಯಡಕುಮರಿ.


            ಇಲ್ಲಿ ನೀವು ದಾಟುವ ಸುರಂಗಗಳು ಹಲವು. ದಾಟುವ ತೊರೆಗಳು ನೂರಾರು. ಮಳೆಗಾಲ ಬಂತೆಂದರೆ ತೊರೆಗಳ ಮೆರವಣಿಗೆ. ಮಳೆಗಾಲ ಪೂರ್ಣ ಹಸಿರು ಚಾದರ ಹೊದ್ದ ಬೆಟ್ಟ ಗುಡ್ಡಗಳು. ಬೇಸಿಗೆಯಲ್ಲೂ ಹಸಿರಾಗಿರುತ್ತವೆ. ಕಡಿದಾದ ಕಣಿವೆಗಳಲ್ಲಿ ಹನಿಗಳ ಕಲರವ. ಜೀರುಂಡೆ ಗಾಯನ. ದಿನಕ್ಕೊಂದು ರೈಲು ಬಂದರೆ ಮುಗೀತು. ಮತ್ತೆರಡು ರಾತ್ರಿಗೆ. ಉಳಿಯುವುದು ನೀರವ ಏಕಾಂತ.‌ ಕೇಳುವವರೇ ಇಲ್ಲದ ಕ್ಯಾರೆ ಎನ್ನದ ದಿವ್ಯ ಮೌನ. ಮಾತಿಗೆ ಮೌನ ಸ್ವೆಟರಿನ ಮುಚ್ಚಿಗೆ. ಜೀರುಂಡೆಗಳ ಸಮೂಹಗಾಯನ. ಇನಿಯಳೊಂದಿಗೆ ಮುದ್ದು ಮಾಡುತ್ತಾ ಕೂರಬಹುದಾದ ಜಾಗ. 



ಇಲ್ಲಿನ ರೈಲ್ವೆ ಮಾಸ್ತರರನ್ನು ಮಾತಾಡಿಸಿದೆ. ಇಲ್ಲಿನ ಕಲ್ಲು ಬಂಡೆಗಳಂತೆ ಆತ ನಮ್ಮೊಡನೆಯೂ ಮಾತು ಬಿಟ್ಟಿದ್ದ! ಈ ಏಕಾಂತದ ಮಜವನ್ನು ಅನುಭವಿಸಿದವನಿಗೇ ಗೊತ್ತು ಎಂಬಂತೆ ಮುಗುಮ್ಮಾಗಿದ್ದ!

            ಇಲ್ಲಿ ನೇಮಕವಾದ ಹೊರಮುಖಿ ವ್ಯಕ್ತಿತ್ವದ ಸ್ಟೇಶನ್‌ ಮಾಸ್ಟ್ರುಗಳಿಗೆ ಬಹಳ ಕಷ್ಟ! ವಿದ್ಯುತ್‌ ಬೇರೆ ಇಲ್ಲ. ಬೆಟ್ಟ ಸಾಲಿಗೆ ಮುಖಮಾಡಿ ಡಿಪಾರ್ಟುಮೆಂಟು ಹಾಕಿಸಿದ ಬೆಂಚೊಂದಿದೆ. ಎಷ್ಟು ಹೊತ್ತು ಕುಳಿತರೂ ಕೇಳುವವರಿಲ್ಲ. ಇಲಾಖೆ ನಿರ್ಮಿಸಿದ ಒಂದೆರಡು ಸಣ್ಣ ಮನೆಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ!


    ನಿಲ್ದಾಣವಲ್ಲದ ನಿಲ್ದಾಣ! ಇಲ್ಲಿ ಇಳಿಯುವವರೇ ಇಲ್ಲ! ಹತ್ತುವವರೂ ಇಲ್ಲ.  ಆದರೂ ಒಂದು ನಿಲ್ದಾಣ!! ಇಲ್ಲಿ ಸ್ವಲ್ಪ ಹೊತ್ತು ರೈಲು ನಿಂತು ನೀರು ಕುಡಿದು ಏರಿ ಬಂದ ಕಷ್ಟಗಳ ನೆನೆದು ದಣಿವಾರಿದಿಕೊಂಡು ಮತ್ತೆ ಹೊರಡುತ್ತೆ. ನೀವಿಲ್ಲಿ ಇಳಿಯುವಂತಿಲ್ಲ. ಇಳಿದರೆ ಇಲ್ಲಿನ ಏಕಾಂತದಲ್ಲಿ ಬಂಧಿ. ಹಲವು ವರ್ಷಗಳ ಕಾಲ ಈ ಸ್ಥಳಕ್ಕೆ ದೋಣಿಗಲ್ಲಿನಿಂದ ಸಾಹಸಿಗರು ನಡೆದುಕೊಂಡು ಬರುತ್ತಿದ್ದರು! ಈಗ ಈ ಚಾರಣ ಸಂಪೂರ್ಣ ನಿಶೇಧಿಸಲಾಗಿದೆ. ಈಗಿಲ್ಲಿ  ಚಾರಣಕ್ಕೆ ಹೋದವರ ಮೇಲೆ ಟ್ರೆಸ್ಪಾಸ್‌ ಕೇಸ್‌ ಜಡಿದು ಹೊರಬರಲಾರದಂತೆ ಮಾಡಲಾಗುತ್ತದೆ. ಸಕಲೇಶಪುರದ ಸನಿಹದಲ್ಲಿರುವ ಮೌನವೇ ಹೊದ್ದು ಮಲಗಿದ ಇಲ್ಲಿಗೆ ಒಮ್ಮೆಯಾದರೂ ಹೋಗಿ ನೀರವ ಏಕಾಂತವನ್ನು ತಬ್ಬಿ ಮಲಗಬೇಕು. ನೀವು ಬರುವಿರಾ?



Monday, July 3, 2023

ಸುರಿವ ಮಳೆಯಲ್ಲೊಂದು ತಿಥಿಯೂಟ.

ನಾನಾಗ 8 ನೇ ತರಗತಿಯಲ್ಲಿ ಓದುತ್ತಿದ್ದೆ. ಹಠ ಹಿಡಿದ ಮಗುವಿನಂತೆ ಧೋ ಎಂದು ಮೂರು ದಿನದಿಂದ ಮಳೆ ಹೊಯ್ಯುತ್ತಿತ್ತು. ರಸ್ತೆ, ಚರಂಡಿ,  ಎಲ್ಲೆಲ್ಲೂ ಕೊನೆಗೆ ನಮ್ಮ ಮನದಲ್ಲೂ ಧೋ ಎಂಬ ಜಡಿ ಮಳೆ ಹೊಯ್ಯುತ್ತಲೇ ಇತ್ತು.

ಹತ್ತು ಕಿಲೋ ಮೀಟರ್ ದೂರದ ಶಾಲೆಗೆ ಹೋದೊಡನೆಯೇ ನಮಗೆ ರಜೆಯು ಸ್ವಾಗತ ಕೋರಿತ್ತು. ಮನಸ್ಸು ಕುಣಿದಾಡಿತ್ತು. ಉಲ್ಲಸಿತರಾಗಿ ಮನೆಗೆ ಮರಳುವ ಹಾದಿಯಲ್ಲಿದ್ದೆ. ಆಗಲೇ ನೆನಪಾಗಿದ್ದು ನನ್ನ ಅಜ್ಜ ಊರಿನಲ್ಲಿ ಇವತ್ತು ತಿಥಿಯೂಟವೆಂದು. ನನಗೋ ಅಜ್ಜನೂರೆಂದರೆ ಬಹಳೇ ಪ್ರೀತಿ, ಮಮಕಾರ, ತುಡಿತ. ಶಾಲೆ ತಪ್ಪಿಸಿ ಅಜ್ಜನೂರಿಗೆ ಹೋಗಲು ನನಗೆ ನಿರ್ಬ೦ಧವಿತ್ತು. ಆದರೆ ಇವತ್ತು ಆ ನಿರ್ಬಂಧ ಕೊಚ್ಚಿ ಹೋಗಿತ್ತು. 

ಮಳೆಗೊಂದು ಉದ್ದಂಡ ನಮಸ್ಕಾರ ಸಲ್ಲಿಸಿದೆ! ಮನಸ್ಸು ಉಲ್ಲಸಿತವಾಗಿ ಅಜ್ಜನೂರಿಗೆ ಹೋಗುವ ಗುಣಾಕಾರ ಭಾಗಾಕಾರ ಹಾಕಿತ್ತು. 

   ಅಮ್ಮ 9 ಗಂಟೆಯ ಬಸ್ಸಿಗೆ ಹೊರಡುವಳೆಂದು ಗೊತ್ತಿತ್ತು. ಹಾಗಾಗಿ ಗೆಳೆಯನಲ್ಲಿ ನಾನು ಮನೆಗೆ ಬರಲಾರೆ, ಅಜ್ಜನ ಮನೆಗೆ ಹೋಗುವೆ, ಅಪ್ಪನಿಗೆ ತಿಳಿಸು ಎಂದು ಹೇಳಿ ಸೀದಾ ಸುರಿವ ಮಳೆಯಲ್ಲಿ ಕೊಚ್ಚೆ ಹಾರಿಸುತ್ತಾ ಬಸ್ಸು ನಿಲ್ದಾಣಕ್ಕೆ ಓಡಿದೆ. ಮೊದಲು ಬಂದ ಶಂಕರ ವಿಠಲ ಬಸ್ಸಿನ ಮುಂಬಾಗಿಲಿನಲ್ಲಿ ಹತ್ತಿ ಬಸ್ಸೆಲ್ಲಾ ಹುಡುಕಿದೆ. ಆ ಬಸ್ಸಿನಲ್ಲಿ ಅಮ್ಮನಿರಲಿಲ್ಲ. ಹಿಂಬಾಗಿಲಿನಲ್ಲಿ ಇಳಿದೆ. ಮುಂದಿನ ಬಸ್ಸಿಗಾಗಿ ಸುರಿವ ಮಳೆಯಲ್ಲಿ ಕಾಯುತ್ತಾ ನಿಂತೆ. ಮನದೊಳಗೆ ಕಾತರ ಅಮ್ಮ ತಪ್ಪಿ ಹೋಗುವಳೋ  ಏನೋ ಎಂಬ ಆತಂಕ. ಅಜ್ಜನೂರಿಗೆ ಹೋಗಲಾರದ ದುಃಖ ಒಂದೆಡೆ. ಅಜ್ಜನೂರಿಗೆ ಹೋಗಲು ಕೈಯಲ್ಲಿರುವ ನಾಲ್ಕಾಣೆ ಏನೇನೂ ಸಾಲದು. ಮಳೆ ನಿಲ್ಲುವ ಲಕ್ಷಣಗಳಿರಲಿಲ್ಲ. ಅಷ್ಟರಲ್ಲೇ ಹನುಮಾನ್ ಬಸ್ಸು ಬಂತು. ಈ ಬಸ್ಸಿನಲ್ಲಿ ಅಮ್ಮನಿರಲಿ ಎಂದು ಪ್ರಾಥರ್ಿಸಿದೆ. ಅದೃಷ್ಟವಶಾತ್ ಅಮ್ಮನೂ ಆ ಬಸ್ಸಿಗೇ ಹೊರಟಿದ್ದಳು. ನನ್ನ ಆತಂಕ ತೀರಿತು. ಅಮ್ಮನ ಪಕ್ಕ ಹೋಗಿ ಕುಳಿತೆ. ಮಳೆಯಲ್ಲಿ ಕುಳಿತು ಸಕತ್ ಪ್ರಯಾಣ. 

ಅಂತೂ ಅಜ್ಜಿ ಮನೆಯಲ್ಲಿ ತಲುಪಿ ಸಕತ್ ಊಟ ಮಾಡಿ ಖುಷಿಯಲ್ಲಿ ಕುಳಿತ್ತಿದ್ದೆವು. ಸಂಜೆ ಮೂರು ಗಂಟೆ ಹೊತ್ತಿಗೆ ಸುರಿವ ಮಳೆಯಲ್ಲಿ ಅಪ್ಪ ನನ್ನನ್ನು ಹುಡುಕುತ್ತಾ ಅಜ್ಜಿ ಮನೆಗೆ ಬಂದಿದ್ದರು. ಅಮ್ಮನೊಂದಿಗೆ ಅಂದು ಸುರಿವ ಮಳೆಯಲ್ಲಿ ಅಜ್ಜನೂರಿಗೆ ಹೋದ ನೆನಪು ಇನ್ನೂ ಹಸಿರಾಗೇ ಇದೆ.

     ಎಲ್ಲರೂ ಈ ನೆನಪುಗಳನ್ನು ಮೆಲುಕು ಹಾಕಿ ನನ್ನ ಛೇಡಿಸುವರು. ಮಾವನಿಗಂತು ಈ ನೆನಪು ಸದಾ ಹಸಿರು.

ಇಂದೇ ನನ್ನ ಅಜ್ಜನ ತಿಥಿ. ಫೋನ್ ಮಾಡಿ ಬರುವಂತೆ ಮಾವ ಕರೆ ಕೊಟ್ಟಾಗ ಎಲ್ಲ ನೆನಪು ಮರುಕಳಿಸಿತು. ಮನೆಯಲ್ಲಿ ದಿವ್ಯ ಏಕಾಂತ ಒಂದೇ ಬೆರಳಿನಲ್ಲಿ ಟೈಪಿಸಿದೆ. ಚೆನ್ನಾಗಿದ್ದರೆ ತಿಳಿಸಿ.

 

Friday, May 12, 2023

ಅಬ್ಬೆ ಎಂಬ ಅನನ್ಯ ಕತೆ

 ಆತ್ಮಕತೆಯ ಭಾಗವಾಗುವಂತಹ ಕಾದಂಬರಿಗಳು ವಿರಳ. ಅಂತಹ ವಿರಳ ಕಾದಂಬರಿ ಅಬ್ಬೆ . ಹಾಲಾಡಿ ಸನಿಹದ ಮುದೂರಿಯ ಶಶಿಧರ್ ಇದರ ಲೇಖಕರು


ಅಬ್ಬೆಯ ಅನನ್ಯತೆ:

ಅಬ್ಬೆ ಎಂಬ ಜೇಡವೇ ಕತೆಯ ಆತ್ಮ. ಯಾರಿಗೂ ಇದರ ಸ್ಪಷ್ಟ ಪರಿಚಯವಾಗಲಿ ನಿಖರವಾಗಿ ತಿಳಿದಿಲ್ಲ. ಆದರೆ ಅನೇಕ ಸಾವುಗಳ ಅಪರಾಧಿ ಈ ಜೇಡ. ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟು  ಸಮಯವಿಲ್ಲ ಎಂಬ ಗಾದೆ ಕಲ್ಕೆ ರೆ ಎಂಬ ಗ್ರಾಮದ ಜನ ನಂಬುತ್ತಾರೆ.  

ಈ ಗ್ರಾಮಕ್ಕೆ ಬರುವ ಶಿವರಾಂ ಎಂಬ ಬ್ಯಾಂಕ್ ಅಧಿಕಾರಿ ಇಲ್ಲಿನ ನಿಗೂಢತೆಯನ್ನು ಬೇಧಿಸಲು ಪ್ರಯತ್ನಿಸುತ್ತಾನೆ. ತಾನು ಬಂದು ಸೇರುವ ಹೊತ್ತಿಗೇ ಕೊಲೆಯೊಂದು ನಡೆದಿರುತ್ತದೆ. ಆ ಕೊಲೆಯು ಕೊನೆಗೆ ಆತ್ಮಹತ್ಯೆ ಎಂದು ವರದಿ ಯಾಗುತ್ತದೆ. ಕತಾ ನಾಯಕನಿಗೆ ಇದು ಕೊಲೆ ಎಂಬ ಸಂಶಯ ಕಾಡುತ್ತಲೇ ಇರುತ್ತದೆ. ಕೊನೆಯ ಕ್ಷಣದವರೆಗೂ ಆತ ತನ್ನ ತನಿಖೆ ಮುಂದುವರಿಸುತ್ತಾನೆ. 

ಕ್ರಿಟಿಕಲ್ ಕೆಂಚಪ್ಪ

ಕತೆಯಲ್ಲಿ ಕಂಡ ವಿಶಿಷ್ಟ ಪಾತ್ರ ಕೆಂಚಪ್ಪ . ಚಿಪ್ಪು ಹಂದಿ ಹಿಡಿಯುವ ಅವನು ಬ್ಯಾಂಕ್ ಗೆ ಬಂದು ಡಿಪಾಸಿಟ್ ಮಾಡಿ ಎಲ್ಲರಿಗೂ ಅಚ್ಚರಿ ಉಂಟು ಮಾಡುತ್ತಾನೆ. ದಿನಕಳೆದ ಕಾಡುತ್ತಾ ಹೋಗುತ್ತಾನೆ. ಯಾವುದೇ ಪ್ರಾಣಿಶಾಸ್ತ್ರಜ್ಞನಿಗೂ ಕಮ್ಮಿ ಇಲ್ಲದ ಇವನ ಪ್ರತಿಭೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ತನ್ನ ಪ್ರತಿಭೆ ತನಗೇ ತಿಳಿಯದ ಅಮಾಯಕ. ಇಂತಹ ನೂರಾರು ಪ್ರತಿಭಾವಂತರು ನಮ್ಮ ನಡುವಿದ್ದಾರೆ ಎಂಬ ಸಣ್ಣ ವಿಶಾದವು ನಮ್ಮನ್ನು ಕಾಡುತ್ತದೆ. ಬದುಕಿನ ಕ್ರಿಟಿಕಲ್ ಸಮಯದಲ್ಲಿ ಅವನಾಡುವ ಮಾತು ವಿಶಿಷ್ಟವೆನಿಸುತ್ತವೆ.

ಕತೆಯ ಉದ್ದಕ್ಕೂ ಕಿರಿಕಿರಿ ಮಾಡುತ್ತಾ ಶಿವರಾಂ ನನ್ನು ಗೋಳು ಹೊಯ್ದು ಕೊಳ್ಳುವ ಪಾತ್ರವಾಗಿ ಮ್ಯಾನೇಜರ್ ಕಾಣಿಸುತ್ತಾನೆ. ಅನವಶ್ಯಕ ದ್ವೇಷ ಮತ್ತು ಇಂದಿನ ಸಮಾಜದ ವ್ಯಕ್ತಿಯನ್ನು ಆತ ಪ್ರತಿನಿಧಿಸುವಂತಿದೆ. 

ದ್ವೇಷದ ಜೊತೆ ಜೊತೆಗೆ ಸ್ನೇಹ ಪ್ರೀತಿ ಸುರಿಸುವ ಅಪರೂಪದ ವ್ಯಕ್ತಿಗಳು ಇರುತ್ತಾರೆ.  ಕ್ರಿಕೆಟ್ ತಂಡ ಮತ್ತು ಭಾಸ್ಕರನ ತಾಯಿ ಮತ್ತು ಭಾಸ್ಕರ  ಪ್ರೀತಿಗೆ ಕಲಶವಿಟ್ಟಂತೆ ಕಾಡುತ್ತಾರೆ.

ಕತೆಗೆ ಪೂರಕವಾಗಿ ಕಲ್ಲೂರಾಯ, ಭಾಸ್ಕರ ಮುಂತಾದ ಪೂರಕ ಪಾತ್ರ ರಚಿಸಿದ್ದಾರೆ. 

ಕತೆಯ ಓಟ:

ಕತೆಗಾರನಿಗಿಲ್ಲಿ ಯಾವ ಅವಸರವೂ  ಕಾಣಿಸುವುದಿಲ್ಲ.  ತನ್ನದೇ ವಿಶಿಷ್ಟ ವೇಗದಲ್ಲಿದೆ ಕತೆ. ಅದೇ ಕತೆಯ ಜೀವಾಳ. 

ಮುಕ್ತ ಅಂತ್ಯ

ಕತೆಯ ಅನನ್ಯತೆ ಇರುವುದು ಅದು ಮುಕ್ತ ಅಂತ್ಯವನ್ನು ಕಾಣುವುದರಲ್ಲಿ, ಹೆಚ್ಚಾಗಿ ಕತೆಗಳು ಮುಕ್ತ ಅಂತ್ಯ ಕಾಣುತ್ತವೆ. ಆದರೆ ಕಾದಂಬರಿಯೊಂದು ಮುಕ್ತ ಅಂತ್ಯ ಕಾಣುವುದು ಅಪರೂಪ. ಅಂತಹ ಅಪರೂಪದ ಕಾದಂಬರಿ ಸಾಲಿಗೆ ಅಬ್ಬೆ ಸೇರಿದೆ. 

ಅಬ್ಬೆಯ ಕುರಿತಾದ ನಿಗೂಢತೆಯನ್ನು ಹಾಗೇ ಉಳಿಸಿಕೊಂಡು ಕಾದಂಬರಿಯನ್ನು ಮುಕ್ತ ಅಂತ್ಯಕ್ಕೆ ಕೊಂಡೊಯಿದ್ದಿದ್ದಾರೆ.

ನಿರೂಪಕ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ವರ್ಗ ಆಗುವುದರೊಂದಿಗೆ ಕತೆ ಮುಕ್ತ ಅಂತ್ಯ ಕಾಣುತ್ತದೆ. ಅದೇ ಮತ್ತೊಂದು ಕಾದಂಬರಿಗೆ ಮುನ್ನುಡಿಯಾ ಎಂಬ ಆಲೋಚನೆಗೂ ರಾಜ ದಾರಿ.  ಪ್ರವಾಸದ ಗೀಳಿರುವ ನನ್ನಂತವರಿಗೆ ನಿರೂಪಕನ ವರ್ಗಾವಣೆ ಚೇತೋಹಾರಿ.


ಕೆಲವರು ಅಪಾರವಾದ ಪ್ರತಿಭೆ ಶ್ರಮವಿದ್ದರೂ ಅದೃಷ್ಟದ ತೀವ್ರ ನಿರ್ಲಕ್ಷಕ್ಕೆ ಈಡಾಗುತ್ತಾರೆ. ಇದೇ ಬದುಕಿನ ವಿಕ್ಷಿಪ್ತತೆ.  ಕೆಲವರಷ್ಟೇ ಈ ನಿರ್ಲಕ್ಷದ ಬಲೆಯಿಂದ ಹೊರಬರಬಲ್ಲರು. ಕೆಲವರಿಗೆ ಅದೃಷ್ಟ ಕೈ ಹಿಡಿಯುತ್ತದೆ. 

 ಎಲ್ಲೂ ಸ್ಥಾವರವಾಗದೇ ಜಂಗಮನಂತಿರುವುದೇ ಬದುಕಿನ ಅಂತಿಮ ಸತ್ಯವೇನೋ ?  ಎಂಬ ಮಿಂಚನ್ನು ಮಿಂಚಿಸುತ್ತದೆ ಈ ಕಾದಂಬರಿ.


Sunday, April 9, 2023

ಅಸೀಮ ಸುಂದರಿ ಮಹರ್ಷೀ ಜಲಧಾರೆ…

 ನಾಲಗೆ ಹೊರಳದ ನಾಡಿನಲ್ಲಿ ನಾಲ್ಕು ದಿನ!

ಅಲೆಮಾರಿಯ ಅಂತರಂಗ...

          

            ಚೆರಿ ಮರದ ಹೂ ಪಕಳೆಗಳು ನಮ್ಮ ಪ್ರವಾಸದ ಹಾದಿಗೆ ಬಣ್ಣ ತುಂಬಿತ್ತು. ಶಿಲ್ಲಾಂಗನ ತುಂಬೆಲ್ಲಾ ಅದರದೇ ಸುದ್ದಿ. ಚೆರಿ ಹಬ್ಬದ ಬಿಸಿ ಬಿಸಿ ಚರ್ಚೆ ನಡೆಯುವ ಸಮಯಕ್ಕೆ ನಾವೈವರು ಮೇಘಾಲಯದ ಶಿಲ್ಲಾಂಗನಲ್ಲಿ ಮೊಕ್ಕಾಂ ಹೂಡಿದೆವು. ನಾಲ್ಕು ದಿನ ಪ್ರವಾಸ ಮಾಡಿದ ಅನುಭವದ ನಾಲ್ಕನೆಯ ಮತ್ತು ಕೊನೆಯ ಕಂತು. ಶಿಲ್ಲಾಂಗನ ಗಿಜಿ ಗುಟ್ಟುವ ಗುಂಪಿನಿಂದ ಏಕಾಂತದ ಸುಂದರ ಸ್ಥಳದ ಹುಡುಕಾಟದಲ್ಲಿದ್ದವರಿಗೆ ಸಿಕ್ಕಿದ್ದು ಈ ಜಲಧಾರೆ!

ಜಲಕನ್ನಿಕೆಯನು ಅರಸಿ ಹೊರಟಾಗ:-



ಜಲಧಾರೆಗೆ ಸಾಗುವ ದಾರಿ...


ನೆನಪುಗಳ ಕೆದುಕುತ್ತಾ ಕುಳಿತವನ ಮುಂದೆ  ಹೇಗೋ ನುಸುಳಿ ಜಾರಿದ  ಈ ಜಲ ಕನ್ನಿಕೆಯ ವಿವರಗಳು ಡಿಸೆಂಬರ್ ತಿಂಗಳ ಚಳಿಯ ನೀರವ ಏಕಾಂತದಲಿ ನಿಧಾನಕ್ಕೆ ತೆರೆದುಕೊಳ್ಳತೊಡಗಿತ್ತು.

          ಹೆಸರು ಮಹರ್ಷಿ ಜಲಧಾರೆ. ಜೊತೆಗೆ ವಹರ್ಷಿ ಎಂಬ ಇನ್ನೊಂದು ಹೆಸರೂ ಇದೆ.   ಯಾಕೆ ಈ ಹೆಸರು ಬಂತು ಎಂದು ಇಲ್ಲಿ ಯಾರಿಗೂ ಗೊತ್ತಿಲ್ಲ. ಭಾಷೆ ಗೊತ್ತಿಲ್ಲದ ಈ ನಾಡಿನಲ್ಲಿ ಹೆಸರಿನ ಕ್ಲಿಷ್ಟತೆಯನ್ನು ಕೆದಕುವುದಾದರೂ ಹೇಗೆ? ಗೊತ್ತಿಲ್ಲ. ಯಾವುದೋ ಬೆಟ್ಟದ ಕೊರಕಲುಗಳಲ್ಲಿ ಅಜ್ಞಾತವಾಗಿ ಹರಿವ ಇವು ಯಾವುದೋ ಕಿಂಕರನ ಶಾಪಕ್ಕೆ ಸಿಕ್ಕು ಅಡವಿಯೊಳಗಡವಿದೆಯೋ?

ನಾಗರೀಕತೆಯ ನಾಗಾಲೋಟಕ್ಕೆ ಸಿಕ್ಕಿ ನುಜ್ಜು ಗುಜ್ಜಾಗಿರುವ ಜಲಧಾರೆಗಳ ನಡುವೆ ಈ ಜಲಧಾರೆ ಅನನ್ಯವಾಗಿ ನಿಲ್ಲುತ್ತದೆ! ಹೊರ ಜಗತ್ತಿಗೆ ಕನಸಿನಂತೆ ಭಾಸವಾಗುವ ಇಲ್ಲಿನ ಪರಿಸರ ಮಿಥ್ಯಾ ವಾಸ್ತವದಂತೆ. ತಿಂಗಳುಗಳ ಕಾಲ ಅನವರತ ಸುರಿವ ಮಳೆ ನೀರು ಇಲ್ಲಿನ ಬೋಳುಗುಡ್ಡದಿಂದ ಬಹು ಬೇಗ ಬಸಿದು ಹೋದಾಗ ಇಲ್ಲಿನವರ ಪರದಾಟ ಹೇಳ ತೀರದು. ಹನಿ ನೀರಿಗೂ ತತ್ವಾರ. ಡಿಸೆಂಬರನಲ್ಲಿ ಸುಡುವ ತಣ್ಣನೆಯ ಚಳಿ. ಕೈತುಂಬಾ ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ. ಬೊಂಬು ಮತ್ತು ಸುಣ್ಣದ ಕಲ್ಲು ಇಲ್ಲಿ ನ ಆಧಾಯದ ಮೂಲ ಮತ್ತು ಮಾಲಿನ್ಯದ ಮೂಲವೂ ಸಹ.

ಬೆಂಕಿ ತಗುಲಿದ ಕೂಡಲೇ ಪ್ರಜ್ವಲಿಸುವ ವಿಶಿಷ್ಟ ಕಟ್ಟಿಗೆ.

ವ್ಯಾಪರಕ್ಕೆ ನಿಂತ ಬುಟ್ಟಿಗಳು...

ಉತ್ಥಾನ:-

          ಹಿಂದಿನ ದಿನವಷ್ಟೇ ʼನಾನ್‌ ಬ್ಲಾಂಗ್‌ʼ ಎಂಬ ಹಳ್ಳಿಯನು ಹತ್ತಿಳಿದ ನಮಗೆ ಕೈ ಕಾಲುಗಳ ನೆಟ್ಟು ಬೊಲ್ಟುಗಳೆಲ್ಲಾ ಸದ್ದು ಮಾಡುತ್ತಿರುವಾಗ ಮತ್ತೊಂದು ಜಲಧಾರೆಗೆ ಇಳಿಯಬೇಕೆಂಬುದು ನನಗೆ ಅರಗಿಸಿಕೊಳ್ಳಲಾರದ ಬಿಸಿ ತುಪ್ಪ. ಪೂರ್ವಾಪರಗಳ ಸುಳಿವು ಕೊಡದೆ ಸೂರ್ಯ ಬೆಟ್ಟಗಳ ಜೊತೆಗೆ ನಮ್ಮನ್ನೂ ಸುಡಲು ಹತ್ತಿದ. ಗೆಳೆಯರು ಹೇಳುವ ʼಇಲ್ಲೇ ಇದೆ, ಬಂತು, ಇನ್ನೊಂದು ಹತ್ತು ನಿಮಿಷʼ ಎಂಬ ಆಮಿಷದ ಪದಗಳಿಗೆ ಕಿವಿ ಬೇಸತ್ತಿತ್ತು.

ಅಂತೂ ಇಂತು ಬಂತು! -    


ವೀಕ್ಷಣಾ ಸೇತುವೆ!

ಸುಮಾರು ನಾಲ್ಕು ಕಿಲೋ ಮೀಟರ್‌ ನಡೆದು ಜಲಧಾರೆಯ ನೀರು ಮುಖಕ್ಕೆ ಚಿಮುಕಿಸಿಕೊಂಡಾಗ ಅಮೃತಾನುಭವ. ಶಿಲ್ಲಾಂಗಿನ ಸಿನ್ಟುಂಗ್‌, (ಮೂಗು ಬಾಯಿ, ತುಟಿ, ಗಂಟಲು ಎಲ್ಲಾ ಸೇರಿಸಿ ಹೇಳಿದರೂ ದೇವರಾಣೆ ನೀವು ಸರಿ ಉಚ್ಚಾರ ಹೇಳಲಾರಿರಿ.) ಹಳ್ಳಿಯ ಪೂರ್ವ ಖಾಸಿ ಬೆಟ್ಟಗಳ ಮಡಿಲಲಿ ಅಡಗಿ ಬಹುದೂರವಿದ್ದರೂ ಪ್ರವಾಸೋಧ್ಯಮ ಇಲಾಖೆಯ ಕೆಲಸ ನೀವು ಮೆಚ್ಚಲೇಬೇಕು. ಜಲಪಾತಕ್ಕೆ ಇಳಿಯುವಲ್ಲಿ ನೀರಿನ ವ್ಯವಸ್ಥೆ, ಸುಂದರ ಮೆಟ್ಟಿಲು, ವೀಕ್ಷಣಾ ಗೋಪುರ, ಜಲಪಾತದೆದುರಿಗೇ ನಿಲ್ಲಲು ಮತ್ತೊಂದು ಬಾಗು ಸೇತುವೆ. ಹೀಗೆ ಹತ್ತಾರು ಕಡೆ ವೀಕ್ಷಿಸಿ ಇಲ್ಲಿನ ಜಲಧಾರೆಯನ್ನು ಮನ ತುಂಬಿಸಿಕೊಳ್ಳಲು ಅಪೂರ್ವ ಅವಕಾಶ ನೀಡಿದುದೇ ಅಚ್ಚರಿ.

ಗುಡ್ಡದಿಂದ ಸುರಿವ ಎಳನೀರು!

          ಮಳೆಯ ದಿನಗಳಲ್ಲಿ ಕುಡಿದ ಹನಿ ಹನಿ ನೀರನ್ನು ತನ್ನ ಹರಿವಿನುದ್ದಕ್ಕೂ ಹರಿವಂತೆ ಮಾಡುವ ಮೋಡಿ ಒಂದು ಸೋಜಿಗಲ್ಲು! ಇಲ್ಲಿನ ತಣ್ಣನೆಯ ನೀರೊಳಗಿನ ಪ್ರತೀ ಕಲ್ಲೂ ಸುಸ್ಪಷ್ಟ. ನನ್ನರಿವಿಗೆ ಬಂದ ಐದೂ ಪಾತಗಳೂ ಅತ್ಯದ್ಭುತ.

ಜಲಪಾತದ ಕೊನೆ ಹಂತ.



ಮೊದಲ ನಾಲ್ಕು ಹಂತ ನಿಧ ನಿಧಾನವಾಗಿ ಬಳುಕುತ್ತಾ ಸಹಸ್ರಧಾರೆಯಾಗಿ ಸುರಿದರೆ, ಎರಡನೆಯದರದು ಅಕ್ಷರಶಃ ಬೋರ್ಗರೆತದ ಪಾತ. ವರ್ಣಿಸಲು ಪದಗಳ ತೊಳಲಾಟ. ಕೆರೆಯಂತಾದ ನೀರು ಅಚ್ಚ ಹಸಿರು ವರ್ಣ. ಮರೆಯಲಸಾಧ್ಯ. ಮೊದಲ ಹಂತದಲಿ ಧುಮುಕಿ ದೊಡ್ಡ ಅಪ್ಸರ ಕೊಂಡದಂತಹ ಕೆರೆಯ ನಿರ್ಮಿಸಿ ಎರಡನೆಯ ಬೋರ್ಗೆರತಕ್ಕೆ ಸಿದ್ಧವಾಗುತ್ತಾಳೆ. ಐದನೆಯ ಹಂತವನು ಮೇಲಿನಿಂದ ವೀಕ್ಷಿಸಲು ನಿರ್ಮಿಸಿದ ಸುತ್ತಲಿನ ಕಾಡು ಜಲಪಾತದ ಜೋಗುಳಕ್ಕೊಂದು ಮೆರಗು.

ಹೊಸತೊಂದು ಅಲೌಕಿಕ ಜಗತ್ತು:-

ಇಲ್ಲಿಗೆ ನೀವು ಬಂದರೆ ಹೊಸದೊಂದು ಜಗತ್ತಿಗೆ ಕಾಲಿಟ್ಟ ಅನುಭವವಾಗುವುದು. ಅಲೌಕಿಕ ಜಗತ್ತಿನ ಮಾಯಾ ಕನ್ನಡಿಯಂತೆ ತನ್ನ ಸುತ್ತಲಿನ ಮರಗಿಡ ಬಳ್ಳಿಗಳನ್ನು ಪ್ರತಿಫಲಿಸುತ್ತಲೇ ತನಗೆ ತಾನೆ ಅಪರಿಚಿತವಾಗಿ ಉಳಿದಿವೆಯೇನೊ ಎನಿಸುತ್ತಿತ್ತು. ಬಿಂಬಕ್ಕೂ ನೈಜಕ್ಕೂ ಪೈಪೋಟಿ ಏರ್ಪಟ್ಟು ಯಾವುದು ನಿಜ ಯಾವುದು ಸುಳ್ಳು ಎಂಬುದು ತಿಳಿಯದೇ ಮನಸ್ಸು ಮೂಕವಿಸ್ಮಿತವಾಗುತ್ತಿತ್ತು. ತನ್ನ ಸುತ್ತಲಿನದ್ದನ್ನು ಪ್ರತಿಫಲಿಸುತ್ತಾ ಸುಮ್ಮನೆ ಸಾಗಬೇಕು.”  ಎನ್ನುತ್ತಾ ದೊಡ್ಡ ನದಿಯೊಂದರ ನಿರೀಕ್ಷೆಯಲಿ ಭೋರ್ಗೆರೆಯುತ್ತಾ ಸಾಗುತ್ತಾ ತನ್ನತನವನ್ನು ಕಳೆದುಕೊಳ್ಳುವ ಸಂಕಟದಲ್ಲೇ ಮಂದಗಮನೆಯಾಗಿ ತನ್ನ ಜಗತ್ತನ್ನು ತೊರೆದು ಬರುವ ಪ್ರೇಯಸಿಯಂತೆ ಎಂಬ ಭಾವ ಮೂಡುತ್ತಲೇ ನೋಡುವ ನೋಟ ಬದಲಾಗಿತ್ತು.

ದಾರಿ ತೋರುವವರ ನಡುವೆ ಗೆಳೆಯ ಪಾಂಡೆ ಮತ್ತು ನಾಗರಾಜ್.


ಇಪ್ಪತ್ತು ವರ್ಷದಿಂದ ಮೇಘಾಲಯದಲ್ಲೇ ನೆಲೆನಿಂತ ನಮ್ಮ ಗೆಳೆಯ ಪಾಂಡೆ ಮೊದ ಮೊದಲು ಮೇಘಾಲಯದ ಎಲ್ಲಾ ಜಲಧಾರೆಗಳ ನೀರು ಸ್ಪಟಿಕ ಶುಭ್ರವಾಗಿತ್ತು ಎಂದು ಹೇಳಿ ನಮ್ಮಗೊಂದು ಅಚ್ಚರಿಯ ಜೊತೆಗೆ ವಿಷಾದವನು ಉಣಬಡಿಸಿದ. ನಾಗರೀಕತೆಯ ಅನಾಗರಿಕ ವರ್ತನೆ ಬಗ್ಗೆ ಜಿಗುಪ್ಸೆ ಹುಟ್ಟಿತು.

ಕಟ್ಟಿಸಿಕೊಂಡ ಪರೋಟ, ಹಣ್ಣುಗಳಿಗೆ ಹೊಟ್ಟೆಗೆ ಗೇಟ್‌ ಪಾಸ್‌ ನೀಡಲಾಯಿತು! ಜಲಧಾರೆಯಲ್ಲಿ ಮುಖ ತೋಯಿಸಿಕೊಂಡು ಹೊರಟಾಗ ಸೂರ್ಯ ಕತ್ತಲ ಪರದೆ ಎಳೆಯುತ್ತಿದ್ದ. ಮತ್ತೊಮ್ಮೆ ನಿನ್ನ ಸೌಂದರ್ಯ ಮೆಲ್ಲುವ ಅವಕಾಶಕ್ಕಾಗಿ ಕಾದಿರುತ್ತಾ ಜಲಧಾರೆಗೆ ಬೈ ಬೈ ಹೇಳಿದೆವು.

ಕೊನೆ ಹನಿ:-

          ನದಿ ಹರಿಯುತ್ತಲೇ ಇರಬೇಕು. ಕ್ಷಣ ಕ್ಷಣವೂ ತನ್ನ ತನವನ್ನು ಕಳೆದುಕೊಳ್ಳುತ್ತಲೇ, ಇಲ್ಲವಾದರೆ ಅದು ನದಿಯಾಗಲಾರದು! ಹಾಗೆ ನದಿಯನ್ನು ಅದರ ನೈಜ ಸೌಂದರ್ಯಕ್ಕೆ ಕುಂದಾಗದಂತೆ ಹರಿಯಲು ಬಿಡಿ.

Wednesday, March 22, 2023

ಯಾತನೆಗಳಿಗೆ ಕೊಟ್ಟ ಶಬ್ದ ರೂಪ

ಹಕೂನ ಮಟಾಟ

ಒಂದು ಬೇವಾರಸಿ ಟಿಪ್ಪಣಿ….

ನೇರ ರೇಖೆಯನ್ನೇ ವಕ್ರ ಸೊಟ್ಟಗೆ ಎಂದಾಡಿ ಕೊಳ್ಳುವಾಗ ಇಂತಹ ಕತಾ ಸಂಕಲನಕ್ಕೆ ಲೇವಡಿ ಹಚ್ಚಿ ಬಿಡುವುದಿಲ್ಲವೇ? ತಂತ್ರಜ್ಞಾನ ಯುಗದಲ್ಲಿ ತಮ್ಮ ಮೂಗಿನ ನೇರಕ್ಕೆ ಏನೂ ಬೇಕಾದರೂ ನೇತು ಹಾಕಿಕೊಂಡು ಸುಖಿಸಬಹುದಿಲ್ಲಿ. ಅಂಕೆ ಶಂಕೆ ಇಲ್ಲದಿರೆ ಪದಗಳ ಆಮಶಂಕೆ! ನೀನೂ ಮಾಡಿರುವುದೂ ಅದೇ ಎಂದು ಹಳಿಯಬೇಡಿ.

ಅರಿಕೆಯೊ, ಸ್ವಗತಗಳೊ, ತುಮುಲಗಳ ಸಂತೆಯನ್ನು ತಡವಿ ಬಂದ ಅನುಭವ. ಪಟ್ಟದ್ದು ಪಾಡೋ, ಸುಖವೋ ಎಂದು ಹೇಳಲು ಏಕಮಾನವಿಲ್ಲ ಇಲ್ಲಿ. ನಮ್ಮ ಉದ್ದಗಲಕ್ಕೆ ಸರಿಯಾಗಿ. ಮೂಗುತಿ ಭಾರದಿಂದೋ ಅಥವಾ ಮೂಗೇ ಸೊಟ್ಟಗೋ  ನೀವೇ ನೋಡಿ ನಿರ್ಧರಿಸಬೇಕಷ್ಟೆ. 

ಕತೆಯೋ, ಪ್ರಬಂಧವೋ? ಕತೆಯಂತಹ ಪ್ರಬಂಧಗಳಾ? ಸ್ವಗತಗಳ ಸಂತೆಯಾ? ತನ್ನ ಬದುಕಿನ ತುಣುಕುಗಳಾ ತಲೆ ಬಾಲ ಕತ್ತರಿಸಿದ ವೃಕ್ಷ ಕಾಂಡದಂತೆ ಕಂಡರೂ ಭಿನ್ನ ಅಗೋಚರ ಧನಿಯಾಗಿ ನಿರಂತರವಾಗಿ ಕಾಡದೇ ಇರದು. 

ಹೊಸ ಹೊಸದಾದ ರೂಪಕಗಳು ಆಸ್ವಾದಿಸುವವರ ನಾಲಗೆಯ ರುಚಿ ಮೊಗ್ಗುಗಳನ್ನು ಕೆಣಕದೇ ಇರದು. ʼನಾನು ನಿಂತಲ್ಲಿಯೇ ಹೆಪ್ಪಿಬಿಟ್ಟೆʼ, ʼಕಸಿವಿಸಿ ತೊಟ್ಟಿಕ್ಕಿತ್ತುʼ. ʼನಾಲಗೆಯಲ್ಲೇನೋ ಬೇವಾರಸಿ ತೊಡರುʼ, ʼಕತ್ತಲು ಜಿಟಿಪಿಟಿಸುತ್ತಿತ್ತು!ʼ, ʼಎಲೆಯ ವಂದರಿಯಲಿ ಬಿಸಿಲಿನ ಜರಡಿʼ, ʼಸೈಕ್ಲೋನ್‌ ಸುರಿತʼ, ರೇಜಿಗೆಯ ಜಿಟಿ ಪಿಟಿ, ರೇಜಿಗೆಯ ಹಗಲು, “ನನ್ನದೋ ಬೇವಾರಸಿಯ ಚರ್ಯೆ”, ʼತಹ ತಹ ವಿರಹವಲ್ಲʼ, ʼಊಟಕ್ಕೆ ಕುಳಿತಾಗ ಮಾತು ಹೆಕ್ಕಿದ್ದಳು!ʼ, ʼನೆನಪಿಗೆಂದೂ ತೇಗುವುದಿಲ್ಲʼ, ʼನೆಳಲು ಚೆಲ್ಲುತ್ತಾಳೆʼ, ʼರಾಡಿ ಮುಕ್ಕಳಿಸಿದ ರೋಡುʼ, ʼನಗು ಗುಟುರಿದ್ದʼ, ʼಬೀದಿಯ ಕಾಮಾಲೆ ಮಂಪರಿನಲ್ಲಿ.ʼ, ʼಜಿಗುಟು ಹಗಲುʼ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಲ್ಲವು ತಾರಲೋಕದಿಂದ ಎಳೆದು ತಂದವು! ಖಂಡಿತ ನಮ್ಮ ಲೋಕದ್ದಲ್ಲವೇ ಅಲ್ಲ.


ಒಂದು ಬೇವಾರಸಿ ಟಿಪ್ಪಣಿಗಳು ಕತೆಯಿಂದ....


ಅಕ್ಷ್ಯೋಭ್ಯ ಕಡಿದಾಳನ್ನು ಕಟ್ಟಿಕೊಂಡು ಅವಳು ಹೆಣಗುವ ರೀತಿಗೆ ಅವಳ ಅನನ್ಯ ಪ್ರೀತಿಗೆ ಬೆರಗುಗೊಂಡಿದ್ದೇನೆ. ತಾನು ಮೂರನೆಯವಳು ಎಂಬ ಅರಿವಿದ್ದೂ ಅವನ ಮಾತಿಗೆ ಕಟ್ಟುವ ಕಲೆಗೆ ಮರುಳಾದವಳು ಅವಳು! ಅವನ ಆರ್ಕಿಟೆಕ್‌ ಕೈಗಳಿಗೆ ಸೋತವಳು. ಕೊನೆಯವರೆಗೂ ಸೋಲುತ್ತಾ ಬುದುಕುವಳು. ಮಗನನ್ನು ಆರ್ಕಿಟೆಕ್‌ ಆಗಿಯೇ ರೂಪಿಸುವಳು. ಸಣ್ಣ ಸಮಾರಂಭವೊಂದರಲ್ಲಿ ಅವಳು ತನ್ನ ಸವತಿಯನ್ನು ಎದುರಿಸುವ ಪರಿ ಅನನ್ಯವಾಗಿಸಿದ್ದಾರೆ ಕತೆಗಾರ.  ಅವಳ ತುಮುಲಗಳ ಜೊತೆಗೆ ಹೋಗಿ ಇದ್ದು ಬಂದಿದ್ದೇನೆ. ಅವಳ ಕಣ್ಣೀರಿಗೆ ಜೊತೆಯಾಗಿದ್ದೇನೆ. ಅವನ ಜೊತೆಗಿನ ಬಂಧವನು ಅತ್ಯಂತ ನಾಜೂಕಾಗಿ ಪೋಣಿಸಿಕೊಟ್ಟಿದ್ದಾರೆ. ವಾರಸುಗಳಿಲ್ಲದ ಗೆರೆಗಳು…. ಎಲ್ಲೂ ಹೇಳಲಾಗದ ಸಂಕಟಗಳ ಕಡತ. ಕೊನೆಗೂ ಪ್ರಶಸ್ತಿ ಪಡೆಯುವಾಗಲೂ ಹೇಳಲಾಗದೇ ಮಗ ಮತ್ತು ಅಮ್ಮನ ತೊಳಲಾಟಗಳು. ಎಷ್ಟು ನೋವುಗಳನ್ನು ಹಿಡಿದಿಡಬಹುದೋ ಅಷ್ಟನ್ನು  ಹಿಡಿದಿಟ್ಟ ಪರಿ ಅನನ್ಯ.



         

ಬದುಕಿನ ಉತ್ಸವಗಳಲ್ಲಿ ಅವನಿಲ್ಲದ ಖಾಲಿತನ, ಸಾಂಗತ್ಯವಿಲ್ಲದ ವಿರಹದ ದಿನಗಳ ಮರೆವಣಿಗೆ. ಸಾವಿನಲ್ಲೂ ಸಿಗದ ನೆಮ್ಮದಿ. ಒಂದು ಬೇವಾರಸಿ ಸಾವು. ದುಃಖದ ದಂಡೆಯಲಿ ಅವನ ನೆನಪಿನ ಮೆರವಣಿಗೆ. ಹೊಯ್ದಾಟಗಳು. ಯಾವುದು ನಿಚ್ಚಳವಾಗದಂತಹ ಸಂದಿಗ್ಧತೆ. ಯಾವುದೇ ಚೌಕಟ್ಟಿಗೆ ಸಿಗದ ಯಾತನೆಗಳ ಸಂತೆ. ತಂದೆ ಅನಿಸಿಕೊಂಡವನ ಹಸಿ ಬಿಸಿ ನೆನಪುಗಳು ನಮ್ಮನ್ನೂ ಕಲುಕುತ್ತವೆ. ಸಿಗದ ದುಃಖ ಕಾಡುತ್ತದೆ. ನಮ್ಮನ್ನೂ ಹೆಪ್ಪುಗಟ್ಟಿಸಿ ಅಳಿಸುತ್ತವೆ. ಒಳಗೊಳಗೇ ಅಳುತ್ತೇನೆ. 

         ಗುಟುಕು ಪ್ರೀತಿಗೆ ಕಾತರಿಸಿ ಕಾಯುವ ಕಷ್ಟಗಳ ಸಂಕೋಲೆ. ಅದಮ್ಯ ಜೀವನೋತ್ಸಾಹದಲ್ಲಿ ಅನಾಮಿಕವಾಗಿ ಉಳಿವ ತಂದೆಯ ಹೆಸರು ಮತ್ತು ಅವರ ಸಂಬಂಧಗಳು. ತುಮುಲಗಳ ಕಂತೆಯನ್ನು ಆರ್ಕಿಟೆಕ್ಚರ್‌ನ ಮೂಸೆಯಲ್ಲಿಟ್ಟು ನೋಡುವುದು ಸಹ ಕತಾ ಪ್ರಪಂಚಕ್ಕೆ ಹೊಸ ಕಿಂಡಿ. ಎಂದೂ ದಕ್ಕದ ತಂದೆ. ಕತೆ ಹೇಳದ ಏನನ್ನೂ ತಂದು ಕೊಡದ ತಂದೆ! ರಸಿಕೆಯಾಗಿ ಸೋರುವ ಸಣ್ಣ ಹುಣ್ಣಿನಂತೆ ತಂದೆಯ ನೆನಪು. ಒಂದು ಮಾಯದ ಗಾಯ.

ಕತೆ ತೆರೆದಿಡುವ ಟಿಸಿಲುಗಳು ನೂರಾರು. ಭಾವ ಸ್ಪರ್ಶಕ್ಕೆ ದಕ್ಕದ ಬರಡು ಬದುಕು. ಇಂತಹ ನೂರಾರು ಟಿಸಿಲುಗಳಿಂದ ತೊಟ್ಟಿಕ್ಕುತ್ತಿದೆ ನೋವಿನ ನೂರಾರು ಕತೆಗಳು. ನೂರಾರು ಭಾವ ಪ್ರಪಂಚದ ಸಾವಿರ ಬಿಂದುಗಳು. ಪ್ರತಿ ಬಿಂದುವಿನ ಕತೆಯೂ ಭಿನ್ನ. ಇಂತಹ ಒಂದು ಟಿಸಿಲಿನಲ್ಲದರೂ ಬಂದು ಕುಳಿತು ಕತೆ ಕೇಳಿ ಹೋಗಿ.

-----

ಹುತ್ತಗಟ್ಟದೇ ಇಂತಹ ಪ್ರಯತ್ನ ಸಾಧ್ಯವಿಲ್ಲ. ಎಲ್ಲರಂತಲ್ಲದ ಹೊಸ ಕಥಾ ಪ್ರಪಂಚಕ್ಕೆ ಪಾದವಿಟ್ಟ ಅನುಭವ. 


ವಸ್ತಾರೆ ಕತೆಗಳಾಲಿ ಕವಿತೆಗಳಾಗಲಿ ಸುಲಭಕ್ಕೆ ದಕ್ಕಲಾರವು. ಪ್ರಯತ್ನ ಪಟ್ಟು ದಕ್ಕಿಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೂ ಕೈಯ ಸಂಧಿಯಲಿ ಜಾರಿ ಹೋಗುವವು. ಸುಲಭಕ್ಕೆ ಗ್ರಹಿಸಲು ಸಾಧ್ಯವಾಗದು ಎಂದು ವಾಚಿಕೆಯ ಪ್ರಾರಂಭದಲ್ಲೇ ಶಾಂತಾ ಮಣಿ ಹೇಳಿದ್ದಾಳೆ ಜಾಗೃತೆ! 

ಹಾಗಾಗಿ ನಿಮ್ಮ ಓದಿಗೆ ದಕ್ಕಲಿ ಎನ್ನಲಾರೆ. ದಕ್ಕುವುದು ದಕ್ಕಿಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಬದುಕೆಂದರೆ ಮುಕ್ತಾಯವಾಗದ ಕೊನೆ ಮೊದಲಿಲ್ಲದ ಹುಡುಕಾಟ. ಎಂಬುದನು ಸದಾ ನೆನಪಿಸುತ್ತಾ ಕರಣಗಳಲಿ ಮತ್ತೆ ಮತ್ತೆ ಕೇಳುತಿದೆ “ನಿಂತಲ್ಲೇ ನಾನು ಹೆಪ್ಪಿ ಬಿಟ್ಟೆ” ಎಂಬ ಪದಪುಂಜ. ನಿಮ್ಮ ಓದಿಗೆ ದಕ್ಕಿದರೆ ತಿಳಿಸಿ. 

ನಿಮ್ಮ ಓದಿಗೆ ದಕ್ಕಲಿ ಎನ್ನಲಾರೆ ದಕ್ಕುವುದು ದಕ್ಕಿಸಿಕೊಳ್ಳುವುದೂ ನಿಮ್ಮ ಕೈಯಲ್ಲೆ ಇದೆ ಎನ್ನುತ್ತಾ ಈ ಮೋಟು ಲೇಖನಕ್ಕೆ ಪೂರ್ಣ ವಿರಾಮ. ಮತ್ತೆ ಸಿಗೋಣ.

Saturday, January 14, 2023

ಹಸಿರ ಜಾಡಿನಲಿ ನಮ್ಮದೇ ತುತ್ತೂರಿ...


"ಬಾ ಮಳೆಯೇ ಬಾ ಅಷ್ಟು ಬಿರುಸಾಗಿ ಬಾರದಿರು" ಎಂಬ ಕವಿ ವಿನಂತಿಯಂತೆ  ಮುಂಜಾವಿನಿಂದಲೇ ಮಳೆ ಸಿಂಚನಗೈಯುತ್ತಿತ್ತು. ಸ್ವಲ್ಪವೂ ಅತಿ ಎನಿಸದ ಹನಿ ಮಳೆ. ಕವಿ ಮನಸಿನಲಿ ಕಾಮನ ಬಿಲ್ಲು. 
       ತಿರುವು ಮುರುವು ರಸ್ತೆಯಲಿ ಹಾರ್ನ್ ಕೇಳದಷ್ಟು ಜೀರುಂಡೆಗಾನ. ಮಳೆಗೆ ತೊಳೆದಿಟ್ಟ ಫಳ ಫಳ ರಸ್ತೆ. ಕೊಪ್ಪೆ ಹೊದ್ದು ಹೊರಟ ಗೋಪಾಲರ ಅರಳಿದ ಕಣ್ಣು. ಜಾರಿದ ಮಳೆ ಬಿಂದುಗಳು ಕ್ಯಾಮರದಲಿ ಸೆರೆ. ಚಾರಣಿಗನನು ಕವಿಯಾಗಿಸಲು ಹೊರಟ ಕಾಡು, ಚಿಟ್ಟೆ, ಪತಂಗಗಳ ಸ್ವಾಗತ. ಮಂಜಿನೊಂದಿಗೆ ಬೆರೆತ ಧೂಮದ ವಿಚಿತ್ರ ಪರಿಮಳ. ದೂರದಿಂದಲೇ ಕೇಳಿ ಬರುವ ಹೂಡುವವನ ಹೂಂಕಾರದ ದನಿ. ವಿಭೂತಿಯ ಜಲಪಾತ್ರೆಯ ಸನ್ನಿಧಿಯಲಿ ಕಂಡ ಚಿತ್ರಗಳ ನಿಲುಗನ್ನಡಿ.

ವಿಭೂತಿ ಜಲಧಾರೆ.. 



ಈ ವಿಶಿಷ್ಟ್ಯ ಜಲಧಾರೆ ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡದಿರೆ ಕೇಳಿ. ಯಾಣ ಹಾದಿಯಲೇ ಸಾಗಿ ಅಡ್ಡ ಕವಲು ಹಿಡಿಯಬೇಕು. ಬರೋಬ್ಬರಿ ಅಡ್ಡದಾರಿಯಿಂದ 12 ಕಿ. ಮೀ ಎಂಬ ನೆನಪು. ಕತ್ತಲ ಕಾನಿಗೆ ಲಗ್ಗೆ ಇಟ್ಟ ಅನುಭವ. 'ಕತ್ತಲ ಕಾನಿನ' ಕತೆ ಮತ್ತೊಮ್ಮೆ ಹೇಳುವೆ.




ದಾರಿ ಹರಿವಿನಗಲಕ್ಕೂ ಪುಟಾಣಿ ಜಲಕನ್ನಿಕೆಯರ ಜಾತ್ರೆ. ಒಂದಕಿಂತ ಒಂದು ಚೆಂದ. ನಡೆವ ಹಾದಿಯಲಿ ಜಿಗಣೆಗಳ ಸಂತೆ. ಕಾಲ ತುಂಬ ರಕ್ತ ಪರೀಕ್ಷಕ ಜಿಗಣೆಗಳ ಹಾವಳಿ. ತಂಬಾಕು ಹುಡಿಯ ಧಾರಾಳ ಸನ್ಮಾನದಿಂದ ಕಾಲಿನಿಂದ ಕಾಲ್ಕಿತ್ತವು. ಇಪ್ಪತ್ತು ನಿಮಿಷದ ನಡಿಗೆಯಲಿ ವಿಭೂತಿ ಎಂಬ ವಿಶಿಷ್ಟ  ಲಲನೆಯ ದಿವ್ಯ ದರ್ಶನ. ಮುತ್ತುದುರಿದಂತೆ ಧುಮುಕುವ ನೀರ ರಾಶಿಗೆ ವಿಭೂತಿ ಎಂಬ ವಿಶಿಷ್ಟ್ಯ ನಾಮ. ಮೂರು ಹೆಜ್ಜೆಗಳ ಪುಟಾಣಿ ಧುಮುಕು. ನೋಡಿದಾಗ ಎಲ್ಲೆ ಮೀರಿದ ಸಂತಸ. ಸಣ್ಣ ಗುಂಡಿಗಳ ಅಳೆಯುವಷ್ಟರಲ್ಲೇ ತಿಂದ ಎರಡು ಇಡ್ಲಿಯೂ ಜೀರ್ಣ. ನೀರಿಗಿಳಿಯುತ್ತಲೇ ಎಮ್ಮೆಯಂತಾಡುವ ಗೆಳೆಯನೆಬ್ಬಿಸಲು ಸತತ ವಿಫಲ ಯತ್ನ. ಕೊನೆಗೂ ಮಂಜುಗಣಿ ದೇವಾಲಯದ ತಂಬುಳಿ ಊಟ ತಪ್ಪಿ ಹೋಗುವುದೆಂದಾಗ ಮನಸಿಲ್ಲದ ಮನಸ್ಸಿನಿಂದ ಎದ್ದ. ಪಾಪ. ಡ್ರೈವರ್ ಅಂಕಲ್ ಮಂಜುವಾಣಿಗೆ ತಡವಾಯ್ತು ಎಂದು ಎಚ್ಚರಿಸಲು ಬಾರದಿದ್ದರೆ ಮತ್ತೆರಡು ಗಂಟೆ ಧ್ಯಾನ ಮಾಡುತ್ತಿದ್ದನೋ ಏನೋ.
ಬೆಣ್ಣೆ ಹೋಳೆ ಜಲಧಾರೆಯಲ್ಲಿ . 


ಸರಪಳಿಗೆ ಜೋತು ಬಿದ್ದಂತೆ ಗಾಳಿಗೆ ಹೊಯ್ದಾಡುವ ನೀರ ರೇಖೆಗಳು. ಕೈ ಮೈ ಒದ್ದೆ ಮಾಡಿ ಕ್ಷಣಾರ್ಧದಲಿ ಮತ್ತೊಂದು ಕಡೆ ಮಾಯಾ! ವಿಚಿತ್ರ ಕಪ್ಪೆ, ಬಣ್ಣದ ಹಾರ್ ಹಾತೆಗಳು ಜಲಪಾತವನೇ ದಿಟ್ಟಿಸುತ್ತಾ ಕೂತಿದ್ದನ್ನು ಕ್ಯಾಮರಾದಲಿ ಸೆರೆ ಹಿಡಿದೆ. ತನ್ನರಮನೆಗೆ ಬಂದ ಅಪರಿಚಿತರಿಗೂ ಜಾಗ ಮಾಡಿ  ಕೊಟ್ಟಿದ್ದವು. ಅಘನಾಶಿನಿಯ ಕವಲಿಗೆ ಸೇರುವ ಇದರೊಡಲಲ್ ಅಡಗಿದ ಅಚ್ಚರಿಯ ಬಿಚ್ಚಲು ದಿನಗಟ್ಟಲೇ ಇಲ್ಲೆ ಮನೆ ಮಾಡಿ ಕಳೆಯಬೇಕು. ಜೀವ ವಿಸ್ಮಯಗಳ ತಾಣ ಈ ಜಲಧಾರೆ. ಪದಗಳೇ ಸೋಲುವಂತ ಚೆಲುವು.



ಕಾಡ ನಡುವಿನಲಿ ಸುಂದರ ಜಲಧಾರೆ. 


ಹೊರಟು ನಿಂತಾಗ ಮೈ ಮನಸ್ಸು ಭಾರ. ಕ್ಯಾಮರವೂ ಚಳಿ ಬಿಟ್ಟು ನೀರಿನಲಿ ಮುಳುಗಿ ಎರಡು ಗುಟುಕು ನೀರ ಕುಡಿದೇ ಬಿಟ್ಟಿತು! ಯಾಕೆ ನೀವು ಕಪ್ಪೆ ಕರಕರ ಕೇಳಲು ನೀರ ಜೋಗುಳದಲಿ ಮಗುವಾಗಿ ಮಲಗಲು ಈ ಮಳೆಗಾಲದಲ್ಲೊಮ್ಮೆ ಇತ್ತ ಬರಬಾರದು. ವಿಭೂತಿ ಜೊತೆಗಿರುವ ಯಾಣ, ಮಂಜುಗಣಿಯನು ಮರೆಯದಿರಿ. ಮತ್ತೊಮ್ಮೆ ಭೇಟಿಯಾಗೋಣ.

                                                                                                                  ಶ್ರೀಧರ್. ಎಸ್. ಸಿದ್ದಾಪುರ.

Saturday, January 7, 2023

ಆರ್ಕಿಡ್‌ ಅಂಗಳದಲ್ಲಿ ಆ ಏಳು ದಿನಗಳು..


    ಹಿಮಾಲಯದ ಮಡಿಲಲ್ಲಿ ಮಗುವಾಗುವ ಆಸೆಗಳು ಗರಿಗೆದರಿದ್ದವು. ಭಾರತದಅತಿ ವಿಶಿಷ್ಟ ಕಾಶ್ಮೀರದ ಏಳು ಸರೋವರಗಳ ಚಾರಣಕ್ಕೆ ಹೊರಟು ನಿಂತಾಗ ಪುಳಕ !ಕೋವಿಡ್ಎರಡನೆಯ ಅಲೆ ಉತ್ತುಂಗದಲ್ಲಿತ್ತು! ಮನಸ್ಸಿನ ತಳಮಳವೂ. ಅಂಜಿ ಹೆದರಿ ವಿಮಾನವೇರಿದರೆ ಮನವೆಲ್ಲಾಆತಂಕದಗೂಡು. ಶ್ರೀನಗರದಲ್ಲಿ ಇಳಿಯುತ್ತಲೇ ಮೂಗಿನ ಹೊಳ್ಳೆಗಳೆಲ್ಲಾ ಕೆರೆದುಕುಪ್ಪೆ ಹಾಕಿ ಪೋನ್ ನಂಬ್ರತೆಗೆದುಕೊಂಡು ಕೈಗೆ ಸೀಲು ಒತ್ತಿ ಕಳುಹಿಸಿದರು. ಎದೆಯಲ್ಲಿಢವಢವ ! ಪಾಸಿಟಿವ್ ಬಂದರೆ ಎಂಬ ಭಯ !

ಪುಣ್ಯಕ್ಕೆ ನಮ್ಮತಂಡದಲ್ಲಿಯಾರದ್ದೂ ಪಾಸಿಟಿವ್ ಬರಲ್ಲಿಲ್ಲ. ತಿಳಿ ನೀಲಿ ದಾಲ್ ಸರೋವರದಅಂಚಿನ ನೆಹರು ಹೋಟೆಲ್ನಲ್ಲಿರೂಂ ಕಾದಿರಿಸಿದ್ದೆವು. ಕೆಹವಾದ ಕೇಸರಿಯುಕ್ತ     ಉಗಿ ಸೇವಿಸುತ್ತಾ ದಾಲ್ ಸರೋವರಕ್ಕೆ ಸುತ್ತು ಬರಲು ಹೊರಟು ನಿಂತಾಗ ಎಳೆ ಬಿಸಿಲು ನೀರಿಗೆ ಚಿಮ್ಮಿ ಅಹಲಾದಕರ ವಾತಾವರಣಏರ್ಪಟ್ಟಿತ್ತು. ನೀರ ಮೇಲೆ ತೇಲುತ್ತಾ ಚಹಾ ಕಾಯಿಸುವವರು, ಕೇಸರಿಮಾರುವವರು, ಓಲೆ ಮಾರುವವರುದೋಣಿ ಹಿಡಿದೇ ಬರುತ್ತಿದ್ದರು. ಕೊನೆಗೆಲ್ಲವೂ ನೀಲಿಯಾಗಿ ಸಂಪೂರ್ಣಕರುಗುತ್ತಿತ್ತು. ಬರೋಬ್ಬರಿ 5 ಲಕ್ಷಜನ ವಾಸಿಸುವ ಇಲ್ಲಿನ ವಿಶೇಷತೆ ಅನ್ಯಾದರ್ಶ. ಇಲ್ಲಿನ ಬದುಕಿನಕತೆಯೂರೋಚಕ. ಚಳಿಗಾಲದಲ್ಲಿ ಹೆಪ್ಪುಗಟ್ಟುವ ನೀರುಇಲ್ಲಿನ ಮನಸ್ಸುಗಳನ್ನೂ ಹೆಪ್ಪುಗಟ್ಟಿಸುತ್ತಾಎಂದು ತಿಳಿಸುವ ತವಕ. ಸರಕಾರಿಕಛೇರಿ, ಪೋಲಿಸ್ ಕಾವಲಿನ ಮುಂದೆ ಸುರುಳಿ ಸುತ್ತಿದ ಸರಿಗೆ ಮನದತುಂಬಾ ವಿಶಾದದ ನೆರಿಗೆ.

ಮೊದಲ ನಂಬ್ರದಗೇಟಿನೆದುರು ನಮ್ಮ 40 ಚಾರಣಿಗರ ಸಂತೆ ನೆರೆದಿತ್ತು. ನನಗಂತೂ ತವಕ ತಲ್ಲಣ.ಎಲ್ಲರೂ ಸಪ್ತ ಸರೋವರದ ಕನಸಿನಲ್ಲಿದ್ದರು. ನಮ್ಮಟೆಂಪೊಟ್ರಾವೆಲ್ಲರ್ನಲ್ಲಿ ನಾವೆಲ್ಲಾ ಸೋನ್ ಮಾರ್ಗದ ದಾರಿ ಹಿಡಿದೆವು.

ಸೋನ್ ಮಾರ್ಗ ಎಂಬ ಭೂ ಸ್ವರ್ಗ:-

    ಕರ್ಕಶ ಶಬ್ದ ಮಾಲಿನ್ಯದಿಂದ ನಿಶಬ್ಬದ ಸ್ಚಪ್ನ ಲೋಕವೊಂದಕ್ಕೆಕಾಲಿಟ್ಟೆವು.  ಎತ್ತರೆತ್ತರದ ಪರ್ವತಗಳು ಸೈನಿಕರಂತೆ ನಮ್ಮ ಸುತ್ತುವರಿದ್ದವು ನದಿಯೊಂದು ನಿಶಬ್ಬವಾಗಿ  ಹರಿಯುತ್ತಾ ಸ್ವರ್ಗ ಲೋಕವೊಂದನ್ನುಉಂಟುಮಾಡಿತ್ತು. ಸೋನ್ ಮಾರ್ಗಕ್ಕೆ ಕೆಲವೇ  ಕಿಲೋಮೀಟರ್ ಹಿಂದೆ ನಮ್ಮಕ್ಯಾಂಪ್ ಸಪ್ನಲೋಕ ಸೃಷ್ಟಿಸಿದ ನದಿ ರಾತ್ರಿದುಸ್ವಪ್ನದಂತೆಕಾಡಿತ್ತು. ಇಷ್ಟು ದಿನ ಹಂಸ ತೂಲಿಕದ ಮೇಲೆ ಮಲಗಿದ ನನಗೆ ಒಂಟೆ ಮೇಲೆ ಮಲಗಿದಅನುಭವ, ನದಿ ಭೋಗರ್ೆರೆತಕ್ಕೆ ನಿದ್ದೆ ಹಾರಿ ಹೋಗಿತ್ತು ಸ್ವಪ್ನ ಸೌಂದರ್ಯದ ಕನಸು ಕಾಣುತ್ತಾರಾತ್ರಿ ಕಳೆದೆವು

KISHAN SAR LAKE AND VISHNU SAR LAKE
KISHAN SAR LAKE AND VISHNU SAR LAKE


DAL LAKE


LIDER RIVER SONA MARG.

ದಿನ 2


ಸೋನ್ ಮಾರ್ಗದಿಂದ ನಿಚ್ ನಾಯ್ ಪಾಸ್ ವರೆಗೆ....


         ಕನಸು ಹೆಕ್ಕುತ್ತಾ ಕಪ್ಪಿರುವೆ ಸಾಲಿನನಂದದಿ ಹೊರಟಿತ್ತು ಚಾರಣಿಗರ ಮೆರವಣಿಗೆ. ದೂರದ ಸೋನ್ ಮಾರ್ಗಎದ್ದಿತ್ತಷ್ಟೆ.ಏರುದಾರಿಯ ಏರು ದಾರಿಯುದ್ದಕ್ಕೂ ಕುರುಬರ ಹಿಂಡು. ಜೊತೆಗೆ ಮೆವ ಕುರಿಗಳ ದಂಡು. ನೋಡಿ ನಮ್ಮ ಕಣ್ಣುಗಳು ದಂಗು.  ನಮ್ಮ ಕುಶಲೋಪರಿಯ ಪರಿ ಪರಿಯಾಗಿ ವಿಚಾರಿಸಿಕೊಂಡರು. ಮನೆಯಲ್ಲದ ಮನೆಗೆ ನಮ್ಮ ಆಹ್ವಾನಿಸಿದರು. ಮನಸೋ ಇಚ್ಛೆ ಲಸ್ಸಿ ಕುಡಿಸಿದರು. 
KEHVA KETAL

            ಬೆಳಗಿನ ಅವಲಕ್ಕಿ 12 ರ ಸುಮಾರಿಗೆ ಮನೆಯ ಹಾದಿ ತುಳಿದಿತ್ತು. ಮಧ್ಯಾಹ್ನಕ್ಕೆ  ತಂದ ಬುತ್ತಿ ಬಿಚ್ಚಿ ಹರಿವ ಜಲದ ಸನಿಹವೆ ತಿಂದು ಹಿಮಾಲಯದ ನೀರು ಕುಡಿದು ಖುಷಿ ಪಟ್ಟೆವು. ಓಕ್ ಟ್ರೀಗಳ ನೆರಳಿನಲ್ಲಿ ತಂದ ಕೆಲವು ತಿಂಡಿಗಳನ್ನು ಹಂಚಿತಿಂದು ಹೆಜ್ಜೆಎಣಿಸುತ್ತಾ ಸಾಗಿದೆವು.
ಎತ್ತರೆತ್ತರಕ್ಕೆ ಏರಿದಂತೆ ಚಳಿ ತನ್ನ ಪ್ರಭಾವ ತೋರ ಹತ್ತಿತು. ಅತ್ಯಂತ ಎತ್ತರ ಜಾಗದಲ್ಲಿ ಅಧ್ಭುತ ರುಚಿಯ ಬಿಸಿ ಬಿಸಿ ಕೆಹವಾ ಒಂದು  ನಮಗಾಗಿ ಕಾಯುತಲಿತ್ತು. ಕೆಹವಾ ಗಂಟಲಿಗೆ ಇಳಿಯುತ್ತಲೇ ಸ್ವರ್ಗೋಲ್ಲಾಸ! ಇಷ್ಟು ಎತ್ತರದ ಜಾಗದಲ್ಲಿ ಚಹ ಅಂಗಡಿ ಹಾಕಿದವನಿಗೆ ಸಾವಿರ ನಮನ ಸಲ್ಲಿಸಿದೆ. ಮನೆಯಲ್ಲಿ ಮ್ಯಾಗಿ ತಿಂದಿದ್ದು ಸಾಲದೆಂಬಂತೆ ಇಲ್ಲೂ ಕೆಲವರು ಮ್ಯಾಗಿಗೆ ಆರ್ಡರಿಸಿದರು. ಅವರಿಗೆ ನನ್ನ ಅನುಕಂಪ.  

LIDDER RIVER
   

     
 ಹರ್ಕಿದುನ್ ಚಾರಣದಲ್ಲಿ ಭೇಟಿಯಾದ ಇಬ್ಬರು ಗೆಳೆಯರು ಆಕಸ್ಮಿಕವಾಗಿ ಸಿಕ್ಕರು! ಈ ಭೂಮಿ ದುಂಡಗಿದೆ ಅನಿಸಿತು. ಜೊತೆಗೊಂದಿಷ್ಟು ಪೋಟೋ ಸಮಾರಾಧನೆ. 
ಇಲ್ಲಿಂದ ಮುಂದೆ ಇಳಿಜಾರಿನ ಹಾದಿಯಲಿ ಲಿಡ್ಡರ್ ನದಿಗುಂಟ ಸಾಗಿ ಸಣ್ಣತೊರೆಯ ಬಳಿ ನಮ್ಮಕ್ಯಾಂಪ್ ನಮಗಾಗಿ ಕಾದಿತ್ತು. ನಾನು ಮತ್ತು ಗೆಳೆಯ ನಾಗರಾಜ ಹಿಮಾಲಯದ ಹೂಗಳನ್ನು ನೋಡುತ್ತಾ ನಿಧಾನಕ್ಕೆ ಹೆಜ್ಜೆ ಹಾಕುತ್ತಾಗುರಿ ಸೇರಿದೆವು. ಬೃಹತ್ ಬೆಟ್ಟದ ಬುಡದಲ್ಲಿ ನಮ್ಮ ಕ್ಯಾಂಪ್ ಕಾಣಿಸುತ್ತಲೇ 11.6 ಕಿ. ಮಿ. ನಡೆದ ದಣಿವೆಲ್ಲಾ ಕಣಿವೆಯಲಿ ಕರಗಿತು. ಸುತ್ತಲೂ ಹಳದಿ ಆರ್ಕಿಡ್ ಹೂಗಳು ಸಂಭ್ರಮವನು ಇಮ್ಮಡಿಗೊಳಿಸಿದವು. ಬಿಸಿಲಿಗೂ ಹಳದಿ ಛಾಯೆ. ಸೂರ್ಯನಿಲ್ಲಿ ರಜೆಯ ಮೇಲಿದ್ದ. ಕೆಲವರು ಧ್ಯಾನಕ್ಕಿಳಿದರು. ನಾ ಝರಿಯ ಮಾತನಾಡಿಸ ಹೊರಟೆ.  

ಹೂವ ಪಕಳೆ ಹರಡಿದಾಗ


ಕಶ್ಮೀರಿ ಹುಕ್ಕಾ ಸೇದುತ್ತಾ ಕುಳಿತ ಅಜ್ಜನೊಬ್ಬ ನನ್ನ ಕ್ಯಾಮರಾದೊಳಗೆ ಬಂದಿಯಾದ. ಸಣ್ಣಝರಿಯ ಜೋಗುಳದಲಿ ನಕ್ಷತ್ರಗಳ ಹೊದಿಕೆ ಅಡಿಯಲಿ ನಿದ್ರಾದೇವಿಯ ವಶವಾಗಿದ್ದು ತಿಳಿಯಲೇ ಇಲ್ಲ!

Snow stream crossing.



ದಿನ 3

ನಿಚನಾಯಿಯಿಂದ ವಿಷ್ಣು ಸರ್ ಲೇಕ್.....

ನಿಚ್‌ ನಾಯ್‌ ಪಾಸ್‌ ಕಡೆಗೆ ಪ್ರಯಾಣ.
        
        ಶೀತಲಮಯವಾದ ನಿಚನಾಯಿಯ ಮೋಡ ಕವಿದ ವಾತಾವರಣದಲ್ಲಿ ಶಾಸ್ತ್ರಕ್ಕೆಂಬಂತೆ ಬೆಳಗಿನ ಉಪಹಾರ ಸೇವಿಸಿ ಸೋನ್ ಮಾರ್ಗನ್ನು ಹಸಿರುಕ್ಕಿಸುವಂತೆ ಮಾಡುವ ನದಿ ಗುಂಟ ಬೃಹತ್ ಕಲ್ಲುಗಳ ಮೇಲೆ ಮಂಗನಂತೆ ಜಿಗಿಯುತ್ತಾ ಚುಮುಗುಡುವ ನದಿ ನೀರಿನಲಿ ಕಾಲು ತೋಯಿಸಿ ಜಾರದಂತೆ ದಾಟಿಕೊಂಡು ಕಲ್ಲು ಬಂಡೆ ಮೇಲೆ ಕೂತು ಶೂಧರಿಸುವಾಗಲೇ ಬಂದ ಕುದುರೆಗಳು ನೀರಿಗಿಳಿಯಲು ಹಠಮಾಡತೊಡಗಿದವು. ಅಂತೂ ಕುದುರೆಗಳನ್ನು ಅವುಗಳ ಮಾಲಿಕರು ಪುಸಲಾಯಿಸಿ ಝರಿ ದಾಟಿಸಿದರು. 

ನಾನು ಜಾರಿ ಬಿದ್ದ ಜಾಗ....


ನಿಚ್‌ ನಾಯ್‌ ಪಾಸ್‌ ಎಂಬ ಸ್ವರ್ಗ. 

            ಮುಂದಿನದು ಸಣ್ಣ ಕಲ್ಲುಗಳ ಏರುದಾರಿ. ಎರಡು ಬೃಹತ್ ಪರ್ವತಗಳ ನಡುವಿನ ಕವಲ ನಡುವೆ ಪ್ರಯಾಣ. ಅಲ್ಲಲ್ಲಿ ಹಿಮ ದರ್ಶನ. ಹಿಮವನ್ನುಎಂದೂ ನೋಡದವರಂತೆ ಮುಟ್ಟಿ, ತಿಂದು ಅಲ್ಲಿ ಜಿಗಿದು ಖುಷಿಪಟ್ಟೆವು. ಇಲ್ಲಿನತುದಿಯಎತ್ತರ ಸುಮಾರು13,615 ಅಡಿ 10.30 ರೊಳಗೆ ನಮ್ಮತಂಡದಐವರು ಬೆಟ್ಟದತುದಿಯಲ್ಲಿದ್ದೆವು. ಇಲ್ಲಿಒಂದು ಮ್ಯಾಗಿ ಮತ್ತು ಅವರು ಕೊಟ್ಟ ಜ್ಯೂಸ್ ಸವಿದು ನಿಚ್ನಾಯ್ ಪಾಸ್ಕ್ರಾಸ್ ಮಾಡಲು ತಯಾರಾದೆವು. 

Nich Nayi Pass

    

    ನಿಚ್ ನಾಯ್ ಪಾಸ್ ಸಂಪೂರ್ಣ ಹಿಮಭರಿತವಾಗಿತ್ತು. ಈ ಹಿಂದೆ ಹಿಮದಲ್ಲಿ ನಾನುಬಿದ್ದುದರಿಂದ ಪಾಸ್ದಾಟಲು ನಮ್ಮತಂಡದ ಸತೀಶ್ಅದರ ಸಹಕಾರ ಪಡೆದು ನಿಧಾನಕ್ಕೆ ಪಾಸ್ದಾಟಿ ಪಾರಾದೆ. ಪಾಸ್ದಾಟುವಲ್ಲಿ ಅನೇಕ ಮ್ಯೂಲ್ ಮತ್ತು ಕುದುರೆಗಳು ಎಡವುತ್ತಿದ್ದವು. ಬೆಟ್ಟಗಳ ರಕ್ಷಣಿಯಲ್ಲಿ ಸುತ್ತಲು ಹಳದಿ, ಬಿಳಿ, ಮತ್ತು ನೀಲಿ ಹೂಗಳು ಅರಳಿನಿಂತಿದ್ದವು. ನಡುವೆ ಹಾವು ಹರಿದಂತಹದಾರಿ. ಪಾಸ್ನಿಂದ ಇಳಿದು ಕಣಿವೆಯ ಬಯಲಿಗೆ ಇಳಿದಾಗ ಮನಸ್ಸು ಇಲ್ಲಿನ ಸೌಂದರ್ಯಕ್ಕೆ ಮುದಗೊಂಡಿತ್ತು. ಅಲ್ಲಲ್ಲಿ ಕುರಿಗಾಹಿಗಳ ಹಿಂಡು, ನಿತ್ರಾಣಗೊಂಡ ಮನಸ್ಸಿಗೂ, ದೇಹಕ್ಕೂ ಅಹ್ಲಾದ. ನಿಚ್ನಾಯ್ ಪಾಸ್ನಲ್ಲಿ ಹುಟ್ಟುವ ಝರಿಯೊಂದು ಪೂವರ್ಾಭಿಮುಖವಾಗಿ ಹರಿಯುತ್ತಿತ್ತು. ಅದರದಂಡೆಯಲ್ಲೆ ಕೂತು ತಂದ ತಣ್ಣಗಿನ ಬುತ್ತಿ ಬಿಚ್ಚಿತಿಂದೆವು. ವಾಹ್ಅಹ್ಲಾದ. ಝರಿಯನ್ನೆ ನೋಡುತ್ತಾ ಹಲವು ಸಮಯ ಮೈಮರೆತೆ. ಕಣ್ಣು ಹಾದಲೊರೆಗೂಕಣಿವೆ. ಒಂದೆರಡುಅತ್ಯುತ್ತಮ ಚಿತ್ರಗಳು ದೂರಕಿದ್ದು ಇಲ್ಲೇ. ಝರಿಯ ನೀರುಆಕಾಶವನ್ನು ಪ್ರತಿಫಲಿಸಿ ಸೌಂದರ್ಯವನ್ನು ಹೆಚ್ಚಿಸಿತ್ತು. ನನ್ನಅಬ್ಬೆಪಾರಿ ಮನಸ್ಸುಕಣಿವೆ ತುಂಬಾ ಅಡ್ಡಾಡಿ ಬಂತು. ನನ್ನೊಳಗೆ ಕಣಿವೆ ಸೌಂದರ್ಯವನ್ನು ಇಳಿಸುತ್ತಾ ನಿಧಾನಕ್ಕೆಎಲ್ಲರಿಗಿಂತಕೊನೆಯವನಾಗಿತಲುಪಿದೆ.   ಕಣ್ಣಿನಲ್ಲೆಕಣಿವೆ ಹೀರಿದ ಸುಖ ಕಣ್ಣಿನಲ್ಲಿ ನಳನಳಿಸುತ್ತಿತ್ತು.ಸ್ವಲ್ಪ ಹೊತ್ತುಕ್ಯಾಂಪನಲ್ಲಿ ವಿರಮಿಸಿ ಸಂಜೆ ಹೊತ್ತಿಗೆ ಸ್ನಾನಮಾಡಿ ವಿಷ್ಣು ಸರ್ ಸರೋವರಕ್ಕೆ ಹೋಗಿ ಬಂದೆವು. ವಿಷ್ಣು ಸರ್ದ ಸೌಂದರ್ಯ ಮತ್ತುಅಗಾಧತೆಗೆ ಮನಸ್ಸು ಭಯಗೊಂಡಿತ್ತು. ಕಾಲು ತೋಯಿಸಿಕುಳಿ? ಲೋಕ ಮರೆತಅನುಭವ. ಸಮತಟ್ಟಿನಲ್ಲಿಝರಿಯೊಂದು ವಿಷ್ಣು ಸರ್ನಿಂದಹೊರಟು ಬಂದಿತ್ತು ಹಿಮನದಿಯಲ್ಲಿ ಮಿಂದ ಪುಳಕ. ಸಂಜೆಗೆಕೆಂಪಾದ ಸೂರ್ಯತನ್ನೆಲ್ಲಾ ಬಣ್ಣಗಳ ತೋರುತ್ತಾ ನನ್ನ ಕೆಮರಾದಲ್ಲಿ ಸೆರೆಯಾದ. ಉಳಿದವರು ಆಟಗಳಲ್ಲಿ ತಲ್ಲಿನರಾದರೆ ನಾನು ಪೋಟೋಗ್ರಾಪಿಯಲಿ.

Vishnu Sar in the evening. 


ವಿಷ್ಣು ಸರ್‌ ಸರೋವರದಲಿ ಹುಟ್ಟುವ ಹಿಮ ನದಿ ದಾಟುವ ಚಾರಣಿಗ..


    ಮೇ ತಿಂಗಳಿನಲ್ಲಿ ಇಂತಿಷ್ಟು ಕುರಿಗಳ ಹಿಂಡುಕಟ್ಟಿಕೊಂಡು ಅಲೆದ ಕುರಿಗಾಹಿಗಳ ಒಂದೆರಡುಕುಟುಂಬ ನಮ್ಮಜೊತೆ ಬಿಡಾರ ಹೂಡಿದ್ದವು. ಅವರನ್ನೆಲ್ಲಾ ಮಾತಾಡಿಸಿ ಬಂದೆವು. ಹಿಮ ಬೀಳುವ ಮೊದಲುತಮ್ಮೂರಿಗೆ ಹಿಂದಿರುಗುವ ಭಾಗಶಃ ಅಲೆಮಾರಿಗಳು. ಹೆಚ್ಚಿನವರು ಲಕ್ಷಾಧೀಶರು. ಬೇಕಷ್ಟೆ ಕುರಿ ಮಾರಾಟ ಮಾಡಿ ಸುಖವಾಗಿರುವರು. ಕುರಿಗೊಬ್ಬರದಿಂದಲೂ ಸಂಪಾದನೆ!

ಹಿಮ ನದಿಗಳಲ್ಲಿ ಕಂಡು ಬರುವ ವಿಶಿಷ್ಟ ಟ್ರೋಟ್ ಮೀನಿನ ಸಮಾರಾಧನೆ ನಡೆದಿತ್ತು. ಇವರ ಬಾಯಿ ಚಪಲಕ್ಕೆ ಬಲಿಯಾದ ಮೀನುಗಳಿಗೆ ನನ್ನ ಅನುಕಂಪಗಳು.

ಅಬ್ಬಾ ಹಿಮವೇ!

ಬೋಗುಣಿ ಕಣಿವೆಯ ಅಂಚಿನಲಿ ಅಲೆಯುತ್ತಾ...


ದಿನ 4
ವಿಷ್ಣು ಸರ್ ಲೇಕ್ನಿಂದ ಗಡಸರ್ ಲೇಕ್-


Towards Gad Sar.
ಇಂದು  ಅತಿ ಹೆಚ್ಚು ದೂ ನಡೆಯ ಬೇಕಾದುದರಿಂದ ದಿನವಾದುದರಿಂದ ಬೆಳಿಗ್ಗೆ 7.15 ಕ್ಕೆಲ್ಲಾ ತಿಂಡಿ ತಿಂದು ಪ್ಯಾಕ್ಡ್ ಲಂಚ್ ಹಿಡಿದು ಶಾಲಾ ಮಕ್ಕಳಂತೆ ಪುಳಕದಿಂದ ಹೊರಟು ನಿಂತೆವು. ಇದೊಂದು ಸುದೀಘ ದಿನವಾಗುತ್ತದೆಂದು ಎಲ್ಲರೂ ಮಾನಸಿಕವಾಗಿ ತಯಾರಾದೆವು. ಅದೆಲ್ಲಕ್ಕಿಂತಲೂ ಮುಖ್ಯವಾಗಿ ಕೃಷ್ಣ ಸರ್ ಮತ್ತು ಅದ್ಭುತವಾದ ಗಡ ಸರ್ ಲೇಕ್ ಮತ್ತು 14,000 ಅಡಿ ಎತ್ತರದ  ಗಡಸರ್ ಪಾಸ್ ದಾಟುತ್ತೇವೆಂಬ ಪುಳಕ!!
ವಿಷ್ಣು ಸರ್ ಲೇಕ್ ನೋಡಿಕೊಂಡುಕಿಷನ್ ಸರ್ ಲೇಕ್ನ ಬಳಿ ಬರುತ್ತಲೆಎದೆ ಬಡಿತ ವಿಪರೀತ ! ಲೇಕನ ಸನಿಹವೇ ಇದ್ದ ದುರಂಧರನಂತಹ ಶಿಖರಾಗ್ರ ಕಾಣುತ್ತಲೇ ಮನವೇಕೋ ಕಸಿವಿಸಿ.  ದೈತ್ಯ ಕಿಶನ್ ಸರ್ ಸರೋವರದ ಸೌಂದರ್ಯ ಸವಿಯದಂತೆ ಮಗ್ಗುಲ ಮುಳ್ಳಾಗಿ ನಿಂತಿತು ಉಚಿಜಚಿಡಿ ಠಿಚಿ. ಎದೆಝಲ್ ಎನಿಸುವ ಎತ್ತರ. ಸ್ಪಲ್ಪ ಯಾಮಾರಿದರೂಕಿಶನ್ ಸರ್ ಪಾಲು. ಮ್ಯೂಲ್ಗಳು ಚಲಿಸುವ ಓಣಿಯಂತಹ ದಾರಿ. ಮೂಲ್ಗಳ ಕಾಲ್ ತುಳಿತಕ್ಕೆ ಸಿಕ್ಕದೇ ಏರುವುದು ಬಲು ಕಠಿಣ.
ತೀವ್ರಕಡಿದುಕೊನೆಯ ಹಂತವಂತೂ ಬಲು ಕಠಿಣ. ಸಣ್ಣ ಕಲ್ಲುಗಳು ಬೂಟುಗಾಲಿಗೆ ಸಿಕ್ಕಿ ಕಾಲು ಜಾರುತಲಿತ್ತು. ಯಾವನೋ ಪುಣ್ಯಾತ್ಮ ನನ್ನತುದಿ ತಲುಪಿಸಿದ. 10ರ ಸುಮಾರಿಗೆ ನಮ್ಮತಂಡದಅರ್ಧಕ್ಕರ್ಧ ಮಂದಿ 14,000 ಅಡಿ ಎತ್ತರದ ನೆತ್ತಿಯಲ್ಲಿದ್ದೆವು. ನೆತ್ತಿಯಿಂದ ಕಾಣುವಾಗ ಎಡಕ್ಕೆ ಕಿಶನ್ಸರ್ ಬಲಕ್ಕೆ ಗಡ್ಸರ್ನ ವಿಹಂಗಮತೆ ಅದ್ಭುತ! ಆರೇಳು ಸಣ್ಣ ಸಣ್ಣ ಸರೋವರ ಸಂಗಮತೆಯ ಗಡ್ ಸರ್. ಹಿಮದ ನೆತ್ತಿ ಮೇಲೆ ಗೆಳೆಯರ ದಂಡು12ರ ಸುಮಾರಿಗೆಎಲ್ಲಾ ಮ್ಯೂಲ್, ಕುದುರೆಗಡಸರ್ ಪಾಸ್ಗೆ ಬಂದು ಅಲ್ಲೊಂದು ಉತ್ಸವ ನೆರೆದಿತ್ತು. ಸಕತ್ ಪೋಟೋ ಸಮಾರಾಧನೆ. ಮ್ಯೂಲ್ಗಳ ಮೆರವಣಿಗೆ ಮುಗಿದ ಮೇಲೆ ನಮ್ಮತಂಡದವರ ಮೆರವಣಿಗೆ ಹೊರಟು ನಿಂತಿತ್ತು. ನಮ್ಮತಂಡದ ಆಮೆ ವೇಗದ ಚೆಲ್ಲಾಟದ ನವತರುಣಿಯರಿಬ್ಬರು ಬಂದು ತಲುಪ ಬೇಕಿತ್ತು. ಆದರೂ ಅವರಿಗಾಗಿ ಕಾಯದೆ ನಾವು ಹೊರಟು ನಿಂತೆವು.

ಹೂವ ಗಂಧ ತೇಲಿ ಬಂತು....



FLOWERS VALLEY!


    ಗಡಸರ್ ಪಾಸ್ನ ನೆತ್ತಿಯಲ್ಲಿ ಪೋಟೋ ಸಮಾರಾದನೆ ನಡೆಯುತಲಿತ್ತು. ಸಿಕ್ಕ ಸಿಕ್ಕಂತೆ ಕ್ಲಿಕ್ಕಿಸಿ ಖುಷಿಪಟ್ಟೆವು. ಶೀತಲ ವಾತಾವರಣದಲ್ಲೂ ಬಿಸಿಲತಾಪಕ್ಕೆ ತೊಯ್ದುತೊಪ್ಪೆಯಾಗಿದ್ದೆವು. ಸ್ನೋ ಬಳಿದುಕೊಂಡು ಚಂದ ಇದ್ದೇನಾ ಎಂದು ನೋಡಿಕೊ ಎಂದ ಪರ್ವತಗಳನ್ನೆಲ್ಲಾ ಕ್ಲಿಕಿಸಿ ಸುಮ್ಮನಾದೆ. ಯಾವುದೂ ಹಲ್ಕಿರಿಯಲ್ಲಿಲ್ಲ. 

GADSAR LAKE WITH A WALKING PATH.


    ಹಸಿರು ಪಾಚಿ ಕಟ್ಟಿದಂತಹಒಂದೊಂದು ಸರೋವರದ ತುಣುಕುಗಳು ಆಕಾಶದಿಂದಉದುರಿದ ವಿಶಿಷ್ಟ ತುಣುಕುಗಳಂತೆ ಗೋಚರಿಸುತ್ತಿದ್ದವು. ಪಾಸ್ನ ಬಲ ಮಗ್ಗುಲಿಗೆ ಇದ್ದಎಲ್ಲಾ ಹಿಮಕರಗಿತ್ತು. ಜೊತೆಗೆ ಬಿಸಿಲು ಬಂದು ನಮ್ಮಅದೃಷ್ಟಕ್ಕೆ ನಿರಾಯಾಸವಾಗಿ ಪರ್ವತಏರಿ??್ದವು. ತೀವ್ರ ಇಳಿಜಾರಿನ ಕಣಿವೆ ಇಳಿಯುತ್ತಲೇ ಕಾಶ್ಮೀರದ ಹೂ ಕಣಿವೆ ಎದುರಾಗಿತ್ತು. ನೆತ್ತಿಯ ಮೇಲೆ ಕಂಡದಂತಹ ಕಡು ಕೆಂಪು ಕುಸುಮಗಳು ಇಲ್ಲೆಲ್ಲೂ ಕಾಣಲಿಲ್ಲ. ಪ್ರತೀ ಸ್ತರಕ್ಕೂ ತನ್ನದೇ ಲೆಕ್ಕಚಾರದ ಹೂಗಳ ಬೆಳೆಸಿತ್ತು ಪ್ರಕೃತಿ! ಶ್ವಾಸಕೋಶದೊಳಗೆ ನುಗ್ಗುವ ಪ್ರತಿ ಉಸಿರಿನಲ್ಲೂ ಹೂವಗಂಧ. ಯಾವುದೋ ಪುಷ್ಪೋಧ್ಯಾನದಲ್ಲಿದ್ದಂತೆ. ಸ್ನೋ ಬಳಿದುಕೊಂಡು ನಿಂತ ಪ್ರತೀ ಶಿಖರದಿಂದ ಸಣ್ಣಗೆ ಝರಿಗಳು ಉದಿಸಿದ್ದವು. ಸ್ವಲ್ಪ ದೂರದಲ್ಲೇ ಮಿಲಿಟರಿ ತಪಾಸಣಿ.  ಪುಷ್ಪಕಣಿವೆಯಲಿ ಅಂಗಾತ ಮಲಗಿ ಹೂ ಪರಿಮಳ ಹೀರಿದೆವು. ಶ್ವಾಸಕೋಶದ ತುಂಬಾ  ಹೂ ಗಂಧ. ಕ್ಯಾಮರ ಜೋಳಿಗೆಗೆ ಒಂದಿಷ್ಟು ಚಿತ್ರ ಸೇರಿದವು. ಅಲ್ಲೇ ಬುತ್ತಿಯನ್ನು ಹೊಟ್ಟೆ ದೇವರಿಗೆ ಅಪರ್ಿಸಿದೆ ! ಜಠರಾಗ್ನಿಆರಲಿಲ್ಲ!
ಮಧ್ಯಾಹ್ನದ ನಡುವಿಗೆ ತಲುಪಿದ ಗಡಸರ್ ಸುಂದರಿ ನಮ್ಮೆದುರು ನಗ್ನಳಾಗಿದ್ದಳು! ಮುಡಿಯತುಂಬಾ  ಸ್ನೋ ಬಳಿದು ಸೊಂಟಕ್ಕೆ ಹೂವ ಹೊದ್ದು ಗಿರಿಗಳ ನಡುವೆ ವೈಯಾರ          ತೋರಿದಳು. ನಾಚುತ್ತಲೇ ನೋಡಿಕೊ ಎಂದಳು! ಅವಳನ್ನೇ ಧ್ಯಾನಿಸುತ್ತಾ ತುಂಬಾ ಹೊತ್ತು ಕಳೆದೆ. ಮನಸೊ ಇಚ್ಚೆ ಕ್ಯಾಮಾರದಲ್ಲಿ ಗಡಸರ ಸರೋವರದ ಸೌಂದರ್ಯ ತುಂಬಿಕೊಂಡೆ. 14,000 ಅಡಿಗಳೇರಿದ ಸಾಹಸಕ್ಕೆ ಕೊಂಬು ಮೂಡಿಸಿತ್ತು ನಮಗೆ. ಮುಂದಿನ ಮೂರು ಗಂಟೆಗಳ ನಡಿಗೆ ಎಲ್ಲಾ ಕೊಂಬು ಕಹಳೆಯನ್ನು ಕತ್ತರಿಸಿ ಹಾಕಿ ಬಿಟ್ಟಿತ್ತು. ಹೂ ಪ್ರಾರ್ಥನೆಗೂ ಕರಗದ ಕಣಿವೆಯ ಕಾಲು ಹಾದಿ. ಹೂವ ಹಾಸಿಗೆಯಲಿ ಸೀಳು ಮಾಡಿದಂತಹ ಎಂದೂ ಮುಗಿಯದ ತಿರುವು ಮುರುವು ದಾರಿ. ಸೂರ್ಯನಾಗಲೇ ನೆತ್ತಿ ಸುಡುತಲಿದ್ದ. ಅತಿ ವಿಶಿಷ್ಟ ಕ್ಯಾಂಪ್ ಸೈಟ್ಗೆ ತಲುಪಿದಾಗ ಐದುಗಂಟೆ. ಬಂದವರೆಲ್ಲಾ ಸುಸ್ತಾಗಿ ಬಿಡಾರದಲ್ಲಿ ಕನಸ ಹೆಕ್ಕ ತೊಡಗಿದ್ದರು. ನಾನು ಝರಿಯೊ ಂದರಲಿ ಸ್ನಾನಕ್ಕಿಳಿದೆ. ಐಸ್ ಬಗರ್್ಒಂದನ್ನು ಮಾತಾಡಿಸಿ ಬಂದೆ. ಅದರ ರಸ ಹೀರಿದೆ. ನಮ್ಮೆಲ್ಲಾ ಶಕ್ತಿಯನ್ನು ಬೆತ್ತಲೆಮಾಡಿಕೊಂಬು ಮುರಿದ ಶ್ರೇಯಾ ಇಂದಿನ ದಿನಕ್ಕೆ ಸಲ್ಲುತ್ತದೆ. ಬರೋಬ್ಬರಿ 16.ಕಿ.ಮೀ ನಡಿಗೆ ಎಲ್ಲರನ್ನೂ ಹೈರಾಣವಾಗಿಸಿತ್ತು. ನಾನಂತೂ ಪ್ರೆಶ್ ಇದ್ದೆ. ಏನೋ ಸಾಧಿಸಿದ ಪುಳಕ ನನ್ನ ಆವರಿಸಿತ್ತು. 
ಮೇ ತಿಂಗಳನಲಿ ಕುರಿ ಮೇಯಿಸಲು ಬಂದಕುಟುಂಬ ಒಂದು ಹೊಟ್ಟೆ??ರಿ?? ಲಸ್ಸಿ ಕೊಟ್ಟು ಹೊಟ್ಟೆತಂಪು ಮಾಡಿದರು. 200ಕ್ಕೂ ಹೆಚ್ಚು ಕುರಿಗಳ ಮಾಲಿಕನಾತ. ಒಂದುಕುರಿ 20 ರಿಂದ 100 ಸಾವಿರದವರೆಗೆ??ಕರಿಆಗುತ್ತೆಎಂದ. ಅಕ್ಕಿ ದಾಲ್ಎಲ್ಲವನ್ನೂಗಂಗ್ ಬಲ್ನಿಂದತರಬೇಕುಎಂದು ನಮ್ಮನ್ನುಅಚ್ಚರಿಗೆ??ಡಹಿದ. ನಮ್ಮ ನಾಲ್ಕು ಪಟ್ಟುಇವರ ನಡಿಗೆ.ದೈಹಿಕ ಪರಿಶ್ರಮಅಚ್ಚರಿಪಡುವಂತಹದು. ಅರ್ಧಲೀಟರ್ ಹಾಲು ಕೊಡುವಕುರಿಇಲ್ಲಿನತಂಪು ಹವೆಗೆ ಒಂದುವರೆ ಲೀಟರ್ ಹಾಲು ಕೊಡುತ್ತದೆ. ಎಂದು ಸಂತಸದಿಂದ ಮತ್ತಷ್ಟು ಲಸ್ಸಿ ಸುರಿದ. ಗುಡ್ಡಗಳಲ್ಲಿ ಬೆಳೆದ ಸೊಪ್ಪನ್ನುತನ್ನ ವಿಶಿಷ್ಟ ಕತ್ತಿಯಿಂದ ಕತ್ತರಿಸಿ ದಾಲ್ನೊಂದಿಗೆ ಸೇರಿಸಿ ವಿಶಿಷ್ಟ್ಯ ಅಡುಗೆ ಮಾಡುವರು. ನಮ್ಮನ್ನು ಉಣ್ಣಲು ಆಹ್ವಾನಿಸಿದ್ದರು. ಇವರು ಪ್ರಕೃತಿಯೊಂದಿಗೆ ಬೆರೆತು ಬದುಕುವ ಪರಿ ಅಚ್ಚರಿ !
ಅನಾಮಿಕ ಕುರಿಗಾಹಿ 


ನಮ್ಮ ಗುಡಾರಗಳ ಸನಿಹವೇ ಒಂದು ಕುಟುಂಬ ವಾಸವಾಗಿತ್ತು. ಅವರನ್ನೂ ಮಾತನಾಡಿಸಿ ಬಂದೆವು. ಒಂದಿಷ್ಟು ಪೋಟೋ ನೈವೇದ್ಯವಾಯಿತು. ಸಂಜೆ ಹೊತ್ತಿಗೆ ನಾವು ತೆರಳುವ ಗಂಗ್ಬಲ್ ಸರೋವರದಲಿ ಮಳೆರಾಯನ ಆರ್ಭಟವಿದೆ ಎಂದು ಆಕಾಶವಾಣಿ ಆಯಿತು. 
ಏಳು ಮವತ್ತರ ಸುಮಾರಿಗೆ ಉಂಡು ಗುಡಾಣವಾದ ಹೊಟ್ಟೆಯೊಂದಿಗೆ ಗುಡಾರ ಸೇರಿ ನಿದ್ರಾ ನದಿಯಲಿ  ಈಸತೊಡಗಿದೆವು!   
ದಿನ :5-

ಗಡ ಸರ್ ನಿಂದ ಗಂಗ್ ಬಲ್ ವರೆಗೆ 

ಗಡ್‌ ಸರ್‌ ಪಾಸ್



ಗಡ ಸರ್ನಿಂದ ಸಾತ್ಸರ್ ಸರೋವರದವರೆಗೆ ಮುಂದಿನ ಕತೆಯನ್ನು ಸ್ಪಲ್ಪ ಫಾಸ್ಟ್ ಪಾರ್ವಡ್ ಮಾಡುವೆ. 

ಚುಮು ಚುಮು ಚಳಿಗೆ ಕಾಫಿ ಹೀರಿ ತಿಂಡಿ ಸವಿದು ಜಾರುವ ಹಿಮಗಡ್ಡೆಯಲಿ ಸತೀಶ ಅಣ್ಣನ ಕೈ ಹಿಡಿದು ಬೆಟ್ಟದಲಿ ್ಲ  ಕಾಣುವ ಗೆರೆಗಳಂತಹ ದಾರಿಗೆ ದಾಟಿಕೊಂಡೆವು. ಏರು ಪ್ರಯಾಣ. ನಮ್ಮ ಏಕಾಂತಕ್ಕೆ ಸಾವಿರ ಸಾವಿರ ಹೂಗಳ, ಸ್ಟ್ರಾಬೆರಿ ಹಣ್ಣುಗಳ ಸಾತ್. ಹನಿ ಮಳೆಗೆ ಮನಸ್ಸು ನವಿಲಾಗಿತ್ತು. ಹನಿ ಮಳೆಗೆ ಚಿತ್ರ ತೆಗೆಯದಂತೆ ತಡೆದ ಹನಿ ಮಳೆಗೆ ಹನಿ ಶಾಪ! ಸುತ್ತಲಿನ ಆಹ್ಲಾದಕರ ವಾತಾವರಣಕ್ಕೆ ಮನಸೊತಿತ್ತು. 



ಏರಿಳಿತದ ದಾರಿಯಲಿ ಗೆಳೆಯರನ್ನು ಗೋಳು ಹೊಯ್ದುಕೊಳ್ಳುತ್ತಾ ಅತಿ ಸುಂದರ ಸಾತ್ ಸರ್ ಸರೋವರವನ್ನು ತಲುಪಿಸಿದೆವು. ಜಾರುವ ಕಲ್ಲುದಾರಿ, ಹಿಮಝರಿಗಳು ನಮ್ಮ ತಂಡದವರನ್ನು ಸಾಕಷ್ಟು ಗೋಳು ಹೊಯ್ದುಕೊಂಡಿತು. ಎರಡು ಝರಿಗಳನ್ನು ದಾಟಿದ್ದು ಎಲ್ಲರಿಗಿಂತ ಮೊದಲಿಗನಾಗಿ ಬಂದಿದ್ದು ನನ್ನ ಸಾಧನೆ.


ಸಾತ್‌ ಸರ ಸರೋವರದ ಸನಿಹದ ಗುಡಾರಗಳು..


ಚಳಿಯಲ್ಲಿ ಕುಳಿತು ದಾಲ್ ಚಾವಲ್ ಸವಿದಿದ್ದು ಒಂದು ಅನನ್ಯ ಅನುಭೂತಿ. ಸಹ ಚಾರಣಿಗರು ಶತಮಾತದಿಂದ ನಿದ್ದೆಯೇ ಮಾಡದವರಂತೆ ತಮ್ಮ ನಿದ್ರಾ ಚೀಲದೊಳಗೆ ಅವಿತರು. ಹೊರಗಡೆಯ ಮಳೆಗೆ ಹೊಟ್ಟೆಯೊಳಗಿನ ದಾಲ್ ಚಾವಲ್ನ ಜುಗಲ್ ಬಂದಿ. ಸಂಜೆ ಹೊತ್ತಿಗೆ ಯಾರಿಗೂ ಸತ್ ಸರ್ ಸರೋವರ ನೋಡುವ ಮನಸ್ಸು ಯಾರಿಗೂ ಇರಲಿಲ್ಲ. ಗುಡಾರದಲ್ಲೇ ಅವಿತೆವು.

ಕುತ್ತಿಗೆ, ಕೈಯಚರ್ಮ ಬಿಸಿಲಿಗೆ ಸುಟ್ಟು ಗರಿಗರಿ ಹಪ್ಪಳದಂತಹ ತುಣುಕುಗಳು ಎದ್ದು ಬರುತ್ತಿದ್ದವು. ಆಕಾಸವು ಬಿಕ್ಕುತ್ತಿತು. ಗೆಳೆಯ ನಾಗರಾಜ ವೈದ್ಯರ ಸಲಹೆ ಧಿಕ್ಕರಿಸಿ ಸ್ಟ್ರಾಬೆರಿ ಮುಕ್ಕಿ ಪಾಯಿಖಾನೆಗೆ ಮಾರ್ಚ್ ಫಾಸ್ಟ್ ಮಾಡಿದ. ನನಗೂ ಹೊಟ್ಟೆಯಲ್ಲಿ ಸಣ್ಣ ಗುಡು ಗುಡು. ಪುಣ್ಯಕ್ಕೆ ಏನೂ ಆಗದೆ ಬಚಾವ್ ಆದೆ.  

ಅಂದು ಬಹು ಬೇಗ ನಿದ್ದೆ ಮಾಡಿ ದಿನಕ್ಕೆ ಚಾದರ ಹೊದಿಸಿದೆವು.

ಗಡ್‌ ಸರ್‌ ಸರೋವರ ಗಡ್‌ ಸರ್‌ ಪಾಸ್‌ ನಿಂದ

ದಿನ -6 

ಸಾತ್ ಸರ್ ನಿಂದಗಂಗ್ ಬಲ್ ಸರೋವರಕ್ಕೆ.


ಸಾತ್ ಸರ್ಗುಡಾರದಿಂದ ಗಂಗ್ಬಲ್ ಕಡೆಗೆ ಬೆಳಿಗ್ಗೆ 8ಕ್ಕೆ ಹೊರಟೆವು. ಮೊದಲೆರಡುಗಂಟೆ ಕಲ್ಲುಗಳೊಂದಿಗೆ ಸರಸಕ್ಕೆ ಬಿದ್ದೆವು. ದಾರಿಯುದ್ದಕ್ಕೂ ಬಂಡೆಗಳೇ ಬಂಡೆಗಳು ಅವುಗಳಿಂದ ದಾರಿತಪ್ಪಿದ್ದೂ ತಿಳಿಯಲಿಲ್ಲ.
ಸುಮಾರು ಮೂರುಗಂಟೆ ಮಂಜು ಕವಿದದಾರಿಯಲಿ ನಡೆದು ಮೂರನೆಯ ಜಾಜ್ ಪಾಸ್  ತಲುಪುವಷ್ಟರಲ್ಲಿ ಎಲ್ಲರೂ ಸುಸ್ತೋ ಸುಸ್ತು. ತುದಿಯಲಿ ಸ್ವಲ್ಪವೇ ಹಿಮ ಕವಿದಿತ್ತುತುದಿ ತುಲುಪಿ ಹಿಮದಲಿ ಸ್ವಲ್ಪ ಹೊತ್ತು ಆಟ ಆಡಿದೆವು. ಜಾಜ್ ಪಾಸ್ ತುದಿಯಲ್ಲಿ  ಕುಳಿತು ಸುಮದುರ ಹಿಂದಿ ಕವಿತೆ ಹಾಡಿಕೊಂಡೆವು. ಮೊದಲುತಲುಪಿದ ನಮಗೆ ಗಂಗ್ ಬಲ್ ಸರೋವರ ತನ್ನ ಅಪೂರ್ವ ದೃಶ್ಯಾವಳಿಯನ್ನು ತೋರಿಸಿ ತಣಿಸಿತ್ತು. ನಾವು ಏರಿದ ಸ್ವಲ್ಪ ಸಮಯಕ್ಕೆ ಮೋಡ ಮುಸುಕಿ ಕಾಣದಾಗಿತ್ತು. ಎರಡು ದಿನಗಳಿಂದ ಮಳೆ ಮೋಡದ ಕಣ್ಣಾಮುಚ್ಚಾಲೆ ನಡದೇ ಇತ್ತು. ಮನಮೋಹಕ ಗಂಗ್ಬಲ್ ತಲುಪುವುದು ಯಾವಾಗ ಎಂದು ತವಕಿಸುತ್ತಲೇ ಕಣಿವೆಗೆ ಇಳಿಯ ತೊಡಗಿದೆವು. ಸುಮಾರುಎರಡುಗಂಟೆಯ ಹೊತ್ತಿಗೆ ಗಂಗ್ ಬಲ್ ಸರೋವರದಲ್ಲಿದ್ದೆವು. ಗಂಗ್ ಬಲ್ನ ಸೌಂದರ್ಯವನ್ನು ಮನಸಾರೆ ಸವಿದು ಹರಮುಖ್ ಶಿಖರವನ್ನು ಕಣ್ಣಲೇ ಧ್ಯಾನಿಸಿ ಅಲ್ಲೇ ಬಿಡಾರ ಹೂಡಿದ್ದ ಮೀನುಗಾರರನ್ನು ಮಾತಾಡಿಸಿದೆವು.
ಸರೋವರದ ನೋಟ

ಬೆಳಕಿನಾಟ ಗಂಗ್‌ ಬಲ್‌ ಸರೋವರದಲಿ.


ಗಂಗ್ ಬಲ್ ಸರೋವರ ನಾವು ನೋಡಿದ ಸರೋವರಗಳಲ್ಲಿ ಅತ್ಯಂತದೊಡ್ಡದ್ದು. ಇದರ ನೀರು ಹರ್ಮುಖ ಶಿಖರದ ಎಂದೂ ಮುಗಿಯದ ಹಿಮದಿಂದ ಉತ್ಪತ್ತಿಯಾಗುತ್ತದೆ. 
ಯಾರು ಚಾರಣ ಮಾಡದ ಹರಮುಖ ಶಿಖರದ ಹಿಮದಿಂದಲೇ ತನ್ನೊಡಲನ್ನು ತುಂಬಿಸಿಕೊಳ್ಳುತ್ತಿರುವ ಗಂಗ್ ಬಲ್ ಸರೋವರ ನೋಡುತ್ತಲೇ ದಂಗಾದೆವು. ವಿಶಾಲ ಆಕಾಶ ಚಪ್ಪರದಡಿ ಒಂದೆಂಡೆ ಗಂಗ್ ಬಲ್ ಸ್ಥಿರವಾಗಿನಿಂತಿದೆ. ಶಿಖರದ ನೆತ್ತಿಯಲಿ ಶಿವನ ಆರಾಧನೆ ನಡೆಯುತ್ತದೆ. ಇಲ್ಲಿಗೆ ಮೊದಲ ಚಾರಣ 1856ರಲ್ಲಿ ನಡೆದಿತ್ತು. ಆಗ ಏ-2  ನ ಇರುವಿಕೆಯನ್ನು ಗುರುತಿಸಲಾಯಿತು. ಅಲ್ಲಿನ ಮಿಲಿಟರಿಯವರು ವಿವರಿಸುವಂತೆ ಈ ಶಿಖರವನ್ನು ಹೆಲಿಕಾಫ್ಟರ್ ಸಹ ದಾಟಿ ಹೋಗಲ್ಲ. ಗಂಗ್ ಬಲ್ ಸರೋವರದ ಸನಿಹವೇ ನಂದಕೋಲ್ ಸರೋವರ ಹರಡಿ ಹಬ್ಬಿದೆ. ಸಪ್ತ ಸರೋವರದ ಕೊನೆಯ ಸರೋವರ ನಂದ್ಕೋಲ್ ಸರೋವರ. ಅದನ್ನು ಕಣ್ತುಂಬಿ ಕೊಂಡು ಗುಡಾರದ ಕಡೆ ನಡೆದೆವು.
ನಂದ್ ಕೋಲ್ ಸರೋವರದಿಂದ ಹೊರಟ ಝರಿಯೊಂದು ಕಣಿವೆಗೆ ಇಳಿಯುತ್ತಿತ್ತು. ಜೊತೆಗ ಅದನ್ನು ದಾಟಲು ನಮ್ಮನ್ನು ಸುಸ್ತು ಬೀಳಿಸಿತ್ತು. ಪ್ರವಾಹೋಪಾದಿಯಲಿ ಹರಿವ ನೀರಿಗೆ ಕಿರಿದಾದ ಮರದ ದಿಮ್ಮಿಯೊಂದನ್ನು ಅಡ್ಡಲಾಗಿ ಇರಿಸಲಾಗಿತ್ತು. ದಾಟುವಾಗ ಹೃದಯವೇ ಬಾಯಿಗೆ ಬಂದಿತು. ಸ್ನೇಹಿತರ ಹಾಗೂ ಗೈಡ್ ನ ಸಹಾಯ ಪಡೆದು ಅಂತೂ ದಾಟಿದೆ. ಪಾಪಿ ಚಿರಾಯು!

ಗುಡಾರಗಳ ಎದುರಿಗೆ.

ಸತೀಶ್‌ ನಾಗರಾಜ್‌ ಮತ್ತು ಲಕ್ಷೀ ನಾರಾಯಣ. 

ಆರ್ಕಿಡ್ಗಳ ಗುಚ್ಚ

ಗಂಗ್‌ ಬಲ್‌ ಸರೋವರ


ನಮ್ಮ ಗುಡಾರಕ್ಕೆ ಬರುತ್ತಲೇ ಬಿಸಿ ಚಹ, ಬೋಂಡಾ ಮತ್ತು ವಿಪರೀತ ಮಳೆ ಸ್ವಾಗತ ಕೋರಿತು.  ಮಳೆ ಹನಿಗೆ ಪುನಃ  ಮಗುವಾಗಿ ಚಹ ಹೀರತೊಡಗಿದೆ.
ನಮ್ಮ ತಂಡದ ಅನೇಕರು ಗಂಗ್ಬಲ್ ನೋಡದೆ ಗುಡಾರಕ್ಕೆ ಬಂದು ಬಿದ್ದು ಮರುದಿನವೂ ನೋಡಲಾಗದೆ ಕೈ ಕೈ ಹಿಸುಕಿ ಕೊಂಡರು.

ದಿನ -7

ಗಂಗ್ಬಲ್ ಸರೋವರದಿಂದ ನಾರಾನಾಗಕ್ಕೆ

ಎಷ್ಟೊಂದು ರೋಚಕ ಸಾಹಸಗಳಿಗೆ ಮುನ್ನುಡಿ ಬರೆದ ಚಾರಣದ ಬೆನ್ನುಡಿ ಇನ್ನೂ ರೋಚಕ!
ಏಳು ಸರೋವರನೋಡಿದ ಖುಷಿ, ಮಳೆ ಹಿಡಿಸಿದ ಕಸಿವಿಸಿಯಿಂದ ಪ್ರಾರಂಭವಾದ ದಿನ ಕೊನೆಗೆ ಸುಖವಾದ ಸುಪತ್ತಿಗೆಯ ಜೊತೆಗೆ ಹಂಸತೂಲಿಕದ ಯೋಚನೆಯಿಂದ ಕೊನೆಯ ದಿನದ ತೂಕವೇ ಬೇರೆ. ವಿಪರೀತ ಕಲ್ಲಿನ ರಾಶಿಯನ್ನು ದಾಟಿಕೊಂಡು, ಓಕ್ ಮರಗಳ ದಾರಿಯಲ್ಲಿ ಹನಿಮಳೆಯಲ್ಲಿ ನಡೆಯುತ್ತಾ ಸುಮಾರು 16 .ಕಿಮೀ ಚಾರಣವನ್ನು ಜಾರುವ ಹಾದಿಯಲ್ಲಿ ಸುಮನೋಹರ ಚಿತ್ರಗಳನ್ನು ತೆಗೆಯುತ್ತಾ ಸಂಜೆ 4ರ ವೇಳೆಗೆ ನಾರಾನಾಗ್ ಪಟ್ಟಣತಲುಪಿ ಅಲ್ಲಿಂದ ಶ್ರೀನಗರಕ್ಕೆ ಬಂದೆವು. ಅತ್ಯಂತ  ಕಠಿಣವೂ ಅಹ್ಲಾದಕರವೂ ಚಾರಣಕ್ಕೆ ತೆರೆಬಿದ್ದಿತು. 
ಸಪ್ತ ಸರೋವರದ ಚಾರಣ ಚಿತ್ರ ಹರವಿ ಕೂತಾಗ ಉಂಟಾಗುವ ಪ್ರಸನ್ನತೆ ಹೇಳ ತೀರದು. ಈ ವಿಶಿಷ್ಟ ಚಾರಣ ಸದಾ ನನ್ನ ನೆನಪಿನ ಕನ್ನಡಿಯೊಳಗೆ ಜೀವಂತ!  ಮಿಲಿಟರಿಯವರ ಜೀವನ ಹಾಗೂ ಕುರುಬರ ಜೀವನ ತಿಳಿಯಲು ಹೂ ಘಮವನ್ನು ಆಘ್ರಾಣಿಸಲು ನೀವೊಮ್ಮೆ ಕಾಲಿನಲ್ಲಿ ಕುಸುವಿರುವಾಗಲೇ ಬರಬಾರದೇಕೆ?


ನಾರಾನಾಗನ ವಿಹಂಗಮ ನೋಟ.



ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...