Saturday, July 4, 2020

ಭಯಂಕರ ಹೆಸರಿನ ಊರುಗಳು!


ನಾನು ಇಂಗ್ಲೆಡ್ನಲ್ಲಿ ಓದುವ ಸಮಯದಲ್ಲಿ ಲಿಂಕನ್ ಷೈರ್ ಎಂಬ ಊರಿಗೆ ಹೋಗಿದ್ದೆ. ಅದು ಸುಂದರವಾದ ಊರು.  ನಿಸರ್ಗದ ಸೊಬಗನ್ನೆಲ್ಲಾ ಸೂರೆ ಹೊಡೆದು ಅವತರಿಸಿದಂತಿರುವ ಊರು. ಅಲ್ಲಿಂದ ತುಸು ದೂರದಲ್ಲಿ ಒಂದು ಹಳ್ಳಿ ಇದೆ. ನಾನಲ್ಲಿ ಇಡೀ ದಿನ ಉಳಿದಿದ್ದೆ. ಅಲ್ಲಿಂದ ವಾಪಾಸು ಬಂದ ನಂತರ ಅನೇಕ ಸ್ನೇಹಿತರು 'ಎಲ್ಲಿ ಹೋಗಿದ್ದೆ?' ಎಂದು ಕೇಳಿದರೂ ಹೇಳಲು ಏನೋ ಮುಜುಗರ.



ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಕ್ಕಪಕ್ಕದಲ್ಲಿ ಮೂರು ಊರುಗಳಿವೆ.  ಆ ಮೂರು ಊರುಗಳ ಹೆಸರುಗಳನ್ನು ಒಂದೇ ಉಸುರಿಗೆ ಹೇಳಿದರೆ ಅಭಾಸವಾಗುತ್ತದೆ. ಅಂದಹಾಗೆ ಆ ಊರುಗಳ ಹೆಸರು ಬಾರೆ, ಸೀರೆ, ಕಳಚೆ'. ಕೆಲವು ಸಲ ಆ ಊರಿನ ಜನರಿಗೆ ತಮ್ಮ ಊರಿನ ಹೆಸರನ್ನು ಹೇಳಲು ಮುಜುಗರವಾಗಲೂಬಹುದು. 
ಅದೇ ರೀತಿ ಇಂಗ್ಲೆಂಡ್ನ ಲಿಂಕನ್ಷೈರ್ ಸನಿಹದ ಹಳ್ಳಿ ಹೆಸರನ್ನು ಹೇಳಲು ಸಹ ಮುಜುಗರವಾಗುತ್ತದೆ. ಕಾರಣ ಅಲ್ಲಿನ ಅವಳಿ ಊರುಗಳ ಹೆಸರು ಬಿಚ್(BITCH ) ಹಾಗೂ ಬಿಚ್ಪೀಲ್ಡ್ (BITCHFEILD ) ಪ್ರಾನ್ಸ್ನಲ್ಲೂ ಇದೇ ಹೆಸರಿನ ಒಂದು ಊರಿದೆಯೆಂದು ಅಲ್ಲಿಗೆ ಹೋದಾಗ ಗೊತ್ತಾಯಿತು.
ಬೋರಿಂಗ್ ಹೆಸರಿನ ಒಂದು ಊರು ಇರಲು ಸಾಧ್ಯವಾ? ಆ ಊರಿನ ಜನ ಹೇಗಿದ್ದಿರಬಹುದು? ಅವರಿಗೆ ಆ ಹೆಸರಿನ ಬಗ್ಗೆ ಯಾವ ಅಭಿಪ್ರಾಯವಿದ್ದಿರಬಹುದು?
ಕೆಲವು ವರ್ಷಗಳ ಹಿಂದೆ ನಾನು ಸ್ಕಾಟ್ಲ್ಯಾಂಡ್ ರಾಜಧಾನಿ ಎಡಿನಬರ್ಗ್ ಗೆ ಹೋಗಿದ್ದೆ. ಅಲ್ಲಿಂದ ನಾನು ಪೋರ್ಟ್ ಮ್ಯಾನ್ ಫೀಲ್ಡ್ಗೆ ಹೋಗಬೇಕಿತ್ತು. ನನ್ನ ಜತೆಗಿದ್ದ ಸ್ನೇಹಿತ 'ಇಲ್ಲೇ ಸನಿಹದಲ್ಲಿ ಒಂದು ಊರಿದೆ. ಅದರ ಹೆಸರು ಡಲ್ ಅಂತ. ಅದರ ಪಕ್ಕ ಮತ್ತೊಂದು ಊರಿದೆ. ಅದರ ಹೆಸರು 'ಬೋರಿಂಗ್' ಎಂದ. ಕುತೂಹಲ ತಾಳಲಾರದೇ ಆ ಊರಿಗೆ ಹೋಗಿದ್ದೆ. ಬೋರಿಂಗ್ ನಿಜಕ್ಕೂ ಲವಲವಿಕೆಯ ಊರು. ಶೀತ ಜಾಸ್ತಿಯಾಗಿರುವುದರಿಂದ ವರ್ಷದ ಹೆಚ್ಚಿನ ಅವಧಿ ಚಟುವಟಿಕೆ ಕಮ್ಮಿಯಾಗಿರುತ್ತದೆ. ಆ ಕಾರಣದಿಂದ ಆ ಹೆಸರು ಬಂದಿರಬಹುದೆ ಎಂಬುದು ಅಲ್ಲಿನ ಸ್ಥಳೀಯರ ಅಭಿಪ್ರಾಯ. ಆದರೆ ಅವರ್ಯಾರಿಗೂ ತಮ್ಮ ಊರಿನ ಹೆಸರಿನ ಬಗ್ಗೆ ಬೇಸರವಾಗಲಿ ಅತೃಪ್ತಿಯಾಗಲಿ ಇದ್ದಂತಿಲ್ಲ. ಕೆಲವರಿಗಂತೂ ಆ ಹೆಸರಿನಿಂದಾಗಿಯೇ ತಮ್ಮ ಊರು ಜನಪ್ರಿಯವಾಗಿರುವುದರಿಂದ, ಆ ಬಗ್ಗೆ ಅಭಿಮಾನವಿದ್ದಂತಿತ್ತು.
ಅಮೇರಿಕದ ಮೇರಿಲ್ಯಾಂಡ್ನಲ್ಲಿ ಸಹ ಬೋರಿಂಗ್ ಹೆಸರಿನ ಊರಿದೆಯೆಂಬುದು ಸ್ಕಾಟ್ ಲ್ಯಾಂಡ್ನಲ್ಲಿರುವ ಬೋರಿಂಗ್ಗೆ ಹೋದಾಗ ಗೊತ್ತಾಗಿದ್ದು. ಮೇರಿಲ್ಯಾಂಡ್ನಲ್ಲಿರುವ ಬೋರಿಂಗ್ಗೆ ಆ ಊರಿನಲ್ಲಿರುವ ಪೋಸ್ಟಮನ್ ಡೆವಿಡ್ ಬೋರಿಂಗ್ ಕಾರಣ. ಅವನ ಸ್ಮರಣಾರ್ಥ ಆ ಹೆಸರನ್ನು ಆ ಊರಿಗೆ ಇಡಲಾಗಿದೆ. ಅಮೆರಿಕದ ಟೆನಿಸ್ಸಿ ರಾಜ್ಯದಲ್ಲೂ ' ಬೋರಿಂಗ್' ಎಂಬ ಊರಿದೆ ಎಂದು ಕೇಳಿದ್ದೇನೆ. ಕೆಲವು ವರ್ಷಗಳ ಹಿಂದೆ, ಇಟಲಿಯ ಸನಿಹದ ಟುರಿನ್ ಎಂಬ ನಗರಕ್ಕೆ ಹೋಗಿದ್ದೆ. ಅಲ್ಲಿಗೆ ಸುಮಾರು ಐವತ್ತು ಕಿ.ಮೀ ದೂರದಲ್ಲಿ ಪೀಡ್ಮಾಂಟ್ ಎಂಬ ಪ್ರಾಂತವಿದೆ. ಅಲ್ಲೊಂದು ತೀರಾ ಅಪರೂಪದ, ಹೇಳಲು ನಾಚಿಕೆಪಡುವ ಊರಿದೆ.

ಬ್ರಾ!

ಆ ಊರಿನ ಹೆಸರು ನಿಮಗೆ ಗೊತ್ತಿರಬಹುದು, ಫಾಸ್ಟ್ಪುಡ್ ಬದಲಿಗೆ ಸ್ಲೋಪುಡ್ ಹೋರಾಟ ಮಾಡಿದ ಕಾರ್ಲೋ ಪೆಟ್ರಿನಿ ಈ ಊರಿನಿಂದಲೇ ತನ್ನ ಅಭಿಯಾನ ಆರಂಭಿಸಿದ್ದು. ಆಗ ಕೆಲವು ಪತ್ರಿಕೆಗಳು Slow food campaign starts from bra ಎಂಬ ತಲೆಬರೆಹ ಕೊಟ್ಟಿದ್ದವು. 
'ಬ್ರಾ ಊರಿಗೆ ಹೋಗ್ತೀನಿ' ಅಂದ್ರೆ ಯಾರಾದರೂ ತಪ್ಪು ಭಾವಿಸಬಹುದು. 'ನೀವು ಯಾವ ಊರಿನಲ್ಲಿದ್ದೀರಿ?' ಎಂದು ಕೇಳಿದಾಗ 'ನಾನು ಬ್ರಾದಲ್ಲಿದ್ದೇನೆ' ಎಂದರೆ ಏನಾಗಬಹುದು? 
ವಿಜಯಪುರದ ಸನಿಹದಲ್ಲಿರುವ 'ಹುಡುಗಿ' ಊರಿಗೆ ಹೋಗುವಾಗ ಬಸ್ ಕಂಡಕ್ಟರ್ ಬಳಿ ' ಒಂದು ಹುಡುಗಿ ಕೊಡಿ'( ಹುಡುಗಿಗೆ ಹೋಗಲು ಒಂದು ಟಿಕೆಟ್ ಕೊಡಿ ಎನ್ನುವ  ಬದಲು) ಎಂದು ತಮಾಷೆ, ಚೋದ್ಯ ಮಾಡಲು ಹಾಗೆ ಹೇಳುವುದುಂಟು. ಅದೇ ರೀತಿ ಬ್ರಾ ಊರಿಗೆ ಹೋಗುವಾಗಲೂ 'ಒಂದು ಬ್ರಾ ಕೊಡಿ, ಎರಡು ಬ್ರಾ ಕೊಡಿ' ಎಂದು ಕಂಡಕ್ಟರ್ಗೆ ಹೆಳುವ ಪ್ರಸಂಗ ತಮಾಷೆಯಾಗಿದ್ದೀತು. ಹೆಂಡತಿಯೇನಾದರೂ ಟಿಕೆಟ್ ತೆಗೆಯುವ ಪ್ರಸಂಗ ಬಂದರೆ, ' ನನ್ನ ಗಂಡನಿಗೊಂದು ಬ್ರಾ ಕೊಡಿ' ಅಂದರೆ ಕಂಡಕ್ಟರ್ ನಗದೇ ಇರುತ್ತಾನಾ?
ಬ್ರಾ ಊರು ಚೀಸ್ಗೆ ಬಹಳ ಪ್ರಸಿದ್ಧ. ಲಕ್ಷಾಂತರ ಜನ ಸೇರಿ ಪ್ರತಿವರ್ಷ ಇಲ್ಲಿ ಚೀಸ್ ಹಬ್ಬವನ್ನು ಆಚರಿಸುತ್ತಾರೆ. Eat cheese from bra, Bra for cheese, As exotic as bra ಮುಂತಾದ ಹೋರ್ಡಿಂಗ್ ಬರಹಗಳು ಅಲ್ಲಿ ಎಲ್ಲೆಡೆ ರಾರಾಜಿಸುತ್ತವೆ. He was born in bra  ಎಂದು ಹೇಳಿದರೆ ಯಾರಾದರೂ ತಪ್ಪು ಭಾವಿಸದಿರುವುದುಂಟಾ? ಹಾಗೆಯೇ ಈ ಊರನ್ನು ಬಣ್ಣಿಸುತ್ತಾ Bra is beautiful  ಅಂದರೆ?!!
ಬ್ರಾ ಎಂಬ ಊರು ಇದ್ದ ಮೇಲೆ ಬ್ರೆಸ್ಟ್ ಎಂಬ ಊರು ಇರಲೇಬೇಕಲ್ಲ? ಒಂದಿದ್ದರೆ ಮೊತ್ತೊಂದು  ಇರಲೇಬೇಕು ತಾನೆ? ಮೂರು ವರ್ಷಗಳ ಹಿಂದೆ ಫ್ರಾನ್ಸ್ನ ಪ್ಯಾರಿಸ್ ನಗರದಿಂದ ಮೂರು ತಾಸು ಬಸ್ ಪ್ರಯಾಣ ಮಾಡಿ ಮೌಂಟ್ಸೇಂಟ್ ಮಿಷೆಲ್ನಲ್ಲಿರುವ ಒಂದು ಅರಮನೆಗೆ ಹೋಗಿದ್ದೆ. ಈ ಊರಿಗೆ ಸನಿಹದಲ್ಲೇ ಬ್ರೆಸ್ಟ್ ಎಂಬ ಊರಿದೆ. ಸ್ಪೆಲ್ಲಿಂಗ್ ಮಾತ್ರ ಬೇರೆ ಉಚ್ಚಾರ ಒಂದೇ. ಪ್ರಕೃತಿಯ ಸೊಬಗನ್ನೆಲ್ಲ ಹೊದ್ದು ಅವತರಿಸಿದಂತಿರುವ ಈ ಊರನ್ನು ನೋಡಿದವರು ಆನಂದದಿಂದ ಏನೇ ಉದ್ಗಾರ ತೆಗೆದರೂ ಅಪಾರ್ಥಕ್ಕೆ, ಡಬಲ್ ಮೀನಿಂಗ್ಗೆ ಎಡೆಮಾಡಿಕೊಡುವುದರಲ್ಲಿ ಸಂದೇಹವಿಲ್ಲ.
ನನ್ನ ಆತ್ಮೀಯ ಸ್ನೇಹಿತ ಗುರುಪಾದ ಶಾಸ್ತ್ರಿಯವರು ಎಂಟು ವರುಷಗಳಿಂದ ಅಮೆರಿಕದ ಅರ್ಕನ್ಸಾಸ್ ರಾಜ್ಯದ ಸ್ಟೋನ್ ಕೌಂಟಿ ಸನಿಹದಲ್ಲಿರುವ ಒಂದು ಪುಟ್ಟ ಊರಿನಲ್ಲಿದ್ದಾರೆ. ಆ ಊರಿನ ಜನಸಂಖ್ಯೆ ಇನ್ನೂರು. ಕಳೆದ ಹದಿನೈದು ವರುಷಗಳಲ್ಲಿ ಹನ್ನೆರಡು ಜನಸಂಖ್ಯೆ ಜಾಸ್ತಿಯಾಗಿದೆಯಂತೆ.
ಆ ಊರಿನ ಹೆಸರು ಫಿಫ್ಟಿ ಸಿಕ್ಸ್!
ಇಂಥಹದ್ದೊಂದು ಹೆಸರಿನ ಊರು ಇರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಶಾಸ್ತ್ರಿಯವರು ತಮಾಷೆ ಮಾಡುತ್ತಿದ್ದಿರಬಹುದು ಎಂದೇ ಭಾವಿಸಿದ್ದೆ. ಆದರೆ ಅವರು ತಮ್ಮ ವಿಸಿಟಿಂಗ್ ಕಾರ್ಡ್ ತೋರಿಸಿದಾಗಲೇ ನಂಬಿದ್ದು. ಅವರೇ ಹೇಳಿದ ಇನ್ನೊಂದು ಸಂಗತಿಯೇನೆಂದರೆ, 'ನಂಬರ್ ಹೆಸರಾಗಿರುವುದು ನಾನಿರುವ ಊರಿನಲ್ಲೊಂದೇ ಅಲ್ಲ, ಆಸ್ಟ್ರೇಲಿಯದಲ್ಲಿ 1770 ಎಂಬ ಹೆಸರಿನ ಊರಿದೆ.'
ಗೆಳೆಯ ಎಂ.ಕೆ. ನವೀನ ಮಡಗಾಸ್ಕರ್ ನಲ್ಲಿರುವ ಎಂಪನಿಹಿ ಎಂಬ ಪ್ರಾಂತ್ಯದಲ್ಲಿದ್ದಾರೆ. 'ನೀವು ಯಾವ ಊರಿನಲ್ಲಿದ್ದೀರಿ?' ಎಂದು ಅವರನ್ನು ಕೇಳಿದಾಗ 'ಗೋಗೋಗೋಗೋ' ಎಂದು ಹೇಳಿದ್ದರು. ಅವರ ಮಾತನ್ನು ಕೇಳಿ ನನಗೆ ತೀರಾ ಕಸಿವಿಸಿಯಾಗಿತ್ತು. 'ಏನು ಈ ಮುಷ್ಯ ಹೋಗು ಹೋಗು ಹೋಗು ಹೋಗು ಎಂದು ಹೇಳುತ್ತಿದ್ದಾನಲ್ಲ?' ಎಂದು ಅಂದು ಕೊಂಡಿದ್ದೆ. ಕೊನೆಗೆ ಆ ಊರಿನ ಹೆಸರನ್ನು ವಿವರಿಸಿದಾಗ ಬಿದ್ದು ಬಿದ್ದು ನಕ್ಕಿದ್ದೆ.
ಅಮೆರಿಕಾದ ಕೊಲೊರಡೋದಲ್ಲಿ ಒಂದು ನಗರವಿದೆ ಅದರ ಹೆಸರು ಓಠ ಓಚಿಟಜ. ಹೆಸರಿಲ್ಲದ ಊರು! ವಿದೇಶಗಳಲ್ಲೂ ವಿಚಿತ್ರ ಊರುಗಳ ಹೆಸರುಗಳಿಗೆ ಬರವಿಲ್ಲ.
#ವಿಶ್ವೇಶ್ವರ್ ಭಟ್.
22.10.2017 ರ ವಿಶ್ವವಾಣಿಯ ಭಾನುವಾರದ ವಿಶ್ವೇಶ್ವರ ಭಟ್ ರವರ ವಿದೇಶಕಾಲ ಅಂಕಣದಿಂದ ಆರಿಸಿದ್ದು.


No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...