Sunday, July 16, 2023

ಪ್ಯಾಪಿಲೋ ಬುದ್ಧನ ಹುಡುಕಾಟದಲ್ಲಿ ಸಿಕ್ಕ ಅಪ್ಸರೆ..

    ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ.


   ಇವನೇನು ಹೇಳುವನೆಂದು ಹುಬ್ಬೇರಿಸಬೇಡಿ ಕೆಲವೊಮ್ಮೆಒಂದರ ಹುಡುಕಾಟದಲ್ಲಿರುವಾಗ ಇನ್ನೇನೋ ಸಿಕ್ಕಿ ಎಲ್ಲಿಗೋ ಒಯ್ಯುವುದು. 




ಆಗ ನನ್ನ ಬಳಿ ಪುಟಗೋಸಿ ಸುಣ್ಣದ ಡಬ್ಬಿಯಂತಹ ಚಿಕ್ಕ ಕ್ಯಾಮರವೊಂದಿತ್ತು. ಆಗಿನ ಕಾಲಕ್ಕೆ ಅತಿ ಆಸೆ ಪಡುವಂತಹ ಕನಸು ಕಾಣುತ್ತಿದ್ದೆ. ಚಿಟ್ಟೆಗಳ ಸುಂದರ ಚಿತ್ರ ತೆಗೆಯೋದು.  ಆಗ ನನ್ನ ಕಣ್ಣಿಗೆ ಬಿದ್ದವ ಪ್ಯಾಪಿಲೋ ಬುದ್ದ ಎಂಬ ಸುಂದರ ಚಿಟ್ಟೆ.  ಅದರ ಸೌಂದರ್ಯಕ್ಕೆ ಮಾರು ಹೋಗಿ ಬಿಟ್ಟೆ. ಪಶ್ಚಿಮ ಘಟ್ಟಗಳಿಗೇ ಸೀಮಿತವಾದ ವಿಶಿಷ್ಟ ಚಿಟ್ಟೆ. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ಅದರ  ಸುಮನೋಹರ ಸೌಂದರ್ಯವೇ ನನ್ನ ಕಂಗೆಡಿಸಿತು. ಕಡು ಹಸಿರಾದ ಅದರ ಮೈಯನ್ನು ಒಮ್ಮೆ ನೋಡಿದರೆ ಮುಗೀತು, ನೀವು ಸಮ್ಮೋಹಿತರಾಗೋದು ಗ್ಯಾರೆಂಟಿ. ಈ ಚಿಟ್ಟೆಯ ಅಂದವೇ ನನ್ನನ್ನು ಇಲ್ಲಿಯವರೆಗೆ ಎಳೆದು ತಂದಿದ್ದು.  




 ನಾಗರಹೊಳೆಯ ಕಾಡುಗಳಲ್ಲಿ ಕಾಟಿ ಚಿರತೆಗಳ ಸಂಗಕ್ಕೆ ಬಿದ್ದು ಸುಮ್ಮನೆ ಅಲೆಯುತ್ತಿದ್ದವನಿಗೆ ಸಿಕ್ಕ ನ್ಯಾಚುರಲಿಸ್ಟ್‌ ಒಬ್ಬರು ಇರ್ಫು ಜಲಧಾರೆಯಲಿ ಇವು ಧಾರಾಳವಾಗಿವೆ ಎಂದಿದ್ದ. ತಡ ಮಾಡದೇ ಕಾರೊಂದನ್ನು ಬುಕ್‌ ಮಾಡಿ ಹೊರಟೆವು!

ಕುಟ್ಟಂನಲ್ಲಿ ಕಟ್ಟಂ ಚಾ ಕುಡಿದು

ವಿಚಿತ್ರವಾದ ದ್ರಾವಣದಲ್ಲಿ ಅದ್ದಿ ತೆಗೆದಂತಹ ಕುಟ್ಟಂನ ಪರಿಸರ. ಸೆಪಿಯಾ ಬಣ್ಣದಲ್ಲಿ ಅದ್ದಿ ತೆಗೆದಂತಹ ಊರು ವಿಚಿತ್ರವಾದ ಸೆಳೆತದಿಂದ ನನ್ನ ಕಂಗೆಡಿಸಿತ್ತು. ನಾಗರಹೊಳೆ ದಾಟಿದವರಿಗೆ ಕುಟ್ಟಂ ಎಂಬ ಪುಟ್ಟ ಹಳ್ಳಿಯ ಬೆಚ್ಚಗಿನ ಸ್ವಾಗತ. ಹೆಚ್ಚಿನವರು ಕೇರಳಿಗರು. ಇಲ್ಲಿ ಕಟ್ಟಂ ಚಾಯ್‌ ಬಹಳ ಫೇಮಸ್.

         ಹದವಾದ ಚಹ ಎಲೆಗಳು ಕೆಟಲಿನಲ್ಲಿ ಕುದಿಯುತ್ತಾ, ಹಬೆಯಾಡುತ್ತಾ ಇತ್ತು ಕಟ್ಟಂ ಚಾಯ. ಬದುಕೊಂದು ಕೆಟಲಿನಲಿ ಬೇಯುತಿರುವ ಅನುಭವ. ಕುಟ್ಟಂನಲ್ಲಿ ಕಟ್ಟಗಿನ ಬಿಸಿ ಬಿಸಿ ಕರಿ ಚಹಾ ಹೀರುವ, ಚಹಾ ಕಾಫೀ ತೋಟದ ಕೂಲಿಗಳು ಸಾಕಷ್ಟು. ನಾವು ಹೋದಾಗಲೂ ಅನೇಕರು ಅಲ್ಲಲ್ಲಿ ಚಹ ಹೀರುತಲಿದ್ದರು. ನಾವೂ ಗೂಡಂಗಡಿಗಳಲ್ಲಿ ಸಿಗುವ ಹಬೆಯಾಡುವ ಚಹಾ ಕಣ್ಣು ಹೀರಿದೆವು. ಕ್ಯಾನ್ಸರ್ಗೂ ಗಿಡಮೂಲಿಕೆ ಔಷಧ ನೀಡಿ ಗುಣಪಡಿಸುವವರು ಇಲ್ಲಿದ್ದಾರೆಂದು ಬೆಂಗಳೂರಿನ ಗೆಳೆಯನೊಬ್ಬ ಯಾವಾಗಲೂ ಹೇಳುತ್ತಿದ್ದ. ಹಾಗೇ ಅವರನ್ನೂ ಒಮ್ಮೆ ಭೇಟಿಯಾಗಬೇಕು. ಅವರ ಮಾತಿಗೆ ಕಿವಿಯಾಗಬೇಕು. 




ಲಾಮಾ ನಾಡಿನ ಲಕ್ಷ್ಮಣ  ತೀರ್ಥದೆಡೆಗೆ…


         ಲಾಮಗಳ ಭೂತಾನ್‌ನ ರಾಜಧಾನಿ ಥಿಂಪುವನ್ನು ನೆನಪಿಸುವಂತಿರುವ ದಕ್ಷಿಣ ಕೊಡಗಿನ ಈ ತಾಣ ಎಷ್ಟೊಂದು ರಮಣೀಯ ಅಂತೀರಾ. ಬನ್ನಿ ಹೇಗಿದೆ ನೋಡೋಣವೇ?

         ಜಲಧಾರೆಯ ಬಲಕ್ಕೆ ಕೇರಳವಿದ್ದರೆ ಎಡಕ್ಕೆ ನಾಗರಹೊಳೆ ಅಭಯಾರಣ್ಯವಿದೆ. ಅದೇ ಈ ಜಲಧಾರೆಯ ಮೂಲ. ಕೇರಳಿಗರೇ ಇಲ್ಲಿ ಹೆಚ್ಚು. ಜಲಧಾರೆಗೆ ಹಲವು ಕಿಲೋಮೀಟರ್‌ ಇರುವಾಗಲೇ ಇದು ನಿಮ್ಮನ್ನು ಕೈಬೀಸಿ ಕರೆಯುತ್ತದೆ.

         ಇದನ್ನು ನೋಡಲು ಕೇರಳದ ತುದಿಯ ತಲುಪಬೇಕು. ಮಂಜು ತುಂಬಿದ ಗಿರಿಗಳಿಂದ ಜಡೆ ಬಿಟ್ಟಂತೆ ಧುಮುಕುವ ಲಲನೆ. ಅಲ್ಲಲ್ಲಿ ಬಳುಕುವ ಬಳ್ಳಿ. ನಿಸರ್ಗದ ಗರ್ಭಗುಡಿಯಲ್ಲಿ ಅಡಗಿದ ರತ್ನ ಮಣಿ.

ಸುತ್ತೆಲ್ಲಾ ಗಡಿಬಿಡಿ ಇಲ್ಲದೇ ಹಾರಾಡುವ ಹಕ್ಕಿಗಳು. ಕೆನ್ನೆಗೆ ಮುತ್ತಿಕ್ಕಲು ಬರುವ ಪ್ಯಾಪಿಲೋ ಬುದ್ಧ! ಹೆಸರೇ ಎಷ್ಟೊಂದು ಆಕರ್ಷಕ. ದರ್ಶನ ಪಡೆದರಂತೂ ಅದರ ಮೋಹಕತೆಗೆ ಬೆರಗಾಗದೇ ಇರಲಾರಿರಿ.


ಮೆಟ್ಟಿಲೇರಿ ಮುಗಿಲಿಗೆ ಕೈಯ ಚಾಚಿ…


ಇಲ್ಲಿ ಹರಿವ ತೊರೆಯ ಸೆರಗ ಸೆಳೆಸಿ ಮೇಲೇರಿದಂತೆ ಮಂಜು ನಿಮ್ಮನ್ನು ಆವರಿಸುತ್ತದೆ. ಕಿವಿಯೊಳಗೆಲ್ಲಾ ಹಾದು ಕಚಗುಳಿ ಇಡುತ್ತದೆ.

ಜಲಪಾತದ ಹಾದಿಯೇ ಎಷ್ಟೊಂದು ರೋಚಕ. ಹೂ ಬಳ್ಳಿಗಳು, ಶೃಂಗಾರಕ್ಕಿಟ್ಟಂತೆ ಕಾಣುವ ದಪ್ಪ ದಪ್ಪ ಬಿಳಲುಗಳು. ಜಲಪಾತದ ಸನಿಹದೊರೆಗೆ ಮೆಟ್ಟಿಲುಗಳ ಸಖ್ಯ ಬೆಳೆಸಿದ ದಪ್ಪ ದಪ್ಪ ಮರಗಳು.

ಕಾವೇರಿಯ ಉಪನದಿಯಾಗಿ ಮುಂದೆ ಹರಿಯುವ ಗಂಡು ನದಿ ಲಕ್ಷ್ಮಣ ತೀರ್ಥ. ಮುಂದೆ ಹುಣಸೂರು, ಮೈಸೂರು ಮಂದಿ ಇದನ್ನು ಕುಲಗೆಡಿಸಿದ್ದಾರೆ. ಹುಣಸೂರಿನಲ್ಲೊಮ್ಮೆ ನೋಡಿದ್ದೆ ನದಿಯೋ ಗಟಾರವೋ ಎಂಬಷ್ಟು ಗಬ್ಬು. ಹಾಳುಗೆಡುಹದೇ ನೆಮ್ಮದಿ ಇಲ್ಲವೇನೋ ನಮ್ಮ ಜನಕ್ಕೆ.

ಪುಟಾಣಿ ಮೆಟ್ಟಿಲ ಏರಿ ಪುಷ್ಪ ಗಿರಿಯ ಬುಡವನ್ನೊಮ್ಮೆ ಮುಟ್ಟಿ ಬರಬೇಕು. ಹೂವ ಕಣಿವೆ ತುಂಬಾ ಪುಷ್ಪ ಪಕಳೆ ಹಾಸಿದಂತ ದಾದಿಯ ಹೊಕ್ಕು ಬರಬೇಕು. ನೀವು ಎಂದೂ ಮರೆಯಲಾರಿರಿ ಇರ್ಫು ಎಂಬ ಚಕೋರಿಯ.

ತರುಲತೆಗಳ ಜೊತೆಗೆ ಹಾದು ಬಂಡೆಯಿಂದ ಬಂಡೆಗೆ ಕುಪ್ಪಳಿಸುತ್ತಾ ಪುಳಕಗೊಳಿಸುವುದು. ಅರಸಿಕನ ಮನದ ಕದ ತೆರೆವ ತಾಣ!

ಇರ್ಫು ನಾಗರಹೊಳೆ ಅಭಯಾರಣ್ಯಕ್ಕೆ ಬಲು ಸನಿಹದಲ್ಲಿದೆ. ಅಲ್ಲಿಂದ ಬ್ರಹ್ಮಗಿರಿ, ಪುಷ್ಪಗಿರಿಗೆ ಚಾರಣ ಕೂಡ ಮಾಡಬಹುದು. ಕೊಡಗಿನ ಕೆಳ ತುದಿಯಲ್ಲಿರುವುದರಿಂದ ತಲುಪುವುದೇ ಬಲು ಕಷ್ಟ. ಈ ಜಲಪಾತ ವೀಕ್ಷಣೆಗೆ ಕೊಡಗಿನಿಂದ ಬಂದು ಹೋಗಲು ಒಂದಿಡಿ ದಿನ ಬೇಕಾಗುವುದು. ಈ ಜಲಪಾತದ ಬಳಿ ಈಶ್ವರ ದೇವಾಲಯವಿದೆ. ಪ್ರಕೃತಿ ಅಧ್ಯಯನಕ್ಕೆ ಹಲವು ತಂಡಗಳು ಬಂದು ಹೋಗುತ್ತಾರೆ. ಹಲವರು ಇಲ್ಲಿ ಬಂದು ಜೀವಜಾಲದ ಅಧ್ಯಯನ ಮಾಡುತ್ತಾರೆ. 



ಸಿಕ್ಕನೇ ಬುದ್ಧ:-

ಹಲವು ಪ್ಯಾಪಿಲೊ ಬುದ್ಧದ ಜೊತೆ ಜೊತೆಗೆ ಅನೇಕ ಮನಮೋಹಕ ಚಿಟ್ಟೆಗಳು ಅಲ್ಲಲ್ಲಿ ಕಾಣ ಸಿಕ್ಕವು. ಜೊತೆಗೊಂದಿಷ್ಟು ನೆನಪುಗಳು.

ಸಿಕ್ಕೀತೆ ಮುಂದಿನ ದಾರಿ:-

    ನಾಳೆಗಾಗಿ ನಮ್ಮನ್ನುಳಿಸಿ ಎಂಬ  ಲಕ್ಷ್ಮಣ ತೀರ್ಥದ ಆರ್ತ ನಾದ ನಮ್ಮನ್ನು ಇನ್ನೂ ತಾಕದಿರುವುದು ವಿಪರ್ಯಾಸ. ಲಕ್ಷ್ಮಣ ತೀರ್ಥವೆಂಬ ವಿಶಿಷ್ಟ ನದಿಯು ತನ್ನ ನೈಜ ಸೌಂದರ್ಯವನ್ನು ಉಳಿಸಿಕೊಳ್ಳುವಂತೆ ಮಾಡುವುದು ನಮ್ಮೆಲ್ಲರ ಹೊಣೆಯಲ್ಲವೇ?




Saturday, July 8, 2023

ನಿಲ್ದಾಣವಲ್ಲದ ನಿಲ್ದಾಣದಲ್ಲಿ…

 

ಪಶ್ಚಿಮ ಘಟ್ಟದ ಸೆರಗ ಹಿಡಿದು ಅದರ ತೊಡೆಯ ಮೇಲೆ ಮಲಗಿದ ರಮ್ಯ ರೈಲು ನಿಲ್ದಾಣ! ಕಾವಲಿಗೆ ನಿಂತ ಬೆಟ್ಟ ಸಾಲು. ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಸಾಗುವ ನೋಟ ಎಂತಹ ಜಡ ಭರತರನ್ನೂ ಕವಿಯಾಗಿಸಬಲ್ಲದು! ಭಾರತದ ಉದ್ದಗಲಕ್ಕೂ ಇಷ್ಟು ವಿಶಿಷ್ಟವಾದ ಮತ್ತೊಂದು ರೈಲು ನಿಲ್ದಾಣವಿರಲಿಕ್ಕಿಲ್ಲ. ಯಡಕುಮರಿ. ಎಂತಹ ವಿಚಿತ್ರ ಹೆಸರು. ಹೆಚ್ಚು ಕಡಿಮೆ ಎಡಕುಮೇರಿ ಅಥವಾ ಯಡಕುವೇರಿ ಎಂಬ ಹೆಸರು ಕೇಳಿರದ ಚಾರಣಿಗ ಇಲ್ಲವೇನೋ.


ತೇಜಸ್ವಿಯವರ ಜುಗಾರಿ ಕ್ರಾಸ್ ಓದಿದವರಿಗೆ ಕುಂಟರಾಮನ ಕಥಾ ಪ್ರಸಂಗ ಎಡಕುವೇರಿಯ ಸುರಂಗಗಳನ್ನು ನೆನಪಿಸುತ್ತೆ. ಅಂತಹ ಬೀಕರತೆ ಇಲ್ಲಿನ ಸುರಂಗಗಳಿಗೆ ಲಭಿಸಿದೆ. ಎಡಕುಮರಿ ಸನಿಹದಲ್ಲೇ ನಡೆಯುವ ಕತಾ ಪ್ರಸಂಗವೊಂದನ್ನು ಗಿರಿ ಮನೆ ಶ್ಯಾಂ ರಾವ ಕಟ್ಟಿ ಕೊಟ್ಟ ನೆನಪು. ಭಯಾನಕ ಹುಲಿಯೊಂದನ್ನು ಭೇಟೆಯಾಡಿದ ಫಾರೆಸ್ಟರ್‌ ಕೊನೆಗೆ ಅಮಾನತಿಗೆ ಒಳಗಾಗುವ ಕತೆ ಇಲ್ಲಿಯೇ ನಡೆದುದು. ಇಂತಹ ಮಾನವ ತಲುಪಲಾಗದ ಹಳ್ಳಿ ನಮ್ಮ ದೇಶದಲ್ಲಿ ಹಲವಿರಬಹುದು ಆದರೆ ತಲುಪಲಾಗದ ಸ್ಟೇಷನ್‌ ಒಂದು ಇದೆ ಎಂಬುದೇ  ಒಂತರಾ ವಿಚಿತ್ರವಲ್ಲವೇ? ಮಾನವ ನಾಗರಿಕತೆಯ ಸೋಂಕಿಗೆ ಒಳಗಾಗಲು ನೀವು ಬರೋಬ್ಬರಿ ೮ ಕಿ. ಮೀಟರ್‌ ನಡೆಯಬೇಕು! ಸುಬ್ರಮಣ್ಯದಿಂದ ಹೊರಟು ದೋಣಿಗಲ್ಲು ದಾಟಿದರೆ ಮುಂದೆ ಸಿಗುವುದೇ ಯಡಕುಮರಿ.


            ಇಲ್ಲಿ ನೀವು ದಾಟುವ ಸುರಂಗಗಳು ಹಲವು. ದಾಟುವ ತೊರೆಗಳು ನೂರಾರು. ಮಳೆಗಾಲ ಬಂತೆಂದರೆ ತೊರೆಗಳ ಮೆರವಣಿಗೆ. ಮಳೆಗಾಲ ಪೂರ್ಣ ಹಸಿರು ಚಾದರ ಹೊದ್ದ ಬೆಟ್ಟ ಗುಡ್ಡಗಳು. ಬೇಸಿಗೆಯಲ್ಲೂ ಹಸಿರಾಗಿರುತ್ತವೆ. ಕಡಿದಾದ ಕಣಿವೆಗಳಲ್ಲಿ ಹನಿಗಳ ಕಲರವ. ಜೀರುಂಡೆ ಗಾಯನ. ದಿನಕ್ಕೊಂದು ರೈಲು ಬಂದರೆ ಮುಗೀತು. ಮತ್ತೆರಡು ರಾತ್ರಿಗೆ. ಉಳಿಯುವುದು ನೀರವ ಏಕಾಂತ.‌ ಕೇಳುವವರೇ ಇಲ್ಲದ ಕ್ಯಾರೆ ಎನ್ನದ ದಿವ್ಯ ಮೌನ. ಮಾತಿಗೆ ಮೌನ ಸ್ವೆಟರಿನ ಮುಚ್ಚಿಗೆ. ಜೀರುಂಡೆಗಳ ಸಮೂಹಗಾಯನ. ಇನಿಯಳೊಂದಿಗೆ ಮುದ್ದು ಮಾಡುತ್ತಾ ಕೂರಬಹುದಾದ ಜಾಗ. 



ಇಲ್ಲಿನ ರೈಲ್ವೆ ಮಾಸ್ತರರನ್ನು ಮಾತಾಡಿಸಿದೆ. ಇಲ್ಲಿನ ಕಲ್ಲು ಬಂಡೆಗಳಂತೆ ಆತ ನಮ್ಮೊಡನೆಯೂ ಮಾತು ಬಿಟ್ಟಿದ್ದ! ಈ ಏಕಾಂತದ ಮಜವನ್ನು ಅನುಭವಿಸಿದವನಿಗೇ ಗೊತ್ತು ಎಂಬಂತೆ ಮುಗುಮ್ಮಾಗಿದ್ದ!

            ಇಲ್ಲಿ ನೇಮಕವಾದ ಹೊರಮುಖಿ ವ್ಯಕ್ತಿತ್ವದ ಸ್ಟೇಶನ್‌ ಮಾಸ್ಟ್ರುಗಳಿಗೆ ಬಹಳ ಕಷ್ಟ! ವಿದ್ಯುತ್‌ ಬೇರೆ ಇಲ್ಲ. ಬೆಟ್ಟ ಸಾಲಿಗೆ ಮುಖಮಾಡಿ ಡಿಪಾರ್ಟುಮೆಂಟು ಹಾಕಿಸಿದ ಬೆಂಚೊಂದಿದೆ. ಎಷ್ಟು ಹೊತ್ತು ಕುಳಿತರೂ ಕೇಳುವವರಿಲ್ಲ. ಇಲಾಖೆ ನಿರ್ಮಿಸಿದ ಒಂದೆರಡು ಸಣ್ಣ ಮನೆಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ!


    ನಿಲ್ದಾಣವಲ್ಲದ ನಿಲ್ದಾಣ! ಇಲ್ಲಿ ಇಳಿಯುವವರೇ ಇಲ್ಲ! ಹತ್ತುವವರೂ ಇಲ್ಲ.  ಆದರೂ ಒಂದು ನಿಲ್ದಾಣ!! ಇಲ್ಲಿ ಸ್ವಲ್ಪ ಹೊತ್ತು ರೈಲು ನಿಂತು ನೀರು ಕುಡಿದು ಏರಿ ಬಂದ ಕಷ್ಟಗಳ ನೆನೆದು ದಣಿವಾರಿದಿಕೊಂಡು ಮತ್ತೆ ಹೊರಡುತ್ತೆ. ನೀವಿಲ್ಲಿ ಇಳಿಯುವಂತಿಲ್ಲ. ಇಳಿದರೆ ಇಲ್ಲಿನ ಏಕಾಂತದಲ್ಲಿ ಬಂಧಿ. ಹಲವು ವರ್ಷಗಳ ಕಾಲ ಈ ಸ್ಥಳಕ್ಕೆ ದೋಣಿಗಲ್ಲಿನಿಂದ ಸಾಹಸಿಗರು ನಡೆದುಕೊಂಡು ಬರುತ್ತಿದ್ದರು! ಈಗ ಈ ಚಾರಣ ಸಂಪೂರ್ಣ ನಿಶೇಧಿಸಲಾಗಿದೆ. ಈಗಿಲ್ಲಿ  ಚಾರಣಕ್ಕೆ ಹೋದವರ ಮೇಲೆ ಟ್ರೆಸ್ಪಾಸ್‌ ಕೇಸ್‌ ಜಡಿದು ಹೊರಬರಲಾರದಂತೆ ಮಾಡಲಾಗುತ್ತದೆ. ಸಕಲೇಶಪುರದ ಸನಿಹದಲ್ಲಿರುವ ಮೌನವೇ ಹೊದ್ದು ಮಲಗಿದ ಇಲ್ಲಿಗೆ ಒಮ್ಮೆಯಾದರೂ ಹೋಗಿ ನೀರವ ಏಕಾಂತವನ್ನು ತಬ್ಬಿ ಮಲಗಬೇಕು. ನೀವು ಬರುವಿರಾ?



Monday, July 3, 2023

ಸುರಿವ ಮಳೆಯಲ್ಲೊಂದು ತಿಥಿಯೂಟ.

ನಾನಾಗ 8 ನೇ ತರಗತಿಯಲ್ಲಿ ಓದುತ್ತಿದ್ದೆ. ಹಠ ಹಿಡಿದ ಮಗುವಿನಂತೆ ಧೋ ಎಂದು ಮೂರು ದಿನದಿಂದ ಮಳೆ ಹೊಯ್ಯುತ್ತಿತ್ತು. ರಸ್ತೆ, ಚರಂಡಿ,  ಎಲ್ಲೆಲ್ಲೂ ಕೊನೆಗೆ ನಮ್ಮ ಮನದಲ್ಲೂ ಧೋ ಎಂಬ ಜಡಿ ಮಳೆ ಹೊಯ್ಯುತ್ತಲೇ ಇತ್ತು.

ಹತ್ತು ಕಿಲೋ ಮೀಟರ್ ದೂರದ ಶಾಲೆಗೆ ಹೋದೊಡನೆಯೇ ನಮಗೆ ರಜೆಯು ಸ್ವಾಗತ ಕೋರಿತ್ತು. ಮನಸ್ಸು ಕುಣಿದಾಡಿತ್ತು. ಉಲ್ಲಸಿತರಾಗಿ ಮನೆಗೆ ಮರಳುವ ಹಾದಿಯಲ್ಲಿದ್ದೆ. ಆಗಲೇ ನೆನಪಾಗಿದ್ದು ನನ್ನ ಅಜ್ಜ ಊರಿನಲ್ಲಿ ಇವತ್ತು ತಿಥಿಯೂಟವೆಂದು. ನನಗೋ ಅಜ್ಜನೂರೆಂದರೆ ಬಹಳೇ ಪ್ರೀತಿ, ಮಮಕಾರ, ತುಡಿತ. ಶಾಲೆ ತಪ್ಪಿಸಿ ಅಜ್ಜನೂರಿಗೆ ಹೋಗಲು ನನಗೆ ನಿರ್ಬ೦ಧವಿತ್ತು. ಆದರೆ ಇವತ್ತು ಆ ನಿರ್ಬಂಧ ಕೊಚ್ಚಿ ಹೋಗಿತ್ತು. 

ಮಳೆಗೊಂದು ಉದ್ದಂಡ ನಮಸ್ಕಾರ ಸಲ್ಲಿಸಿದೆ! ಮನಸ್ಸು ಉಲ್ಲಸಿತವಾಗಿ ಅಜ್ಜನೂರಿಗೆ ಹೋಗುವ ಗುಣಾಕಾರ ಭಾಗಾಕಾರ ಹಾಕಿತ್ತು. 

   ಅಮ್ಮ 9 ಗಂಟೆಯ ಬಸ್ಸಿಗೆ ಹೊರಡುವಳೆಂದು ಗೊತ್ತಿತ್ತು. ಹಾಗಾಗಿ ಗೆಳೆಯನಲ್ಲಿ ನಾನು ಮನೆಗೆ ಬರಲಾರೆ, ಅಜ್ಜನ ಮನೆಗೆ ಹೋಗುವೆ, ಅಪ್ಪನಿಗೆ ತಿಳಿಸು ಎಂದು ಹೇಳಿ ಸೀದಾ ಸುರಿವ ಮಳೆಯಲ್ಲಿ ಕೊಚ್ಚೆ ಹಾರಿಸುತ್ತಾ ಬಸ್ಸು ನಿಲ್ದಾಣಕ್ಕೆ ಓಡಿದೆ. ಮೊದಲು ಬಂದ ಶಂಕರ ವಿಠಲ ಬಸ್ಸಿನ ಮುಂಬಾಗಿಲಿನಲ್ಲಿ ಹತ್ತಿ ಬಸ್ಸೆಲ್ಲಾ ಹುಡುಕಿದೆ. ಆ ಬಸ್ಸಿನಲ್ಲಿ ಅಮ್ಮನಿರಲಿಲ್ಲ. ಹಿಂಬಾಗಿಲಿನಲ್ಲಿ ಇಳಿದೆ. ಮುಂದಿನ ಬಸ್ಸಿಗಾಗಿ ಸುರಿವ ಮಳೆಯಲ್ಲಿ ಕಾಯುತ್ತಾ ನಿಂತೆ. ಮನದೊಳಗೆ ಕಾತರ ಅಮ್ಮ ತಪ್ಪಿ ಹೋಗುವಳೋ  ಏನೋ ಎಂಬ ಆತಂಕ. ಅಜ್ಜನೂರಿಗೆ ಹೋಗಲಾರದ ದುಃಖ ಒಂದೆಡೆ. ಅಜ್ಜನೂರಿಗೆ ಹೋಗಲು ಕೈಯಲ್ಲಿರುವ ನಾಲ್ಕಾಣೆ ಏನೇನೂ ಸಾಲದು. ಮಳೆ ನಿಲ್ಲುವ ಲಕ್ಷಣಗಳಿರಲಿಲ್ಲ. ಅಷ್ಟರಲ್ಲೇ ಹನುಮಾನ್ ಬಸ್ಸು ಬಂತು. ಈ ಬಸ್ಸಿನಲ್ಲಿ ಅಮ್ಮನಿರಲಿ ಎಂದು ಪ್ರಾಥರ್ಿಸಿದೆ. ಅದೃಷ್ಟವಶಾತ್ ಅಮ್ಮನೂ ಆ ಬಸ್ಸಿಗೇ ಹೊರಟಿದ್ದಳು. ನನ್ನ ಆತಂಕ ತೀರಿತು. ಅಮ್ಮನ ಪಕ್ಕ ಹೋಗಿ ಕುಳಿತೆ. ಮಳೆಯಲ್ಲಿ ಕುಳಿತು ಸಕತ್ ಪ್ರಯಾಣ. 

ಅಂತೂ ಅಜ್ಜಿ ಮನೆಯಲ್ಲಿ ತಲುಪಿ ಸಕತ್ ಊಟ ಮಾಡಿ ಖುಷಿಯಲ್ಲಿ ಕುಳಿತ್ತಿದ್ದೆವು. ಸಂಜೆ ಮೂರು ಗಂಟೆ ಹೊತ್ತಿಗೆ ಸುರಿವ ಮಳೆಯಲ್ಲಿ ಅಪ್ಪ ನನ್ನನ್ನು ಹುಡುಕುತ್ತಾ ಅಜ್ಜಿ ಮನೆಗೆ ಬಂದಿದ್ದರು. ಅಮ್ಮನೊಂದಿಗೆ ಅಂದು ಸುರಿವ ಮಳೆಯಲ್ಲಿ ಅಜ್ಜನೂರಿಗೆ ಹೋದ ನೆನಪು ಇನ್ನೂ ಹಸಿರಾಗೇ ಇದೆ.

     ಎಲ್ಲರೂ ಈ ನೆನಪುಗಳನ್ನು ಮೆಲುಕು ಹಾಕಿ ನನ್ನ ಛೇಡಿಸುವರು. ಮಾವನಿಗಂತು ಈ ನೆನಪು ಸದಾ ಹಸಿರು.

ಇಂದೇ ನನ್ನ ಅಜ್ಜನ ತಿಥಿ. ಫೋನ್ ಮಾಡಿ ಬರುವಂತೆ ಮಾವ ಕರೆ ಕೊಟ್ಟಾಗ ಎಲ್ಲ ನೆನಪು ಮರುಕಳಿಸಿತು. ಮನೆಯಲ್ಲಿ ದಿವ್ಯ ಏಕಾಂತ ಒಂದೇ ಬೆರಳಿನಲ್ಲಿ ಟೈಪಿಸಿದೆ. ಚೆನ್ನಾಗಿದ್ದರೆ ತಿಳಿಸಿ.

 

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...