Sunday, June 28, 2020

ಸಿಲ್ಲರ್ ಎಂಬ ಅವಕಾಶವಾದಿ!

ಮಳೆಗಾಲದ ಒಂದು ಮುಂಜಾನೆ. ಹನಿ ಮಳೆ ಹರಿಯುತ್ತಿತ್ತು. ಆಗಾಗ ಸಣ್ಣ ಬಿಸಿಲು. ಛಾಯಾಚಿತ್ರಕಾರನಿಗೆ ಸರಿಯಾದ ವಾತಾವರಣ. ಪ್ರಕೃತಿಯ ನಿಗೂಢಗಳು ಅನನ್ಯ. ಅಂತಹ ಒಂದು ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಂತಿರುವೆ. 
ಸತ್ತ     ಇರುವೆಯನು  ಹಿಡಿಯಲು  ಕಾಯುತಿರುವ  ಸಿಲ್ಲರ್  ಜೇಡ.


ಹೀಗಿರುವ ವಾತಾವರಣದಲ್ಲಿ ಮತ್ತಿ ಗಿಡದಲ್ಲಿ ಒಸರುವ ಸಿಹಿಯನ್ನು ಸವಿಯಲು ದರ್ಜಿ  ಇರುವೆಗಳು ಗಿಡಕ್ಕೆ ಭೇಟಿ ಕೊಡುತ್ತಿದ್ದವು. ಇಂತಹ ಒಂದು ಗಿಡದಲ್ಲಿ ಇರುವೆಗಳಿಗಾಗಿ ಕಾದು ಕುಳಿತಿದ್ದ ಸಿಲ್ಲರ್ (Siler) ಎಂಬ ಇರುವೆ ಪ್ರಿಯ ಜೇಡ. ಕಟುಕನಾದರೂ ಧೈರ್ಯಶಾಲಿಯಲ್ಲ. ಸಣ್ಣ ಪುಕ್ಕಲೊಂದು ಯಾವಾಗಲೂ ಅವನ ಎದೆಯಲ್ಲಡಗಿರುತ್ತಿತ್ತು. ಎರಡು ಮೂರು ಇರುವೆ ಬಂದರೂ ಬೇಟೆಯಾಡದೇ ಹಾಗೇ ಬಿಟ್ಟು ಬಿಟ್ಟು ಬಿಟ್ಟನಪ್ಪ. ಯಾಕೋ ಗೊತ್ತಿಲ್ಲ. 
       
              ಮತ್ತಿ ಮರದ ಚಿಗುರ ಹಿಂದೆಯೇ ಅಡಗಿ ಕುಳಿತ್ತಿತ್ತು. ಹೀಗಿರುವಾಗ ಎಲ್ಲಿಂದಲೊಂದು ಒಂದಿರುವೆ ಮತ್ತೊಂದು ಸತ್ತ ಇರುವೆಯನ್ನು ತನ್ನ ಗೂಡಿಗೆ ಒಯ್ಯುವ ಪ್ರಯತ್ನದಲ್ಲಿ ವಿಫಲವಾಗಿ ಹಾಗೇ ಎಲೆಯ ಮೇಲೆ ಬೀಳಿಸಿ ಹೋಗಿತ್ತು. ಸುಮಾರು ಹೊತ್ತು ಕಾದು ಕಾದು ಯಾವುದೇ ಅಪಾಯವಿಲ್ಲವೆಂದು ನಿರ್ಧರಿಸಿ ಇರುವೆಯ ಮೇಲೆ ಎರಗಿತು. ಸತ್ತ ಇರುವೆಯನ್ನು ಎಗರಿಸಿಕೊಂಡು ಹೋಯಿತು. 
ಸತ್ತ ಇರುವೆ ಹೊತ್ತೊಯ್ಯುವ ಈ ಜೇಡ ಕೆಲವೊಮ್ಮೆ ಧೈರ್ಯ ಮಾಡಿ ಸತ್ತ ಇರುವೆಯನ್ನು ತನ್ನದೆಂದು ಕ್ಲೈಮ್ ಮಾಡುವುದೂ ಉಂಟು!
ಸುಮಾರು ಹೊತ್ತು  ಕಾದ ಬಳಿಕ  ಇರುವೆಯನು ಹೊತ್ತೊಯ್ಯುವ ಜೇಡ.


 ಎರಡು ಮೂರು ವರುಷಗಳ ಹಿಂದೆ ಹೀಗೆಯೇ ಸತ್ತ ಇರುವೆಯೊಂದನ್ನು ಈ ಜೇಡ ಅನಾಮತ್ತು ಎಗರಿಸಿಕೊಂಡು ಹೋಗಿದ್ದನ್ನು ಕಂಡಿದ್ದೆ. ಏನೇ ಹೇಳಿ ಸಿಲ್ಲರ್ ಎಂಬುದೊಂದು ಅಪ್ಪಟ 'ಇರುವೆ ಕಳ್ಳ', ಅವಕಾಶವಾದಿ.

Monday, June 15, 2020

ಮಳೆಯ ಚಿತ್ರಗಳು...

ಅದೇಕೋ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ನೆನಪುಗಳ ಹಿಂಜುತಿದೆ. ಎದೆಯೊಳಗೆ ಕುಳಿತ ಬೆಚ್ಚಗಿನ ಭಾವವನ್ನು ಉದ್ದೀಪನಗೊಳಿಸುವ ಮಳೆ. ಎಲ್ಲವನ್ನು ಚಿಗುರಿಸುವ ಮಳೆ. ನೀರ ಹನಿಗಳ ಹಾಡು ಕೇಳುತ್ತಾ ನನ್ನ ಏಕಾಂತದೊಳಗೆ ಹುದುಗಿದ್ದೆ. ಮಳೆಗೆ ಗಿಡಗಳ ಪ್ರತಿಕ್ರಿಯೆ ಹೇಗಿರಬಹುದೆಂದು ಎಣಿಸುತಿದ್ದೆ. ಮನಸ ಮುಗಿಲ ತುಂಬಾ ನೆನಪಿನ ಮೆರವಣಿಗೆ. ಹಾಗೇ ಕುಳಿತವನಿಗೆ ಪ್ರತಾಪಗಢ್ ಕೋಟೆಗೆ ಹೋದ ನೆನಪು ಒತ್ತರಿಸಿಕೊಂಡು ಬಂತು.
ಮಳೆ ಮೋಡಗಳ ಮೆರವಣಿಗೆ. 





















  



ಔರಂಗಜೇಬನಿಗೂ ಬೆದರದ ಶಿವಾಜಿಯ ವೀರತ್ವಕ್ಕೆ ಮಾರುಹೋಗಿ ಆತನ ಒಂದೆರಡು ಕೋಟೆ ನೋಡಲು 2019ರ ಮಳೆಗಾಲದಲ್ಲಿ ಅಲ್ಲಿಗೆ ಹೋಗಿದ್ದೆವು. ಮೊದಲು ರಾಯಗಢ ಕೋಟೆ ನೋಡಿಕೊಂಡು ಸತಾರ್ ಜಿಲ್ಲೆಯಲ್ಲಿರುವ ಪ್ರತಾಪಗಢಕ್ಕೆ ಬಂದಿದ್ದೆವು.( ರಾಯಗಡ ಲೇಖನ ಓದಲು ಇದರ ಮೇಲೆ ಚಿಟಿಕೆ ಹೊಡೆಯಿರಿ) ಶಿವಾಜಿ ಅಫಜಲ್ ಖಾನ್ನನ್ನು ಹೆಡೆ ಮುರಿ ಕಟ್ಟಿದ್ದು ಇಲ್ಲೇ. ಆನೆ ನುಗ್ಗಿಸಲಾಗದಂತೆ ವಿಚಿತ್ರವಾದ ತಿರುವು ಮುರುವು ಬರುವಂತೆ ಎರಡು ಮೂರು ಹಂತಗಳಲ್ಲಿ ನಿಮರ್ಿಸಲಾದ ಕೋಟೆ. ಪಾತಾಳದಲ್ಲಿರುವಂತೆ ಕಾಣುವ ವಾಹನಗಳು! 


ಮಳೆಯಲಿ ಇನಿಯನೊಂದಿಗೆ ತುಂಟಾಟದಲಿ ನಿರತ ನೀರೆ !
ಪ್ರತಾಪ್ ಗಡ್ ನಿಂದ ಕಾಣುವ ವಿಹಂಗಮ ನೋಟ. 


ಪ್ರತಾಪ್ ಕೋಟೆ. 
ಗೈಡ್ ಹೇಳಿದ ವಿವರಣೆಗಳನ್ನೆಲ್ಲಾ ಕೇಳುತ್ತಾ ಸಮಯ ಸರಿದಿದ್ದೇ ತಿಳೀಲಿಲ್ಲ. ಶಿವಾಜಿಯ ನೆನಪಿಗೆ ಆತನ ಮುದ್ರೆಯ ಟಿ-ಶರ್ಟನ್ನು, ಜೊತೆಗೊಂದಿಷ್ಟು ಕೀ ಚೈನ್ ಕೊಂಡು ಮಹಾರಾಷ್ಟ್ರದ ವಿಶೇಷ 'ಜವಾಣ್' ನೂರು ರೂಪಾಯಿಗೆ ಎಂಬ ಫಲಕವಿದ್ದ ಹೋಟೆಲೊಂದಕ್ಕೆ ನುಗ್ಗಿದೆವು. ಖಾರವಾದ ಪಲ್ಯದ ಜೊತೆ ಎರಡು ಬಕರಿ, ಮತ್ತೊಂದು ಸಾಂಬಾರು, ಇರುಳ್ಳಿ, ಸೌತೆ ಕಾಯಿ ಅನ್ನ, ನೀರು ಮಜ್ಜಿಗೆ ನೀಡಿದರು. ಸಮಯ ಮೂರಾಗಿದ್ದುದರಿಂದ ಹೊಟ್ಟೆ ಚುರುಗುಡುತಲಿತ್ತು. ಊಟ ಮುಗಿಸುವುದರೊಳಗೆ ಅದೆಲ್ಲಿತ್ತೋ ಮಳೆ ತನ್ನೆಲ್ಲಾ ಬಾಹುಗಳನ್ನು ಚಾಚಿ ಪ್ರತಾಪನನ್ನು ಮುತ್ತಿಕೊಂಡಿತು! ಮಳೆ. ಅನೇಕ ದಿನಗಳಿಂದ ಕನಸಿದ್ದ ಅನೇಕ ಮಳೆಯ ಚಿತ್ರಗಳು ಕ್ಯಾಮರದೊಳಗೆ ಸೇರಿಕೊಂಡವು. ಕ್ಯಾಮರ ತೃಪ್ತಿಯ ತೇಗು ತೇಗಿತು. ಉಂಡ ಹೊಟ್ಟೆಯೂ ತೇಗಿತು ನೋಡಿ. 



ಕೆಲವು ಚಿತ್ರಗಳು ನಮ್ಮೂರಿನ ಸನಿಹದಲ್ಲೇ ತೆಗೆದಿರುವುದು. ಪ್ರತಾಪಗಢದ ಪ್ರತಾಪವನ್ನು ಮತ್ತೊಮ್ಮೆ ಹೇಳುವೆ.

Saturday, June 6, 2020

'ಸಿಲ್ಲರ್' ಎಂಬ ಇರುವೆ ಕಳ್ಳ..


'ಕಣ್ಣಾ ಮುಚ್ಚೆ ಕಾಡೆ ಗೂಡೆ, ಉದ್ದಿನ ಮೂಟೆ ಉರಳೆ ಹೋಯ್ತು.' ಈ ಸಿಲೆರ್ ಎಂಬ ಸಿರಿಯಸ್ ಇರುವೆ ಕಳ್ಳನನ್ನು ನೋಡಿದಾಗ ಯಾವಾಗಲೂ ಈ ಪದ್ಯವೇ ನೆನಪಾಗುವುದು. ನೋಡಿದ ಕ್ಷಣಕ್ಕಷ್ಟೆ ನಮ್ಮೆದುರಿಗೆ ರೆಪ್ಪೆ ಮುಚ್ಚುವುದರೊಳಗೆ ಇನ್ನೆಲ್ಲಿಗೋ ಮಾಯಾ! ಯಾರೊಂದಿಗೆ ಕಣ್ಣಾ ಮುಚ್ಚೆ ಆಡುತಿದೆ ಎಂದು ತಿಳಿಯದು. ಕಂಡದ್ದೇ ಸುಳ್ಳೆನ್ನುವ ರೀತಿಯಲಿ! ಕೆಲವರ ಮನೆಯಂಗಳದ ತೋಟದಲಿ ಇವು ಮಾಮೂಲಿಯಂತೆ! ನಮ್ಮಲ್ಲಿ ಅಪರೂಪವೇ. ಯಾಕೋ ಗೊತ್ತಿಲ್ಲ. ಐದಾರು ವರ್ಷದಲಿ ಒಂದೆರಡು ಬಾರಿ ಕಂಡಿದ್ದೇನಷ್ಟೆ.
SILLER SPIDER.

FEMALE SILLER WITH AN ANT.

ಬಹಳ ಚೂಟಿಯಾದ ಈ ಜೇಡ, ಕಂಡಲ್ಲಿ ಕೂರುವುದೇ ಇಲ್ಲ. ಶಾಲೆಗೆ ಹೋಗಿದ್ರೆ ADD ಕಾಯಿಲೆ ಅಂದೇಳಿ ಚೀಟಿ ಅಂಟಿಸಿ ಕೂರಿಸ್ತಾ ಇದ್ರು. ಒಂಥರಾ ಅಧಿಕ ಪ್ರಸಂಗಿ ಈತ. ಬಾಳೆ ಗಿಡದಲ್ಲಿ, ಕಮಿನಿಷ್ಟ್ ಎಲೆಗಳಲ್ಲಿ ಕಂಡದ್ದೇ ಹೆಚ್ಚು. ಸಿಕ್ಕ ಸಂಧಿಗೊಂದಿನಲಿ ನುಸುಳಿ ಹೊರ ಹೋಗಿ ಬಿಡುವ. ಚಿಕ್ಕ ಮಕ್ಕಳಿಗೆ ಐಸ್ ಕ್ರೀಂ ಪ್ರೀಯವಾದಂತೆ ಇವನಿಗೆ ಕೆಂಪಿರುವೆ ಪ್ರೀತಿ. ಯಾಕೊ ಗೊತ್ತಿಲ್ಲ. ನಮಗೆ ಹುಳಿ ಹುಳಿಯಾದ ಆಮ್ಲೀಯತೆ ಹೆಚ್ಚಿರುವ ಕೆಂಪಿರುವೆ ಇವನಿಗೆ ಬಲು ಪ್ರೀತಿ. ನೋಡಿದಾಗೆಲ್ಲ ಬಾಯಲ್ಲೊಂದು ಇರುವೆ ಕಚ್ಚಿಕೊಂಡೆ ಇರುವ! ಇರುವೆ ಇಲ್ಲದೆ ನೋಡಿದ್ದೆ ಅಪರೂಪ ನೋಡಿ. ನಮ್ಮ ಮನೆಯ ಸುತ್ತಲಿತ ಜೇಡಗಳಲ್ಲೇ ಅತ್ಯಂತ ಸ್ಪುರದ್ರೂಪಿ. ಮುಂದಿನ ಕಾಲಿಗೆ ನಾಗಾಲ್ಯಾಂಡ್ನವರಂತೆ ವಿಚಿತ್ರ ಸಣ್ಣ ಗುಚ್ಚಿನ ಗತ್ತು ಬೇರೆ. ಎರಡನೆ ಜೋಡಿ ಕಾಲಿಗೂ ಸುಂದರ ಕರಿ ಗುಚ್ಚು. ಬೆನ್ನ ಮೇಲೆ ಕೇಸರಿ ಅಚ್ಚು. ಮನುಜನ ಕಣ್ಣಿನಂತಹ ರಚನೆ. ಒಟ್ಟಾರೆಯಾಗಿ ಮನಮೋಹಕ ಬಣ್ಣದ ಬಳುಕುಬಳ್ಳಿ.







ಹಾಗೆ ಮೊನ್ನೆಯೊಂದು ಏಡಿ ಜೇಡನ ಕಂಡು ಮನೆಗೆ ಮರಳುವ ದಾರಿಯಲಿ ಅಪರೂಪಕ್ಕೆ ಇರುವೆಯಿಲ್ಲದೆ ಕಾಂಗ್ರೆಸ್ ಗಿಡದ ದಂಟಿನ ಮೇಲೆ ಧಾಂ ಧೂಂ ಸುಂಟರಗಾಳಿಯಂತೆ ಹೊರಟಿದ್ದ. ಎಲ್ಲಿಗೆ ಹೊರಟೆ ಮರಾಯ ಎಂದರೆ ನಿಲ್ಲುವುದೇ ಇಲ್ಲ ಆಸಾಮಿ. ತನ್ನೆರಡು ಕಾಲುಗಳನ್ನು ನೆಟ್ಟಗೆ ಮಾಡಿಕೊಂಡು ಎರಡು ಪೋಸು ಕೊಟ್ಟು ವೇಗವಾಗಿ ಹೊರಟೇ ಬಿಟ್ಟ. ಬಂಗಾರದ ಮನುಷ್ಯ ಚಿತ್ರದ ಹೀರೊ ರಾಜ್ಕುಮಾರನಂತೆ! ನಿಮಗೆಲ್ಲಿಯಾದರು ಈ ಜೇಡ ಸಿಕ್ಕರೆ ಒಂದು ಪೋನಾಯಿಸಿ ಮರ್ರೆ.

ಶ್ರೀಧರ್ ಎಸ್. ಸಿದ್ದಾಪುರ.
ಕುಂದಾಪುರ ತಾಲೂಕು.

Monday, June 1, 2020

ಶಾಪಗ್ರಸ್ಥ ಗಂಧರ್ವ....



ಕಿಟ್ಟು, ಪುಟ್ಟು ಎಂಬ ಇಬ್ಬರು ಹುಡುಗರು ತಮ್ಮ ಬೇಸಿಗೆ ರಜೆ ಕಳೆಯಲು ಅಜ್ಜಿ ಊರಿಗೆ ಬಂದಿದ್ದರು. ಪಕ್ಕದ ಮನೆ ರಂಗ ಅವರನ್ನ ಬಣ್ಣ ಬಣ್ಣದ ಕಲ್ಲುಗಳಿರೋ ಹೊಳೆ ತೋರಿಸ್ತೀನಿ ಅಂತ ಒಂದಿನ ಹೊಳೆಗೆ ಕರೆದುಕೊಂಡು ಹೋದ.


ಹೊಳೆ ನೀರಲ್ಲಿ ಸಾಕಷ್ಟು ಹೊತ್ತು ಈಜಾಡಿ ಅಲ್ಲಿನ ಕಲ್ಲುಗಳನ್ನೆಲ್ಲಾ ನೋಡುತ್ತಾ ಮನೆಗೆ ತೆರಳುವ ಕಾಡದಾರಿಯನ್ನು ಹಿಡಿದರು.

          ಸ್ವಲ್ಪ ದೂರ ಬರುತ್ತಲೇ ಅವರಿಗೊಂದು ಮರ ಕಾಣಿಸಿತು. ಅದರಲ್ಲಿ ಸೀತಾಫಲ ಗಾತ್ರದ ಹಣ್ಣು ಗಳು ಬಿಟ್ಟಿದ್ದವು. ನೋಡಲು ಸೀತಾಫಲದಂತೆಯೂ ಇತ್ತು. ಏನಾದರಾಗಲಿ ಎಂದು ರಂಗನ ಬಳಿ ಹೇಳಿ ಎರಡು ಹಣ್ಣು ಕಿತ್ತುಕೊಂಡು ಬಂದರು.



ಮನೆಗೆ ಬರುತ್ತಲೇ ಕಿಟ್ಟು, ಪುಟ್ಟು ಉತ್ಸಾಹದಿಂದ ಅಜ್ಜಿಗೆ ತಾವು ತಂದ ಹಣ್ಣು ಯಾವುದೆಂದು ಕೇಳಿದರು. "ನೋಡಿ ಮಕ್ಕಳೆ ಇದರ ಹಿಂದೆ ಆಸಕ್ತಿದಾಯಕ ಕತೆ ಇದೆ" ಬನ್ನಿ ಇಲ್ಲಿ ಹೇಳ್ತೇನೆ ಎಂದಳು. ಮಕ್ಕಳೆಲ್ಲಾ ಅಜ್ಜಿ ಸುತ್ತ ಕುಳಿತರು.
ಗಂಧರ್ವ ಲೋಕ, ಅಲ್ಲೊಬ್ಬ ರುದ್ರಾಕ್ಷ ಎಂಬ  ಗಂಧರ್ವನಿದ್ದ. ಬಹಳ ದಷ್ಟ ಪುಷ್ಟನಾಗಿ ಎತ್ತರವಾಗಿದ್ದ. ಆತ ವಿಪರೀತ ಅಹಂಕಾರಿಯೂ, ತನ್ನ ಸೌಂದರ್ಯದ ಬಗ್ಗೆ ಮೇಲರಿಮೆಯೂ, ಇನ್ನೊಬ್ಬರ ಬಗ್ಗೆ ತಾತ್ಸಾರದ ಭಾವನೆಯನ್ನು ಹೊಂದಿದ್ದ. ಆತ ಒಮ್ಮೊಮ್ಮೆ ಭೂಮಿಗೆ ಬಂದು ಅನೇಕರಿಗೆ ಉಪದ್ರವ ಕೊಡುತ್ತಿದ್ದ. ಒಮ್ಮೆ ಆತ ಭೂಮಿಗೆ ಬಂದಾಗ ಹಲಸಿನ ಹಣ್ಣು ತಿನ್ನುತ್ತಿದ್ದ ಋಷಿಯನ್ನು ನೋಡಿದ. ಆತನೆಡೆಗೆ ನಿಕೃಷ್ಟ ಭಾವವೊಂದನ್ನು ಬೀರಿ, "ಏ ಗತಿ ಇಲ್ಲದ ಸನ್ಯಾಸಿಯೆ ಬೇರೇನು ಸಿಗಲಿಲ್ಲವೇ ತಿನ್ನಲು? ಈ ದರಿದ್ರಕಾರಿಯಾದ, ಮೇಣದಿಂದ ತುಂಬಿದ ಹಲಸು ತಿನ್ನುತ್ತಿದ್ದಿಯಲ್ಲ." ಎಂದು ಮೂದಲಿಸಿದ. ಸುಮ್ಮನೆ ತಿನ್ನುತ್ತಿದ್ದ ಸನ್ಯಾಸಿಗೆ ಕೋಪ ನೆತ್ತಿಗೇರಿತು. ಕೂಡಲೇ " ಅತ್ಯಂತ ರುಚಿಕಟ್ಟಾದ ಆದರೆ ಅತಿ ಸಣ್ಣ ಗಾತ್ರದ ರುದ್ರಾಕ್ಷಿ ಹಣ್ಣಾಗಿ ಹುಟ್ಟು." ಎಂದು ಶಪಿಸಿದ. ಕೂಡಲೇ ಆತ ಕಾಡುಗಳ ಸಂದುಗಳಲ್ಲಿ ಹುಲುಸಾಗಿ ಬೆಳೆವ ಪುಟಾಣಿ ರುದ್ರಾಕ್ಷಿ ಗಿಡವಾಗಿ ಹುಟ್ಟಿದ. "ಹೀಗೆ ಅಹಂಕಾರದಿಂದ, ಮದದಿಂದಾಗಿ ಹಲಸಾಗಿ ಹುಟ್ಟಿದ ಗಂಧರ್ವ ರುದ್ರಾಕ್ಷನ ಕತೆ ಮಕ್ಕಳೆ." ಎಂದು ಅಜ್ಜಿ ಕತೆ ನಿಲ್ಲಿಸಿದಳು.



" ಇದರ ಸೊಳೆ ರುಚಿ ಇರುತ್ತಾ" ಎಂದು ಕೇಳಿದ ಪುಟ್ಟು. "ಬಹಳ ರುಚಿ ಮಕ್ಕಳಾ, ನಾಳೆ ತಿನ್ನೋಣ." ಎಂದು ಅಜ್ಜಿ ತನ್ನ ಕೆಲಸಕ್ಕೆ ಹೊರಟಳು.


ಶ್ರೀಧರ್. ಎಸ್. ಸಿದ್ದಾಪುರ

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...