Friday, June 21, 2019

ಚಿರಾಪುಂಜಿಯ ಚಿರ ಯೌವನೆ ನೊ ಕಲಿ ಕೈ ಜಲಧಾರೆ



ಏಕಾಂಗಿಯಾಗಿ ಚಿರಾಪುಂಜಿಯ ಖಾಸಿ ಬೆಟ್ಟಗಳ ನಡುವೆ ಹರಿವ ನೊ ಕಲಿ ಕೈ ಜಲಧಾರೆಗೆ ಹೊರಟು ನಿಂತಾಗ ಹೊಟ್ಟೆಯೊಳಗೂ ಸಣ್ಣ ಚಳಿ ಹಾಸಿಗೆ ಬಿಡಿಸಿತ್ತು! ಆದರೂ ರಸ್ತೆ ಗುಂಟ ಹೊದ್ದು ಮಲಗಿದ್ದ ಮಂಜಿನ ಪರದೆ, ರಸ್ತೆ ಇಕ್ಕೆಲಗಳಲ್ಲಿ ಹಾಸಿದ್ದ ಚೆರ್ರಿ ಹೂ ಪಕಳೆಯ ಸ್ವಾಗತ ಸ್ವಲ್ಪ ಧೈರ್ಯ ಕೊಟ್ಟಿತ್ತು. ಸೂಚಿಪರ್ಣ ಕಾಡುಗಳ ನಡುವೆ ಚುಚ್ಚುವ ಸೂಜಿಯಂತಹ ಚಳಿ. ಶಿಲ್ಲಾಂಗಿನಿಂದ ಬರೋಬ್ಬರಿ 54 ಕಿಲೋ ಮೀಟರ್ ಪಯಣ. ಕಾಡ ನಡುವೆ ಹೊಟ್ಟೆ ಪೂಜೆಗೆ ಡಾಬಾ ಒಂದರಲ್ಲಿ ಕಾರ್ನ್ನು ನಿಲ್ಲಿಸಿದೆವು. ಪರೋಟ ಮತ್ತು ವಿಶಿಷ್ಟ ರುಚಿಯ ಪಕೋಡ ಹೊಡೆದು ಹೊರಟೆವು.
 
 
        ದಾರಿಗುಂಟ ಸಾಲು ಸಾಲು ಜಲ ಕನ್ನಿಕೆಯರು ಕಲಶ ಹಿಡಿದು ನಿಂತಿದ್ದರು! ಸಾಲು ಕನ್ನಿಕೆಯರಲ್ಲಿ ಯಾರನ್ನು ನೋಡುವುದೆಂಬುದೇ ತೋಚದ ಸ್ಥಿತಿ. ಬೆಟ್ಟಗಳ ಬಯಲಿನಲಿ ನುಗ್ಗಿ ನೋಡುವ ಧಾವಂತ. ಬೆಟ್ಟಗಳ ಬಯಲಲಿ ಇಂಗಿ ಇಳಿದು ಸೃಜಿಸುವ ಸ್ಫಟಿಕ ಶುಭ್ರ ಹನಿಗಳ ಸಿಂಚನ ಮನಮೋಹಕ. ರೆಪ್ಪೆ ಮಿಟುಕಿಸಿದರೆ ತಪ್ಪಿ ಹೋಗುವ ದೃಶ್ಯ ಕಾವ್ಯ. ಇಲ್ಲಿ ಮಳೆಗಾಲದಲ್ಲಿ ಪ್ರತಿ ಬೆಟ್ಟಗಳ ಮೇಲೂ ಎಣಿಸಲಸದಳ ಜಲ ಕನ್ನಿಕೆಯರ ಮೆರವಣಿಗೆ ನಡೆಯುತ್ತೆ. 


ವಿಶಾಲ ಬೆಟ್ಟಗಳ ಬಯಲು ದಾಟಿ ಮುಂದಡಿ ಇಟ್ಟರೆ ಸಿಗುವ ಸಾಲು ಸಾಲು ಅಂಗಡಿ. ಸ್ಥಳೀಯ ಮಸಾಲೆ ಪದಾರ್ಥ ಮಾರುವ ಹೆಂಗಸರು. ತರೇವಾರಿ ಅಳತೆಯ ಬಿದಿರ ಬುಟ್ಟಿಗಳು, ಬಿದಿರ ಬುಟ್ಟಿಯ ಕೀ ಚೈನುಗಳು!, ಬಿದಿರ ಪಸರ್ುಗಳು ವಿವಿಧ ಬಿದಿರಿನಿಂದ ಮಾಡಿದ ಅಲಂಕಾರಿಕ ವಸ್ತುಗಳು. ನಾನು ಅವುಗಳ ಸೂಕ್ಷ್ಮತೆಗೆ ಸೂರೆ ಹೋದೆನು. ಅಂತಹ ಕಲಾತ್ಮಕತೆ! ಇವುಗಳ ನಡುವೆ ಧುಮುಕುವ ಮೇಘಾಲಯದ ಚಿರಾಪುಂಜಿಯ ಚಿರ ಯೌವನೆ ನೊಹ ಕಲಿಕೈ ಜಲದಾರೆ. ಸದಾ ಕಣಿವೆಯ ಮಂಜಿನೊಂದಿಗೆ ಚಕ್ಕಂದಕ್ಕಿಳಿಯುವ ಜಲಧಾರೆ. ಸ್ಥಳೀಯರಿಟ್ಟ ಹೆಸರು ಸೊಹ್ರಾ. ಕ್ಷಣ ಕ್ಷಣಕೂ ಮಂಜು ತನ್ನ ಮಡಿಲಿನಲಿ ಜಲಧಾರೆಯನ್ನು ಮುಚ್ಚಿಟ್ಟುಕೊಳ್ಳುವ ಈ ಸುಂದರ ಜಲರಾಶಿಯ ಹಿಂದೆ ಕರುಣಾಜನಕ ಕತೆ ಇದೆ.



'ಕಲಿಕೈ'ಯ ಕರುಣಾ ಜನಕ ಕತೆ-


 ಕಲಿಕೈ ಎಂಬ ಸುಂದರ ಯುವತಿ ತನ್ನ ಗಂಡನೊಂದಿಗೆ ಇಲ್ಲಿ ವಾಸವಾಗಿದ್ದಳು. ಅವಳ ಗಂಡ ಅಶಿಸ್ತಿನ ಮನುಷ್ಯನೂ, ಕುಡುಕನು, ಪತ್ನಿ ಪೀಡಕನೂ ಆಗಿದ್ದ. ಆಕೆಗೆ ಮುದ್ದಾದ ಪುಟ್ಟ ಹೆಣ್ಣು ಮಗುವಿತ್ತು. ಆಕೆಯೊಮ್ಮೆ ಕೆಲಸಕ್ಕೆ ಹೊರಗೆ ಹೋಗಿದ್ದಳು. ವಾಪಾಸು ಬಂದಾಗ ಪತಿಯೇ ಅಂದು ಅಡುಗೆ ಮಾಡಿದ್ದ! ಅವಳಿಗೆ ಅಚ್ಚರಿಯಾಗಿತ್ತು. 'ಮಗು ಜೋಲಿಯಲ್ಲಿ ಮಲಗಿದೆ, ಸುಸ್ತಾಗಿದೆ ನಿನಗೆ, ಊಟ ಮಾಡು' ಎಂದ. ಊಟದ ನಡುವೆ ಬಟ್ಟಲಿನಲ್ಲಿ ಆಕೆಗೆ ಪುಟ್ಟ ಉಗುರುಗಳು ಸಿಕ್ಕವು. ಅನುಮಾನ ಬಂದು ಮಗುವೆಲ್ಲಿ ಎಂದು ಕೇಳಿದಳು. ಪತಿ ತಬ್ಬಿಬ್ಬಾದ. ತಾನು ಉಂಡಿದ್ದು ತನ್ನ ಮಗುವಿನ ಮಾಂಸವೆಂದು ತಿಳಿದದ್ದೇ ಆಕೆ ಕಾಳಿಯಾದಳು. ತಾಯಿಯಾದವಳಿಗೆಂತಹ ದಾರುಣ ಸ್ಥಿತಿ. ಗಂಡನನ್ನು ಕೊಂದು ಈ ಜಲಧಾರೆಯ ನೆತ್ತಿಯಿಂದ ಧುಮುಕಿ ಜೀವ ಕೊಟ್ಟಳು. ಅಂದಿನಿಂದ ಈ ಜಲಧಾರೆ ನೊಹ ಕಲಿಕೈ ಎಂಬ ಅವಳ ಹೆಸರಿನಿಂದ ಹೆಸರಾಯಿತು, ಎಂದು ಜನಪದೀಯ ಕತೆಯೊಂದನ್ನು ಸ್ಥಳೀಯರು ಅರುಹಿದರು.


ಸುಮಾರು 340 ಅಡಿಯಿಂದ ಧುಮುಕುವ ಇದರ ಸೌಂದರ್ಯ ಪದಗಳಲ್ಲಿ ಹಿಡಿದಿಡಲಾರದ್ದು. ಸ್ವಟಿಕ ಶುಭ್ರ ಹಸಿರು ವರ್ಣ ಲೇಪಿತ ನೀರು! ಆ ಎತ್ತರದಿಂದ ಬಳಕುತ್ತಾ ಧುಮುಕುವ ಇವಳು ಕಾಡನ್ನೆಲ್ಲಾ ಸುತ್ತಿ ಕೊನೆಗೆ ಬ್ರಹ್ಮಪುತ್ರ ನದಿಗೆ ಸೇರುವಳು. ಕ್ಷಣಗಳಷ್ಟೇ ದರುಶನ ಭಾಗ್ಯ. ಮಂಜಿನ ಪರೆದೆ ಯಾವಾಗ ಮುಚ್ಚಿ ಬಿಡುವುದೋ ತಿಳಿಯದು. ಬೆಳಗಿನ ಹೊತ್ತು ಇಲ್ಲಿಗೆ ಭೇಟಿ ಕೊಡುವುದು ಬಹಳ ಉತ್ತಮ. ಮಳೆಗಾಲದಲ್ಲಿ ಇದರ ಸೊಬಗೇ ಬೇರೆ. ಮೇ ನಿಂದ ನವೆಂಬರ್ ಭೇಟಿ ಕೊಡಲು ಸೂಕ್ತ ಸಮಯ. ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿ ತರೇವಾರಿ ತಿನಿಸುಗಳಿವೆ. ರಸ್ತೆಯುದ್ದಕ್ಕೂ ಊಟಕ್ಕೆ ಅನೇಕ ಹೋಟೆಲ್ಗಳಿವೆ. ನಾನು ಊಟ ಮಾಡಿದ ಹೋಟೆಲ್ ಗ್ರೀನ್ ಆಕರ್ಿಡ್ ಅದ್ಭುತವಾಗಿತ್ತು. ಇಲ್ಲಿನ ವಿಚಿತ್ರ ರುಚಿಯ ಚಟ್ನಿ ನನ್ನ ನಾಲಗೆ ತುದಿಯಲ್ಲಿ ಇನ್ನೂ ಜೀವಂತ!




'ಮಾವುಜ್ರಂಗ್' ಎಂಬ ಸ್ವಚ್ಚ ಊರನ್ನು ಹಾದು ಬರುವಾಗ ನನಗೆ ಕನರ್ಾಟಕದ ಬೀದಿಗಳೊಮ್ಮೆ ಕಣ್ಮುಂದೆ ಬಂದವು. ಇಲ್ಲಿನ ಪರಿಸರ ನಮಗೆ ಪರ ಲೋಕಕ್ಕೆ ಬಂದಂತೆ ಭಾಸವಾಗುತ್ತಿತ್ತು! ದಾರಿಗುಂಟ ಹುಡುಕಿದರೂ ಒಂದು ಸಣ್ಣ ಪ್ಲಾಸ್ಟಿಕ್ ಕಸ ನಿಮಗೆ ಸಿಗದು! ಮನೆಯ ಎದುರಿನ ಜಾಗವಲ್ಲದೇ ಪಕ್ಕದ ಮನೆಯವರೆಗೆ ಗುಡಿಸಿ ಸ್ಪಟಿಕ ಶುಭ್ರವಾಗಿಸುವ ಇವರ ಪರಿಸರ ಪ್ರೇಮ ಮೆಚ್ಚಲೇಬೇಕು! ರಸ್ತೆ ಗುಡಿಸುವ ಅನೇಕ ಸ್ಥಳೀಯರನ್ನು ಇಲ್ಲಿ ಕಂಡೆ. ಎಷ್ಯಾದಲ್ಲೇ ಸ್ವಚ್ಚ ಹಳ್ಳಿ ಪುರಸ್ಕಾರ ಪಡೆದಿರುವ 'ಮವುಲಿನ್ನೋಂಗ್' (Mawlynnong) ಶಿಲ್ಲಾಂಗ್ನಿಂದ ಕೂಗಳತೆಯ ದೂರದಲ್ಲಿದೆ.
 ಇಲ್ಲಿನ ಬೆಟ್ಟಗಳನ್ನು ಎಲ್ಲೆಲ್ಲೂ ಕೊರೆದ ಸುಣ್ಣದ ಕಲ್ಲಿನ ಗುಹೆಗಳು,  ಅಲ್ಲಿ ಕೆಲಸ ಮಾಡುವ ಕಾಮರ್ಿಕರು ನಮಗೆ ಕಾಣ ಸಿಗುತ್ತಾರೆ. ಜೊತೆಗೆ ಜಲ್ಲಿ ಕಲ್ಲಿನ ಕ್ವಾರಿಗಳೂ. ಹೀಗೆ ಮುಂದುವರಿದರೆ ಇನ್ನೊಂದು ಹತ್ತು ವರ್ಷಕ್ಕೆಲ್ಲಾ ಬೆಟ್ಟಗಳೆಲ್ಲಾ ಬಯಲಾಗಿ ಬಿಡುವುದರಲ್ಲಿ ಸಂಶಯವಿಲ್ಲ! ಸನಿಹದ ಸಿಮೆಂಟ್ ಕಾಖರ್ಾನೆಗೆ ಇಲ್ಲಿಂದಲೇ ಸುಣ್ಣದ ಕಲ್ಲು ಸರಬರಾಜಾಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಚಿರಾಪುಂಜಿಯ ಸುಮನೋಹರ ಬೆಟ್ಟಗಳನ್ನು ಬಲಿಕೊಡುವುದು ಎಷ್ಟು ಸರಿ? ಎಂಬ ಜಿಜ್ಞಾಸೆ ನನ್ನನ್ನು ಕಾಡುತ್ತಲೇ ಇದೆ. 
 ಈ ಜಲಧಾರೆಯ ನೋಡಿ ಸನಿಹದ 'ಅಕ್ಕ ತಂಗಿ ಜಲಧಾರೆ'(Seven sister water falls),  'ಮೌಸ್ವಾಮಿ' (  mawsmai cave) ಸುಣ್ಣದ ಕಲ್ಲಿನ ಗುಹೆ, 'ವಾಕಾಬಾ' ಜಲಧಾರೆ ಮುಂತಾದ ಅದ್ಭುತ ತಾಣಗಳನ್ನೂ ನೋಡಿ ಬರಬಹುದು. ಉಳಿದುಕೊಳ್ಳಲು ಶಿಲ್ಲಾಂಗ್ನಲ್ಲಿ ಸಾಕಷ್ಟು ವಸತಿ ನಿಲಯಗಳಿವೆ.

ಶ್ರೀಧರ್. ಎಸ್. ಸಿದ್ದಾಪುರ

Monday, June 17, 2019

ಕರಿ ಸಾಕ್ಸು ತೊಟ್ಟ ತುಂಟಿಯ ಸ್ವಗತ!



Angaeus sp. [Thomisidae family]
 ದಟ್ಟ ಕಾನನದ ನಡುವೆ ಹೊಳೆಯಂತೆ ಹರಿವ ಸರ ಹದ್ದಿನ ಹರ ದಾರಿಯಲಿ ಸ್ವಚ್ಚಂದವಾಗಿ, ರಾತ್ರಿಯವರೆಗೆ ಏಳಬಾರದೆಂದು ಸಣ್ಣ ಪೊದೆಯ ಟೊಂಗೆ ಮೇಲೆ ಮಲಗಿದ್ದೆ. 
 ಚಿಕ್ಕ ಗಿಡವೇ ನನ್ನ ಮನೆ. ಧೂಳೆಬ್ಬಿಸಿ, ಬರ್ರೆಂದು ಬರುವ ಬೈಕುಗಳ ಹಿಂಡು ಒಂದರ ಹಿಂದೊಂದು. ಎಲ್ಲರೂ ಮುಂದೆ ಮುಂದೆ ಹೋಗುವವರೇ. ಒಬ್ಬರೂ ನೋಡೋರೇ ಇಲ್ಲ! ನನ್ನ ಪುಣ್ಯ. ನನ್ನ ಜಾಗದ ಸನಿಹವೇ ಹಾದು ಹೋಗುವರು. ಆದರೆ ನನ್ನ ನೀಳ ನೀಳ ಕಾಲುಗಳು. ಕಾಲ ಬುಡದಲಿ ಮುಳ್ಳಿನಂತಹ ರಚನೆ. ಜೊತೆಗೆ ಸಾಕ್ಸ್ ತೊಟ್ಟಂತೆ ಕಾಣುವ ಕಪ್ಪು ಕಪ್ಪು ಕಾಲುಗಳು. ಕಣ್ಣುಗಳೋ ದುಂಡಗೆ ಕೆಂಪು ಕೆಂಪು. ಕಣ್ಣು ಗುಡ್ಡೆ ಎದ್ದಂತಿರುವ ನನ್ನ ಕಣ್ಣು ಕಂಡರೆ ನಿಮಗೆ ಭಯವಾಗಬಹುದು. ಭಯ ಪಡುವ ಅಗತ್ಯವಿಲ್ಲ. ಹಗಲಿನಲ್ಲಿ ತಣ್ಣಗೆ ಮಲಗುವ ನಾ ರಾತ್ರಿ ಕಾವಲುಗಾರ! 
spider ನ ಹಿಂಬಾಗ....
 ಕೈ ಕಾಲು ಮಡಚಿ ಮಲಗಿದವನ ಪಕ್ಕ ಪುಸಕ್ಕನೆ ಬೆಳಕಬಿಟ್ಟು ಎಬ್ಬಿಸಬೇಕೆ ಈ ಪುಣ್ಯಾತ್ಮ? ನನ್ನ ಇಷ್ಟು ಹತ್ತಿರ ಬಂದವರಿಲ್ಲ. ಒಮ್ಮೆಗೆ ಹೆದರಿಕೆಯೂ ಆಯಿತು. ಸುದಾರಿಸಿಕೊಂಡೆ. ಹಿಂದಿನಿಂದ ಮುಂದಿನಿಂದ ನನ್ನ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಮನುಷ್ಯನ ಮುಖವನ್ನು ಹೋಲುವ ನನ್ನ ಹೊಟ್ಟೆ ಭಾಗವನ್ನೂ ಈ ಪುಣ್ಯಾತ್ಮ ಕ್ಲಿಕ್ಕಿಸಿಕೊಂಡ. ಸಾಕ್ಸು ತೊಡಿಸಿದ್ದು ಯಾರೆಂದು ಕೇಳಬೇಡಿ. ಇಷ್ಟವಾದರೆ ಕ್ಲಿಕ್ಕಿಸಿ ಒಂದು ಲೈಕು!

ಶ್ರೀಧರ್. ಎಸ್. ಸಿದ್ದಾಪುರ.

Monday, June 10, 2019

ಹೂಲಿಯ ವಿಶಿಷ್ಟ ಪಂಚಲಿಂಗೇಶ್ವರ ದೇವಾಲಯ.


ಹೂಲಿಯ ದಾರಿಯಲ್ಲಿ.. 

ಕರ್ನಾಟಕದ ಸಾಮಾನ್ಯ ಹೆಸರುಗಳಾದ ಕಮಲಾಪುರ, ರಾಮಾಪುರ ಇತ್ಯಾದಿಗಳ ನಡುವೆ 'ಹೂಲಿ' ಎಂದೊಡೆ ಏನೋ ವಿಚಿತ್ರ ಹೆಸರು ಕೇಳಿದ ಭಾವ ನಮ್ಮಲ್ಲಿ ಮೂಡುತ್ತದೆ. 'ಹೂಲಿ' ಎಂದರೆ ಕಿವಿಯ ಆಭರಣ ಎಂದು. ಹಿಂದೆ ಮಹಿಷ್ಪತಿ ಎಂದು ಕರೆಯಲ್ಪಡುತ್ತಿದ್ದ ಊರಿಗೆ ಒಂದು ಸುತ್ತು ಹಾಕಿ ಬರೋಣ ಬನ್ನಿ.
ಪಂಚಲಿಂಗೇಶ್ವರ ದೇವಾಲಯ ಹಿಂದೆ ಬಸದಿಯಾಗಿತ್ತು.. 
ಕನರ್ಾಟಕದ ಅತಿ ಪುರಾತನ ನಗರವಾದ ಹೂಲಿ, ಪಂಚಲಿಂಗೇಶ್ವರ ಎಂಬ ವಿಶಿಷ್ಟ ದೇವಾಲಯದಿಂದಾಗಿ ನಮ್ಮ ಗಮನ ಸೆಳೆಯುತ್ತದೆ. ರಟ್ಟರ ಆಡಳಿತದಲ್ಲಿ ನಿಮರ್ಿಸಿ, ಚಾಲುಕ್ಯರಿಂದ ಪುರ್ನನಿಮರ್ಾಣಗೊಂಡ ವಿಶಿಷ್ಟ ದೇವಾಲಯ ಪಂಚಲಿಂಗೇಶ್ವರ. ಹುಬ್ಬಳ್ಳಿಯಿಂದ ಕೇವಲ 65 ಕಿ. ಮೀ, ಬೆಂಗಳೂರಿನಿಂದ 368 ಕಿ.ಮೀ ದೂರದಲ್ಲಿದೆ.

ಅನೇಕ ವಿಶಿಷ್ಟತೆಯಿಂದ ಈ ದೇವಾಲಯ ಪ್ರಸಿದ್ಧವಾಗಿದೆ. ಇದರ ಸುತ್ತ ಮುತ್ತ 9 ಬೀಳುವ ಮತ್ತು ಬೀಳುವ ಹಂತದಲ್ಲಿರುವ ದೇವಾಲಯಗಳಿವೆ. ಒಂದು ಒಂದಕ್ಕಿಂತ ಭಿನ್ನ. ಎಲ್ಲವೂ ಆಕರ್ಷಕವಾಗಿವೆ. ಆದರೆ ಅವುಗಳ ಅರಣ್ಯರೊಧನ ಕೇಳುವವರಿಲ್ಲ. 
ಒಂದು ಕಾಲದಲ್ಲಿ ಪಂಚ ತೀರ್ಥಂಕರ ಬಸದಿಯಾಗಿದ್ದ ಇದು ಈಗ ಪಂಚಲಿಂಗೇಶ್ವರವೆಂದು ಪ್ರಸಿದ್ಧಿ ಪಡೆದಿದೆ. ಪಂಚ ಗೋಪುರಗಳಲ್ಲಿ ಕೇವಲ ಮೂರು ಮಾತ್ರ ಉಳಿದಿದೆ. ವಿಶಾಲವಾದ ನವರಂಗ ಮೂರು ದಿಕ್ಕುಗಳಿಗೆ ತೆರೆದುಕೊಂಡಿದೆ. ನವರಂಗವು ಬಳ್ಳಿಗಾವಿಯನ್ನು ನೆನಪಿಸುತ್ತದೆ. ಇತಿಹಾಸದ ಯಾವುದೋ ಕಾಲಘಟ್ಟದಲ್ಲಿ ಬಸದಿ ಇದ್ದದ್ದು ಶೈವ ದೇವಾಲಯವಾಗಿ ಪಲ್ಲಟಗೊಂಡಿದೆ. ದೇವಾಲಯದ ಬಾಗಿಲ ಚೌಕಟ್ಟಿನ ಮೇಲೆ ಇದು ಬಸದಿಯಾಗಿತ್ತು ಎಂಬುದಕ್ಕೆ ಲಿಖಿತ ಮತ್ತು ಚಿತ್ರ ಮಾಹಿತಿ ಸಿಗುತ್ತದೆ! 
ಬೆಟ್ಟದಲ್ಲಿ ಕೋಟೆಯ ಅವಶೇಷಗಳು ... 
ದೇವಾಲಯದ ಆವರಣದಲ್ಲಿನ ಶಾಸನಗಳನ್ನು ಚೌಕಟ್ಟು ನಿಮರ್ಿಸಿ ಕಾಪಿಟ್ಟಿದ್ದಾರೆ. ಆ ಕಾಲದ ಒತ್ತಡಗಳ, ಸಾಮಾಜಿಕ ಬದಲಾವಣೆಗಳ ಚಿತ್ರಣಗಳ ಜೊತೆಗೆ ಜನ ಜೀವನದ ವಿವರಗಳು ಇಲ್ಲಿನ ಶಾಸನಗಳಿಂದ ನಮಗೆ ತಿಳಿದು ಬರುವುದು. ಊರ ಸುತ್ತಮುತ್ತ ಅನೇಕ ಭಗ್ನಾವಶೇಷಗಳು ಎಲ್ಲೆಲ್ಲೂ ಕಾಣಸಿಗುತ್ತದೆ. ಊರು ಈ ದೇವಾಲಯದೊಳಗೂ ನುಗ್ಗುವಂತಿದೆ. ದೇವಾಲಯದ ಆವರಣದಲ್ಲಿ ಸಣ್ಣ ವಸ್ತು ಸಂಗ್ರಹಾಲಯವೂ ಇದೆ. ಪುರಾತತ್ವ ಇಲಾಖೆ ಈ ದೇವಾಲಯದ ದೇಖರೇಖಿ ವಹಿಸಿಕೊಂಡಿದೆ.
ಸೂರ್ಯ ನಾರಾಯಣ ದೇವಾಲಯ, ಬಸವ ದೇವಾಲಯದ ಜೊತೆ ಜೊತೆಗೆ ಕಾಲ ಗರ್ಭಕ್ಕೆ ಸೇರಲು ಒಟ್ಟು 9 ದೇವಾಲಯಗಳು ತುದಿಗಾಲ ಮೇಲೆ ನಿಂತಿವೆ! ಪುರಾತತ್ವ ಇಲಾಖೆ ಹಾಗೂ ಜನರ ದಿವ್ಯ ನಿರ್ಲಕ್ಷ್ಯಕ್ಕೆ ಇಲ್ಲಿನ ಜನರ ಧನ ದಾಹಕ್ಕೆ ದೇವಾಲಯಗಳು ಸಂಪೂರ್ಣವಾಗಿ ನಲುಗಿವೆ.  
ದೇವಾಲಯದ ಸನಿಹದಲ್ಲಿನ ಬೆಟ್ಟದ ಮೇಲೆ ಉಳಿದುಕೊಂಡ ಒಂದೆರಡು ಬುರುಜುಗಳು ಇಲ್ಲಿ ಕೋಟೆ ಇತ್ತು ಎಂಬುದಕ್ಕೆ ಸಾಕ್ಷ್ಯ ನುಡಿಯುತ್ತೆ. ದೇವಾಲಯದ ಸನಿಹ ದೊಡ್ಡ ಕೆರೆಯಿದೆ. ಹತ್ತು ವರುಷದಿಂದ ಮಳೆಯಾಗದೆ ಊರು ಬಿಸಿಲಿಗೆ ನಲುಗಿದೆ. ಮಲಪ್ರಭಾ ನದಿಯ ನೀರನ್ನು ಬಳಸಿ ಕೃಷಿ ಮತ್ತು ಕುಡಿಯಲು ಬಳಸುತ್ತಾರೆ.
ನಮ್ಮ ಪೂರ್ವಜರ ಇತಿಹಾಸದ ಸಾಕ್ಷ್ಯ ಹೇಳುವ ನಮ್ಮ ಹೆಮ್ಮೆಯ ಕುರುಹನ್ನು ನಾವು ಉಳಿಸಿಕೊಳ್ಳದೇ ಹಾಳುಗೆಡಹುತ್ತಿರುವುದು ನಮ್ಮ ಇತಿಹಾಸದ ಪ್ರಜ್ಞೆಯನ್ನು ಕೆಣಕುತ್ತಿವೆ. ಪ್ರವಾಸೋಧ್ಯಮ ಇಲಾಖೆ ಮನಸು ಮಾಡಿದರೆ ಒಂದೊಳ್ಳೆಯ ಪ್ರವಾಸಿ ಕೇಂದ್ರ ಮಾಡಬಹುದಿತ್ತು.

ಶ್ರೀಧರ್. ಎಸ್. ಸಿದ್ದಾಪುರ.

Saturday, June 8, 2019

ಪ್ರಕೃತಿ ಇವುಗಳಿಗೆ ನೀಡಿದ ಆ ಅದ್ಭುತ ವರ ಯಾವುದು?


 ಥೊಮೊಸಿಡೆ ಪ್ರಭೇದಕ್ಕೆ ಸೇರಿದ ಈ ಜೇಡ ಅತ್ಯಂತ ಸ್ಪಷ್ಟವಾಗಿ ತನ್ನ ಬೇಟೆಯನ್ನು ಹುಡುಕಬಲ್ಲದು. ಆದರೆ ಮನುಷ್ಯ ಜಾತಿಗೆ ತನ್ನ ಆಹಾರವೇನೆಂದು ತಂದೆ ತಾಯಿ ನೀಡುತ್ತಾರೆ. ತಾನೆ ತನ್ನ ಆಹಾರ ಗುರುತಿಸಲಾರ! ತಂದೆ ತಾಯಿಯ ಗುಣಾವಗುಣಗಳನ್ನು ಹೆಕ್ಕಿಕೊಂಡು ನಮ್ಮದೇ ಆದ ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತೇವೆ. ಎಲ್ಲದಕ್ಕೂ ಪರಾವಲಂಬನೆ ತಪ್ಪಿದ್ದಲ್ಲ. ಸಣ್ಣ ಶೀತವಾದರೂ ವೈದ್ಯರಲ್ಲಿಗೆ ಓಡುತ್ತೇವೆ.
 


ಆದರೆ ಪುಟಾಣಿ ಜೇಡಗಳನ್ನು ಗಮನಿಸಿ. ತನ್ನ ಬಣ್ಣವೇನೆಂದು ತಿಳಿದು, ಅದನ್ನೇ ಹೋಲುವ ವಿವಿಧ ಗಿಡಗಳನ್ನು ಪರಿಸರದಲ್ಲಿ ಗುರುತಿಸಿ ಅಲ್ಲಿಗೆ ದಾಂಗುಡಿ ಇಟ್ಟು ತನ್ನನ್ನು ರಕ್ಷಿಸಿಕೊಳ್ಳುವುದಲ್ಲದೇ ಆಹಾರವನ್ನೂ ಹುಡುಕಬಲ್ಲದು! ಏನಾಶ್ಚರ್ಯ ನೋಡಿ ಇಲ್ಲಿರುವ ಕ್ರ್ಯಾಬ್ ಜೇಡವನ್ನು. ತನ್ನ ಬಣ್ಣವನ್ನೇ ಹೋಲುವ ಗಿಡವನ್ನು ಆರಿಸಿಕೊಂಡು ಅದರಲ್ಲಿ ಅರಳಿದ ಹೂವಿನ ದಂಟಿನ ಆಶ್ರಯ ಪಡೆದು ಅಲ್ಲಿಗೆ ದಾಂಗುಡಿ ಇಟ್ಟಿದೆ! ತನ್ನ ಬಣ್ಣ ಮತ್ತು ಗಿಡದ ಬಣ್ಣಗಳು ಒಂದೇ ಎಂದು ಅದಕ್ಕೆ ಹೇಳಿದವರ್ಯಾರು? ಅಲ್ಲಿ ಹೂವೊಂದು ಅರಳಿದ ಮಾಹಿತಿ ತಿಳಿಸಿದವರ್ಯಾರು? ಪ್ರಕೃತಿಯ ವಿಶಿಷ್ಟವಾದ ಈ ಅಂರ್ತಸಂವಹನ ನಮ್ಮನ್ನು ಆಶ್ಚರ್ಯಕ್ಕೆ ಕೆಡಹುವುದು. ಯಾರೂ ಕಲಿಸದೆಯೇ ತನ್ನ ಆಹಾರವನ್ನು ಗುರುತಿಸಿ ಬೇಟೆಯಾಡಬೇಕಾದರೆ ಅದಕ್ಕಿರುವ ಅದ್ಭುತವಾದ ಪ್ರಕೃತಿಯು ನೀಡಿದ ವರ ನಿಜಕ್ಕೂ ನಮ್ಮನ್ನು ಅಚ್ಚರಿಗೆ ನೂಕುವುದು.

 ಇವುಗಳನ್ನು ಗುರುತಿಸಲು ಹದ್ದಿನ ಕಣ್ಣಿನ ನನ್ನ ಸ್ನೇಹಿತ ಪ್ರಕಾಶನ ಸಹಾಯ ಹಸ್ತವಿದೆ. ಬೆಳಗಿನಿಂದ ಸಂಜೆವರೆಗೂ ಹಳದಿ ಬಣ್ಣದ ಕ್ರೋಟೊನ್ ಗಿಡದಲಿ ಕೂತು ಎರಡೂ ಬೇಟೆಯಲಿ ನಿರತವಾಗಿದ್ದವು. 
ಶ್ರೀಧರ್. ಎಸ್. ಸಿದ್ದಾಪುರ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...