ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ.

ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನಿರ್ದೇಶಕನ ಕೈಚಳಕದಿ ಮೂಡಿ ಬಂದಂತಹ ಊರು. ಕೋಲ್ ಬಿಸಿಲಿಗೆ ಕುಣಿವ ಚಿಟ್ಟೆ ದಂಡು. ನಿಮ್ಮ ಕಲ್ಪನೆಯೂ ಸಪ್ಪೆಯಾದೀತು ಸುಮ್ಮನಿರಿ. ಯಾರೋ ಚಿತ್ರಗಳಲ್ಲಿ ಬಿಡಿಸಿಟ್ಟ ಬಿದಿರ ಕಾಡು. ಹಾಡು ಹಾಡುವ ಹಳ್ಳೀ ‘ಕಾಂಗ್ ತಾಂಗ್’ ನಿಂದ ಅರ್ಧ ದಿನದ ಹಾದಿ. ಒಟ್ಟು ಜನಸಂಖ್ಯೆ ೭೫೦! ಹಾದಿ ತುಂಬಾ ಹೂವ ಹೊತ್ತ ಬೆಟ್ಟದಂಚು. ನೆನಪಿನ ನೀಲಿ ಕುಡಿದು ಕುಡಿ ಒಡೆದ ಆಕಾಶ. ಇಬ್ಬನಿ ತೋಯ್ದ ಒಂಟಿ ರಸ್ತೆ. ರಸ್ತೆಯುದ್ದಕ್ಕೂ ಫರ್ನ್ ಗಿಡಗಳ ಸ್ವಾಗತ. ನಿಲ್ಲದ ಬಿದಿರ ತೋಟದಲಿ ಅಲ್ಲಲ್ಲಿ ಕಿತ್ತಳೆ ಹಿಂಡಲು, ನಡುನಡುವೆ ಕಾಡು ಜನ. ವಿಹಂಗಮತೆ ಮತ್ತು ಪ್ರಪಾತಕ್ಕೆ ಮತ್ತೊಂದು ಹೆಸರು! ಇದು ಮೇಘಾಲಯದ ಕಾಂಗ್‌ತಾಂಗ್ ಹಳ್ಳಿಯಿಂದ ಜಾರುವ ಜಲಪಾತದ ದಾರಿಯಲ್ಲಿ ಕಂಡ ದೃಶ್ಯಾವಳಿ. ನಾಲಗೆ ಹೊರಳಲು ಕಷ್ಟ ಪಡುವ ಇಲ್ಲಿನ ಪ್ರತೀ ಊರಿನ ಹೆಸರು ನಾಲಗೆ ಸುರುಳಿ!
‘ಸೀಟಿʼ ಹೊಡೆಯುವ ಊರಿನಲ್ಲಿ!!
ಪುರದ ಹೊರಗೆ ಒರಗಿಕೊಂಡ ಸ್ವಾಗತ ಗೋಪುರ. ಹಾಡುವ ಹಳ್ಳಿ ಎಂಬ ವಿಶೇಷಣ (Whistling village of India). ಭಟ್ಕಳ ಬಳಿಯ ಹಾಡೋ ಹಳ್ಳಿ ಅಲ್ಲ. ಮೇಘಾಲಯದ ಸಣ್ಣೂರು! ಗುಡ್ಡದ ತುದಿಯೂರು. ವಿಶಿಷ್ಟ ಗುಡ್ಡಗಾಡು ಜನಾಂಗ. ಚಳಿ ಹೊತ್ತಿನಲ್ಲೂ ಬೆಳ್ಳಂಬೆಳಗ್ಗೆ ಪ್ರಾರಂಭವಾದ ಶಾಲೆ 12ರೊಳಗೇ ಮುಗಿದಿತ್ತು. ಅದರ ಸನಿಹವೇ ಪುಟಾಣಿ ಕಾಂಗ್ ತಾಂಗ್ ಬೋರ್ಡು. ಕ್ರಿಶ್ಚಿಯನ್ ಆಗಿ ಪರಿವರ್ತಿತರಾಗಿದ್ದಾರೆ. ಹೆಸರೂ ಅವರದೇ.
ವಸಾಹತುಶಾಹಿಗಳ ಆರ್ಭಟದಿಂದ ಮೂಲ ಸಂಸ್ಕೃತಿಯ ಪಳಿಯುಳಿಕೆಯಷ್ಟೇ ಉಳಿದಿದೆ! ಮೂಲತಃ ಇವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ. ಕೇವಲ ಬೆಟ್ಟವಾಸಿ ಬುಡಕಟ್ಟು. ಮೂಲತಃ ಸೆಂಗ್ ಖಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇವರನ್ನು ಬ್ರಿಟಿಷ್‌ರು ಕ್ರಿಶ್ಚಿಯನ್‌ರಾಗಿ ಪರಿವರ್ತಿಸಿದ್ದಾರೆ. ಇಲ್ಲಿಂದ ಇನ್ನೊಂದು ತುದಿಯಲ್ಲಿರುವ ವಾಕೆನ್ ಹಳ್ಳಿಗರು ಇನ್ನೂ ವರ್ಜಿನ್ ಗಳಾಗಿ ಉಳಿದಿದ್ದಾರೆ. ಯಾವುದೇ ಧರ್ಮಕ್ಕೆ ಸೇರದ ಇವರು ಸರಳರು. ಕಾಂಗ್ ತಾಂಗ್ ನಿಂದ ವಾಕೆನ್ ಹಳ್ಳಿಗೆ ನಮ್ಮ ಪಯಣವು ಮತ್ತೊಂದು ಸೋಜಿಗ. ಮತ್ತೆಂದಾದರೂ ಪುರುಸೊತ್ತು ಮಾಡಿಕೊಂಡು ವಾಕೆನ್ ಕತೆ ಹೇಳುವೆ.
ಕಾಂಗ್ ತಾಂಗನ ಹಳ್ಳಿ ಹೆಂಗಸು.
ಸೀಟಿಯೊಂದು ಹೆಸರಾಗಿ:-
ಇಲ್ಲಿ ಮಗುವಿಗೊಂದು ಹೆಸರಿನಂತೆ ಹುಟ್ಟಿನಿಂದ ‘ಸೀಟಿಯೊಂದು’ ಮಗುವಿಗೆ ಇಡಲಾಗುತ್ತದೆ. ಸಿಳ್ಳೆಯಿಂದಲೇ ಮಗುವನ್ನು ಕರೆಯಲಾಗುತ್ತದೆ. ಹೆಂಗಳೆಯರನ್ನೂ ನೀವು ಸೀಟಿಯೂದಿ ಕರೆಯಬಹುದು! ಯಾರೂ ತಪ್ಪು ತಿಳಿಯಲ್ಲ! ಹಾಗಂತ ಸೀಟಿಯ ಹೊಡೆಯಬೇಡಿ.
ʼಜಿನ್ಗ್ರವಾಯಿ ಲಾವ್ಬಿʼ ಎಂಬ ವಿಶಿಷ್ಟ ಭಾಷಾ ಅಧ್ಯಯನಕ್ಕೆ ಅಮೇರಿಕಾ ಜರ್ಮನಿಯಿಂದೆಲ್ಲಾ ಸಂಶೋಧಕರ ತಂಡ ಇಲ್ಲಿಗೆ ಭೇಟಿ ನೀಡುತ್ತಾರೆ! ಈ ವಿಶಿಷ್ಟ ಪದ್ಧತಿಯಲ್ಲಿ ಮಗುವಿಗೆ ವಿಶಿಷ್ಟವಾದ ಸ್ವರವೊಂದನ್ನು ತಾಯಿಯಾದವಳು ನೀಡುವಳು. ಇದರಲ್ಲಿ ಎರಡು ವಿಧಗಳಿವೆ ಒಂದು ಚಿಕ್ಕ ಸ್ವರ ಇನ್ನೊಂದು ದೀರ್ಘ. ಜೀವ ಮಾನವಿಡಿ ಅದೇ ಸ್ವರದಿಂದ ಅವನನ್ನು/ಅವಳನ್ನು ಕರೆಯಲಾಗುತ್ತದೆ. ಊರಿನವರೆಲ್ಲಾ ಅದೇ ಸ್ವರದಿಂದ ಆತನನ್ನು/ಆಕೆಯನ್ನು ಗುರುತಿಸುತ್ತಾರೆ. ಬೆಟ್ಟದ ಮೇಲೆ ವಾಸಿಸ ಹೊರಟ ಇವರು ತಮ್ಮತನವನ್ನು ಉಳಿಸಿಕೊಳ್ಳಲು ಕಂಡು ಕೊಂಡ ವಿಚಿತ್ರ ಕ್ರಮ. ಬೆಟ್ಟದಲ್ಲಿನ ಕೆಟ್ಟ ಶಕ್ತಿಗಳು ಕಣ್ಣು ಹಾಕದಿರಲಿ ಎಂಬ ಮುಂದಾಲೋಚನೆಯ ಫಲವಾಗಿ ಈ ರೀತಿಯಾಗಿ ಮುಗುವಿಗೆ ಹೆಸರನ್ನಲ್ಲದೇ ʼಸೀಟಿʼಯಿಂದ ಕರೆಯುವ ಕ್ರಮ ರೂಢಿಗೆ ಬಂತು ಎನ್ನುತ್ತಾರೆ ನಮ್ಮ ಗೈಡ್ ಫಿಡ್ಲಿಂಗ್ ಸ್ಟಾರ್‌ನ ಅಮ್ಮ!
ಹುಟ್ಟಿಗೊಂದು ಹೆಸರಿಟ್ಟು : –
ನಾವೆಲ್ಲಾ ಮಗು ಹುಟ್ಟಿದರೆ ಹೆಸರಿಡಲು ಒದ್ದಾಡಿದಂತೆ ಇಲ್ಲಿ ಆತನಿಗೆ ಸೀಟಿಯಂತಹ ಹೆಸರಿಡಲು ತಾಯಿ ಒದ್ದಾಡುವಳು. ಇಲ್ಲಿ ಹೆಸರೆಂಬುದೇ ಸೀಟಿ. ಹೊಸಕಂಪನ ಹೊಸ ಅಲೆ. ಅಮ್ಮನ ಮಡಿಲ ಶಾಖ. ನೆಲಮೂಲವಾದ ವಿಶಿಷ್ಟ ಸಂಸ್ಕೃತಿ! ಪ್ರತಿಯೊಬ್ಬನಿಗೂ ಒಂದು ವಿಶಿಷ್ಟ ಸೀಟಿ (ವಿಶಿಲ್) ಎಷ್ಟೇ ದೂರದಲ್ಲಿರಲಿ ಆತನಿಗದು ಕೇಳುವ ಕಂಪನನಾಂಕದಲ್ಲಿರುತ್ತದೆ. ಇದನ್ನೆಲ್ಲಾ ನಾವು ನಮ್ಮ ಗೈಡ್ ಫಿಡ್ಲಿಂಗ್ ಸ್ಟಾರ್ ಮನೆಯಲ್ಲಿ ಕುಳಿತು ಮಾತನಾಡುತ್ತಾ ತಿಳಿದುಕೊಂಡೆವು. ಇಲ್ಲಿನ ೨೩ ಹಳ್ಳಿಗಳಲ್ಲಿ ಈ ಕ್ರಮ ಅನುಸರಿಸುತ್ತಾರೆ ಎಂಬುದು ಸೋಜಿಗ. ಆದರೆ ಕಾಂಗ್ ತಾಂಗ್ ಮಾತ್ರ Whistling village of India ಎಂದು ಕರೆಯಿಸಿಕೊಂಡಿದೆ.
ಜಾರ್ ಬಂಡೆ ಜಲಪಾತದ ಸಂಗದಲಿ ಸಿಕ್ಕ ಕೊಂಗ್ ತಾಂಗ್ ಎಂಬ ಹಾಡುವ ಹಳ್ಳಿ ಬೋನಸ್.
ಇಲ್ಲಿಗ್ಯಾವ ಟಿಂಪೊ ವ್ಯವಸ್ಥೆಯಾಗಲೀ ಬಸ್ಸಿನ ವ್ಯವಸ್ಥೆಯಾಗಲಿ ಇಲ್ಲ. ಶಿಲ್ಲಾಂಗಿನಿಂದ ಕಾರು ಅಥವಾ ಬೈಕ್ ಬಾಡಿಗೆಗೆ ಪಡೆದು ಬರಬೇಕು. ನಾವೊಂದು ಕಾರು ಬಾಡಿಗೆಗೆ ಹಿಡಿದು ಹೊರಟೆವು.
ಜಲಧಾರೆಯೆಡೆಗೆ :-
ಸೀಟಿ ಹೊಡೆಯುವ ಕಾಂಗ್ ತಾಂಗ್ ಎಂಬ ವಿಚಿತ್ರ ಹಳ್ಳಿಯಿಂದ ಎರಡು ಪುರಿ ಹೊಡೆದು ಹೊರಟಾಗ ಗಂಟೆ 11. ನಿನ್ನೆ ರಾತ್ರಿಯೇ ಬಂದಿಳಿಯಬೇಕಿತ್ತು ಅನಿಸಿತೆನಗೆ.
ಮುಗಿಲಿಗೆ ಮುಟ್ಟೋ ಹುಮ್ಮಸ್ಸು ಹೊತ್ತ ನಾವು ಗೈಡ್ ಇಬ್ಬರ ಜೊತೆಗೆ ಪ್ರಪಾತಕ್ಕೆ ಇಳಿಬಿಟ್ಟಂತಹ ನಾಗವೇಣಿಯಂತಹ ದಾರಿಯಲ್ಲಿ ಹೊರಟೆವು. ಭಾಷೆ ಬಾರದ ಚಂದಕೆ ನೀಟಾಗಿದ್ದ ಗೈಡ್, ಅವನ ಜೊತೆಗೊಂದು ವಿಚಿತ್ರ ಕತ್ತಿ. ನೋಡಿದರೆ ಭಯ ಪಡಬೇಕು! ಇಂತಹ ಕತ್ತಿಗಳು ಇಲ್ಲಿ ಸರ್ವೇ ಸಾಮಾನ್ಯ!
ನಾಲಗೆ ರುಚಿಗೆ ಬಲಿಯಾದ ನವ ಯುವಕರು:-
ಸ್ವಲ್ಪ ದೂರ ನಡೆಯುತ್ತಲೇ ಎದುರಾದ ಡಬ್ಬಿ ಅಂಗಡಿ. ಗಿರಾಕಿಗಾಗಿ ಕಾಯೋ ನಿರ್ಲಿಪ್ತ ಕಣ್ಣಿನ ವ್ಯಾಪಾರಿ ಬೀಡಿ ಹಚ್ಚಿದ್ದ. ನಾವೇನೋ ಆತ್ಮಹತ್ಯೆಗಾಗಿ ಹೊರಟವರಂತೆ ಪ್ರಪಾತಕ್ಕೆ ಇಳಿಬಿದ್ದೆವು. ಅಯ್ಯೋ ಎನ್ನುವ ನಿರುದ್ವಿಗ್ನ ನೋಟ ಬೀರಿ ನಮ್ಮನ್ನು ಕಳುಹಿಸಿಕೊಟ್ಟ. ಆತನ ದೃಷ್ಟಿಯೂ ಹಾಗೆ ಇತ್ತು! ಲಿಮ್ಕಾ, ಕೊಕೋ ಕೊಲಾ, ಲೇಸ್, ಆತನಂಗಡಿಯಲಿ ಹಲ್ಲು ಕಿಸಿಯುತ್ತಾ ನೇತು ಬಿದ್ದಿದ್ದವು. ಜಾಗತೀಕರಣದ ಜಾರುಬಂಡಿಯಲಿ ಎಲ್ಲರೂ ಜಾರಲು ತೊಡಗಿದ್ದಾರೆ!
ಜಾಗತೀಕರಣ, ವ್ಯಾಪಾರಿಕರಣ, ಪ್ರೀತಿಯನ್ನು ನೆಲಮಟ್ಟದ ಸಂಸ್ಕೃತಿಯನ್ನು ದೋಚುತ್ತಲೇ ಇದೆ. ಪಿಜ್ಜಾ, ಬರ್ಗರ್ ರುಚಿಗೆ ನಮ್ಮೂರಿನ ಆರೋಗ್ಯಕರ ತಿನಿಸುಗಳು ಹೇಳ ಹೆಸರಿಲ್ಲದೇ ಜಾಗ ಕೀಳುತ್ತಿವೆ. ಕಿತ್ತಳೆ ರಸದ ರುಚಿಗೆ ಪಕ್ಕಾದ ನಾಲಿಗೆಯಲಿ ಘಂಟಾ ಥಂಸಪ್ ರುಚಿ ಮೊಗ್ಗ ಅರಳಿಸಲು ಹೊರಟಿದ್ದಾರೆ. ಜಾಗತೀಕರಣವೇ ಜಗತ್ತನ್ನು ಆಳುತ್ತಿವೆ. ಎಲ್ಲರೂ ಇಲ್ಲಿ ಖರೀದಿದಾರರೇ. ಕಳೆದ ವರ್ಷ ಪಾರ್ವತಿ ಕಣಿವೆಯ ಕೊನೆಯ ಹಳ್ಳಿ ತೋಷ್‌ಗೆ ಹೋದಾಗ ಅಲ್ಲಿಯೂ ಜರ್ಮನ್ ಬೇಕರಿಗಳು ಜಾಗ ಮಾಡಿಕೊಂಡಿರುವುದು ವಿಪರ್ಯಾಸ! ನಮ್ಮ ಅದ್ಭುತ ರುಚಿಯ ತಿಂಡಿಗಳನ್ನು ನಾವು ಶೋಕೇಸ್ ಮಾಡದೇ ಇದ್ದಿದ್ದು ನಮ್ಮ ಸೋಮಾರಿತನವೋ, ನಮ್ಮದೆಲ್ಲಾ ಕೀಳೆಂಬ ನಮ್ಮದೇ ಮೌಡ್ಯವೋ? ಅದನ್ನು ಬಿತ್ತಿದ ಹೊಸ ಶಿಕ್ಷಣ ನೀತಿಯೋ?!
ದಾರಿ ತಪ್ಪಲಿ ದೇವರೇ!
ಅಪ್ರತಿಮ ಮೇಘಾಲಯದ ಸುಂಟರಗಾಳಿಯಂತಹ ಸೌಂದರ್ಯಕ್ಕೆ ಮರುಳಾಗಿ ಇಳಿಯೊ ಹಾದಿಯಲ್ಲಿ ದಾರಿತಪ್ಪಿ ಬಲಕೆ ತಿರುಗೋ ಬದಲು ನೇರವಾಗಿ ಹೊರಟ ಗೆಳೆಯ ಹಾದಿ ತಪ್ಪಿದ! ನಿಜವಾಗಿ ದಾರಿ ತಪ್ಪಿದ್ದು ಅವನೋ ನಾವೋ ಗೊತ್ತಿಲ್ಲ. ದಾರಿ ತಪ್ಪಿದ ಮಗ. ಇಬ್ಬರು ಗೈಡ್‌ಗಳಲ್ಲಿ ಭಾಷೆ ಬಾರದ ವಿಚಿತ್ರ ಕತ್ತಿ ಹಿಡಿದ ಗೈಡ್ ಒಬ್ಬನೇ ನನ್ನ ಜೊತೆಗೆ ಉಳಿದ. ಎದೆಯಲ್ಲಿ ಕುಟ್ಟವಲಕ್ಕಿ. ಸುತ್ತಲೂ ನಿಬಿಡಾರಣ್ಯ. ಜೀರುಂಡೆ ಗಾಯನ. ಹಾದಿ ತಪ್ಪಲು ನೂರಾರು ದಾರಿ. ಇವನೋ ಅನನುಭವಿ. ಆದರೆ ಇವನಷ್ಟು ಪಾಪದ ಅಮಾಯಕ ಮತ್ತೊಬ್ಬನಿಲ್ಲ ಎಂಬುದು ಸ್ವಲ್ಪ ಹೊತ್ತಿಗೆ ತಿಳಿಯಿತು. ಬಯಲಿನ ಜನರಂತಲ್ಲ ಬೆಟ್ಟದವರು! ಕಾನನದ ಸ್ವರ ಸಂಮೋಹನಕ್ಕೆ ಒಳಗಾಗಿ ಜಲಧಾರೆಯ ನೆತ್ತಿಗೆ ನಡೆದು ತಲುಪಿದೆವು. ಅಂತೂ ಜಲಧಾರೆಯ ನೆತ್ತಿ ತಲುಪಿಸಿದ!
ಏನ್ ಅಚ್ಚರಿ ನಮಗಿಂತಲೂ ಮುಂದೆ ಗೆಳೆಯನ ಸವಾರಿ ಬಂದು ತಲುಪಿತ್ತು. ಬಂದವನೇ ದಾರಿ ತಪ್ಪಿದ್ದೇ ಒಳ್ಳೇದಾತು ಅಂತಿದ್ದ! ದಾರಿ ತಪ್ಪಲಿ ದೇವರೇ ಅಂತ ಬೇಡಿಕೊಂಡಿರಬೇಕು ಆತ! ದಾರಿ ತಪ್ಪಿದ್ದರಿಂದ ಮೇಘಾಲಯದ ಅತಿ ಎತ್ತರದ ಬೇರಿನ ಸೇತುವೆ, ಇನ್ನೊಂದೆರಡು ಜಲಧಾರೆಯ ಸಖ್ಯ ಬೆಳೆಸಿ ಬಂದಿದ್ದ. ಕಷ್ಟವಾದರೂ ಅದನ್ನೆಲ್ಲಾ ಅಚಾನಕ್ ಆಗಿ ನೋಡುವ ಅವಕಾಶವೊಂದು ಅವನ ಪಾಲಿಗೆ ಬಂತು. ಇಂತಹ ದಾರಿಗಳಲ್ಲಿ ಸದಾ ದಾರಿ ತಪ್ಪಲಿ. ಹೊಸ ಅಚ್ಚರಿಗಳು ತೆರೆದುಕೊಳ್ಳಲಿ! ಸದಾ ದಾರಿ ತಪ್ಪಿಸು ದೇವರೇ.
ದಾರಿ ತಪ್ಪಿದ್ದು ಒಳಿತೇ ಆಯಿತು ಎಂದೆನ್ನುತ್ತಾ ಹಿಂದಿರುಗಿದ ಮೆಲ್ಲಗೆ ಅರುಹಿದ ಗೆಳೆಯ! ಬಿದ್ದರೂ ಮೀಸೆ ಮಣ್ಣಾಗಲಿಲ್ಲ! ಮೇಘಾಲಯದ ಅತಿ ಎತ್ತರದ ಬೇರಿನ ಸೇತುವೆ ಇರುವುದೇ ಇಲ್ಲಿ. ಮತ್ತೆ ಮತ್ತೆ ಇಂತಹ ದಾರಿಯಲ್ಲಿ ದಾರಿ ತಪ್ಪಿಸು ದೇವರೇ ಎಂದು ಬೇಡಿಕೊಳ್ಳುವೆ ಎಂದ! ರುಚಿಕಟ್ಟಾದ ನಾಲ್ಕು ಫೋಟೋ ತೆರೆದಿಟ್ಟ! ಒಂದಕ್ಕಿಂತ ಒಂದು ಚೆಂದದ ಹೊಟ್ಟೆಕಿಚ್ಚಾಗುವಂತಹ ಚಿತ್ರ!! ದಾರಿ ತಪ್ಪಿಯೂ ನಮಗಿಂತ ಮೊದಲೇ ಜಲಪಾತದ ನೆತ್ತಿ ಹತ್ತಿ ಕುಣಿಯುತ್ತಲಿದ್ದ!
ತಣ್ಣಗಿನ ನೀರಲ್ಲಿ ಜಾರುತ್ತಲೇ ಕೊಳ ಒಂದಕ್ಕೆ ಜಾರಲು ವಿದೇಶಿಗನೊಬ್ಬ ಸಶಬ್ದವಾಗಿ ಜಾರಿ ನಮಗೆ ಒಂದೆರಡು ಟ್ರಯಲ್ ತೋರಿದ ಮೇಲೆ ಸ್ವಲ್ಪ ಧೈರ್ಯ ಮಾಡಿ ಹೊರಟಿತು ಗೆಳೆಯನ ಸವಾರಿ. ಹೊರಟಿದ್ದೇನೋ ಸರಿ ನಡುವೆಯೇ ಜಾರದೆ ಸ್ಟ್ರಕ್ ಆಯಿತು. ಕೊನೆಗೂ ಕುಂಡೆ ಹರಿದುಕೊಳ್ಳದೇ ಗೆಳೆಯನ ಸವಾರಿ ಜಾರುತ್ತಾ ಕೆಳಗೆ ಬಂದಿತು! ನೀರ ಹೊಂಡಕ್ಕೆ ʼಗುಳುಮುಳಕʼದಂತೆ ಮುಳುಗು ಹಾಕಿದ. ನನ್ನ ಪುಣ್ಯ ಜಾರಿ ಪ್ರಪಾತಕ್ಕೆ ಹೋಗಲಿಲ್ಲ. ನಾನೂ ಸ್ವಲ್ಪ ಹೊತ್ತು ಸ್ಪಟಿಕ ಶುಭ್ರ ನೀರಲ್ಲಿ ಮಿಂದೆದ್ದು ಪುಣಕಗೊಂಡೆ. ಜಾರುವಿಕೆ ಎಲ್ಲಿಯಾದರೂ ಆಯತಪ್ಪಿದರೆ ನೇರ ಪ್ರಪಾತ ದರ್ಶನ! ಒಂದು ಹಲ್ಲೂ ಸಿಗದ ಮಹಾ ಬ್ರಹ್ಮಗುಂಡಿ. ಅವಾಂತರವಾಗುವುದು ಬೇಡವೆಂದು ನಾನಾ ಸಾಹಸಕ್ಕೆ ಇಳಿಯಲೇ ಇಲ್ಲ. ದಟ್ಟ ಕಾನನದ ನಡುವೆ ಅವಿತಿರುವ ಪ್ರಕೃತಿ ಮಡಿಲ ಈ ತಾಣ ರಮ್ಯಾದ್ಬುತ!
ಇಳಿ ಸಂಜೆಗೆ ಮೇಘಾಲಯದ ಹಾಡು ಹಳ್ಳಿಯಲ್ಲಿ ಅಂದು ತಂಗಿದೆವು. ಅಲ್ಲಿನ ಜೀರುಂಡೆ ಗಾಯನ, ನೊಣದ ಬೋನು ಗಿಡಗಳೊಂದಿಗೆ ಲೀನವಾಗಿ ಅಲ್ಲಿನ ಕಾಟೇಜ್ ಒಂದರಲ್ಲಿ ಉಳಿದುಕೊಂಡೆವು.
.
ನೂರಾರು ಆರ್ಕಿಡ್‌ಗಳು ನಮಗೊಂದು ಅಚ್ಚರಿ! ಎಲ್ಲೆಲ್ಲೂ ಆರ್ಕಿಡ್‌ಗಳು. ಚಿತ್ರ ವಿಚಿತ್ರ ಬಣ್ಣಗಳು. ಕೆಲವನ್ನು ಕತ್ತರಿಸಿ ತಂದು ನಾವು ಉಳಿದುಕೊಂಡಿದ್ದ ಕಾಟೇಜ್‌ನಲ್ಲಿ ಬೆಳೆಸಿದ್ದರು. ಒಂದಿಷ್ಟು ತರೇವಾರಿ ಜೇಡಗಳು, ನೂರಾರು ಚಿಟ್ಟೆಗಳ ಮೆರವಣಿಗೆ ನಮಗೆ ಮುದ ನೀಡುತ್ತಲಿತ್ತು! ನೈಸರ್ಗಿಕ ಪರಿಸರದಲ್ಲಿ ನೊಣದ ಬೋನು ಎಂಬ ವಿಸ್ಮಯಕಾರಿ ಸಸ್ಯವನ್ನು ಬೆಳೆಸಿದ್ದ ನಮ್ಮ ಕಾಟೇಜ್ ಮಾಲೀಕ! ಎರಡನೆಯ ಬಾರಿಗೆ ಇಷ್ಟು ಸಂಖ್ಯೆಯ ನೊಣದ ಬೋನು ನೋಡಿದ ಖುಷಿ. ಅತ್ಯಂತ ಶುಭ್ರವಾಗಿಟ್ಟುಕೊಂಡ ಆತನ ಕಾಟೇಜ್ ಬಹಳ ಇಷ್ಟವಾದವು.
ಇಲ್ಲಿಂದ ನಮ್ಮ ಸವಾರಿ ಹೊರಟಿದ್ದು ವಾಕೆನ್ ಎಂಬ ಮತ್ತೊಂದು ವಿಶಿಷ್ಟ ಹಳ್ಳಿಗೆ. ಆ ಕತೆಯನ್ನು ಮತ್ತೊಮ್ಮೆ ಅರಹುವೆ.
No comments:
Post a Comment