Sunday, April 11, 2021

ಎಲೆಲೆ ಕೀಟ!!



ಎಲೆಯಂತಿರುವ ಹೊಟ್ಟೆಯ ಭಾಗ.



ಹೊಸಬನಲ್ಲನಿವ ಹಳೆಯ ಗಿರಾಕಿ
ಹೊಡೆಯುತಿದ್ದ ಮನೆ ಸನಿಹವೇ ಗಿರಕಿ 
ನನ್ನ ಹಳೆಯ ಗೆಳೆಯ!

ಬಾಯದು ಬಾಯಲ್ಲ
ಕಣ್ಣದು ಕಣ್ಣಲ್ಲ
ಇರುವಲ್ಲ್ಯಾವುದೂ ಇಲ್ಲ
ನೋಟಕನ ನೋಟ 
ಎಲ್ಲವೂ ಚಿತ್ತ ಬ್ರಾಂತಿ!!!







ಮಳೆಗಾಲದ ಒಂದು ಮುಂಜಾನೆ ಸಣ್ಣಗೆ ಮೋಡ ಕವಿದಿತ್ತು. ತಣ್ಣನೆ ಗಾಳಿ ಹೊಯ್ಯುತ್ತಿತ್ತು. ಅಜ್ಜಿ ನರುಕಿದಂತೆ, ಹುಡುಗಿ ಮಿಡುಕಿದಂತೆ  ಸುರಿಯುತ್ತಿತ್ತು ಮಳೆ. ಕೊಡೆಯೊಂದನು ಕೊಂಡು ಸರ್ಕಸ್ ಮಾಡುತ್ತಾ ಮನೆಯ ಸನಿಹದ ಕಾಡು ತಲುಪಿ, ಕ್ಯಾಮರಕ್ಕೆ ಬೇಕಾದ ಸಲಕರಣೆಗಳನು ಜೋಡಿಸುವ ಹೊತ್ತಿಗೆ ಮಳೆ ನಿಂತಿತು. ಕಾಡು ಹಬ್ಬಿದ್ದ ಕಡೆ ಕಣ್ಣು ಹಾಯಿಸಿದರೆ ಯಾವ ಕೀಟವೂ ಕಣ್ಣಿಗೆ ಬೀಳಲೇ ಇಲ್ಲ. ಕೆಲವು ಹೂಗಳ ಚಿತ್ರ ತೆಗೆಯೋಣವೆಂದು ಪರಿಮಳ ರಹಿತ ಕಾಡು ಹೂಗಳ ಸಾಂಗತ್ಯಕ್ಕೆ ನಿಂತೆ. ಕೆಲವು ಬಿರಿದಿದ್ದವು ಕೆಲವು ಬಿರಿಯುವ ತಯಾರಿಯಲ್ಲಿದ್ದವು. ಆಗಲೇ ಕಾಂಗ್ರೆಸ್ ಗಿಡದ ಬುಡದಲ್ಲೇನೋ ಅಲ್ಲಾಡಿದ ಅನುಭವವಾಯಿತು. ಅದೊಂದು ಒಣಗಿದ ಎಲೆಯಂತಿದೆಯೆಲ್ಲಾ ಎಂದು ಸುಮ್ಮನಾದೆ. ಮತ್ತೆ ಒಣಗಿದೆಲೆಯಲಿ ಸಣ್ಣ ಅಲುಗಾಟ. ಇದೇನೆಂದು ನೋಡೋಣವೆಂದು ಸನಿಹಕೆ ಹೋದರೆ ಯಾವುದೋ ಹುಳುವೊಂದನು ಗುಳಕಾಯಿಸಿ ಗಮ್ಮತ್ತಿನಲಿ ಕುಂಡೆ ಅಲ್ಲಾಡಿಸುತ್ತಿತ್ತು ಈ ಕೀಟ. ಅರೆರೆ ಇದು ಎಲೆಯಂತಿದೆ. ಎಲೆಲೆ ಕೀಟ. ಸಾಮಾನ್ಯ ನೋಟಕೆ ಸುಲಭಕ್ಕೆ ಯಾಮಾರಿಸುವ ಕಲೆ ಕರಗತ ಮಾಡಿಕೊಂಡಿದೆ. ಇದ್ದರೂ ಇಲ್ಲದಂತಿರುತ್ತದೆ. ಅದರ ಕಣ್ಣಿನಂತಿರುವ ಭಾಗ ಕಣ್ಣಲ್ಲ. ಬಾಯಿಯಂತೆ ರಚಿತಗೊಂಡಿರುವ ಭಾಗ ಬಾಯಲ್ಲ. ಎಲ್ಲವೂ ಮಾಯೆ ಬ್ರಾಂತಿ. ಕೆಳಗೆ ಬಾಯಿಯಂತಿರುವ ಅಂಗ ನಿಜಕ್ಕೂ ಅದರ ಬಾಯಿಯಲ್ಲ! ಅದರ ಒಳ ಪದರ ಗುಲಾಬಿ ಬಣ್ಣದಿಂದ ಕೂಡಿದ್ದು ತುಂಬಾನೇ ಆಕರ್ಷಕವಾಗಿದೆ. ಈ ಒಂದು ಕೀಟದಲ್ಲೇ ಅನೇಕ ಪ್ರಭೇದಗಳಿದ್ದು ಪ್ರತಿಯೊಂದು ಒಂದರಿಂದ ಒಂದು ಭಿನ್ನವಾಗಿವೆ. ಡ್ರಾಗನ್ ಹಾತೆ, ಇರುವೆ ಮುಂತಾದವೆ ಇವುಗಳ ಆಹಾರ. ಒಟ್ಟಾರೆಯಾಗಿ ಆಹಾರ ಸೂಕ್ಷ್ಮ ಸರಪಳಿಯ ಭಾಗವಾಗಿರುವ ಇವು ಅನನ್ಯ ಜೀವಿಗಳು. ಸೂರ್ಯನ ಕುದುರೆಗಳೆಂದು ಕರೆಯಿಸಿಕೊಳ್ಳುವ ಇವು ಕೀಟ ಜಗತ್ತಿನ ವಿಶಿಷ್ಟ ಮುಕುಟ ಮಣಿಗಳು. 

ಶ್ರೀಧರ್ ಎಸ್. ಸಿದ್ದಾಪುರ.
 


 

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...