Monday, July 3, 2023

ಸುರಿವ ಮಳೆಯಲ್ಲೊಂದು ತಿಥಿಯೂಟ.

ನಾನಾಗ 8 ನೇ ತರಗತಿಯಲ್ಲಿ ಓದುತ್ತಿದ್ದೆ. ಹಠ ಹಿಡಿದ ಮಗುವಿನಂತೆ ಧೋ ಎಂದು ಮೂರು ದಿನದಿಂದ ಮಳೆ ಹೊಯ್ಯುತ್ತಿತ್ತು. ರಸ್ತೆ, ಚರಂಡಿ,  ಎಲ್ಲೆಲ್ಲೂ ಕೊನೆಗೆ ನಮ್ಮ ಮನದಲ್ಲೂ ಧೋ ಎಂಬ ಜಡಿ ಮಳೆ ಹೊಯ್ಯುತ್ತಲೇ ಇತ್ತು.

ಹತ್ತು ಕಿಲೋ ಮೀಟರ್ ದೂರದ ಶಾಲೆಗೆ ಹೋದೊಡನೆಯೇ ನಮಗೆ ರಜೆಯು ಸ್ವಾಗತ ಕೋರಿತ್ತು. ಮನಸ್ಸು ಕುಣಿದಾಡಿತ್ತು. ಉಲ್ಲಸಿತರಾಗಿ ಮನೆಗೆ ಮರಳುವ ಹಾದಿಯಲ್ಲಿದ್ದೆ. ಆಗಲೇ ನೆನಪಾಗಿದ್ದು ನನ್ನ ಅಜ್ಜ ಊರಿನಲ್ಲಿ ಇವತ್ತು ತಿಥಿಯೂಟವೆಂದು. ನನಗೋ ಅಜ್ಜನೂರೆಂದರೆ ಬಹಳೇ ಪ್ರೀತಿ, ಮಮಕಾರ, ತುಡಿತ. ಶಾಲೆ ತಪ್ಪಿಸಿ ಅಜ್ಜನೂರಿಗೆ ಹೋಗಲು ನನಗೆ ನಿರ್ಬ೦ಧವಿತ್ತು. ಆದರೆ ಇವತ್ತು ಆ ನಿರ್ಬಂಧ ಕೊಚ್ಚಿ ಹೋಗಿತ್ತು. 

ಮಳೆಗೊಂದು ಉದ್ದಂಡ ನಮಸ್ಕಾರ ಸಲ್ಲಿಸಿದೆ! ಮನಸ್ಸು ಉಲ್ಲಸಿತವಾಗಿ ಅಜ್ಜನೂರಿಗೆ ಹೋಗುವ ಗುಣಾಕಾರ ಭಾಗಾಕಾರ ಹಾಕಿತ್ತು. 

   ಅಮ್ಮ 9 ಗಂಟೆಯ ಬಸ್ಸಿಗೆ ಹೊರಡುವಳೆಂದು ಗೊತ್ತಿತ್ತು. ಹಾಗಾಗಿ ಗೆಳೆಯನಲ್ಲಿ ನಾನು ಮನೆಗೆ ಬರಲಾರೆ, ಅಜ್ಜನ ಮನೆಗೆ ಹೋಗುವೆ, ಅಪ್ಪನಿಗೆ ತಿಳಿಸು ಎಂದು ಹೇಳಿ ಸೀದಾ ಸುರಿವ ಮಳೆಯಲ್ಲಿ ಕೊಚ್ಚೆ ಹಾರಿಸುತ್ತಾ ಬಸ್ಸು ನಿಲ್ದಾಣಕ್ಕೆ ಓಡಿದೆ. ಮೊದಲು ಬಂದ ಶಂಕರ ವಿಠಲ ಬಸ್ಸಿನ ಮುಂಬಾಗಿಲಿನಲ್ಲಿ ಹತ್ತಿ ಬಸ್ಸೆಲ್ಲಾ ಹುಡುಕಿದೆ. ಆ ಬಸ್ಸಿನಲ್ಲಿ ಅಮ್ಮನಿರಲಿಲ್ಲ. ಹಿಂಬಾಗಿಲಿನಲ್ಲಿ ಇಳಿದೆ. ಮುಂದಿನ ಬಸ್ಸಿಗಾಗಿ ಸುರಿವ ಮಳೆಯಲ್ಲಿ ಕಾಯುತ್ತಾ ನಿಂತೆ. ಮನದೊಳಗೆ ಕಾತರ ಅಮ್ಮ ತಪ್ಪಿ ಹೋಗುವಳೋ  ಏನೋ ಎಂಬ ಆತಂಕ. ಅಜ್ಜನೂರಿಗೆ ಹೋಗಲಾರದ ದುಃಖ ಒಂದೆಡೆ. ಅಜ್ಜನೂರಿಗೆ ಹೋಗಲು ಕೈಯಲ್ಲಿರುವ ನಾಲ್ಕಾಣೆ ಏನೇನೂ ಸಾಲದು. ಮಳೆ ನಿಲ್ಲುವ ಲಕ್ಷಣಗಳಿರಲಿಲ್ಲ. ಅಷ್ಟರಲ್ಲೇ ಹನುಮಾನ್ ಬಸ್ಸು ಬಂತು. ಈ ಬಸ್ಸಿನಲ್ಲಿ ಅಮ್ಮನಿರಲಿ ಎಂದು ಪ್ರಾಥರ್ಿಸಿದೆ. ಅದೃಷ್ಟವಶಾತ್ ಅಮ್ಮನೂ ಆ ಬಸ್ಸಿಗೇ ಹೊರಟಿದ್ದಳು. ನನ್ನ ಆತಂಕ ತೀರಿತು. ಅಮ್ಮನ ಪಕ್ಕ ಹೋಗಿ ಕುಳಿತೆ. ಮಳೆಯಲ್ಲಿ ಕುಳಿತು ಸಕತ್ ಪ್ರಯಾಣ. 

ಅಂತೂ ಅಜ್ಜಿ ಮನೆಯಲ್ಲಿ ತಲುಪಿ ಸಕತ್ ಊಟ ಮಾಡಿ ಖುಷಿಯಲ್ಲಿ ಕುಳಿತ್ತಿದ್ದೆವು. ಸಂಜೆ ಮೂರು ಗಂಟೆ ಹೊತ್ತಿಗೆ ಸುರಿವ ಮಳೆಯಲ್ಲಿ ಅಪ್ಪ ನನ್ನನ್ನು ಹುಡುಕುತ್ತಾ ಅಜ್ಜಿ ಮನೆಗೆ ಬಂದಿದ್ದರು. ಅಮ್ಮನೊಂದಿಗೆ ಅಂದು ಸುರಿವ ಮಳೆಯಲ್ಲಿ ಅಜ್ಜನೂರಿಗೆ ಹೋದ ನೆನಪು ಇನ್ನೂ ಹಸಿರಾಗೇ ಇದೆ.

     ಎಲ್ಲರೂ ಈ ನೆನಪುಗಳನ್ನು ಮೆಲುಕು ಹಾಕಿ ನನ್ನ ಛೇಡಿಸುವರು. ಮಾವನಿಗಂತು ಈ ನೆನಪು ಸದಾ ಹಸಿರು.

ಇಂದೇ ನನ್ನ ಅಜ್ಜನ ತಿಥಿ. ಫೋನ್ ಮಾಡಿ ಬರುವಂತೆ ಮಾವ ಕರೆ ಕೊಟ್ಟಾಗ ಎಲ್ಲ ನೆನಪು ಮರುಕಳಿಸಿತು. ಮನೆಯಲ್ಲಿ ದಿವ್ಯ ಏಕಾಂತ ಒಂದೇ ಬೆರಳಿನಲ್ಲಿ ಟೈಪಿಸಿದೆ. ಚೆನ್ನಾಗಿದ್ದರೆ ತಿಳಿಸಿ.

 

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...