Sunday, August 3, 2025

ಜಾರುಬಂಡಿ ಜಲಪಾತದ ದಾರಿಯಲ್ಲಿ…..


 ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ.


ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನಿರ್ದೇಶಕನ ಕೈಚಳಕದಿ ಮೂಡಿ ಬಂದಂತಹ ಊರು. ಕೋಲ್‌ ಬಿಸಿಲಿಗೆ ಕುಣಿವ ಚಿಟ್ಟೆ ದಂಡು.  ನಿಮ್ಮ ಕಲ್ಪನೆಯೂ ಸಪ್ಪೆಯಾದೀತು ಸುಮ್ಮನಿರಿ. ಯಾರೋ ಚಿತ್ರಗಳಲ್ಲಿ ಬಿಡಿಸಿಟ್ಟ ಬಿದಿರ ಕಾಡು. ಹಾಡು ಹಾಡುವ ಹಳ್ಳೀ ‘ಕಾಂಗ್ ತಾಂಗ್’ ನಿಂದ ಅರ್ಧ ದಿನದ ಹಾದಿ. ಒಟ್ಟು ಜನಸಂಖ್ಯೆ ೭೫೦! ಹಾದಿ ತುಂಬಾ ಹೂವ ಹೊತ್ತ ಬೆಟ್ಟದಂಚು. ನೆನಪಿನ ನೀಲಿ ಕುಡಿದು ಕುಡಿ ಒಡೆದ ಆಕಾಶ. ಇಬ್ಬನಿ ತೋಯ್ದ ಒಂಟಿ ರಸ್ತೆ. ರಸ್ತೆಯುದ್ದಕ್ಕೂ ಫರ್ನ್‌ ಗಿಡಗಳ ಸ್ವಾಗತ. ನಿಲ್ಲದ ಬಿದಿರ ತೋಟದಲಿ ಅಲ್ಲಲ್ಲಿ ಕಿತ್ತಳೆ ಹಿಂಡಲು, ನಡುನಡುವೆ ಕಾಡು ಜನ. ವಿಹಂಗಮತೆ ಮತ್ತು ಪ್ರಪಾತಕ್ಕೆ ಮತ್ತೊಂದು ಹೆಸರು! ಇದು ಮೇಘಾಲಯದ ಕಾಂಗ್‌ತಾಂಗ್‌ ಹಳ್ಳಿಯಿಂದ ಜಾರುವ ಜಲಪಾತದ ದಾರಿಯಲ್ಲಿ ಕಂಡ ದೃಶ್ಯಾವಳಿ. ನಾಲಗೆ ಹೊರಳಲು ಕಷ್ಟ ಪಡುವ ಇಲ್ಲಿನ ಪ್ರತೀ ಊರಿನ ಹೆಸರು ನಾಲಗೆ ಸುರುಳಿ!

 

‘ಸೀಟಿʼ ಹೊಡೆಯುವ ಊರಿನಲ್ಲಿ!!


ಪುರದ ಹೊರಗೆ ಒರಗಿಕೊಂಡ ಸ್ವಾಗತ ಗೋಪುರ. ಹಾಡುವ ಹಳ್ಳಿ ಎಂಬ ವಿಶೇಷಣ (Whistling village of India). ಭಟ್ಕಳ ಬಳಿಯ ಹಾಡೋ ಹಳ್ಳಿ ಅಲ್ಲ. ಮೇಘಾಲಯದ ಸಣ್ಣೂರು! ಗುಡ್ಡದ ತುದಿಯೂರು. ವಿಶಿಷ್ಟ ಗುಡ್ಡಗಾಡು ಜನಾಂಗ. ಚಳಿ ಹೊತ್ತಿನಲ್ಲೂ ಬೆಳ್ಳಂಬೆಳಗ್ಗೆ ಪ್ರಾರಂಭವಾದ ಶಾಲೆ 12ರೊಳಗೇ ಮುಗಿದಿತ್ತು. ಅದರ ಸನಿಹವೇ ಪುಟಾಣಿ ಕಾಂಗ್ ತಾಂಗ್ ಬೋರ್ಡು. ಕ್ರಿಶ್ಚಿಯನ್ ಆಗಿ ಪರಿವರ್ತಿತರಾಗಿದ್ದಾರೆ. ಹೆಸರೂ ಅವರದೇ.


ವಸಾಹತುಶಾಹಿಗಳ ಆರ್ಭಟದಿಂದ ಮೂಲ ಸಂಸ್ಕೃತಿಯ ಪಳಿಯುಳಿಕೆಯಷ್ಟೇ ಉಳಿದಿದೆ! ಮೂಲತಃ ಇವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ. ಕೇವಲ ಬೆಟ್ಟವಾಸಿ ಬುಡಕಟ್ಟು. ಮೂಲತಃ ಸೆಂಗ್‌ ಖಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇವರನ್ನು ಬ್ರಿಟಿಷ್‌ರು ಕ್ರಿಶ್ಚಿಯನ್‌ರಾಗಿ ಪರಿವರ್ತಿಸಿದ್ದಾರೆ. ಇಲ್ಲಿಂದ ಇನ್ನೊಂದು ತುದಿಯಲ್ಲಿರುವ ವಾಕೆನ್‌ ಹಳ್ಳಿಗರು ಇನ್ನೂ ವರ್ಜಿನ್ ಗಳಾಗಿ ಉಳಿದಿದ್ದಾರೆ. ಯಾವುದೇ ಧರ್ಮಕ್ಕೆ ಸೇರದ ಇವರು ಸರಳರು. ಕಾಂಗ್‌ ತಾಂಗ್‌ ನಿಂದ ವಾಕೆನ್‌ ಹಳ್ಳಿಗೆ ನಮ್ಮ ಪಯಣವು ಮತ್ತೊಂದು ಸೋಜಿಗ. ಮತ್ತೆಂದಾದರೂ ಪುರುಸೊತ್ತು ಮಾಡಿಕೊಂಡು ವಾಕೆನ್‌ ಕತೆ ಹೇಳುವೆ. 

           ಕಾಂಗ್ ತಾಂಗನ ಹಳ್ಳಿ ಹೆಂಗಸು. 

ಸೀಟಿಯೊಂದು ಹೆಸರಾಗಿ:-

ಇಲ್ಲಿ ಮಗುವಿಗೊಂದು ಹೆಸರಿನಂತೆ ಹುಟ್ಟಿನಿಂದ ‘ಸೀಟಿಯೊಂದು’ ಮಗುವಿಗೆ ಇಡಲಾಗುತ್ತದೆ. ಸಿಳ್ಳೆಯಿಂದಲೇ ಮಗುವನ್ನು ಕರೆಯಲಾಗುತ್ತದೆ. ಹೆಂಗಳೆಯರನ್ನೂ ನೀವು ಸೀಟಿಯೂದಿ ಕರೆಯಬಹುದು! ಯಾರೂ ತಪ್ಪು ತಿಳಿಯಲ್ಲ! ಹಾಗಂತ ಸೀಟಿಯ ಹೊಡೆಯಬೇಡಿ.

ʼಜಿನ್ಗ್ರವಾಯಿ ಲಾವ್ಬಿʼ ಎಂಬ ವಿಶಿಷ್ಟ ಭಾಷಾ ಅಧ್ಯಯನಕ್ಕೆ ಅಮೇರಿಕಾ ಜರ್ಮನಿಯಿಂದೆಲ್ಲಾ ಸಂಶೋಧಕರ ತಂಡ ಇಲ್ಲಿಗೆ ಭೇಟಿ ನೀಡುತ್ತಾರೆ! ಈ ವಿಶಿಷ್ಟ ಪದ್ಧತಿಯಲ್ಲಿ ಮಗುವಿಗೆ ವಿಶಿಷ್ಟವಾದ ಸ್ವರವೊಂದನ್ನು ತಾಯಿಯಾದವಳು ನೀಡುವಳು. ಇದರಲ್ಲಿ ಎರಡು ವಿಧಗಳಿವೆ ಒಂದು ಚಿಕ್ಕ ಸ್ವರ ಇನ್ನೊಂದು ದೀರ್ಘ. ಜೀವ ಮಾನವಿಡಿ ಅದೇ ಸ್ವರದಿಂದ ಅವನನ್ನು/ಅವಳನ್ನು ಕರೆಯಲಾಗುತ್ತದೆ. ಊರಿನವರೆಲ್ಲಾ ಅದೇ ಸ್ವರದಿಂದ ಆತನನ್ನು/ಆಕೆಯನ್ನು ಗುರುತಿಸುತ್ತಾರೆ. ಬೆಟ್ಟದ ಮೇಲೆ ವಾಸಿಸ ಹೊರಟ ಇವರು ತಮ್ಮತನವನ್ನು ಉಳಿಸಿಕೊಳ್ಳಲು ಕಂಡು ಕೊಂಡ ವಿಚಿತ್ರ ಕ್ರಮ. ಬೆಟ್ಟದಲ್ಲಿನ ಕೆಟ್ಟ ಶಕ್ತಿಗಳು ಕಣ್ಣು ಹಾಕದಿರಲಿ ಎಂಬ ಮುಂದಾಲೋಚನೆಯ ಫಲವಾಗಿ ಈ ರೀತಿಯಾಗಿ ಮುಗುವಿಗೆ ಹೆಸರನ್ನಲ್ಲದೇ ʼಸೀಟಿʼಯಿಂದ ಕರೆಯುವ ಕ್ರಮ ರೂಢಿಗೆ ಬಂತು ಎನ್ನುತ್ತಾರೆ ನಮ್ಮ ಗೈಡ್ ಫಿಡ್ಲಿಂಗ್‌ ಸ್ಟಾರ್‌ನ ಅಮ್ಮ!



ಹುಟ್ಟಿಗೊಂದು ಹೆಸರಿಟ್ಟು : – ‌

ನಾವೆಲ್ಲಾ ಮಗು ಹುಟ್ಟಿದರೆ ಹೆಸರಿಡಲು ಒದ್ದಾಡಿದಂತೆ ಇಲ್ಲಿ ಆತನಿಗೆ ಸೀಟಿಯಂತಹ ಹೆಸರಿಡಲು ತಾಯಿ ಒದ್ದಾಡುವಳು. ಇಲ್ಲಿ ಹೆಸರೆಂಬುದೇ ಸೀಟಿ. ಹೊಸಕಂಪನ ಹೊಸ ಅಲೆ. ಅಮ್ಮನ ಮಡಿಲ ಶಾಖ. ನೆಲಮೂಲವಾದ ವಿಶಿಷ್ಟ ಸಂಸ್ಕೃತಿ! ಪ್ರತಿಯೊಬ್ಬನಿಗೂ ಒಂದು ವಿಶಿಷ್ಟ ಸೀಟಿ (ವಿಶಿಲ್) ಎಷ್ಟೇ ದೂರದಲ್ಲಿರಲಿ ಆತನಿಗದು ಕೇಳುವ ಕಂಪನನಾಂಕದಲ್ಲಿರುತ್ತದೆ. ಇದನ್ನೆಲ್ಲಾ ನಾವು ನಮ್ಮ ಗೈಡ್‌ ಫಿಡ್ಲಿಂಗ್‌ ಸ್ಟಾರ್‌ ಮನೆಯಲ್ಲಿ ಕುಳಿತು ಮಾತನಾಡುತ್ತಾ ತಿಳಿದುಕೊಂಡೆವು. ಇಲ್ಲಿನ ೨೩ ಹಳ್ಳಿಗಳಲ್ಲಿ ಈ ಕ್ರಮ ಅನುಸರಿಸುತ್ತಾರೆ ಎಂಬುದು ಸೋಜಿಗ. ಆದರೆ ಕಾಂಗ್ ತಾಂಗ್‌ ಮಾತ್ರ Whistling village of India ಎಂದು ಕರೆಯಿಸಿಕೊಂಡಿದೆ. ‌
ಜಾರ್‌ ಬಂಡೆ ಜಲಪಾತದ ಸಂಗದಲಿ ಸಿಕ್ಕ ಕೊಂಗ್‌ ತಾಂಗ್‌ ಎಂಬ ಹಾಡುವ ಹಳ್ಳಿ ಬೋನಸ್.
 ಇಲ್ಲಿಗ್ಯಾವ ಟಿಂಪೊ ವ್ಯವಸ್ಥೆಯಾಗಲೀ ಬಸ್ಸಿನ ವ್ಯವಸ್ಥೆಯಾಗಲಿ ಇಲ್ಲ. ಶಿಲ್ಲಾಂಗಿನಿಂದ ಕಾರು ಅಥವಾ ಬೈಕ್‌ ಬಾಡಿಗೆಗೆ ಪಡೆದು ಬರಬೇಕು. ನಾವೊಂದು ಕಾರು ಬಾಡಿಗೆಗೆ ಹಿಡಿದು ಹೊರಟೆವು.

ಜಲಧಾರೆಯೆಡೆಗೆ :-

ಸೀಟಿ ಹೊಡೆಯುವ ಕಾಂಗ್ ತಾಂಗ್ ಎಂಬ ವಿಚಿತ್ರ ಹಳ್ಳಿಯಿಂದ ಎರಡು ಪುರಿ ಹೊಡೆದು ಹೊರಟಾಗ ಗಂಟೆ 11. ನಿನ್ನೆ ರಾತ್ರಿಯೇ ಬಂದಿಳಿಯಬೇಕಿತ್ತು ಅನಿಸಿತೆನಗೆ.

ಮುಗಿಲಿಗೆ ಮುಟ್ಟೋ ಹುಮ್ಮಸ್ಸು ಹೊತ್ತ ನಾವು ಗೈಡ್‌ ಇಬ್ಬರ ಜೊತೆಗೆ ಪ್ರಪಾತಕ್ಕೆ ಇಳಿಬಿಟ್ಟಂತಹ ನಾಗವೇಣಿಯಂತಹ ದಾರಿಯಲ್ಲಿ ಹೊರಟೆವು. ಭಾಷೆ ಬಾರದ ಚಂದಕೆ ನೀಟಾಗಿದ್ದ ಗೈಡ್, ಅವನ ಜೊತೆಗೊಂದು ವಿಚಿತ್ರ ಕತ್ತಿ. ನೋಡಿದರೆ ಭಯ ಪಡಬೇಕು! ಇಂತಹ ಕತ್ತಿಗಳು ಇಲ್ಲಿ ಸರ್ವೇ ಸಾಮಾನ್ಯ!


ನಾಲಗೆ ರುಚಿಗೆ ಬಲಿಯಾದ ನವ ಯುವಕರು:-

ಸ್ವಲ್ಪ ದೂರ ನಡೆಯುತ್ತಲೇ ಎದುರಾದ ಡಬ್ಬಿ ಅಂಗಡಿ. ಗಿರಾಕಿಗಾಗಿ ಕಾಯೋ ನಿರ್ಲಿಪ್ತ ಕಣ್ಣಿನ ವ್ಯಾಪಾರಿ ಬೀಡಿ ಹಚ್ಚಿದ್ದ. ನಾವೇನೋ ಆತ್ಮಹತ್ಯೆಗಾಗಿ ಹೊರಟವರಂತೆ ಪ್ರಪಾತಕ್ಕೆ ಇಳಿಬಿದ್ದೆವು. ಅಯ್ಯೋ ಎನ್ನುವ ನಿರುದ್ವಿಗ್ನ ನೋಟ ಬೀರಿ ನಮ್ಮನ್ನು ಕಳುಹಿಸಿಕೊಟ್ಟ. ಆತನ ದೃಷ್ಟಿಯೂ ಹಾಗೆ ಇತ್ತು! ಲಿಮ್ಕಾ, ಕೊಕೋ ಕೊಲಾ, ಲೇಸ್‌, ಆತನಂಗಡಿಯಲಿ ಹಲ್ಲು ಕಿಸಿಯುತ್ತಾ ನೇತು ಬಿದ್ದಿದ್ದವು. ಜಾಗತೀಕರಣದ ಜಾರುಬಂಡಿಯಲಿ ಎಲ್ಲರೂ ಜಾರಲು ತೊಡಗಿದ್ದಾರೆ!


ಜಾಗತೀಕರಣ, ವ್ಯಾಪಾರಿಕರಣ, ಪ್ರೀತಿಯನ್ನು ನೆಲಮಟ್ಟದ ಸಂಸ್ಕೃತಿಯನ್ನು ದೋಚುತ್ತಲೇ ಇದೆ. ಪಿಜ್ಜಾ, ಬರ್ಗರ್‌ ರುಚಿಗೆ ನಮ್ಮೂರಿನ ಆರೋಗ್ಯಕರ ತಿನಿಸುಗಳು ಹೇಳ ಹೆಸರಿಲ್ಲದೇ ಜಾಗ ಕೀಳುತ್ತಿವೆ. ಕಿತ್ತಳೆ ರಸದ ರುಚಿಗೆ ಪಕ್ಕಾದ ನಾಲಿಗೆಯಲಿ ಘಂಟಾ ಥಂಸಪ್ ರುಚಿ ಮೊಗ್ಗ ಅರಳಿಸಲು ಹೊರಟಿದ್ದಾರೆ. ಜಾಗತೀಕರಣವೇ ಜಗತ್ತನ್ನು ಆಳುತ್ತಿವೆ. ಎಲ್ಲರೂ ಇಲ್ಲಿ ಖರೀದಿದಾರರೇ. ಕಳೆದ ವರ್ಷ ಪಾರ್ವತಿ ಕಣಿವೆಯ ಕೊನೆಯ ಹಳ್ಳಿ ತೋಷ್‌ಗೆ ಹೋದಾಗ ಅಲ್ಲಿಯೂ ಜರ್ಮನ್ ಬೇಕರಿಗಳು ಜಾಗ ಮಾಡಿಕೊಂಡಿರುವುದು ವಿಪರ್ಯಾಸ! ನಮ್ಮ ಅದ್ಭುತ ರುಚಿಯ ತಿಂಡಿಗಳನ್ನು ನಾವು ಶೋಕೇಸ್‌ ಮಾಡದೇ ಇದ್ದಿದ್ದು ನಮ್ಮ ಸೋಮಾರಿತನವೋ, ನಮ್ಮದೆಲ್ಲಾ ಕೀಳೆಂಬ ನಮ್ಮದೇ ಮೌಡ್ಯವೋ? ಅದನ್ನು ಬಿತ್ತಿದ ಹೊಸ ಶಿಕ್ಷಣ ನೀತಿಯೋ?! 



ದಾರಿ ತಪ್ಪಲಿ ದೇವರೇ!

ಅಪ್ರತಿಮ ಮೇಘಾಲಯದ ಸುಂಟರಗಾಳಿಯಂತಹ ಸೌಂದರ್ಯಕ್ಕೆ ಮರುಳಾಗಿ ಇಳಿಯೊ ಹಾದಿಯಲ್ಲಿ ದಾರಿತಪ್ಪಿ ಬಲಕೆ ತಿರುಗೋ ಬದಲು ನೇರವಾಗಿ ಹೊರಟ ಗೆಳೆಯ ಹಾದಿ ತಪ್ಪಿದ! ನಿಜವಾಗಿ ದಾರಿ ತಪ್ಪಿದ್ದು ಅವನೋ ನಾವೋ ಗೊತ್ತಿಲ್ಲ. ದಾರಿ ತಪ್ಪಿದ ಮಗ. ಇಬ್ಬರು ಗೈಡ್‌ಗಳಲ್ಲಿ  ಭಾಷೆ ಬಾರದ ವಿಚಿತ್ರ ಕತ್ತಿ ಹಿಡಿದ ಗೈಡ್ ಒಬ್ಬನೇ ನನ್ನ ಜೊತೆಗೆ ಉಳಿದ. ಎದೆಯಲ್ಲಿ ಕುಟ್ಟವಲಕ್ಕಿ. ಸುತ್ತಲೂ ನಿಬಿಡಾರಣ್ಯ. ಜೀರುಂಡೆ ಗಾಯನ. ಹಾದಿ ತಪ್ಪಲು ನೂರಾರು ದಾರಿ. ಇವನೋ ಅನನುಭವಿ. ಆದರೆ ಇವನಷ್ಟು ಪಾಪದ ಅಮಾಯಕ ಮತ್ತೊಬ್ಬನಿಲ್ಲ ಎಂಬುದು ಸ್ವಲ್ಪ ಹೊತ್ತಿಗೆ ತಿಳಿಯಿತು. ಬಯಲಿನ ಜನರಂತಲ್ಲ ಬೆಟ್ಟದವರು! ಕಾನನದ ಸ್ವರ ಸಂಮೋಹನಕ್ಕೆ ಒಳಗಾಗಿ ಜಲಧಾರೆಯ ನೆತ್ತಿಗೆ ನಡೆದು ತಲುಪಿದೆವು. ಅಂತೂ ಜಲಧಾರೆಯ ನೆತ್ತಿ ತಲುಪಿಸಿದ!
ಏನ್‌ ಅಚ್ಚರಿ ನಮಗಿಂತಲೂ ಮುಂದೆ ಗೆಳೆಯನ ಸವಾರಿ ಬಂದು ತಲುಪಿತ್ತು. ಬಂದವನೇ ದಾರಿ ತಪ್ಪಿದ್ದೇ ಒಳ್ಳೇದಾತು ಅಂತಿದ್ದ! ದಾರಿ ತಪ್ಪಲಿ ದೇವರೇ ಅಂತ ಬೇಡಿಕೊಂಡಿರಬೇಕು ಆತ! ದಾರಿ ತಪ್ಪಿದ್ದರಿಂದ ಮೇಘಾಲಯದ ಅತಿ ಎತ್ತರದ ಬೇರಿನ ಸೇತುವೆ, ಇನ್ನೊಂದೆರಡು ಜಲಧಾರೆಯ ಸಖ್ಯ ಬೆಳೆಸಿ ಬಂದಿದ್ದ. ಕಷ್ಟವಾದರೂ ಅದನ್ನೆಲ್ಲಾ ಅಚಾನಕ್‌ ಆಗಿ ನೋಡುವ ಅವಕಾಶವೊಂದು ಅವನ ಪಾಲಿಗೆ ಬಂತು. ಇಂತಹ ದಾರಿಗಳಲ್ಲಿ ಸದಾ ದಾರಿ ತಪ್ಪಲಿ. ಹೊಸ ಅಚ್ಚರಿಗಳು ತೆರೆದುಕೊಳ್ಳಲಿ! ಸದಾ ದಾರಿ ತಪ್ಪಿಸು ದೇವರೇ.
ದಾರಿ ತಪ್ಪಿದ್ದು ಒಳಿತೇ ಆಯಿತು ಎಂದೆನ್ನುತ್ತಾ ಹಿಂದಿರುಗಿದ ಮೆಲ್ಲಗೆ ಅರುಹಿದ ಗೆಳೆಯ! ಬಿದ್ದರೂ ಮೀಸೆ ಮಣ್ಣಾಗಲಿಲ್ಲ! ಮೇಘಾಲಯದ ಅತಿ ಎತ್ತರದ ಬೇರಿನ ಸೇತುವೆ ಇರುವುದೇ ಇಲ್ಲಿ. ಮತ್ತೆ ಮತ್ತೆ ಇಂತಹ ದಾರಿಯಲ್ಲಿ ದಾರಿ ತಪ್ಪಿಸು ದೇವರೇ ಎಂದು ಬೇಡಿಕೊಳ್ಳುವೆ ಎಂದ! ರುಚಿಕಟ್ಟಾದ ನಾಲ್ಕು ಫೋಟೋ ತೆರೆದಿಟ್ಟ! ಒಂದಕ್ಕಿಂತ ಒಂದು ಚೆಂದದ ಹೊಟ್ಟೆಕಿಚ್ಚಾಗುವಂತಹ ಚಿತ್ರ!! ದಾರಿ ತಪ್ಪಿಯೂ ನಮಗಿಂತ ಮೊದಲೇ ಜಲಪಾತದ ನೆತ್ತಿ ಹತ್ತಿ ಕುಣಿಯುತ್ತಲಿದ್ದ! 




ತಣ್ಣಗಿನ ನೀರಲ್ಲಿ ಜಾರುತ್ತಲೇ ಕೊಳ ಒಂದಕ್ಕೆ ಜಾರಲು ವಿದೇಶಿಗನೊಬ್ಬ ಸಶಬ್ದವಾಗಿ ಜಾರಿ ನಮಗೆ ಒಂದೆರಡು ಟ್ರಯಲ್ ತೋರಿದ ಮೇಲೆ ಸ್ವಲ್ಪ ಧೈರ್ಯ ಮಾಡಿ ಹೊರಟಿತು ಗೆಳೆಯನ ಸವಾರಿ. ಹೊರಟಿದ್ದೇನೋ ಸರಿ ನಡುವೆಯೇ ಜಾರದೆ ಸ್ಟ್ರಕ್ ಆಯಿತು. ಕೊನೆಗೂ ಕುಂಡೆ ಹರಿದುಕೊಳ್ಳದೇ ಗೆಳೆಯನ ಸವಾರಿ ಜಾರುತ್ತಾ ಕೆಳಗೆ ಬಂದಿತು! ನೀರ ಹೊಂಡಕ್ಕೆ ʼಗುಳುಮುಳಕʼದಂತೆ ಮುಳುಗು ಹಾಕಿದ. ನನ್ನ ಪುಣ್ಯ ಜಾರಿ ಪ್ರಪಾತಕ್ಕೆ ಹೋಗಲಿಲ್ಲ. ನಾನೂ ಸ್ವಲ್ಪ ಹೊತ್ತು ಸ್ಪಟಿಕ ಶುಭ್ರ ನೀರಲ್ಲಿ ಮಿಂದೆದ್ದು ಪುಣಕಗೊಂಡೆ. ಜಾರುವಿಕೆ ಎಲ್ಲಿಯಾದರೂ ಆಯತಪ್ಪಿದರೆ ನೇರ ಪ್ರಪಾತ ದರ್ಶನ! ಒಂದು ಹಲ್ಲೂ ಸಿಗದ ಮಹಾ ಬ್ರಹ್ಮಗುಂಡಿ. ಅವಾಂತರವಾಗುವುದು ಬೇಡವೆಂದು ನಾನಾ ಸಾಹಸಕ್ಕೆ ಇಳಿಯಲೇ ಇಲ್ಲ. ದಟ್ಟ ಕಾನನದ ನಡುವೆ ಅವಿತಿರುವ ಪ್ರಕೃತಿ ಮಡಿಲ ಈ ತಾಣ ರಮ್ಯಾದ್ಬುತ!

ಇಳಿ ಸಂಜೆಗೆ ಮೇಘಾಲಯದ ಹಾಡು ಹಳ್ಳಿಯಲ್ಲಿ ಅಂದು ತಂಗಿದೆವು. ಅಲ್ಲಿನ ಜೀರುಂಡೆ ಗಾಯನ, ನೊಣದ ಬೋನು ಗಿಡಗಳೊಂದಿಗೆ ಲೀನವಾಗಿ ಅಲ್ಲಿನ ಕಾಟೇಜ್‌ ಒಂದರಲ್ಲಿ ಉಳಿದುಕೊಂಡೆವು.




  ನೂರಾರು ಆರ್ಕಿಡ್‌ಗಳು ನಮಗೊಂದು ಅಚ್ಚರಿ! ಎಲ್ಲೆಲ್ಲೂ ಆರ್ಕಿಡ್‌ಗಳು. ಚಿತ್ರ ವಿಚಿತ್ರ ಬಣ್ಣಗಳು. ಕೆಲವನ್ನು ಕತ್ತರಿಸಿ ತಂದು ನಾವು ಉಳಿದುಕೊಂಡಿದ್ದ ಕಾಟೇಜ್‌ನಲ್ಲಿ ಬೆಳೆಸಿದ್ದರು. ಒಂದಿಷ್ಟು ತರೇವಾರಿ ಜೇಡಗಳು, ನೂರಾರು ಚಿಟ್ಟೆಗಳ ಮೆರವಣಿಗೆ ನಮಗೆ ಮುದ ನೀಡುತ್ತಲಿತ್ತು! ನೈಸರ್ಗಿಕ ಪರಿಸರದಲ್ಲಿ ನೊಣದ ಬೋನು ಎಂಬ ವಿಸ್ಮಯಕಾರಿ ಸಸ್ಯವನ್ನು ಬೆಳೆಸಿದ್ದ ನಮ್ಮ ಕಾಟೇಜ್ ಮಾಲೀಕ! ಎರಡನೆಯ ಬಾರಿಗೆ ಇಷ್ಟು ಸಂಖ್ಯೆಯ ನೊಣದ ಬೋನು ನೋಡಿದ ಖುಷಿ. ಅತ್ಯಂತ ಶುಭ್ರವಾಗಿಟ್ಟುಕೊಂಡ ಆತನ ಕಾಟೇಜ್ ಬಹಳ ಇಷ್ಟವಾದವು. 
ಇಲ್ಲಿಂದ ನಮ್ಮ ಸವಾರಿ ಹೊರಟಿದ್ದು ವಾಕೆನ್‌ ಎಂಬ ಮತ್ತೊಂದು ವಿಶಿಷ್ಟ ಹಳ್ಳಿಗೆ. ಆ ಕತೆಯನ್ನು ಮತ್ತೊಮ್ಮೆ ಅರಹುವೆ.

Thursday, May 29, 2025

ಮಹಾ ಪಯಣದ ಹೆಜ್ಜೆ ಗುರುತುಗಳು

 


ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕೃತಿ.

 ತಮ್ಮ ನಾಲ್ಕು ಸಾವಿರ ಮೈಲುಗಳ ಭೀಕರ ನಡಿಗೆ ಮತ್ತು ಎದುರಾದ ಸಂಕಷ್ಟಗಳನ್ನು ನಮ್ಮ ಮುಂದೆ ಸರಳವಾಗಿ  ಹರವಿಟ್ಟಿದ್ದಾರೆ ತೇಜಸ್ವಿ. 

     ಬದುಕೇ ಒಂದು ಸ್ವಾತಂತ್ರ್ಯಕ್ಕಾಗಿ ಅನನ್ಯ ಹೋರಾಟ. ನದಿ ತೊರೆ ಬೆಟ್ಟಗಳನ್ನೆಲ್ಲ ಗೆಲ್ಲುತ್ತಾ ಸ್ಲೋವಿಯರ್ ಕೊನೆಗೆ ಭಾರತಕ್ಕೆ ಬಂದಿದ್ದೆ ಒಂದು ಮಹಾನ್ ಅಚ್ಚರಿ. ಹಿಮಾಲಯದ ಸಣ್ಣಪುಟ್ಟ ಬೆಟ್ಟಗಳನ್ನು ಹತ್ತಿ ಇಳಿಯಲು ನಾವು ತಿಣುಕಾಡಬೇಕು. ಅಂತಹುದರಲ್ಲಿ ಯಾವುದೇ ಉಪಕರಣಗಳಿಲ್ಲದೆ ಕೇವಲ ಚರ್ಮದ ದಾರ ಸಣ್ಣ ವಯರ್ ಬಳಸಿ ಹಿಮಾಲಯವನ್ನು ದಾಟಿಕೊಂಡಿದ್ದು ಪ್ರಪಂಚದ ಮಹಾ ಪವಾಡ. 

 ನೀರಿಲ್ಲದೆ ಗೋಬಿ ಮರುಭೂಮಿಯನ್ನು ಬರಿಗಾಲಲ್ಲಿ ದಾಟುವುದು  ಒಂದು ರೋಚಕ ಮಹಾಸಾಹಸ! ಮಹಾನರಕದ ಗೋಬಿ ಮರುಭೂಮಿಯನ್ನು ನೀರಿಲ್ಲದೆ ದಾಟಿದ್ದು ಒಂದು ವಿಶೇಷ ಅವರ ಮನೋ ಶಕ್ತಿ ಅಭೀಪ್ಸೆಗಳಿಗೆ ಸಾಕ್ಷಿ. ಹಾವು ತಿಂದು ಗೋಬಿ ಮರುಭೂಮಿಯಲ್ಲಿ ಬದುಕಿ ಉಳಿದದ್ದೊಂದು ಅಚ್ಚರಿ.

 ದಾರಿ ಉದ್ದಕ್ಕೂ ಸಿಕ್ಕ ಅನಾಗರಿಕರ ಆದೃ ಸಹಕಾರ. ಅವರ ಹೃದಯ ವೈಶಾಲ್ಯತೆ ನಾಗರಿಕರಲ್ಲೂ ಕಾಣಸಿಗದು ಪ್ರತಿಯೊಬ್ಬ ಅನಾಮಿಕನು ತಮಗೆ ಸಹಾಯ ಹಸ್ತ ಚಾಚುತ್ತಾ ಗಮ್ಯದೆಡೆಗೆ ಪಯಣಿಸುತ್ತಾ, ಈ ಪಯಣ ಹುಟ್ಟಿಸಿದ ಭರವಸೆ ಅಂತಿಂಥದ್ದಲ್ಲ. ಪ್ರತಿಯೊಂದುಕ್ಕೂ ಅನುಮಾನಿಸುವ ನಾಗರೀಕ ಪ್ರಪಂಚದಲ್ಲಿ ಗೊತ್ತಿಲ್ಲದೆಯೇ ಆದರಿಸುವ ಅನಾಗರಿಕ ಪ್ರಪಂಚವೆಲ್ಲಿ. ಯಾವುದಕ್ಕೆ ಯಾವುದು ಹೋಲಿಕೆ? ಮಾಡದ ತಪ್ಪಿಗೆ ಪರಿತಪಿಸುವಂತಹ ಶಿಕ್ಷೆ ನೀಡಿದ ನಾಗರಿಕ ಪ್ರಪಂಚ ಒಂದೆಡೆಯಾದರೆ ಕರೆದು ಆದರಿಸಿ ಸತ್ಕರಿಸುವ ಅಲೆಮಾರಿಗಳು. ತಕ್ಕಡಿಯ ಈ ಕಡೆಯೇ ಭಾರ. 

 ರಷ್ಯಾದಿಂದ ಭಾರತದವರೆಗೆ ಅಪರಿಚಿತ ಅನಾಗರಿಕರು ತೋರಿದ ಆಸ್ತೆ, ಪ್ರೀತಿ, ವಾತ್ಸಲ್ಯ ನಮ್ಮ ಕಣ್ಣನ್ನು ಹೊಳೆಯಾಗಿಸುತ್ತದೆ. ಗೋಬಿ ಮರುಭೂಮಿಯಲ್ಲಿ ಸಿಗುವ ಹಳ್ಳಿಗ, ಮಂಗೋಲಿಯ ದೇಶದಾಟಿದ ನಂತರ ಸಿಗುವ ಮುದುಕ, ಟಿಬೆಟ್ ಪ್ರಾರಂಭಕ್ಕಿಂತ ಮೊದಲು ಸಿಕ್ಕಿದ ಪುಟಾಣಿ ಹಳ್ಳಿಯ ಗ್ರಾಮಸ್ಥರ ಸತ್ಕಾರ ನಮ್ಮ ಹೃದಯ ತುಂಬಿ ಬರುವಂತೆ ಮಾಡುತ್ತದೆ.

 ಸೈಬೀರಿಯಾದ ಘೋರ ಚಳಿಯನ್ನು ಒಂದೇ ಒಂದು ಜೊತೆ ಬಟ್ಟೆಯಲ್ಲಿ ದಾಟಿದ್ದು , ಟಿಬೇಟ್ ಮತ್ತು ಹಿಮಾಲಯವನ್ನು  ಹತ್ತಿ ಇಳಿದಿದ್ದು, ಕೈಲಾಸ ಸರೋವರದ ಸನಿಹವೇ ಹಾದುಹೋಗಿದ್ದು, ನರಕ ಸದೃಶ ಗೋಬಿ ಮರುಭೂಮಿಯನ್ನು ದಾಟಿದ್ದು, ಎಂಟು ಅಡಿ ಎತ್ತರದ ಹಿಮ ಮಾನವನನ್ನು ನೋಡಿದ್ದು  ಈ ಪ್ರಯಾಣದ ಪ್ರಮುಖ ಹೆಜ್ಜೆ ಗುರುತುಗಳು.

 ಮನುಷ್ಯನ ಅಪಾರ ಮನೋಬಲ, ಸ್ವಾತಂತ್ರದೆಡೆಗಿನ  ತುಡಿತವನ್ನು ಎತ್ತಿ ಹಿಡಿಯುವ  ಅನನ್ಯ ಕೃತಿ.

 ಇಂತಹ ಮಹಾ ಪ್ರಯಾಣ ಮನುಕುಲದ ಹಾದಿಯಲ್ಲಿ ಹಿಂದೆಂದೂ ನಡೆದಿಲ್ಲ ಮುಂದೆ ನಡೆಯುವುದು ಇಲ್ಲ. ನಾಲ್ಕುವರೆ ತಿಂಗಳ ಅವಧಿಯಲ್ಲಿ ಸುಮಾರು 2000 ಮೈಲು ನಡೆದ ದಾಖಲೆ ಇಲ್ಲ!! ಒಟ್ಟು ನಡೆದ ಹಾದಿ ನಾಲ್ಕು ಸಾವಿರ ಮೈಲಿ!!


ಅಸಾಧ್ಯ ವಾದ ರೋಚಕ ಸಾಹಸದ ನೈಜಕತಾನಕ ಮಹಾಪಲಾಯನ.

ಏಕೆ ನೀವಿನ್ನು ಓದಿಲ್ಲ?

Sunday, May 25, 2025

ಹೂ ಕಣಿವೆಯಲಿ…

 ನೇಪಾಳ ಮತ್ತು ಭೂತಾನ್ ನಡುವೆ ಸಿಕ್ಕಿಹಾಕಿಕೊಂಡ ಸಿಕ್ಕಿಂನ ಕಥೆ ನಿಮ್ಮ ಮುಂದೆ. ಡಾರ್ಜಲಿಂಗ್‌ ನಲ್ಲಿಳಿದು ಸಿಕ್ಕಿಂಗೆ ಕಾಲಿಪೊಂಗ್‌ ಮೂಲಕ ದಾಟಿಕೊಂಡ ಅನನ್ಯ ಅನುಭವ.

ಲಾಚೆನ್‌ ಟೂ ಲಾಚುಂಗ್‌ ….

 ಸಿಕ್ಕಿಂನ ಲಾಚೆನ್ನಿಂದ ಲಾಚುಂಗ್ಗೆ ಬಂದಾಗ ಇಳಿಸಂಜೆ. ನಮ್ಮ ದಾರಿಗುಂಟ ಹರಿದ ನದಿಯ ಹೆಸರನ್ನು ಯಾರಲ್ಲೇ ಕೇಳಿದರು ಹೇಳುವ ಹೆಸರೊಂದೇ ತೀಸ್ಟಾ!

ಲಾಚುಂಗ್‌ನ ಪ್ರತಿ ಮನೆಯ ದಣಪೆ ಆಚೆಗಿನ ದಾರಿ ದಾಟುತ್ತಲೇ ಸಿಕ್ಕಿಂನ ತೀಸ್ಟಾ ನದಿ ಮೌನವಾಗಿ ಹರಿಯುತ್ತಾಳೆ. ಎಲ್ಲೆಲ್ಲೂ ಅಡ್ಡಗಟ್ಟಿಸಿಕೊಂಡು ಮನುಜನ ಅಭೀಪ್ಸೆಗೆ ಬಲಿಯಾಗಿ ʼಹರಿʼ ಯುತ್ತಾ ಅನೇಕರ ತುತ್ತಿನ ಚೀಲಕ್ಕೂ ದಾರಿಯಾಗಿದ್ದಾಳೆ. ಸಿಕ್ಕಿಂನ ಲಾಚುಂಗ್ ಕಣಿವೆಯುದ್ದಕ್ಕೂ ಬೆಳೆವ ಸೊಪ್ಪು ತರಕಾರಿಗಳಲ್ಲಿ ಇವಳದೇ ಪರಿಮಳ. ಸಿಕ್ಕಿಂನಲ್ಲಿ ಹುಟ್ಟಿ ತಾಯಿಯಾದವಳು ಬಂಗಾಲಕ್ಕೆ ಬರುತ್ತಲೇ ಕಾಳಿಯಾಗುತ್ತಾಳೆ. ಇಬ್ಬರಿಗೂ ನದಿಯು ಸೇತುವೆ ಕಟ್ಟಿದೆ. ಇವಳು ಸಿಕ್ಕಿಂನಿಂದ ಬ್ರಹ್ಮ ಪುತ್ರ ನದಿಯನ್ನು ಅಪ್ಪುವವರೆಗಿನ ತನ್ನ ದೀರ್ಘ ಪಯಣದಲ್ಲಿ ಮನುಜರ ಅಪರಿಮಿತ ಅಭೀಪ್ಸೆಗೆ ಕನಿಕರಿಸಿದ್ದಾಳೆ. ಬಂಗಾಲಿಗರಿಗೆ ಬುಟ್ಟಿ ತುಂಬಾ ಮೀನಿತ್ತು ಹರಿಸಿದ್ದಾಳೆ. ತೀಸ್ಟಾ ನದಿಯ ಟ್ರಾಟ್‌ ಮೀನಿನ ರುಚಿ ಅತ್ಯದ್ಭುತ. ಗುಡ್ಡ ಗುಡ್ಡಗಳ ಹನಿಗಳಿಗೂ ಇವಳ ಪ್ರೇಮ. ಲಾಚೆನ್‌ ನಿಂದ ಝೀರೋ ಪಾಯಿಂಟ್‌ ತಲುಪುವವರೆಗಿನ ಇವಳ ಸಂಗಗಕ್ಕೆ ಸಿಲುಕಿದ ನೂರಾರು ಝರಿಗಳ ಕಥನವು ವಿಭಿನ್ನ. ಬನ್ನಿ ಹರಿ ಕಥೆ ಶುರು ಮಾಡೋಣ! 

ತಿರುಗಿದೆ ವಿಳಾಸವಿಲ್ಲದೇ -


ಲಾಚೆನ್‌ ದಾಟುತ್ತಲೇ ಯುಗಾಂಗ್‌ ಜಲಧಾರೆಯೊಂದು ಅದೆಲ್ಲಿಂದಲೋ ಇದನ್ನು ಕಾಣಲು ಕಾತರತೆಯಿಂದ ಧುಮುಕುತ್ತದೆ. ಕಿವಾ ಎಂಬ ಇನ್ನೊಂದು ಜಲಧಾರೆ ನಾನೆಂಬ ನಾನು ಯಾವುದಕ್ಕೂ ಕಡಿಮೆ ಇಲ್ಲ ಎನ್ನುತ್ತಾ ಬಳುಕುತ್ತಾ ಹೋಗಿ ಬರುವವರಿಗೆಲ್ಲಾ ಟಾಟಾ ಬಾಯ್‌ ಬಾಯ್‌ ಮಾಡುತ್ತಿದ್ದಳು. 

ಪದ್ಯಗಳ ಅಡಿಗಡಿಗೆ ನುಗ್ಗುವ ಪ್ರಾಸದಂತೆ ಪ್ರಯಾಸವಿಲ್ಲದೇ ಗಿರಿ ನೆತ್ತಿಗಳ ಮೇಲಿಂದ ಸುರಿಯುತ್ತಲೇ ಇರುತ್ತದೆ. ಇವರನ್ನೆಲ್ಲಾ ಸೆರಗಿಗೆ ಕಟ್ಟಿಕೊಂಡು ಬ್ರಹ್ಮ ಪುತ್ರದೊಡಲಿಗೆ ಸೇರಲು ತವಕದಿ ಓಡುತ್ತಾಳೆ ತೀಸ್ಟಾ. 





ರಸ್ತೆ ರಿಪೇರಿಗೆ ನಿಂತ ಕಿನ್ನರರು ಎಲ್ಲಿಗೆ ಹೊರಟಿರುವಿರಿ ಎಂದು ಸನ್ನೆಯಲ್ಲೇ ಕೇಳುವರು. ಬ್ರೆಡ್ಡು ಕೂಡಿಟ್ಟಂತಹ ಕಲ್ಲು ರಸ್ತೆಯಲ್ಲಿ ಎಣ್ಣೆ ಕುಡಿದವರಂತೆ ಜೀಪು ಜೋಲಿ ಹೊಡೆಯುತ್ತಿತ್ತು. ಕೆಲವು ಕಲ್ಲುಗಳು ನಮ್ಮನ್ನು ಕಾಣಲು ರಸ್ತೆ ಬದಿಗೆ ಬಂದು ನಿಂತಿದ್ದವು!!

ಪ್ರತೀ ಕುಲುಕಾಟಕ್ಕೂ ಬೆನ್ನು ಹುರಿಯ ಲೆಕ್ಕ ಸಿಗುತ್ತಿತ್ತು. ಹೊಸ ಹಾದಿಯ ಹುಡುಕಾಟದಲ್ಲಿ ಇದೆಲ್ಲಾ ಮಾಮೂಲು ಎಂಬ ಹಸಿ ವೇದಾಂತ. ಇಂತಹ ಪರಿಸ್ಥಿತಿಯಲ್ಲೂ ತಣ್ಣಗೆ ಬದುಕುವ ಇವರ ಪ್ರಶಾಂತತೆಗೆ ದೊಡ್ಡ ಹೊಟ್ಟೆ ಕಿಚ್ಚು. 
ಹೂ ಕಣಿವೆಯ ಧ್ಯಾನ

 ಅಚಾನಕ್‌ ಆಗಿ ಆಯ್ದುಕೊಂಡ ಹೊಸ ದಾರಿಯಲ್ಲಿ ಸಿಕ್ಕ ಸಿಕ್ಕಿಂನ ಹೂ ಕಣಿವೆಯ ಯುಮ್‌ ತುಂಗ್‌ ಕಣಿವೆ ಮತ್ತು ಶಿಂಗ್‌ ಬಾ ರೆಡೋಡೆಂಡ್ರಾನ್‌ ಹೂ ಕಣಿವೆ. ಹೂ ಕಣಿವೆ ಸವಿಯಲು ಲಾಚುಂಗ್‌ ನಲ್ಲಿ ತಂಗಲೇ ಬೇಕು! 
 ಬೆಟ್ಟಕ್ಕೆ ಕಾವಲು ನಿಂತ ಇಂಡೋ ಟಿಬೇಟಿಯನ್‌ ಬೆಟಾಲಿನ್‌ . ನಾರಿ ಕೊರಳ ಹಾರದಂತೆ 


ಊರ ಹೆಬ್ಬಾಗಿಲಿನಲ್ಲಿ ಬೆಟ್ಟವೊಂದಕ್ಕೆ ನಾಚಿಕೆ ಇಲ್ಲದೇ ಜಲಪಾತವೊಂದು ಜೋತುಬಿದ್ದಿತ್ತು. ಓಂ ಮಣಿ ಪದ್ಮೇ ನಮಃ ಹೀಗೆ ಬೌಧ್ದರ ಭಾಷೆಯಲ್ಲಿನ ಭೌದ್ಧ ಧ್ವಜ ತೂಗುಹಾಕಲಾಗಿತ್ತು. ಊರ ಮಹನೀಯರಲ್ಲಿ ಹೆಸರ ಕೇಳಿದರೆ ನೀವೇ ಒಂದು ನಾಮಕರಣ ಮಾಡಿಕೊಳ್ಳಿ ಎಂದು ನಿರ್ಲಿಪ್ತರಾದರು. ಊರ ಬೀದಿಯಲ್ಲಿ ಲಾಚುಂಗ್‌ ನದಿಯ ಹಿಮ್ಮೇಳ. 

ಹೊಟ್ಟೆ ಹಸಿದುದರಿಂದ ಬಜ್ಜಿ ಅಂಗಡಿಗೆ ಅಡಿ ಇಟ್ಟೆವು. ನೀರ ಕಣದೊಂದಿಗೆ ಬೆರೆತ ನದಿಯ ಹಿಮ್ಮೇಳ. ಸಂತೃಪ್ತ ಜನ. ಊರು ತಿಳಿಯಲು ನಾಲ್ಕು ಸುತ್ತು ಬಂದೆವು. ಎರಡು ಹಾಡಿನಷ್ಟೇ ದೂರದ ಪುಟಾಣಿ ಊರು. 


ಊರಿನ ಪೂರ್ವ ತುದಿಯಲ್ಲಿ ತಂಗಲು ವ್ಯವಸ್ಥೆಯಾಗಿತ್ತು. ಜವೆ ಗೋಧಿ, ಬಾರ್ಲಿ, ಹೂ ಕೋಸು, ಆಲೂಗಡ್ಡೆಯ ತೋಟದ ನಡುವೆ ನಮಗೆ ರೂಂ ನೀಡಲಾಗಿತ್ತು. ಕರಿ ಮಣ್ಣಿನ ತೋಟದಲಿ ಹೂಕೋಸು ನಲಿಯುತ್ತಿತ್ತು. ಕೈ ಎಟುಕಿದರೆ ಹೂ ಕೋಸು.
ಧ್ಯಾನಕ್ಕೆ, ಆಧ್ಯಾತ್ಮಕ್ಕೆ ಹೇಳಿ ಮಾಡಿಸಿದ ಊರು. ಇಲ್ಲಿಂದ ಶಿಂಗ್‌ಬಾ ಹೂ ಕಣಿವೆಗೆ ಬರೀ 23 ಕಿ.ಮೀ. ಸಂಜೆಯ ರಗ್‌ ಬಿಚ್ಚುತ್ತಲೇ ಚಳಿ ಅಮರಿಕೊಂಡಿತು. ಊರ ತುದಿಯಲ್ಲೊಂದು ತೊರೆ. ತೊರೆಗೆ ಕಾಲು ಬಿಟ್ಟು ಬೆಟ್ಟವೊಂದು ನಿಂತಿತ್ತು. ಬೆಟ್ಟದ ನೆತ್ತಿಯಲಿ ಐಸ್‌ ಕ್ರೀಂ ಟೋಫಿ. ಅದರ ಬುಡವ ಕಡಿದು ಅಲೆ ಅಲೆಯಾಗಿ ಗದ್ದೆ ನಿರ್ಮಿಸಿದ್ದರು. ಕೆಲವು ಗದ್ದೆಗಳಲ್ಲಿ ಹೋಂ ಸ್ಟೇ ತಲೆ ಎತ್ತಿದ್ದವು.

ಬೆಳ್ಳಂ ಬೆಳಿಗ್ಗೆ ಹೂ ಕಣಿವೆಯತ್ತ…
ಮಗುಚಿ ಬಿದ್ದ ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿಯ ದಾರಿಯಲಿ ಸರ್ಕಸ್‌ ಮಾಡುತ್ತಾ ನಮ್ಮ ರಥವೇರಿ ಹೊರಟಾಗ ಮನದ ಕದ ತೆರೆದಂತೆ ಬೆಟ್ಟಗಳ ಕದವನ್ನು ಯಾರೋ ತೆರೆದಿಟ್ಟಂತೆ, ತಾಜಾ ಮಾವಿನ ರುಚಿಯಂತೆ, ತಾಜಾ ಕವಿತೆಯಂತೆ ಹೊಸ ಲೋಕವೊಂದು ತೆರೆದುಕೊಂಡಿತು. ದೂರದಿಂದ ಬಂದ ನಮ್ಮನ್ನು ಕಾಣಲು ನೂರಾರು ಕಲ್ಲುಗಳು ಕೈಯಲ್ಲಿ ಕಳಶವಿಲ್ಲದೇ ರಸ್ತೆ ಗುಂಟ ನೆರೆದಿದ್ದವು!! 
ಅಮರೀಶ ಪುರಿಯ ಗಡ್ಡದಂತಹ ರಸ್ತೆ. ರಸ್ತೆ ಯಿಂದ ಅನತಿ ದೂರದಲ್ಲಿ ಹರಿವ ತಿಳಿ ಹಸಿರ ಲಾಚುಂಗ್‌ ನದಿ. ಹಳ್ಳಿಗರಿಗೆ ತೀಸ್ಟಾ. ಲಾಚುಂಗ್‌ ದಾಟುತ್ತ ಸ್ವಲ್ಪ ದೂರದಲ್ಲೇ ಶಿಂಗ್‌ಬಾ ರೆಡೋಡೆಂಡ್ರಾನ್‌ ಹೂ ಕಣಿವೆ. 


ಸ್ವಾಗತಿಸಲು ನಿಂತಂತೆ ಕಾಣುವ ಸಾಲು ಸಾಲು ಡೆಂಡ್ರಾನ್‌ ಮರ. ಪ್ರತಿ ಮರದಲ್ಲೂ ಅರಳಿ ನಿಂತ ನೂರಾರು ಡೆಂಡ್ರಾನ್‌ ಪುಷ್ಪಗಳು. ಕ್ರಿಸ್‌ ಮಸ್ ಮರಕ್ಕೆ ಶೃಂಗರಿಸಿದಂತೆ ಕೆಂಪು, ತಿಳಿ ಅರಶಿನ, ನೇರಳೆ ಹೂ ಶೃಂಗಾರ.‌ ತಣ್ಣಗೆ ಹಸಿರಾಗಿ ಹರಿವ ನದಿ. ಸದಾ ತಣ್ಣಗಿರುವ ಹಿಮ ಪಾತ್ರೆಯಂತಹ ಹಲವು ಹೆಕ್ಟೇರ್‌ ಜಾಗವನ್ನು ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚರಿ ಎಂದು ನಾಮಕರಿಸಿದ್ದಾರೆ. ಯಾವುದೇ ಹೆಸರಿನ ಹಂಗಿಲ್ಲದ ನೂರಾರೂ ಹೂಗಳು ಕಣಿವೆಯುದ್ದಕ್ಕೂ ಅರಳಿ ಸ್ವಾಗತಕ್ಕೆ ನಿಂತಿದ್ದವು. ಭಾರತದ ವಿಶಿಷ್ಟ ಸ್ಯಾಂಚುರಿಯಲ್ಲಿ ನಾವಿದ್ದೆವು. ಎಪ್ರಿಲ್‌ ತಿಂಗಳು ಇಲ್ಲಿಗೆ ಭೇಟಿಕೊಡಲು ಪ್ರಶಸ್ತ. ಹಿಮಾಲಯದ ತಪ್ಪಲಿನಲಿ ಕೆಂಪು ರೆಡೋ ಡೆಂಡ್ರಾನ್‌ ಹೂಗಳು ಸಾಮಾನ್ಯ ಮತ್ತು ಸರ್ವಾಂತರಯಾಮಿ.

ಆದರಿಲ್ಲಿ ನೀವು 24 ಬಗೆಯ ರೆಡೋ ಡೆಂಡ್ರಾನ್‌ ಹೂಗಳಿಗೆ ಸಾಕ್ಷ್ಯವಾಗಬಹುದು. ಪ್ರತಿ ಹೂವು ವಿಶಿಷ್ಟ. ಜೊತೆಗೆ ಲಾಚುಂಗ್‌ ನಿಂದ 23 ಕಿ. ಮಿ ದೂರವಿರುವ ಝೀರೋ ಪಾಯಿಂಟ್‌ ಗೆ ಹೋಗಿ ಮನಸೋ ಇಚ್ಛೆ  ಆಡಬಹುದು. 



ಡೆಂಡ್ರಾನ್‌ ಹೂಗಳಿಗೆ ಮುತ್ತಿಕ್ಕಿ ಮುಂದಡಿ ಇಟ್ಟೆವು. ವಸಂತ ಕಾಲಿಡುತ್ತಿದ್ದಂತೆ ಯಾಕ್‌ಗಳನ್ನು ಇಲ್ಲಿ ಮೇಯಿಸಲಾಗುತ್ತದೆ. ವಸಂತವಿಡಿ ಕಣಿವೆಯಲ್ಲಿ ಮೆಂದು ಮಳೆಗಾಲಕ್ಕೆ ಮತ್ತೆ ಮರಳುತ್ತವೆ. ಸ್ಥಳೀಯರು ತಮ್ಮ ಗೂಡಿಗೆ ಅವನ್ನು ಕರೆತರುತ್ತಾರೆ. ಐರಿಸ್‌, ಪ್ರಿಮುಲಾಸ್‌, ಪೊಪ್ಪಿಸ್‌ ಗಿಡಗಳನ್ನು ಬೀಜ ಸಮೇತವಾಗಿ ತಿಂದು ಗೊಬ್ಬರ ದಾನ ಮಾಡುತ್ತವೆ. ಮರು ವರುಷ ಹಿಮ ಕರಗಿದಂತೆ ಒಂದೊಂದಾಗಿ ಮತ್ತೆ ಚಿಗುರಿ ಹೂ ಅರಳಿಸುತ್ತದೆ. ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿ ಮದುವಣ ಗಿತ್ತಿಯಂತೆ ಮತ್ತೆ ತೋರುತ್ತದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿಯಿಂದ ಮುಂದಕ್ಕೆ…


ತಣ್ಣಗಿನ ಊರಿನ ಬಿಸಿ ನೀರ ಬುಗ್ಗೆ…
ಶಿಂಗ್‌ಬಾ ರೆಡೋ ಡೆಂಡ್ರಾನ್‌ ಸ್ಯಾಂಚುರಿಯ ಸನಿಹದಲ್ಲೇ ಇರುವ ಇನ್ನೊಂದು ಸ್ಥಳ ಹಾಟ್‌ ಸ್ಪ್ರಿಂಗ್. 
ಇಲ್ಲಿನ ಬೆಟ್ಟಗಳು ಸಡಿಲ ಮಣ್ಣಿನ ಬೆಟ್ಟಗಳು. ಅಲ್ಲಲ್ಲಿ ಬಾಯ್ದೆರೆದು ಬಿಸಿ ನೀರಿನ ಬುಗ್ಗೆಗಳ ಉಗುಳುತ್ತವೆ. ಒಡಲೊಳಗಿನ ರಾಸಾಯನಿಕಗಳನ್ನೆಲ್ಲಾ ಕರಗಿಸಿಕೊಂಡು ಮೇಲಕ್ಕೆ ಚಿಮ್ಮುತ್ತದೆ. ಹೆಚ್ಚಿನವುಗಳಲ್ಲಿ ಗಂಧಕದ ಪರಿಮಳ. ಹೂ ಕಣಿವೆಯ ದಾಟುತ್ತಿದ್ದಂತೆ ಬೃಹತ್‌ ಬೆಟ್ಟದ ಬುಡದಲ್ಲೊಂದು ಬಿಸಿ ನೀರಿನ ಬುಗ್ಗೆ. ಬುಗ್ಗೆಯ ಬಿಸಿ ನೀರನ್ನು ತೊಟ್ಟಿಯೊಂದಕ್ಕೆ ಹಾಯಿಸಿ ತಣ್ಣೀರನ್ನೂ ಮಿಶ್ರ ಮಾಡಿ ನೀರ ತಾಪವನ್ನು ಕಡಿಮೆ ಗೊಳಿಸಿದ್ದರು.
ಆ ತೊಟ್ಟಿಯಲ್ಲಿದ್ದ ಕೊಳಕನ್ನು ನೋಡಿ ಅಸಹ್ಯವೆನಿಸಿ ಹಾಗೇ ಬಂದೆವು. ನೀರು ಸಹಾ ವಿಪರೀತ ಬಿಸಿಯಿತ್ತು. 


ಪಂಜಾಬಿ ಕುಟುಂಬವೊಂದು ಬಂದು ಬುಗ್ಗೆಯ ನೀರನ್ನು ಮೆಲಕ್ಕೆ ಚಿಮ್ಮಿಸಿದರು. ಮೌನದ ಬಗ್ಗೆ ಮತ್ತು ಸಾರ್ವಜನಿಕ ನಡೆವಳಿಕೆಯ ಕುರಿತು ವಿವರಿಸಿ ಹೇಳುವುದು ವ್ಯರ್ಥ ಎಂದು ಒಂದೂ ಮಾತನಾಡದೆ ಸುಮ್ಮನೆ ಬಂದೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕೆಂಬ ಮೂಲಪಾಠವನು ಇವರಿಗೆ ಕಲಿಸುವವರು ಯಾರು? ದಾಂದಲೆಗೆ ಕಿವುಡಾಗಿ ಯುಮ್ತಾಂಗ್‌ ಕಣಿವೆಯ ಸೌಂದರ್ಯವನು ಸವಿಯುತ್ತಾ ಕುಳಿತೆ. ಅಮ್ಮನ ನೀಲಿ ಸೆರಗಿನಂತೆ ತಿಳಿ ಹಸಿರಾಗಿ ಲಾಚುಂಗ್‌ ನದಿ ಹರಿಯುತ್ತಲೇ ಇತ್ತು. ದೂರದ ಝೀರೋ ಪಾಯಿಂಟ್‌ನಲ್ಲಿ ಹಿಮ ಹೊದ್ದ ಬೆಟ್ಟಗಳು ಕಣಿವೆಗೆ ನೀರುಣಿಸುವ ಬೆಟ್ಟದ ಮಹಾ ಮೊಲೆಗಳಂತೆ ಕಂಡವು. 
ಜೋಳಿಗೆಯಲ್ಲಿ ಅಡಗಿದ್ದ ನಾಲ್ಕು ರೆಡೋಡೆಂಡ್ರಾನ್‌ ಹೂಗಳು ಕಿವಿ ಏರಿ ಖುಷಿ ಪಟ್ಟವು. ಕೆಲವನ್ನು ಚಟ್ನಿ ಮಾಡುವ ಆಸೆಯಿಂದಲೂ ತೆಗೆದುಕೊಂಡೆ. ಕಾಡಿಗೆ ಬೆಂಕಿ ಬಿದ್ದಂತೆ ‌ಗಿರಿಯ ನೆತ್ತಿ ತುಂಬಾ ಡೆಂಡ್ರಾನ್‌ ಹೂಗಳ ರಾಶಿ ರಾಶಿ.

ತುದಿಯಿಂದ ತುದಿಗೆ ಜೋಕಾಲಿಯಂತೆ ನೇತುಬಿದ್ದ ತೂಗು ಸೇತುವೆಯಲಿ ನಿಂತು ಪ್ರಕೃತಿಯಲಿ ಕರಗಿದೆವು. ಬೆಟ್ಟಕ್ಕೂ ಬಯಲಿಗೂ ಸೇತುವೆಯಾದ ನದಿ, ಬಯಲ ಕನಸು ಹೊತ್ತು ತಣ್ಣಗೆ ಹರಿಯುತ್ತಿತ್ತು. ಪಾಪ ಏನೋ ಧಾವಂತ. ನಾವು ಬೆಟ್ಟ ಅರಸಿ ಬಂದಿದ್ದೆವು. ನಮಗ್ಯಾವ ಧಾವಂತವೂ ಇರಲಿಲ್ಲ.
ಬಯಲಿನ ಬದುಕು ಹಸನಾಗಲು ಬೆಟ್ಟ ಹಿಮ ಹೊರಬೇಕು ಮತ್ತು ಸದಾ ಕರಗುತ್ತಲೇ ಇರಬೇಕು. ಯಾವುದನ್ನೋ ಸಲಹಲು ಇನ್ನಾವುದನ್ನೋ ಕರಗಿಸುವ ಗಾರುಡಿಗ ಈ ಪ್ರಕೃತಿಯ. ಈ ಎಲ್ಲಾ ಪ್ರಕೃತಿಯ ವಿಸ್ಮಯದಿಂದ ಝೀರೋ ಪಾಯಿಂಟ್‌ ಕೆಲವೇ ಕಿಲೋ ಮೀಟರ್.

ಹೊಟ್ಟೆ ತನ್ನ ಏಕತಾಳ ಶುರುವಿಟ್ಟುಕೊಂಡಿತು. ೪೬ ನೆಯ ನಂಬರಿನ ಅಂಗಡಿಗೆ ನುಗ್ಗಿದೆವು. ಯಾವನೋ ಒಬ್ಬ ಯಾಕ್‌ ನ ಮಾಂಸ ಹದ ಮಾಡುತ್ತಾ ಕುಳಿತಿದ್ದ. ದೂರದಲ್ಲಿ ಹಸನ್ಮುಖಿ ಅಜ್ಜಿಯೊಬ್ಬಳು ಶಾಖಹಾರಿ ತುಪ್ಕಾ ತಯಾರಿಯಲ್ಲಿದ್ದಳು.

ನಾವು ಅನುಮಾನಿಸ ತೊಡಗಿದೆವು. ಶುದ್ಧ ಶಾಖಹಾರಿ ಎಂದು ಮತ್ತೊಮ್ಮೆ ಒತ್ತಿ ಹೇಳಿದಳು. ನಾವು ಆರ್ಡರಿಸಿ ಸಿಕ್ಕಿಂನ ಸ್ಪೆಷಲ್ ತುಪ್ಕಾ ಸವಿದೆವು.‌ ಹೊಟ್ಟೆ ಮತ್ತು ಮನಸ್ಸನ್ನು ತಣಿಸಿತು. 
ಇಂತಹ ಅವಿಸ್ಮರಣೀಯ ವಿಸ್ಮಯಗಳಿಗೆ ಸಾಕ್ಷಿಯಾಗಿ ಬಂದು ಏಳು ವರ್ಷ ಕಳೆದರೂ ಲಾಚುಂಗ್‌ ನದಿಯ ಬೋರ್ಗೆರೆತ ದೊಂದಿಗೆ ಬೆರೆತ ರೆಡೊ ಡೆಂಡ್ರಾನ ಹೂವ ಗಂಧವಿನ್ನು ನನ್ನ ನಾಸಿಕಾಗ್ರದಲ್ಲೇ ಇದೆ. ಇವುಗಳ ಪರಿಮಳಕ್ಕೆ ಸಾಕ್ಷಿಯಾಗಲು ತೀಸ್ಟಾ ನದಿಯ ಜುಳು ಜುಳುಗೆ ಕಿವಿಯಾಗಲು ನೀವು ಯಾವಾಗ ಬರುವಿರಿ. 





Sunday, April 27, 2025

ಮೊದಲ ಮಮ್ಮಿಯ ತೊದಲು ನೋಟ…


ಮೊದಲ್ಗೊಂಡ ಓಟ-

ಶಿಮ್ಲಾದ ಹಾಟ್‌ ರಷ್‌ನ್ನು ಹಿಂದಿಕ್ಕಿ ನಾರ್ಕಂಡದ ಆಪಲ್‌ ತೋಟಗಳನ್ನು ಹಾದು ವಿಶ್ವದ ಉತ್ಕೃಷ್ಠ ಆಲೂ ಬೆಳೆಯುವ ಚಿತ್ಕುಲ್‌ ಊರಿನಲ್ಲಿ ನಕ್ಷತ್ರಗಳನ್ನು ಹೆಕ್ಕಿ ಕೈ ಚೀಲಕ್ಕೆ ಸುರಿದು, ಪವಾಡ ಸದೃಶ ಕಣಿವೆಯಲ್ಲಿ ಚೂರೇ  ಚೂರು ಜಾಗಗಳಲ್ಲಿ ಜಿರಳೆ ನುಸುಳಿದಂತೆ ತೂರಿಕೊಂಡು ಟಿಬೆಟ್‌ ಗಡಿಯ ದಾಬವೊಂದನ್ನು ನೋಡಿ ಧೂಳಿನ ಸ್ನಾನ ಮಾಡುತ್ತಾ ಹಿಮಾಚಲದ ತುತ್ತ ತುದಿಯ ʼಗ್ಯೂʼ ಊರಿನ ದಾರಿಯಲ್ಲಿದ್ದೆವು. ಮೂರು ದಿನಗಳಿಂದ ಮೆರಾಥಾನ್‌ ನಂತೆ ಕ್ಯಾಬ್‌ ನಲ್ಲಿ ಓಡುತ್ತಾ ಸುಸ್ತಾಗಿ ಒಣಗುತ್ತಾ ಬಂದ ನಮ್ಮ ಕನಸುಗಳು ಗರಿಗೆದರಿದ್ದು ಇಲ್ಲೇ. 

      ಸ್ಪಿಟಿ ಕಣಿವೆಯ ಅತ್ಯಂತ ದುರ್ಗಮ ರಸ್ತೆಗಳನು ಮಾತಾಡಿಸಿ, ಸ್ಪಿಟಿ ಮತ್ತು ಸಟ್ಲೇಜ್‌ ಎಂಬೆರಡು ನದಿಯ ಮಿಲನಕ್ಕೆ ಸಾಕ್ಷಿಯಾಗಿ, ನದಿ ಹರಿವಿನ ವಿಚಿತ್ರ ಬಂಡೆಗಳ ಬಳುಕಿಗೆ ಅಚ್ಚರಿಗೊಂಡು ಅಲ್ಲೇ ಒಂದು ಚಹಾ ಹೀರಿ, ಆಪಲ್‌ ತಿಂದು ನ್ಯಾಕೊ ಸರೋವರದ ದಂಡೆಯಲಿ ತಂಗಿ ಗ್ಯೂ ಹಳ್ಳಿಯತ್ತ ಓಟ ಕಿತ್ತೆವು.


 

ಸ್ಪಿಟಿ ಮತ್ತು ಸಟ್ಲೆಜ್‌ ಸೇರುವ ಸಂಗಮದಲ್ಲಿನ ಬಂಡೆಗಳು ಭೂಮಿ ಹುಟ್ಟಿನ ರಹಸ್ಯ ಹೇಳುತ್ತದೆ. ದಕ್ಷಿಣದ ತೆಲಂಗಾಣದ ಗಂಡೀಕೋಟದಂತೆ ಇವು ಕಾಣುತ್ತದೆ. ಕೆಲವು ಕಡೆಗಳಲ್ಲಿ ಸಾಗರವಿದ್ದ ಕುರುಹನ್ನು  ಇಲ್ಲಿನ ಬಂಡೆಗಳು ಹರವಿ ನಿಂತಿವೆ. ಅಲ್ಲಲ್ಲಿ ಸಮುದ್ರದ ಅವಶೇಷಗಳು(ಫಾಸಿಲ್‌ಗಳು) ಸಿಗುತ್ತದೆ. ಎರಡೂ ನದಿಗಳ ಬಣ್ಣವೂ ಕಣ್ಮನ ಸೆಳೆಯುತ್ತದೆ.

 


ಸಾಮಾನ್ಯ ಹಳ್ಳಿಯ ಅಸಾಮಾನ್ಯ ಕತೆ-

ಶಬ್ದಕ್ಕೆ ತೀರವಿಲ್ಲದ ನೋಡಿದಷ್ಟು ಕಣ್ಣು ತೀರದ ಸುಂದರ ಹಳ್ಳಿ. ಗಾಳಿ ಮಾತ್ರ ಇಲ್ಲಿ ಶಬ್ದ ಮಾಡುತ್ತದೆ. ಮೌನವೇ ಇಲ್ಲಿನ ಮಾತೃಭಾಷೆ. ಉಚ್ಛಾರಣೆ ಮತ್ತು  ಅರ್ಥದಲ್ಲೂ ವಿಚಿತ್ರ ಹೆಸರಿನ ಊರು ಗ್ಯೂ.

ನ್ಯಾಕೊ ಹಳ್ಳಿಯ ಅಂದಕೆ ಬೆರಗಾದರೂ ಬೆಳ್ಳಂ ಬೆಳಿಗ್ಗೆ ಮನಸ್ಸಿಲ್ಲದ ಮನಸ್ಸಿನಿಂದ  ಹೊರಟು ಬಿಟ್ಟೆವು. 

ಬಿಸಿಲ ಬೋಗುಣಿಯಲಿ ಚಳಿಯ ರಾಗಗಳನು ಉದ್ಧೀಪಿಸುವ ಪಿಸುಗುಡುವ ಊರ ಹೆಬ್ಬಾಗಿಲಿನಲಿ ಧೂಳಿನ ಮೆರವಣಿಗೆ. ಯಾವುದೋ ಕಣಿವೆಯ ತುತ್ತ ತುದಿಯ ಹಿಮ ಕಂದರದಲಿ ಹುಟ್ಟುವ ಹಿಮನದಿಯೊಂದು ದಾರಿಯುದ್ದಕ್ಕೂ ನಮಗೆ ಜೊತೆಯಾಗಿತ್ತು. ಮೋಡಗಳ ತೀಡಿ ತೀಡಿ ಸ್ವರ ನುಡಿಸುವ ಪಗೋಡದ ತುದಿಯೊಂದು ದೂರದ ಕಣಿವೆಯಲ್ಲೇ ಕಂಡು ರೋಮಾಂಚಿತರಾದೆವು. ಅದುವೇ ಗ್ಯೂ ಊರಿನ ತುದಿಯಲ್ಲಿರುವ ಬೌದ್ಧ ದೇವಾಲಯ. 


ಸುಂದರ ನ್ಯಾಕೋ ಹಳ್ಳಿ

ಗ್ಯೂ ಎಂಬ ವಿಶಿಷ್ಟ ಊರ ದಾರಿಯಲಿ-

ಕೆಂಡದಂತೆ ಸುಡುವ ಸೂರ್ಯನಡಿಯಲಿ ಕುಡಿಯುವ ಹನಿ ನೀರಿಗೂ ತತ್ವಾರ ಪಡುವ ಇಂತಹ ದುರ್ಗಮ ಜಾಗಗಳಲ್ಲಿ ಹತ್ತೇ ಹತ್ತು ಮನೆ ಕಟ್ಟಿಕೊಂಡು  ದಿವ್ಯ ಏಕಾಂತದಲಿ ಲೀನವಾಗಿ ಬದುಕುವ ಇಲ್ಲಿವನರ ಅಪಾರ ತಾಳ್ಮೆಗೆ ಶರಣು ಬಂದೆ. ಕನಿಷ್ಠ ಸೌಲಭ್ಯಗಳಲ್ಲೂ ಖುಷಿಯಾಗಿರುವ ಇವರ ಗುಟ್ಟನ್ನು ತಿಳಿಯಬೇಕು.  ಎಲ್ಲವನು ತಮ್ಮದಾಗಿಸಿಕೊಳ್ಳಬೇಕು ಎಂಬ ಹಪಾಹಪಿಯ ಬಯಲ ಜನರಂತೆ ಏನೂ ಬಯಸದ  ತೃಪ್ತ ಜೀವನ.



ಒಂದು ಪೋಸ್ಟ್‌ ಆಫೀಸ್‌ ಸಣ್ಣದೊಂದು ಔಷಧಾಲಯ ಮಾತ್ರ ಇವರ ಸೌಲಭ್ಯ. ಹಿಮಾಚಲದ ಕಾಝಾದಿಂದ 87ಕಿ.ಮಿ. ಹಾಗೂ ನ್ಯಾಕೊ ದಿಂದ 47 ಕಿ.ಮಿ ಅಂತರದಲ್ಲಿದೆ. ಇಲ್ಲಿಗೆ ಬಂದು ಹೋಗಲು ಯಾವುದೇ ನೇರ ಬಸ್‌ ವ್ಯವಸ್ಥೆ ಇರುವುದಿಲ್ಲ.  

 ಬೇಸರವಾದರೆ ಬೆಟ್ಟ ನೋಡುತ್ತಾ ಕೂರಬೇಕು. ಇಲ್ಲ ಚಳಿಯೊಂದಿಗೆ ರಗ್ಗಿನೊಳಗೆ ತೂರಿ ಗುದ್ದಾಡಬೇಕು. ಸಾರಿಗೆ ಬಿದ್ದ ಸಾಸಿವೆಯಂತೆ ಅಲ್ಲೊಂದು ಇಲ್ಲೊಂದು ಭೋಜ ಪತ್ತೆಯ ಮರಗಳು. ಎರಡು ಕಣಿವೆಯ ಅಂಚಿನ ಧೂಳು ಮೆತ್ತಿದ ದಾರಿಯಲ್ಲಿ 10 ಕೀ. ಮಿ ಸಾಗಬೇಕು. ಈ ದಾರಿ ತುದಿಯಲ್ಲೊಂದು ಪುಟಾಣಿ ಹಳ್ಳಿ. 

ಊರ ಪೂರ್ವಕ್ಕೊಂದು ಚಂದದ ಬೌದ್ಧ ದೇವಾಲಯ. ಹಿಮ ಬೀಳುವ ಬೆಟ್ಟಗಳು ದೇವಾಲಯದ ರಕ್ಷಣೆಗೆ ನಿಂತಿವೆ. 






ಯಾವುದೇ ನೆಟ್ವರ್ಕ ಸಿಗದ ಹಳ್ಳಿಯ ತುದಿ. ಇಲ್ಲಿಂದ ಚೀನಾ ಕೆಲವೇ ಕಿಲೋ ಮೀಟರ್.‌ ಚೀನಾ ತನ್ನ ನೆಲವಿದು ಎಂದು ಸದಾ ಜಗಳ ತೆಗೆಯುತ್ತದೆ. ಮೊಬೈಲ್‌ ತೆಗೆದರೆ ಕೂಡಲೇ ಚೀನಾದ ಸಮಯವನ್ನು ಅದು ತೋರಿಸುತ್ತೆ! ತನ್ನ ನೆಲವೆಂದು  ದೊಡ್ಡ ದೊಡ್ಡ ಟವರ್‌ ಗಳನ್ನು ಹಾಕಿ ಸಾಧಿಸಲು ಯತ್ನಿಸುತ್ತಿದೆ. ಭಾರತ ದಲ್ಲಿ 11.45 am ಆದರೆ ಚೀನಾದ ಸಮಯ 2.16 pm ಎಂದು ತೋರಿಸುತ್ತೆ. ಅಲ್ಲಿನವರಿಗೂ ತಾವು ಯಾವ ಕಡೆ ಒಲವು ತೋರಬೇಕೆಂಬ ಗೊಂದಲದಲ್ಲಿದ್ದಂತೆ ಕಂಡಿತು. 



ದೇವಾಲಯದ ಸುತ್ತ-

ಗ್ಯೂ ಮಾನೆಸ್ಟ್ರಿ


ಈ ದೇವಾಲಯದಲ್ಲಿ ಕೆಲವು ಆಸಕ್ತಿಕರ ಮೂರ್ತಿಗಳಿವೆ. ಸ್ತ್ರೀಯೊಬ್ಬಳು ಪುರುಷನನ್ನು ಕಾಲಿನ ಮೇಲೆ ಕುಳಿತು ಆತನನ್ನು ಅಪ್ಪಿ ಹಿಡಿದುಕೊಂಡ ಮೂರ್ತಿಯೊಂದಿದೆ!  

ಗ್ಯೂ ಹಳ್ಳಿ


ದೇವಾಲಯದ ಹೊರ ಭಿತ್ತಿಯಲ್ಲಿ 1975ರಲ್ಲಿ ಸಿಕ್ಕ ಒಂದು ಮಮ್ಮಿ ಇದೆ. ಭಾರತದಲ್ಲಿ ಸಿಕ್ಕ ಏಕೈಕ ಮಮ್ಮಿ ಇದು. 1430ರಿಂದ ಧ್ಯಾನಸ್ಥನಾಗಿರುವ ಲಾಮಾ ಸಾಂಗಾ ತೇನ್ಜಿನ್ ಅವರ ಅಪರೂಪದ ಮಮ್ಮಿ. ಸ್ವಾಭಾವಿಕವಾಗಿ ಮಮ್ಮಿ ಮಾಡಲಾಗಿದೆ. ಈ ಪುಣ್ಯಾತ್ಮ ಟಿಬೆಟ್‌ ನಿಂದ ಇಲ್ಲಿಗೆ ಬಂದು ಪ್ರಾಣ ಬಿಟ್ಟ ಎನ್ನುತ್ತದೆ ಇತಿಹಾಸ! ಚರ್ಮ, ಹಲ್ಲು ಮತ್ತು ಕೂದಲು ಇನ್ನೂ ಸುಸ್ಥಿತಿಯಲ್ಲಿರುವುದು ಇನ್ನೂ ವಿಶೇಷ. 1975ರಲ್ಲಿ ಇದನ್ನು ಇಲ್ಲಿ ಸಂಭವಿಸಿದ ಭೂಕಂಪದಲ್ಲಿ ಹಾಳಾದ ಸ್ತೂಪ ಒಂದರ ಅವಶೇಷಗಳಲ್ಲಿ ಸಿಕ್ಕಿತು. ಕೆಲವೊಮ್ಮೆ ಕೆಡುಕು ಸಹ ಒಳಿತ ನಂಟುಮಾಡುತ್ತದೆ ಎನ್ನುವುದಕ್ಕೆ ಈ ಮಮ್ಮಿಯೇ ಸಾಕ್ಷಿ.  ವಿಜ್ಞಾನಿಗಳು ಇದನ್ನು 600 ವರ್ಷಹಳೆಯದೆಂದು ಘೋಷಿಸಿದ್ದಾರೆ.


 

ವಿಶಿಷ್ಟ ತಂತ್ರದಲಿ ಮಮ್ಮಿ ಮಾಡುವ ವಿಧಾನ-

ಈಜಿಪ್ಟ್‌ನ ತಂತ್ರಕ್ಕಿಂತ ಭಿನ್ನವಾಗಿ ಈ ಲಾಮಾನನ್ನು ಮಮ್ಮಿ ಮಾಡಲಾಗಿದೆ. ದೇಹದ ರಸ ಮತ್ತು ಮಾಂಸವನ್ನು ನಿರ್ಜಲೀಕರಣ ಮಾಡಿ ಮಮ್ಮಿ ಮಾಡುತ್ತಾರೆ. ಈ ವಿಧಾನವನ್ನು ಶೇಕಾಸಿನಬುಟೆಸ್‌ (Shokushinbutsu) ಎನ್ನುವರು. 

ಈ ಪ್ರಕ್ರಿಯೆಗೆ ಸುಮಾರು ಹತ್ತು ವರ್ಷ ಬೇಕಾಗುತ್ತದೆ ಎನ್ನುತ್ತಾರೆ. ವಿಷಕಾರಿಯಾದ ಬೀಜ, ಬೇರು, ಎಲೆ ತಿನ್ನುತ್ತಾ ತನ್ನ ದೇಹದ ನೀರಿನಂಶ ಕಳೆದುಕೊಳ್ಳುತ್ತಾ ವಿಶಿಷ್ಟವಾಗಿ ಮಮ್ಮಿ ಮಾಡುವ ಕ್ರಿಯೆಯಾಗಿದೆ.


ಕಠಿಣಾತಿ ಕಠಿಣ ಮಮ್ಮಿಯ ಹಾದಿ-

ಸುಮಾರು ಎರಡು ಸಾವಿರ ದಿನಗಳ ತೀವ್ರ ಆಹಾರದ ನಿಯಂತ್ರಣದ ನಂತರ ವಿಷಕಾರಿ ಉರುಶಿ ಮರದ ರಸದಿಂದ ಮಾಡಲಾದ ಚಹ ಕುಡಿಯಲಾಗುತ್ತದೆ. ಈ ಚಹದಿಂದಾಗಿ ತೀವ್ರ ವಾಂತಿಯಾಗಿ ದೇಹದ ನೀರಿನಂಶ ಹೊರ ಹೋಗುತ್ತದೆ. ಆ ವಿಷಕಾರಿ ಚಹದಿಂದಾಗಿ ದೇಹದಲ್ಲಿ ಪ್ರಿಸರ್ವೇಟಿವ್‌ ತರಹ ಕೆಲಸ ಮಾಡಿ ದೇಹವನ್ನು ಬ್ಯಾಕ್ಟೀರಿಯದಿಂದಾಗುವ ಡಿಕೆಯಿಂದ ರಕ್ಷಿಸುತ್ತದೆ. ಇದರ ನಂತರ ದೇಹವು ಸರಿಯಾಗಿ ಮಮ್ಮಿಯಾಗಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಆತನ ದೇಹ ಸರಿಯಾಗಿ ಮಮ್ಮಿಯಾದರೆ ಆತ ಬುದ್ಧನ ಎತ್ತರಕ್ಕೆ ಏರುತ್ತಾನೆ. ಬುದ್ಧನಾದ ಖುಷಿಯಲ್ಲಿ ಜನ ಧಾರ್ಮಿಕ ಆಚರಣೆ ಆಚರಿಸುತ್ತಾರೆ. ಕೆಲವು ಸ್ಥಳೀಯರ ಹೇಳಿಕೆಯಂತೆ ಆತ ಚೇಳಿನ ಕಡಿತದಿಂದ ಊರನ್ನು ರಕ್ಷಿಸಲು ಮಮ್ಮಿಯಾದ ಎನ್ನುತ್ತಾರೆ. ಆತ ತೀರಿ ಹೋದ ಬಳಿಕ ಆಕಾಶದಲ್ಲಿ ಕಾಮನಬಿಲ್ಲು ಮೂಡಿತು ಎನ್ನುತ್ತದೆ ಜನಪದ. 

ಇಂತಹದೊಂದು ಕಾಲಾತೀತ ಚಮತ್ಕಾರಿ ಮಮ್ಮಿಯನ್ನು ನೋಡಲು, ನೀರವ ರಾತ್ರಿಗಳನ್ನು ಕಳೆಯಲು, ಆಧ್ಯಾತ್ಮಿಕ ಅನುಭೂತಿಯೊಂದನ್ನು ಪಡೆಯಲು ನೀವಿಲ್ಲಿಗೆ ಬರಲೇಬೇಕು.

                               ಶ್ರೀಧರ್‌ ಎಸ್.‌ ಸಿದ್ದಾಪುರ.



ವಾರೆ ನೋಟ

ಜಾರುಬಂಡಿ ಜಲಪಾತದ ದಾರಿಯಲ್ಲಿ…..

 ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ. ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನ...