Monday, September 5, 2011

ಕುಟುರ್ ಕುಟುರ್ ವಾಧ್ಯಗಾರ.



ಕುಟುರ  (white checked Barbet)
ಇಂದೇಕೋ ಬೆಳಗಿನಿಂದಲೇ ಒಂದೇ ಸಮನೆ ಕುಟ್ರೂ ಕುಟ್ರೂ ಧೀರ್ಘ ದನಿ ಮಾವಿನ ಮರದಿಂದ ನೀರವ ಏಕಾಂತವೊಂದನ್ನು ಸೀಳಿಕೊಂಡು ಕೇಳಿಸುತ್ತಲೇ ಇತ್ತು. ಮಧ್ಯಾಹ್ನದ ಮಂಪರು ಹತ್ತುವಾಗಲೂ ದನಿ ನಿಲ್ಲಲೇ ಇಲ್ಲ.
ಸರಿ ಇಳಿ ಸಂಜೆಗೆ ನನ್ನ ದೊಡ್ಡ ಬೈನಾಕುಲರ್ ಹೆಗಲಿಗೇರಿಸಿ ಚಿಕ್ಕ ಕ್ಯಾಮರವನ್ನೂ ಹಿಡಿದು ಹೊರಟೆ. ನಾ ಹೋದ ಕೂಡಲೆ ಸ್ವರದ ದಿಕ್ಕು ಬದಲಾಯಿತು. ಆಸಾಮಿ ಎಲ್ಲಿ ಹೋದನಪ್ಪ ಎಂದುಕೊಂಡೆ ಸ್ವಲ್ಪ ಹೊತ್ತು ಕಾದೆ. ಸುಳೀವೇ ಇಲ್ಲ. ಬೇಸರ ಬಂದು ಹೊರಡುವಷ್ಟರಲ್ಲಿ ಮತ್ತೆ ವಾಧ್ಯ ಸಂಗೀತ ಶುರುವಾಯಿತು. ಜೊತೆಗೆ ಇನ್ನೊಂದು ದಿಕ್ಕಿನಿಂದ ಮೇಳ. ಅಂದರೆ ಇಲ್ಲಿನ ಕುಟುರ್ಗೆ ಮತ್ತೊಂದು ಕಡೆಯಿಂದ ಉತ್ತರ ಅದೇ 'ಕುಟುರ್ ಕುಟುರ್'. ಕೆಲವೊಮ್ಮೆ ಅತಿ ದೀರ್ಘ ಕುಟ್ರೂ.... ಎಲ್ಲಿಂದ ಈ ಸ್ವರ ಹೊರ ಬರುತಿದೆ ಎಂದು ಕಂಡುಹಿಡಿಯಲಾಗದೇ ಕಂಗಾಲಾದೆ. ಸುಮಾರು ಐದು ನಿಮಿಷದ ತರುವಾಯ ಸ್ವರ ಮತ್ತೊಂದು ನುಗ್ಗೆ ಮರದಿಂದ ಬರುತಲಿತ್ತು. ಯಾವುದಪ್ಪ ಈ ಕುಟ್ರ ಕುಪ್ಪಳ ಎಂದು ನೋಡೋಣವೆಂದು ಹೊರಟೆ. ಶಬ್ದ ಮಾತ್ರ ಕೇಳುತಲಿತ್ತು. ಇದೇನು ಮಾಯಜಾಲ? ಪಕ್ಷಿ ಕಾಣುತ್ತಿಲ್ಲವಲ್ಲವೆಂದು ಕಳವಳಗೊಂಡೆ. ಪುಣ್ಯವಶಾತ್ ನುಗ್ಗೆ ಮರದಲಿ ಕೂಗುತಲಿದ್ದ ಹಕ್ಕಿ ಕಾಣಿಸಿತು. ಕೂಡಲೇ ಅದರದೊಂದು ಚಿತ್ರ ತೆಗೆದಿಟ್ಟುಕೊಂಡೆ. ಕಾಡಿನ ಹಸಿರಿನೊಂದಿಗೆ ಹಸಿರಾಗಿರುವ ಈ ಹಕ್ಕಿ ಕುಟುರ(ಬಾರ್ಬೆಟ್ ಆಂಗ್ಲ ನಾಮಧೇಯ). ಇವುಗಳಲ್ಲಿ ಅನೇಕ ಪ್ರಭೇದಗಳಂಟು ಮರ್ರೆ. ಕಬ್ಬಿಣ ಕುಟ್ಟುವಂತೆ ಕುಟ್ಟುವ ಮತ್ತೊಂದು ಪ್ರಭೇದವೂ (Copper Smith Barbet) ಉಂಟು. ಮರಿ ಮಾಡುವ ಸಮಯದಲ್ಲಿ ಮಾತ್ರ ನಿಮಗಿದರ ಕುಗು ಕೇಳಿ ಬರುತ್ತದೆ. ಉಳಿದ ಸಮಯದಲಿ ಮಹಾ ಮೌನಿ!


Copper Smith Barbet

ನೀವು ಮಲೆನಾಡಿಗರೇ? ಹಾಗಾದರೆ ಕುಟ್ರೂ ಕುಟ್ರೂ ಎಂಬ ವಿಶಿಷ್ಟ ಧೀರ್ಘ ದನಿ ಕೇಳಿಯೇ ಕೇಳಿರುತ್ತೀರಿ. ಇಂತಹ ಸುರ ಸುಂದರಾಂಗ ಪಕ್ಷಿ ನಮ್ಮ ಮಲೆನಾಡು ಕರಾವಳಿಗಳಲ್ಲಿ ಸಾಮಾನ್ಯ. ಕಬ್ಬಿಣ ಕುಟುರವೂ ಕೆಲವೊಮ್ಮೆ ಕಾಣಸಿಗುವುದು.
       ಈ ಹಕ್ಕಿಯನ್ನು ಸುಲಭದಲ್ಲಿ ಗುರುತಿಸುವುದು ಕಷ್ಟ. ಎಲೆಯ ಹಸಿರುನೊಂದಿಗೆ ಲೀನವಾಗುವ ಹಕ್ಕಿ ಗಮನವಿಟ್ಟು ನೋಡಿದರೆ ಮಾತ್ರ ಕಾಣಿಸುತ್ತದೆ. ಹಸಿರು ಬೆನ್ನು ಹಾಗೂ ಕುತ್ತಿಗೆ ಪುಡಿ ಬಣ್ಣದಲ್ಲಿದ್ದು, ನಡುವೆ ಬಿಳಿ ಮಚ್ಚೆಗಳಿರುತ್ತದೆ. ಕೊಕ್ಕಿನ ಬಳಿ ಸಣ್ಣ ಸಣ್ಣ ಮೀಸೆಗಳಿವೆ.
Crimson Red Barbet 
     ಗೋಳಿ ಜಾತಿಯ ಹಣ್ಣಿನ ಮರಗಳಲ್ಲಿ ಕಂಡು ಬರುತ್ತವೆ. ಸೀಬೆ, ಚಿಕ್ಕೂ ಮರದಲ್ಲೂ ತಮ್ಮ ಹಾಜರಿ ತೋರ್ಪಡಿಸುತ್ತವೆ. ಮಿಡತೆಗಳೂ ಇವುಗಳ ಆಹಾರದ ಪಟ್ಟಿಯಲ್ಲಿವೆ. ಹಾಗಾಗಿ ಇದನ್ನು ಮಿಶ್ರಹಾರಿ ಎನ್ನ ಬಹುದು.  ಹಸಿರು ಮರಗಳೆಡೆಯಲ್ಲಿ ಇವನ್ನು ಹುಡುವುದೇ ಕಷ್ಟ. ಕುತ್ತಿಗೆಯಲ್ಲೊಂದು ಬಿಳಿ ಪಟ್ಟಿ ಬಿಟ್ಟರೆ ಮಿಕ್ಕೆಲ್ಲಾ ಕಡೆ ಹಸಿರೋ ಹಸಿರು. ಇವುಗಳಲ್ಲಿ ಮತ್ತೆರಡು ಪ್ರಭೇದದ ಹಕ್ಕಿಗಳಿವೆ ಅವು ಸಹ ಒಂದಕಿಂತ ಒಂದು ಚೆಂದ. ನಮ್ಮ ಮನೆಯ ಅಡಿಕೆ ಮರದಲ್ಲೊಮ್ಮೆ ಗೂಡನ್ನೂ ಕೊರೆದಿತ್ತು. ಅದೇಕೋ ಮರಿ ಮಾಡಲು ಮನಸ್ಸು ಮಾಡಲಿಲ್ಲ. ಡಿಸೆಂಬರ ನಿಂದ ಜೂನ್ವರೆಗೆ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಮರಿ ಮಾಡುವ ಕಾಲದಲ್ಲಿ ಮಾತ್ರ ಕೂಗುತ್ತದೆ. ಮರಕುಟುಕ ಕೊರೆದ ಕಾಂಡವನ್ನೇ ದೊಡ್ಡದು ಮಾಡಿ ಉಪಯೋಗಿಸುತ್ತವೆ ಎಂದು ಎಲ್ಲೋ ಓದಿದ ನೆನಪು. ವೇಗವಾಗಿ ಹಾರುವ ಮಲೆನಾಡಿನ ಚತುರ ಹಕ್ಕಿಗಳಲ್ಲಿ ಇದೂ ಒಂದು. ಇತಿ ಅಂತ್ಯಂ ಕುಟುರ ಪುರಾಣಂ!

ಶ್ರೀಧರ್. ಎಸ್. ಸಿದ್ದಾಪುರ



No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...