Wednesday, March 12, 2014

ವಿಸ್ಮಯಗಳ ತಾಣ ಮನೋಹರ ಮಣಿಕರಣ


ಹಿಮಾಲಯ ಪರ್ವತ ಹಲವು ಅಚ್ಚರಿಗಳ ತವರೂರು ಅಂತಹ ಅಚ್ಚರಿಯನ್ನು ತವಕದಿಂದ ಎದುರುಗೊಳ್ಳಲು ನಾವು ತಯಾರಾದೆವು. ಕುಲ್ಲು ಜಿಲ್ಲೆಯ ಮಲಾನ ಎಂಬ ಮಾಯಾನಗರಿಯ ಐದು ಗಂಟೆಯ ಟ್ರಕ್ಕಿಂಗ್ ಮುಗಿಸಿ ಮತ್ತೆ ಸಂಜೆ ಆರು ಗಂಟೆಗೆ ನಾವು ಕಾರಿನ ಬಳಿಗೆ ಬಂದಿದ್ದೆವು .ಕೈ ಕಾಲುಗಳೆಲ್ಲ ಬಳಲಿದ್ದರೂ ಉತ್ಸಾಹ ಪುಟಿಯುತಿತ್ತು. ಕಾರಿನ ಡ್ರೈವರ್ ಮತ್ತು ಗೆಳೆಯ ನಾಗರಾಜ್ ಮುಂದಿನ ತಾಣಗಳ ರೋಚಕ ಕತೆಯನ್ನು ಹೇಳಲಾರಂಬಿಸಿದರು. ಆ ವರ್ಣನೆಗೆ ಮನತೂಗಿ ಕನಸು ಕಾಣಲಾರಂಭಿಸಿದೆ. ಸುಮಾರು ಸಂಜೆ ಗತ್ತಲಿನಲ್ಲಿ ಬಿಳಿನೊರೆಯಿಂದ ಬಳಕುವ ಬಿಯಾಸ್ ನದಿ ತಟದ ಪ್ರಶಾಂತ ಮಣಿಕರಣಕ್ಕೆ 6.45 ಕ್ಕೆ ತಲುಪಿದೆವು. 
ಊರಿಗೂರು ಸೂಚಿಪರ್ಣ ಮರಗಳಿಂದ ಹಿಮಚ್ಛಾದಿತ ಬೆಟ್ಟಗಳಿಂದ ಸುತ್ತುವರಿದು ನಯನ ಮನೋಹರವಾಗಿತ್ತು. ಸೂರ್ಯ ರಜೆ ಮೇಲಿದ್ದ ಮತ್ತೆ ಮುಂದುವರಿಯಲಾರದಂತೆ ಬೆಟ್ಟಗಳು ಸುತ್ತುವರಿದಿದ್ದವು. 
ಬಿಯಾಸ್ ನದಿ ತಟದ ಹೋಟೆಲೊಂದರಲ್ಲಿ ವಾಸ್ತವ್ಯ ಹೂಡಿದೆವು. ಪಾರ್ವತಿ ಕಣಿವೆಯ ಮಗುಲಿನ ಸ್ವಲ್ಪವೇ ಸ್ವಲ್ಪ ಸಮತಟ್ಟಾದ ಪ್ರಕೃತಿ ವಿಸ್ಮಯದ ವಿಶಿಷ್ಟ ತಾಣ ಮಣಿಕರಣ. 
ವಿಸ್ಮಯದ ಬುಗ್ಗೆಗಳು : ಮಣಿಕರಣದ ವಿಸ್ಮಯ 2 ಬಿಸಿ ನೀರಿನ ಬುಗ್ಗೆಗಳು, ಯಾರೋ ಅಗಾದ ಪ್ರಮಾಣದ ಕಟ್ಟಿಗೆಯಿಂದ ನೀರನ್ನು ಕಾಯಿಸುತ್ತಿರುವಂತೆ ನೀರಿನ ಹೊಂಡಗಳಲ್ಲಿ ಹೊಗೆಯೇಳುತ್ತಿತ್ತು. ಸುಮಾರು 0  ಹೊರಗಿನ ಉಷ್ಣಾಂಶವಿರುವಗಲೂ ನೀರು ಕುದಿಯುತ್ತಿರುತ್ತದೆ! ಇಂತಹ ಎರಡು ಕೆರೆಗಳಲ್ಲಿ ಅಲ್ಲಿನ ಜನರು ಬಟ್ಟೆಯಲ್ಲಿ ಕಡಲೆ, ಅಕ್ಕಿ, ಬೇಳೆ ಮುಂತಾದ ವಸ್ತುಗಳನ್ನು ಇಳಿ ಬಿಟ್ಟು ಕಾಯುತಿದ್ದರು. ಇವೆಲ್ಲಾ ವಸ್ತುಗಳು ಎರಡು ನಿಮಿಷದಲ್ಲಿ ಹದವಾಗಿ ಬೆಂದಿತ್ತು! ಆಶ್ಚರ್ಯವೋ ಆಶ್ಚರ್ಯ.
ರೋಗ ನಿವಾರಿಸುವ ವಿಶೇಷವಾದ ಶಕ್ತಿ ಈ ನೀರಿಗಿದೆ ಎಂದು ನಂಬುತ್ತಾರೆ ಅಲ್ಲದೆ ಇಲ್ಲಿ ಮಾನಸಿಕ ಅಸ್ವಸ್ಥರನ್ನು ಗುಣಪಡಿಸುವ ವಿಶಿಷ್ಟ ಗುಹೆಗಳಿವೆ!
ಅಡುಗೆ ಮಾಡಲ್ಲ!: ಈ ಊರಿನ ಜನರ್ಯಾರು ಮನೆಯಲ್ಲಿ ಬೆಂಕಿ ಹೊತ್ತಿಸಲ್ಲ! ಕಾರಣವೇನೆಂದರೆ ಈ ಬಿಸಿ ನೀರಿನ ಬುಗ್ಗೆ ಬಳಸಿ ತಮ್ಮ ಅಡುಗೆ ತಯಾರಿಸಿಕೊಳ್ಳುತ್ತಾರೆ!.ಇಲ್ಲಿನ ಗುರುದ್ವಾರದಲ್ಲೂ ಊಟದ ವ್ಯವಸ್ಥೆಗೆ ಈ ಬಿಸಿ ನೀರಿನ ಬುಗ್ಗೆಯನ್ನೇ ಬಳಸುತ್ತಾರೆ!. 
ಇಲ್ಲಿನ ಗುರುದ್ವಾರ ಮತ್ತು ದೇವಿ ಮಂದಿರಗಳಲ್ಲಿ ಪ್ರಸಾದ ಬೇಯಿಸಲು ಇಲ್ಲಿನ ಬಿಸಿ ನೀರಿನ ಬುಗ್ಗೆಗಳನ್ನೇ ಬಳಸುತ್ತಾರೆ! ಭಕ್ತರಿಗೆ ಉಣಬಡಿಸುವ 'ದಾಲ್', ಅನ್ನವನ್ನು ಈ ನೀರಿನಲ್ಲೆ ಬೇಯಿಸಿ ತಯಾರಿಸಲಾಗುತ್ತದೆ.
ಬಿಸಿ ನೀರಿನ ಸ್ಪಾ:- 
ಈ ಎರಡು ಬಿಸಿ ಬೀರಿನ ಬುಗ್ಗೆಯ ನೀರನ್ನು 80 ಅಡಿ ಉದ್ದ 20 ಅಡಿ ಅಗಲದ ಕೆರೆಗೆ ತಣ್ಣೀರಿನೊಂದಿಗೆ ಮಿಶ್ರಮಾಡಿ ಹಾಯಿಸಲಾಗುತ್ತದೆ. 1600 ಚದರ ಅಡಿ ವಿಸ್ತೀರ್ಣದ ಸುಮಾರು 7 ಅಡಿ ಆಳವಿರುವ ಕೊಳಕ್ಕೆ ಸ್ವಲ್ಪವೇ ಬಿಸಿ ನೀರನ್ನು ಹಾಯಿಸಿ ಭಕ್ತಾದಿಗಳು ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇಷ್ಟು ದೊಡ್ಡ ಕೊಳದ ನೀರು ಕೈ ಕಾಲು ಹಾಕಲಾರದಷ್ಟು ಬಿಸಿ ಇರುತ್ತದೆ!. ವಾತಾವರಣದ ಉಷ್ಣತೆ 10 ಗಿಂತ ಕಡಿಮೆ ಬಂದರೂ ಈ ನೀರಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲದಷ್ಟು ಬಿಸಿ, ಇಂತಹ ನೀರಲ್ಲಿ ಸಂಜೆ ಒಂದು ಗಂಟೆ ಮನನಸೋ ಇಚ್ಛೆ ಸ್ನಾನ ಮಾಡಿ ಟ್ರಕ್ಕಿಂಗ್ ಮಾಡಿದ ಆಯಾಸವನ್ನು ಪರಿಹರಿಸಿಕೊಂಡೆವು. ಮಾಂಸಖಂಡಗಳಿಗೆ ಅದ್ಭುತವಾದ ಮಸಾಜ್ ಹೊಂದಿ ರಿಲ್ಯಾಕ್ಸ್ ಆದೆವು. 
ಇಲ್ಲಿಂದ ನಾವು 'ಆವಿ ಸ್ನಾನ' ಮಾಡಿಕೊಳ್ಳಲು ಇಲ್ಲಿನ ಗುಹೆಗಳಿಗೆ ತೆರಳಿದೆವು. ಇವೆಲ್ಲವು ಭೂಮಿ ಆಳದಿಂದ ಬರುವ ಬಿಸಿ ನೀರು ಇವುಗಳ ಸುತ್ತ ಹರಿದು ಬಿಸಿಯಾಗುವ ಗುಹೆಗಳು, ಸ್ವಾಭಾವಿಕವಾಗಿ ಬಿಸಿಯಾಗುವ ಇಲ್ಲಿ ಉತ್ತಮವಾದ ಮಸಾಜ್ ಮಾಡಿಕೊಂಡು 'ಆವಿ ಸ್ನಾನ' ಮಾಡಿದೆವು. ಮೈ ಮನಸ್ಸು ತಣಿದ ನಂತರ ನಮ್ಮ ಹೋಟೆಲ್ಗೆ ತೆರಳಿದೆವು. 
ಇತಿಹಾಸ:- ಮಣಿಕರಣ ಇತಿಹಾಸ ಬಹಳ ರೋಚಕವಾಗಿದೆ, ಹಿಂದುಗಳ ನಂಬಿಕೆಯಂತೆ ಒಮ್ಮೆ ಶಿವ ಪಾರ್ವತಿ ಈ ಪ್ರದೇಶದಲ್ಲಿ ಸುತ್ತಾಡುತ್ತಾ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲಿ 1100 ವರ್ಷ ನೆಲೆಸಿದರು. ಒಮ್ಮೆ ಪಾರ್ವತಿ ಒಂದು ಕೊಳದ ಬಳಿ ಬರುವಾಗ ಅವಳ ಕಿವಿಯ ಮಣಿ ನೀರಿನಲ್ಲಿ ಬಿದ್ದು ಕಾಣೆಯಾಯಿತು. ಅದಕ್ಕಾಗಿ ಆಕೆ ಪರಿಪರಿಯಾಗಿ ಹುಡುಕಿದಳು. ಅವಳ ಕಿವಿ ಮಣಿಯನ್ನು ಹಿಂದೆ ಪಡೆಯಲು ಶಿವ ತಾಂಡವ ನೃತ್ಯ ಮಾಡಿದಾಗ ಮಣಿ ನುಂಗಿದ ಶೇಷನಾಗ ಅದನ್ನು ಮರಳಿಸಿದ. ಇಲ್ಲಿನ ಬುಗ್ಗೆಗಳಲ್ಲಿ 1905ರ ವರೆಗೂ 'ಚಿನ್ನ' ಸಿಗುತ್ತಿತ್ತು! ಎನ್ನುವುದು ಒಂದು ಸ್ಫೋಟಕ ಮಾಹಿತಿ. ಈ ವಿಷಯವನ್ನು ವಿಜ್ಞಾನಿಗಳೇ ವಿವರಿಸಬೇಕು. ಈ ಎಲ್ಲಾ ವಿಷಯಗಳನ್ನು ವಿಜ್ಞಾನದ ಒರೆಗಲ್ಲಿಗೆ ಹಚ್ಚಬೇಕಾಗಿದೆ. 
ಸಿಖ್ ನಂಬಿಕೆಗಳ ಪ್ರಕಾರ ಸಿಖ್ಗುರು ಗುರುನಾನಕ್ 1574 ರಲ್ಲಿ ಇಲ್ಲಿಗೆ ಆಗಮಿಸಿದ ಸಂದರ್ಭ ಒಬ್ಬ ಶಿಷ್ಯನಿಗೆ ಬಹಳ ಹಸಿವೆಯುಂಟಾಗಿ, ಚಪಾತಿಯ ಹಿಟ್ಟಿಗಾಗಿ ಇಲ್ಲಿ ಹಲವರನ್ನು ಬೇಡಿ ತಂದ ಹಿಟ್ಟಿನಲ್ಲಿ ಚಪಾತಿ ಮಾಡಿದ. ಆದರೆ ಬೇಯಿಸಲು ಯಾವುದೇ ಪಾತ್ರೆಯಿಲ್ಲದೇ, ಇಲ್ಲಿನ ಕೆರೆಗಳಲ್ಲಿ ಮುಳಿಗಿಸಿದ ನಂತರ ದೇವರ ಪ್ರಾರ್ಥನೆ ಮಾಡಿದಾಗ ಆ ಕೆರೆಗಳಲ್ಲಿ ಬಿಸಿ ನೀರು ಬಂದು ಚಪಾತಿ ಬೆಂದು ಹೋಯಿತು ಎಂಬುದು ಸ್ಥಳ ಪುರಾಣವಿದೆ. 
ಇಲ್ಲಿ ಸುಂದರವಾದ ರಾಮ ಮಂದಿರ, ಶಿವ ಮಂದಿರ, ದೇವಿ ಮಂದಿರ ಮತ್ತು ಗುರುದ್ವಾರವಿದೆ. ದೇವಿ ಮಂದಿರದ ಸೂಕ್ಷ್ಮ ಕೆತ್ತನೆ ಬಹಳ ಸುಂದರವಾಗಿದೆ. ಇಲ್ಲಿನ ದೇವಾಲಯಗಳನ್ನು ಬೆರಗುಗಣ್ಣಿನಿಂದ ನೋಡಿದೆವು. 
ಹತ್ತಿರದ ಸ್ಥಳಗಳು:- ಇಲ್ಲಿ ಸುತ್ತಮುತ್ತ ಹಲವಾರು ಸುಂದರ ಸ್ಥಳಗಳಿವೆ ಬಿಜಲಿ, ಮಹಾದೇವ, ಮಲಾನ, ಜಾನಾಪಾಲ್ಸ, ಮನಾಲಿ, ಅಜರ್ುನ್ ಗುಫಾ, ಹಿಂಡಿಬಾ ದೇವಸ್ಥಾನ ಮುಂತಾದ ಸುಂದರ ಸ್ಥಳಗಳಿವೆ. ಬಿಯಾಸ್ ನದಿಯಲ್ಲಿ ರಾಫ್ಟಿಂಗ್ ಮಾಡಲು ಮರೆಯದಿರಿ. ಅದು ನಿಮಗೆ ವಿಶಿಷ್ಟಾನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ. 
ವಿಶಿಷ್ಟ ಹಣ್ಣುಗಳು:- ಹಿಮಾಲಯದಲ್ಲಿ ಹಲವು ವಿಶಿಷ್ಟ ಜಾತಿಯ ಹಣ್ಣುಗಳಿವೆ, ಎಲ್ಲಾ  ಜಾತಿಯ ಹಣ್ಣುಗಳ ರುಚಿ ನೋಡಿದೆವು. ಅತಿ ಮುಖ್ಯವಾದವು ಚೆರಿ, ಎಗ್ರೋಟ್, ಮೆದುಳಿನಾಕಾರದ ವಾಲ್ನಟ್ ಧಾರಾಳವಾಗಿ ಸಿಗುತ್ತದೆ. ಇನ್ನೂ ಹೆಸರು ಕೇಳದ ಕಂಡರಿಯದ ಹಲವು ಹಣ್ಣುಗಳ ರುಚಿ ನೋಡಿದೆವು, ವಾಲ್ನಟ್ ಹಣ್ಣು ಮೆದುಳಿಗೆ ಬಹಳ ಒಳ್ಳೆಯದೆಂದು ಯಾರೋ ಹೇಳಿದರು. ನನ್ನ ಸ್ನೇಹಿತ ಸುಮಾರು 2 ಕೆ.ಜಿಯಷ್ಟು ಹಣ್ಣು ಕೊಂಡು ಬೆಳಿಗ್ಗೆ ಸಂಜೆ ಅದನ್ನೇ ತಿಂದ.
ಎಲ್ಲಿಂದ ಎಸ್ಟೆಷ್ಟು :- ಇಲ್ಲಿಗೆ ಬರಬೇಕಾದರೆ ಬುಂತರ್ ವಿಮಾನ ನಿಲ್ದಾಣದಿಂದ ಯಾ ದೆಹಲಿಯವರೆಗೆ ರೈಲಿನಲ್ಲಿ ಪ್ರಯಾಣಿಸಿ ಅಲ್ಲಿಂದ ಬುಂತರ್ ಅಲ್ಲಿಂದ ಮಣಿಕರಣ್ ತಲುಪಬಹುದು. ವಿಮಾನದಲ್ಲಿ ಹೋಗಿಬರುವ ಖಚರ್ು ಸುಮಾರು 14000 ಸಾವಿರ. ರೈಲಿನಲ್ಲಾದರೆ 9000 ಸಾವಿರದಲ್ಲಿ ನೋಡಿ ಬರಬಹುದು. 











ಶಾಪಿಂಗ್:- ಇಲ್ಲಿ ಶಾಪಿಂಗ್ ಮಾಡಲು ಧಾರಾಳ ಅವಕಾಶವಿದೆ ಕುಲ್ಲು ಶಾಲುಗಳು ಬಹಳ ಪ್ರಸಿದ್ಧಿ ಪಡೆದವುಗಳು ಇಲ್ಲಿ ಸಾಕಷ್ಟು ಶಾಲು, ಸೀರೆ, ಚೂಡಿದಾರ್  ಖರೀದಿಸಿದೆವು. ಹುಡುಗರು ತೊಡುವ ಯಾವುದೇ ವಸ್ತ್ರವಿಲ್ಲದೆ ಇದ್ದುದ್ದು ನನಗೆ ಮತ್ತು ಗೆಳೆಯ ನಾಗರಾಜ್ಗೆ ಬಹಳ ಬೇಸರವನ್ಮ್ನಂಟುಮಾಡಿತು. ನಮ್ಮ ಮುಂದಿನ ತಾಣವಾದ ಮನಾಲಿಗೆ ತೆರಳಲನುವಾದೆವು. 
ನಿರ್ಮಲವಾದ ಪಾರ್ವತಿ ತಾಯಿಯ ನಿಶ್ಚಿಂತ ಮಡಿಲಲ್ಲಿ ಮಣಿಕರಣವೆಂಬ ಕಂದ ಮಲಗಿದ್ದ,

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...