Sunday, September 2, 2018

ಸ್ವರ್ಗದ ದಾರಿಯಲ್ಲಿ ದುರ್ಯೋಧನನ ಮಂದಿರ......

 ಯಾನ:-


out lookನ ವಿಶೇಷ ಸಂಚಿಕೆಯಲ್ಲಿ ಪ್ರಕಟಗೊಂಡ ಒಂದು ವಿಶಿಷ್ಟ ದೇವಾಲಯ ಮತ್ತು ಓಸ್ಲಾ ಎಂಬ ಹಳ್ಳಿ. ಧರ್ಮರಾಯನೂ ಸ್ವರ್ಗವೇರಿದ ದಾರಿ! ಪುರಾಣಕಾಲಕ್ಕೂ ಹೆಜ್ಜೆ ಹಬ್ಬುವ ಕತೆಯನ್ನು ಓದಿ, ಉತ್ತರಾ ಖಂಡದ 66 ಕಿಲೋ ಮೀಟರ್ ದೂರದ ಹರ್ ಕಿ ದುನ್ ಚಾರಣಕ್ಕೆ ಭರ್ಜರಿ ತಯಾರಿ ನಡೆಸಿ ಹೊರಟು ನಿಂತೆ.
ಉತ್ತರಾಖಂಡದ ಡೆಹ್ರಾಡೂನ್ ರೈಲ್ವೆ ಸ್ಟೇಷನ್ಗೆ ಬೆಳಿಗ್ಗೆ 5.30ಕ್ಕೆ ರೈಲು ಏದುಸಿರು ಬಿಡುತ್ತಾ ಬಂದು ನಿಂತಿತು. ಬೆಳಗಿನ ಚಳಿಗೆ ಡೆಹ್ರಾಡೂನ ಸ್ಟೇಷನ್ ತಣ್ಣಗೆ ಮಲಗಿತ್ತು. ಚಾರಟೆ ಹುಳುವಂತೆ ಮುದುಡಿ ಕುಳಿತ ಪೋಲಿಸಿನವನಲ್ಲಿ ಹೋಟೆಲ್ ವಿಳಾಸ ಕೇಳಿ ಹೊರಬಿದ್ದೆ. ಚಳಿಯ ಮೊದಲ ಆಲಿಂಗನಕ್ಕೆ ಮನಸೋತೆ. ಬೆಳ್ಳಗಿನ ಹಿಮ ಹೊದ್ದ ಗೂಡಂಗಡಿಯಲ್ಲಿ ಚಹ ಕುಡಿದು ವಿಳಾಸ ಹುಡುಕುತ್ತಾ ಹೊಟೆಲ್ ಕಡೆಗೆ ಹೊರಟೆ.

ಮೊಮೊ ವಿಶಿಷ್ಟ ತಿಂಡಿ ...
ಮರುದಿನ ಬೆಳಿಗ್ಗೆ ಡೆಹ್ರಾಡೂನ್ನಿಂದ ಸಾಂಕ್ರಿ ಎಂಬ ಹಳ್ಳಿಗೆ ಪ್ರಯಾಣ ನಿಗದಿಯಾಗಿತ್ತು. ದೊಡ್ಡ ದೊಡ್ಡ ಪೈನ್ ಮರಗಳ ನೆರಳುಗಳ ಉದ್ದದ ಹಾದಿ. ಹೋದ ಹೋದಲೆಲ್ಲಾ ಯಮುನೆಯು ನಮ್ಮನ್ನೇ ಹಿಂಬಾಲಿಸುತ್ತಿದ್ದಳು. ಊರೊಂದರಲ್ಲಿ ಇಳಿದು ನೀರು ಕಾಣದೇ ವರ್ಷವಾದವರಂತೆ ಹಷರ್ಿಸುತ್ತಾ ಸ್ಪಟಿಕ ಶುಭ್ರ ಯಮುನೆಯಲಿ ಮುಳುಗಿ ಬಂದೆವು. ಮುಂದೆ ನಮ್ಮ ಪ್ರಯಾಣದುದ್ದಕ್ಕೂ ಜೊತೆಯಾದವಳು ಟೋನ್ಜ್ಸ್ ಎಂಬ ಯಮುನೆಯ ಉಪನದಿ. ನಡು ಮಧ್ಯಾಹ್ನ ಪಹಾಡಿ ಅನ್ನ, ದಾಲ್ ತಡಕಾ, ಪಾವಡಿ ರೋಟಿಯ ತುಣುಕೊಂದು ನಮ್ಮ ಹೊಟ್ಟೆಯ ಜೊತೆಯಾಯಿತು!
ಬೆಟ್ಟದ ಇಳಿಜಾರು ಕಡಿದು ಕಟ್ಟಿದ ಕಟ್ಟಿಗೆಯ ಸಣ್ಣ ಮನೆಗಳು. ಮನೆಯ ಮೇಲೋ, ಮರದ ಮೇಲೋ ಒಣಗಿಸುತ್ತಿದ್ದ ಒಣ ಹುಲ್ಲಿನ ಕಂತೆಗಳು ಪ್ರತೀ ಮನೆಯಲ್ಲೂ ಕಾಣ ಸಿಕ್ಕವು. ಎಲೆ ಉದುರಿಸಿಕೊಂಡು ಮರುಕ ಹುಟ್ಟಿಸುವ ಬೋಳು ಬೋಳಾದ ಸೇಬಿನ ತೋಪುಗಳು ಮನೆಯ ಪಕ್ಕ ಸುಮ್ಮನೆ ಬಿದ್ದಿದ್ದವು. ಶಾಲಾ ಮಕ್ಕಳು ಮನೆಗೆ ಮರಳುತ್ತಿದ್ದರು.
ಸಂಜೆ ನಾಲ್ಕರ ಸುಮಾರಿಗೆ ಚಾರಣದ ಹೆಬ್ಬಾಗಿಲಾದ ಸಾಂಕ್ರಿ ಎಂಬ ಪುಟ್ಟ ಹಳ್ಳಿಯಲ್ಲಿದ್ದೆವು. ಅಂದಲ್ಲಿ ಚಾರಣಿಗರ ಸಂತೆ. ಬಹು ಬೇಗ ಕಟ್ಟಿಗೆಯ ವಿಶಿಷ್ಟ ಕುಟಿರಗಳಲ್ಲಿ ನಾವು ನಿದ್ದೆಗೆ ಬಿದ್ದದ್ದೇ ತಿಳಿಯಲಿಲ್ಲ. ಎರಡನೆಯ ದಿನವೇ ಹಿಮಾಲಯದ ಸನ್ನಿಧಿಯಲ್ಲಿ ನನ್ನ ಎರಡನೇ ಚಾರಣ ಶುರುವಿಟ್ಟುಕೊಂಡಿತು.

ಮೊದಲ್ಗೊಂಡ ಮಂದ್ರ:-


ತಿಂಡಿ ತಿಂದು, ಚಪಾತಿ ಕಟ್ಟಿಸಿಕೊಂಡು ಪೈನ್ ಮರಗಳ ಸೆರಗಿಗೆ ಬಿದ್ದೆವು. ಪ್ರಪಾತಕ್ಕೆ ಬೋರಲು ಬಿದ್ದ ದಾರಿಗಳಲ್ಲಿ ಉಸಿರು ಬಿಗಿ ಹಿಡಿದು 12 ಕಿ.ಲೋ ಮೀಟರ್ ಜೀಪ್ಸಿಯಲ್ಲಿ ಪ್ರಯಾಣಿಸಿ ತಲೂಕಾ ಎಂಬ ಪುಟ್ಟ ಹಳ್ಳಿ ತಲುಪಿದೆವು. ಹನುಮನ ಜಾತಿಯ ಇಬ್ಬರು  ಜಿಪ್ಸಿ ಮೇಲೇರಿ ಕುಳಿತರು! ಮಂಗನಂತೆ ಎಗರಾಡುವ ನಮ್ಮ ಜೀಪು ತೊರೆಗಳ ಹತ್ತಿ ಇಳಿಯಿತು. ಕೆಳಗೆ ನೂರಾರಡಿಯ ಪ್ರಪಾತ, ಜೀವ ಒಮ್ಮೆಗೆ ಜಗ್ ಎಂದು ತಂದೆ, ತಾಯಿ, ಹೆಂಡತಿ, ಮಕ್ಕಳ ನೆನಪು ಮಾಡಿ ಕೊಟ್ಟಿತು. ಅಂತೂ ಅವನ್ನೆಲ್ಲಾ ದಾಟಿಕೊಂಡು ಕೇವಲ ಐದಾರು ಮನೆಗಳಿರುವ ಪುಟ್ಟ ಪುಟಾಣೀ ಹಳ್ಳಿ ತಲೂಕಾ ತಲುಪಿದೆವು. ಇಲ್ಲಿಂದಲೇ ನಮ್ಮ ಮೆರವಣಿಗೆ ಮೊದಲ್ಗೊಂಡಿತು.

ಆಕಾಶದ ಬಿಂಬ ಹರಿವ  ಜಲದಲಿ...


ಚಡ್ಡಿ ಹಾಕದ ಮಕ್ಕಳೆಲ್ಲಾ ಪ್ಯಾಷನ್ ಷೋಗೆ ನಿಂತಂತೆ ನಮ್ಮ ಕೆಮಾರಾಗೆ ಪೋಸು ಕೊಟ್ಟರು! ಮಕ್ಕಳ ದರ್ಶನ ಪಡೆದು ಚಾರಣ ಪ್ರಾರಂಬಿಸಿದೆವು!
ಎಡಕ್ಕೆ ಸುಪಿನ್ ನದಿ. ಬಲಕ್ಕೆ ಫೈನ್ ಮರಗಳ ಕಾಡು. ಸುತ್ತಲೂ ಕಾಡು ಹೂಗಳ ಮೆರವಣಿಗೆ. ಹಿಮಾಲಯದ ಹಕ್ಕಿಗಳ ಇಂಚರ. ಹಿಮ ಸುಂದರಿಯರ ತೆಕ್ಕೆಯಲ್ಲಿ ಮೋಹಿತರಾಗಿ, ಸಾಮಾನು ಹೊತ್ತ ಹೇಸರಗತ್ತೆಗಳು ನಮ್ಮ ಜೊತೆ ಪೈಪೋಟಿಗೆ ಬಿದ್ದು ಗುಡ್ಡ ಏರತೊಡಗಿದೆವು. ಐದಾರು ಸಣ್ಣ ದೊಡ್ಡ ತೊರೆಗಳನ್ನೆಲ್ಲಾ ಹತ್ತಿಳಿದು ಅತ್ಯಂತ ಸಫಾಟಾದ ಜಾಗದಲ್ಲಿ ಕುಳಿತು ಚಾರಣಿಗರು ಫೋಟೊಗೆ ಫೋಸ್ ಕೊಡತೊಡಗಿದರು. ಅಲ್ಲೇ ಬಲದ ಏರಿನಲ್ಲಿ ದೊಡ್ಡ ಗುಡ್ಡದಲ್ಲಿ ಡಟ್ಮೀರ್ ಎಂಬ ಪುಟ್ಟ ಹಳ್ಳಿ. ಕತ್ತೆತ್ತಿ ನೋಡಿದೆ ದೊಡ್ಡ ಬೆಟ್ಟದ ನೆತ್ತಿಯಲ್ಲಿತ್ತು! ಮನುಷ್ಯನ ಇಚ್ಚಾಶಕ್ತಿಗೆ ಚಕಿತನಾದೆ.


ತಲೂಕಾ ಹಳ್ಳಿಯ ಝರಿಯೊಂದರಲ್ಲಿ ತಯಾರಾದ ವಿದ್ಯುತ್ ಈಗಷ್ಟೇ ಅಲ್ಲಿವರೆಗೆ ಬಂದಿತ್ತು. ಭಾನುವಾರ ಬೆಳಿಗ್ಗೆ ರಜೆ ಮುಗಿಸಿ ರಣಬೀರ್ ಎಂಬ ಡಟಮೀರ್ ಹಳ್ಳಿಯ ಹುಡುಗ ದೂರದ ಡೆಹ್ರಾಡೂನ್ಗೆ ಎಂ. ಎ ಮಾಡಲು ಹೊರಟ್ಟಿದ್ದ. ಕಷ್ಟ ಸುಖ ವಿಚಾರಿಸಿದೆ. ಪುಣ್ಯಾತ್ಮ ಬರೋಬ್ಬರಿ 25 ಕಿಲೋ ಮೀಟರ್ ನಡದೇ ಹೊರಟಿದ್ದ! ನಾಚಿಕೆ ಸ್ವಭಾವದ ಹಳ್ಳಿ ಹೆಂಗಸರು ಬೆಳ್ಳಂಬೆಳಿಗ್ಗೆ ಎದ್ದು ಏನೋ ಕೊಯ್ದು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಮಕ್ಕಳೂ ತಮ್ಮ ಬೆನ್ನ ಹಿಂದೂ ಒಂದೊಂದು ಬುಟ್ಟಿ ನೇತಾಡಿಸಿಕೊಂಡಿದ್ದರು. ಅವರಲ್ಲಿ ಕೇಳ ಬೇಕಿದ್ದೆಲ್ಲಾ ನನ್ನಲ್ಲೇ ಕರಗಿತು.
ಪೌನಿಗರಾತ್ ಎಂಬ ಹಳ್ಳಿಯೊಂದು ಸುಪಿನ ನದಿಯ ಎಡ ದಂಡೆಯಲ್ಲಿತ್ತು. ಅಲ್ಲೇ ಸಿಕ್ಕವನೇ ಸುರೇಶ್ ಎಂಬ ದನಗಾಹಿ ಮತ್ತು ಪುಟಾಣಿ ಮಕ್ಕಳು. ಸಕ್ಕರೆಯ ಸಹವಾಸವೇ ಇಲ್ಲದ ಇಲ್ಲಿನ ಮಕ್ಕಳು ಚಾಕಲೇಟ್ಗಾಗಿ ಹಪಹಪಿಸುತ್ತಿದ್ದರು. ಶಾಲೆ ಇದೆಯೇ ಇಲ್ಲಿ ಎಂದು ಸುರೇಶ್ನಲ್ಲಿ ವಿಚಾರಿಸಿದೆ. 200 ಮಕ್ಕಳು ಮತ್ತು 8 ಜನ ಶಿಕ್ಷಕರಿರುವ ಶಾಲೆಯೊಂದು ಇಲ್ಲಿದೆ. ಎಂದು ನನ್ನ ದಂಗುಬಡಿಸಿದ! ದೂರದ ಓಸ್ಲಾ ಎಂಬ ಹಳ್ಳಿಯಿಂದ ಮಕ್ಕಳು ಶಾಲೆಗೆ 5 ಕಿ. ಮೀ ನಡೆದೇ ಬರುತ್ತಾರೆ. ಎಂದ. ಶಾಲೆಗೆ ಭೇಟಿ ಕೊಡಬೇಕೆನಿಸಿತು ಆದರೆ ಭಾನುವಾರ. ಸಂಜೆ ಐದಕ್ಕೆ ಕ್ಯಾಂಪ್ ತಲುಪಿದಾಗ ಬಿಸಿ ಬಿಸಿ ಬ್ರೆಡ್ ಬೊಂಡಾ ಚಳಿಯಲ್ಲಿ  ನಡುಗುತ್ತಾ ನಮಗಾಗಿ ಕಾದಿತ್ತು.
ಪುರಾತನ ಹಳ್ಳಿ ಓಸ್ಲಾದೆಡೆಗೆ
ಬೆಳ್ಳಂಬೆಳ್ಳಿಗ್ಗೆ ಬೇಡವೆಂದರೂ ತಣ್ಣೀರಲ್ಲಿ ಬ್ರಷ್ ಮಾಡಿದ ನಮ್ಮೆಲ್ಲರ ಬೆರಳು ಬೆಂಡೆಕಾಯಿಯಂತಾಗಿತ್ತು. ಮೈಚೆಲ್ಲಿ ಮಲಗಿದ್ದ ತಣ್ಣನೆ ಸೂರ್ಯ ಆಗಸ್ಟೇ ಆಗಮಿಸಿದ್ದ. ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದ ಹಿಮಾಲಯದ ಅತಿ ಪುರಾತನ ಪುಟಾಣಿ ಹಳ್ಳಿ ಓಸ್ಲಾದ ತುಡಿತವೇ ನನ್ನನ್ನು ಇಲ್ಲಿಗೆ ಎಳೆದು ತಂದಿದ್ದು. ಹಾಗಾಗಿ ಪತರುಗುಟ್ಟಿಸುವ ಚಳಿ ಲೆಕ್ಕಿಸದೇ ಓಸ್ಲಾದೆಡೆಗೆ ದೌಡಾಯಿಸಿದೆ.


400-500 ವರ್ಷಗಳ ಹಿಂದೇ ಇಲ್ಲಿಗೆ ಬಂದು ನೆಲಸಿದವರು! ಕುರಿ, ಹಸು ಸಾಕಣೆ, ಕೃಷಿ ಇವರ ಪ್ರಮುಖ ಉದ್ಯೋಗ. ಕುರಿ ಕಾಯುವವರು ಕುರಿಗಳನ್ನು ಮೇಯಿಸಲು ಹೊರಟಿದ್ದರಷ್ಟೇ. ಅವರಲ್ಲಿ ಹೆಣ್ಮಕ್ಕಳೂ ಇದ್ದರು. ಕ್ಯಾಮರ ಕ್ಲಿಕ್ಕಿಸುತ್ತಲೇ ನಾಚುತ್ತಿದ್ದರು. ಕೆಲವರಂತೂ ರಾತ್ರಿ ಬಿದ್ದ ಚಳಿಗೆ ಏಳುತ್ತಿದ್ದರಷ್ಟೇ. ಚಳಿ ಕಾಯಿಸುತ್ತಾ ಕುಳಿತ ಮಕ್ಕಳು , ಹೆಂಗಸರು, ಗಂಡಸರು ನಮ್ಮನ್ನೇ ನೋಡುತ್ತಿದ್ದರು. ಏನು ವಿಚಿತ್ರ ಜನ ಇವರು ಎಂದುಕೊಂಡರೋ ಏನೋ? ಇರಲಿ.


ಹರಿಯಾಣದ ಹುಡುಗಿಯೊಬ್ಬಳು ಈ ಹಳ್ಳಿಯವನನ್ನೇ ಮದುವೆಯಾಗಿ ಇಲ್ಲೇ ಇದ್ದಾಳೆಂದು ಗೈಡ್ ಹೇಳಿದ. ಬದುಕೆಷ್ಟು ವಿಚಿತ್ರವೆನಿಸಿತು. ಇಲ್ಲಿ ಆಚರಿಸುವ ಐದು ಹಬ್ಬಗಳ ಹೆಸರು ಹೇಳಿದ ಈಗ ಒಂದೂ ನೆನಪಿಲ್ಲ. ಇಲ್ಲ್ಲಿನ ಜನ ಕಷ್ಟ ಸಹಿಷ್ಣುಗಳು. ಹನ್ನೊಂದರ ಸುಮಾರಿಗೇ ದೊಡ್ಡ ದೊಡ್ಡ ಹೊರೆ ಹುಲ್ಲು ಹೊತ್ತು ಮನೆ ಕಡೆ ಬರುತ್ತಿದ್ದರು. ಅಂಜಲಿ ಎಂಬ ಪುಟ್ಟ ಹಳ್ಳಿ ಹುಡುಗಿ ಜೊತೆಯಾದಳು. ದೊಡ್ಡದೊಂದು ಕೋಲು, ಕತ್ತಿ ಹಿಡಿದು ಕಲ್ ಕತೀಯಾಧಾರ್ ಕಡೆ ಹೊರಟಿದ್ದಳು.

ಮನೆಗಳ ವಿನ್ಯಾಸ

ಇಲ್ಲಿನ ಮನೆಗಳು ನಾಲ್ಕು ಹಂತದವು. ಮೊದಲನೇ ಹಂತ ದನಗಳಿಗೆ. ಎರಡನೆಯದು ಕುರಿಗಳಿಗೆ. ಮೂರನೆಯದು ಹುಲ್ಲು ಮತ್ತಿತರ ಸಾಮಾನು ತುಂಬಿಸಲು. ಕೊನೆಯದ್ದು ವಾಸಕ್ಕೆ. ಹಿಮ ಸುರಿವ ಡಿಸೆಂಬರ್ನಿಂದ ಮಾರ್ಚನ ಕೊನೆಯವರೆಗೆ ಇಲ್ಲಿನವರಿಗೆ ದಿವ್ಯ ಏಕಾಂತ.

ಸಾರ್ಥ

ದುರ್ಯೋಧನನ  ಮಂದಿರದಲ್ಲಿ!



ಇಲ್ಲಿ ಭಯ ಭಕ್ತಿಯಿಂದ ದುಯರ್ೋದನನಿಗೆ ನಮಿಸುತ್ತಾರೆ! ಅರೆರೆ ದುಯರ್ೋಧನನಿಗಾ ಎಂದು ಹುಬ್ಬೇರಿಸಬೇಡಿ. 'ಹುಚ್ಚು ಹಿಡಿಯಿತೇ?' ಎಂದು ಆಲೋಚಿಸದಿರಿ. ಇಂತಹ ಸಂಧಿಗ್ಧ ನಮಗೂ ಎದುರಾಗಿತ್ತು. ನಿಜ ಇಂತಹದೊಂದು ದೇವಾಲಯವಿದೆ. ಉತ್ತರಾಖಂಡದಲ್ಲಿ. ಅಪರೂಪಕ್ಕೆ ಅಪರೂಪ. ಇಂತಹ ವಿಶೇಷಗಳು ಹಿಮಾಲಯದ ಉದ್ದಗಲಕ್ಕೂ ಸಂಚರಿಸಿದ ಬೆಂಗಾಲಿ ಗೆಳೆಯ ಸುಭಾಸ್ ಒಮ್ಮೆ ವಿವರಿಸಿದ್ದ. 1988ರ ಸುಮಾರಿಗೆ ಆತ ಇಲ್ಲಿಗೆ ಬಂದಿದ್ದ! ಆಗಲೂ ಅದು ದುಯರ್ೋಧನನ ದೇವಾಲಯ! ಈ ದೇವಾಲಯ ನೋಡಲೇ ನಾನು ಬಂದಿದ್ದು. ಅಪಕೀತರ್ಿಗಂಜಿಯೋ ಏನೋ ಅದೀಗ ಶಿವನ ದೇವಾಲಯವೆಂದು ಹೇಳುತ್ತಾರೆ. ಅಸಲಿಗೆ ಇದು ದುಯರ್ೋಧನನ ದೇವಾಲಯವೇ?! ಪೂರ್ಣ ದೇವಾಲಯವನ್ನು ಮರದಿಂದ ನಿಮರ್ಿಸಲಾಗಿದೆ. ಹೊರ ಮೈಯನ್ನು ಸುಂದರ ಕೆತ್ತನೆಗಳಿಂದ ಸಿಂಗರಿಸಲಾಗಿದೆ.

ಹಿಮಾಲಯದ ದಿವ್ಯ ಏಕಾಂತದಲ್ಲಿ ಕರಗಿ:-




ದೇವಾಲಯ ದಾಟಿಕೊಂಡರೆ ಏರು ತಗ್ಗುಗಳ ಕಠಿಣ ಹಾದಿ. ಒಂದೆರಡು ಕಡೆ ಗುಡ್ಡ ಜರಿದಿತ್ತು. ಒಂದು ಹೆಜ್ಜೆ ತಪ್ಪಿದರೆ ನೇರ ಯಮಲೋಕದ ಹೆದ್ದಾರಿಗೆ.



ಇಂತಹ ದಾರಿಗಳ ದಾಟಿ ಕಲ್ ಕತಿಯಾಧಾರಾ ಎಂಬ ಕ್ಯಾಂಪ್ ಸೈಟ್ಗೆ ಬಂದಿಳಿದೆವು. ಎತ್ತರದ ಜಾಗದಲ್ಲಿ ನಮ್ಮ ಎರಡನೆಯ ಕ್ಯಾಂಪ್. ಬಿಸಿ ಬಿಸಿ ಮ್ಯಾಕರೋನಿ ನಮ್ಮ ಹೊಟ್ಟೆ ತಣಿಸಿತು.
ಪರ್ವತಗಳು ಫೋಟೊ ಪ್ರೇಮ್ ಹಾಕಿಸಿಕೊಂಡಂತೆ ಸಾಲಾಗಿ ನಮ್ಮೆದುರು ಕೈಕಟ್ಟಿ ನಿಂತಿದ್ದವು! ಎದುರಿನ ದೃಶ್ಯ ಬಣ್ಣಿಸಲಸದಳ. ಗುಟುರು ಚಳಿ ನಮ್ಮ ನಮ್ಮ ಗುಡಾರದೊಳ ಹೊಕ್ಕಿತು. ಚಳಿ ಓಡಿಸಲು ಸಣ್ಣ ಬೆಂಕಿ ಉರಿಸಿದೆವು. ಬೆಂಕಿಯ ಸುತ್ತಲು ಕೂತು ಕೆಲವರು ಅವರು ಬರೆದ ಕವನ ಓದಿ ಕಾವ್ಯದ ಮಳೆಯಲ್ಲಿ ಮಿಂದೆದ್ದೆರು. ಕಾವ್ಯ ಕಮ್ಮಟಕ್ಕೆ ಆಕಾಶದ ರಾಶಿ ರಾಶಿ ನಕ್ಷತ್ರಗಳೇ ಕೇಳುಗರು. ಕಣ್ಣೂರಲು ಒಂದೈದು ಸೆಂಟ್ಸ್ ಜಾಗ ಉಳಿಸದಂತೆ ನಕ್ಷತ್ರಗಳೇ ತುಂಬಿದ್ದವು. ಅಬ್ಬಾ ನಕ್ಷತ್ರ ಸಂತೆ! ಭಾವ ಪರವಶನಾದೆ. ಮಾಲಿನ್ಯರಹಿತ ಆಗಸ ನೋಡುವ ಆನಂದವ ಬಣ್ಣಿಸಲು ಸಾಧ್ಯವಿಲ್ಲ.
ಸಂಜೆ ಎಂಟಕ್ಕೆಲ್ಲಾ ಊಟ ಮುಗಿಸಿ ನಿದ್ರಾ ಚೀಲದೊಳಗೆ ಹೂತು ಹೋದೆವು. ಹಿಮಾಲಯದ ದಿವ್ಯ ಏಕಾಂತದ ತುಣುಕೊಂದು ನಿಮ್ಮ ಬಳಿಯೇ ಇರುವಂತಹ ಧನ್ಯತಾ ಭಾವ ನಮ್ಮನ್ನಾವರಿಸಿತು. ನಿದ್ದೆ ನಮ್ಮನ್ನು ಅವುಚಿಕೊಂಡದ್ದು ಗೊತ್ತಾಗಲೇ ಇಲ್ಲ.

ಹೂ ಹಾಸಿನ ಅಂಗಳದಲಿ ನಿಂತು...





ಹರ್ ಕಿ ದುನ್ ಶಿಖರ, ಆಟಾ ಪರ್ವತಗಳು ತಮ್ಮಿರುವನ್ನು ಮೊದಲ ಹೆಜ್ಜೆಗೇ ಸಾರಿದ್ದವು. ಹಿಮಾಲಯದ ಸುಂದರಿಯೊಬ್ಬಳು ತನ್ನ ಮಾಟ ತೋರುತ್ತಾ ಜಲಧಾರೆಯಾಗಿ ಹರಿಯುತ್ತಿದ್ದಳು. ಅವಳ ತೆಕ್ಕೆ ಬಳಸಿ, ಮರದ ಸಂಕ ದಾಟಿ ಏರುದಾರಿ ಏರಿದಾಗ ತೆರೆದುಕೊಂಡ ವಿಶಾಲ ಬಯಲ ತುಂಬ ಚಿಟ್ಟೆ ಹೂಗಳ ವನ! ವಿಶಿಷ್ಟ ಪುಷ್ಪಗಳ ಗಂಧಕ್ಕೆ ಮೂಗರಳಿ. ಮೈ-ಮನಗಳಳಿಗೆ ಪುಳಕ. ಎಡಕ್ಕೂ ಬಲಕ್ಕೂ ಹೂ ಹಾಸಿನ ದಾರಿ. ಮರಗಳೆಲ್ಲಾ ಗ್ರೀಷ್ಮ ಬರುವ ಸೂಚನೆಗೆ ಎಲೆ ಉದುರಿಸಿಕೊಂಡು ನಿಂತಿದ್ದವು.

ಹಳ್ಳಿಯ ಹುಡುಗಿ  ಅಂಜಲಿಯೊಂದಿಗೆ....

ಭಾರತದ ಅತಿ ಸುಂದರ ಚಾರಣಗಳಲ್ಲಿ ಹರ್ ಕಿ ದುನ್ ಕೂಡ ಒಂದು. ಇಲ್ಲಿಂದ ಮುಂದೆ ಸಿಗುವ ಅನೇಕ ಝರಿಗಳನ್ನು ದಾಟಿ ಒಂದು ಗಂಟೆಯಷ್ಟೊತ್ತಿಗೆ ಕೊನೆಯ ಕ್ಯಾಂಪ್ಗೆ ಬಂದು ತಲುಪಿದ್ದೆವು.
ಸ್ವರ್ಗಾ ರೊಹಿಣಿ ಶಿಖರ...

 ತಲುಪುತ್ತಲೇ ಬಿಸಿ ಬಿಸಿ ಊಟ ನಮ್ಮನ್ನು ಸ್ವಾಗತಿಸಿತು. ಎದುರಿಗಿದ್ದ ಹರ್ ಕಿ ದುನ್ ಮತ್ತು ಸ್ವಗರ್ಾರೋಹಿಣಿ ಪರ್ವತಗಳ ತಪ್ಪಲಿನಲ್ಲಿ ಮಗುವಿನಂತೆ ಬಟ್ಟಲು ಹರವಿಕೊಂಡು ಊಟ ಮಾಡಿದೆವು. ವಿಶಿಷ್ಟ ರುಚಿಯ ದಾಲ್ ಹೊಟ್ಟೆ ತಣಿಸಿತು. ಕ್ಯಾಂಪ್ ಪಕ್ಕದ
ಬೆಟ್ಟಗಳನ್ನೇರಿ ಸುತ್ತಲಿನ ನೋಟಕ್ಕೆ ಸಾಕ್ಷಿಯಾದೆವು. ಅಮ್ಮ ಹಚ್ಚಿಟ್ಟ ಹಣತೆಯಂತಾಗಿದ್ದ ಸೂರ್ಯ ಕಿರಣಕ್ಕೆ ಹರ್ ಕಿ ದುನ್ ಶಿಖರ ಬೆಳಗುತ್ತಿತ್ತು. ಯಾರೂ ಏರದ ಸ್ವಗರ್ಾರೋಹಿಣಿ ಶಿಖರ ಚಳಿಗೆ ಮೋಡ ಹೊದ್ದು ಮಲಗಲು ತಯಾರಾಗಿತ್ತು. ಸಂಜೆಯ ಬೆರಗನ್ನು ಕ್ಯಾಮರದಲ್ಲಿ ಹಿಡಿದಿಡಲು ಪ್ರಯತ್ನಿಸಿದೆ.

ಇಳಿ ಸಂಜೆ ಯಲಿ ಹರ ಕಿ ದುನ್ ಶಿಖರ ..


ಸಂಜೆಯ ಕೊನೆಯ ಕಿರಣಗಳ ಬೆಳಕಲ್ಲಿ ನಮ್ಮ ಶಿಬಿರ ...


ನಸುಕಿನಲ್ಲಿ ನಮ್ಮ ಶಿಬಿರ....

ಮಾರನೆಯ ದಿನ ನಸುಕಿಗೇ ಎದ್ದು ಸುಮಾರು ಏಳು ಕಿಲೋ ಮೀಟರ್ ದೂರದ ಗ್ಲೇಶಿಯರ್ ನೋಡಲು ಹೋಗಿ ಬಂದೆವು. ನಡುವೆ ಕಡೆದಾದ ಹಾದಿಯಲ್ಲಿ ನಾವು ಮುಂದೆ ಹೋಗಲೂ ಆಗದೇ ಹಿಂದೆ ಬರಲೂ ಆಗದೇ ಜಾಮ್ ಆದೆವು. ನಮ್ಮ ಟೀಂ ಲೀಡ್ ಬಂದು ನಮ್ಮನ್ನು ಮುಂದೆ ಕರೆದೊಯ್ದ. ಕೆಲವರು ಗ್ಲೇಶಿಯರ್ ವರೆಗೆ ಹೋಗಿ ಬಂದರು. ನಾವು ಮುಕ್ಕಾಲು ದಾರಿ ಸವೆಸಿ ಸ್ವಗರ್ಾರೋಹಿಣಿಯ ಸರಿ ಸುಮಾರು ಸಮೀಪದವರೆಗೆ ಹೋಗಿ ಹಿಂದಿರುಗಿದೆವು. ನೆನಪಿನೋಕಳಿಯಲ್ಲಿ ಮೀಯುವಂತೆ ಮಾಡಿದ ಚಾರಣ ಪುನಃ ಸಾಂಕ್ರಿಯಲ್ಲಿ ಕೊನೆಗೊಂಡಿತು.
ಒಂದಿಷ್ಟು ಪೂರ್ವತಯಾರಿ ಮತ್ತು ಮವತ್ತು ಸಾವಿರವಿದ್ದರೆ ಈ ಚಾರಣ ಮಾಡಿ ಮುಗಿಸಬಹುದು.


ಶ್ರೀಧರ್. ಎಸ್. ಸಿದ್ದಾಪುರ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ-576229

4 comments:

  1. ನಾನು ಹಿಮಾಲಯದ ಕಣಿವೆಯಲ್ಲಿ ತಿರುಗಿ ಬಂದೆ ತುಂಬಾ ಚೆನ್ನಾಗಿತ್ತು. ನನಗು ಅಲ್ಲಿ ಅಂಜಲಿ ಜೊತೆಯಾದಳು ಶಾಲೆಗೂ ಹೋದೆ. ದಾರಿಯಲ್ಲಿ ದರ್ಯೋದನ ಸಿಕ್ಕಿದ. ಪಾಂಡವರು ಮೋಸದಿಂದ ನಮ್ಮವರನ್ನು ಕೊಂದರು ಅಂದ.

    ReplyDelete

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...