Friday, November 22, 2019

ನೀವು ಓದಲೇ ಬೇಕಾದ ಅಪೂರ್ವ ಪುಸ್ತಕ...



 ನಾಗೇಶ್ ಹೆಗಡೆಯವರ ನಿಲುಕಿಗೆ ದಕ್ಕದ ಬರೆಹ ಇರಲಿಕ್ಕಿಲ್ಲ. ಓದುಗರಿಗೆ ವಿಜ್ಞಾನದ 
ಅವರ ಲೇಖನಗಳು ನೀರಿನಷ್ಟು ಸಲೀಸು, ಸರಾಗ. ಅವರ ಹೊಸ ಕೃತಿಯೊಂದು ಹೊರಬಂದಿದೆ, 'ಅಪೂರ್ವ ಪಶ್ಚಿಮ ಘಟ್ಟ'. ಮತ್ತೊಮ್ಮೆ ನಾಗೇಶ ಹೆಗಡೆ ತಮ್ಮ ಬರಹದ ಚುಬುಕನ್ನು ಒರೆಗೆ ಹಚ್ಚಿ ಬರೆದಿದ್ದಾರೆ. ಎಲ್ಲೂ ಓದುಗನಿಗೆ ಭಾರವಾಗದೆ, ಎಳೆಯದೇ ಪಶ್ಚಿಮ ಘಟ್ಟಗಳ ದರ್ಶನ ಮಾಡಿಸಿದ್ದಾರೆ. ಅದೇ ಚವರ್ಿತ ಚರ್ವಣ ಹೇಳದೆ ಹೊಸದೊಂದು ಲೋಕ ಕಟ್ಟಿ ಕೊಟ್ಟಿದ್ದಾರೆ. ಓದಿ ಕೆಳಗಿಟ್ಟರೆ ಹೃದಯ ಭಾರ ಭಾರ. ಸಾಕ್ಷಾತ್ ನಾವೇ ಅಲ್ಲಿ ಅಲೆದು ಬಂದಂತೆ ಭಾಸವಾಗುತ್ತದೆ. ಮನಸ್ಸು ಅಲ್ಲಿಗೆ ಓಡುತ್ತದೆ.
ಇಲ್ಲಿನ ಜೀವ ಸಂಕುಲಗಳ ಹೊಸ ಲೋಕ, ವಿಶಿಷ್ಟ ಅನನ್ಯ ಪ್ರಭೇದದ ಪ್ರಾಣಿ, ಪಕ್ಷಿ, ಕೀಟ ಪ್ರಭೇದಗಳ ಪರಿಚಯ, ಅಳಿವಿನಂಚಿನ ಸಸ್ಯ ಪ್ರಭೇದಗಳ ಸ್ತೂಲ ಪರಿಚಯ ಮಾಡಿಸಿದ್ದಾರೆ. ಮನುಜನಿಂದ ಹಾಳಾದ ಜೀವ ಸಂಕುಲಗಳು, ಅವನ ಅಭಿವೃದ್ಧಿ ದಾಹಕ್ಕೆ ಮರೆಗೆ ಸಂದಲಿರುವ ಕಾಡು, ಜೀವಿಗಳ ಸೂಕ್ಷ್ಮ ಪರಿಚಯ ಮಾಡಿಸಿದ್ದಾರೆ. ಇಲ್ಲಿ ನಡೆದ ಹೋರಾಟಗಳ ಚಿತ್ರಣ ಬದಲಾದ ಹೋರಾಟದ ಹಾದಿಯ ಸೊಲ್ಲನ್ನು ಕಟ್ಟಿಕೊಟ್ಟಿದ್ದಾರೆ.
ಜೊತೆಗೆ ನಮ್ಮ ಇಲಾಖೆಗಳ ಪೊಳ್ಳುತನವನ್ನೂ, ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರದ ಮೇಲಾಗುವ ಅನಾಚಾರಗಳನ್ನು ಕೆನಾರಾ ಟ್ರೇಲ್ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ. ಹೊಸ ಪ್ರವಾಸೋಧ್ಯಮಕ್ಕೊಂದು ಹೊಳಹನ್ನು ಕೊಟ್ಟಿದ್ದಾರೆ.
ಪಶ್ಚಿಮ ಘಟ್ಟಗಳ ಒಳ ಹೊರಗನ್ನು ಈ ಕೃತಿ ತರೆದಿಟ್ಟಿದೆ. ನಾವೆಷ್ಟು ಪ್ರಕೃತಿಗೆ ಋಣಿಯಾಗಿರಬೇಕು ಎಂಬ ಸಂದೇಶ ನೀಡುತ್ತಾ ಓದುತ್ತಾ ಹೋದಂತೆ ನಾವು ಕಳೆದುಕೊಂಡ ಆ ಅಪೂರ್ವ ಪಶ್ಚಿಮ ಘಟ್ಟ ನಮ್ಮ ಕಣ್ಣ ಮುಂದೆ ಸುಳಿದು ಹತಾಶೆಗೆ ನೂಕಿಬಿಡುತ್ತದೆ. ನಮಗಲ್ಲದಿದ್ದರೂ ಮುಂದಿನ ಪೀಳಿಗೆಗಾಗಿ ನಾವು ಇದನ್ನು ಉಳಿಸಿ, ಬೆಳೆಸಬೇಕಾಗಿದೆ ಎಂಬುದು ಹಳಸಲು ಸರಕು. ಆದರೂ ಹೇಳಲೇ ಬೇಕಿದೆ ಉಳಿಸಿ, ಉಳಿಸಿ ಎಂದು.

ಕೊಂಡು ತಂದು ಓದಿಸಿದ ಮಿತ್ರ ನಾಗರಾಜ್ನಿಗೆ ಧನ್ಯವಾದಗಳು. ಇನ್ನೇಕೆ ತಡ ಕೊಂಡು ಓದಿ.


No comments:

Post a Comment

ವಾರೆ ನೋಟ

ಜಾರುಬಂಡಿ ಜಲಪಾತದ ದಾರಿಯಲ್ಲಿ…..

 ಮೌನ ಮಳೆ ಮತ್ತು ಪ್ರೀತಿಗೆ ಮಾತ್ರ ಚಿಗುರಿಸುವ ತಾಕತ್ತಿರುವುದು. ಅಂತಹ ಹೊಸತೊಂದು ನಡಿಗೆಯ ಮೌನದಲಿ ಚಿಗುರಿದ ಹೊಸ ಅಧ್ಯಾಯ. ಯಾವುದೋ ಕಲಾಕಾರ ಕೆತ್ತಿಟ್ಟಂತಹ ಊರು. ಕಲಾ ನ...