Saturday, December 28, 2019

ಏಕಶಿಲಾ ಶಿಖರದ ಶಿಖೆಯನ್ನೇರಿ....

ಜಟಕಾ ಬಂಡಿಯ ಹಿಂದೆ  ಓಡುವ ಹುಡುಗಿ


ಇಲ್ಲಿನ ದೃಶ್ಯಗಳು ನಿಮ್ಮನ್ನು ದಂಗು ಬಡಿಸುವುದು. ಗುಪ್ಪೆ ಹಾಕಿದ ದೊಡ್ಡ ಕಲ್ಲು ರಾಶಿ, ನಿದ್ದೆ ಹೋದ ಕುಂಭ ಕರ್ಣನ ಹೊಟ್ಟೆಯನು ನೆನಪಿಸಿ ನಿಮ್ಮಲ್ಲಿ ಬೀಕರವಾದ ಭಯವೊಂದನ್ನು ಹುಟ್ಟಿಸುವುದು. ಭಯವೇ ಕಾವಲಿಗೆ ನಿಂತಂತೆ ಸುತ್ತಲೂ ಕಾಷ್ಠ ಮೌನ.

ಬೆಂಗಳೂರಿನ ಮಾಗಡಿ ಸನಿಹದ ಸಾವನ ದುರ್ಗ ಏಕಶಿಲಾ ಬೆಟ್ಟ ಏಷ್ಯಾದಲ್ಲೇ ಬಹೃತ್ ಬೆಟ್ಟವೆನಿಸಿಕೊಂಡಿದೆ ಎಂಬುದೇ ಒಂದು ಸೋಜಿಗ! ಅದೂ ನಮ್ಮ ಬೆಂಗಳೂರಿನ ಸನಿಹದಲ್ಲಿರುವುದು ನಮ್ಮೆಲ್ಲರ ಹೆಮ್ಮೆ. ಹಾಗಾಗಿಯಾದರೂ ನಾವೊಮ್ಮೆ ಹೋಗಿ ಅದರ ದರ್ಶನ ಪಡೆದು ಧನ್ಯತೆಯ ಪಡೆಯಬೇಕಲ್ಲವೇ? ಹೊಯ್ಸಳ ಕಾಲದಲ್ಲಿ ಸಾವಂದಿ ಎಂದು ಕರೆಸಿಕೊಂಡಿದ್ದ ಊರು. ದಂಗು ಬಡಿಸುವ ಏಕಶಿಲೆಯ ಏರು, ಇಳಿಜಾರುಗಳ ಮೇಲ್ಮೈ ಮೇಲೆ ಎಚ್ಚರ ತಪ್ಪಿದರೆ ಸ್ವರ್ಗಕ್ಕೆ ತೋರಣ ಕಟ್ಟುವ ತಾಣ. ಇದರ ಚಾರಣ ಅನುಭವ ಜೀವಮಾನದ ಒಂದು ರೋಚಕ ಅನುಭವ! ನೆನೆಸಿಕೊಂಡರೆ ಈಗಲೂ ಕಣ್ಣ ರೆಪ್ಪೆಗೆ ನಿದ್ದೆ ಹತ್ತದು! ನೋಡಿದರೆ ನಡುಕ ಹುಟ್ಟಿಸುವ ಇದರ ಇಳಿಜಾರು. ಜೊತೆಗೆ ಇದು ಒಡ್ಡುವ ಸವಾಲು ಎದುರಿಸಿ ಮೇಲೇರಿದರೆ ಆವರಿಸುವ ಧನ್ಯತೆ ಅಪಾರ. ಏಕಶಿಲಾ ಬೆಟ್ಟ ಚಾರಣ ಮಾಡಲು ನಾನು ರೆಡಿ, ನೀವು?



ನಾವಿಲ್ಲಿಗೆ ದಾಂಗುಡಿ ಇಟ್ಟದ್ದು ನಡು ಮಧ್ಯಾಹ್ನದ ಹೊತ್ತು. ಸೂರ್ಯ ನೆತ್ತಿ ಸುಡುತಲಿದ್ದ. ಕಾಯ್ದಿಟ್ಟ ಅರಣ್ಯವಾದ್ದರಿಂದ ತೀರ ಬಿಸಿಲೆನಿಸಲಿಲ್ಲ. ಒಂದು ಕಾಲದಲ್ಲಿ ರಾಜ ಮಹಾರಾಜರು ನಡೆದಾಡಿದ ಭೂಮಿ. ಈಗ ಕಾಡು ಮತ್ತು ನಿರ್ಲಕ್ಷಿತ ಪ್ರದೇಶ. ಸುತ್ತಲಿನ ಅರಣ್ಯಗಳಲ್ಲಿ ಹಿಂದಿನ ಕಾಲದ ಮನೆಗಳ ಹಲವು ಕುರುಹುಗಳು ಕಂಡವು. ಪಾಳು ಬಿದ್ದ ಅಡಿಪಾಯಗಳು ಅಲ್ಲಲ್ಲಿ ಕಾಣಸಿಕ್ಕವು. ನಾಲ್ಕಾರು ಮನೆ ಬಿಟ್ಟರೆ ಹೆಚ್ಚಿನ ಜನವಸತಿ ಇದ್ದಂತಿಲ್ಲ. ಆದರೂ ಬಂದ ಪ್ರವಾಸಿಗರು ಮಾಡಿದ ಗಲೀಜು ಮುಖಕ್ಕೆ ರಾಚುವಂತ್ತಿತ್ತು. ಕುಡಿದ ಎಳನೀರಿನ ರಾಶಿ, ಪ್ಲಾಸ್ಟಿಕ್ ಬಾಟಲಿಗಳ ರಾಶಿ ಮುಖಕ್ಕೆ ಹೊಡೆಯುವಂತ್ತಿತ್ತು.


ಮೊದಲ್ಗೊಂಡ ಮಂದ್ರ
ಏಕಶಿಲಾ ಬೆಟ್ಟದ ಸೆರೆಗಿನಲ್ಲಿ ಎರಡು ದೇವಾಲಯಗಳು ತಣ್ಣಗೆ ಕುಳಿತಿದ್ದವು. ಉದ್ಭವ ಉಗ್ರನರಸಿಂಹನಿಗೆ ಕೈಮುಗಿದು, ತೋರಣ ಕಂಬಗಳ ದಾಟಿ ಮತ್ತೊಬ್ಬ ದೇವನಾದ ವೀರಭದ್ರನಿಗೆ ನಮ್ಮ ಮುಡಿಪು ಸಲ್ಲಿಸಿ, ತಂದ ಪೊಂಗಲ್ ಡಬ್ಬಿ ಖಾಲಿಮಾಡಿ ಬೆಟ್ಟವೇರಲು ಶುರುವಿಟ್ಟೆವು. ಅಸಾಧ್ಯವೆನಿಸುವ ಅದರ ಎಡ ಮಗ್ಗುಲಿನ ಇಳಿಜಾರಿನಲ್ಲಿ ಏಕಶಿಲೆಗೆ ಎದೆಯೊಡ್ಡಿ ಚಪ್ಪಲಿ ಕೈಲಿ ಹಿಡಿದು ಕೆಲವರು ಬೆಟ್ಟವೇರುವ ವಿಚಿತ್ರ ಸರ್ಕಸ್ನಲ್ಲಿ ತೊಡಗಿದ್ದರು. ನಡು ನಡುವೆ ಕುಳಿತ ಕೆಲವರು ಮೇಲೂ ಏರಲಾಗದೇ ಕೆಳಗೂ ಇಳಿಯಲಾಗದೆ ತ್ರಿಶಂಕು ಸುಖವನ್ನು ಅನುಭವಿಸುತ್ತಾ ಕುಳಿತ್ತಿದ್ದರು! ಇನ್ನೂ ಕೆಲವರು ಕಾಲು ಸಾಲದೆನಿಸಿ ಕೈಬಳಸಿ ತಮ್ಮ ಪೂವರ್ಾಶ್ರಮಕ್ಕೆ ಮತ್ತೆ ಹಿಂದಿರುಗಿದ್ದರು. ಇವರ ಪಚೀತಿ, ಪೇಚಾಟ ನಮಗೆ ನಗು ತರಿಸುತ್ತಿತ್ತು. ನಮ್ಮ ಗತಿಯೂ ಹೀಗೇ ಆಗುವುದು ಎಂದೆಣಿಸಿ ಒಮ್ಮೆ ಎದೆ ನಡುಗಿತು. ನಾನು ಮತ್ತು ಗೆಳೆಯ ಸಂದೀಪ್ ಬಲ ಮಗ್ಗುಲಿನ ಬೆಟ್ಟದ ಓಣಿ ಬಳಸಿ, ಮಳೆ ಬರದಿರಲಿ ಎಂದು ಮನದಲ್ಲೇ ಪ್ರಾಥರ್ಿಸಿ ಏಕಶಿಲೆಯನ್ನು ಏರಲು ಮೊದಲ್ಗೊಂಡೆವು.



ದಾಟು
ಸಾವನ್ ದುರ್ಗ ಸಮುದ್ರಮಟ್ಟದಿಂದ 1,227 ಮೀಟರ್ ಎತ್ತರದಲ್ಲಿದೆ. ಕೆಲವೊಂದು ಕಡೆ 60 ಡಿಗ್ರಿಯ ಏರು, ಹೆಲವೆಡೆ 80 ಡಿಗ್ರಿಯ ಏರು ನಮ್ಮ ಎದೆ ಬಡಿತ ಹೆಚ್ಚಿಸಿದವು. ಕಾಲು ನಡುಗುತಲಿತ್ತು. ಬೆಣ್ಣೆ ಮುದ್ದೆಯಂತಹ ಮೋಡಗಳು ಆಗೀಗ ಅಡ್ಡ ಬಂದು ಬೆಟ್ಟವೇರುವ ನಮ್ಮ ಕಷ್ಟ ಕಡಿಮೆ ಮಾಡಿದವು. ಮೊದಲ ಕೆಲವು ಹೆಜ್ಜೆಗಳಷ್ಟೇ ಹರ್ಷದಾಯಕ. ಹಿಮ್ಮಖವಾಗಿ ನೋಡಿದರೆ ತಲೆ ಗಿರಕಿ ಹೊಡೆಯುತ್ತೆಂದು ಮುಮ್ಮುಖವಾಗಿ ನೋಡುತ್ತಾ ಏರಿದೆವು. ಅರ್ಧ ದಾರಿ ಏರಿದ್ದೆವಷ್ಟೇ. ಇಲ್ಲಿಂದ ಮೇಲೇರುವುದು ಬಿಡಿ ಕೆಳಗೆ ಬರುವ ಬರವಸೆಯನ್ನೂ ನಾನು ಕಳೆದುಕೊಂಡಿದ್ದೆ. ಅಂತಹ ಇಳಿಜಾರು ಪ್ರಪಾತವೊಂದು ನಮ್ಮನ್ನು 'ಇಷ್ಟಯೇ ನಿನ್ನ ತಾಕತ್ತು!' ಎಂದಣಕಿಸಿದಂತಾಯ್ತ್ತು. ಏರು ನೋಡೋಣವೆಂಬ ಸವಾಲು ಹಾಕಿ ಅಚಲವಾಗಿ ನಿಂತಿತ್ತು ಬೆಟ್ಟ. ಇಲ್ಲಿಗೆ ಯಾಕಾದರೂ ಬಂದೆನೋ ಎಂದು ಮನಸ್ಸಿನಲ್ಲೇ ನನಗೆ ನಾನೇ ಬೈದುಕೊಂಡೆ! ಅದೃಷ್ಟಕ್ಕೇ ಇಲ್ಲಿ ಯಾರೋ ಪುಣ್ಯಾತ್ಮ ಬೆಟ್ಟ ಕೊರೆದು ಸಣ್ಣ ಕುಳಿ ತೋಡಿ ಏರುವ ಕಷ್ಟ ಸ್ವಲ್ಪ ಕಡಿಮೆ ಮಾಡಿದ್ದ. ಮೇಲಿನಿಂದ ಎಳೆದು ಕೊಳ್ಳುವವರಿಲ್ಲದೇ ಇದ್ದರೆ ನನಗಂತೂ ಏರುವುದು ಅಸಾಧ್ಯವಿತ್ತು. ಕುಳಿ ಕೊರೆದ ಪುಣ್ಯಾತ್ಮನಿಗೊಂದು ಧನ್ಯವಾದವನ್ನು ಮನಸ್ಸಿನಲ್ಲೇ ಅಪರ್ಿಸಿ, ಅಂತೂ-ಇಂತು ಆ ಏರನ್ನು ದಾಟಿಕೊಂಡೆವು. ಬೆಟ್ಟದ ಮುಕ್ಕಾಲಂಶ ದಾಟಿದ ಮೇಲೆ ಇಳಿಜಾರಿನ ಕೋಟೆಯಂತಹ ರಚನೆ ಬಹಳ ಆಕರ್ಷಕವೂ ಅಪಾಯಕಾರಿಯೂ ಆಗಿತ್ತು. ಅದರ ಒಂದು ಕಲ್ಲು ಎತ್ತಿಡಲು ಇಂದಿನ ಕನಿಷ್ಠ ನಾಲ್ಕು ಜನರು ಬೇಕು! ಅಲ್ಲಲ್ಲಿ ಬುರುಜುಗಳನ್ನು ನಿಮರ್ಿಸಿದ್ದರು. ಸಮೀಪವೇ ಒಂದು ಕಲ್ಲಿನ ಮಂಟಪವನ್ನು ರಚಿಸಿದ್ದರು. ಹೊಯ್ಸಳ ರಾಜರಾದ ಸಾಮಂತರಾದ ಕೆಂಪೇಗೌಡರ ಕಾಲದಲ್ಲಿ ಎರಡನೇ ಅತಿ ಮುಖ್ಯ ಪಟ್ಟಣ ಇದಾಗಿತ್ತು! ಇಂದು ಕಾಯ್ದಿಟ್ಟ ಅರಣ್ಯ. ಟಿಪ್ಪುವಿನಿಂದ ಈ ಕೋಟೆಯನ್ನು ವಶಪಡಿಸಿಕೊಂಡ ಲಾಡರ್್ ಕಾನರ್್ವಾಲಿಸ್ ಇದನ್ನು 'ಸಾವಿನ ಕೋಟೆ' ಎಂದು ಬಣ್ಣಿಸಿದ್ದು ಅಕ್ಷರಶಃ ಸತ್ಯ ಎಂದು ನಮಗೆ ಮನವರಿಕೆಯಾಯಿತು! ಅಂತಹ ಕಡಿದಾದ ಏರಿನ  ಕೋಟೆಯದು.


ನಾಲ್ಕು ಕಾಲಿನಲಿ ಕೆಲವರ ಸರ್ಕಸ್.
 ಏರಲೂ ಕಷ್ಟಕರ ಜಾಗದಲ್ಲಿನ ಕೋಟೆಯ ಮಹತ್ವ ಇಂದಿನ ನಮಗೆ ಅರ್ಥವಾಗುವುದಾದರೂ ಹೇಗೆ? ಅಷ್ಟೊಂದು ಎತ್ತರದಲ್ಲಿ ಕಟ್ಟಿದ ಈ ಕೋಟೆ ನಮ್ಮನ್ನು ಅಚ್ಚರಿಗೆ ನೂಕಿದವು. ಹಿಂದಿನ ಕಾಲದವರ ಇಂಜಿನಿಯರಿಂಗ್ ಜ್ಞಾನ, ಸಾಹಸೀ ಪ್ರವೃತ್ತಿ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿ ನಮ್ಮನ್ನು ಕುಬ್ಜರನ್ನಾಗಿಸಿತು! ಬುರುಜುಗಳನ್ನೇ ಧ್ಯಾನಿಸುತ್ತಾ ಕುಳಿತೆವು. ಏರಲು ಇನ್ನೂ ಕಾಲಂಶ ಬೆಟ್ಟವಿತ್ತು. ಕೆಲವೆಡೆ ಅಡ್ಡ ಅಡ್ಡವಾಗಿ ನಡೆಯುತ್ತಾ ಜಾರದಂತೆ ಜಾಗೃತೆವಹಿಸಿ, ಅಂತೂ ಮಧ್ಯಾಹ್ನ ಮೂರಕ್ಕೆ ಸರಿಸುಮಾರು ನೆತ್ತಿಯಲ್ಲಿದ್ದೆವು. ಬೆಟ್ಟವೇರಿದ ಸಂತೋಷದಲಿ ಸುಖಿಸಿದೆ. ನೆತ್ತಿಯ ನೋಟ ನಿಮ್ಮನ್ನು ಮತ್ತೊಂದು ಪ್ರಪಂಚಕ್ಕೆ ಕೊಂಡ್ಯೋಯುವುದು. ಸುತ್ತಲಿನ ಕಲ್ಲುಗಳ ವಿಶಿಷ್ಟಾಕೃತಿಗಳ ವೀಕ್ಷಿಸುತ್ತಾ ಸಮಯ ಕಳೆದೆವು.


ತೀವ್ರ ಇಳಿಜಾರಿನಲ್ಲಿ ನಿರ್ಮಿಸಿದ ಮಂಟಪ 



ಬೆಟ್ಟದ ಇಳಿಜಾರು

ಮಂಗನಾಟ!

ಪ್ರಕೃತಿ  ಎಂಬ ಕಲಾಕಾರ

ಕುಂಭ ಕರ್ಣನಂತಹ ಬೆಟ್ಟ.

ಬಂಡೆಯ ಇಳಿಜಾರುಗಳಲ್ಲಿ ಅಲ್ಲಲ್ಲಿ ಗಿಡಗಂಟಿಗಳಿದ್ದವು. ಒಂದು ಕಳ್ಳಿಯಂತೂ ಓಡುವ ಜಟಕಾ ಗಾಡಿಯಂತೆ ಕಾಣಿಸುತ್ತಾ ಆಶ್ಚರ್ಯ ಹುಟ್ಟಿಸಿತು. ಅದರ ಹಿಂದಿನ ಕಳ್ಳಿ ಗಿಡವೊಂದು ಓಡುತ್ತಿರುವ ಚಿಕ್ಕ ಹುಡುಗಿಯಂತೆ ಭಾಸವಾಯಿತು. ದೂರದಲ್ಲಿ ಕಾಣಿಸುತ್ತಿದ್ದ ಚಿತ್ರ, ವಿಚಿತ್ರ ಬಂಡೆಗಳ ಚಿತ್ರ ತೆಗೆಯುತ್ತಾ ನನ್ನ ಲೋಕದಲ್ಲಿ ನಾ ಮುಳುಗಿದೆ. ಬೇಟೆ ಹಕ್ಕಿಗಳು ಅಲ್ಲಲ್ಲಿ ಓಡಾಡಿ ಬೇಟೆಗಾಗಿ ಅರಸುತ್ತಿದ್ದವು. ಮಾಗಡಿ, ರಾಮನಗರ ಚಿರತೆಗಳ ನಾಡು, ಹಾಗಾಗಿ ಇಲ್ಲಿ ಮೊಲ, ಇತರೇ ದಂಶಕಗಳು ಸಾಕಷ್ಟಿದೆ ಎಂದು ಹೇಳಬಹುದು. ದೂರದಲ್ಲಿ ಅಕರ್ಾವತಿ ಮೆಲ್ಲಗೆ ಹರಿಯುತ್ತಿದ್ದಳು. ಅವಳನ್ನೇ ನೋಡುತ್ತಾ ಸ್ವಲ್ಪ ಹೊತ್ತು ಪರವಶನಾದೆವು. ಏರುವ ಕಷ್ಟಕ್ಕಿಂತ ಇಳಿವ ಕಷ್ಟ ಮತ್ತೊಂದು ರೀತಿ. ಬಾಯಿತೆರೆದು ನುಂಗುವಂತಿರುವ ಪ್ರಪಾತವನ್ನೇ ನೋಡುತ್ತಾ, ಬೆಟ್ಟದ ತುಂಬಾ ಕೆನ್ನೀರ ಓಕಳಿ ಚೆಲ್ಲಿದ ಸೂರ್ಯನೊಂದಿಗೆ ಸ್ಪಧರ್ೆಗಿಳಿದು ಜಾರದಂತೆ ಜಾಗರೂಕ ಹೆಜ್ಜೆ ಇಟ್ಟು, ಬೆಟ್ಟ ಇಳಿದೆವು. ಸೂರ್ಯ ಪೂರ್ವದಲ್ಲಿ ಕರಗುವ ಮುನ್ನವೇ ಅಲ್ಲಿಂದ ಹೊರಟೆವು. ಇಷ್ಟು ಬೇಗ ಹೊರಟಿರಾ ಎಂದು ಬೆಟ್ಟ ನಕ್ಕಂತಾಯಿತು! ಇಂತಹ ಸುಂದರ ಸ್ಥಳವನ್ನು ಪ್ಲಾಸ್ಟಿಕ್ ಮುಕ್ತವಾಗಿಡಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯವಲ್ಲವೇ?


ಶ್ರೀಧರ. ಎಸ್. ಸಿದ್ದಾಪುರ.
ವಿಳಾಸ- ಸಿದ್ದಾಪುರ ಅಂಚೆ ಮತ್ತು ಹಳ್ಳಿ,
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-576229.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...