Thursday, July 16, 2020

ಹಗಲ ಸಂನ್ಯಾಸಿ...

ಬೆನ್ನಿಗೊಂದು ಚೀಲದಂತಹ ಚಿಕ್ಕ ಕಟ್ಟಿಗೆಯ ತುಂಡೊಂದನ್ನು ಕಟ್ಟಿಕೊಂಡು ಸುಮ್ಮನೆ ಹಗಲು ಹೊತ್ತಿನಲ್ಲಿ ಧ್ಯಾನಸ್ಥ ಸಂನ್ಯಾಸಿಯಂತೆ ಕುಳಿತು ಬಿಡುವನೀತ. ಕಟ್ಟಿಕೊಂಡ ಕಟ್ಟಿಗೆಯ ತುಂಡಿನಲ್ಲೂ ವಿಚಿತ್ರ ವಿನ್ಯಾಸ. ಸಣ್ಣ ರಂಧ್ರ. ಮಾತಿಲ್ಲ, ಕತೆಯೂ ಇಲ್ಲ. ಹಗಲು ಪೂರ್ಣ ಏಕಾದಶಿ. ಲಡ್ಡು ತಂದಿಟ್ಟರೂ ಮುಟ್ಟಲೊಲ್ಲ. ಅಲೌಕಿಕ ಚಿಂತನೆಯಲ್ಲೇ ಮುಳುಗೇಳುತ್ತಾ ಕುಳಿತು ಬಿಡುವವ.
POLTYS SPIDER.


ಯಾಕಿಂತಹ ಮಹಾ ಮೌನ? ನಮಗರ್ಥವಾಗುವುದೇ ಇಲ್ಲ. ಅವನ ಬೆನ್ನಟ್ಟಿ ಹೋದರೆ ಪುಣ್ಯಾತ್ಮ ಮಾತನಾಡುವುದೇ ಇಲ್ಲ!! ಇವನ ಮೌನಕೂ ಒಂದು ಹೊಸ ಅರ್ಥ. ತನ್ನ ದೇಹಕ್ಕಿಂತ ದೊಡ್ಡದಾದ ಕಟ್ಟಿಗೆ ತುಂಡನ್ನು ಕಟ್ಟಿಕೊಂಡದ್ದಕ್ಕೆ ದುಃಖವೇ? ಅದಕ್ಕಿಂತ ಅಪಾಯಕಾರಿಯಾದ ಹೆಂಡತಿಯರನ್ನು ಈ ಗಂಡಸರು ಕಟ್ಟಿಕೊಂಡರೂ ಎಷ್ಟು ಆಸಕ್ತಿಯಿಂದ ಖುಷಿಯಾಗೇ ಇರುತ್ತಾರೆ ಗೊತ್ತಾ? ಎಂದು ಕೇಳಬೇಕೆಂದುಕೊಂಡೆ. ಉಹುಂ ಮಾತೇ ಆಡಲಿಲ್ಲ! 'ಇಲ್ಲೇ ಇರು ಬಂದೆ.' ಎಂದು ಹೊರಟೆ.


ಇಳಿ ಸಂಜೆಗೆ ಕ್ಯಾಮಾರವನ್ನು ಹೆಗಲಿಗೇರಿಸಿಕೊಂಡು ಮಾತನಾಡಿಸೋಣವೆಂದು ಮತ್ತೆ ಹೊರಟೆ. ಅಯ್ಯೋ ಪುಣ್ಯಾತ್ಮ ಎಲ್ಲೂ ಇಲ್ಲ. ಹುಡುಕಿ ಸುಸ್ತಾಗಿ ಹೊರಡೊ ಹೊತ್ತಿಗೆ ಕಾಣಿಸಿದ. ಪಕ್ಕದ ಬಿದಿರ ಗಿಡದಲಿ ಮನೆ ಕಟ್ಟುತ್ತಿದ್ದಾನೆ (ಬಲೆ). ಎಂಟು ಕಾಲಿನ ಬಂಟ ಎಂಟರ ಹೊತ್ತಿಗೆ ಸುಂದರ ಮನೆ ಸಿದ್ದವಾಗಿತ್ತು. ಹಗಲಿಡಿ ಹಸಿವೆಯಿಂದ ನರಳಿದವನಿಗೆ ರಾತ್ರಿ ಪುಷ್ಕಳ ಭೋಜನ. ಒಂದರ ಮೇಲೊಂದು ಕೀಟಗಳು ಬಲೆಗೆ ಬಂದು ಬೀಳತೊಡಗಿದವು. ಎಲ್ಲವನ್ನೂ ಸುತ್ತಿಟ್ಟನೇ ಹೊರತು ತಿನ್ನಲೇ ಇಲ್ಲ. ಒಂಬತ್ತರ ಹೊತ್ತಿಗೆ ಮೆಲ್ಲಗೆ ಮನೆ ಕಡೆ ಹೊರಟೆ. ಈತ ಕ್ಯಾರೇ ಎನ್ನದೇ ಏನೂ ತಿನ್ನದೇ ಹಾಗೇ ಇದ್ದ.
ಪೋಲ್ಟಿಸ್ ಪ್ರಭೇದದಕ್ಕೆ ಸೇರಿದ ಜೇಡವಿದು ಅಂತ ನನ್ನ ಮೊದಲ ನೋಟಕ್ಕೆ ತಿಳಿದು ಬರುತ್ತದೆ. 

 ಶ್ರೀಧರ್ ಎಸ್. ಸಿದ್ದಾಪುರ.
ಕುಂದಾಪುರ ತಾಲೂಕು.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...