Friday, February 10, 2017

ಬಾಲ್ಯ ಮುಡಿದ ಹೂಗಳು......


ಸುತ್ತಲೂ ಸುಡುವ ಬೆಳದಿಂಗಳು
ನಡುವೆಲ್ಲೊ ತೇಲುವ ನೆನಪ ಹಾಯಿ
ವರ್ತಮಾನದ ಸಖ್ಯ ಸಾಕಾಗಿದೆ
ನೆನಪ ಅಂಗಳಕೆ ಮನ ಜೀಕುತಿದೆ!


ನಮ್ಮದು ಹೆಬ್ಬಾಗಿಲ ಮನೆ. ಸುನಂದ, ಸುಶೀಲ, ಸುಮಂಗಲ, ಸರಸ್ವತಿಯ ಜೊತೆ ನಾನು, ಸಾವಿತ್ರಿ, ಆ ಮನೆಯಲ್ಲಿ ಅಪ್ಪ, ಅಮ್ಮ ಮತ್ತು ತಮ್ಮಂದಿರ ಜೊತೆ ವಾಸವಾಗಿದ್ದೆ. ಹತ್ತಿರವಿರುವ ಮನೆಗಳ ಹೆಸರೂ ವಿಶಿಷ್ಟ ಸುಂಕದ ಗೋಳಿ. ಕೆಪ್ಪ್ನಹಿತ್ತಲು. ಮನೆಯಲ್ಲಿ ಎದುರಿಗೆ ಮುಟ್ಟಾದವರಿಗಾಗಿ ಹುಲ್ಲಿನ ಪುಟ್ಟ ಮನೆ. ಮನೆ ಸುತ್ತ ಮುತ್ತ ತೋಟ. ತೆಂಗು ಹಲಸು ಯಥೇಚ್ಛವಾಗಿ ಬೆಳೆಯುತ್ತಿತ್ತು. ಅಪ್ಪ ತುಂಬಾ ಉದಾರಿ. ಊರಿನಲ್ಲೆಲ್ಲಾ ದಾನ ಶೂರನೆಂದು ಪ್ರಸಿದ್ಧ. ಹಲಸಿನ ಮರ ಹತ್ತುವುದು ನನಗಾಗ ಸಲೀಸು. ಹತ್ತಾರು ದನ ಕರುಗಳು. ಹಾಲು ಕರೆಯಲು ಅಮ್ಮ ಕರೆಯುತ್ತಿದ್ದಳು. ಅಮ್ಮನಿಗೆ ಸಹಾಯ ಮಾಡುವುದೆಂದರೆ ನನಗೆ ತುಂಬಾ ಇಷ್ಟವಾಗುತ್ತಿತ್ತು.
ಚಿಕ್ಕಂದಿನಿಂದಲೂ ನಾನು ತುಂಬಾ ತುಂಟಿ. ಸಣ್ಣದಾಗಿರುವಾಗಲೇ ಸಂಜೆ ಮಲ್ಲಿಗೆ ಬೀಜ ಮೂಗಿಗೆ ಹಾಕ್ಕೊಂಡು ಒದ್ದಾಡಿ, ವೈದ್ಯರಲ್ಲಿಗೆ ಹೋಗಿ ಅಪ್ಪ ತೆಗೆಸಿದ್ದು, ಒಮ್ಮೆ ಯಾಕೊ ಧರೆ ಹತ್ತಿ ಹಾರಿ ಸಣ್ಣ ಮರದ ಕೊಂಬೆಗೆ ಸಿಕ್ಕಿ ಬಿದ್ದು ಒದ್ದಾಡಿ, ಅಂಗಿ ತುಂಡಾಗಿಯೇ ಕೆಳಗೆ ಬಿದ್ದ ನೆನಪು. ಸಿಕ್ಕ ಸಿಕ್ಕ ನೀರ ತೋಡಿಗೆ ಕಾಲು ಹಾಕಿ ಹಾವು ಹಲ್ಲಿಗಳಿಂದೆಲ್ಲಾ ಕಚ್ಚಿಸಿಕೊಂಡಿದ್ದು. ಪೊಳಾರ್ ಬಿದ್ದ ಹಲಸಿನ ಮರ ಹತ್ತುತ್ತಿದ್ದದ್ದು. ಅಮ್ಮನ ಜೋಡಿ ಹೋಗಿ ಅವಡೆ, ಹೆಸರು ಕೊಡಿ ಕೊಯ್ಯುದು ಪಲ್ಯಮಾಡಿ ತಿನ್ನುತ್ತಿದ್ದೆವು. ಬೆಳಿಗ್ಗೆ ಬೇಗನೆದ್ದು ಸುರಗಿ ಕೊಯ್ದು ಮಾರಾಟ ಮಾಡುತ್ತಿದ್ದೆ. ಒಂದು ಸರಕ್ಕೆ ಒಂದಾಣೆ ಸಂಪಾದನೆಯಷ್ಟೆ. ಒಂದಾಣೆ ಆಸೆಗೊ ಲಂಗ ಕೊಳ್ಳುವ ಆಸೆಗೊ ಸುರಗಿ ಮರಕ್ಕೆ ಸುತ್ತುವುದು ಬಿಡುತ್ತಿರಲಿಲ್ಲ. ಅದ ಮಾರಿ ಬಂದ ಹಣದಿಂದ ಊರ ಹಬ್ಬಕ್ಕೆ ಲಂಗ ಕೊಂಡು: ಹಾಕಿ ಸಂಭ್ರಮಿಸುತ್ತಿದ್ದೆವು. ಬಾಯಮ್ಮ ಎಂಬುವವರ ಅಂಗಡಿಗದನ್ನು ಬೆಳಿಗ್ಗೆಯೇ ಮಾಲೆ ತಯಾರಿಸಿ ಮಾರಟ ಮಾಡಿ ಬರುತ್ತಿದ್ದೆ! ಹತ್ತನೇ ತರಗತಿಯವರೆಗೂ ಇದು ನಡೆದಿತ್ತು. ಸುರಗಿ ಕಾಲವೆಂದರೆ ನಮಗೆ ಸುಗ್ಗಿ ಕಾಲ. ಕೊಲ್ಲೂರಿಗೆ ಹೊಗೊರು ಇದನ್ನು ಕೊಳ್ಳುತ್ತಿದ್ದರೆಂದು ನೆನಪು. ಬಾಯಮ್ಮನ ಅಂಗಡಿಯಲ್ಲಿ ಒಂದಾಣಿಗೆ ಸಿಗುತ್ತಿದ್ದ ಎರಡು ಕೊಕ್ಕೊ ಮಿಟಾಯಿಯ ರುಚಿಯೋ ರುಚಿ. ಹೇಗೆ ಮರೆಯಲಿ ಆ ರುಚಿಯ? ಅಮ್ಮ ಹಾಲು ಮಾರಿ ಒಟ್ಟಾಕಿದ ಹಣವನ್ನೊಮ್ಮೆ ಅಪ್ಪಯ್ಯ ಅವಳಿಗೆ ಗೊತ್ತಾಗದಂತೆ ತೆಗೆಯ ಹತ್ತಿದರು. ನಾ ಕೂಗಿಕೊಂಡೆ, ಅಮ್ಮಾ, ಅಪ್ಪಯ್ಯ ನಿನ್ನ ದುಡ್ಡ್ ತೆಗಿತಿದ್ರ್.  ಎಂದು. ಅಪ್ಪಯ್ಯ ಬಂದು ನನ್ನ ಕಿವಿ ತಿಪ್ಪಿ ಆದ ನೋವಿನನುಭವ ಇನ್ನೂ ನೆನಪಿದೆ. ಜೋಕಾಲಿ ಬೀಸುವ ಆಟವಂತು ನನ್ನ ಕಾಲದ ಹುಡುಗಿಯರದ ಪರಮ ಪ್ರಿಯ ಆಟ.ಚಂಚಮಿ ಹೂ ಕೊಯ್ದು ಮಾಲೆ ಮಾಡುವುದು. ಗೋಳಿ ಹರಿವೆ ಸಪ್ಪಿನ್ನು ಕೊಯ್ಯುವುದು, ಹಲಸಿನ ಕಾಯಿ ಕೊಯ್ಯುವುದು ನಮ್ಮ ದಿನಚರಿಯ ಸಾಹಸಗಳಲ್ಲಿ ಒಂದು. ಪಕ್ಕದ ಮನೆಯ ಶ್ರೀಧರ ಮತ್ತು ಗೋಕುಲರೊಡನೆ ಕಚ್ಚೆ ಕಟ್ಟಿ ಕಬಡ್ಡಿ ಆಡುತ್ತಿದ್ದುದು. ಮಲರ್ಿ, ಸುಬ್ಬಿ, ಮಾಚ ಎಂಬ ವಿಚಿತ್ರ ಹೆಸರಿನ ಕೆಲಸಗಾರರು ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು. ಅವರೊಡನಾಡಿದ ನನ್ನ ನೆನಪು ಹಾಲು ಚಲ್ಲಿದ ಬೆಳದಿಂಗಳಿನಂತಿದೆ.
ನನಗಾಗ ನಾಲ್ಕು ಐದರ ಪ್ರಾಯ. ಮುಂಜಾವು ನಮ್ಮ ಹಂಚಿನ ಮನೆಯನ್ನು ತಬ್ಬಿಕೊಂಡಿತ್ತು. ಅಮ್ಮ ಬೇಗನೆದ್ದು ಅಂಗಳಕ್ಕೆ ನೀರು ಹಾಕಿ, ಒಲೆಯನ್ನು ಸಗಣಿ ಹಾಕಿ ಸಾರಿಸಿ ಶುದ್ಧಗೊಳಿಸಿ ಬೆಳಗಿನ ಕೆಲಸಕ್ಕೆ ಅಣಿ ಮಾಡುತ್ತಿದ್ದಳು. ನಾನು ಸಹ ಅಮ್ಮ ನೊಂದಿಗೆ ಎದ್ದು ಬಿಟ್ಟಿದ್ದೆ. ಅಂಗಳದಲ್ಲೇನೊ ಆಡಿಕೊಳ್ಳುತ್ತಿದ್ದೆ. ಅಂಗಳದಿಂದ ಐವತ್ತು ಅಡಿ ದೂರದಲ್ಲಿ ಮನೆಯ ಹಟ್ಟಿಯಿತ್ತು. ಒಳಗಿನ ಕೆಲಸ ಮುಗಿಸಿ ಅಮ್ಮ ಹಟ್ಟಿ ಕೆಲಸಕ್ಕೆ ಬಂದಿದ್ದಳು. ಹತ್ತೊ ಹನ್ನೆರೆಡೋ ದನ ಕರುಗಳಿದ್ದ ಹಟ್ಟಿ ನಮ್ಮದು. ಅಮ್ಮ ಮತ್ತು ಅಕ್ಕಂದಿರು ಸೇರಿ ಕರೆಯುತ್ತಿದ್ದರು. ಹಟ್ಟಿಯ ಪಕ್ಕವೇ ಸ್ನಾನ ಗೃಹ. ಅದರ ಪಕ್ಕದಲ್ಲೇ ಹುಲ್ಲಿಡುವ ಜಾಗ. ಅದನ್ನು ನಾವು ಹುಲ್ಲೇಣಿ ಎನ್ನುತ್ತಿದ್ದೆವು. ದನಗಳಿಗೆ ಮೊದಲು ಹುಲ್ಲು ಹಾಕಿಕೊಳ್ಳೋಣವೆಂದು ಅಮ್ಮ ಹುಲ್ಲೇಣೆಗೆ ಹತ್ತಿದಳು ಅಷ್ಟೇ. ಅವಳ ಬೊಬ್ಬೆ ಮಾತ್ರ ಕೇಳಿಸುತ್ತಿತ್ತು. ಯಾವುದೋ ವಿಷಕಾರಿ ಜೀವಿ ಅವಳಿಗೆ ಕಚ್ಚಿತೆಂದು ಮನೆಯವರೆಲ್ಲಾ ಭಾವಿಸಿದರು. ನಾನು ಮಾತ್ರ ನಿಶ್ಚಿಂತೆಯಿಂದ ಆಡುತ್ತಿದ್ದೆ.  ಅವಳೇನು ಹೇಳುತ್ತಿದ್ದಾಳೆಂದು ನನಗರ್ಥವಾಗಲಿಲ್ಲ. ಒಂದೆರಡೇ ಕ್ಷಣದಲ್ಲಿ ಮಾತ್ರದಲ್ಲಿ ಚಿರತೆಯೊಂದು ಆಡುತ್ತಿದ್ದ ನನ್ನನ್ನು ಸವರಿಕೊಂಡೇ ಓಡಿ ಹೋಯಿತು. ನಾನಿದೇನೆಂದು ನೋಡುವಷ್ಟರಲ್ಲೇ ಅದು ಪಕ್ಕದ ಸುಂಕದಗೋಳಿ ಬಟ್ಟರ ಮನೆಯ ನೆಲ್ಲಿ ಮರವನ್ನೇರಿ ಕುಳಿತುಕೊಂಡಿತು. ಅದಕ್ಕೂ ಭಯವಾಗಿದ್ದಿರ ಬೇಕು. ಅಮ್ಮ ಭಯದಿಂದ ನನಗೇನಾಯಿತೆಂದು ನೋಡಲು ಓಡೋಡಿ ಬಂದಳು.
ಎಷ್ಟು ಹೊತ್ತಿನಿಂದ ಅದು ಅಲ್ಲೇ ವಾಸ ಮಾಡುತ್ತಿರಬಹುದು? ಯಾಕಲ್ಲಿಗೆ ಬಂತದು? ಮುಂತಾದ ಅನೇಕ ಪ್ರಶ್ನೆಗಳ ಸರಮಾಲೆಯನ್ನೇ ಉಳಿಸಿ ಓಡಿತ್ತದು. ಬಹುಶಃ ಅದರ ಓಟ ಇನ್ನೂ ನಿತ್ತಿಲ್ಲ. ಅವುಗಳ ವಾಸ ಸ್ಥಾನಗಳ ನಿರಂತರ ನಾಶದಿಂದ ಆಹಾರದ ಕೊರತೆಯಿಂದ ಅದು ನಮ್ಮ ಹಟ್ಟಿಗೆ ಬಂದಿರಬೇಕು ಎಂಬುದು ನನ್ನ ಈಗಿನ ಊಹೆಯಷ್ಟೇ. ಬೆಳಗಾಯಿತೆಂದು ಅದಲ್ಲೇ ಕುಳಿತಿರಬೇಕು. ಈಗಲೂ ಬಚ್ಚಲು ಮನೆಗೆ ಹೋಗುವಾಗೆಲ್ಲಾ ಈ ಘಟನೆ ನೆನಪಿಗೆ ಬರುತ್ತದೆ. ಜೊತೆಗೆ ನನ್ನ  ಬಾಲ್ಯದ ಮಧುರ ಚಿತ್ರಕ ನೆನುಪು ಸಂತೆಯಂತೆ ಬಂದು ನೆರೆಯುತ್ತೆ. ಇಂತಹ ಅಮರ ಬಾಲ್ಯವನ್ನು ಕೊಟ್ಟ ನನ್ನೂರು ಉಡುಪಿ ಜಿಲ್ಲೆಯ ಉತ್ತರ ತುದಿಯ ಬೈಂದೂರು.

ಎಮ್. ಸಾವಿತ್ರಿ ಸಿದ್ದಾಪುರ.
ನಿರೂಪಣೆ:-ಶ್ರೀಧರ್ ಎಸ್. ಸಿದ್ದಾಪುರ.
photo-inter net.
Main title- Amaresh.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...