Thursday, March 22, 2018

ಸ್ನೇಹಿತನನ್ನು ಕಳಕೊಂಡಾಗ........

 ಅಂದು ಜೋರು ಮಳೆ ಬಂದಿತ್ತು. ಬೆಳಿಗ್ಗೆ ಮನೆಯ ಆಸು ಪಾಸು ಕ್ಯಾಮರಾ ಹಿಡಿದು ತಿರುಗುತ್ತಿದೆ. ಎದುರಿಗೊಂದು ಹಕ್ಕಿ ಇತ್ತು. ಮನೆಯ ಆಸು ಪಾಸಿನ ಹುಳು ಹುಪ್ಪಟೆ ತಿನ್ನಲು ಅದು ದಿನವು ಬರುತ್ತಿತ್ತು. ಅಂದು ತಕತಕವೆಂದು ಕುಣಿಯುತಲಿತ್ತು. ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಹಾರಿತು. ಒಂಥರಾ ಹುಚ್ಚು ಹಿಡಿದಂತೆ! ಅರೆ ಇದೆನಾಯಿತು ಎಂದು ಅದನ್ನೇ ನೋಡುತ್ತಾ ಕುಳಿತೆ. ಸೂಕ್ಷ್ಮವಾಗಿ ಗಮನಿಸಿದೆ. ಅದರ ಕಾಲಿಗೇನೋ ಅಂಟಿಕೊಂಡಿತ್ತು. ಕಷ್ಟ ಪಟ್ಟು ಅದನ್ನು ಬಿಡಿಸಿಕೊಳ್ಳಲು ನೋಡಿತು. ಅಲ್ಲಿ ಇಲ್ಲಿ ಕಾಲನ್ನು ಉಜ್ಜಿತು. ಅಂಟಿದ ತೆಳು ವಸ್ತು ತೆಗೆಯಲು ಪರದಾಡಿತು. ಅದಕ್ಕೆ ಏನನ್ನಿಸಿತೋ ಹತ್ತಿರದಲ್ಲಿದ್ದ ರಸ್ತೆಗೆ ಹಾರಿತು! ಅರೆ ಇದೇಕೆ ರಸ್ತೆಗೆ ಹಾರಿತೆಂದು ತಿಳಿಯಲಿಲ್ಲ. ಮನಸು ಚುರುಗುಟ್ಟಿತು. ಅಪಶಕುನವನ್ನೆಣಿಸಿತು ಮನ. ಸ್ವಲ್ಪ ಕಾಲನ್ನು ನೆಲಕ್ಕೆ ಉಜ್ಜಿತು. ಕಾಲಿಗಂಟಿದ ವಸ್ತು ಸ್ವಲ್ಪ ದೂರ ಹೋಗಿ ಬಿತ್ತು.! ಸರಿ ಇನ್ನು ಹಾರಬೇಕೆನ್ನುವಷ್ಟರಲ್ಲಿ ಎದುರಿನದೊಂದು ಸಣ್ಣ ವ್ಯಾನ ಬರುತಲಿತ್ತು. ಹಕ್ಕಿ ಅದಕೆ ಅಡ್ಡ ಹಾಯ್ದು ವಾಹನದ ಮೂತಿ ತಗುಲಿ ಎದುರಿಗೆ ಬಿತ್ತು. ಅದರ ದೇಹಕ್ಕೆ ಕೊಂಚ ಪೆಟ್ಟಾಯಿತು. ಉರುಳಿ ದಾರಿ ಹೋಕರು ತಿರುಗುವ ಪಾದಚಾರಿ ಮಾರ್ಗದಲ್ಲಿ ಬಿತ್ತು. ಕೈಗೆತ್ತಿಕೊಂಡೆ. ನೀರು ಕೊಟ್ಟೆ. ಕಣ್ಣನ್ನೊಮ್ಮೆ ಮಿಟುಕಿಸಿತು. ಒಂದು ಹನಿ ನೀರು ಕುಡಿದು ಪ್ರಾಣ ಬಿಟ್ಟಿತು. ತೀರಾ ಬೇಸರವಾಯಿತು ವಾಹನ ಚಾಲಕನ ಮೇಲೆ. ಕಣ್ಣ ಹನಿಯೊಂದು ಗೊತ್ತಿಲ್ಲದಂತೆ ಜಾರಿತು. ನೋಡಿಯೂ ಕೈ ಸನ್ನೆ ಮಾಡಿಯೂ ಆತ ನಿಧಾನಗೊಳಿಸದೇ ಮುಂದೆ ಸಾಗಿದ್ದ. ಸುಮಾರು ಹೊತ್ತು ಏನು ಮಾಡುವುದೆಂದು ತೋಚದೇ ಸ್ವಲ್ಪ ಹೊತ್ತು ಅದನ್ನು ಹಿಡಿದೇ ನಿಂತಿದ್ದೆ. ಅದರ ಕಾಲಿಗಂಟಿದ ವಸ್ತು ಏನೆಂದು ನೋಡೋಣವೆಂದು ಹೋದೆ. ಆಶ್ವರ್ಯ ಕಾದಿತ್ತು. ಅದು ನಮ್ಮಂಥವರು ಜಗಿದು ಹಾಕಿದ ಚಿಂಗಮ್ ಆಗಿತ್ತು. ಅದು ಹೇಗೋ ಹಕ್ಕಿ ಕಾಲಿಗೆ ಅಂಟಿಕೊಂಡಿತು. ಚಿಂಗಮ್ ನಿಂದಾಗಿ ಅದು ಪ್ರಾಣ ಕಳೆದುಕೊಳ್ಳಬೇಕಾಯಿತು. ನಮ್ಮ ತಪ್ಪಿಗೆ ಹಕ್ಕಿಗೆ ಶಿಕ್ಷೆಕೊಟ್ಟಂತಾಗಿತ್ತು. 
 ನಮ್ಮ ತಪ್ಪಿನಿಂದ ಅದು ಶಿಕ್ಷೆ ಅನುಭವಿಸುವಂತಾಗಿತ್ತು. ಕಾಡು ರಸ್ತೆಯಲ್ಲಾದರೂ ವಾಹನವನ್ನು ನಿಧಾನಕ್ಕೆ ಓಡಿಸೋಣವಲ್ಲವೇ?

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...