Wednesday, March 11, 2020

ಬಾಹು ಬಲಿಗೆ ಹೊಯಿಗೆ ಮಜ್ಜನ!



ಏನಿವತ್ತು ಏನೋ ಹೇಳುತ್ತಾನೆಂದು ಹೆದರ ಬೇಡಿ. ನನ್ನ ಬಾಲ್ಯದ ನೆನಪುಗಳನ್ನು ನಿಮ್ಮ ಮುಂದೆ ಹರವಿ ಕುಳಿತಿರುವೆ ಅಷ್ಟೇ.
ಬಾಲ್ಯದ ನೆನಪು ಮಾಸದ ಹೊಂಬಿಸಿಲು. ಅರಳುವ ಕುಡಿ ಮೊಗ್ಗು. ನವಿರಾದ ನವಿಲು ಗರಿ. ಬಾಲ್ಯ ಕಳೆಗಟ್ಟಿದ್ದು ನನ್ನಮ್ಮನ ತವರೂರು ಬೈಂದೂರೆಂಬ ಕಡಲ ತೀರದಲ್ಲಿ. ನನ್ನ ನೆನಪುಗಳಲ್ಲಿ ಬೆಚ್ಚಗಿರುವ ಬೈಂದೂರು. ರಜೆ ಬಂದರೆ ಚೀಲ ಹಿಡಿದು ಬೈಂದೂರಿಗೆ ಪರಾರಿ. ಹಪ್ಪಳ, ಸಂಡಿಗೆಗಳ ಸುವರ್ಣ ಕಾಲ. ಬಾಲ್ಯದ ನೆನಪಿನ ರತ್ನ ನಿಮ್ಮ ಮುಂದೆ.
ಊರ ಜಾತ್ರೆಯ ಸಮಯ. ನನ್ನ ಚಿಕ್ಕಮ್ಮ ತನ್ನಿಬ್ಬರು ಮಕ್ಕಳೊಂದಿಗೆ ಬೈಂದೂರಿಗೆ ಬಂದಿದ್ದರು. ನಾನು ಮತ್ತು ಅಕ್ಕನೂ ಹೋಗಿದ್ದೆವು. ಮನಸೋ ಇಚ್ಚೆ ಆಡುತ್ತಿದ್ದೆವು. ನಮ್ಮೊಂದಿಗೆ ಶ್ರೀಕಾಂತ, ಅವನ ತಮ್ಮ ಶ್ರೀಪತಿಯೂ ಆಡುತ್ತಿದ್ದ. ಏನೋ ಕಟ್ಟಿಸಬೇಕೆಂದು ಮಾವ ಒಂದಿಷ್ಟು ಹೊಯಿಗೆ ತಂದು ರಾಶಿ ಹಾಕಿದ್ದ. ಎಲ್ಲಿತ್ತೊ ಸಣ್ಣ ತುಂಟತನ, ಜಾಗೃತವಾಯಿತು. ತಮ್ಮನನ್ನು ಒಂದು ಪೀಠದಲ್ಲಿ ಕೂರಿಸಿದೆವು. ಒಂದಿಷ್ಟು ಹೊಯಿಗೆಯನ್ನು ಅವನ ತಲೆಗೆ ಹೊಯ್ದೆವು. ಆತನು ತುಟಿ ಪಿಟಕ್ ಎನ್ನದೇ ಕೂತಿದ್ದು ನೋಡಿ ಮತ್ತೆರಡು ಡಬ್ಬ ಹೊಯಿಗೆಯನ್ನು  ಅವನ ತಲೆಗೆ ಸುರಿದೆವು. ಅವನಿಗೆ ಹೊಯಿಗೆ ಮಜ್ಜನ. ಆತ ಬಾಹುಬಲಿಯಂತೆ ಅಲುಗಾಡದೇ ಕೂತ! ನಡು ನಡುವೆ ದೊಡ್ಡ ತಮ್ಮನ ಮಂತ್ರ ಘೋಷ. ನಾವು ಮಜ್ಜನ ನಡೆಸಿದ್ದೇ ನಡೆಸಿದ್ದು. ಆತನನ್ನು ಕೂರಿಸಿ ಋಷಿ ಮಾಡಿದೆವು. ಒಂದೆರಡು ದಾಸವಾಳವನ್ನು ಅವನ ಕಿವಿಗಿಟ್ಟೆವು. ಆತ ಕಲ್ಲಿನ ಮೂತರ್ಿಯಂತೆ ಅಲ್ಲಾಡದೇ ಕೂತಿದ್ದ! ನಮ್ಮ ನಡುವಿನಲ್ಲಾದ ಕಾಂಟ್ರಾಕ್ಟ್ ಏನೆಂದು ಈಗ ನೆನಪಿಲ್ಲ. ಆತನೇಕೆ ಸುಮ್ಮನೆ ಕೂತಿದ್ದನೆಂಬುದೂ ಗೊತ್ತಿಲ್ಲ!
ಹಪ್ಪಳದ ಕೆಲಸದಲ್ಲಿ ನಿರತರಾಗಿದ್ದ ಚಿಕ್ಕಮ್ಮ ನಾವಾಡುವಲ್ಲಿಗೆ ಬಂದಳು. ತಮ್ಮನಿಗಾದ ಗತಿ ನೋಡಿ ಕಣ್ಣೀರಾದಳು ನೋಡಿ. ಅಮ್ಮನಿಗೆ ನೋಡಲಾಗಲಿಲ್ಲ. ಸಿಟ್ಟು ನೆತ್ತಿಗೇರಿತು. ಅಮ್ಮ ಸಾಕ್ಷಾತ್ ರಣಚಂಡಿಯಾದಳು. ಕಟ್ಟಿಗೆ ತುಂಡನೆತ್ತಿಕೊಂಡು ಅಮ್ಮ ನನ್ನನ್ನು ಅಟ್ಟಿಸಿಕೊಂಡು ಬಂದಳು. ಒಂದು ಪೆಟ್ಟು ಸಾಕಿತ್ತು ನನ್ನ ಕೈಕಾಲು ಊನ ಮಾಡಲು, ಅಷ್ಟು ದೊಡ್ಡದಿತ್ತು ಅದು. ಉಪ್ಪರಿಗೆಯಲ್ಲಿ ತಲೆ ಮರೆಸಿಕೊಂಡೆ. ಉಪ್ಪರಿಗೆಯಲ್ಲೊಂದು ಅಡ್ಡ ದಂಡೆ ಇತ್ತು. ಅಲ್ಲಿ ಉಸಿರಾಡದೇ ಕೂತಿದ್ದೆ. ಅಮ್ಮ ನನ್ನ ಅರಸುತ್ತಾ ಸಿಟ್ಟಿನಲ್ಲಿ ಬುಸುಗುಟ್ಟುತ್ತಾ ಉದ್ದನೇ ಹಜಾರದಂತಿದ್ದ ಉಪ್ಪರಿಗೆಯಿಡಿ ಇಲಿಗಾಗಿ ಅರಸುವ ಬೆಕ್ಕಿನಂತೆ ಹುಡುಕ ತೊಡಗಿದಳು. ಅಡ್ಡ ದಂಡೆಯಿಂದ ಒಮ್ಮೆಲೇ ಸದ್ದಾಗದಂತೆ ದುಮುಕಿ ಪೇರಿ ಕಿತ್ತೆ ನೋಡಿ, ಮತ್ತೆ ಪ್ರತ್ಯಕ್ಷನಾಗಿದ್ದು ಊಟದ ಸಮಯಕ್ಕೇ! ನಾ ಓಡಿದ್ದು ಅಮ್ಮನಿಗೆ ಗೊತ್ತಾಗಲೇ ಇಲ್ಲ. ಇಲಿ ಹುಡುಕುವ ಬೆಕ್ಕಿನಂತೆ ಅಲ್ಲೇ ಹುಡುಕುತ್ತಾ ಸುಸ್ತಾದಳು. ಮುಂದೇ ಹೇಗೆ ಬಚಾವಾದೆನೆಂದು ಈಗ ನೆನಪಿಲ್ಲ. ಎಂದಾದರೂ ನಾವು ಮೂವರು ಪುರುಸೊತ್ತಾದಾಗ ಒಟ್ಟಾಗಿ ನೆನಪನ್ನು ಕೆದಕಿ  ಆಗಾಗ ಖುಷಿ ಪಡುತ್ತೇವೆ. 'ರಣಚಂಡಿ' ಅಮ್ಮನೆಂದು ಈಗಲೂ ಗೇಲಿ ಮಾಡುತ್ತೇನೆ. ತುಂಟ ಮಗನೆಂದು ಆಗ ಅವಳೆನ್ನ ಕಿವಿ ಹಿಂಡುತ್ತಾಳೆ!
ಕಳೆ ಕಳೆದುಕೊಂಡ  ಬೈಂದೂರು ಸಪ್ಪಗೆ ಕುಳಿತಿದೆ. ನನ್ನ ಬಾಲ್ಯದ ಗೆಳೆಯರಿಬ್ಬರೂ ಈಗ ಕೆಲಸದಲ್ಲಿ ಕಳೆದುಹೋಗಿದ್ದಾರೆ!
ಮತ್ತೆ ಬಾಲ್ಯದಲ್ಲಿ ಮೀಯುವಾಸೆ. ಈ ಜಗವು ಪುರುಸೊತ್ತು ಕೊಟ್ಟರೆ. ಪುರುಸೊತ್ತಾದಗ ಬಾಲ್ಯದ ಕತೆಗಳನ್ನೆಲ್ಲಾ ನಿಮ್ಮ ಮುಂದೆ ಹರವಿ ಕೂರಬೇಕು. ಸಿಗುವಿರಾ ಇನ್ನೊಮ್ಮೆ ವಿರಾಮದಲ್ಲಿ?


ಶ್ರೀಧರ್. ಎಸ್. ಸಿದ್ದಾಪುರ.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...