Monday, March 30, 2020

ಜಾತ್ರೆ ಎಂಬ ನವಿರಾದ ನವಿಲುಗರಿ.



ಜಾತ್ರೆ ಎಂದರೆ ಬಿಡುವು. ಜಾತ್ರೆ ಎಂದರೆ ಸೇರುವಿಕೆ. ಜಾತ್ರೆ ಎಂದರೆ ಜಂಗುಳಿ. ಮಕ್ಕಳಿಗೆ ಜಾತ್ರೆ ಎಂದರೆ ಉತ್ಸಾಹ, ಆಟಿಕೆ ಅಂಗಡಿಗಳು. ಜಾತ್ರೆ ಎಂದರೆ ಏಕತಾನತೆ ಮುರಿವ ಸಂಸ್ಕ್ರತಿಯ ಬಿಂದುಗಳಾಗಿ ನನಗೆ ಕಾಣುತ್ತೆ.
ಈ ಜಾತ್ರೆ ಅಜ್ಜಿಯೂರಾದ ಬೈಂದೂರ ನೆನಪು ಹೊತ್ತು ತರುವುದು. ಜೊತೆ ಜೊತೆಗೆ ಮಾವು ಕದ್ದ, ಚಿಕ್ಕವಯಸ್ಸಿನಲ್ಲೇ ಎಷ್ಟೋ ಕಿಲೋ ಮೀಟರ್ ನಡೆದ, ನವಿರಾದ ಹೆಸರ ಪಾಯಸ ಹೊಡೆದ, ತಮ್ಮನನ್ನು ಗೋಳು ಹೊಯ್ದು ಕೊಂಡ ನೆನಪುಗಳ ತಕದಿಮಿತ.




ಆಗೆಲ್ಲಾ ನಮಗೆ ಜಾತ್ರೆಗಾಗಿ ನೀಡುವ ಹಣ ಅಷ್ಟಕ್ಕಷ್ಟೆ. ಸ್ವಾಭಿಮಾನದಿಂದಾಗಿ ಯಾರಲ್ಲೂ ಬೇಡುವಂತಿರಲಿಲ್ಲ.  ಜಾತ್ರೆಗಾಗಿ ಕಾಸು ಕೂಡಿಸುವ ಕನಸು. ತರೆವಾರಿ ಅಂಗಡಿಗಳ, ಒಂದು ಆಟಿಕೆ ಕೊಳ್ಳುವ ತವಕ. ಹೇಗೆಂಬ ಚಿಂತೆ? ಶಾಲೆಗೆ ಹೋಗಲು ನೀಡುವ ಹಣವನ್ನು ನೆಡದೇ ಹೋಗಿ ಉಳಿಸುವುದು. ಅಡುಗೆಗೆ ಸಹಾಯಕರಾಗಿ ಹೋಗುವುದು. ಬಡಿಸಲು ಹೋಗುವುದು, ನಮ್ಮ ಕೆಲಸವಾಗಿತ್ತು.

ನಾವು ಚಿಕ್ಕವರಿದ್ದಾಗ ನಮ್ಮಜ್ಜಿ ಮನೆಯ ಹತ್ತಿರದಲ್ಲೇ ಅಜ್ಜಿಯ ಅತ್ತೆಯೊಬ್ಬರಿದ್ದರು. ಶಿಕ್ಷಕಿಯಾಗಿ ನಿವೃತ್ತರಾದವರು. ಅವರಿಗೆ ನಡೆಯಲಾಗುತ್ತಿರಲಿಲ್ಲ. ದೊಡ್ಡ ಮನೆ, ದೊಡ್ಡ ಜಾಗ, ನಿವೃತ್ತಿ ವೇತನ ಎಲ್ಲವೂ ಇತ್ತು. ನೋಡಿಕೊಳ್ಳಲು ಮಾತ್ರ ಯಾರಿರಲಿಲ್ಲ. ಗಂಡ ಯಾವಾಗಲೋ ತೀರಿ ಹೋಗಿದ್ದರು. ಮಕ್ಕಳಿರಲಿಲ್ಲ. ನಮ್ಮಜ್ಜಿಯನ್ನು ಗೋಳು ಹೊಯ್ದುಕೊಂಡ ಅವರು ಆಗ ಅಜ್ಜಿಯನ್ನೇ ಅವಲಂಬಿಸಿದ್ದರು. ರಜೆ ಬಂದಿತೆಂದರೆ ಅಜ್ಜಿಗೆ ಅವರ ಸೇವೆಯಿಂದ ಮುಕ್ತಿ. ನಮ್ಮ ಸೇವೆ ಶುರು. ದಿನಾಲೂ ಬೆಳಗ್ಗೆ ಚಹ, ಮಧ್ಯಾಹ್ನ ಊಟ, ಸಂಜೆಗೆ ಚಹ ಇಷ್ಟನ್ನು ಹೋಟೆಲ್ಗೆ ಹೋಗಿ ತಂದು ಕೊಡಬೇಕಿತ್ತು. ಒಂದಿನಕ್ಕೆ ನಮಗೆ, ಅಂದರೆ ನನ್ನಿಬ್ಬರು ತಮ್ಮಂದಿರು ಶ್ರೀಕಾಂತ, ಶ್ರೀಪತಿಗೆ ಸೇರಿ ತಲಾ ನಾಲ್ಕಾಣೆ ಕೊಡುತ್ತಿದ್ದರು. ಆಟದ ನಡುವೆಯೂ ಆಟಿಕೆ ಆಸೆಗೆ ದಿನಾಲೂ ಚಹ ಸೇವೆಗೆ ಹೋಗುತ್ತಿದ್ದೆವು. ಸೇವೆ ಜೊತೆಗೊದಿಷ್ಟು ಹಣ ಸಂಪಾದನೆಯೂ ಆಗುತ್ತಿತ್ತು. ಆಟಿಕೆ ಕೊಂಡು ವಿಶಾಲ ಹರವಿನ ಅಜ್ಜಿ ಮನೆಯಲ್ಲಿ ಆಡುವ ಸಂತೋಷವೇ ಬೇರೆ. ಎಷ್ಟೋ ವರ್ಷ ಅವರಿಗೆ ಚಹ ಸೇವೆ ಮಾಡಿದೆವು. ಜಾತ್ರೆ ಮುಗಿದ ಮೇಲೆ ನಾವು ಮೂವರೂ ಹೊರಡುತ್ತಿದ್ದೆವು. ಕಣ್ಣೀರಾಗಿ ಅಮ್ಮಮ್ಮ ನಮ್ಮನ್ನು ಬೀಳ್ಕೊಡುತ್ತಿದ್ದರು. ಒಲ್ಲದ ಮನಸಿನಿಂದ ನಮಗೆ ಮಾವ, ಅತ್ತೆಯೂ ಪ್ರೀತಿಯ ವಿದಾಯ ಕೋರುತ್ತಿದ್ದರು. ಜಾತ್ರೆ ನೋಡಿ ಆಟಿಕೆಯೊಂದಿಗೆ ಮರಳುತ್ತಿದ್ದೆವು. ಜಾತ್ರೆ ಎಂದರೆ ಆಟಿಕೆ, ಅಮ್ಮಮ್ಮ ಹಾಗೂ ಅವರ ಅತ್ತಿಗೆ ನೆನಪಾಗುತ್ತಾರೆ.

ಜಾತ್ರೆ ಎಂದರೆ ಈಗ ಆಗಿನಷ್ಟು ಕುತೂಹಲ ಉಳಿದಿಲ್ಲ. ಬಹುಶಃ ನಾವು ದೊಡ್ಡವರಾದೆವೆಂದು ಕಾಣುತ್ತೆ. ದ ಲಾ ಆಪ್ ಮಾಜರ್ಿನಲ್ ಯುಟಿಲಿಟಿ ಜಾತ್ರೆಗೂ ಅನ್ವಯಿಸುತ್ತೆ ಅನಿಸಲಿಕ್ಕೆ ಶುರುವಾಗಿದೆ. ಕಳೆ ಕಳೆದುಕೊಂಡ ಬೈಂದೂರು ಸಪ್ಪಗೆ ಕುಳಿತಿದೆ. ನನ್ನ ಬಾಲ್ಯದ ಗೆಳೆಯರಿಬ್ಬರೂ ಈಗ ಬದುಕಿನ ಸಂತೆಯಲ್ಲಿ ಕಳೆದುಹೋಗಿದ್ದಾರೆ!
ಶ್ರೀಧರ್. ಎಸ್. ಸಿದ್ದಾಪುರ.
ರಥಬೀದಿ, ಸಿದ್ದಾಪುರ ಅಂಚೆ,
ಕುಂದಾಪುರ ತಾಲೂಕು.
ಉಡುಪಿ ಜಿಲ್ಲೆ-576229.

No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...